ಇಸ್ಲಾಮೀ ದೃಷ್ಟಿಕೋನ: ಮನುಷ್ಯ ಜೀವನದ ಉದ್ದೇಶ ಏನು?
ಲೇಖಕರು: ಶೈಮಾ ಸುಮರ್, ಕ್ಯಾಲಿಫೋರ್ನಿಯಾ
ಮನುಕುಲಕ್ಕೆ ಅವತೀರ್ಣಗೊಂಡಿರುವ ದೇವನ ನೇರ ಸಂದೇಶವೆಂದು ಮುಸ್ಲಿಮರು ವಿಶ್ವಾಸ ಇರಿಸುವ ಪವಿತ್ರ ಕುರ್‌ಆನ್ – ಜೀವನದ ಉದ್ದೇಶ ಏನು? ಎಂಬ ಮಹತ್ತರ ಪ್ರಶ್ನೆಯನ್ನು ಕೇಳಲು ನಮ್ಮನ್ನು ಉತ್ತೇಜಿಸುತ್ತದೆ.
“ನೀವೇನು ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇವೆಂದೂ ನಿಮಗೆ ನಮ್ಮ ಕಡೆಗೆ ಮರಳಲಿಕ್ಕೆ ಇಲ್ಲವೆಂದೂ ತಿಳಿದು ಕೊಂಡಿದ್ದೀರಾ?” (ಕುರ್‌ಆನ್ 23:115)
ದೇವನು ಜೀವನದ ಉದ್ದೇಶದ ಮೇಲೆ ವಿಶ್ವಾಸದ ಜೊತೆಗೆ ನ್ಯಾಯದ ಮೌಲ್ಯವನ್ನು ಜೋಡಿಸುತ್ತಾನೆ:
“ನಾವು ಈ ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವ ಈ ಜಗತ್ತನ್ನೂ ವೃಥಾ ಸೃಷ್ಟಿಸಲಿಲ್ಲ. ಇದು ಸತ್ಯನಿಷೇಧಿಗಳ ಭ್ರಮೆಯಾಗಿದೆ ಮತ್ತು ಇಂತಹ ಸತ್ಯನಿಷೇಧಿಗಳಿಗೆ ನರಕಾಗ್ನಿಯ ಮೂಲಕ ವಿನಾಶವಿದೆ. ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರನ್ನೂ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವವರನ್ನೂ ನಾವು ಸಮಾನವಾಗಿಸಬೇಕೇ? ಧರ್ಮನಿಷ್ಠರನ್ನು ನಾವು ಧರ್ಮಭ್ರಷ್ಟರಂತೆ ಮಾಡಬೇಕೇ? (ಕುರ್‌ಆನ್ 38:27-28)
ಜೀವನದ ಉದ್ದೇಶ: ವಿಶ್ವಾಸ ಮತ್ತು ಸತ್ಕರ್ಮಗಳು:
ಜೀವನದ ಉದ್ದೇಶ ಏನೆಂದರೆ, ನಮ್ಮ ಸೃಷ್ಟಿಕರ್ತನಲ್ಲಿ ವಿಶ್ವಾಶವಿಟ್ಟು, ಸತ್ಕರ್ಮಗಳನ್ನು ಮಾಡುವ ಮೂಲಕ ಆತನನ್ನು ಆರಾಧಿಸುವುದು ಎಂದು ಪವಿತ್ರ ಕುರ್‌ಆನ್ ಕಲಿಸುತ್ತದೆ:
“ನಾನು ಜಿನ್(ಯಕ್ಷ)ಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” (ಕುರ್‌ಆನ್ 51:56)
“ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು.” (ಕುರ್‌ಆನ್ 67:2)
ದೇವನ ಸಂಪ್ರೀತಿಯನ್ನು ಗಳಿಸುವುದು ಪ್ರತಿಯೊಬ್ಬ ಪ್ರಾಮಾಣಿಕ ವಿಶ್ವಾಸಿಯ ಗುರಿಯಾಗಿದೆ:
“ಅಲ್ಲಾಹನ ಸಂಪ್ರೀತಿಯ ಆಕಾಂಕ್ಷೆಯಲ್ಲಿ ತನ್ನ ದೇಹವನ್ನು ಸವೆಸುವವನೂ ಇದ್ದಾನೆ. ಅಂತಹ ದಾಸನ ಮೇಲೆ ಅಲ್ಲಾಹ್ ಅತ್ಯಂತ ಕೃಪಾಳುವಾಗಿರುತ್ತಾನೆ. ” (ಕುರ್‌ಆನ್ 2:207)
ದೇವನ ಮೇಲೆ ವಿಶ್ವಾಸ ಮತ್ತು ಸತ್ಕರ್ಮಗಳು ನಮ್ಮ ಆತ್ಮಗಳಿಗೆ ಪ್ರಯೋಜನವನ್ನು ನೀಡುತ್ತವೆ. ತಮ್ಮ ಆತ್ಮಗಳನ್ನು ಶುದ್ಧೀಕರಿಸುವವರು ನಿಜವಾದ ವಿಜಯಿಗಳು ಎಂದು ಕುರ್‌ಆನ್ ಕಲಿಸುತ್ತದೆ:
“ಮಾನವ ಚಿತ್ತದ ಹಾಗೂ ಅದನ್ನು ಸುಗಮಗೊಳಿಸಿದವನಾಣೆ, ಆ ಬಳಿಕ ಅವನು ಅದರ ದುಷ್ಟತೆಯನ್ನೂ ಅದರ ಸಾತ್ವಿಕತೆಯನ್ನೂ ಅದಕ್ಕೆ ಪ್ರೇರೇಪಿಸಿದನು. ಖಂಡಿತವಾಗಿಯೂ ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವನು ವಿಜಯಿಯಾದನು ಮತ್ತು ಅದನ್ನು ದಮನಿಸಿದವನು ಸೋಲುಂಡನು.” (ಕುರ್‌ಆನ್ 91:7-10).
ದೇವ ಸಂಪ್ರೀತಿ ಗಳಿಸುವುದು ಮತ್ತು ಆರಾಧಿಸುವುದು ಹೇಗೆ?
ತನ್ನ ಸೃಷ್ಟಿಕರ್ತನ ಸಂಪ್ರೀತಿಯನ್ನು ಹೇಗೆ ಗಳಿಸಬೇಕು ಮತ್ತು ಹೇಗೆ ಆರಾಧಿಸಬೇಕು ಎಂಬುದನ್ನು ನಮಗೆ ಕಲಿಸಲು ದೇವನು ಪವಿತ್ರ ಕುರ್‌ಆನ್ ಮತ್ತು ಪವಿತ್ರ ಪ್ರವಾದಿ ಮುಹಮ್ಮದ್ (ಸ) ರವರನ್ನು ಕಳುಹಿಸಿದ್ದಾನೆ ಎಂದು ಮುಸ್ಲಿಮರು ವಿಶ್ವಾಸ ಇರಿಸುತ್ತಾರೆ:
“ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಒಂದು ಸುವ್ಯಕ್ತ ಗ್ರಂಥವು ನಿಮ್ಮ ಬಳಿಗೆ ಬಂದು ಬಿಟ್ಟಿದೆ. ಅದರ ಮೂಲಕ ಅಲ್ಲಾಹನು ತನ್ನ ಸಂಪ್ರೀತಿಯನ್ನು ಅಪೇಕ್ಷಿಸುವವರಿಗೆ ರಕ್ಷಾ ಮಾರ್ಗವನ್ನು ತೋರಿಸಿ ತನ್ನ ಇಚ್ಛೆಯಿಂದ ಅವರನ್ನು ಅಂಧಕಾರಗಳಿಂದ ಹೊರ ತೆಗೆದು ಪ್ರಕಾಶದ ಕಡೆಗೆ ಒಯ್ಯುತ್ತಾನೆ ಮತ್ತು ಸನ್ಮಾರ್ಗದತ್ತ ಅವರಿಗೆ ಮಾರ್ಗದರ್ಶನ ಮಾಡುತ್ತಾನೆ.” (ಕುರ್‌ಆನ್ 5:15-16).
ನೀವು ನಿಜವಾಗಿಯೂ ಅಲ್ಲಾಹನನ್ನು ಪ್ರೀತಿಸುತ್ತೀರಿ ಎಂದಾದರೆ, ತನ್ನ ಸಂದೇಶವಾಹಕರನ್ನು ಅನುಸರಿಸಿರಿ ಎಂದು ಆತನು ಆದೇಶಿಸುತ್ತಾನೆ:
“ಓ ಪೈಗಂಬರರೇ, ನೀವು ಜನರೊಡನೆ ಹೀಗೆ ಹೇಳಿಬಿಡಿರಿ, “ನೀವು ನಿಜವಾಗಿಯೂ ಅಲ್ಲಾಹನನ್ನು ಪ್ರೀತಿಸುತ್ತೀರೆಂದಾದರೆ ನನ್ನ ಅನುಸರಣೆ ಮಾಡಿರಿ. ಅಲ್ಲಾಹ್ ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅವನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.” (ಕುರ್‌ಆನ್ 3:31).
ಸತ್ಕರ್ಮಗಳು:
ಉತ್ತಮವಾದ, ಒಳಿತಿನ ಕಾರ್ಯಗಳಲ್ಲಿ ದಾನ ನೀಡುವುದು, ಗುಲಾಮರನ್ನು ವಿಮೋಚನೆಗೊಳಿಸುವುದು, ನಮಾಝ್ ಮಾಡುವುದು, ಕೊಟ್ಟಿರುವ ವಾಗ್ದಾನಗಳನ್ನು ಉಳಿಸಿಕೊಳ್ಳುವುದು ಮತ್ತು ಕಷ್ಟದ ಸಮಯದಲ್ಲಿ ತಾಳ್ಮೆಯಿಂದಿರುವುದು ಸೇರಿವೆ:
“ನೀವು ನಿಮ್ಮ ಮುಖಗಳನ್ನು ಪೂರ್ವದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿಕೊಳ್ಳುವುದು ಧರ್ಮಶೀಲತೆಯಲ್ಲ. ನಿಜವಾಗಿ ಒಬ್ಬನು ಅಲ್ಲಾಹನನ್ನೂ ನಿರ್ಣಾಯಕ ದಿನವನ್ನೂ ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ ಅವನ ಸಂದೇಶವಾಹಕರನ್ನೂ ಹೃತ್ಪೂರ್ವಕ ಒಪ್ಪಿಕೊಳ್ಳುವುದೂ ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ ಅನಾಥರಿಗೂ ನಿರ್ಗತಿಕರಿಗೂ ಪ್ರಯಾಣಿಕರಿಗೂ ಸಹಾಯಾರ್ಥಿಗಳಿಗೂ ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದೂ ನಮಾಝನ್ನು ಸಂಸ್ಥಾಪಿಸುವುದೂ ಝಕಾತ್(ಕಡ್ಡಾಯದಾನ) ನೀಡುವುದೂ ವಾಗ್ದಾನ ಮಾಡಿದರೆ ಪೂರೈಸುವುದೂ ಕಷ್ಟಕಾರ್ಪಣ್ಯಗಳಲ್ಲಿಯೂ ಸತ್ಯಾಸತ್ಯಗಳ ಸಮರವಾಗುತ್ತಿರುವಾಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರು ಮತ್ತು ಇವರೇ ಧರ್ಮನಿಷ್ಠರು.” (ಕುರ್‌ಆನ್ 2:177).
ಜನರ ನಡುವೆ ಶಾಂತಿಗಾಗಿ ಶ್ರಮಿಸುವುದು ಒಂದು ಶ್ರೇಷ್ಠ ಕಾರ್ಯವಾಗಿದ್ದು, ಅದು ದಾನ, ಉಪವಾಸ ಮತ್ತು ಪ್ರಾರ್ಥನೆಗಿಂತ ಉತ್ತಮವಾಗಿದೆ. ಪ್ರವಾದಿ ಮುಹಮ್ಮದ್ (ಸ) ಹೇಳಿದರು:
“ದಾನ, ಉಪವಾಸ ಮತ್ತು ನಮಾಝ್‌ಗಿಂತ ಉತ್ತಮವಾದುದು ಏನೆಂದು ನಿಮಗೆ ತಿಳಿದಿದೆಯೇ? ಅದು ಜನರ ನಡುವೆ ಶಾಂತಿ ಮತ್ತು ಉತ್ತಮ ಸಂಬಂಧಗಳನ್ನು ಕಾಪಾಡುವುದಾಗಿದೆ. ಏಕೆಂದರೆ, ಜಗಳಗಳು ಮತ್ತು ಕೇಡು ಭಾವನೆಗಳು ಮನುಕುಲವನ್ನು ನಾಶಮಾಡುತ್ತವೆ.” (ಮುಸ್ಲಿಮ್ ಮತ್ತು ಬುಖಾರಿ).
ಸತ್ಕರ್ಮಗಳು ಮಾಧುರ್ಯವನ್ನು ಅನುಭವಿಸುವಂತೆ ಮಾಡಿದರೆ, ಕೆಡುಕುಗಳು ಕಹಿಯನ್ನು ಕೊಡುತ್ತದೆ. ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳಿದರು:
“ಧರ್ಮನಿಷ್ಠೆಯು ಉತ್ತಮ ಚಾರಿತ್ರ್ಯದಲ್ಲಿದೆ, ಹಾಗೂ ಕೆಡುಕುಗಳು ನಿಮ್ಮ ಆತ್ಮದಲ್ಲಿ ತಳಮಳ ಉಂಟುಮಾಡುವಂತವುಗಳು ಮತ್ತು ಜನರು ತಿಳಿದುಕೊಳ್ಳಲು ನೀವು ಇಷ್ಟಪಡದಿರುವಂತವುಗಳಾಗಿದೆ.” (ಮುಸ್ಲಿಮ್)
ಮನುಕುಲಕ್ಕೆ ಎಚ್ಚರಿಕೆಗಳು:
ಈ ಜೀವನದಲ್ಲಿ ಮನುಷ್ಯ ಕುಲವು ತಾವು ಮಾಡುವ ಕಾರ್ಯಗಳಿಗೆ ಹೊಣೆಗಾರರಾಗಿರುತ್ತಾರೆ ಎಂದು ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯು ನಮ್ಮನ್ನು ಎಚ್ಚರಿಸುತ್ತದೆ:
“ಸಂದೇಶವಾಹಕರೇ, ಇವರೊಡನೆ ಹೇಳಿರಿ- “ಅಲ್ಲಾಹನೇ ನಿಮಗೆ ಜೀವನ ಪ್ರದಾನ ಮಾಡುತ್ತಾನೆ. ಅನಂತರ ಅವನೇ ನಿಮಗೆ ಮರಣ ಕೊಡುತ್ತಾನೆ. ಆ ಬಳಿಕ ಪುನರುತ್ಥಾನದ ದಿನ ಅವನೇ ನಿಮ್ಮನ್ನು ಒಟ್ಟುಗೂಡಿಸುವನು. ಅದು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹೆಚ್ಚಿನವರು ತಿಳಿಯುವುದಿಲ್ಲ. ಭೂಮಿ-ಆಕಾಶಗಳ ಪ್ರಭುತ್ವ ಅಲ್ಲಾಹನದ್ದೇ ಆಗಿದೆ. ಪುನರುತ್ಥಾನದ ಘಳಿಗೆ ಬರುವ ದಿನದಂದು ಮಿಥ್ಯಾರಾಧಕರು ನಷ್ಟಕ್ಕೊಳಗಾಗುವರು.” ಆಗ ನೀವು ಪ್ರತಿಯೊಂದು ಸಮುದಾಯವೂ ಮೊಣಕಾಲೂರಿ ಬಿದ್ದುಕೊಂಡಿರುವುದನ್ನು ಕಾಣುವಿರಿ. ಪ್ರತಿಯೊಂದು ಕೂಟವನ್ನು ತನ್ನ ಕರ್ಮಪತ್ರವನ್ನು ನೋಡಲಿಕ್ಕಾಗಿ ಕರೆಯಲಾಗುವುದು. ಅವರೊಡನೆ (ಹೀಗೆ) ಹೇಳಲಾಗುವುದು, “ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. ಇದು ನಾವು ಸಿದ್ಧಪಡಿಸಿದ್ದ ಕರ್ಮಪತ್ರವಾಗಿದ್ದು ಇದು ನಿಮ್ಮ ಬಗ್ಗೆ ಸರಿಯಾದ ಸಾಕ್ಷಿ ನೀಡುತ್ತದೆ. ನೀವು ಮಾಡುತ್ತಿದ್ದ ಎಲ್ಲವನ್ನೂ ನಾವು ಬರೆಸುತ್ತಲೇ ಇದ್ದೆವು.” (ಕುರ್‌ಆನ್ 45:26-29).
“ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು. ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು. (ಕುರ್‌ಆನ್ 99:7-8)
ಈ ಉತ್ತರದಾಯಿತ್ವದ ಸಂದೇಶವನ್ನು ಪ್ರವಾದಿ ಮುಹಮ್ಮದ್ (ಸ) ರವರು ಈ ರೀತಿ ಹೇಳಿದ್ದಾರೆ:
“ಪುನರುತ್ಥಾನ ದಿನದಂದು ಒಬ್ಬ ಮನುಷ್ಯನನ್ನು ಐದು (ವಿಷಯಗಳ) ಬಗ್ಗೆ ಪ್ರಶ್ನಿಸಲಾಗುತ್ತದೆ: ಆತನ ಜೀವನ ಮತ್ತು ಅದನ್ನು ಹೇಗೆ ಕಳೆದನು, ಆತನ ಯೌವನ ಮತ್ತು ಹೇಗೆ ಮುಪ್ಪಿನೆಡೆಗೆ ಸಾಗಿದನು, ಆತನ ಸಂಪತ್ತು: ಅದನ್ನು ಎಲ್ಲಿ ಗಳಿಸಿದನು ಮತ್ತು ಯಾವ ರೀತಿಯಲ್ಲಿ ಖರ್ಚು ಮಾಡಿದನು, ಮತ್ತು ತನಗೆ ತಿಳಿದಿದ್ದ ಜ್ಞಾನದಿಂದ ಆತನು ಏನು ಮಾಡಿದನು.” (ತಿರ್ಮಿದಿ)
“ಮೃತನನ್ನು ಮೂರು ವಿಷಯಗಳು ಹಿಂಬಾಲಿಸುತ್ತವೆ: ಆತನ ಕುಟುಂಬ ಸದಸ್ಯರು, ಆತನ ಸಂಪತ್ತು ಮತ್ತು ಆತನ ಕಾರ್ಯಗಳು. ಅವುಗಳಲ್ಲಿ ಎರಡು ಹಿಂದಿರುಗುತ್ತವೆ ಮತ್ತು ಒಂದು ಆತನೊಂದಿಗೆ ಉಳಿಯುತ್ತದೆ. ಆತನ ಕುಟುಂಬ ಸದಸ್ಯರು ಮತ್ತು ಸಂಪತ್ತು ಹಿಂದಿರುಗುತ್ತವೆ, ಮತ್ತು ಆತನ ಕಾರ್ಯಗಳು ಆತನೊಂದಿಗೆ ಉಳಿಯುತ್ತವೆ.” (ಬುಖಾರಿ, ಮುಸ್ಲಿಮ್)
ದೇವರ ದೃಷ್ಟಿಯಲ್ಲಿ ನಮ್ಮ ಸೌಂದರ್ಯ ಮತ್ತು ಸಂಪತ್ತು ಯಶಸ್ಸಿನ ಮಾನದಂಡಗಳಲ್ಲ. ಪ್ರವಾದಿ (ಸ) ಹೀಗೆ ಹೇಳಿದರು:
“ಸರ್ವಶಕ್ತ ಅಲ್ಲಾಹನು ನಿಮ್ಮ ಮುಖ ಅಥವಾ ಸಂಪತ್ತಿನ ಆಧಾರದಲ್ಲಿ ತೀರ್ಮಾನಿಸುವುದಿಲ್ಲ. ಆದರೆ, ನಿಮ್ಮ ಹೃದಯ ಪರಿಶುದ್ಧತೆ ಮತ್ತು ಕರ್ಮಗಳ ಮೇಲೆ ನಿರ್ಣಯಿಸುತ್ತಾನೆ.” (ಮುಸ್ಲಿಮ್)
ನಮ್ಮ ಸಂಕಷ್ಟಗಳಿಗೂ ಒಂದು ಉದ್ದೇಶವಿದೆ!
ಜೀವನದಲ್ಲಿ ನಮಗೆ ಬಾಧಿಸುವ ಎಲ್ಲಾ ಸಂಕಷ್ಟಗಳಿಗೂ ಒಂದು ಉದ್ದೇಶವಿದೆ: ಅವು ನಮ್ಮ ವಿಶ್ವಾಸದ ಪರೀಕ್ಷೆಯಾಗಿದ್ದು, ಅವು ನಮ್ಮ ಆತ್ಮಗಳನ್ನು ಶುದ್ಧೀಕರಿಸುತ್ತವೆ:
“ನಾವು ವಿಶ್ವಾಸವಿರಿಸಿದೆವು ಎಂದ ಮಾತ್ರಕ್ಕೆ ಅವರನ್ನು ಬಿಟ್ಟುಬಿಡಲಾಗುವುದೆಂದೂ ಅವರನ್ನು ಪರೀಕ್ಷೆಗೊಳಪಡಿಸಲಾಗದೆಂದೂ ಜನರು ತಿಳಿದುಕೊಂಡಿರುವರೇ?” (ಕುರ್‌ಆನ್ 29:2)
ಪ್ರವಾದಿ (ಸ) ಹೇಳಿದರು:
“ಅಲ್ಲಾಹನು ಯಾರಿಗೆ ಒಳಿತು ಬಯಸುತ್ತಾನೋ, ಅವರನ್ನು ಆತನು ಪರೀಕ್ಷೆಗೆ ಒಳಪಡಿಸುತ್ತಾನೆ. ಅವರ ಮೇಲೆ ಕಷ್ಟಗಳನ್ನು ಇಳಿಸುತ್ತಾನೆ – ವಜ್ರ ಅಥವಾ ಕೆಲವು ಲೋಹವನ್ನು ಸುಟ್ಟು… ನಂತರ ಅದರಿಂದ ಕೆಟ್ಟದ್ದನ್ನು ತೆಗೆದುಹಾಕಿ, ಶುದ್ಧ ವಜ್ರ ಅಥವಾ ಶುದ್ಧ ಚಿನ್ನವನ್ನು ಪಡೆಯುವಂತೆ…” (ಬುಖಾರಿ ಮತ್ತು ಮುಸ್ಲಿಮ್)
ಕೊನೆಯಲ್ಲಿ, ನಾವು ಸಹನಾಶೀಲರಾಗಬೇಕು ಮತ್ತು ದೇವರ ವಾಗ್ದಾನದಲ್ಲಿ ವಿಶ್ವಾಸ ಇರಿಸಬೇಕು:
“ಆದುದರಿಂದ ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಅಲ್ಲಾಹನ ವಾಗ್ದಾನ ಸತ್ಯವಾದುದು. ನಂಬಿಕೆ ಇರಿಸದ ಜನರು ಎಷ್ಟು ಮಾತ್ರಕ್ಕೂ ನಿಮ್ಮನ್ನು ಲಘುವಾಗಿ ಕಾಣದಿರಲಿ. (ಕುರ್‌ಆನ್ 30:60)
ದೇವನ ಕಾರುಣ್ಯದ ಮೇಲೆ ವಿಶ್ವಾಸ:
ನಮ್ಮ ಉದ್ದೇಶವನ್ನು ಪೂರೈಸಲು, ನಾವು ಅಲ್ಲಾಹನ ಕಾರುಣ್ಯ ಮತ್ತು ದಯೆಯಲ್ಲಿ ನಂಬಿಕೆ ಇಡಬೇಕು:
“ದುಷ್ಕರ್ಮಗಳನ್ನೆಸಗಿ ಅನಂತರ ಪಶ್ಚಾತ್ತಾಪಪಟ್ಟು ವಿಶ್ವಾಸ ಸ್ವೀಕರಿಸಿದರೆ ನಿಶ್ಚಯವಾಗಿಯೂ ಈ ಪಶ್ಚಾತಾಪ ಮತ್ತು ವಿಶ್ವಾಸದ ಬಳಿಕ ನಿನ್ನ ಪ್ರಭು ಕ್ಷಮಿಸುವವನೂ ಕರುಣಾಮಯಿಯೂ ಆಗಿರುತ್ತಾನೆ. ” (ಕುರ್‌ಆನ್ 7:153)
ಪ್ರವಾದಿ ಮುಹಮ್ಮದ್ (ಸ) ವರದಿ ಮಾಡಿದಂತೆ, ಪಿಶಾಚಿಯು ದೇವನಿಗೆ ಹೇಳಿದನು: “ನಿನ್ನ ದಾಸರ ಆತ್ಮಗಳು ಅವರ ದೇಹದಲ್ಲಿ ಇರುವವರೆಗೂ ನಾನು ಅವರನ್ನು ದಾರಿ ತಪ್ಪಿಸುತ್ತಲೇ ಇರುತ್ತೇನೆ.” ದೇವನು ಉತ್ತರಿಸಿದನು: “ಅವರು ನನ್ನ ಕ್ಷಮೆಯನ್ನು ಕೇಳುವವರೆಗೂ ನಾನು ಅವರನ್ನು ಕ್ಷಮಿಸುತ್ತಲೇ ಇರುತ್ತೇನೆ.” (ತಿರ್ಮಿದಿ)
ಪರಲೋಕ:
ಮುಸ್ಲಿಮರಿಗೆ ಜೀವನದ ಉದ್ದೇಶದಲ್ಲಿನ ನಂಬಿಕೆಯು ಪರಲೋಕ ವಿಶ್ವಾಸದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ನಮ್ಮ ಲೌಕಿಕ ಆಸ್ತಿಗಳು ಶಾಶ್ವತವಾಗಿ ಉಳಿಯುವುದಿಲ್ಲ, ಆದರೆ ದೇವನ ಸಂಪ್ರೀತಿಗಾಗಿ ಮಾಡಿದ ನಮ್ಮ ಸತ್ಕರ್ಮಗಳು ಉಳಿಯುತ್ತವೆ:
“ನಿಮ್ಮಲ್ಲಿರುವುದೆಲ್ಲಾ ಖರ್ಚಾಗಿ ಹೋಗಲಿದೆ. ಅಲ್ಲಾಹನ ಬಳಿಯಲ್ಲಿರುವುದು ಮಾತ್ರ ಬಾಕಿ ಉಳಿದಿರುವುದು. ನಿಶ್ಚಯವಾಗಿಯೂ ನಾವು ಸಹನೆಯೊಂದಿಗೆ ಕಾರ್ಯವೆಸಗುವವರಿಗೆ ಅವರ ಪ್ರತಿಫಲವನ್ನು ಅವರ ಅತ್ಯುತ್ತಮ ಕರ್ಮಗಳಿಗನುಸಾರ ನೀಡುವೆವು. ” (ಕುರ್‌ಆನ್ 16:96)
“ಚೆನ್ನಾಗಿ ತಿಳಿದುಕೊಳ್ಳಿರಿ! ಈ ಲೌಕಿಕ ಜೀವನವು ಕೇವಲ ಒಂದು ಆಟ, ವಿನೋದ, ತೋರಿಕೆಯ ವೈಭವ, ಪರಸ್ಪರರ ಮೇಲೆ ಹಿರಿಮೆ ಸಾಧಿಸುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನದ ವಿಷಯದಲ್ಲಿ ಪರಸ್ಪರರನ್ನು ಮೀರಿ ಹೋಗುವ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಇದರ ಉಪಮೆ ಹೀಗಿದೆ, ಒಂದು ಮಳೆ ಬಂದೊಡನೆ ಅದರಿಂದಾಗಿ ಹುಟ್ಟುವ ಸಸ್ಯಗಳನ್ನು ಕಂಡು ಕೃಷಿಕರು ಸಂತೋಷಗೊಂಡರು. ತರುವಾಯ ಅದೇ ಬೆಳೆಯು ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ಹೊಟ್ಟಾಗಿ ಬಿಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಪರಲೋಕವು ಕಠಿಣ ಯಾತನೆ ಇರುವ ಮತ್ತು ಅಲ್ಲಾಹನ ಕ್ಷಮೆ ಹಾಗೂ ಸಂಪ್ರೀತಿ ಇರುವ ಸ್ಥಳವಾಗಿದೆ. ಲೌಕಿಕ ಜೀವನವು ಒಂದು ವಂಚನೆಯ ಸಾಧನವಲ್ಲದೆ ಮತ್ತೇನೂ ಅಲ್ಲ.” (ಕುರ್‌ಆನ್ 57:20)
“ಕಟ್ಟಕಡೆಗೆ ಪ್ರತಿಯೊಬ್ಬನಿಗೂ ಮರಣಹೊಂದಬೇಕಾಗಿದೆ ಮತ್ತು ನೀವೆಲ್ಲರೂ ನಿಮ್ಮ ನಿಮ್ಮ ಪ್ರತಿಫಲವನ್ನು ಪುನರುತ್ಥಾನ ದಿನದಂದು ಪಡೆಯುವವರಿದ್ದೀರಿ. ಅಲ್ಲಿ ನರಕಾಗ್ನಿಯಿಂದ ರಕ್ಷೆ ಹೊಂದುವವನೂ ಸ್ವರ್ಗದಲ್ಲಿ ಪ್ರವೇಶ ಪಡೆಯುವವನೂ ನಿಜವಾದ ಕೃತಾರ್ಥನು. ಈ ಲೋಕದ ಜೀವನವಂತೂ ಕೇವಲ ಭ್ರಾಮಕ ಸಂಪತ್ತಾಗಿದೆ. ” (ಕುರ್‌ಆನ್ 3:185)
ನಾವು ಈ ಜೀವನದಲ್ಲಿ ಮಾಡಿದ ನಮ್ಮ ಶ್ರಮದ ಫಲವನ್ನು ನೋಡುವ ಸಮಯವೇ ಮುಂದಿನ ಜೀವನ:
ಪ್ರವಾದಿ (ಸ) ಹೇಳಿದರು: ಮಹೋನ್ನತನು ಮತ್ತು ಪರಮಮಹಿಮಾನ್ವಿತನಾದ ದೇವನು ಹೀಗೆ ಹೇಳಿದ್ದಾನೆ: “ನಾನು ನನ್ನ ಧರ್ಮನಿಷ್ಠ ದಾಸರಿಗಾಗಿ, ಯಾವುದೇ ಕಣ್ಣು ಎಂದೂ ನೋಡಿರದ, ಯಾವುದೇ ಕಿವಿ ಎಂದೂ ಕೇಳಿರದ, ಮತ್ತು ಯಾವುದೇ ಮಾನವ ಹೃದಯ ಎಂದೂ ಗ್ರಹಿಸದಿರುವುದನ್ನು ಸಿದ್ಧಪಡಿಸಿದ್ದೇನೆ. ಅದನ್ನು ದೇವನ ಗ್ರಂಥದಲ್ಲಿ ಸಾಕ್ಷೀಕರಿಸಲಾಗಿದೆ.” ನಂತರ ಪ್ರವಾದಿ(ಸ) ರವರು ಕುರ್‌ಆನಿನ ಈ ಸೂಕ್ತವನ್ನು ಪಠಿಸಿದರು, “ಮುಂದೆ ಅವರ ಕರ್ಮಗಳಿಗೆ ಪ್ರತಿಫಲವಾಗಿ ಅವರ ಕಣ್ಮನಗಳನ್ನು ತಣಿಸುವಂತಹ ಯಾವ ಸತ್ಫಲಗಳನ್ನು ಅವರಿಗಾಗಿ ಬಚ್ಚಿಡಲಾಗಿದೆಯೋ ಅದರ ಅರಿವು ಯಾವ ಜೀವಿಗೂ ಇಲ್ಲ”(32:17) (ಮುಸ್ಲಿಮ್)
ಕನ್ನಡಾನುವಾದ: ಅಬೂ ಹುದೈಫಾ
ಕೃಪೆ: newageislam.com