ಜ್ಞಾನದ ನೈಜ ಮೂಲ ಮತ್ತು ಮಾನವನ ಪ್ರಥಮ ಗುರು
ಲೇಖಕರು: ಡಾ. ಮುಹಮ್ಮದ್ ಮುಮ್ತಾಝ್ ಅಲಿ
ನಮ್ಮ ಮೊದಲ ಗುರು ಯಾರು? ಈ ಪ್ರಶ್ನೆಯನ್ನು ನಾವು ಎಂದಾದರೂ ಯೋಚಿಸಿದ್ದೇವೆಯೇ? ಹೌದು, ಕೆಲವೊಮ್ಮೆ ಯೋಚಿಸುತ್ತೇವೆ. ನನ್ನ ತಾಯಿ, ನನ್ನ ತಂದೆ, ನನ್ನ ಅಣ್ಣ, ತಂಗಿ, ಅಥವಾ ನನಗೆ ಓದಲು-ಬರೆಯಲು ಕಲಿಸಿದ ಪ್ರಾಥಮಿಕ ಶಾಲೆಯ ಗುರು ನನ್ನ ಮೊದಲ ಗುರು ಎಂದು ನಾವು ಹೇಳಬಹುದು. ಆದರೆ ಇದು ಸರಿಯಾದ ಉತ್ತರವೇ? ನಿಜವಾಗಿಯೂ ಇದು ಸರಿಯಾದ ಉತ್ತರವೆಂದು ನಮಗೆ ಸ್ಪಷ್ಟವಾಗಿ ಗೊತ್ತೇ?
ನಾವು ನಮ್ಮ ಜೀವನದ ಈ ಹಂತದಲ್ಲಿ ಈ ಪ್ರಶ್ನೆಯನ್ನು ಏಕೆ ಕೇಳಬೇಕು? ನಾವು ಎಲ್ಲರೂ ಈ ಕ್ಷಣದಲ್ಲಿ ನಿಂತು ಈ ಪ್ರಶ್ನೆಯನ್ನು ನಮ್ಮನ್ನೇ ನಾವು ಕೇಳಿಕೊಳ್ಳಬೇಕಾದ ಅಗತ್ಯ ಏನು?
ಏಕೆಂದರೆ ಇದು ಅತ್ಯಂತ ಮಹತ್ವದ ಪ್ರಶ್ನೆ. ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ತಿಳಿದುಕೊಳ್ಳುವುದು, ನಾವು ನಮ್ಮ ಜೀವನವನ್ನು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನನ್ನ ತಾಯಿ ಅಥವಾ ತಂದೆ ಅಥವಾ ಪ್ರಾಥಮಿಕ ಶಾಲಾ ಗುರುಗಳೇ ನನ್ನ ಮೊದಲ ಗುರುಗಳು ಎಂದು ಹೇಳುವುದು ತಪ್ಪಾಗಬಹುದೇ?
ಹೌದು, ಅದು ತಪ್ಪು. ನಾವು ಸರಿಯಾದ ಉತ್ತರವನ್ನು ಅನೇಕ ಬಾರಿ ಓದಿದ್ದೇವೆ. ಆದರೆ, ಅದಕ್ಕೆ ಅಗತ್ಯ ಗಮನ ನೀಡಿಲ್ಲ. ಕುರ್‌ಆನಿನಲ್ಲಿ ನಾವು ಹೀಗೆ ಓದುತ್ತೇವೆ: ಸಕಲ ವಿಶ್ವದ ಸೃಷ್ಟಿಕರ್ತನಾದ, ಸರ್ವಜ್ಞನಾದ, ಸರ್ವಜ್ಞಾನಿಯೂ ಸರ್ವದರ್ಶಿಯೂ ಆದ, ಸ್ವಯಂಸತ್ವನಾದ, ಶಾಶ್ವತ ಜೀವಂತನಾದ, ಅತ್ಯಂತ ಕರುಣಾಮಯನೂ ದಯಾಮಯನೂ ಆದ ಅಲ್ಲಾಹನು ನಾವು ತಿಳಿಯದಿದ್ದುದನ್ನು — ವಿಶೇಷವಾಗಿ ಸರಿಯಾದ ಜೀವನಮಾರ್ಗವನ್ನು ಕಲಿಸಿದನು.
ಅಲ್ಲಾಹನು ಹೀಗೆ ಹೇಳುತ್ತಾನೆ:
“ಅವನು ನಿಮಗೆ ಸರಿಯಾದ ಮಾರ್ಗವನ್ನು ಕಲಿಸುತ್ತಾನೆ ಮತ್ತು ಅವನಿಗೆ ಎಲ್ಲ ವಿಷಯಗಳ ಸಂಪೂರ್ಣ ಜ್ಞಾನವಿದೆ”
“ಮತ್ತು ನಿಮಗೆ ತಿಳಿಯದಿದ್ದುದನ್ನು ಕಲಿಸಿರುತ್ತಾನೆ. ಅಲ್ಲಾಹನ ಅನುಗ್ರಹ ನಿಮ್ಮ ಮೇಲೆ ಧಾರಾಳವಿದೆ.” [4:113].
ಅವನು ನಮಗೆ ಅನೇಕ ವಿಷಯಗಳನ್ನು ಕಲಿಸಿದ್ದಾನೆ. ಪ್ರವಾದಿ ಈಸಾ(ಅ) ರವರ ಕುರಿತು ಅಲ್ಲಾಹನು ಹೀಗೆ ಹೇಳಿದ್ದಾನೆ: “ಓ ಮರ್ಯಮರ ಪುತ್ರ ಈಸಾ, ನಾನು ನಿನಗೂ ನಿನ್ನ ಮಾತೆಗೂ ದಯಪಾಲಿಸಿದ್ದ ‘ಭವ್ಯ ಕೊಡುಗೆಗಳನ್ನು’ ಜ್ಞಾಪಿಸು…….. ನಾನು ನಿನಗೆ ಗ್ರಂಥ ಮತ್ತು ಯುಕ್ತಿ, ತೌರಾತ್ ಮತ್ತು ಇಂಜೀಲ್‌ಗಳನ್ನು ಕೊಟ್ಟಿದ್ದೆ (ಕಲಿಸಿದೆ)” [5:110].
“ಪ್ರವಾದಿ ಯೂಸುಫ್ (ಅ)ರಿಗೆ ಆ ಭೂಭಾಗದಲ್ಲಿ ನೆಲೆಯೂರಲು ಅವಕಾಶ ಮಾಡಿ ಕೊಟ್ಟೆವು ಮತ್ತು ಅವರಿಗೆ ವಿಷಯಗಳನ್ನು ಗ್ರಹಿಸುವ ಜ್ಞಾನವನ್ನು ಕೊಡುವ ವ್ಯವಸ್ಥೆ ಮಾಡಿದೆವು.” [12:21]
ಜೀವನ, ಸಮಾಜ, ಲೋಕ ಸತ್ಯ ಹಾಗೂ ವಾಸ್ತವಿಕತೆಯನ್ನು ಅಲ್ಲಾಹನು ನಮಗೆ ಕಲಿಸಿದನು. ಇದನ್ನು ಕುರ್‌ಆನಿನಲ್ಲಿ ಪದೇ ಪದೇ ಸ್ಪಷ್ಟವಾಗಿ ಹೇಳಲಾಗಿದೆ. ಈ ಲೋಕದಲ್ಲಿ ನಾವು ಸರಿಯಾಗಿ ನಡೆದುಕೊಳ್ಳಲು ಅಗತ್ಯವಿರುವ ಎಲ್ಲ ವಿಷಯಗಳನ್ನು ಅಲ್ಲಾಹ್ ಮಾನವನಿಗೆ ಕಲಿಸಿದ್ದಾನೆ.
ಕುರ್‌ಆನ್ ಹೀಗೆ ಹೇಳುತ್ತದೆ: “ನಂತರ ಅಲ್ಲಾಹ್ ಆದಮರಿಗೆ ಸಕಲ ವಸ್ತುಗಳ ನಾಮಗಳನ್ನು ಕಲಿಸಿದನು.” [2:31]
“ಅವನು (ಅಲ್ಲಾಹ್) ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು” [96: 4–5]
“ಅವನು (ಅಲ್ಲಾಹ್)ನಿಮಗೆ ಸರಿಯಾದ ಕರ್ಮ ವಿಧಾನದ ಶಿಕ್ಷಣವನ್ನೀಯುತ್ತಾನೆ ಮತ್ತು ಅವನು ಸರ್ವವಿಷಯಗಳ ಅಭಿಜ್ಞ ನಾಗಿರುತ್ತಾನೆ” [2:282]
“ನೀನು ಮಹಾ ಮಹಿಮನು, ನಮಗಂತು ನೀನು ಕಲಿಸಿ ಕೊಟ್ಟಷ್ಟು ಜ್ಞಾನ ಮಾತ್ರ ಇದೆ. ನಿಶ್ಚಯವಾಗಿಯೂ ನೀನು ಜ್ಞಾನಪೂರ್ಣನೂ ಯುಕ್ತಿಪೂರ್ಣನೂ ಆಗಿರುತ್ತೀ.” [2:32]
ಅಲ್ಲಾಹನು ನಮಗೆ ಕಲಿಸಿದ ವಿಚಾರಗಳು ಕುರ್‌ಆನಿನಲ್ಲಿ ದಾಖಲಾಗಿದೆ. ಕುರ್‌ಆನ್ ಕೇವಲ ಜ್ಞಾನಗ್ರಂಥವಷ್ಟೇ ಅಲ್ಲ; ಅದು ಸಂಪೂರ್ಣ ಮಾನವಕುಲಕ್ಕೆ ಮಾರ್ಗದರ್ಶಿಯೂ ಕರುಣೆಯೂ ಆಗಿದೆ [2:2].
ಅವನ ಉಪದೇಶಗಳ ಮೂಲಕ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಮಾನದಂಡವನ್ನು ಅವನು ನಮಗೆ ನೀಡಿದನು [3:3–4].
ಈ ಗ್ರಂಥವು ಯಾವುದೇ ಸಂಶಯವಿಲ್ಲದೆ ಸಕಲ ಲೋಕಗಳ ಪ್ರಭುವಿನಿಂದ ಅವತರಿಸಲ್ಪಟ್ಟದ್ದಾಗಿದೆ. ಇದು ನಿಮ್ಮ ಕರ್ತನಿಂದ ಬಂದ ಸತ್ಯವಾಗಿದೆ. [32:2–3]
ಇವು ಸತ್ಯವನ್ನು ಸ್ಪಷ್ಟವಾಗಿ ವಿವರಿಸುವ ಗ್ರಂಥದ ಆಯತ್ತುಗಳಾಗಿವೆ. [12:1]
ಕುರ್‌ಆನಿನ ಮೂಲಕ ಅಲ್ಲಾಹನು ಜೀವನ ಮತ್ತು ಲೋಕದ ಸತ್ಯ ಹಾಗೂ ವಾಸ್ತವಿಕತೆಯನ್ನು ನಮಗೆ ಕಲಿಸಿದನು. ನಮ್ಮ ಜೀವನ, ಸಮಾಜ ಮತ್ತು ಲೋಕವನ್ನು ಅರ್ಥಪೂರ್ಣವಾಗಿಯೂ ಯೋಗ್ಯವಾಗಿಯೂ ಬದುಕಲು ಅವನು ನಮಗೆ ಮಾರ್ಗದರ್ಶನ ನೀಡಿದನು. [16:64]
ಸತ್ಕರ್ಮಗಳನ್ನು ಮಾಡಲು ಅವನು ನಮಗೆ ಅತ್ಯಂತ ನೇರ ಮಾರ್ಗವನ್ನು ತೋರಿಸಿದನು. ಪರಲೋಕದ ಸತ್ಯವನ್ನು ನಮಗೆ ಕಲಿಸಿದನು. ಈ ಲೋಕದ ಜೀವನಕ್ಕೆ ಲೆಕ್ಕವಿಡುವನು ಮತ್ತು ಪರಲೋಕದಲ್ಲಿ ಅತ್ಯುತ್ತಮ ಪ್ರತಿಫಲವನ್ನು ನೀಡುವನು ಎಂಬುದನ್ನು ಯಾವುದೇ ಸಂಶಯವಿಲ್ಲದೆ ತಿಳಿಸಿದನು. ಜೊತೆಗೆ ಭೀಕರ ಶಿಕ್ಷೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದನು [17:9–10].
ಇದನ್ನು ಕುರ್‌ಆನಿನಲ್ಲಿ ನಮಗೆ ಹೀಗೆ ಕಲಿಸಲಾಗಿದೆ:
“ಸನ್ಮಾರ್ಗ ಸ್ವೀಕರಿಸಿಕೊಳ್ಳುವವನ ಸನ್ಮಾರ್ಗ ಗಮನವು ಅವನಿಗೇ ಒಳಿತಾಗಿದೆ ಮತ್ತು ಪಥಭ್ರಷ್ಟನ ಪಥಭ್ರಷ್ಟತೆಯ ವಿಪತ್ತೂ ಅವನ ಮೇಲೆಯೇ ಬೀಳುತ್ತದೆ. ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. (ಜನರಿಗೆ ಸತ್ಯಾಸತ್ಯತೆಗಳ ಅಂತರವನ್ನು ತೋರಿಸಿ ಕೊಡಲು) ಓರ್ವ ಸಂದೇಶವಾಹಕನನ್ನು ಕಳುಹಿಸಿಕೊಡದೆ ನಾವು ಯಾತನೆ ಕೊಡುವವರಲ್ಲ.” [17:15]
ಆದ್ದರಿಂದ, ಕುರ್‌ಆನಿನ ಮೂಲಕ ಅಲ್ಲಾಹನು ಮಾನವಕುಲವನ್ನು ಜೀವನ ಮತ್ತು ಲೋಕದ ಸತ್ಯವನ್ನು ಅರಿತುಕೊಳ್ಳಲು ಆಹ್ವಾನಿಸಿದನು.
“ಹೇ ಜನರೇ, ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸೃಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯ-ಆರಾಧನೆ ಮಾಡಿರಿ. (ಹೀಗೆ ಮಾಡಿದರೆ) ನೀವು ರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನು ನಿಮಗೆ ಹಾಸನ್ನಾಗಿ ಹಾಸಿದನು; ಆಕಾಶದ ಮೇಲ್ಛಾವಣಿ ಮಾಡಿದನು; ಮೇಲ್ಭಾಗದಿಂದ ಮಳೆ ಸುರಿಸಿದನು. ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ನೀವು ಅರಿತಿರುತ್ತ ಇತರರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ.” [2:21–22]
ಕುರ್‌ಆನ್ ಎಲ್ಲ ಚಿಂತಿಸುವ ಮನಸ್ಸುಗಳಿಗೆ ಸವಾಲು ಹಾಕುತ್ತದೆ ಮತ್ತು ಅದರ ಹೇಳಿಕೆಗಳನ್ನು ತಪ್ಪೆಂದು ಸಾಬೀತುಪಡಿಸಲು ಆಹ್ವಾನಿಸುತ್ತದೆ. ಅದು ಪದೇ ಪದೇ ಸ್ಪಷ್ಟವಾಗಿ ಹೇಳುತ್ತದೆ: ಮನುಷ್ಯ ಮತ್ತು ವಿಶ್ವದ ಏಕೈಕ ಸೃಷ್ಟಿಕರ್ತನಾದ ಅಲ್ಲಾಹನು ಮಾನವನಿಗೆ ಇಹಲೋಕ ಮತ್ತು ಪರಲೋಕದ ಸತ್ಯ, ಪ್ರಾಮಾಣಿಕ ಮತ್ತು ವಿಶ್ವವ್ಯಾಪಿ ಜ್ಞಾನವನ್ನು ಪ್ರಕಟಿಸಿದ್ದಾನೆ. ಆದ್ದರಿಂದ ಅವನು ಪ್ರಕಟಿಸಿದ ಈ ಜ್ಞಾನವೇ ಮುಂದಿನ ಎಲ್ಲಾ ಜ್ಞಾನ ಮತ್ತು ಶಿಕ್ಷಣದ ಕೇಂದ್ರವಾಗಿರಬೇಕಲ್ಲವೇ?
ಅಲ್ಲಾಹನು ನಮ್ಮ ಮೊದಲ ಗುರು. ಅವನು ನಮಗೆ ಕುರ್‌ಆನ್ ಪ್ರಕಟಿಸಿದ್ದರಿಂದ, ಕುರ್‌ಆನಿನ ವಿಷಯಗಳು, ಅದರ ಉಪದೇಶಗಳು, ನೈತಿಕತೆ, ಮೌಲ್ಯಗಳು, ಕಾನೂನುಗಳು ಮತ್ತು ತತ್ತ್ವಗಳು ಜನರು ಮತ್ತು ಸಮಾಜಗಳ ಅಭಿವೃದ್ಧಿಗೆ ಮಾರ್ಗದರ್ಶಿಯಾಗಬೇಕು. ಜ್ಞಾನ ನೀಡಿದವನ ಗ್ರಂಥವನ್ನು ವೈಯಕ್ತಿಕವಾಗಿಯೂ ಸಾಮೂಹವಾಗಿಯೂ ಸತ್ಯಸಂಧತೆಯಿಂದ ಅನುಸರಿಸಿದರೆ, ಪ್ರತಿಯೊಬ್ಬರೂ ಶಾಂತಿಯುತ ಹಾಗೂ ಸಂತೋಷಕರ ಜೀವನವನ್ನು ಬದುಕಬಹುದು. ಆದರೂ ನಮ್ಮಲ್ಲಿ ಅನೇಕರು ಅಲ್ಲಾಹ್ ಮತ್ತು ಅವನ ಗ್ರಂಥವೇ ನಮ್ಮ ಜ್ಞಾನ ಮತ್ತು ಮಾರ್ಗದರ್ಶನದ ಆದಿಮೂಲ ಎಂಬುದನ್ನು ಮರೆತಿದ್ದೇವೆ. ಎಷ್ಟೊಮ್ಮೆ ನಾವು ಕುರ್‌ಆನಿಗೆ ಬದಲು ನಮ್ಮ ಸುತ್ತಲಿನವರ ಕಡೆಗೆ ಮೊರೆ ಹೋಗಿದ್ದೇವೆ? ಮೊದಲ ಗುರುವಿನ ಮಾರ್ಗದರ್ಶನವಿಲ್ಲದೆ ನಾವು ಶಿಕ್ಷಣ ಪಡೆಯುತ್ತೇವೆ ಮತ್ತು ಜೀವನದ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಇದು ಕೃತಘ್ನತೆಯಲ್ಲವೇ? ಆದ್ದರಿಂದಲೇ ಅಲ್ಲಾಹ್ ಜನರನ್ನು ತನಗೆ ಹೇಗೆ ಕೃತಘ್ನರಾಗಬಹುದು ಎಂದು ಪ್ರಶ್ನಿಸುತ್ತಾನೆ.
“ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುತ್ತೀರಿ? ನೀವಾದರೋ ನಿರ್ಜೀವಿಗಳಾಗಿದ್ದಿರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು. ತರುವಾಯ ನಿಮಗೆ ಆತನೆಡೆಗೇ ಮರಳಿ ಹೋಗಬೇಕಾಗಿದೆ.” [2:28]
ನಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ನಾವು ಎಲ್ಲರೂ ಅಲ್ಲಾಹನ ಬಳಿಗೆ ಮರಳಿ ಈ ಲೋಕ ಜೀವನದ ಲೆಕ್ಕ ನೀಡಬೇಕಾಗುತ್ತದೆ. ಇದು ಅವನು ನಮಗೆ ತಿಳಿಸಿದ ಜೀವನದ ಸತ್ಯ. ನಮ್ಮ ಮೊದಲ ಗುರುನಿಂದ ಕಲಿತ ಅತ್ಯಂತ ಮಹತ್ವದ ಪಾಠವೆಂದರೆ: “ಅಲ್ಲಾಹನ ಹೊರತು ಬೇರೆ ದೇವರಾರೂ ಇಲ್ಲ. ಎಲ್ಲರೂ ಅವನ ಬಳಿಗೆ ಹಿಂದಿರುಗಬೇಕಾಗಿದೆ.” [40:3]
ಪರಲೋಕದ ಪಾಠವು ನಮಗೆ ದುಷ್ಟತನದಿಂದ ದೂರವಿರಲು ಮತ್ತು ಸದಾ ಅವನ ಕಡೆಗೆ ಮರಳಲು ಎಚ್ಚರಿಸುತ್ತದೆ. ಪುನರುತ್ಥಾನ ಮತ್ತು ನ್ಯಾಯದ ದಿನದಲ್ಲಿ ಎಲ್ಲರೂ ಪರಲೋಕದ ಸತ್ಯವನ್ನು ನೋಡಿ ಒಪ್ಪಿಕೊಳ್ಳುವರು ಎಂದು ಅಲ್ಲಾಹನು ಕುರ್‌ಆನಿನಲ್ಲಿ ಹೇಳುತ್ತಾನೆ. [40:11]
ಆ ದಿನ ಅಲ್ಲಾಹ್ ﷻ ಕೇಳುವನು:
“ಇಂದು ಆಧಿಪತ್ಯ ಯಾರದು?”
ಏಕೈಕನೂ ಅಜೇಯನೂ ಆದ ಅಲ್ಲಾಹನದು ಎಂದು ಇಡೀ ವಿಶ್ವವು ಕೂಗಿ ಹೇಳುತ್ತದೆ [40:16].
ನ್ಯಾಯದ ಆ ದಿನ ಅಲ್ಲಾಹನು ಹೀಗೆ ಹೇಳುವನು:
“ಇಂದು ಪ್ರತಿಯೊಬ್ಬ ಜೀವಿಗೆ ಅವನು ಸಂಪಾದಿಸಿದುದರ ಪ್ರತಿಫಲ ನೀಡಲಾಗುವುದು. ಇಂದು ಯಾರ ಮೇಲೂ ಅನ್ಯಾಯ ಆಗದು. (ಎಂದು ಹೇಳಲಾಗುವುದು) ನಿಶ್ಚಯವಾಗಿಯೂ ಅಲ್ಲಾಹನು ಲೆಕ್ಕ ಪರಿಶೋಧನೆಯಲ್ಲಿ ಅತಿ ಶೀಫ್ರನಾಗಿರುತ್ತಾನೆ.” [40:17].
ಪರಲೋಕದ ಸತ್ಯವನ್ನು ಈ ಲೋಕದಲ್ಲಿ ಗುರುತಿಸದವರ – “ಹೃದಯಗಳು ಗಂಟಲಿಗೇರಿ ಜನರು ಶೋಕತಪ್ತರಾಗಿ ನಿಂತಿರುವರು. ಅಕ್ರಮಿಗಳಿಗೆ ಆಪ್ತಮಿತ್ರನಾಗಲಿ ಪ್ರಭಾವಶಾಲೀ ಶಿಫಾರಸುದಾರನಾಗಲಿ ಇರಲಾರನು.” [40:18]
ಅಲ್ಲಾಹನು ಜನರ ಹೃದಯಗಳಲ್ಲಿ ಅಡಗಿರುವ ಎಲ್ಲ ರಹಸ್ಯಗಳನ್ನು ಹೊರತೆಗೆದು ನ್ಯಾಯತೀರ್ಪು ನೀಡುವನು. ಅವನು ಸಂಪೂರ್ಣ ನ್ಯಾಯದೊಂದಿಗೆ ತೀರ್ಪು ನೀಡುವನು; ಅವನ ನ್ಯಾಯದಿಂದ ಯಾರೂ ತಪ್ಪಿಸಿಕೊಳ್ಳಲಾರರು. “ಕೊನೆಗೆ ಅಲ್ಲಾಹನು ಅವರನ್ನು ಹಿಡಿದು ಬಿಟ್ಟನು. ನಿಶ್ಚಯವಾಗಿಯೂ ಅವನು ಪ್ರಬಲನೂ ಕಠಿಣವಾಗಿ ಶಿಕ್ಷಿಸುವವನೂ ಆಗಿರುತ್ತಾನೆ.” [40:22]
ನಾವು ಪರಸ್ಪರ ಸಹಾಯಕ್ಕಾಗಿ ಗೋಳಾಡುವಂತಹ ದಿನ [40:32]. ನಾವು ಓಡಿಹೋಗಲು ಪ್ರಯತ್ನಿಸುವೆವು, ಆದರೆ ಅಲ್ಲಾಹ್‌ನಿಂದ ನಮ್ಮನ್ನು ರಕ್ಷಿಸುವವರು ಯಾರೂ ಇರಲಾರರು. [40:33]
ಪರಲೋಕದಲ್ಲಿ ಅಲ್ಲಾಹ್ ಹೊರತು ಬೇರೆ ರಕ್ಷಕನಿಲ್ಲದಿರುವಂತೆ, ಈ ಲೋಕದಲ್ಲಿಯೂ ನಮ್ಮ ನಿಜವಾದ ರಕ್ಷಕ ಮತ್ತು ಮಾರ್ಗದರ್ಶಿ ಅಲ್ಲಾಹ್ ಮತ್ತು ಅವನ ಗ್ರಂಥವೇ. ಆತನೇ ನಮ್ಮ ಮೊದಲ ಗುರು ಮತ್ತು ಆತನ ಗ್ರಂಥವೇ ನಮಗೆ ಮೂಲಭೂತ ಜೀವನಪಾಠಗಳು. ಈ ಉಪದೇಶಗಳಂತೆ ಬದುಕುವುದೂ, ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿ ಅಲ್ಲಾಹನ ಕಡೆಗೆ ತಿರುಗುವುದು ಮಾತ್ರ ನಮ್ಮನ್ನು ಅಸತ್ಯ, ಅಹಂಕಾರ ಮತ್ತು ಅಂಧಕಾರದ ದಾರಿಗಳಲ್ಲಿ ಅಲೆಯುವುದರಿಂದ ರಕ್ಷಿಸಬಲ್ಲದು.
“ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ. ಇನ್ನು ‘ತಾಗೂತ’ (ಅತಿಕ್ರಮ)ನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟಾತನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. (ಅವನು ಆಶ್ರಯ ಪಡೆದ) ಅಲ್ಲಾಹ್ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.” [2:256]
“ಅಲ್ಲಾಹ್ ವಿಶ್ವಾಸಿಗಳ ರಕ್ಷಕ ಮಿತ್ರನಾಗಿರುತ್ತಾನೆ ಮತ್ತು ಅವನು ಇವರನ್ನು ಅಂಧಕಾರದಿಂದ ಹೊರತೆಗೆದು ಪ್ರಕಾಶಕ್ಕೆ ತರುತ್ತಾನೆ. ಮತ್ತು ನಿರಾಕರಣೆಯ ಮಾರ್ಗವನ್ನನುಸರಿಸುವವರ ರಕ್ಷಕ ಮಿತ್ರರು ಅತಿಕ್ರಮಿಗಳಾಗಿದ್ದಾರೆ. ಅವರು ಇವರನ್ನು ಪ್ರಕಾಶದಿಂದ ಅಂಧಕಾರಗಳ ಕಡೆಗೆ ಎಳೆದೊಯ್ಯುತ್ತಾರೆ. ಇವರು ನರಕಾಗ್ನಿಯವರಾಗಿದ್ದು ಸದಾ ಅಲ್ಲೇ ಇರುವರು.” [2:257]
“ಓ ನಮ್ಮ ಪ್ರಭೂ, ನೀನು ನಮ್ಮನ್ನು ನೇರಮಾರ್ಗದಲ್ಲಿ ಹಾಕಿರುತ್ತ ಪುನಃ ನಮ್ಮ ಮನಸ್ಸುಗಳನ್ನು ದೋಷಗಳಲ್ಲಿ ಸಿಲುಕಿಸಿ ಬಿಡಬೇಡ. ನೀನು ನಿನ್ನ ಅನುಗ್ರಹ ಭಂಡಾರದಿಂದ ಕೃಪೆಯನ್ನು ನೀಡು. ನೀನೇ ನೈಜ ಮಹಾದಾನಿಯಾಗಿರುತ್ತೀ.” [3:8]
ಕನ್ನಡಾನುವಾಡ: ಖೈಸ್ ಪಾಣೆಮಂಗಳೂರು
ಕೃಪೆ: Islam on web