ಸಾಹೋದರ್ಯ ಸಂಬಂಧದೊಂದಿಗೆ ಸಮಾಜ ನಿರ್ಮಿಸಿದ ಪ್ರವಾದಿ(ಸ)
ಲೇಖಕರು: ಯಾಸಿರ್ ಖಾದಿ
ಮಕ್ಕಾದ ಮುಹಾಜಿರರು ಮತ್ತು ಮದೀನಾದ ಅನ್ಸಾರುಗಳ ಮಧ್ಯೆ ಸಾಹೋದರತೆಯ ಸಂಬಂಧ ಸ್ಥಾಪಿಸುವ ಮೂಲಕ ಪ್ರವಾದಿವರ್ಯರು(ಸ) ಮದೀನಾ ತಲುಪಿದ ಕೂಡಲೇ ಹೊಸ ಸಮಾಜದ ಸ್ಥಾಪನೆಗೆ ಚಾಲನೆ ನೀಡಿದರು. ಅನ್ಸಾರರು ಮಕ್ಕಾದಿಂದ ವಲಸೆ ಬಂದ ಮುಹಾಜಿರರ ಜೊತೆ ತೋರಿದ ಔದಾರ‍್ಯವನ್ನು ಪವಿತ್ರ ಕುರ್‌ಆನ್ ಈ ರೀತಿ ವರ್ಣಿಸಿದೆ. “ಈ ಮುಹಾಜಿರರ ಆಗಮನಕ್ಕೆ ಮುಂಚೆಯೆ ಸತ್ಯವಿಶ್ವಾಸ ಸ್ವೀಕಾರ ಮಾಡಿ ಮದೀನಾದಲ್ಲಿ ವಾಸವಾಗಿದ್ದವರಿಗೆ ಇವರು ಹಿಜ್ರತ್ ಮಾಡಿ ತಮ್ಮ ಬಳಿಗೆ ಬಂದವರನ್ನು ಪ್ರೀತಿಸುತ್ತಾರೆ. ಅವರಿಗೆ ನೀಡಲ್ಪಟ್ಟುದರ ಕುರಿತು ಇವರು ಯಾವುದೇ ಆಶೆಯನ್ನು ಇಟ್ಟುಕೊಳ್ಳುವುದಿಲ್ಲ. ಸ್ವತಹ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲೆ ಪ್ರಾಶಸ್ತ್ಯ ನೀಡುತ್ತಾರೆ.” (ಅಲ್ ಹಶ್ರ್: 9) ಇಲ್ಲಿ ಅನ್ಸಾರುಗಳು ಅವರಿಗೆ ಮನೆ ಸಿದ್ದಗೊಳಿಸಿಕೊಟ್ಟರು ಎಂದು ಹೇಳಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ʻಅದ್ದಾರ್ʼ ಎಂಬ ಪದವನ್ನು ಅಲ್ಲಾಹನು ಬಳಸಿದ್ದಾನೆ. ಅನ್ಸಾರರು ತಮ್ಮ ಮನೆಯ ಅರ್ದಭಾಗವನ್ನು ಮುಹಾಜಿರರಿಗಾಗಿ ಬಿಟ್ಟುಕೊಟ್ಟರು. ಅವರನ್ನೂ ಅದರ ಹಕ್ಕುದಾರರನ್ನಾಗಿ ಬದಲಿಸಿದರು. ಅದಕ್ಕಾಗಿ ಅಲ್ಲಾಹನು ಮನೆ ಎಂಬ ಪದವನ್ನು ಬಳಸಲಿಲ್ಲ.
ಕುರ್‌ಆನ್ ಆ ಸೂಕ್ತದಲ್ಲಿ ಮುಂದುವರಿಯುತ್ತಾ, “ತಮ್ಮ ಬಳಿಗೆ ಬಂದವರನ್ನು ಪ್ರೀತಿಸುತ್ತಾರೆ ಅವರಿಗೆ (ಮುಹಾಜಿರರಿಗೆ) ನೀಡಲ್ಪಟ್ಟದ್ದಕ್ಕೆ ಸಂಬಂಧಿಸಿ ತಮ್ಮ ಮನದಲ್ಲಿ ಯಾವುದೇ ಆಶೆಯನ್ನು ಇಟ್ಟುಕೊಳ್ಳುವುದಿಲ್ಲ ತಮಗೆ ಸ್ವಯಂ ಅಗತ್ಯವಿದ್ದರೂ ಇತರರಿಗೆ ತಮಗಿಂತ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ” ಎಂದು ತಿಳಿಸಲಾಗಿದೆ. ಅನ್ಸಾರರು ಮುಹಾಜಿರುಗಳಿಗೆ ಯಾವುದೆಲ್ಲಾ ಅಗತ್ಯವಿದೆಯೋ ಅವೆಲ್ಲವನ್ನೂ ನೀಡಿದರು. ಉದಾಹರಣೆಗೆ ಮನೆ, ಆಹಾರ, ಸಾಕು ಪ್ರಾಣಿಗಳು ಇತ್ಯಾದಿ….
ಬುಖಾರಿಯವರು ಉದ್ದರಿಸಿದ ಒಂದು ಘಟನೆ ಹೀಗಿದೆ; ಅನ್ಸಾರರು ಪ್ರವಾದಿವರ್ಯರ(ಸ) ಬಳಿ ಬಂದು ಹೇಳಿದರು – “ನಮಗಿರುವ ಭೂಮಿಯಲ್ಲಿ ಅರ್ಧಭಾಗವನ್ನು ಮುಹಾಜಿರರಿಗೆ ನೀಡುವೆವು.” ಇದನ್ನು ಕೇಳಿದ ತಕ್ಷಣ ಪ್ರವಾದಿವರ್ಯರಿಗೆ(ಸ) ಅವರ ಮೇಲೆ ಅನುಕಂಪ ಮೂಡಿತು. ಅವರಿಗಾಗಿ ಪ್ರಾರ್ಥಿಸಿ ಅವರ ಉದಾರತೆಯ ಕೊಡುಗೆಯನ್ನು ತಿರಸ್ಕರಿಸುತ್ತಾ “ಅದು ಬೇಡ. ನಿಮ್ಮ ಭೂಮಿಯಲ್ಲಿ ಅವರು ಪರಿಶ್ರಮಿಸಲಿ. ಅದರ ಬೆಳೆಯ ಇಳುವರಿಯ ಭಾಗ ನಿಮಗೆ ನೀಡಲಿ” ಎಂದರು. ಅಂದರೆ ಅವರು ಆತ್ಮಾಭಿಮಾನದಿಂದ ತಮ್ಮ ಖರ್ಜೂರಗಳಿಗಾಗಿ ದುಡಿಯಲಿ. ಮುಹಾಜಿರರು ಉಚಿತವಾಗಿ ಪಡೆಯುವುದನ್ನು ಪ್ರವಾದಿವರ್ಯರು (ಸ) ಇಷ್ಟಪಡಲಿಲ್ಲ. ಬದಲಾಗಿ ಅವರು ಮೈಮುರಿದು ದುಡಿಯಲಿ ಎಂದಾಗಿತ್ತು. ಒಂಬತ್ತು ವರ್ಷಗಳ ಬಳಿಕ ಅಥವಾ ಐದು ತಲೆಮಾರುಗಳ ಬಳಿಕ ಈ ಉಚಿತ ಕೊಡುಗೆಯ ಕಾರಣದಿಂದ ಅವರ ಮನದಲ್ಲಿ ಪಿಶಾಚಿಯು ನುಸುಳುವ ಸಾಧ್ಯತೆಯಿದ್ದರೆ ಎಂಬುದು ಪ್ರವಾದಿವರ್ಯರ(ಸ) ಚಿಂತನೆಯಾಗಿತ್ತು. ಅನ್ಸಾರುಗಳ ಬಗ್ಗೆ ತಕರಾರಿಲ್ಲ. ಅವರು ಉತ್ತಮ ವ್ಯಕ್ತಿತ್ವದ ಮನೋಸ್ಥಿತಿಯುಳ್ಳವರಾಗಿದ್ದರು. ಆದರೆ ತಲೆಮಾರುಗಳ ಬಳಿಕ ನಮ್ಮ ಪೂರ್ವಜರಿಂದ ಈ ಮುಹಾಜಿರರ ಪೂರ್ವಜರು ಹಲವಾರು ಕೊಡುಗೆಗಳನ್ನು ಪಡೆದವರು ಎಂದು ಚಿಂತಿಸುವುದಾದರೆ… ಅಥವಾ ಸಾಮಾಜಿಕ ಒತ್ತಡಕ್ಕೆ ಮಣಿದು ತಮ್ಮ ಸೊತ್ತನ್ನು ನೀಡಬೇಕಾಗಿ ಬಂದ ಕಪಟ ವಿಶ್ವಾಸಿಗಳು ಹಾಗೆ ಹೇಳಿದರೆ? ಅದು ಪ್ರವಾದಿವರ್ಯರ(ಸ) ಇಂತಹ ಚಿಂತನೆಗಳಿಂದ ಆಯ್ದ ತೀರ್ಮಾನವಾಗಿತ್ತು. ಆದ್ದರಿಂದ ಅನ್ಸಾರರು ಉದಾರವಾಗಿ ದಾನ ನೀಡಿದ್ದನ್ನು ಪ್ರವಾದಿವರ್ಯರು(ಸ) ನಿರಾಕರಿಸಿದರು.
ಪ್ರತಿಯೊಬ್ಬ ಪುರುಷ ಮುಹಾಜಿರ್ ಮತ್ತು ಪ್ರತಿ ಅನ್ಸಾರರ ನಡುವೆ ಪ್ರವಾದಿವರ್ಯರು(ಸ) ಸಂಬಂಧವನ್ನು ಸ್ಥಾಪಿಸಿದರು. ಹೀಗೇ ಪ್ರವಾದಿವರ್ಯರು(ಸ) ಸುಮಾರು ನೂರು ಮಂದಿಯ ಜೋಡಿಗಳನ್ನು ಸ್ಥಾಪಿಸಿದರು. ಆರಂಭ ಕಾಲದಲ್ಲಿ ಅವರು ಒಂದೇ ತಂದೆ ತಾಯಿಯ ಮಕ್ಕಳ ಹಾಗೆ ಬದುಕಿದರು. ಅವರು ಪರಸ್ಪರ ವಾರೀಸು ಸೊತ್ತಿನ ಹಕ್ಕು ದಾರರಾದರು. ಮುಂದೆ ಸೂರಾ ಅನ್ಫಾಲ್ ನ 75ನೇ ಸೂಕ್ತ ಅವತೀರ್ಣಗೊಂಡ ಬಳಿಕ ಈ ನಿಯಮವನ್ನು ರದ್ದು ಪಡಿಸಲಾಯಿತು. “ಅನಂತರ ವಿಶ್ವಾಸವಿಟ್ಟವರು, ʻವಲಸೆʼ ಮಾಡಿಬಂದವರು ಮತ್ತು ನಿಮ್ಮ ಜೊತೆಗೂಡಿ ಹೋರಾಡಿದವರು ಸಹ ನಿಮ್ಮೊಂದಿಗೆ ಸೇರಿದ್ದಾರೆ. ಆದರೆ ಅಲ್ಲಾಹನ ಗ್ರಂಥದಲ್ಲಿ ರಕ್ತಸಂಬಂಧಿಕರು ಪರಸ್ಪರ ಹೆಚ್ಚು ಹಕ್ಕುದಾರರು. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ವಸ್ತುಗಳ ಜ್ಞಾನಿಯಾಗಿರುತ್ತಾನೆ.”
ಈ ರೀತಿಯ ಸಂಬಂಧ ಸ್ಥಾಪಿಸಿದಾಗ ಈರ್ವರ ಸಾಮ್ಯತೆಗಳನ್ನು ಪ್ರವಾದಿವರ್ಯರು(ಸ) ಪರಿಗಣಿಸಿದ್ದರು. ಉದಾಹರಣೆಗೆ ಅಬೂಬಕ್ಕರ್ ಮತ್ತು ಖಾರಿಜ್ ಬಿನ್ ಝೈದ್ ಇವರೀರ್ವರೂ ಆ ಸಮಾಜದಲ್ಲಿ ಪ್ರತಿಷ್ಠಿತರಾಗಿದ್ದರು. ಹೀಗೆ ಜೋಡಿಯಾದವರು ಸಮಾಜದ ಮುಂದೆ ಜೊತೆಯಾಗಿಯೇ ಪ್ರತ್ಯಕ್ಷರಾಗುತ್ತಿದ್ದರು. ಸಲ್ಮಾನುಲ್ ಫಾರಿಸ್ (ರ) ಮತ್ತು ಅಬೂ ದರ್ದಾ(ರ) ಮನೆಯಲ್ಲಿ ಅವರನ್ನು ಸಂದರ್ಶಿಸಿದ ಘಟನೆ ಇತಿಹಾಸ ಪ್ರಸಿದ್ದವಾಗಿದೆ.
ಸಅದ್ ಬಿನ್ ರಬೀಅ ತನಗೆ ಮುಹಾಜಿರ್ ಸಹೋದರನೊಡನೆ ದೊರೆತ ಅಬ್ದರ‍್ರಹ್ಮಾನ್ ಬಿನ್ ಔಫ್(ರ)ರೊಡನೆ ತೋರಿದ ಉದಾರತೆ ಇತಿಹಾಸ ಪ್ರಸಿದ್ದವಾಗಿದೆ. ತನ್ನ ಮನೆ, ಜಮೀನು, ಸಂಪತ್ತು ಎಲ್ಲವನ್ನೂ ಸಮಾನವಾಗಿ ಹಂಚಿದ ರಬೀಅ ತನ್ನ ಪತ್ನಿಯರಲ್ಲಿ ಒಬ್ಬರನ್ನು ತಲಾಕ್ ನೀಡಿ ಅಬ್ದರ‍್ರಹ್ಮಾನ್ ಅವರಿಗೆ ನೀಡಲು ಸಿದ್ದರಾಗಿದ್ದರು. ಎಲ್ಲವನ್ನೂ ತಿರಸ್ಕರಿಸಿದ ಅಬ್ದುರ‍್ರಹ್ಮಾನ್ ರವರು ಮಾರುಕಟ್ಟೆ ಎಲ್ಲಿದೆಯೆಂದು ತೋರಿಸಲು ಹೇಳಿದರು. ಅಲ್ಲಿಗೆ ತಲುಪಿದ ಅವರು ಸಣ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡು ಅಭಿವೃದ್ದಿ ಹೊಂದುತ್ತಾ ಬಹಳ ವೇಗವಾಗಿ ಅದರಲ್ಲಿ ಯಶಸ್ವಿಯಾದರು. ಹೀಗೆ ಒಮ್ಮೆ ಅಬ್ದುರ‍್ರಹ್ಮಾನ್ ರವರು ಬೆಲೆಬಾಳುವ ವಸ್ತ್ರ ಧರಿಸಿ ಸುಗಂದ ಪೂಸಿ ಬರುತ್ತಿದ್ದುದನ್ನು ಕಂಡ ಪ್ರವಾದಿವರ್ಯರು(ಸ) ಅವರಲ್ಲಿ ಕುಶಲ ವಿಚಾರಿಸಿದಾಗ ನಾನು ಓರ್ವ ಅನ್ಸಾರಿ ಮಹಿಳೆಯನ್ನು ವಿವಾಹಾದುದಾಗಿ ತಿಳಿಸಿದರು. ಅನ್ಸಾರರ ಉದಾರತೆ ಮತ್ತು ಮುಹಾಜಿರರ ಆತ್ಮಾಭಿಮಾನವನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ.
ಓರ್ವನು ವಿಶ್ವಾಸದಿಂದ ಪ್ರಚೋದಿತನಾಗಿ ಅಮೋಘವಾದ ಉದಾರತೆ ತೋರಿಸುವಾಗ ಅದೇ ರೀತಿಯ ವಿಶ್ವಾಸವನ್ನು ಹೃದಯದಲ್ಲಿ ಬೆಳೆಸಿದವನಿಗೆ ತಿರಸ್ಕರಿಸಲು ಪ್ರೇರಕವಾಗುತ್ತದೆ.
ಅನ್ಸಾರರ ಆತಿಥ್ಯ, ಉದಾರತೆಯನ್ನು ಅನುಭವಿಸುತ್ತಿದ್ದ ಮುಹಾಜಿರರು ಒಮ್ಮೆ ಪ್ರವಾದಿವರ್ಯರ ಬಳಿ ಬಂದು ಹೇಳಿದರು. “ಪ್ರವಾದಿವರ್ಯರೇ ಇಂತಹ ಮನುಷ್ಯರನ್ನು ನಾನು ಈ ವರೆಗೆ ನೋಡಿಲ್ಲ. ಸುಲಭ – ಕಷ್ಟ ಯಾವುದನ್ನೂ ಪರಿಗಣಿಸದೆ ಅವರು ಎಲ್ಲವನ್ನೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಮ್ಮ ಅಗತ್ಯಗಳನ್ನು ಪೂರೈಸುತ್ತಾರೆ. ಎಲ್ಲ ಪುಣ್ಯದ ಪ್ರತಿಫಲವನ್ನು ಇವರೇ ಹೊತ್ತೋಯ್ಯುವರೇ?” ಈ ಪ್ರಶ್ನೆಯು ಅನ್ಸಾರರ ವಿರುದ್ದದ ದೂರಾಗಿರಲಿಲ್ಲ. ಅದ್ಬುತವಾದ ಉದಾರತೆಯಾಗಿತ್ತು. ಅಂದರೆ, ಮಕ್ಕಾದಲ್ಲಿ ಅನೇಕ ರೀತಿಯ ಹಿಂಸೆ ದೌರ್ಜನ್ಯಗಳನ್ನು ಸಹಿಸಿ ಎಲ್ಲವನ್ನೂ ತೊರೆದು ಪ್ರವಾದಿವರ್ಯರ(ಸ) ಜೊತೆ ಬಂದು ನಾವು ಸಹಿಸಿದ ತ್ಯಾಗಗಳು ಅನ್ಸಾರರ ಈ ಆತಿಥ್ಯ ಉದಾರತೆಯ ಮುಂದೆ ಏನೂ ಅಲ್ಲ ಎಂಬ ಭಾವನೆ ಅವರಲ್ಲಿ ಮೂಡಿ ಈ ಅಭಿಪ್ರಾಯ ಬಂದಿದೆ. ಅವರನ್ನು ಸಮಾಧಾನಿಸುತ್ತಾ ಪ್ರವಾದಿವರ್ಯರು(ಸ) ಹೆಳಿದರು. “ಇಲ್ಲ… ನೀವು ಅವರನ್ನು ಪ್ರಶಂಸಿಸುತ್ತಾ ಅವರಿಗಾಗಿ ಪ್ರಾರ್ಥಿಸುತ್ತಾ ಇರುವ ವರೆಗೆ ನಿಮ್ಮ ಪ್ರತಿಫಲ ಅವರಿಗೆ ಲಭಿಸದು. ನಿಮಗೆ ನಿಮ್ಮ ಕರ್ಮದ ಪ್ರತಿಫಲವಿದೆ. ಅನ್ಸಾರರಿಗೆ ಅವರ ಪ್ರತಿಫಲ ಲಭಿಸುವುದು.” ಅನ್ಸಾರರ ಎಲ್ಲಾ ಕರ್ಮಗಳ ಜೊತೆ ನಿಮಗೆ ಅವರಿಗಿಂತ ಹೆಚ್ಚಿನ ದರ್ಜೆ ಇರುವುದು ಎಂದು ಮುಹಾಜಿರರಿಗೆ ಪ್ರವಾದಿವರ್ಯರು ಮನವರಿಕೆ ಮಾಡುತ್ತಿದ್ದರು.
ಸಾಹೋದರತೆ ಸ್ಥಾಪನೆಯು ನೀಡುವ ಪಾಠಗಳು:
- ಸಾಹೋದರತೆಯ ಸಂಸ್ಥಾಪನೆ ಎಂಬುವುದು ಸತ್ಯ ವಿಶ್ವಾಸಿಗಳಾಗಿ ಬದಲಾಗುವವರಿಗೆ ನಾವು ಸಂಸ್ಥಾಪಿಸುವ ಪ್ರವಾದಿಚರ್ಯೆಯಾಗಿದೆ. ಪ್ರವಾದಿಯ ಬದುಕಿನ ಅಂತಿಮ ಘಟ್ಟದ ವರೆಗೆ ಮಕ್ಕಾ ವಿಜಯದ ಬಳಿಕವೂ ಅವರು ಈ ಸಹೋದರತೆಯ ಸಂಸ್ಥಾಪನೆಗೆ ಪ್ರಯತ್ನಿಸಿದರು. ಅವರು ಸಹೋದರರಾಗಿ ಮಾಡಿದವರ ಹೆಸರುಗಳನ್ನು ಪರಿಶೀಲಿಸಿದಾಗ ಇದು ಅರ್ಥ ಆಗುತ್ತದೆ. ಉದಾರಣೆಗೆ ಸಲ್ಮಾನ್ ಬಿನ್ ಫಾರಿಸ್ ಹಾಗೂ ಅಬೂ ದರ್ದಾ. ಹಿಜರಿ ಏಳನೇಯ ವರ್ಷದಲ್ಲಿ ಮದೀನಾ ತಲುಪಿದ ಜಅಫರ್ ಬಿನ್ ಅಬೂತಾಲಿಬ್ ರವರು ಮುಆದ್ ಬಿನ್ ಜಬಲ್ ರ ಸಹೋದರರಾಗಿ ಪ್ರವಾದಿವರ್ಯರು(ಸ) ಮಾಡಿದ್ದರು. ಮಕ್ಕಾ ವಿಜಯದ ಬಳಿಕ ಇಸ್ಲಾಮ್ ಸ್ವೀಕರಿಸಿದ ಮುಆವಿಯಾ ಬಿನ್ ಅಬೂ ಸುಫ್ಯಾನ್ ರಿಗೂ ಪ್ರವಾದಿವರ್ಯರು(ಸ) ಸಹೋದರರನ್ನು ನೇಮಿಸಿದರು. ಅಂದರೆ ಇದು ಇಸ್ಲಾಮಿನ ಆರಂಭ ಕಾಲದಲ್ಲಿ ಮಾತ್ರ ಸೀಮಿತ ಎಂದು ಪರಿಗಣಿಸಬಾರದು. ಮದೀನಾ ಕಾಲಘಟ್ಟದಲ್ಲಿ ಇದು ನೆಲೆ ನಿಂತಿದ್ದರೆ ಬಳಿಕ ಇದು ನಿರ್ಲಕ್ಷಿಸಲ್ಪಟ್ಟ ಪ್ರವಾದಿ ಚರ್ಯೆ ಆಗುತ್ತಿದೆ. ಇದನ್ನು ನಾವು ಮರುಸ್ಥಾಪಿಸಬೇಕಾಗಿದೆ.
- ಸಮಾಜದ ಅಭಿವೃದ್ದಿಯಲ್ಲಿ; ಅದರಲ್ಲಿರುವ ಸದಸ್ಯರ ನಡುವಿನ ಪ್ರಬಲ ಸಂಬಂಧ ಪ್ರಮುಖ ಪಾತ್ರವಹಿಸುತ್ತದೆ. ಅತ್ಯಂತ ಪ್ರಬಲವಾದ ಸಂಬಂಧ ಧಾರ್ಮಿಕ ಸಂಬಂಧವಾಗಿದೆ. ಯಾಕೆಂದರೆ ಒಂದೇ ಜೀವನದ ದೃಷ್ಟಿಕೋನವಿರುವ ವಕ್ತಾರರು ಎಂಬ ನೆಲೆಯಲ್ಲಿ ಮೌಲ್ಯಯುತವಾದ ವ್ಯವಸ್ಥೆ ಮತ್ತು ಬದುಕಿನ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅವರು ಸಾರ್ವಜನಿಕ ವಾಹಿನಿಯಲ್ಲಿ ಭಾಗಿಯಾಗುತ್ತಾರೆ. ಈ ಪ್ರಬಲವಾದ ಸಂಬಂಧದ ಕುರಿತು ಸೂರಾ ಹುಜರಾತ್ 10ನೇಯ ಸೂಕ್ತದಲ್ಲಿ ಅಲ್ಲಾಹನು ಹೀಗೆ ಹೇಳಿದ್ದಾನೆ. “ಸತ್ಯವಿಶ್ವಾಸಿಗಳಂತು ಪರಸ್ಪರ ಸಹೋದರರು. ಆದುದರಿಂದ ನಿಮ್ಮ ಸಹೋದರರ ನಡುವೆ ಸಂಬಂಧಗಳನ್ನು ಸರಿಪಡಿಸಿರಿ ಮತ್ತು ಅಲ್ಲಾಹನಿಗೆ ಭಯಪಡಿರಿ. ನಿಮ್ಮ ಮೇಲೆ ಕೃಪೆ ತೋರಲಾಗುವುದೆಂದು ನಿರೀಕ್ಷಿಸಬಹುದು.” ಮದೀನಾದ ಆರಂಭ ಕಾಲದ ಮುಸ್ಲಿಮ್ ಸಮಾಜದ ಕಡೆಗೆ ಕಣ್ನೋಡಿಸಿದಾಗ ಅಪರಿಚಿತರನ್ನು ಇಷ್ಟೊಂದು ಉದಾರತೆ ನಿಸ್ವಾರ್ಥತೆಯಿಂದ ಸ್ವಾಗತಿಸಿ ಉಪಚರಿಸಿದ ಉದಾಹರಣೆಯು ಇತಿಹಾಸದಲ್ಲಿ ಕಾಣಸಿಗದು. ಅವರು ಒಳಿತು ಮಾಡುತ್ತಾರೆ ಮಾತ್ರವಲ್ಲ ಅಲ್ಲಾಹನು ಅವರನ್ನು ಏಳು ಆಕಾಶಗಳ ಮೇಲೆ ಅವರ ಹೃದಯ ನೈರ್ಮಲ್ಯವನ್ನು ವರ್ಣಿಸುತ್ತಾನೆ. ಇತರರ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ಇಂತಹದ್ದೊಂದು ಮಾದರಿ ಕಾಣ ಸಿಗದು. ಆಪ್ತ ಸಹೋದರತೆಯ ಸಂಬಂಧವಿಲ್ಲದೆ ಇದು ಸಾಧ್ಯವಿಲ್ಲ. ಅಂತಹದ್ದೊಂದು ಸಹೋದರತೆಯ ಸಂಬಂಧವನ್ನು ಸ್ಥಾಪಿಸಲು ಮದೀನಾ ತಲುಪಿದ ಕೂಡಲೇ ಪ್ರವಾದಿವರ್ಯರು(ಸ) ಶ್ರಮಿಸಿದರು.
- ಕೆಲವು ಉಪದೇಶ ನೀಡಿ ಅನುಯಾಯಿಗಳನ್ನು ಕಳುಹಿಸುವುದು ಪ್ರವಾದಿವರ್ಯರ ರೀತಿಯಲ್ಲ. ಓರ್ವ ನಾಯಕನ ರೀತಿ ಹೇಗಿರಬೇಕೆಂಬುದನ್ನು ಕಲಿಸುತ್ತಾರೆ. ಆವಿಷ್ಕಾರವನ್ನು ಆ ಮಹಾನಾಯಕ ಅನುಷ್ಟಾನಕ್ಕೆ ತರುತ್ತಾರೆ. ಮುಹಾಜಿರರಲ್ಲಿರುವ ಪ್ರತಿಯೊಬ್ಬರ ಬಗ್ಗೆ ಪ್ರವಾದಿವರ್ಯರಿಗೆ ಚೆನ್ನಾಗಿ ಅರಿವಿತ್ತು. ಮುಹಾಜಿರರ ಗುಂಪಿನ ಪ್ರತಿಯೊಬ್ಬನಿಗೂ ಅವರ ಅರ್ಹತೆ ನೋಡಿ ಅವರಿಗೆ ತಕ್ಕುದಾದ ಅನ್ಸಾರರನ್ನು ಕಂಡು ಜೋಡಿಯಾಗಿ ಮಾಡಿದ್ದರು. ಅವರ ಸಿದ್ದಾಂತ ಮಾತುಗಳನ್ನು ಮಾತ್ರ ಅವರಿಗೆ ಅರ್ಹತೆಯ ಮಾನದಂಡವಲ್ಲ. ಅವರ ಕರ್ಮ ವಿಶ್ವಾಸದಲ್ಲಿನ ದೃಡತೆ, ಚಟುವಟಿಕೆಗಳು ಅವರನ್ನು ಲೀಡರ್ ಆಗಿ ಮಾಡುತ್ತದೆ. ಅನಸ್ ಬಿನ್ ಮಾಲಿಕ್ ರವರು ತಮ್ಮ ಮನೆಯಲ್ಲಿ ಕುಳಿತು ಪ್ರವಾದಿವರ್ಯರು(ಸ) ಸಹೋದರತೆಯ ಸಂಬಂಧವನ್ನು ಸ್ಥಾಪಿಸಿದ್ದನ್ನು ಸ್ಮರಿಸುತ್ತಾರೆ. ಪ್ರವಾದಿವರ್ಯರು(ಸ) ತನ್ನ ಸಿದ್ದಾಂತಗಳನ್ನು ಕೇವಲ ಹೇಳುತ್ತಿದ್ದುದಲ್ಲ ಅವರು ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಿದ್ದರು.
- ಇಸ್ಲಾಮೀ ಶರೀಅತ್‌ನ ನಿಯಮಗಳನ್ನು ಕ್ರಮ ಪ್ರಕಾರವಾಗಿ ಅಭಿವೃದ್ದಿ ಪಡಿಸುವ ಅಲ್ಲಾಹನ ಯುಕ್ತಿ ಕೂಡಾ ಇದರಲ್ಲಿ ಅಡಗಿದೆ. ನಮಗೆ ತಿಳಿಯುವ ಪ್ರಕಾರ ಇಸ್ಲಾಮಿನ ವಿಧಿ ನಿಷೇಧಗಳು ಹಠಾತ್ತನೆ ತಂದು ಹಾಕಿದ್ದಲ್ಲ. ಅದನ್ನು ಹಂತ ಹಂತವಾಗಿ ಅನುಷ್ಟಾನಕ್ಕೆ ತರಲಾಯಿತು. ಆರಂಭದಲ್ಲಿ ಮುಹಾಜಿರರು ಕುಟುಂಬ ಇಲ್ಲದವರಾಗಿದ್ದಾಗ ಅನ್ಸಾರರು ಅವರ ಕುಟುಂಬದ ಭಾಗವಾಗಿ ಪರಿಗಣಿಸಲ್ಪಟ್ಟಾಗ, ನಂತರ ಅವರ ಮದ್ಯೆ ಪರಸ್ಪರ ವಾರೀಸಿನ ಹಕ್ಕುದಾರರ ಸ್ಥಿತಿಗೆ ತಲುಪಿತು. ಆದರೆ ಮುಹಾಜಿರ್ ಗಳಿಗೆ ಸ್ವತಃ ಕುಟುಂಬಗಳು ಉಂಟಾದಾಗ ಅಲ್ಲಾಹನು ಆ ಕಾರ್ಯವನ್ನು ಇನ್ನಷ್ಟು ಸುಲಭಗೊಳಿಸಿ ವಾರೀಸು ಸೊತ್ತಿನ ನಿಯಮವನ್ನು ಬದಲಿಸಿದನು. ಮದ್ಯಪಾನ ನಿಷೇಧದ ವಿಷಯದಲ್ಲೂ ಹೀಗೆಯೇ ಹಂತ ಹಂತವಾಗಿ ನಾಲ್ಕು ಹಂತಗಳಲ್ಲಿ ನಿಷೇಧಿಸಲಾಯಿತು. ನಿರುತ್ಸಾಹದಿಂದ ಆರಂಭವಾಗಿ ಸಂಪೂರ್ಣ ನಿಷೇಧದ ಹಂತಕ್ಕೆ ತಲುಪಿತು. ಹಾಗೆಯೇ ನಮ್ಮ ಬಳಿಗೆ ಬರುವ ನೂತನ ವಿಶ್ವಾಸಿಯು ಇದೇ ರೀತಿಯಲ್ಲಿ ಹಂತ ಹಂತವಾಗಿ ಸಾಗಲಿ ಎಂದುಕೊಂಡು ನನಗೆ ಪ್ರತೀ ಹಂತಕ್ಕೂ ಒಂದು ವರ್ಷ ತಗುಲಬೇಕೆಂದು ಹೇಳಿದರೆ ನಾವೇನು ಮಾಡಬೇಕು? ಎಲ್ಲಾ ಇಸ್ಲಾಮೀ ವಿದ್ವಾಂಸರು ಒಮ್ಮತಾಭಿಪ್ರಾಯದಲ್ಲಿ ಹೇಳಿದ ಮಾತೇನೆಂದರೆ “ಹಲವು ಸೌಲಭ್ಯಗಳಿರುವ ಈ ಹೊಸ ಕಾಲ ಘಟ್ಟದಲ್ಲಿ ಇಸ್ಲಾಮಿನೆಡೆಗೆ ಧಾವಿಸಿ ಬರುವವರಿಗೆ ಇದು ಅನ್ವಯ ಆಗದು. ಸಹಾಬಿಗಳು ಇಸ್ಲಾಮಿನ ಮೊತ್ತ ಮೊದಲ ಕುಟುಂಬವಾಗಿದ್ದರು. ಅನುಸರಿಸಲ್ಪಡುವಂತಹ ಪೂರ್ವಜರ ಮಾದರಿಗಳು ಅವರಿಗೆ ಇರಲಿಲ್ಲ. ಅದೇ ವೇಳೆ ಇಸ್ಲಾಮೀ ಶರೀಅತ್ ಅನುಸಾರವಾಗಿ ಬದುಕುವ ಸಮಾಜದಲ್ಲಿ ಅವರು ಇಸ್ಲಾಮಿನತ್ತ ಪ್ರವೇಶಿಸುತ್ತಿದ್ದಾರೆ. ಆದ್ದರಿಂದ ಆರಂಭ ಕಾಲದಲ್ಲಿ ಇರುವಂತರಹ ವಿನಾಯಿತಿ ಅನುಮತಿಸಲಾಗದು. ಮದ್ಯಪಾನವನ್ನು ತಕ್ಷಣ ತೊರೆಯುಂತೆ ಹೇಳಬೇಕು. ಸೂರ ಫಾತಿಹಾವನ್ನು ಅವರು ಕಾಗದದ ಮೂಲಕ ಓದಿಯಾದರೂ ಸರಿ ಇಸ್ಲಾಮ್ ಸ್ವೀಕಾರದೊಂದಿಗೆ ತಕ್ಷಣ ನಮಾಝ್ ನಿರ್ವಹಿಸಲು ಆರಂಭಿಸಬೇಕು. ಸಾಂಕೇತಿಕವಾಗಿ ಅವರ ಇಸ್ಲಾಮ್ ಸ್ವೀಕಾರವು ಅವರನ್ನು ಶರೀಅತ್‌ಗೆ ಒಳಪಡಿಸಿತು ಎಂದಾಗಿದೆ. ಹೊಸದಾಗಿ ಇಸ್ಲಾಮಿನೊಳಗೆ ಪ್ರವೇಶಿಸುವವನಿಗೆ ಇಸ್ಲಾಮಿನ ಆರಾಧನಾ ಕರ್ಮಗಳನ್ನು ಕ್ರಮಬದ್ದವಾಗಿ ನಿರ್ವಹಿಸಲು ವಿವೇಕಯುತವಾದ ಸಹಾಯವು ಸಮುದಾಯದಿಂದ ಸಿಗಬೇಕು.
- ಅನ್ಸಾರುಗಳ ದರ್ಜೆ ಏನೆಂಬುದನ್ನು ಪ್ರವಾದಿವರ್ಯರ ಸಾಹೋದರತೆಯ ಇತಿಹಾಸ ನಮಗೆ ಕಲಿಸುತ್ತದೆ. ವಿವಿಧ ರೀತಿಯಲ್ಲಿ ಅನ್ಸಾರರನ್ನು ಅಲ್ಲಾಹನು ಪ್ರಶಂಸಿರುತ್ತಾನೆ. ಹೀಗಿರುವಾಗ ಅನ್ಸಾರರನ್ನು ಪ್ರೀತಿಸುವುದು ಕೂಡಾ ಈಮಾನಿನ ಭಾಗವಾಗಿದೆ. ಬುಖಾರಿ ಮತ್ತು ಮುಸ್ಲಿಮ್‌ನಲ್ಲಿ ಈ ಕುರಿತು ಹೇಳಲಾಗಿದೆ. “ಅನ್ಸಾರ್‌ಗಳನ್ನು ಪ್ರೀತಿಸುವುದು ಈಮಾನಿನ ಲಕ್ಷಣವಾಗಿದೆ. ಅನ್ಸಾರುಗಳನ್ನು ದ್ವೇಷಿಸುವುದು ಕಾಪಟ್ಯದ ಲಕ್ಷಣಗಳಾಗಿವೆ.” ಆದ್ದರಿಂದ ನಾವು ಅನ್ಸಾರುಗಳನ್ನು ಪ್ರೀತಿಸಬೇಕು. ಪ್ರವಾದಿವರ್ಯರು(ಸ) ಒಮ್ಮೆ ಅನ್ಸಾರುಗಳ ಮಹತ್ವವನ್ನು ಹೀಗೆ ಸಾರಿದ್ದರು. “ಹಿಜಿರಾ ಇಲ್ಲದಿರುತ್ತಿದ್ದರೆ ನಾನು ನಿಮ್ಮಲ್ಲೊಬ್ಬರಾಗುತ್ತಿದ್ದೆ. ಎಲ್ಲರೂ ಒಂದೆಡೆ ಸಾಗುತ್ತಾ ಅನ್ಸಾರುಗಳು ಮತ್ತೊಂದೆಡೆಗೆ ಸಾಗುತ್ತಿದ್ದರೆ ನಾನು ಅನ್ಸಾರುಗಳು ತಳೆದ ಹಾದಿಯನ್ನು ಸ್ವೀಕರಿಸುತ್ತಿದ್ದೆ.” ಮಕ್ಕಾ ವಿಜಯದ ಬಳಿಕ ಈ ಮಾತುಗಳನ್ನು ಪ್ರವಾದಿವರ್ಯರು(ಸ) ಹೇಳಿದ್ದರು ಎಂಬುದು ಗಮನಾರ್ಹ. ಇದೇ ವೇಳೆ ಅನ್ಸಾರುಗಳನ್ನು ಪ್ರವಾದಿವರ್ಯರು(ಸ) ಇಷ್ಟೊಂದು ಪ್ರಶಂಸಿಸುತ್ತಿದ್ದರೂ ಮುಹಾಜಿರುಗಳಿಗೆ ಅವರಿಗಿಂತ ಸ್ವಲ್ಪ ಉನ್ನತ ಸ್ಥಾನ ನೀಡಿದ್ದಾರೆ. ಅಲ್ಲಾಹನು ಅನ್ಸಾರುಗಳನ್ನು ಪ್ರಶಂಸಿಸುವ ಕಡೆಗಳಲ್ಲಿ ಅದಕ್ಕಿಂತ ಮುಂಚಿತವಾಗಿ ಮುಹಾಜಿರ್‌ಗಳನ್ನೂ ಪ್ರಶಂಸಿಸುವುದು ಕಾಣಬಹುದು. ಉದಾಹರಣೆಗೆ ಸೂರಾ ಅತ್ತೌಬಾದಲ್ಲಿ 100ನೇ ಸೂಕ್ತದಲ್ಲಿ, “ಈಮಾನಿನ ಕರೆಗೆ ಓಗೊಡುವುದರಲ್ಲಿ ಮೊದಲಿಗರಾದ ಮುಹಜಿರ್ ಮತ್ತು ಅನ್ಸಾರರೊಂದಿಗೂ ಅನಂತರ ಸತ್ಯ ಸಂಧತೆಯೊಂದಿಗೆ ಅವರನ್ನು ಹಿಂಬಾಲಿಸಿದವರೊಂದಿಗೆ ಅಲ್ಲಾಹನು ಪ್ರಸನ್ನನಾದನು.” ಅದೇ ಅಧ್ಯಾಯದ 117ನೇಯ ಸೂಕ್ತದಲ್ಲಿ “ಅಲ್ಲಾಹನು ಪ್ರವಾದಿಯವರನ್ನೂ ಅವರ ಕಷ್ಟಕಾಲದಲ್ಲಿ ಅವರಿಗೆ ಸಹಕರಿಸಿದ ಮುಹಾಜಿರ್ ಮತ್ತು ಅನ್ಸಾರರನ್ನು ಅಲ್ಲಾಹನು ಕ್ಷಮಿಸಿಬಿಟ್ಟನು.” ಎಂದು ಪ್ರಾರಂಭಿಸಲಾಗಿದೆ. ಹಾಗೆಯೇ ಅನ್ಸಾರರನ್ನು ಪ್ರಶಂಸಿಸುವ ಸೂರಾ ಅಲ್ ಹಶ್ರ್ ನಲ್ಲಿಯೂ 9ನೇಸೂಕ್ತಕ್ಕಿಂತ ಮುಂಚಿತವಗಿ 8ನೇಯ ಸೂಕ್ತದಲ್ಲಿ ಮುಹಾಜಿರ್‌ಗಳನ್ನೂ ಪ್ರಶಂಸಿಸಿರುವುದು ಕಾಣಬಹುದು.
ಅನು: ಅಬೂ ಸಫ್ವಾನ್