ರಮಝಾನ್ ಎಂದರೇನು? ಒಂದು ಸಮಗ್ರ ನೋಟ

0
ramadan-jama

ಲೇಖಕರು: ಎಂ. ವಿವೇಕ್‌

ರಮಝಾನ್‌ ಶುಭಾಶಯಗಳು, ಹ್ಯಾಪಿ ರಮಝಾನ್‌ ಮುಂತಾದ ಶುಭ ಹಾರೈಕೆಗಳನ್ನು ಹೇಳುವುದು ಅಥವಾ ಕೇಳುವುದು ಸಾಮಾನ್ಯವಾಗಿ ನಾವು ಕಾಣುತ್ತೇವೆ. ಬಹುತೇಕರಿಗೆ ಈ ರಮಝಾನ್‌ ಎಂದರೇನು ಎಂಬ ಪರಿಚಯ ಇರುವುದಿಲ್ಲ. ಈ ನಿಟ್ಟಿನಲ್ಲಿ ರಮಝಾನ್‌ ಬಗ್ಗೆ ಸ್ಥೂಲವಾಗಿ ಪರಿಚಯ ಮಾಡಿಕೊಡಲು ಈ ಲೇಖನದ ಮೂಲಕ ಪ್ರಯತ್ನ ಮಾಡಲಾಗಿದೆ.

ಇಸ್ಲಾಮ್‌ ಧರ್ಮದಲ್ಲಿ ಆರಾಧನಾ ವಿಷಯವಾಗಿ ಐದು ಪ್ರಮುಖ ಆಧಾರ ಸ್ತಂಭಗಳಿದೆ. ಪ್ರಥಮವಾಗಿ ಅವುಗಳನ್ನು ತುಂಬಾನೇ ಸಂಕ್ಷಿಪ್ತವಾಗಿ ನೋಡೋಣ:

1. ಶಹಾದತ್‌ – ಅಂದರೆ ಸತ್ಯದ ಸಾಕ್ಷ: “ಅಲ್ಲಾಹನಲ್ಲದೇ ಆರಾಧನೆಗೆ ಅರ್ಹನಾಗಿ ಯಾರೂ ಇಲ್ಲ ಮತ್ತು ಮಹಮ್ಮದ್‌(ಸ) ರವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುವುದಾಗಿ ಜೀವನದಲ್ಲಿ ಘೋಷಿಸಿ ಪಾಲಿಸುವ ಮೂಲಕ ಈ ಪವಿತ್ರ ವಚನದ ಸಾಕ್ಷ್ಯ ವಹಿಸುವುದು.

2. ಸಲಾಹ್‌ – ಅಂದರೆ ನಮಾಝ್‌: ಅಲ್ಲಾಹನ ಸ್ಮರಣೆಯ ಉದ್ದೇಶಕ್ಕಾಗಿ ಪ್ರತಿಯೊಬ್ಬ ಮುಸ್ಲಿಮನು ನಿಗದಿತ ಸಮಯಕ್ಕೆ ಪ್ರತಿದಿನ ಐದು ಸಲ ಮಾಡಬೇಕಿರುವ ಕಡ್ಡಾಯ ಆರಾಧನಾ ಕರ್ಮ.

3. ಝಕಾತ್‌ – ಅಂದರೆ ಕಡ್ಡಾಯ ದಾನ: ಪ್ರತಿಯೊಬ್ಬ ಮುಸ್ಲಿಮನು ತನ್ನ ಸಂಪತ್ತಿನ ಶುದ್ಧಿಗಾಗಿ ಸಂಪಾದನೆಯಲ್ಲಿ ಮಾಡಬೇಕಿರುವ ಕಡ್ಡಾಯ ದಾನ.

4. ಸೌಮ್‌ – ಅಂದರೆ ಉಪವಾಸ: ದೇವನಿಷ್ಠೆ(ತಕ್ವಾ)ಯ ಸಂಪಾದನೆಗಾಗಿ ಮುಸ್ಲಿಮನು ರಮಝಾನ್‌ ತಿಂಗಳು ಪೂರ್ತಿ ಕಡ್ಡಾಯವಾಗಿ ಆಚರಿಸಬೇಕಿರುವ ಉಪವಾಸ ವ್ರತ.

5. ಹಜ್ಜ್‌ ಅಂದರೆ ತೀರ್ಥಯಾತ್ರೆ: ಸೌದಿ ಅರೇಬಿಯಾದಲ್ಲಿರುವ ಮಕ್ಕಾ ಭವನಕ್ಕೆ ಕೈಗೊಳ್ಳುವ ಪವಿತ್ರ ಯಾತ್ರೆ. ಇದು ಅನುಕೂಲಗಳಿರುವ ಮುಸ್ಲಿಮನಿಗೆ ಜೀವನದಲ್ಲಿ ಒಂದು ಸಲ ಪೂರೈಸುವುದು ಕಡ್ಡಾಯವಾಗಿದೆ.

ಈ ಐದು ಆಧಾರಸ್ತಂಭಗಳ ಪೈಕಿ ನಾಲ್ಕನೇಯದಾಗಿ ಉಲ್ಲೇಖ ಮಾಡಿರು ಸೌಮ್‌ ಅಥವಾ ಉಪವಾಸ ವ್ರತದ ಬಗ್ಗೆ ತಿಳಿಯೋಣ:

ರಮಝಾನ್‌ ಎಂದರೇನು?

ದಿನ, ತಿಂಗಳು ಮತ್ತು ವರ್ಷಗಳನ್ನು ಗುರುತಿಸಲು ಸಾಮಾನ್ಯವಾಗಿ ನಾವು ಗ್ರೆಗೋರಿಯನ್‌ ಕ್ಯಾಲೆಂಡರನ್ನು ಅನುಸರಿಸುತ್ತೇವೆ. ಗ್ರೆಗೋರಿಯನ್ ಕ್ಯಾಲೆಂಡರ್‌ ಅನ್ನುವುದು ಸೂರ್ಯನ ಚಲನೆಯ ಲೆಕ್ಕಾಚಾರದಲ್ಲಿ ಸಿದ್ಧ ಮಾಡಲಾಗಿರುವ ವ್ಯವಸ್ಥೆ. ಇದನ್ನು ಸೌರಮಾನ ಕ್ಯಾಲೆಂಡರ್‌ ಎಂದೂ ಗುರುತಿಸುತ್ತೇವೆ. ಈ ಕ್ಯಾಲೆಂಡರನ್ನು ಹದಿಮೂರನೇ ಪೋಪ್‌ ಗ್ರೆಗೋರಿ (Pope Gregory XIII) 1582 ರಲ್ಲಿ ಜಾರಿಗೆ ತಂದನು.  ಪ್ರವಾದಿ ಜೀಸಸ್‌ರ ಆಗಮನದ ವರ್ಷದಿಂದ ಇದನ್ನು ಗುರುತಿಸಲಾಗುವುದರಿಂದ Anno Domini ಅಥವಾ AD ಎಂದು ಉಲ್ಲೇಖಿಸಲಾಗುತ್ತದೆ. Anno Domini ಎಂಬುವುದು “ನಮ್ಮ ಪ್ರಭುವಿನ ವರ್ಷದಲ್ಲಿ” (In the year of our Lord) ಎಂದು ಅರ್ಥ ಕೊಡುವ ಲ್ಯಾಟಿನ್‌ ಭಾಷೆಯ ಪದವಾಗಿದೆ. ಆಧುನಿಕವಾಗಿ ಇದನ್ನು CE ಅಥವಾ Common Era ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ಗುರುತಿಸುವುದು ಚಾಲ್ತಿಯಲ್ಲಿದೆ.   

ಆದರೆ, ಇಸ್ಲಾಮಿಕ್‌ ಕ್ಯಾಲೆಂಡರ್‌ ಚಂದ್ರಮಾನ (ಚಂದ್ರನ ಚಲನೆಯ ಲೆಕ್ಕಾಚಾರ) ಪದ್ಧತಿಯನ್ನು ಅನುಸರಿಸುತ್ತದೆ. ಚಂದ್ರಮಾನ ಕ್ಯಾಲೆಂಡರ್‌ನಲ್ಲಿ ತಿಂಗಳಲ್ಲಿ 29 ಅಥವಾ 30 ದಿನಗಳು ಮಾತ್ರ ಇರುವುದರಿಂದ ಸೌರಮಾನ ವರ್ಷಕ್ಕಿಂತ 11 ಅಥವಾ 12 ದಿನಗಳ ವ್ಯತ್ಯಾಸ ಕಾಣುತ್ತದೆ.

ಮಕ್ಕಾ ಪಟ್ಟಣದಲ್ಲಿ ಜನಿಸಿದ ಪೈಗಂಬರ್‌ ಮುಹಮ್ಮದ್‌(ಸ) ರವರು ತನ್ನ ಜೀವನದ 53 ವರ್ಷಗಳನ್ನು ಅದೇ ಊರಿನಲ್ಲಿ ಸವೆಸುತ್ತಾರೆ. ಆ ಪಟ್ಟಣದಲ್ಲಿ ಅವರಿಗೆ ಮತ್ತು ಅನುಯಾಯಿಗಳಿಗೆ ವಿಪರೀತವಾಗಿ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಕಡೆಗೆ ಅವರು ಮಕ್ಕಾ ಪಟ್ಟಣವನ್ನು ತೊರೆದು ಸರಿಸುಮಾರು 430 ಕಿಲೋ ಮೀಟರ್‌ ದೂರದಲ್ಲಿರುವ ಮದೀನಾ ಪಟ್ಟಣಕ್ಕೆ ವಲಸೆ ಹೋಗಬೇಕಾಗುತ್ತದೆ. ಈ ವಲಸೆಯನ್ನು ಅರೆಬಿಕ್‌ ಭಾಷೆಯಲ್ಲಿ ಅಥವಾ ಇಸ್ಲಾಮಿಕ್‌ ಇತಿಹಾಸದಲ್ಲಿ ಹಿಜಿರ (ವಲಸೆ) ಎಂದು ಕರೆಯಲಾಗಿದೆ. ಇಸ್ಲಾಮೀ ಕ್ಯಾಲೆಂಡರ್‌ನ ಆರಂಭವನ್ನು ಈ ಘಟನೆಯಿಂದ ಮಾಡಿರುವುದರಿಂದ ಹಿಜರಿ ಕ್ಯಾಲೆಂಡರ್‌ ಎಂದು ಕರೆಯಲಾಗುತ್ತದೆ.

ಈ ಕ್ಯಾಲೆಂಡರ್‌ನಲ್ಲಿ 1. ಮುಹರ್ರಮ್, 2. ಸಫರ್, 3. ರಬಿ ಉಲ್ ಅವ್ವಲ್, 4. ರಬಿ ಉಲ್‌ ಆಖ್ಹಿರ್‌, 5. ಜುಮಾದಿಲ್‌ ಅವ್ವಲ್‌, 6. ಜುಮಾದಿಲ್‌ ಆಖ್ಹಿರ್‌, 7. ರಜಬ್‌, 8. ಶಾಬಾನ್‌, 9. ರಮಝಾನ್‌, 10. ಶವ್ವಾಲ್‌, 11. ದುಲ್‌ ಖಅದ, 12. ದುಲ್‌ ಹಜ್ಜ್‌ ಹೀಗೆ ಒಟ್ಟು ಹನ್ನೆರಡು ತಿಂಗಳುಗಳು ಇದೆ. ಈ ಹನ್ನೆರಡು ತಿಂಗಳುಗಳಲ್ಲಿ ಒಂಭತ್ತನೇಯ ತಿಂಗಳಿನ ಹೆಸರಾಗಿದೆ ರಮಝಾನ್. ಅರಬಿ ಭಾಷೆಯ ಪ್ರಕಾರ ರಮಝಾನ್‌ ಎಂಬ ಪದದ ನೇರ ಅನುವಾದ ʻಸುಡು ಶಾಖ ಅಥವಾ ಒಣಗುವಿಕೆʼ ಎಂದಾಗಿದೆ.

ರಮಝಾನ್‌ ತಿಂಗಳಿನಲ್ಲಿ ಉಪವಾಸ ವ್ರತದ ಹಿನ್ನೆಲೆ:

ಉಪವಾಸ ಆಚರಣೆಯ ಪದ್ಧತಿಯನ್ನು ಪ್ರಾಚೀನ ರೋಮನ್ನರು, ಗ್ರೀಕರು, ಈಜಿಪ್ಟರಲ್ಲಿಯು ಕಾಣಬಹುದು. ಜಗತ್ತಿನ ಬೇರೆ ಬೇರೆ ಧರ್ಮಗಳಲ್ಲಿಯೂ ಉಪವಾಸ ವ್ರತದ ಪದ್ಧತಿ ಚಾಲ್ತಿಯಲ್ಲಿದೆ. ಆದರೆ, ಅವುಗಳ ಪ್ರಾಮುಖ್ಯತೆ ಮತ್ತು ಕ್ರಮಗಳು ಇಸ್ಲಾಮಿನಲ್ಲಿರುವ ಉಪವಾಸಕ್ಕಿಂತ ಭಿನ್ನವಾಗಿದೆ.

ಈಗಾಗಲೇ ಮೇಲೆ ತಿಳಿಸಲಾಗಿರುವಂತೆ ಇಸ್ಲಾಮಿನ ಪ್ರಮುಖ ಆರಾಧನೆಗಳಲ್ಲಿ ಉಪವಾಸ ವೃತವೂ ಒಂದು. ಯಾಕಾಗಿ ಉಪವಾಸಕ್ಕಾಗಿ ರಮಝಾನ್‌ ತಿಂಗಳನ್ನೇ ಆಯ್ಕೆ ಮಾಡಲಾಗಿದೆ ಮತ್ತು ಅದರ ಹಿನ್ನೆಲೆ ಏನು? ತಿಳಿಯೋಣ:

ಮನುಷ್ಯ:

ಇಸ್ಲಾಮಿನ ಪ್ರಕಾರ ಅಲ್ಲಾಹನು ಮನುಷ್ಯನನ್ನು ಸೃಷ್ಟಿಸಿ ಆತನ ಪ್ರತಿನಿಧಿಯನ್ನಾಗಿ ಈ ಭೂಮಿಯ ಮೇಲೆ ನಿಯೋಜಿಸಿದ್ದಾನೆ. ಪವಿತ್ರ ಕುರ್‌ಆನಿನ ಎರಡನೇ ಅಧ್ಯಾಯ ಸೂರಃ ಅಲ್‌ ಬಕರಃದಲ್ಲಿ ಮನುಷ್ಯ ಸೃಷ್ಟಿಯ ಕುರಿತು ಅಲ್ಲಾಹನು ಹೀಗೆ ಹೇಳುತ್ತಾನೆ: “ನಾನು ಭೂಮಿಯಲ್ಲಿ ಒಬ್ಬ ಖಲೀಫನನ್ನು(ಪ್ರತಿನಿಧಿ) ನೇಮಿಸಲಿದ್ದೇನೆ”.

ಖಲೀಫನ ಜವಾಬ್ದಾರಿ ಏನೆಂದರೆ, ಆತನನ್ನು ಕಳುಹಿಸಿರುವವನ್ನು ಅಥವಾ ನಿಯೋಜಿಸಿರುವ ಕಾರ್ಯವನ್ನು ಬಿಂಬಿಸುವುದು ಅಥವಾ ಪ್ರತಿನಿಧಿಸುವುದು. ಈ ಪ್ರತಿನಿಧಿಗೆ ತಾನಿಚ್ಛಿಸಿದಂತೆ ಬೇಕಾಬಿಟ್ಟಿಯಾಗಿ ಕಾರ್ಯಚರಿಸುವ ಅಧಿಕಾರವೂ ಇರುವುದಿಲ್ಲ, ಸ್ವಾತಂತ್ರ್ಯವೂ ಇರುವುದಿಲ್ಲ. ಉದಾಹರಣೆಗೆ ಒಂದು ಕಂಪೆನಿಯ ಪ್ರತಿನಿಧಿಯಾಗಿಯೋ ಅಥವಾ ದೇಶದ ಪ್ರತಿನಿಧಿಯಾಗಿಯೋ ಒಬ್ಬ ವ್ಯಕ್ತಿಯನ್ನು ಒಂದು ಸಭೆಗೆ ಕಳುಹಿಸಲಾಗಿದೆ ಎಂದಿಟ್ಟುಕೊಳ್ಳಿರಿ. ಆ ಸಭೆಯಲ್ಲಿ ತನ್ನ ಕಂಪೆನಿ ಅಥವಾ ದೇಶವನ್ನು ಕಡೆಗಣಿಸಿ ಆತ ಬೇರೊಂದು ಕಂಪೆನಿ ಅಥವಾ ದೇಶದ ವಿಚಾರದಲ್ಲಿ ವಾದ ಮಂಡಿಸಲು ತೊಡಗಿದರೆ ಏನಾಗಬಹುದು? ಆ ಅಧಿಕಾರ ಮತ್ತು ಸ್ವಾತಂತ್ರ್ಯ ಆತನಿಗೆ ಇರುವುದೇ ಇಲ್ಲ. ಆದರೆ, ಅಲ್ಲಾಹನು ಮನುಷ್ಯನಿಗೆ ಭೂಮಿಯಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಈ ನಿಷ್ಠೆಯ ಚೌಕಟ್ಟನ್ನು ಮೀರಿ ಪ್ರತಿನಿಧಿಯು ಮನಬಂದತೆ ವರ್ತಿಸಲು ಅವಕಾಶ ಕೊಟ್ಟಿದ್ದಾನೆ. ನಂತರದಲ್ಲಿ ಅದರಿಂದ ಉಂಟಾಗುವು ಪರಿಣಾಮಗಳನ್ನು ಆತ ಎದುರಿಸಬೇಕು. ಪ್ರತಿನಿಧಿಯು ತನ್ನ ತಪ್ಪನ್ನು ತಿದ್ದಲು ಸಿದ್ಧನಿದ್ದರೆ ಕಂಪೆನಿ ಅವನ್ನು ಕ್ಷಮಿಸಬಹುದು, ಕೆಲಸದಿಂದ ಕಿತ್ತು ಹಾಕಬಹುದು, ಆತನ ಬೇಜವಾಬ್ದಾರಿತನಕ್ಕೆ ಕಾನೂನು ಪ್ರಕಾರ ಶಿಕ್ಷಿಸಲೂಬಹುದು.  

ಅಲ್ಲಾಹನು ಭೂಮಿಯಲ್ಲಿ ಸೃಷ್ಟಿಸಿರುವ ಮನುಷ್ಯನೆಂಬ ಈ ಪ್ರತಿನಿಧಿಗೆ ಒಂದು ಜವಾಬ್ದಾರಿಯನ್ನು ವಹಿಸಿದ್ದಾನೆ.  ಕುರ್‌ಆನಿನ 51ನೇ ಅಧ್ಯಾಯ ಅದ್ದಾರಿಯಾನ್‌ನ 56ನೇ ಸೂಕ್ತದಲ್ಲಿ ಆ ಜವಾಬ್ದಾರಿಯ ಕುರಿತು ಹೀಗೆ ಹೇಳಿದ್ದಾನೆ: “ನಾನು ಯಕ್ಷ(ಜಿನ್‌)ಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ಇಬಾದತ್‌ (ದಾಸ್ಯ ಮತ್ತು ಆರಾಧನೆ) ಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” ಈ ಸೂಕ್ತದಲ್ಲಿ ಮನುಷ್ಯನ ಸೃಷ್ಟಿಯ ಉದ್ದೇಶವನ್ನು ʻಇಬಾದತ್‌ ಅರ್ಥಾತ್‌ ದಾಸ್ಯ ಆರಾಧನೆʼಗಾಗಿ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ವಸ್ತುತಃ ಅಖಿಲ ವಿಶ್ವದಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ. ಪ್ರತಿಯೊಂದು ಸೃಷ್ಟಿಯ ಕಣಕಣವೂ ಕೇವಲ ಅಲ್ಲಾಹನ ದಾಸ್ಯ-ಆರಾಧನೆಗಾಗಿಯೇ ಇದೆ. ಹಾಗಿರುವಾಗ ಅಲ್ಲಾಹನು ಕೇವಲ ಮಾನವರು ಮತ್ತು ಯಕ್ಷರನ್ನು ಕುರಿತು ಮಾತ್ರ ಅವರನ್ನು ಕೇವಲ ನನ್ನ ಹೊರತು ಬೇರೆ ಯಾರ ದಾಸ್ಯ-ಆರಾಧನೆಗಾಗಿಯೂ ಸೃಷ್ಟಿಸಿಲ್ಲವೆಂದು ಹೇಳಿರುವುದೇಕೇ? ಎಂಬ ಪ್ರಶ್ನೆ ಮೂಡಬಹುದು. ಮೇಲಿನ ಸೂಕ್ತಕ್ಕೆ ಮೌಲಾನ ಅಬುಲ್‌ ಆಲಾ ಮೌದೂದಿ ರವರು ತಮ್ಮ ತಫೀಮುಲ್‌ ಕುರ್‌ಆನ್‌ ಎಂಬ ಕುರ್‌ಆನ್‌ ವ್ಯಾಖ್ಯಾನ ಗ್ರಂಥದಲ್ಲಿ ಹೀಗೆ ಉತ್ತರಿಸುತ್ತಾರೆ: “ಸೃಷ್ಟಿಗಳ ಪೈಕಿ ಕೇವಲ ಯಕ್ಷ ಮತ್ತು ಮಾನವರಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಷ್ಟವಿದ್ದರೆ ಅಲ್ಲಾಹನ ದಾಸ್ಯ-ಆರಾಧನೆ ಮಾಡುವ ಅಥವಾ ಮಾಡದಿರುವ ಅಥವಾ ಅಲ್ಲಾಹೇತರರ ದಾಸ್ಯ-ಆರಾಧನೆ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಭೂಮಿಯಲ್ಲಿರುವ ಇತರ ಯಾವ ಸೃಷ್ಟಿಗಳಿಗೂ ಈ ಸ್ವಾತಂತ್ರ್ಯವಿಲ್ಲ. ಅವುಗಳಿಗೆ ಅಲ್ಲಾಹನ ದಾಸ್ಯ-ಆರಾಧನೆಯನ್ನು ಮಾಡದೆ ಇತರರ ದಾಸ್ಯ-ಆರಾಧನೆಯನ್ನು ಮಾಡುವ ಆಯ್ಕೆಯ ಸ್ವಾತಂತ್ರ್ಯವಿಲ್ಲ. ಆದ್ದರಿಂದಲೇ ಇಲ್ಲಿ ಕೇವಲ ಯಕ್ಷರು ಮತ್ತು ಮಾನವರ ಕುರಿತು ಹೀಗೆ ಹೇಳಲಾಗಿದೆ. ಅವರು ತಮ್ಮ ಸ್ವಾತಂತ್ರ್ಯದ ಮಿತಿಯಲ್ಲಿ ತಮ್ಮ ಸೃಷ್ಟಿಕರ್ತನ ಅನುಸರಣೆ ಮತ್ತು ದಾಸ್ಯತನದಿಂದ ವಿಮುಖರಾಗಿ ಸೃಷ್ಟಿಕರ್ತನ ಬದಲಿಗೆ ಇತರರ ದಾಸ್ಯತನವನ್ನು ಸ್ವೀಕರಿಸಿದರೆ ಆ ಮೂಲಕ ಅವರು ಸ್ವತಃ ತಮ್ಮ ಸಹಜ ಪ್ರಕೃತಿಯ ವಿರುದ್ಧ ಹೋರಾಡುತ್ತಿದ್ದಾರೆ.”

ಇಬಾದತ್‌ ಅಥವಾ ದಾಸ್ಯಾರಾಧನೆ ಎಂದರೇನು?

ಮೇಲೆ ಉಲ್ಲೇಖಿಸಲಾಗಿರುವ ವಚನದಲ್ಲಿ ಮನುಷ್ಯ ಸೃಷ್ಟಿಯ ಉದ್ದೇಶವೇ ಇಬಾದತ್‌ ಎಂದು ತಿಳಿಸಲಾಗಿದೆ. ಇಬಾದತ್‌ ಎಂದರೇನು ಎಂಬುದನ್ನು ಸಮಗ್ರವಾಗಿ ಅರಿಯಲು ಆಳವಾಗಿ ಆ ಕುರಿತು ಬೇರೆಯೇ ಅಧ್ಯಯನ ನಡೆಸಬೇಕಿದೆ. ಸಾಂದರ್ಭಿಕವಾಗಿ ಇಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ. ಮೌಲಾನ ಅಬುಲ್‌ ಆಲಾ ಮೌದೂದಿ ರವರು ಮೇಲಿನ ವಚನವನ್ನು ವ್ಯಾಖ್ಯಾನಿಸುತ್ತಾ ಈ ರೀತಿ ವಿವರಿಸಿದ್ದಾರೆ:ಈ ವಚನದಲ್ಲಿ ಇಬಾದತ್ ಪದವನ್ನು ಕೇವಲ ಉಪವಾಸ, ನಮಾಝ್ ಮುಂತಾದ ಆರಾಧನಾ ಕರ್ಮಗಳೆಂಬ ಅರ್ಥಕ್ಕೆ ಸೀಮಿತಗೊಳಿಸಿಲ್ಲ, ಆದ್ದರಿಂದ ಯಕ್ಷ ಮತ್ತು ಮಾನವನನ್ನು ನಮಾಝ್, ಉಪವಾಸ, ಸ್ತುತಿ ಸ್ತೋತ್ರ ಮಾಡಲಿಕ್ಕಾಗಿಯೇ ಸೃಷ್ಟಿಸಲಾಗಿದೆಯೆಂದು ಇದರ ಅರ್ಥವೆಂದು ಯಾರೂ ತಪ್ಪು ತಿಳಿಯಬಾರದು. ಆ ಅರ್ಥವೂ ಅದರಲ್ಲಿ ಸೇರಿದ್ದರೂ ಅದೇ ಸಂಪೂರ್ಣ ತಾತ್ಪರ್ಯವಲ್ಲ ಅದರ ಸಂಪೂರ್ಣ ತಾತ್ಪರ್ಯ ಹೀಗಿದೆ: ಯಕ್ಷ ಮತ್ತು ಮಾನವರನ್ನು ಅಲ್ಲಾಹನ ಹೊರತು ಇತರರ ಉಪಾಸನೆ, ಅನುಸರಣೆ, ವಿಧೇಯತೆ, ಆತ್ಮಾರ್ಪಣೆಗಾಗಿ ಸೃಷ್ಟಿಸಿಲ್ಲ. ಇತರರ ಮುಂದೆ ಬಾಗುವುದು, ಇತರರ ಆಜ್ಞಾಪಾಲನೆ, ಇತರರ ಭಯಭಕ್ತಿ, ಇತರರ ಧರ್ಮದ ಅನುಸರಣೆ, ಇತರರನ್ನು ತಮ್ಮ ಸೌಭಾಗ್ಯ-ದೌರ್ಭಾಗ್ಯಗಳಿಗೆ ಕಾರಣರೆಂಬ ಭಾವನೆ, ಇತರರ ಮುಂದೆ ಕೈಚಾಚಿ ಬೇಡುವುದು ಇತ್ಯಾದಿ ಅವನ ಕೆಲಸವಲ್ಲ”.

ಹಾಗಾಗಿ ಸರಳವಾಗಿ ಇಬಾದತ್‌ ಎಂದರೆ, ಮನುಷ್ಯನನ್ನು ಪ್ರತಿನಿಧಿಯಾಗಿ ನಿಯೋಜಿಸಿರುವು ಸೃಷ್ಟಿಕರ್ತನು ತಿಳಿಸಿರುವ ಎಲ್ಲಾ ಸತ್ಕರ್ಮಗಳನ್ನು ಪಾಲಿಸುವುದು ಮತ್ತು ನಿಷೇಧಿಸಿರುವ ಎಲ್ಲಾ ದುಷ್ಕೃತ್ಯಗಳನ್ನು ವರ್ಜಿಸುವುದು ಮತ್ತು ದೂರವಿರುವುದು. ಆ ಮೂಲಕ ಸೃಷ್ಟಿಕರ್ತನಿಗೆ ಸಂಪೂರ್ಣ ವಿಧೇಯನಾಗಿ, ಆತನ ದಾಸ್ಯತನವನ್ನು ಒಪ್ಪಿ ಜೀವನ ಸವೆಸುವುದು.

ಹಾಗಿರುವಾಗ, ಸರಿ ಯಾವುದು? ತಪ್ಪು ಯಾವುದು? ಒಳಿತು ಯಾವುದು? ಕೆಡುಕು ಯಾವುದು? ಸತ್ಕರ್ಮ ಯಾವುದು? ದುಷ್ಕರ್ಮ ಯಾವುದು? ಸನ್ಮಾರ್ಗ ಯಾವುದು? ದುರ್ಮಾರ್ಗ ಯಾವುದು? ಸುಜ್ಞಾನ ಯಾವುದು? ಅಜ್ಞಾನ ಯಾವುದು? ಸಾಫಲ್ಯ ಯಾವುದು? ವೈಫಲ್ಯ ಯಾವುದು? ದೈವೀಕ ಯಾವುದು? ಪೈಶಾಚಿಕ ಯಾವುದು? ಮಾನವೀಯ ಯಾವುದು? ಅಮಾನವೀಯ ಯಾವುದು? ಎಂಬುವುದೆಲ್ಲಾವನ್ನು ಮನುಷ್ಯನಿಗೆ ತಿಳಿಸಿಕೊಡುವ ಜವಾಬ್ದಾರಿಯು ಅಲ್ಲಾಹನ ಮೇಲೆಯೇ ಇದೆ. ಮನುಷ್ಯನಿಗೆ ಅವುಗಳೆಲ್ಲವನ್ನು ತಿಳಿಸಿಕೊಡುವುದು ಅಲ್ಲಾಹನ ಕರ್ತವ್ಯವಾಗಿದೆ. ಈ ವಿಷಯಗಳಿಂದ ಮನುಷ್ಯನನ್ನು ವಂಚಿಸಿಟ್ಟು ನೀಡಿರುವ ಜವಾಬ್ದಾರಿಯ ಬಗ್ಗೆ, ಕೆಲಸದ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ.

ಸಂದೇಶವಾಹಕರುಗಳು:

ಆದ್ದರಿಂದ ಕಾಲಕಾಲಕ್ಕೆ ಮನುಷ್ಯ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಸಂದೇಶವಾಹಕರು ಅಥವಾ ಪ್ರವಾದಿಗಳ ವ್ಯವಸ್ಥೆಯನ್ನು ಮಾಡಿದನು. ಮನುಷ್ಯ ಸಮೂಹದ ಮಾರ್ಗದರ್ಶನಕ್ಕಾಗಿ ಮನುಷ್ಯ ವರ್ಗದಿಂದಲೇ ಉನ್ನತ ಚಾರಿತ್ರ್ಯವಂತರನ್ನು ಅಲ್ಲಾಹನ ಯುಕ್ತಿಯ ಆಧಾರದಲ್ಲಿ ಆಯ್ಕೆ ಮಾಡಿ ಅವರಿಗೆ ದಿವ್ಯ ಜ್ಞಾನದ ಬೋಧನೆಯನ್ನು ಮಾಡುತ್ತಾನೆ.

ಕುರ್‌ಆನಿನ ಏಳನೇ ಅಧ್ಯಾಯ ಅಲ್ ಅ’ಅರಾಫ್ ನ 35ನೇ ಸೂಕ್ತದಲ್ಲಿ ಅಲ್ಲಾಹನು ಹೀಗೆ ಹೇಳಿದ್ದಾನೆ: “ಓ ಆದಮರ ಸಂತತಿಯವರೇ, ನಮ್ಮ ವಚನಗಳನ್ನು ಹೇಳಿಕೊಡುತ್ತಿರುವ ಸಂದೇಶವಾಹಕರು ಸ್ವತಃ ನಿಮ್ಮ ಮಧ್ಯೆಯಿಂದಲೇ ನಿಮ್ಮ ಬಳಿಗೆ ಬಂದರೆ, ಆಜ್ಞೋಲ್ಲಂಘನೆ ಮಾಡದವನು ಹಾಗೂ ತನ್ನನ್ನು ತಾನೇ ಸಂಸ್ಕರಿಸಿಕೊಳ್ಳುವವನಿಗೆ ಯಾವುದೇ ಭಯ ಮತ್ತು ವ್ಯಥೆಯ ಸಂಭವವೇ ಇಲ್ಲವೆಂಬುದನ್ನು ಅರಿತುಕೊಳ್ಳಿರಿ”.

ಮನುಷ್ಯ ಚರಿತ್ರೆಯ ಉದ್ದಕ್ಕೂ ಮಾನವ ಕಲ್ಯಾಣಕ್ಕಾಗಿ ಪ್ರವಾದಿಗಳು ಅಥವಾ ಸಂದೇಶವಾಹಕರು ನಿರಂತರವಾಗಿ ಆಗಮಿಸಿದ್ದಾರೆ. ಪೈಗಂಬರ್‌ ಮುಹಮ್ಮದ್‌(ಸ) ರವರ ಒಂದು ವಚನದ ಪ್ರಕಾರ ಜಗತ್ತಿಗೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದು ಹೋಗಿದ್ದಾರೆ. ಈ ಪೈಕಿ 25 ಪ್ರವಾದಿಗಳ ಹೆಸರನ್ನು ಕುರ್‌ಆನಿನಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನ ಮೇಲೆ ಆಗಿಹೋಗಿರುವ ಯಾವ ಸಮುದಾಯವು ಕೂಡ ಈ ಜ್ಞಾನದಿಂದ ವಂಚಿಸಲ್ಪಡಿಲಿಲ್ಲ.

ಪವಿತ್ರ ಕುರ್‌ಆನಿನ 16ನೇ ಅಧ್ಯಾಯ ಅನ್ನಹ್ಲ್‌ನ 36 ನೇ ಸೂಕ್ತದಲ್ಲಿ ಹೀಗೆ ಉಲ್ಲೇಖಿಸಲಾಗಿದೆ: “ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು ಮತ್ತು ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ ತಾಗೂತ್‌ (ದೇವ ದಿಕ್ಕಾರ) ನ ಆರಾಧನೆಯಿಂದ ದೂರವಿರಿ ಎಂದು ಅವರ ಮುಖಾಂತರ ಎಚ್ಚರಿಕೆ ನೀಡಿದೆವು”.

ಜ್ಞಾನ ಮತ್ತು ಅಜ್ಞಾನವನ್ನು ಬೇರ್ಪಡಿಸಿ ತೋರಿಸಲು ಕಾಲಕಾಲಕ್ಕೆ ಅಲ್ಲಾಹನು ಆತನ ಸಂದೇಶವಾಹಕರನ್ನು ಕಳುಹಿಸಿದ್ದಾನೆ. ಈ ಸಂದೇಶವಾಹಕರಿಗಿದ್ದ ಜವಾಬ್ದಾರಿಯನ್ನು ಕುರ್‌ಆನ್‌ ಸ್ಪಷ್ಟವಾಗಿ ತಿಳಿಸುತ್ತದೆ. ಕುರ್‌ಆನಿನ 4ನೇ ಅಧ್ಯಾಯದ 165ನೇ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ: “(ನಾವು ಕಳುಹಿಸಿದ) ಈ ಸಂದೇಶವಾಹಕರು ಸುವಾರ್ತೆ (Glad Tidings/Bashir) ನೀಡುವವರೂ ಮತ್ತು ಎಚ್ಚರಿಕೆ (Warner/Nadhir) ನೀಡುವವರೂ ಆಗಿದ್ದಾರೆ. ಈ ಸಂದೇಶವಾಹಕರ ಆಗಮನದ ನಂತರ ಜನರಿಗೆ ಅಲ್ಲಾಹನ ಮುಂದೆ ಮಂಡಿಸಲು ಯಾವುದೇ ನೆಪ (Excuse) ಇರಬಾರದೆಂದು ಹೀಗೆ ಮಾಡಲಾಯಿತು.”

ಪವಿತ್ರ ಕುರ್‌ಆನಿನ 6ನೇ ಅಧ್ಯಾಯ ಅಲ್ ಅನ್‌ಆಮ್‌ನ 48ನೇ ಸೂಕ್ತದಲ್ಲಿ ಹೀಗೆ ತಿಳಿಸಲಾಗಿದೆ: “ನಾವು ಎಲ್ಲ ಸಂದೇಶವಾಹಕರನ್ನು ಸಜ್ಜನರಿಗೆ ಸುವಾರ್ತೆ ನೀಡುವವರೂ ದುರ್ಜನರಿಗೆ ಎಚ್ಚರಿಗೆ ಕೊಡುವವರೂ ಆಗಿ ಮಾತ್ರ ಕಳುಹಿಸುತ್ತೇವೆ. ಆ ಬಳಿಕ ಅವರ ಮಾತನ್ನು ನಂಬಿ, ತಮ್ಮ ಕರ್ಮವಿಧಾನವನ್ನು ಸರಿಪಡಿಸಿಕೊಂಡವರಿಗೆ ಯಾವ ಭಯದ ಮತ್ತು ವ್ಯಥೆಯ ಸಂಭವವೂ ಇರುವುದಿಲ್ಲ.”

ಅಲ್ಲಾಹನ ವತಿಯಿಂದ ಬಂದಿರುವ ಸತ್ಯ ಸಂದೇಶವನ್ನು ಜನರ ಮುಂದಿಟ್ಟು, ಅವರಿಗೆ ಜೀವನದ ಉದ್ದೇಶವನ್ನು ತಿಳಿಸಿ, ಸತ್ಕರ್ಮ ಮಾಡಿ, ಅಲ್ಲಾಹನ ಸಂಪ್ರೀತಿಯನ್ನು ಗಳಿಸಲು ತಿಳಿಸಿದಾಗ ಯಾರೆಲ್ಲಾ ಸ್ವೀಕರಿಸಿ ಸುಧಾರಿಸಕೊಂಡರೋ ಅವರಿಗೆ ಪ್ರತಿಫಲದ, ಅನುಗ್ರಹದ, ಕೊಡುಗೆಯ ಅಥವಾ ಸ್ವರ್ಗದ ಸುವಾರ್ತೆಯನ್ನು ನೀಡಲಾಗಿದೆ. ಯಾರು ಈ ಸಂದೇಶವನ್ನು ಧಿಕ್ಕರಿಸಿದರೋ, ಮಿಥ್ಯ ದೇವರುಗಳ ದಾಸ್ಯ-ಆರಾಧನೆ ಮಾಡಿದರೋ, ಬಂಡಾಯದ ದಾರಿಯನ್ನು ಒಪ್ಪಿಕೊಂಡು ಪ್ರತಿನಿಧಿಯ ಕರ್ತವ್ಯದಿಂದ ವಿಮುಖರಾದರೋ ಅವರಿಗೆ ಶಿಕ್ಷೆಯ, ನೋವಿನ ಅಥವಾ ನರಕ ಎಚ್ಚರಿಕೆಯನ್ನು ನೀಡಲಾಗಿದೆ.

ಪ್ರವಾದಿ ಮುಹಮ್ಮದ್‌(ಸ):

ಸಂದೇಶವಾಹಕರುಗಳ ಈ ದೀರ್ಘ ಪರಂಪರೆಯಲ್ಲಿ ಕೊನೇಯ ಪ್ರವಾದಿ ಮತ್ತು ಸಂದೇಶವಾಹಕರಾಗಿ ಆಗಮಿಸಿದವರೇ ಕ್ರಿ.ಶ 570ನೇ ಇಸವಿಯಲ್ಲಿ ಅರೇಬೀಯಾದಲ್ಲಿ ಜನಿಸಿದ ಮುಹಮ್ಮದ್‌(ಸ)ರವರು. ಮುಹಮ್ಮದ್‌(ಸ) ರವರು ಪ್ರವಾದಿತ್ವ ಲಭಿಸುವುದಕ್ಕಿಂತ ಮುಂಚೆಯೇ ಉನ್ನತ ಚಾರಿತ್ರ್ಯಕ್ಕಾಗಿ ಅವರ ಸಮಾಜದಲ್ಲಿ ಅರಿಯಲ್ಪಟ್ಟಿದ್ದರು. ಮುಹಮ್ಮದ್‌(ಸ) ರವರು ತನ್ನ 40ನೇ ಪ್ರಾಯದಲ್ಲಿ ಮಕ್ಕಾ ಪಟ್ಟಣದಲ್ಲಿರುವ ಕಅಬ ಭವನದ ಈಶಾನ್ಯ ದಿಕ್ಕಿಗೆ ಸುಮಾರು 4 ಕಿಲೋ ಮೀಟರ್‌ ದೂರದಲ್ಲಿರುವ ಜಬಲ್‌ ಅನ್ನೂರ್‌ (ಪ್ರಕಾಶ ಪರ್ವತ) ಅನ್ನುವ ಬೆಟ್ಟದ ಮೇಲಿರುವ ಹಿರಾ ಗುಹೆಯಲ್ಲಿ ಏಕಾಂಗಿಯಾಗಿ ದೇವಸ್ಮರಣೆಯಲ್ಲಿ ಧ್ಯಾನಸ್ಥರಾಗಿ ಕೂತಿದ್ದರು. ಆಗ ದೇವಚರ ಜಿಬ್ರೀಲ್‌ (Angel Gabriel) ಅಲ್ಲಾಹನ ಸಂದೇಶದೊಂದಿಗೆ ಬಂದು ಅವರನ್ನು ಭೇಟಿ ಮಾಡಿ ಅಲ್ಲಾಹನ ದಿವ್ಯ ವಚನಗಳನ್ನು ಪೈಗಂಬರ್‌ ಮುಹಮ್ಮದ್‌(ಸ) ರವರಿಗೆ ಕಲಿಸಿ ಕೊಡುತ್ತಾರೆ. ಇದು ಮುಹಮ್ಮದ್‌(ಸ) ರವರನ್ನು ಸಂದೇಶವಾಹಕರಾಗಿ ಆಯ್ಕೆ ಮಾಡಿರುವ ಐತಿಹಾಸಿಕ ಸಂಭವವಾಗಿದೆ. ನಂತರದ 23 ವರ್ಷಗಳು ಬೇರೆ ಬೇರೆ ಸನ್ನಿವೇಶ ಮತ್ತು ಸಂದರ್ಭಕ್ಕನುಗುಣವಾಗಿ ನಿರಂತರವಾಗಿ ಅಲ್ಲಾಹನ ದಿವ್ಯವಾಣಿ ಪ್ರವಾದಿ ಮುಹಮ್ಮದ್‌(ಸ) ರವರ ಮೇಲೆ ಅವತೀರ್ಣಗೊಳ್ಳುತ್ತದೆ. ಈ ದಿವ್ಯವಾಣಿಗಳ ಸಮಹಾರವೇ ಪವಿತ್ರ ಕುರ್‌ಆನ್‌. ಈ ನಿಟ್ಟಿನಲ್ಲಿ ಮುಹಮ್ಮದ್‌(ಸ) ರವರ ಆಗಮನದ ನಂತರದ ಜನತೆಗೆ ಅವರು ತಂದಿರುವ ಅಲ್ಲಾಹನ ಸಂದೇಶವನ್ನು ಪಾಲಿಸಿ ಜೀವನ ರೂಪಿಸಬೇಕಿದೆ.

ಕುರ್‌ಆನ್‌:

ಪವಿತ್ರ ಕುರ್‌ಆನ್‌ ಅನ್ನುವುದು ಪೈಗಂಬರ್‌ ಮುಹಮ್ಮದ್‌(ಸ) ರವರು ರಚಿಸಿರುವ ಗ್ರಂಥವಲ್ಲ. ಬದಲಾಗಿ ಮನುಷ್ಯನಿಗೆ ಮಾರ್ಗದರ್ಶನ (ಹುದನ್) ವಾಗಿ, ಕತ್ತಲೆಯಿಂದ ಬೆಳಕಿನಡೆಗೆ ಇರುವ ಪ್ರಕಾಶ(ನೂರ್)ವಾಗಿ, ಹೃದಯದ ಕಾಯಿಲೆಗೆ ಗುಣೌಷಧ(ಶಿಫಾ)ವಾಗಿ, ಸರಿ ತಪ್ಪುಗಳನ್ನು ಬೇರ್ಪಡಿಸುವ ಮಾನದಂಡ(ಫುರ್ಕಾನ್) ವಾಗಿ ಅಲ್ಲಾಹನು ಇಳಿಸಿರುವ ಗ್ರಂಥವಾಗಿದೆ.

“ಇದು (ದೈವಿಕ) ಗ್ರಂಥ; ಸಂದೇಹಾತೀತವಿದು. ಭಯಭಕ್ತಿಯುಳ್ಳವರಿಗೆ ಇದು ಮಾರ್ಗದರ್ಶಿ.” (2:2)

“ನಾವು ನಿಮಗೆ ಸ್ಪಷ್ಟ ದಾರಿ ತೋರಿಸಿ ಕೊಡುವಂತಹ ಪ್ರಕಾಶವನ್ನು ಕಳುಹಿಸಿದ್ದೇವೆ: (4:174)

“ಇದು ಮನಸ್ಸುಗಳೊಳಗಿನ ಕಾಯಿಲೆಗಳ ಗುಣೌಷಧವಾಗಿದೆ. ಸ್ವೀಕರಿಸಿಕೊಂಡವರಿಗೆ ಸನ್ಮಾರ್ಗದರ್ಶನವೂ ಕೃಪೆಯೂ ಆಗಿದೆ” (10:57)

“ಈ ಫುರ್ಕಾನ್‌ (ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಮಾನದಂಡ) ಅನ್ನು ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಯಾಗಲಿಕ್ಕಾಗಿ ತನ್ನ ದಾಸನ ಮೇಲೆ ಅವತೀರ್ಣಗೊಳಿಸಿದವನು ಪರಮ ಸುಮಂಗಲನು” (25:1)

ಈ ಎಲ್ಲಾ ನಿಟ್ಟಿನಲ್ಲಿ ಅಲ್ಲಾಹನ ಪ್ರತಿನಿಧಿಯಾಗಿರುವ ಮನುಷ್ಯನು ಭೂಮಿಯಲ್ಲಿ ಕುರ್‌ಆನನ್ನು ಮತ್ತು ಅದರ ಜೀವಂತ ರೂಪವಾಗಿದ್ದ ಪ್ರವಾದಿ ಮುಹಮ್ಮದ್‌(ಸ) ರವರನ್ನು ಅನುಸರಿಸುವುದು ಆತನ ಜೀವನ ಉದ್ದೇಶವಾಗಿದೆ.

ಕುರ್‌ಆನ್‌ ಮತ್ತು ಉಪವಾಸ:

ಪವಿತ್ರ ಕುರ್‌ಆನ್‌ ಎಂಬ ಅಲ್ಲಾಹನ ವಾಣಿಯು ಪ್ರಥಮವಾಗಿ ಹಿರಾ ಗುಹೆಯಲ್ಲಿ ಇಸ್ಲಾಮೀ ಕ್ಯಾಲೆಂಡರ್‌ನ ಒಂಭತ್ತನೇ ತಿಂಗಳಾದ ರಮಝಾನ್‌ ತಿಂಗಳಿನಲ್ಲಿ ದೇವಚರ ಜಿಬ್ರೀಲ್‌ ಮೂಲಕ ಪ್ರವಾದಿ ಮುಹಮ್ಮದ್‌(ಸ) ರವರಿಗೆ ಅವತೀರ್ಣವಾಯಿತು. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಕ್ರಿ.ಶ 610ರಲ್ಲಿ ಈ ಘಟನೆ ಸಂಭವಿಸಿತು. ಕುರ್‌ಆನ್‌ ಅವತೀರ್ಣವಾದ ರಮಝಾನ್‌ ತಿಂಗಳ ರಾತ್ರಿಯನ್ನು ಲೈಲತುಲ್‌ ಖದ್ರ್‌ (ಪ್ರತಿಷ್ಠಿತ ರಾತ್ರಿ, ಸಮೃದ್ಧಿಯ ರಾತ್ರಿ, ಘನತೆ, ಮಹತ್ವ, ಶಕ್ತಿ ಅಥವಾ ವಿಧಿಯ ನಿರ್ಣಯದ ರಾತ್ರಿ) ಎಂದು ವಿಶೇಷಿಸಲಾಗಿದೆ.

ಪವಿತ್ರ ಕುರ್‌ಆನಿನ 2ನೇ ಅಧ್ಯಾಯ ಅಲ್‌ ಬಕರದ 185ನೇ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ: “ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರ್‍ಆನ್’ ಅವತೀರ್ಣಗೊಂಡ ತಿಂಗಳು ‘ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು.”

ರಮಝಾನ್‌ ತಿಂಗಳಿನಲ್ಲಿ ಕುರ್‌ಆನ್‌ ಅವತೀರ್ಣವಾಗಿರುವಂತಹ ದಿವ್ಯ ಮಹಿಮೆ ಸಂಭವಿಸಿರುವುದರಿಂದ ಈ ತಿಂಗಳ ಪಾವಿತ್ರ್ಯವನ್ನು, ಘನತೆಯನ್ನ ಉನ್ನತಿಗೇರಿಸಲಾಗಿದೆ. ಈ ಕುರ್‌ಆನ್‌ ಮನುಷ್ಯನ ಜೀವನ ಸುಧಾರಣೆಗೆ ಬೇಕಾಗಿರುವ ಸುವ್ಯಕ್ತ ಶಿಕ್ಷಣವನ್ನು ಒಳಗೊಂಡಿರುವುದರಿಂದ ಅದನ್ನು ಅಳವಡಿಸಿಕೊಳಲು ಒಂದು ತಿಂಗಳ ಪರಿಶ್ರಮದಾಯಕ ತರಬೇತಿಯ ವ್ಯವಸ್ಥೆಯನ್ನು ಮಾಡಲಾಗಿದೆ.

ಉಪವಾಸದ ಉದ್ದೇಶ:

ಜಗತ್ತಿನ ಬೇರೆ ಬೇರೆ ಜನ ಸಮೂಹಗಳಲ್ಲಿ ಉಪವಾಸದ ಪರಿಕಲ್ಪನೆ ಮತ್ತು ಉದ್ದೇಶಗಳು ಭಿನ್ನವಾಗಿದೆ. ದೇಹದಂಡನೆಯ ರೂಪವಾಗಿ, ಶರೀರದ ವಿಷಗಳನ್ನು ಹೊರಹಾಕುವುದಕ್ಕೆ, ಮನಸಿನ ಆಸೆಗಳನ್ನು ಹತೋಟಿಯಲ್ಲಿಡಲು, ಮಾಡಿದ ಪಾಪಕ್ಕೆ ಕ್ಷಮೆ ಕೇಳಲು, ಪುಣ್ಯಪುರುಷರ ಸ್ಮರಣೆಗೆ, ಮುಕ್ತಿಗಳಿಸಲು, ಭೌತಿಕ ಸುಖ ತ್ಯಜಿಸಲು, ಒಳ್ಳೆಯ ಜೀವನ ಸಂಗಾತಿ ಸಿಗಲು ಹೀಗೆ ನಾನಾ ಕಾರಣಗಳಿಗಾಗಿ ಉಪವಾಸ ಆಚರಿಸುವ ವಾಡಿಕೆ ಇದೆ.

ಪವಿತ್ರ ಕುರ್‌ಆನಿನ 2ನೇ ಅಧ್ಯಾಯ ಅಲ್‌ ಬಕರಃದ 183ನೇ ಸೂಕ್ತದಲ್ಲಿ ಅಲ್ಲಾಹನು ಹೀಗೆ ಹೇಳಿದ್ದಾನೆ: “ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆ(ತಕ್ವಾ)ಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”

ಇಸ್ಲಾಮಿನಲ್ಲಿ ಎಲ್ಲಾ ಕಾರ್ಯಗಳು ಮನುಷ್ಯ ಸೃಷ್ಟಿಯ ಉದ್ದೇಶದೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಉದ್ದೇಶದಿಂದ ವ್ಯತಿ ಚಲಿಸಿರುವಂತ ಯಾವುದೇ ಕಾರ್ಯಚಟುವಟಿಕೆಗೆ ಆಸ್ಪದ ನೀಡುವುದಿಲ್ಲ. ಮೇಲೆ ಉಲ್ಲೇಖಿಸಿರುವ ವಚನದಲ್ಲಿ ಉಪವಾಸದ ಉದ್ದೇಶ ತಕ್ವಾದ ಗುಣ ಉಂಟಾಗುವುದು ಎಂದು ತಿಳಿಸಲಾಗಿದೆ. ತಕ್ವಾ ಎಂಬ ಪದದ ನೇರ ಅನುವಾದ ಗುರಾಣಿ ಅಥವಾ ರಕ್ಷಾಕವಚ ಎಂದಾಗಿದೆ. ಅಲ್ಲಾಹನ ಪ್ರತಿನಿಧಿಯಾಗಿರುವ ಮನುಷ್ಯನಿಗೆ ಭೂಮಿಯಲ್ಲಿ ತನ್ನ ಉದ್ದೇಶದಿಂದ ವ್ಯತಿಚಲಿಸುವ ಸ್ವಾತಂತ್ರ್ಯವನ್ನು ಪರೀಕ್ಷೆಯ ರೂಪದಲ್ಲಿ ನೀಡಲಾಗಿದೆ. ಆ ಸ್ವಾತಂತ್ರ್ಯವು ಆತನನ್ನು ತನ್ನ ಇಬಾದತ್‌ನ ಕರ್ತವ್ಯದಿಂದ ವ್ಯತಿಚಲಿಸುವಂತೆ ಮೋಹಕ್ಕೆ ಒಳಪಡಿಸುವಾಗ, ಪೈಶಾಚಿಕ ದುಷ್ಪ್ರೇರಣೆ ಆತನನ್ನು ಓಲೈಸುವಾಗ ದೇವನಿಷ್ಠೆ ಅಥವಾ ಧರ್ಮನಿಷ್ಠೆಯ ಗುರಾಣಿಯನ್ನು ಪ್ರಯೋಗ ಮಾಡಬೇಕು. ಆ ಮೂಲಕ ತನ್ನ ಆಶ್ರಯದಾತನಿಗೆ, ಪರಿಪಾಲಕನಿಗೆ, ಸೃಷ್ಟಿಕರ್ತನಿಗೆ, ಒಡೆಯನಿಗೆ, ಮಾಲೀಕನಿಗೆ, ಪ್ರಭುವಿಗೆ ನಿಷ್ಠವಂತ ದಾಸನಾಗಿರಬೇಕು.

ಕುರ್‌ಆನ್‌ ಮನುಷ್ಯನ ಸುಧಾರಣೆಗೆ ಬಂದಿರುವುದರಿಂದ ಅದರ ಆಗಮನದ ತಿಂಗಳು ಮನುಷ್ಯನಿಗೆ ಪರಿಶ್ರಮದಾಯಕವಾದ ತರಬೇತಿಯನ್ನು ಕೊಡುತ್ತದೆ. ಅನ್ನ-ಪಾನೀಯ ಮತ್ತು ಪತಿ-ಪತ್ನಿಯೊಂದಿಗೆ ಲೈಂಗಿಕ ಸಂಬಂಧಗಳಿಂದ ಪ್ರಭಾತದಿಂದ ಸೂರ್ಯಾಸ್ತಮಾದ ವರೆಗೆ ದೂರ ಇರುವುದು ಬಾಹ್ಯ ಮತ್ತು ಸಾಂಕೇತಿಕ ಆಚರಣೆಯಾಗಿದೆ. ಇದರೊಂದಿಗೆ ಆಂತರ್ಯದ ಮತ್ತು ಆಧ್ಯಾತ್ಮಕದ ತರಬೇತಿ ಕೂಡ ನಡೆಯಬೇಕಿದೆ.

ಉಪವಾಸದ ಸಮಯದಲ್ಲಿ ವ್ಯರ್ಥ ಮತ್ತು ನಿರರ್ಥಕ ಕಾರ್ಯಗಳಿಂದ ದೂರವಿದ್ದು ಅಲ್ಲಾಹನ ಸ್ಮರಣೆ, ಆರಾಧನೆ ಮತ್ತು ಸತ್ಕರ್ಮಗಳಲ್ಲಿ ಜಾಸ್ತಿ ಜಾಸ್ತಿ ತೊಡಬೇಕೆಂದು ಕಲಿಸಿಕೊಡಲಾಗಿದೆ. ಮನಸ್ಸನ್ನು ಶುದ್ಧೀಕರಿಸಿ, ಮನಸ್ಸಿನ ಕಲ್ಮಶಗಳಾದ ಅಹಂಕಾರ, ಮೇಲ್ಮೆ, ಪರದೂಷಣೆ, ಕಾಠಿಣ್ಯ, ಕೇಡು, ಅಸಹನೆ, ಸಿಟ್ಟು-ಸಿಡುಕುಗಳನ್ನು ತೊರೆಯಲು ಆದೇಶಿಸಲಾಗಿದೆ. ಇಬಾದತ್‌ನ ಭಾಗವಾಗಿರುವ ಅಲ್ಲಾಹನ ಕಡೆಗಿರುವ ಮನುಷ್ಯರ ಹಕ್ಕುಗಳು, ಮನುಷ್ಯರ ಕಡೆಗಿರುವ ವ್ಯಕ್ತಿಯ ಕರ್ತವ್ಯಗಳನ್ನು ಪೂರೈಸಲು ಪ್ರೇರೇಪಿಸಲಾಗಿದೆ. ಕ್ಷಮೆಯ ಮೂಲಕ ಸಂಬಂಧಗಳನ್ನು ಬಲಪಡಿಸಲು, ದಾನಗಳ ಮೂಲ ಸಂಪತ್ತನ್ನು ಶುದ್ಧೀಕರಿಸಲು ತಿಳಿಸಲಾಗಿದೆ. ನಿರ್ಮಲವಾದ ಮನಸ್ಸು, ಮಧುರವಾದ ಮಾತು ಮತ್ತು ಉತ್ತಮವಾದ ಚಾರಿತ್ರ್ಯವನ್ನು ಮೈಗೂಡಿಸಿಕೊಳ್ಳು ಒತ್ತುಕೊಡಲಾಗಿದೆ. ಪವಿತ್ರ ಕುರ್‌ಆನ್‌ ಕಲಿಸಿದ ಸಕಲ ಜೀವನ ಮೇರೆಗಳನ್ನು ಪಾಲಿಸಿ ಪೈಶಾಚಿಕ ದಾರಿಯನ್ನು ತೊರೆಯುವಂತಹ ದೇವನಿಷ್ಠೆಯನ್ನು ಬೆಳೆಸಲು ಉಪವಾಸ ತರಬೇತಿಯ ತಿಂಗಳಾಗಿದೆ. ಇಸ್ಲಾಮಿನ ರಮಝಾನ್‌ ಕೇವಲ ಬಾಯಿಗೆ ಇರುವ ಉಪವಾಸವಲ್ಲ, ಇದು ಅಶ್ಲೀಲ ನೋಟದಿಂದ ಕಣ್ಣಿಗೆ ಉಪವಾಸ, ವ್ಯರ್ಥ ಮಾತಿನಿಂದ ಕಿವಿಗೆ ಇರುವ ಉಪವಾಸ, ಕೆಡುಕಿನ ಕಡೆಗಿರುವ ಹೆಜ್ಜೆಯಿಂದ ಕಾಲಿಗೆ ಇರುವ ಉಪವಾಸ, ನಿರರ್ಥಕಕಾರ್ಯಗಳಿಂದ ಕೈಗೆ ಇರುವ ಉಪವಾಸ, ಪೈಶಾಚಿಕ ಆಲೋಚನೆಯಿಂದ ಮನ-ಮಸ್ತಿಷ್ಕಕ್ಕೆ ಇರುವ ಉಪವಾಸ ಇದಾಗಿದೆ. ಒಟ್ಟಿನಲ್ಲಿ ಮನುಷ್ಯನ ದೈಹಿಕ ಮತ್ತು ಆಧ್ಯಾತ್ಮಿಕ ಸಂಸ್ಕರಣೆಯೇ ಇಸ್ಲಾಮಿ ಉಪವಾಸದ ಸಾಧನೆ. ಈ ಒಂದು ತಿಂಗಳ ತರಬೇತಿಯು ಮುಂದಿನ ಹನ್ನೊಂದು ತಿಂಗಳ ಕಾಲ ತನ್ನನ್ನು ತಾನು ಕೆಡುಕಿನಿಂದ ಸಂರಕ್ಷಿಸಿಕೊಳ್ಳಲು ಇರುವ ಪ್ರೇರಣೆಯಾಗಿದೆ. ಹನ್ನೊಂದು ತಿಂಗಳು ಕಳೆದ ಬಳಿಕ ಪುನಃ ರಮಝಾನ್‌ ತಿಂಗಳು ಬರುತ್ತದೆ ಮತ್ತು ಮನುಷ್ಯನ ದೇವನಿಷ್ಠೆಯನ್ನು ತಾಜಗೊಳಿಸಲು, ಸ್ಥಿರತೆಯನ್ನು ಒದಗಿಲು ಮತ್ತೆ ತರಬೇತಿ ಕೊಡುತ್ತದೆ.

ಉಪವಾಸ ಆಚರಣೆಯ ಶೈಲಿ:

ಉಪವಾಸದ ಅತ್ಯಂತ ಪ್ರಮುಖ ಆಚರಣೆ ಏನೆಂದರೆ, ಮುಂಜಾನೆಯ ಪ್ರಭಾತ ಸಮಯದಿಂದ (dawn) ಸೂರ್ಯಾಸ್ತದವರೆಗೆ (sunset) ಅನ್ನ-ಪಾನೀಯವನ್ನು ಸಂಪೂರ್ಣವಾಗಿ ತೊರೆದು ಉಪವಾಸ ಕೈಗೊಳ್ಳುವುದು. ಇದು ಆಹಾರ, ಪಾನೀಯಗಳು (ನೀರು ಕೂಡ ಸೇರಿದಂತೆ), ಧೂಮಪಾನ ಮತ್ತು ಲೈಂಗಿಕ ಸಂಬಂಧಗಳಿಂದ ದೂರವಿರುವುದನ್ನು ಒಳಗೊಂಡಿದೆ. ಉಪವಾಸದ ದಿನಗಳಲ್ಲಿ ಪ್ರಭಾತದ ನಮಾಝ್‌ಗಾಗಿ ಆಝಾನ್‌ ಕರೆ ಮೊಳಗುವ ಮೊದಲು ಆಹಾರವನ್ನು ಸೇವಿಸುತ್ತಾರೆ. ನಂತರ ಸೂರ್ಯಾಸ್ತಮಾನ ನಮಾಝ್‌ನ ಸಮಯ ಆಗುವವರೆಗೂ ವ್ರತ ಆಚರಿಸುತ್ತಾರೆ. ಸೂರ್ಯಾಸ್ತಮಾನದ ನಮಾಝ್‌ಗಿಂತ ಮೊದಲು ಉಪವಾಸ ತೊರೆಯುತ್ತಾರೆ. ಇದು ರಮಝಾನ್‌ ತಿಂಗಳು ಪೂರ್ತಿ ಪಾಲಿಸಲಾಗುತ್ತದೆ.‌ ಇದು ಕುರ್‌ಆನಿನ ತಿಂಗಳಾಗಿರುವುದರಿಂದ ಹೆಚ್ಚೆಚ್ಚು ಕುರ್‌ಆನ್‌ ಪಾರಾಯಣ ಮತ್ತು ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ತಿಂಗಳಿನ ರಾತ್ರಿಗಳಲ್ಲಿ ತರಾವೀಹ್‌ ಎಂಬ ವಿಶೇಷ ನಮಾಝ್‌ಗಳನ್ನು ಮಾಡುತ್ತಾರೆ.

ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ್ದಾರೆ:

“ಯಾರು ರಮಝಾನ್ ತಿಂಗಳ ರಾತ್ರಿಗಳಲ್ಲಿ ವಿಶ್ವಾಸದೊಂದಿಗೆ ಮತ್ತು ಪುಣ್ಯದ ನಿರೀಕ್ಷೆಯೊಂದಿಗೆ ನಮಾಝ್ (ತರಾವೀಹ್) ನಿರ್ವಹಿಸುತ್ತಾರೋ, ಅವರ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.” (ಬುಖಾರಿ ಮತ್ತು ಮುಸ್ಲಿಮ್)

ಉಪವಾಸ ವ್ರತದಿಂದ ವಿನಾಯಿತಿ:

ಇಸ್ಲಾಮ್‌ ಕಾರುಣ್ಯದ ಧರ್ಮವಾಗಿರುವುದರಿಂದ ತನ್ನ ನಿಯಮದಲ್ಲಿ ಹಲವಾರು ವಿನಾಯಿತಿಯನ್ನು ನೀಡಿದೆ.  ಪ್ರೌಢಾವಸ್ಥೆಯನ್ನು (Puberty) ತಲುಪದ ಮಕ್ಕಳಿಗೆ ಉಪವಾಸ ಮಾಡುವುದು ಕಡ್ಡಾಯವಲ್ಲ; ಆದರೂ ಕೆಲವು ಮಕ್ಕಳು ಅಭ್ಯಾಸಕ್ಕಾಗಿ ರಮಝಾನ್ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ. ಉಪವಾಸ ಮಾಡಲು ಕಷ್ಟಪಡುವ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಹಾಗೆಯೇ ಪ್ರಯಾಣದಲ್ಲಿರುವವರು, ರೋಗ ಪೀಡಿತರು, ವೃದ್ದಾಪ್ಯವನ್ನು ತಲುಪಿದವರು ಉಪವಾಸವನ್ನು ಕೈ ಬಿಡಲು ಅವಕಾಶವಿದೆ. ಅವರು ರಮಝಾನ್‌ನಲ್ಲಿ ಬಿಟ್ಟುಹೋದ ಉಪವಾಸಗಳನ್ನು ವರ್ಷದ ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಬಹುದು. ಇದರ ಜೊತೆಗೆ, ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಐದು ಹೊತ್ತಿನ ನಮಾಝ್ ಮತ್ತು ಉಪವಾಸದಿಂದ ವಿಶ್ರಾಂತಿ ಪಡೆಯಲು ಅನುಮತಿ ನೀಡಲಾಗಿದೆ.

ಲೈಲತುಲ್‌ ಕದ್ರ್‌ ಅಥವಾ ಸಮೃದ್ಧಿಯ ರಾತ್ರಿ:

ಪ್ರವಾದಿ ಮುಹಮ್ಮದ್‌(ಸ) ರವರಿಗೆ ಹಿರಾ ಗುಹೆಯಲ್ಲಿ ಕುರ್‌ಆನಿನ 96ನೇ ಅಧ್ಯಾಯವಾಗಿರುವ ಸೂರ ಅಲ್‌ ಅಲಕ್‌ನ ಆರಂಭದ 5 ಸೂಕ್ತಗಳು ಪ್ರಪ್ರಥಮವಾಗಿ ಅವತೀರ್ಣಗೊಂಡವು. ಈ ಸೂಕ್ತಗಳು ಅವತೀರ್ಣವಾಗಿರುವುದು ರಮಝಾನ್‌ ತಿಂಗಳ ಲೈಲತುಲ್‌ ಕದ್ರ್‌ ಅಂದರೆ ಪ್ರತಿಷ್ಠಿತ ರಾತ್ರಿಯಲ್ಲಾಗಿದೆ.

ಕುರ್‌ಆನಿನ 97ನೇ ಅಧ್ಯಾಯ ಅಲ್‌ ಕದ್ರ್‌ನ 1 ರಿಂದ 3 ವರೆಗಿನ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ:

“ನಾವು ಇದನ್ನು (ಕುರ್‍ಆನನ್ನು) ಪ್ರತಿಷ್ಠಿತ ರಾತ್ರಿಯಲ್ಲಿ ಅವತೀರ್ಣಗೊಳಿಸಿರುವೆವು. ಪ್ರತಿಷ್ಠಿತ ರಾತ್ರಿ ಏನೆಂದು ನಿಮಗೇನು ಗೊತ್ತು? ಪ್ರತಿಷ್ಠಿತ ರಾತ್ರಿಯು ಸಾವಿರ ಮಾಸಗಳಿ ಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.”

ಕುರ್‌ಆನ್‌ ಅವತೀರ್ಣಗೊಂಡಿರುವ ತಿಂಗಳನ್ನೂ ಗೌರವಿಸಲಾಗಿದೆ ಮತ್ತು ಆ ರಾತ್ರಿಯನ್ನು ಕೂಡ ಶ್ರೇಷ್ಠಗೊಳಿಸಲಾಗಿದೆ. ಇದೇ ಅಧ್ಯಾಯದಲ್ಲಿ ಮುಂದುವರೆದು 5ನೇ ಸೂಕ್ತದಲ್ಲಿ ಹೀಗೆ ಹೇಳಲಾಗಿದೆ. “ಆ ರಾತ್ರಿಯು ಅರುಣೋದಯದವರೆಗೂ ಸಾದ್ಯಂತ ಮಂಗಲಮಯವಾಗಿದೆ.” ಈ ರಾತ್ರಿ ಯಾವುದೆಂದು ಪ್ರವಾದಿ ಮುಹಮ್ಮದ್‌(ಸ)ರವರು ನೇರವಾಗಿ ಬೊಟ್ಟು ಮಾಡಿ ಗುರುತಿಸದೇ ರಮಝಾನ್‌ ತಿಂಗಳ 21, 23, 25, 27 ಮತ್ತು 29 ರ ರಾತ್ರಿಗಳಲ್ಲಿ ಅರಸಿರಿ ಎಂದು ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಮಂಗಲಮಯ ರಾತ್ರಿಯ ಪುಣ್ಯ ಅರಸುತ್ತ ಮುಸ್ಲಿಮರು ರಾತ್ರಿ ಜಾಗರಣೆಯಲ್ಲಿ ಕೂತು, ದೇವ ಸ್ಮರಣೆ, ಕುರ್‌ಆನ್‌ ಪಾರಾಯಣ, ಅಧ್ಯಯನ, ನಮಾಝ್‌ ಮತ್ತು ಪ್ರಾರ್ಥನೆಗಳಲ್ಲಿ ತಲ್ಲೀನರಾಗುತ್ತಾರೆ.

ಈದುಲ್‌ ಫಿತ್ರ್‌:

ಹಿಜರಿ ಕ್ಯಾಲೆಂಡರ್‌ನ ಒಂಭತ್ತನೇ ತಿಂಗಳು ರಮಝಾನ್‌ ಮುಗಿದು ಹತ್ತನೇ ತಿಂಗಳ ಚಂದ್ರ ದರ್ಶನ ಆಗುವುದುರೊಂದಿಗೆ ಶವ್ವಾಲ್‌ ತಿಂಗಳ ಆರಂಭ ಆಗುತ್ತದೆ. ಒಂದು ತಿಂಗಳ ಕಠಿಣ ತರಬೇತಿಯ ನಂತರ ಉಡುಗೊರೆಯ ರೀತಿಯಲ್ಲಿ ಹಾಗೂ ಸಾಫಲ್ಯದ ರೀತಿಯಲ್ಲೂ ಅಲ್ಲಾಹನು ಹಬ್ಬವನ್ನು ನೀಡಿದ್ದಾನೆ. ಶವ್ವಾಲ್‌ ತಿಂಗಳ ಒಂದನೇ ತಾರೀಕಿನಂದು ಈದುಲ್‌ ಫಿತರ್‌ ಹಬ್ಬವನ್ನು ಆಚರಿಸಲಾಗುತ್ತದೆ. ಅರಬಿ ಭಾಷೆಯಲ್ಲಿ ಫಿತ್ರ್‌ ಎಂದರೆ ಬಿಡುವುದು ಅಥವಾ ಮುರಿಯುವುದು. ರಮಝಾನ್‌ ತಿಂಗಳ ಉಪವಾದ ಅವಧಿ ಮುಗಿಸಿ ಆಹಾರ ಸೇವಿಸುವುದನ್ನು ಸೂಚಿಸುತ್ತದೆ. ಅದೇ ರೀತಿ ಫಿತ್ರತ್‌ ಎಂಬ ಪದಕ್ಕೆ ನೈಸರ್ಗಿಕ ಸ್ಥಿತಿ ಎಂಬ ಅರ್ಥ ಇದೆ. ಅಂದರೆ, ಒಂದು ತಿಂಗಳ ಆಧ್ಯಾತ್ಮಿಕ ಶಿಸ್ತಿನ ನಂತರ ನೈಸರ್ಗಿಕ ಸ್ಥಿತಿಗೆ ಮರಳುವುದು ಎಂಬ ತಾತ್ಪರ್ಯವೂ ಇದೆ.

ಪ್ರವಾದಿ ಮುಹಮ್ಮದ್‌(ಸ) ರವರು ಹೇಳಿದ್ದಾರೆ: “ಅಲ್ಲಾಹನು ನಿಮಗಾಗಿ ಎರಡು ಉತ್ತಮವಾದ ದಿನಗಳನ್ನು ನೀಡಿದ್ದಾನೆ; ಅವುಗಳೆಂದರೆ ಈದುಲ್ ಫಿತರ್ ಮತ್ತು ಈದುಲ್ ಅಝ್ಹಾ” (ಅಬೂ ದಾವೂದ್)

ಅಲ್ಲಾಹನು ಉಪವಾಸ ವ್ರತವನ್ನು ಪೂರ್ತಿ ಮಾಡಲು ಅನುಗ್ರಹಿಸಿದ್ದಾಗಿ ಕೃತಜ್ಞರಾಗುವ ದಿನವಾಗಿದೆ ಈದ್‌. ಅದಕ್ಕಾಗಿ ಅಲ್ಲಾಹನ ಔನ್ನತ್ಯವನ್ನು ಘೋಷಿಸುವ ಅಲ್ಲಾಹು ಅಕ್ಬರ್‌ (ಅಲ್ಲಾಹನು ಪರಮೋನ್ನತನು) ಎಂಬ ತಕ್ಬೀರ್‌ ಧ್ವನಿ ಕೂಗುತ್ತಾರೆ. ವಿಶೇಷವಾಗಿ ಈದ್‌ ಪ್ರವಚನ ಮತ್ತು ನಮಾಝನ್ನು ನೆರವೇರಿಸುತ್ತಾರೆ. ಈ ದಿನ ಹೊಸ ಬಟ್ಟೆ ಧರಿಸುವುದು, ಪರಸ್ಪರ ಆಲಂಗಿಸುವುದು, ಕುಟುಂಬಿಕರು, ಸಂಬಂಧಿಕರ ಮನೆಗಳಿಗೆ ಭೇಟಿ ನೀಡುವುದು, ಉಡುಗೊರೆಗಳನ್ನು ನೀಡುವುದು ಆ ಮೂಲಕ ಸಂಭ್ರಮಿಸುವುದು ಪ್ರವಾದಿ ಚರ್ಯೆಯ ಭಾಗವಾಗಿದೆ.

ಝಕಾತ್ ಅಲ್-ಫಿತರ್:

ರಮಝಾನ್‌ ತಿಂಗಳ ಉಪವಾಸ ವ್ರತ ಮುಗಿದ ತಕ್ಷಣ ನೀಡುವ ದಾನಕ್ಕೆ ‘ಝಕಾತ್ ಅಲ್-ಫಿತರ್’ ಎನ್ನುತ್ತಾರೆ.ರಮಝಾನ್‌ ತಿಂಗಳು ಕೊನೆಗೊಂಡು ಈದ್‌ ದಿನದ ವಿಶೇಷ ಈದ್‌ ನಮಾಝ್‌ ಮುಗಿಸುವ ಮೊದಲು ಫಿತ್ರ್‌ ಝಕಾತ್‌ ಕೊಡುವುದನ್ನು ಪ್ರವಾದಿ ಮುಹಮ್ಮದ್‌(ಸ) ಪ್ರತಿಯೊಬ್ಬ ಮುಸ್ಲಿಮನ ಮೇಲೆ ಕಡ್ಡಾಯಗೊಳಿಸಿದ್ದಾರೆ. ಈ ದಾನವನ್ನು ಎರಡು ಉದ್ದೇಶಗಳಿಗಾಗಿ ಕೊಡಲಾಗುತ್ತದೆ.

ಉಪವಾಸದ ಶುದ್ಧೀಕರಣ: ಉಪವಾಸದ ಸಮಯದಲ್ಲಿ ಆಡಿದ ಅನಗತ್ಯ ಮಾತುಗಳು ಅಥವಾ ಸಣ್ಣಪುಟ್ಟ ತಪ್ಪುಗಳನ್ನು ಶುದ್ಧೀಕರಿಸಲು ಇದು ಸಹಕಾರಿ.

ಬಡವರ ಹಸಿವು ನೀಗಿಸುವುದು: ಹಬ್ಬದ ದಿನದಂದು ಬಡವರೂ ಕೂಡ ಉಪವಾಸವಿಲ್ಲದೆ, ಎಲ್ಲರಂತೆ ಸಂತೋಷದಿಂದ ಆಹಾರ ಸೇವಿಸಿ ಸಂಭ್ರಮಿಸಲಿ ಎಂಬುದು ಇದರ ಆಶಯ.

ಸಮಾರೋಪ: ಈ ಲೇಖನದಲ್ಲಿ ಇಸ್ಲಾಮಿನ ಉಪವಾಸದ ಹಿನ್ನೆಲೆ ಮತ್ತು ಅದರ ಹಿಂದಿರುವ ವಿಚಾರಗಳ ಬಗ್ಗೆ ಒಂದು ಪಕ್ಷಿನೋಟವನ್ನು ನೀಡಲು ಪ್ರಯತ್ನಿದ್ದೇನೆ. ಸೃಷ್ಟಿಕರ್ತ, ಮನುಷ್ಯ ಸೃಷ್ಟಿಯ ಉದ್ದೇಶ, ಸಂದೇಶವಾಹಕರ ನೇಮಕ, ಪ್ರವಾದಿತ್ವ, ದಿವ್ಯ ಜ್ಞಾನ, ಕುರ್‌ಆನ್‌, ಇಸ್ಲಾಮ್‌, ಆರಾಧನಾ ಕರ್ಮಗಳು, ಕುರ್‌ಆನಿನ ಬೋಧನಗೆಗಳು ಈ ಎಲ್ಲಾ ವಿಷಯಗಳ ಹೆಚ್ಚಿನ ಅರಿವಿಗೆ ಆಳ ಅಧ್ಯಯನ ನಡೆಸಬೇಕಿದೆ. ಕೇವಲ ಒಂದು ಲೇಖನದಲ್ಲಿ ಎಲ್ಲವನ್ನು ಚಿತ್ರಿಸುವುದು ಅಸಾಧ್ಯವಾಗಿದೆ. ಕುರ್‌ಆನ್‌ ಪದೇ ಪದೇ ಮನುಷ್ಯನಿಗೆ ವಿವೇಚನೆ ನಡೆಸಲು ಮತ್ತು ಗ್ರಹಿಸಲು ಪ್ರೇರೇಪಿಸುತ್ತದೆ. ಜ್ಞಾನವು ನಮ್ಮನ್ನು ಸತ್ಯದ ಕಡೆಗೆ ಕೊಂಡೊಯ್ಯಿದರೆ ಮಾತ್ರ ಉಪಯುಕ್ತ ಜ್ಞಾನವಾಗುತ್ತದೆ.

Leave a Reply