ಪೈಗಂಬರ್ ಮುಹಮ್ಮದ(ಸ)ರು ಕಲಿಸಿದ ವ್ಯವಹಾರ ನೀತಿ
ಲೇಖಕರು: ಎಂ.ಅಶೀರುದ್ದೀನ್ ಆಲಿಯಾ, ಸಾರ್ತಬೈಲ್
(ಶಿಕ್ಷಕರು, ಸ್ನೇಹ ಪಬ್ಲಿಕ್ ಸ್ಕೂಲ್)
ವ್ಯಾಪಾರ ಎಂದರೆ ಲಾಭ ಪಡೆಯುವ ಉದ್ದೇಶದಿಂದ ವಸ್ತುಗಳನ್ನೂ ಉತ್ಪಾದಿಸಿ, ಮಾರಾಟ ಮಾಡುವುದು ಅಥವಾ ಖರೀದಿಸುವುದು, ವಿನಿಮಯ ಮಾಡಿಕೊಳ್ಳುವುದು ಮಾತ್ರವಾಗಿರದೆ ಅದೊಂದು ಸೇವೆ ಅಥವಾ ಪುಣ್ಯ ಕಾರ್ಯ ಎಂಬ ಹೊಸ ವ್ಯಾಖ್ಯಾನ ಕೊಟ್ಟವರಾಗಿದ್ದರು ಪೈಗಂಬರ್ ಮುಹಮ್ಮದ್ (ಸ). ನ್ಯಾಯ, ಸತ್ಯ ಮತ್ತು ನಂಬಿಕೆ ವ್ಯಾಪಾರದ ಪ್ರಮುಖ ಆಧಾರವಾಗಿರಬೇಕು. ಹಲಾಲ್ (ಧರ್ಮ ಸಮ್ಮತವಾದ) ಮಾರ್ಗದಲ್ಲಿ ವ್ಯಾಪಾರ ಮಾಡಿದರೆ ಅದು ಆರಾಧನೆ (ಇಬಾದತ್)ಯಾಗುತ್ತದೆ ಎಂದು ಪೈಗಂಬರ್(ಸ) ರವರು ಸಾರಿದ್ದಾರೆ. ಪ್ರಾಮಾಣಿಕತೆಯಿಂದ ಕೂಡಿದ ವ್ಯಾಪಾರವನ್ನು ಪ್ರವಾದಿ(ಸ) ಪ್ರೋತ್ಸಾಹಿಸಿದ್ದರು. ಸಣ್ಣ ಪುಟ್ಟ ವ್ಯವಹಾರವನ್ನು ಗೌರವಿಸುತ್ತಿದ್ದರು. ಆತ್ಮಾಭಿಮಾನದಿಂದ ಬದುಕಿರಿ ಬೇಡುವುದಕ್ಕಿಂತ ಕಾಡಿಗೆ ಹೋಗಿ ಕಟ್ಟಿಗೆ ತಂದು ಅದನ್ನು ಮಾರಿ ಬದುಕುವುದು ಉತ್ತಮ ಕಾರ್ಯವಾಗಿದೆ ಎಂದರು.
ವ್ಯಾಪಾರದಲ್ಲಿ ಹಣ, ಆಸ್ತಿ ಸಂಪತ್ತುಗಳ ಸಮೃದ್ಧಿಗಿಂತ ಹೃದಯದೊಳಗಿನ ತೃಪ್ತಿ ಮತ್ತು ಸಂತೋಷ ಮುಖ್ಯ. ಪ್ರವಾದಿ(ಸ) ಹೀಗೆಂದಿದ್ದಾರೆ: “ಹೃದಯದಲ್ಲಿ ಸಮೃದ್ಧಿ ಹೊಂದಿರುವವನು ಈ ಜಗತ್ತಿನಲ್ಲಿ ಏನೇ ಇದ್ದರೂ ಅವನಿಗೆ ಯಾವುದೇ ಹಾನಿಯಾಗುವುದಿಲ್ಲ, ಮತ್ತು ಹೃದಯದಲ್ಲಿ ಬಡವನಾಗಿರುವವನು ಈ ಜಗತ್ತಿನಲ್ಲಿ ಎಲ್ಲವನ್ನೂ ಹೊಂದಿದ್ದರೂ ಸಂತೋಷವಾಗಿರುವುದಿಲ್ಲ” (ಹದೀಸ್)
ವ್ಯವಹಾರ ಧರ್ಮದ ಮೂಲ ತತ್ವಗಳಾದ ಕೊಡು-ಕೊಳ್ಳುವಿಕೆ, ಅಗತ್ಯಗಳ ಪೂರೈಸುವಿಕೆ ಮತ್ತು ಬೇಡಿಕೆಗಳ ಈಡೇರಿಸುವಿಕೆಯನ್ನು ಪ್ರವಾದಿ(ಸ)ರು ಸೇವೆಯಾಗಿ ಗುರುತಿಸಿದರು. ಆದ್ದರಿಂದ ಸತ್ಯ, ನ್ಯಾಯ, ಪ್ರಾಮಾಣಿಕತೆ ಹಾಗೂ ಗೌರವದಿಂದ ವ್ಯಾಪಾರ ಮಾಡುವುದು ಕೂಡ ಒಂದು ಪುಣ್ಯದಾಯಕ ಕಾರ್ಯವಾಗಿದೆ. ಪೈಗಂಬರ್ ಮುಹಮ್ಮದ್(ಸ) ಹೇಳಿದರು “ವಿಶ್ವಾಸಾರ್ಹ, ಪ್ರಾಮಾಣಿಕ ವ್ಯಾಪಾರಿ ಪುನರುತ್ಥಾನ ದಿನದಂದು ಹುತಾತ್ಮರೊಂದಿಗೆ ಇರುತ್ತಾನೆ“. (ಅಲ್-ತಿರ್ಮಿದಿ)
ಇನ್ನೊಂದೆಡೆ ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಕೊಳ್ಳುವಿಕೆ, ಮಾರಾಟ ಮತ್ತು ಹಣವನ್ನು ಹಿಂದಿರುಗಿಸುವಾಗ ಸೌಮ್ಯವಾಗಿರುವವನ ಮೇಲೆ ಅಲ್ಲಾಹನ ಕರುಣೆ ಇರಲಿದೆ.” (ಸಹೀಹ್ ಬುಖಾರಿ)
ವ್ಯಾಪಾರದ ಪಾಲುದಾರರಾದ ಮಾಟಗಾರರು, ಹೂಡಿಕೆದಾರರು, ಗ್ರಾಹಕರು ಹಾಗೂ ಕಾರ್ಮಿಕರೊಂದಿಗೆ, ಹೇಗೆ ನಡೆದುಕೊಳ್ಳಬೇಕು? ಹೇಗೆ ವಿನಿಮಯ ಮಾಡಿಕೊಳ್ಳಬೇಕು? ಎಂದು ಮಹಮ್ಮದ್ ಪೈಗಂಬರ್(ಸ) ರವರು ಸರಿಯಾದ ಮಾರ್ಗದರ್ಶನ ನೀಡಿದ್ದಾರೆ. ಅದಕ್ಕಾಗಿ ವ್ಯಾಪಾರದಲ್ಲಿ ಹಲಾಲ್ (ಧರ್ಮ ಸಮ್ಮತ) ಹರಾಮ್ (ಧರ್ಮ ಸಮ್ಮತವಲ್ಲದ) ಎಂಬ ಎರಡು ಪರಿಕಲ್ಪನೆಗಳನ್ನು ಪರಿಚಯಿಸಿ ವ್ಯಾಪಾರಕ್ಕೆ ಮೇರೆಗಳನ್ನು ನಿಶ್ಚಯಿಸಿದರು. ಜನಸಾಮಾನ್ಯರಿಗೆ, ಸಮಾಜಕ್ಕೆ, ಪ್ರಕೃತಿಗೆ ತೊಂದರೆ ಉಂಟುಮಾಡುವ ಎಲ್ಲಾ ರೀತಿಯ ವ್ಯವಹಾರಗಳನ್ನು ಖರೀದಿ ಮತ್ತು ಮಾರಟಗಳನ್ನು ನಿಷೇಧಿಸಿದರು. ಮದ್ಯ, ಹಂದಿ ಮಾಂಸ, ಜೂಜಾಟ, ಬಡ್ಡಿ ವ್ಯವಹಾರ ನಿಷಿದ್ಧವಾಗಿದೆ. ವ್ಯಾಪಾರದಲ್ಲಿ ಸುಳ್ಳು ಹೇಳುವುದು, ವಸ್ತು ಗುಣಮಟ್ಟವನ್ನು ಮರೆಮಾಡುವುದು, ತೂಕ–ಅಳತೆಯಲ್ಲಿ ಮೋಸ ಮಾಡುವುದು ಮಹಾ ಪಾಪವಾಗಿದೆ. ಕುರ್‌ಆನ್ ಹೇಳಿದೆ: “ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವವರ ಮೇಲೆ ಶಾಪವಿದೆ“ (ಸೂರಾ ಅಲ್-ಮುತಫ್ಫಿಫೀನ್ :1-3)
ಇತ್ತೀಚಿನ ದಿನಗಳಲ್ಲಿ, ಪ್ರತಿಯೊಂದು ಅಂಗಡಿಯಲ್ಲಿ ಹೆಚ್ಚಾಗಿ “No Returns No Bargain” (ಮಾರಾಟವಾದ ವಸ್ತುಗಳನ್ನು ಹಿಂತೆಗೆಯುವುದಿಲ್ಲ) ಎಂದು ಬರೆಯಲಾಗುತ್ತದೆ. ಕೆಲವು ವಸ್ತುಗಳಿಗೆ ಅವರು ಸಮಯದ ಚೌಕಟ್ಟನ್ನು ನಿಗದಿಪಡಿಸುತ್ತಾರೆ. ಪ್ರವಾದಿ ಮುಹಮ್ಮದ್ (ಸ) ರವರು ಖರೀದಿಸಿದ ವಸ್ತುವನ್ನು ಇಟ್ಟುಕೊಳ್ಳಬೇಕೆ ಅಥವಾ ಹಿಂತಿರುಗಿಸಬೇಕೆ ಎಂದು ನಿರ್ಧರಿಸಲು ಪ್ರತಿಯೊಬ್ಬ ಗ್ರಾಹಕರಿಗೆ ಮೂರು ರಾತ್ರಿಗಳಿವೆ ಎಂದಿದ್ದಾರೆ.
ಇಂದಿನ ಯುಗದಲ್ಲಿ ವ್ಯವಹಾರಿಕ ಜಗತ್ತನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಬೆಲೆ ಮತ್ತು ಲಾಭದ ಪ್ರಮಾಣವೂ ಒಂದು. ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಮಾರುಕಟ್ಟೆ ಬಿಕ್ಕಟ್ಟನ್ನು ಸೃಷ್ಟಿಸಿ, ಆ ಉತ್ಪನ್ನವನ್ನು ಹೆಚ್ಚಿನ ಬೆಲೆಗೆ ಮರುಮಾರಾಟ ಮಾಡುವುದನ್ನು ಪ್ರವಾದಿ ನಿಷೇಧಿಸಿದ್ದಾರೆ. “ನೀವು ಏನನ್ನಾದರೂ ಖರೀದಿಸಿದಾಗ, ಮಾರಾಟ ಮಾಡುವಾಗ (ಅಥವಾ ಮಾರಾಟ ಮಾಡುವಾಗ) ಮೋಸ ಮಾಡುವ ಉದ್ದೇಶ ಇರಬಾರದು“ (ಅಲ್-ಬೈಹಕಿ) ಗ್ರಾಹಕರ ಬಾಹ್ಯ ನೋಟವನ್ನು ಆಧರಿಸಿ ಬೆಲೆಗಳನ್ನು ನಾಚಿಕೆಯಿಲ್ಲದೆ ಹೆಚ್ಚಿಸುವ ಅಪ್ರಾಮಾಣಿಕ ವ್ಯಾಪಾರದಿಂದ ಗ್ರಾಹಕ ಶೋಷಣೆಗೆ ಒಳಗಾಗುತ್ತಿದ್ದಾನೆ. ಬೆಲೆಯೇರಿಕೆಯನ್ನು ನಿರೀಕ್ಷಿಸಿ ದವಸ ಧಾನ್ಯಗಳನ್ನು ತಡೆದಿರಿಸುವವನು ಅಪರಾಧಿಯಾಗಿದ್ದಾನೆ. ಗ್ರಾಹಕರು ಹೆಚ್ಚು ಬೆಲೆಯನ್ನು ಪಾವತಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ, ನಿರ್ದಿಷ್ಟ ಬೆಲೆಗಿಂತ ಅಧಿಕಗೊಳಿಸಲು ಪ್ರಯತ್ನಿಸುವುದು ಅನ್ಯಾಯವಾಗಿದೆ. ಅವರ ಬಗ್ಗೆ ಅಲ್ಲಾಹನು ಕೋಪಗೊಳ್ಳುತ್ತಾನೆ ಎಂದಿದ್ದಾರೆ. ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: “ಪಾಪಿ ಹೊರತು ಯಾರೂ ಸರಕುಗಳನ್ನು ಅವುಗಳ ಬೆಲೆ ಹೆಚ್ಚಾಗುವವರೆಗೆ ತಡೆಹಿಡಿಯುವುದಿಲ್ಲ.” (ಸುನಾನ್ ಅಬಿ ದಾವೂದ್) ಅನ್ಯಾಯವಾಗಿ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದವರು ಅಥವಾ ಸರಕುಗಳ ಬೆಲೆಗಳು ಹೆಚ್ಚಾಗುವವರೆಗೆ ಮಾರಾಟ ಮಾಡುವುದನ್ನು ತಡೆಹಿಡಿದವರು ಪಾಪಿಗಳೆಂದು ಪರಿಗಣಿಸಲ್ಪಡುತ್ತಾರೆ.
ಪೂರ್ಣ ಅಳತೆ ಮತ್ತು ತೂಕವನ್ನು ಮಾಡದೆ ಗ್ರಾಹಕರನ್ನು ವಂಚಿಸುವುದು, ಅಳತೆ ಮಾಡುವಾಗ ಬಟ್ಟೆಗಳನ್ನು ಹಿಗ್ಗಿಸುವುದು, ಸ್ಕೇಲ್ ನ ಅಡಿಯಲ್ಲಿ ಭಾರ ವಸ್ತುಗಳನ್ನು ಇಟ್ಟು ಮೋಸ ಮಾಡುವುದು, ಸರಕುಗಳನ್ನು ತಕ್ಕಡಿಯ ಮೇಲೆ ಬಲವಂತವಾಗಿ ಇರಿಸಿ ನಂತರ ಅವುಗಳನ್ನು ತ್ವರಿತವಾಗಿ ತೆಗೆದುಹಾಕುವುದು, ತಕ್ಕಡಿಯ ಎರಡು ತಟ್ಟೆಗಳ ನಡುವೆ ವ್ಯತ್ಯಾಸವನ್ನು ಇಟ್ಟುಕೊಳ್ಳುವುದು, ಎಲೆಕ್ಟ್ರಾನಿಕ್ ತಕ್ಕಡಿಯಲ್ಲಿ ಸೆಟ್ಟಿಂಗ್ ಮಾಡಿಡುವುದು, ಗೊಂದಲಗೊಳಿಸುವುದು ಅಥವಾ ಮೀಟರ್ ಅನ್ನು ಬದಲಾಯಿಸುವುದು ಇತ್ಯಾದಿ ಗ್ರಾಹಕರನ್ನು ಮೋಸಗೊಳಿಸುವ ಎಲ್ಲಾ ವ್ಯವಹಾರಿಕ ಕುತಂತ್ರಗಳನ್ನು ಪ್ರವಾದಿ(ಸ) ನಿಷೇಧಿಸಿದ್ದಾರೆ. ಪೂರ್ಣ ಅಳತೆ ಮತ್ತು ತೂಕ ಮಾಡದವನು ತನಗೆ ಹೆಚ್ಚಿನ ಲಾಭವಾಗಿದೆ ಎಂದು ಭಾವಿಸುತ್ತಾನೆ… ನಿಜವಾಗಿ ಅವನು ನಷ್ಟದ ಬಾಗಿಲುಗಳನ್ನು ತೆರೆದಿದ್ದಾನೆ. ಅಲ್ಲಾಹನು ಅವನ ಜೀವನಾಂಶದಿಂದ ಅನುಗ್ರಹಗಳನ್ನು ತೆಗೆದುಹಾಕುತ್ತಾನೆ.
ಕುರ್‌ಆನ್ ಹೀಗೆ ಹೇಳುತ್ತದೆ:
“ಓ ನನ್ನ ಜನಾಂಗ ಬಾಂಧವರೇ, ನ್ಯಾಯದೊಂದಿಗೆ ಪೂರ್ತಿಯಾಗಿ ಅಳತೆ ಮತ್ತು ತೂಕ ಮಾಡಿಕೊಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಿಕೊಡಬೇಡಿರಿ ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುತ್ತ ನಡೆಯಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿರುವಿರಾದರೆ ಅಲ್ಲಾಹನು ನೀಡಿದ ಉಳಿತಾಯವೇ ನಿಮಗೆ ಉತ್ತಮ. ನಾನೇನೂ ನಿಮ್ಮ ಮೇಲ್ನೋಟಗಾರನಲ್ಲ.” (ದಿವ್ಯ ಕುರ್‍ಆನ್ 11: 85 – 86)
ಮನುಷ್ಯನ ದೈನಂದಿನ ಅಗತ್ಯಗಳಲ್ಲಿ, ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಳ ಭಕ್ಷ್ಯದಿಂದ ಹಿಡಿದು ಭಾರಿ ಭೋಜನದ ಆಹಾರ ತಯಾರಿಕೆ ಮನುಷ್ಯನ ಅಭಿರುಚಿಯಂತೆ ವೈವಿಧ್ಯಮಯ ಮತ್ತು ಸಮೃದ್ಧವಾಗಿದೆ. ದುರಾದೃಷ್ಟವಶಾತ್ ಇಂದು ಅತೀ ಹೆಚ್ಚು ಕಲಬೆರಕೆಯಿರುವುದು ಆಹಾರ ಪದಾರ್ಥಗಳಲ್ಲಿ. ಅಕ್ಕಿ, ದವಸಧಾನ್ಯ, ಹಿಟ್ಟು, ತಿಂಡಿ ತಿನಿಸುಗಳಲ್ಲಿ ಕಲ್ಲು ಮಣ್ಣು, ಹೊಯಿಗೆ, ಸುಣ್ಣ, ಬಣ್ಣ, ರಾಸಾಯನಿಕ ಪಾದಾರ್ಥ ಮಿಶ್ರಿತ ಕಲಬೆರಕೆಯ ಪ್ರಮಾಣ ಮಿತಿಮೀರಿದೆ. ಹಾಗೆಯೇ ತರಕಾರಿ ಹಣ್ಣುಗಳಲ್ಲಿ ಒಳ್ಳೆಯದನ್ನು ಅಡಗಿಸಿಟ್ಟು ಕೊಳೆತವುಗಳನ್ನು ಮಾರುವುದು, ಕೆಲವೊಮ್ಮೆ ಮೇಲಕ್ಕೆ ಒಂದೆರಡು ಒಳ್ಳೆಯವುಗಳನ್ನಿಟ್ಟು ವಂಚಿಸುವುದನ್ನು ಪೈಗಂಬರ್(ಸ) ರವರು ತಡೆದಿದ್ದಾರೆ. ಒಮ್ಮೆ ಪೈಗಂಬರ್ (ಸ) ರವರು ಸಂತೆಯಲ್ಲಿ ನಡೆಯುವಾಗ ಒಬ್ಬ ವ್ಯಾಪಾರಿಯ ಅಂಡಿಯಲ್ಲಿ ಗೋಧಿಕಾಳಿನ ಗೋಣಿಚೀಲಕ್ಕೆ ಕೈ ಹಾಕಿದರು. ಆಗ ಅವರ ಬೆರಳುಗಳು ತೇವವಾಯಿತು. ಆ ಅಂಗಡಿಯ ಮಾಲೀಕರಿಗೆ: “ಇದು ಏನು?” ಎಂದು ಕೇಳಿದರು. ಆತ “ಅಲ್ಲಾಹನ ಸಂದೇಶವಾಹಕರೇ, ಇವು ಮಳೆಯಿಂದ ಒದ್ದೆಯಾಗಿವೆ. ಒದ್ದೆಯಾದ ಧಾನ್ಯಗಳನ್ನು ಕಂಡರೆ ಯಾರೂ ಖರೀದಿಸಲು ಮುಂದೆ ಬರುವುದಿಲ್ಲ ಅದಕ್ಕಾಗಿ ಸ್ವಲ್ಪ ಒಣಗಿದವುಗಳನ್ನು ಮೇಲೆ ಹಾಕಿದ್ದೇನೆ ಎಂದರು. ಪ್ರವಾದಿ (ಸ) ಹೇಳಿದರು: “ಅದನ್ನು ಒಣಗಿಸಿಟ್ಟು ಮಾರಬೇಕು ವಂಚನೆ ಮಾಡಬಾರದು, ಮೋಸ ಮಾಡುವವನು ನನ್ನವನಲ್ಲ” ಎಂದರು.
ವ್ಯಾಪಾರದಲ್ಲಿ ಧನಿಕರು ಮಾತ್ರವಲ್ಲ ಕೆಲಸದವರೂ ಇದ್ದಾರೆ. ಮುಖ್ಯವಾಗಿ ಅವರ ಬಗ್ಗೆಯೂ ಕಾಳಜಿ ವಹಿಸಬೇಕು ಅವರೊಂದಿಗೆ ಗೌರವದಿಂದ ವರ್ತಿಸಬೇಕು. “ನಿಮ್ಮ ಕೆಲಸಗಾರರು ತಪ್ಪು ಮಾಡಿದರೆ ಕನಿಷ್ಟ ಪಕ್ಷ 70 ಬಾರಿಯಾದರೂ ಕ್ಷಮಿಸಬೇಕು. ಪ್ರವಾದಿ(ಸ) ರವರು ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು: “ಕಾರ್ಮಿಕನ ಬೆವರು ಆರುವುದಕ್ಕಿಂತ ಮುಂಚೆ ಆತನ ವೇತನವನ್ನು ಕೊಟ್ಟುಬಿಡಿರಿ“ ಎಂದಿದ್ದಾರೆ.
ವ್ಯವಹಾರದಲ್ಲಿ ಸಾಲ ಅನಿವಾರ್ಯವಾಗಿ ಪರಿಣಮಿಸಿದೆ. ಸಾಲ ಮಾಡದೆ ವ್ಯಾಪಾರ ಅಸಾಧ್ಯವೆನ್ನುವ ಮಟ್ಟಿಗೆ ಬೆಳೆದಿದೆ. ಅಗತ್ಯವಿದ್ದವರಿಗೆ ಸಾಲ ಕೊಡುವುದನ್ನು ದಾನವೆಂದು ಪ್ರವಾದಿ(ಸ) ಪರಿಗಣಿಸಿದ್ದಾರೆ. ಅದನ್ನು ಸರಿಯಾದ ಸಮಯಕ್ಕೆ ಹಿಂದಿರುಗುವುಸುದು ಪಡೆದುಕೊಂಡವನ ಜವಾಬ್ದಾರಿಯಾಗಿದೆ. ಆದರೆ ಇಂದು ವ್ಯಾಪಾರದ ನೆಪದಲ್ಲಿ ನೂರಾರು ಜನರಿಂದ ಸಾಲ ಪಡೆದು ನಷ್ಟದ ಕಾರಣ ಹೇಳುವ ಫ್ರಾಡ್‌ಗಳು ಅಧಿಕವಾಗಿದ್ದಾರೆ. ಪೈಗಂಬರರು ಸಾಲದ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು, ಸಾಧ್ಯವಾದಷ್ಟು ಅದರಿಂದ ದೂರ ನಿಲ್ಲಲು ಸೂಚಿಸಿದರು. “ಸಾಲಗಾರನು ಒಬ್ಬ ಸೆರೆಯಾಳು“ ಎಂದರು. “ಸಾಲವನ್ನು ಹೊಂದಿದ್ದರೆ, ಸಾಲವನ್ನು ತೀರಿಸುವವರೆಗೆ ಅವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.” (ಅನ್-ನಸಾಯಿ) ಎಂದು ಎಚ್ಚರಿಕೆ ನೀಡಿದರು.
ಪ್ರವಾದಿ (ಸ) ಹೇಳಿದರು: “ಜನರ ಸಂಪತ್ತನ್ನು ಹಿಂದಿರುಗಿಸುವ ಉದ್ದೇಶದಿಂದ ತೆಗೆದುಕೊಂಡವನಿಗೆ ಅಲ್ಲಾಹನು ಅದನ್ನು ಹಿಂದಿರುಗಿಸುವನು ಮತ್ತು ಅದನ್ನು ನಾಶಮಾಡುವ ಉದ್ದೇಶದಿಂದ ತೆಗೆದುಕೊಂಡವನಿಗೆ ಅಲ್ಲಾಹನು ಅದನ್ನು ನಾಶಮಾಡುವನು.” (ಅಲ್-ಬುಖಾರಿ, 2387)
ಒಬ್ಬ ವ್ಯಕ್ತಿಯು ಬಡವನಾಗಿದ್ದುಕೊಂಡು ನೀತಿಬದ್ಧ ಕಾರಣಕ್ಕಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ಮರಣ ಹೊಂದಿದಲ್ಲಿ, ಅಲ್ಲಾಹನು ಅವನನ್ನು ಆ ಕಾರಣಕ್ಕಾಗಿ ಸ್ವರ್ಗದಿಂದ ತಡೆಯುವುದಿಲ್ಲ. ಸಾಲ ಕೊಡುವವರಿಗೆ ಅದೇ ರೀತಿ ಪಡೆಯುವವರಿಗೆ ಹಲವು ನಿಯಮ ನಿಬಂಧನೆಗಳನ್ನು ಕಲಿಸಿಕೊಟ್ಟಿದ್ದಾರೆ. ಕೊಡುವ ಸಾಲ ಯಾವತ್ತೂ ಬಡ್ಡಿಯ ರೂಪ ಪಡೆಯಬಾರದು. ಬಡ್ಡಿಯೆಂಬುವುದು ಶೋಷಣೆಯಾಗಿದೆ ಅದು ನಿಮಗೆ ಸಂಪೂರ್ಣ ನಿಷಿದ್ಧವಾಗಿದೆ ಎಂದು ಪ್ರವಾದಿ ತಿಳಿಸಿದ್ದಾರೆ. ಒಂದಂಶ ಬಡ್ಡಿ ಸೇರಿ ಕೊಂಡರೂ ಅಂತಹ ವ್ಯಾಪಾರ ಧರ್ಮ ಸಮ್ಮತವಲ್ಲ. ಬಡ್ಡಿ ಸೇವಿಸುವವರನ್ನು ಅತಿದೊಡ್ಡ ಪಾಪಿಗಳೆಂದು ಕರೆದಿದ್ದಾರೆ. ಇಸ್ಲಾಮಿನಲ್ಲಿ ನ್ಯಾಯಸಮ್ಮತವಾದ ಲಾಭಕ್ಕಾಗಿ ವ್ಯಾಪಾರ ಪ್ರೋತ್ಸಾಹಿತವಾಗಿದೆ, ಆದರೆ ಬಡ್ಡಿ ಅಕ್ರಮ ಎಂದು ಘೋಷಿಸಲಾಗಿದೆ.
ಬಡ್ಡಿಯಿಂದ ಸಮಾಜದಲ್ಲಿ ಅನ್ಯಾಯ, ದೌರ್ಜನ್ಯ ಮತ್ತು ದಾರಿದ್ರ್ಯ ಹೆಚ್ಚುತ್ತದೆ ಎಂದು ಪ್ರವಾದಿ ಹೇಳಿದ್ದಾರೆ. ಬಡ್ಡಿ ಕೊಡುವವ, ಬಡ್ಡಿ ತೆಗೆದುಕೊಳ್ಳುವವ, ಬಡ್ಡಿ ಬರೆವವ, ಸಾಕ್ಷಿಯಾದವ ಎಲ್ಲರನ್ನೂ ಪ್ರವಾದಿ ಮುಹಮ್ಮದ್ (ಸ) ರವರು ಶಪಿಸಿದ್ದಾರೆ. ಬಡ್ಡಿಯೂ ವ್ಯಾಪಾರದಂತಲ್ಲ, ಬಡ್ಡಿಯ ವ್ಯವಹಾರವು ಒಬ್ಬನಿಗೆ ಲಾಭ ಮತ್ತು ಇನ್ನೊಬ್ಬನಿಗೆ ನಷ್ಟವನ್ನುಂಟು ಮಾಡುತ್ತದೆ ಅಥವಾ ಒಬ್ಬನಿಗೆ ನಿರ್ದಿಷ್ಟ ಲಾಭವನ್ನು ಖಾತ್ರಿ ಪಡಿಸಿ ಇನ್ನೊಬ್ಬನಿಗೆ ಅನಿರ್ದಿಷ್ಟ ನಷ್ಟವನ್ನೊದಗಿಸುತ್ತದೆ.
ವ್ಯಾಪಾರದಲ್ಲಿ ಮಾರಾಟಗಾರ ಮತ್ತು ಗ್ರಾಹಕರ ಮಧ್ಯೆ ಲಾಭದ ಸರಿಸಮಾನ ವಿನಿಮಯವಾಗಬೇಕು. ಗ್ರಾಹಕನು ತಾನು ಖರೀದಿಸಿದ ವಸ್ತುವಿನಿಂದ ಪ್ರಯೋಜನ ಪಡೆಯುತ್ತಾನೆ. ವ್ಯಾಪಾರಿಯು ಅದಕ್ಕಾಗಿ ವ್ಯಯಿಸಿದ ಶ್ರಮ, ಬುದ್ಧಿ-ಸಾಮರ್ಥ್ಯ ಮತ್ತು ಸಮಯದ ಪ್ರತಿಫಲ ಪಡೆಯುತ್ತಾನೆ. ವ್ಯವಹಾರವು ನೇರ ವಿನಿಮಯ ಅಥವಾ ಲಾಭ ಹಂಚಿಕೆಯಿಂದ ನಡೆಯಬೇಕು. ವ್ಯಾಪಾರದಲ್ಲಿ ಇಬ್ಬರೂ ಸಂತೋಷದಿಂದ ಒಪ್ಪಿಗೆ ನೀಡಬೇಕು. ಬಲವಂತ, ವಂಚನೆ ನಿಷಿದ್ಧವಾಗಿದೆ. ವ್ಯಾಪಾರಿ ಸದಾ ನ್ಯಾಯದಿಂದ ನಡೆದುಕೊಳ್ಳಬೇಕು. ವ್ಯಾಪಾರದಲ್ಲಿ ಪ್ರಕಾರಗಳನ್ನು ಪ್ರವಾದಿ ಕಲಿಸಿದ್ದರೆ “ಮುಶಾರಕ” – ಹೂಡಿಕೆ ಮಾಡಿ ಲಾಭ–ನಷ್ಟ ಹಂಚಿಕೊಳ್ಳುವುದು. “ಮುದಾರಬಾ” – ಒಬ್ಬನು ಹಣ ಕೊಡುತ್ತಾನೆ, ಮತ್ತೊಬ್ಬನು ಶ್ರಮ ಹೂಡುತ್ತಾನೆ; ಲಾಭವನ್ನು ಹಂಚಿಕೊಳ್ಳುತ್ತಾರೆ. “ಮುರಾಬಹಾ” – ಖರೀದಿಸಿದ ವಸ್ತುವನ್ನು ಲಾಭ ಸೇರಿಸಿ ಮಾರಾಟ ಮಾಡುವುದು.
ಹಲಾಲ್ ವ್ಯಾಪಾರಗಳು, ವ್ಯವಹಾರಗಳು ಅಥವಾ ಪಾಲುದಾರಿಕೆಗಳ ಮೂಲಕ ತಮ್ಮ ಲಾಭವನ್ನು ಗಳಿಸಬೇಕು. ಅಲ್ಲಿ ಪಾಲುದಾರರು ಪ್ರತಿಫಲಗಳು ಮತ್ತು ಅಪಾಯಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಹಾಗೆಯೇ ಒಬ್ಬನು ತನ್ನ ಸಹೋದರನ ವ್ಯಾಪಾರದ ಮೇಲೆ ವ್ಯಾಪಾರ ಮಾಡಬಾರದು. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು, “ಒಬ್ಬನು ಇನ್ನೊಬ್ಬನ ವ್ಯಾಪಾರದ ಮೇಲೆ ವ್ಯಾಪಾರ ಮಾಡಬಾರದು. ಸರಕನ್ನು ಮಾರುಕಟ್ಟೆಗೆ ತಂದು ಹಾಕುವವರೆಗೆ (ಅದನ್ನು ಕೊಳ್ಳಲು) ಅವಸರಪಡ ಬಾರದು” (ಬುಖಾರಿ). ಯಾರ ಹಣದಿಂದ ವ್ಯಾಪಾರ ಮಾಡುವಿರೋ ಅದರ ಲಾಭದ ಹಣವನ್ನು ಅವರಿಗೆ ನೀಡಬೇಕು ಎಂದರು. ಪ್ರವಾದಿ(ಸ) ಹೇಳಿದರು “ನಿಷಿದ್ಧ ಸಂಪಾದನೆಯಿಂದ ಬೆಳೆದ ಶರೀರವು ಸ್ವರ್ಗ ಪ್ರವೇಶಿಸಲಾರದು” (ಹದೀಸ್)
ಒಬ್ಬ ಮನುಷ್ಯನ ನೈಜ ಗುಣ ನಡತೆಗಳ ಬಗ್ಗೆ ಅರಿವಾಗಲು ಅವನೊಂದಿಗೆ ವ್ಯಾಪಾರ ನಡೆಸಬೇಕು ಇಲ್ಲ ಅವನೊಂದಿಗೆ ಯಾತ್ರೆ ಹೊರಡಬೇಕು. ಪೈಗಂಬರ್ ಮುಹಮ್ಮದ್ (ಸ)ರು ಮೂಲತಃ ಒಬ್ಬ ವ್ಯಾಪಾರಿಯಾಗಿದ್ದರು. ತಮ್ಮ ಚಿಕ್ಕಪ್ಪಂದಿರರ ಜೊತೆ ಶಾಮ್, ಮಿಸ್ರ್(ಈಜಿಪ್ಟ್) ಯೆಮೆನ್ ದೇಶಗಳಿಗೆ ವ್ಯಾಪಾರಕ್ಕೆ ಜೊತೆಯಾಗಿ ಹೋಗಿದ್ದರು. ಅವರ ಕುಟುಂಬವೇ ವ್ಯಾಪಾರಿ ಕುಟುಂಬವಾಗಿತ್ತು. 12ನೇ ವಯಸ್ಸಿಗೆ, ಅವರು ತಮ್ಮ ವ್ಯವಹಾರಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ತಮ್ಮ ಚಿಕ್ಕಪ್ಪರಿಂದ ವ್ಯವಹಾರದ ಮೂಲಭೂತ ಅಂಶಗಳನ್ನು ಕಲಿತರು. ಹದಿಹರೆಯದಲ್ಲಿ ಪ್ರವಾದಿಯವರು ಸ್ವಂತ ವ್ಯವಹಾರವನ್ನು ತೆರೆಯುವ ಮೂಲಕ ಉದ್ಯಮಶೀಲರಾದರು. ಅವರ ವ್ಯಾಪಾರ ನೆರೆಯ ದೇಶಗಳಿಗೆ ವ್ಯಾಪಿಸಲು ಪ್ರಾರಂಭಿಸಿತು.
ಪ್ರವಾದಿ (ಸ) ಮುಖ್ಯವಾಗಿ ಮಕ್ಕಾ ಮತ್ತು ಸಿರಿಯಾ ನಡುವಿನ ಕಾರವಾನ್(ವ್ಯಾಪಾರಿ ತಂಡ) ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಪ್ರಾಮಾಣಿಕ ಸ್ವಭಾವದಿಂದಾಗಿ ಸಮಾಜದಲ್ಲಿ ಜನಪ್ರಿಯರಾಗುವುದರ ಜೊತೆಗೆ, ಮಾರುಕಟ್ಟೆಯಲ್ಲಿಯೂ ಜನಪ್ರಿಯತೆಗೆ ಪ್ರಮುಖ ಕಾರಣವಾಯಿತು. ಪ್ರವಾದಿ (ಸ) ರವರು ವಾಗ್ದಾನಗಳನ್ನು ಪಾಲಿಸುತ್ತಿದ್ದರು. ಇದು ಅತ್ಯಂತ ಪ್ರಶಂಸನೀಯ ವ್ಯಕ್ತಿತ್ವದ ಲಕ್ಷಣಗಳಾಗಿದೆ ಎಂದು ಜಾಗತಿಕ ವಿದ್ವಾಂಸರು ವಿಶ್ಲೇಷಿಸುತ್ತಾರೆ.
ಅವರ ಪ್ರಾಮಾಣಿಕತೆಯಿಂದ ಕೂಡಿದ ವ್ಯವಹಾರದಿಂದಾಗಿ ಮಕ್ಕಾದ ಶ್ರೀಮಂತ ಮಹಿಳೆ ಖದೀಜಾರವರು ಪ್ರವಾದಿ (ಸ) ರವರಿಗೆ ವಿವಾಹ ಪ್ರಸ್ತಾಪವನ್ನಿಟ್ಟರು. ಜಾಬಿರ್ ಬಿನ್ ಅಬ್ದುಲ್ಲಾ ಹೀಗೆ ವಿವರಿಸಿದ್ದಾರೆ: “ಅರಬ್ ಜಗತ್ತಿನ ಹೆಚ್ಚಿನ ಜನರು ತಾವು ವ್ಯಾಪಾರದ ನಿಮಿತ್ತ ಸಿರಿಯ, ಜೋರ್ಡಾನ್ ಪ್ರದೇಶಗಳಿಗೆ ವಲಸೆ ಹೋಗುವಾಗ ತಮ್ಮ ಅಮೂಲ್ಯ ವಸ್ತುಗಳನ್ನು ಪ್ರವಾದಿ(ಸ) ಬಳಿ ಇಟ್ಟು ಹೋಗುತ್ತಿದ್ದರು. ಅದೇ ರೀತಿ ಮರಳಿ ಬಂದಾಗ ಹಾಗೆ ಹಿಂದಿರುಗಿಸುತ್ತಿದ್ದರು.”
ಇಂದು ಜಗತ್ತು ವ್ಯಾಪಾರಿ ಮನೋಭಾವವನ್ನು ಹೊಂದಿದೆ. ಆದ್ದರಿಂದ ಪ್ರತಿಯೊಂದು ಕೆಲಸ ಕಾರ್ಯಗಳ, ದ್ವೇಷ ವೈಷಮ್ಯಗಳ, ಸುಖ ದುಖಃಗಳ, ನಗು ಅಳುವಿನ, ಕಲಹ ಹಾಗೂ ಯುದ್ಧಗಳ ಹಿಂದೆ ಲಾಭ-ನಷ್ಟದ ಲೆಕ್ಕಾಚಾರ ಇದೆ ಎನ್ನುವುದು ಪ್ರತ್ಯಕ್ಷವಾಗಿರುವ ಸತ್ಯ. ಇಂದಿನ ನಂಬಿಕೆಗಳು, ಆಚರಣೆಗಳು, ಸಂಭ್ರಮಗಳು ಎಲ್ಲವೂ ವ್ಯವಹಾರದ ಭಾಗವಾಗಿದೆ. ಆದ್ದರಿಂದ ವ್ಯಾಪಾರದಲ್ಲಿ ಹಣ ಸಂಪಾದನೆಯೇ ಮೂಲ ಗುರಿಯಾಗಿದೆ. ಆ ಕಾರಣದಿಂದಾಗಿ ಇಂದು ವ್ಯಾಪಾರದಲ್ಲಿ ಪ್ರಾಮಾಣಿಕತೆ ಮತ್ತು ಶುದ್ಧಿ ಇಲ್ಲ. ಸುಳ್ಳು, ಮೋಸ, ವಂಚನೆ ತುಂಬಿಕೊಂಡು ಜನ ಸಾಮಾನ್ಯರನ್ನು ಆರ್ಥಿಕವಾಗಿ, ಮತ್ತು ಸಾಮಾಜಿಕವಾಗಿ ಹಿಂಸೆಗೆ ಒಳಪಡಿಸಿದೆ. ಅಬೂಹುರೈರಾ(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು, “ಜನರ ಮೇಲೆ ಒಂದು ಕಾಲ ಬರಲಿದೆ. ಅಂದು ಅವರಿಗೆ ಅವರು ಗಳಿಸುವ ಸಂಪಾದನೆ ಹಲಾಲ್ ಮೂಲದಿಂದಲೋ ಹರಾಮ್‌ನಿಂದಲೋ ಎಂಬುದರ ಚಿಂತೆ ಇರಲಾರದು” (ಬುಖಾರಿ)
ವ್ಯಾಪಾರ ಎಂದರೆ ವಂಚನೆ ಎಂಬಷ್ಟರ ಮಟ್ಟಿಗೆ ಜನ ಸಾಮಾನ್ಯರು ಅರ್ಥೈಸಿಕೊಂಡಿದ್ದಾರೆ. ಪ್ರಸ್ತುತ ಕಾರ್ಪೋರೇಟ್ ಲೋಕ ಪಾಲಿಸುವ ವ್ಯಾಪಾರದ ಮಾನದಂಡಗಳು ಮಾನವೀಯತೆಯ ಗುಣಗಳಿರುವಂತಹದ್ದಲ್ಲ. ಬದಲಾಗಿ ಲಾಭದ ಏಕೈಕ ಉದ್ದೇಶವನ್ನು ಮಾತ್ರ ಅದು ಹೊಂದಿರುತ್ತದೆ. ಯಾವ ರೀತಿಯಲ್ಲಾಗಲಿ ಅಥವಾ ಮೂಲದಲ್ಲಾಗಲಿ ಲಾಭಗಳು ಸಿಗಬೇಕು. ಈ ದೃಷ್ಟಿಕೋನದಿಂದಲೇ ಜಗತ್ತು ಹಣದುಬ್ಬರದಂತಹ ಆರ್ಥಿಕ ಹೊಡೆತವನ್ನು ನಿರಂತರವಾಗಿ ಅನುಭವಿಸಲು ಮುಖ್ಯ ಕಾರಣ. ಆದ್ದರಿಂದಲೇ ಪೈಗಂಬರ್ ಮುಹಮ್ಮದ್ (ಸ) ರವರು ವ್ಯಾಪಾರವನ್ನು ಹಣ ಸಂಪಾದನೆಯ ಮಾರ್ಗದ ಜೊತೆಗೆ ಒಂದು ಸೇವೆಯಾಗಿ ಗುರುತಿಸಿದ್ದರು. ವ್ಯವಹಾರದಲ್ಲಿ ಸಂಪೂರ್ಣ ಪ್ರಾಮಾಣಿಕತೆಯನ್ನು ಮತ್ತು ಪರಿಶುದ್ಧತೆಯನ್ನು ಬಯಸಿದ್ದರು.
ಪ್ರವಾದಿ (ಸ) ರವರನ್ನು ನಮಗೆ ಮಾದರಿ ವ್ಯಕ್ತಿಯಾಗಿ ಕಳುಹಿಸಲಾಗಿದೆ. ಪ್ರತಿಯೊಂದು ರಂಗದಲ್ಲೂ ಅವರು ಪ್ರಾಮಾಣಿಕತೆ, ದಯೆ ಮತ್ತು ನ್ಯಾಯವನ್ನು ಸಾಕಾರಗೊಳಿಸಿದ್ದಾರೆ ನಿಸ್ಸಂದೇಹವಾಗಿ ಮಾನವಕುಲಕ್ಕೆ ಸರ್ವಾಂಗಿಣ ಮಾದರಿಯಾಗಿದ್ದಾರೆ.