ಸಂಕಲ್ಪ ಶುದ್ಧಿ ಮತ್ತು ದಮ್ರ ಬಿನ್ ಜಂದಬ್(ರ) ರವರ ವಲಸೆ
ಲೇಖಕರು: ಡಾ. ಅಬ್ದುಲ್ ಹಫೀದ್ ನದ್ವಿ
ಪವಿತ್ರ ಮಕ್ಕಾದ ಮರಳು ಗಾಡಿನಿಂದ ಮದೀನಾದ ಫಲವತ್ತಾದ ಭೂಮಿಯ ಕಡೆಗೆ ಪ್ರವಾದಿವರ್ಯರ(ಸ) ಜೊತೆಗೆ ಹಲವು ಅನುಚರರು ಹಿಜಿರಾ(ವಲಸೆ) ಯಾತ್ರೆ ಕೈಗೊಂಡಾಗ ಆ ಪಯಣದ ಭಾಗವಾಗಲು ಅವಕಾಶ ಸಿಗದ ಕೆಲವು ಹೃದಯಗಳು ಮಕ್ಕಾದಲ್ಲಿ ಉಳಿದಿದ್ದವು. ಅವರಲ್ಲಿ ದಮ್ರ ಬಿನ್ ಜಂದಬ್(ರ) ಎಂಬ ಸಹಾಬಿಯು ಒಬ್ಬರಾಗಿದ್ದರು. ವೃದ್ದಾಪ್ಯ ಮತ್ತು ರೋಗದ ಕಾರಣದಿಂದ ಪ್ರಯಾಣ ಮುಂದುವರಿಸಲು ಸಾಧ್ಯ ಆಗದೇ, ಮಕ್ಕಾದ ಮರುಭೂಮಿಯಲ್ಲಿಯೇ ಗತ ಆತ್ಮಗಳ ಸಾಲಿನಲ್ಲಿ ಸೇರಿದರು. ಮಕ್ಕಾದ ಆ ಸುಡು ಮರಳುಗಾಡಿನಲ್ಲಿ ಏಕಾಂಗಿಯಾಗಿದ್ದುಕೊಂಡು ಶತ್ರುಗಳ ಮಧ್ಯೆಯೇ ಉಳಿಯಬೇಕಾಗಿ ಬಂದ ಈ ವಯೋವೃದ್ದರ ಮನಸ್ಸು ನೋವು, ಖೇದದಿಂದ ಕನಲಿತು. ತಾನು ಬಹಳ ಆತ್ಮಗತವಾಗಿ ಪ್ರೀತಿಸಿದ್ದ ಪ್ರವಾದಿ ಮುಹಮ್ಮದ್(ಸ) ರಿಂದ, ಅವರ ಜೊತೆಗಿದ್ದ ಸತ್ಯವಿಶ್ವಾಸಿಗಳಿಂದ ದೂರವುಳಿಯಬೇಕಾಗಿದ್ದ ಆ ಅಗಲಿಕೆಯ ಪ್ರತಿ ನಿಮಿಷವೂ ಅವರಿಗೆ ಸಹಿಸಲು ಅಸಾಧ್ಯವಾದುದಾಗಿತ್ತು.
ಅಲ್ಲಾಹನ ಮೇಲೆ ಮತ್ತು ಆತನ ಪ್ರವಾದಿಗಳ ಮೇಲೆ ಅಪಾರ ಪ್ರೀತಿ ವಿಶ್ವಾಸ ಅರ್ಪಿಸಿದ್ದ ಆ ಹೃದಯವು ಆ ನೋವನಿಂದ ಚಡಪಡಿಸಿತು. ತನ್ನ ವೃದ್ದಾಪ್ಯ ಮತ್ತು ತನ್ನ ನಿಶ್ಶಕ್ತಿಯ ಸ್ಥಿತಿಯನ್ನು ಅವರು ಮರೆತರು. ಹೃದಯದಲ್ಲಿ ತುಂಬಿ ತುಳುಕಿದ್ದ ವಿಶ್ವಾಸವು ಅವರನ್ನು ಮುಂದಕ್ಕೆ ಹೋಗುವಂತೆ ಪ್ರೇರೇಪಿಸಿತು. ಎಷ್ಟೇ ಕಷ್ಟ ನಷ್ಟ ಅನುಭವಿಸಿದರೂ ಸರಿ ಮದೀನಾ ತಲುಪಿ ಪ್ರವಾದಿವರ್ಯರ(ಸ) ಜೊತೆ ಬದುಕಬೇಕೆಂಬುದು ಮಾತ್ರ ಅವರ ಉದ್ದೇಶವಾಗಿತ್ತು. ಅದರಂತೆ ಅವರು ರೋಗ, ವೃದ್ದಾಪ್ಯ ಎಲ್ಲವನ್ನೂ ಮರೆತು ಅದನ್ನೇ ಒಂದು ಸವಾಲನ್ನಾಗಿಸಿದರು. ದಮ್ರ(ರ) ಮದೀನಾದತ್ತ ಪ್ರಯಾಣ ಹೊರಟರು.
ಆ ಮರುಭೂಮಿಯ ಪ್ರತಿಯೊಂದು ಹೆಜ್ಜೆಯೂ ಅವರನ್ನು ದಣಿವಿಗೆ ದೂಡಿತು. ಅಲ್ಲಿನ ಕಠಣ ಬಿಸಿಲು, ಉಷ್ಣ ಹವೆಯು ಅವರನ್ನು ಇನ್ನಷ್ಟು ದಣಿಯುವಂತೆ ಮಾಡಿ ನಿಶ್ಶಕ್ತಿಗೆ ತಳ್ಳಿತು. ಆ ಪಯಣದ ಪ್ರತಿ ನಿಮಿಷವೂ ನೋವು ಯಾತನೆಯಿಂದಲೇ ತುಂಬಿತ್ತು. ಆದರೆ ಹೃದಯದಲ್ಲಿ ನಿರ್ಧಾರ ಮಾತ್ರ ಅಚಲವಾಗಿತ್ತು. ಸ್ವಲ್ಪ ಮುಂದೆ ಸಾಗಿದಂತೆ ರೋಗ ಉಲ್ಬಣಿಸಿತು. ಮುಂದಕ್ಕೆ ಹೋಗಲಾರದಂತಹ ಸ್ಥಿತಿಗೆ ತಲುಪಿದರು. ಕಣ್ಣುಗಳಿಗೆ ಕತ್ತಲೆ ಆವರಿಸಿತು. ಆ ವೇಳೆಯಲ್ಲಿ ನಾನು ಉದ್ದೇಶಿಸಿದ ಪ್ರವಾದಿ ಮುಹಮ್ಮದ್(ಸ)ರ ಬಳಿ ತಲುಪುವ ಮುನ್ನವೇ ಪ್ರಯಾಣದ ಮದ್ಯೆಯೇ ಮರಣ ಹೊಂದುವೆನೆಂದು ಖಾತ್ರಿಯಾಯಿತು. ದಮ್ರರ ಹೃದಯವು ಚಡಪಡಿಸಿತು. ಪ್ರೀತಿಯ ಪ್ರವಾದಿಯ ಮುಖದರ್ಶನದ ಸೌಭಾಗ್ಯದ ಬಯಕೆ, ಪ್ರವಾದಿವರ್ಯರ(ಸ) ಎರಡೂ ಹಸ್ತಗಳನ್ನು ಹಿಡಿದು ಬೈಅತ್(ಪ್ರತಿಜ್ಞೆ) ಮಾಡಬೇಕೆಂಬ ಉತ್ಕಟ ಇಚ್ಚೆ ಎಲ್ಲವೂ ಒಂದು ಕನಸಾಗಿ ಉಳಿದು ಅಂತ್ಯವಾಗುವುದೇ ಎಂಬ ಆತಂಕ, ಭಯ ಅವರನ್ನು ಕಾಡಿತು.
ಆ ಕ್ಷಣದಲ್ಲಿ ವಯೋವೃದ್ದರಾದ ಆ ಸಹಾಬಿಗೆ ಒಂದು ವಿಷಯ ಮನದಟ್ಟಾಯಿತು. ಕರ್ಮಗಳು ಅದು ಉದ್ದೇಶಿತ ಗುರಿ ತಲುಪುವುದರಲ್ಲಿ ಮಾತ್ರವಲ್ಲ ಯಶಸ್ಸು; ಬದಲಾಗಿ, ಅದು ಆತ್ಮಾರ್ಥವಾದ ಸಂಕಲ್ಪದಿಂದ ಆ ಹಾದಿಯಲ್ಲಿ ಸಂಚರಿಸುವುದರಲ್ಲೂ ಯಶಸ್ಸು ಅಡಗಿದೆ. ತನ್ನ ಆತ್ಮದ ಅಂತರಾಳದಿಂದ ಆ ಸತ್ಯವನ್ನು ಘೋಷಿಸಲು ಅವರು ನಿರ್ಧರಿಸಿದರು. ಅವರು ತನ್ನ ಒಂದು ಹಸ್ತಕ್ಕೆ ಮತ್ತೊಂದು ಹಸ್ತವನ್ನು ಬಲವಾಗಿ ತಟ್ಟಿಕೊಂಡು ಹೇಳಿದರು. “ಅಲ್ಲಾಹನೇ, ಇದು ನಿನ್ನೊಂದಿಗಿನ ನನ್ನ ಬೈಅತ್(ಪ್ರತಿಜ್ಞೆ) ಆಗಿದೆ.” ಎನ್ನುತ್ತಾ, ಮತ್ತೊಮ್ಮೆ ಹಸ್ತವನ್ನು ಇನ್ನೊಂದು ಹಸ್ತದ ಮೇಲೆ ಇಟ್ಟು, “ಇದು ನಿನ್ನ ದೂತ ಪ್ರವಾದಿಯ ಮೇಲಿನ ಬೈಅತ್ ಆಗಿದೆ” ಎಂದರು. ಆ ಮೂಲಕ ತನ್ನ ಅಂತಿಮ ಉಸಿರು ಅಲ್ಲಾಹನ ಮತ್ತು ಆತನ ಪ್ರವಾದಿಯ ಸಮರ್ಪಣೆಯಾಗಿದೆ ಎಂದು ಆ ವಯೋವೃದ್ದರು ಜಗತ್ತಿಗೆ ಸಾರಿ ಹೇಳಿ ಮುಂದಿನ ಕ್ಷಣವೇ ಅವರು ಆ ಮರುಭೂಮಿಯಲ್ಲಿ ಬಿದ್ದು ಬಿಟ್ಟರು. ಅವರ ಆತ್ಮ ಅಲ್ಲಾಹನ ಕಡೆಗೆ ಯಾತ್ರೆ ಬೆಳೆಸಿತು.
ದಮ್ರ(ರ)ರವರ ಈ ಮಹಾತ್ಯಾಗ ಭೂಮಿಯಲ್ಲಿ ನಡೆದ ಕೇವಲ ಒಂದು ಘಟನೆ ಆಗಿರಲಿಲ್ಲ. ಆಕಾಶದಲ್ಲಿ ಅದರ ಪ್ರತಿದ್ವನಿಗಳು ಮಾರ್ಧನಿಸಿತು. ಜಿಬ್ರಿಲ್(ಅ) ಅಲ್ಲಾಹನಿಂದ ವಹೀ ಸ್ವೀಕರಿಸಿಕೊಂಡು ಪ್ರವಾದಿ ಮುಹಮ್ಮದ್(ಸ)ರ ಬಳಿಗೆ ಬಂದು ದಮ್ರರವರ(ರ) ಘಟನೆಯನ್ನೆಲ್ಲಾ ವಿವರಿಸಿದರು. ದಮ್ರ(ರ)ರವರ ಆತ್ಮಾರ್ಥವಾದ ಆ ಪ್ರವಾದಿ ಪ್ರೇಮ ಅಲ್ಲಾಹನ ಬಳಿ ಎಷ್ಟೊಂದು ಮಹತ್ವವಾದುದು ಎಂಬುದನ್ನು ಅಲ್ಲಾಹನು ಜಗತ್ತಿಗೆ ತಿಳಿಸಿದನು. ಪವಿತ್ರ ಕುರ್ಆನಿನ ಸೂರಾ ಅನ್ನಿಸಾದ ನೂರನೇಯ ವಚನದ ತಳಹದಿಯಲ್ಲಿ ಈ ಘಟನೆಯಿದೆ.
“ಅಲ್ಲಾಹನಹ ಮಾರ್ಗದಲ್ಲಿ ವಲಸೆ ಹೋಗುವವನು ಭೂಮಿಯಲ್ಲಿ ಆಶ್ರಯ ಪಡೆಯಲು ಅನೇಕ ಸ್ಥಳಗಳನ್ನೂ, ಜೀವನ ಸಾಗಿಸಲು ಸಾಕಷ್ಟು ಅವಕಾಶವನ್ನೂ ಕಾಣುವನು. ಯಾವನಾದರೂ ತನ್ನ ಮನೆಯಿಂದ ಅಲ್ಲಾಹ್ ಮತ್ತು ಸಂದೇಶವಾಹಕರ ಕಡೆಗೆ ವಲಸೆ ಹೋಗಲು ಹೊರಟು ಆ ದಾರಿಯಲ್ಲಿಯೇ ಅವನಿಗೆ ಮರಣವುಂಟಾದರೆ ಅವನ ಪ್ರತಿಫಲ ಅಲ್ಲಾಹನ ಮೇಲೆ ಕಡ್ಡಾಯವಾಗಿ ಬಿಟ್ಟಿತು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ, ಕರುಣಾ ನಿಧಿಯೂ ಆಗಿರುತ್ತಾನೆ.” (ಪವಿತ್ರ ಕುರ್ಆನ್ 4:100)
ಈ ಸೂಕ್ತ ಅವತೀರ್ಣಗೊಂಣಡಾಗ ಪ್ರವಾದಿವರ್ಯರು ಆಶ್ಚರ್ಯ ಚಕಿತರಾದರು. ಕೂಡಲೇ ತನ್ನ ಅನುಚರರರನ್ನೆಲ್ಲಾ ಸೇರಿಸಿ ದಮ್ರ(ರ)ರ ಘಟನೆಯನ್ನು ವಿವರಿಸಿ ಐತಿಹಾಸಿಕ ಘೋಷಣೆಯನ್ನು ಮಾಡಿದರು. ಪ್ರವಾದಿ ವಚನಗಳ ಶೇಖರಣೆಗಳ ಹೆಚ್ಚಿನ ಹದೀಸ್ ಗ್ರಂಥದಲ್ಲಿ ಉಲ್ಲೇಖವಾದ ಪ್ರಾಮುಖ್ಯವಾದ ಆ ಹದೀಸ್ ಹೀಗಿದೆ. “ಖಂಡಿತವಾಗಿಯೂ ನಿಮ್ಮ ಕರ್ಮಗಳು ನಿಮ್ಮ ಉದ್ದೇಶವನ್ನು ಅವಲಂಬಿಸಿರುತ್ತದೆ.”
ಈ ಒಂದು ಘಟನೆಯು – ಇಸ್ಲಾಮಿನ ತಳಹದಿಯಲ್ಲಿ ಒಂದಾದ ಸಂಕಲ್ಪದ ಮಹತ್ವವು ಎಷ್ಟು ಆಳವಾದುದು ಎಂಬುದನ್ನು ಸಾರಿ ಹೇಳಿತು. ದಮ್ರ (ರ) ರವರ ಪ್ರಯಾಣವು ಉದ್ದೇಶಿತ ಗುರಿಯನ್ನು ತಲುಪಲಿಲ್ಲ. ಆದರೆ, ಅವರ ಸಂಕಲ್ಪವು ಅಲ್ಲಾಹನಲ್ಲಿ ಸ್ವೀಕೃತವಾಯಿತು. ಆತ್ಮಾರ್ಥವಾದ ಸಂಕಲ್ಪ ಅದು ಎಷ್ಟು ಕ್ಷುಲ್ಲಕವಾದ ಕರ್ಮವಾದರೂ ಸರಿ. ಅದು ದೊಡ್ಡ ಪ್ರತಿಫಲಕ್ಕೆ ಅರ್ಹವಾಗುತ್ತದೆ ಎಂಬುದು ಈ ಘಟನೆಯು ನಮಗೆ ತಿಳಿಸುತ್ತದೆ.
ದಮ್ರ(ರ) ರವರ ಬದುಕಿನಿಂದ ನಾವು ಕಲಿಯಬೇಕಾದ ಪಾಠಗಳು:
- ಕರ್ಮವಲ್ಲ ಸಂಕಲ್ಪವು ಮಹತ್ವದದ್ದಾಗಿದೆ: ಹಲವಾರು ಕರ್ಮಗಳು ಮಾಡುವುದಕ್ಕಿಂತ ಮಹತ್ವವಾದುದು ಅದನ್ನು ಪ್ರಾಮಾಣಿಕವಾಗಿ ಪೂರೈಸುದಾಗಿದೆ. ನಾವು ಎಷ್ಟೇ ಮಹತ್ವದ ಕಾರ್ಯ ಮಾಡಿದರೂ ನಮ್ಮ ಉದ್ದೇಶ ಸರಿಯಿಲ್ಲವೆಂದಾದರೆ ಅದಕ್ಕೆ ಅಲ್ಲಾಹನ ಬಳಿ ಯಾವುದೇ ಮಹತ್ವವಿರುವುದಿಲ್ಲ.
- ಉದ್ದೇಶಿತ ಗುರಿಯೆಡೆಗಿನ ಪ್ರಯಾಣ ಮುಖ್ಯವಾಗಿದೆ: ಉದ್ದೆಶಿತ ಗುರಿಯೆಡೆಗೆ ತಲುಪಿದೆನೋ ಇಲ್ಲವೋ ಎಂಬುದು ಮುಖ್ಯವಲ್ಲ. ಬದಲಾಗಿ ಆ ಹಾದಿಯಲ್ಲಿ ನಾವು ಎಷ್ಟರವರೆಗೆ ಪ್ರಾಮಾಣಿಕವಾಗಿ ಸಂಚರಿಸಿದ್ದೇವೆ ಎಂಬುದು ಮುಖ್ಯವಾಗಿದೆ. ಅದರಲ್ಲಿ ಸೋಲು ಗೆಲುವು ಮುಖ್ಯವಲ್ಲ. ಅಲ್ಲಾಹನು ಪರಿಶ್ರಮವನ್ನು ಪರಿಗಣಿಸುತ್ತಾನೆ.
- ವಿಶ್ವಾಸದಲ್ಲಿ ದೃಡತೆ: ವೃದ್ದಾಪ್ಯ, ರೋಗವು ಅವರನ್ನು ಬಾಧಿಸಿ ನಿಶ್ಶಕ್ತರಾದೂ ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಪ್ರವಾದಿವರ್ಯರ ಮೇಲಿನ ಪ್ರೀತಿ ಅವರನ್ನು ಮುಂದೆ ಸಾಗಲು ಪ್ರೇರೇಪಿಸಿತು. ನಮ್ಮ ಬದುಕಿನ ಸಂಧಿಗ್ದ ಪರಿಸ್ಥಿತಿಗಳಲ್ಲಿ ವಿಶ್ವಾಸವು ಹೇಗೆ ದೃಡವಾಗಿರಬೇಕೆಂಬುದನ್ನು ಈ ಘಟನೆಯು ಸ್ಪಷ್ಟ ಪಡಿಸುತ್ತದೆ.
ನಮ್ಮ ಬದುಕಿನ ಎಲ್ಲಾ ಘಟ್ಟಗಳಲ್ಲಿ ಈ ತತ್ವವನ್ನು ಅಳವಡಿಸಲು ಈ ಘಟನೆ ಪ್ರೇರಕವಾಗಿದೆ. ನಾವೆಲ್ಲರೂ ಪ್ರಯಾಣಿಕರಾಗಿದ್ದೇವೆ. ಕೆಲವೊಮ್ಮೆ ಪ್ರಯಾಣವು ತ್ರಾಸದಾಯಕ ಆಗಿರಬಹುದು. ಗುರಿ ಕೆಲವೊಮ್ಮೆ ದೂರದ್ದಾಗಿರಬಹುದು. ಆದರೆ ನಮ್ಮ ಹೃದಯದ ಸಂಕಲ್ಪವು ಪ್ರಾಮಾಣಿಕವಾಗಿದ್ದರೆ ಅದು ಪರಿಪೂರ್ಣತೆಯೆಡೆಗೆ ಸಾಗುತ್ತದೆ.
ಈ ಸಹಾಬಿಯ ಹೆಸರಿನ ಬಗ್ಗೆ ವಿದ್ವಾಂಸರ ನಡುವೆ ಅಭಿಪ್ರಾಯ ಭಿನ್ನತೆಯಿದೆ. ತ್ವಾವೂಸ್ ಬಿನ್ ಕೈಸಾನ್ ರ ಮೂಲಕ ಇಬ್ನು ಅಬ್ಬಾಸ್ ರಿಂದ ವರದಿಯಾದ ಪ್ರಕಾರ ಅವರ ಹೆಸರು ಜುಂದುಬ್ ಬಿನ್ ದಮ್ರ ಆಗಿದೆ. ಜುಂದಅ ಬಿನ್ ದಮ್ರ ಎಂಬ ಉಲ್ಲೇಖವೂ ಇದೆ. ಅಲ್ಲದೆ ದಮ್ರ ಬಿನ್ ಅಲ್ ಈಸ್ ಅಥವಾ ಅಲ್ ಈಸ್ ಬಿನ್ ದಮ್ರ ಬಿನ್ ಝಿಂಬಾಅ ಎಂದೂ ಹೇಳಲಾಗಿದೆ. ಹೆಸರು ಏನೇ ಇರಲಿ. ಅವರಂತೆಯೇ ಅಲ್ಲಾಹ್ ಮತ್ತು ಪ್ರವಾದಿ(ಸ) ರವರ ಮೇಲೆ ಪ್ರಾಮಾಣಿಕ ಪ್ರೀತಿ ಹಾಗೂ ಸ್ನೇಹದ ಸಮರ್ಪಣೆಯನ್ನು ಅಲ್ಲಾಹನು ನಮಗೆ ಅನುಗ್ರಹಿಸಲಿ.
ಅವಲಂಭನೆ: ಅಲ್ ಇಸ್ತೀಆಬ್ ಫೀ ಮಾರಿಫತಿಲ್ ಅಸ್ವಹಾಬ್ 2/301-302 ಉಝುದುಲ್ ಗಾಬ 3/62
ಕನ್ನಡಾನುವಾದ: ಸಲೀಮ್ ಬೋಳಂಗಡಿ
ಕೃಪೆ: ಇಸ್ಲಾಮಿಕ್ ಆನ್ಲೈವ್