ರಮಝಾನ್: ಪುಣ್ಯ ಪ್ರಗತಿಯ ವಸಂತ ಮಾಸ
ಲೇಖಕರು: ಮುಹಿಯುದ್ದೀನ್ ಗಾಝಿ
ಸರ್ವಶಕ್ತನ ನಾಮದಿಂದ
ಈ ಲೋಕದಲ್ಲಿ ಮಾನವನ ಪ್ರಗತಿಯ ಮಾನದಂಡವೇನು? ಅವನು ಆಧ್ಯಾತ್ಮಿಕತೆಯಲ್ಲಿ ಹಂತಹಂತವಾಗಿ ಉನ್ನತಿಗೇರುತ್ತಿರುವುದೇ ಅವನ ಪ್ರಗತಿಯ ಮಾನದಂಡವಾಗಿದೆ. ಅದಕ್ಕಾಗಿ ವಿಶೇಷ ಗಮನ ಮತ್ತು ಪರಿಶ್ರಮದ ಅಗತ್ಯವಿರುತ್ತದೆ. ರಮಝಾನ್ ತಿಂಗಳಲ್ಲಿ ಪರಿಶ್ರಮದ ವಾತಾವರಣವಿರುತ್ತದೆ. ಉಪಾಸನೆಯ ಈ ವಸಂತ ಮಾಸದಲ್ಲಿ, ಒಂದು ವೇಳೆ ಈ ಮಗ್ಗುಲಿನ ಕಡೆಗೆ ವಿಶೇಷ ಗಮವನ್ನು ಹರಿಸಿದ್ದೇ ಆದರೆ ಪ್ರತಿ ವರ್ಷವೂ ಆಧ್ಯಾತ್ಮಿಕತೆಯ ಮಟ್ಟವು ಮೊದಲಿಗಿಂತ ಉನ್ನತವಾಗುತ್ತಾ ಸಾಗುವುದು. ಯಾರಿಗೆ ತಹಜ್ಜುದ್ ನಮಾಝ್ ನಿರ್ವಹಿಸುವ ಅನುಗ್ರಹ ದೊರೆಯುತ್ತಿರಲಿಲ್ಲವೋ ಅವರು ತಹಜ್ಜುದ್ ನಮಾಝ್ ನಿರ್ವಹಿಸುವವರಾಗಿ ಮಾರ್ಪಡಬಲ್ಲರು. ಯಾರಿಗೆ ದೇವಮಾರ್ಗದಲ್ಲಿ ಖರ್ಚು ಮಾಡುವ ಆಲೋಚನೆಯೇ ಬಂದಿರುವುದಿಲ್ಲವೋ ಅವರು ದಾನಿಗಳ ಸಾಲಿನಲ್ಲಿ ಸೇರುವವರಲ್ಲಾಗುವರು. ಯಾರ ದಿನರಾತ್ರಿಗಳ ಹೆಚ್ಚಿನ ಭಾಗವು ಅಲಕ್ಷ್ಯಕ್ಕೆ ತುತ್ತಾಗುತ್ತಿದ್ದುವೋ ಅವರು ಅಲ್ಲಾಹನನ್ನು ಹೆಚ್ಚೆಚ್ಚು ಸ್ಮರಿಸುವ ಸುಂದರ ಗುಣವಿಶೇಷವನ್ನು ಬೆಳೆಸುವವರಾಗಬಲ್ಲರು. ಯಾರು ಅಲ್ಲಾಹನ ಗ್ರಂಥ ಪವಿತ್ರ ಕುರ್ಆನ್ ಕುರಿತು ಬೋಧಶೂನ್ಯರಾಗಿದ್ದಾರೋ ಅವರು ಕುರ್ಆನಿನವರಾಗಿ ಮಾರ್ಪಡಬಲ್ಲರು. ಯಾರು ಸರ್ವಸಂಪೂರ್ಣವಾಗಿ ಇಸ್ಲಾಮಿನಲ್ಲಿ ಪ್ರವೇಶಿಸಲಿಲ್ಲವೋ ಅವರು ಸರ್ವಸಂಪೂರ್ಣವಾಗಿ ಇಸ್ಲಾಮಿನಲ್ಲಿ ಪ್ರವೇಶಿಸಬಲ್ಲರು.
ಆಧ್ಯಾತ್ಮಿಕತೆಯ ಪ್ರಸಕ್ತ ಮಟ್ಟದಲ್ಲಿ ಸಂತೃಪ್ತರಾಗಿರುವುದರ ಬದಲು ಅದರ ಮಾನದಂಡವನ್ನು ಉನ್ನತಿಗೇರಿಸಲು ಮತ್ತು ಮೊದಲಿಗಿಂತ ಹೆಚ್ಚು ಆರಾಧನೆ-ಉಪಾಸನೆಗಳನ್ನು ಮಾಡಲು ಪ್ರಯತ್ನಿಸಬೇಕು.
ನಿಮ್ಮ ಉನ್ನತವಾದ ಗುಣವೇ ನಿಮ್ಮ ಆಭರಣವಾಗಿದೆ. ಈ ರಮಝಾನ್ ತಿಂಗಳಲ್ಲಿ ಅನೇಕ ಉನ್ನತ ಗುಣಗಳಿಂದ ನಿಮ್ಮ ವ್ಯಕ್ತಿತ್ವವನ್ನು ಶೃಂಗರಿಸಬಲ್ಲಿರಿ. ಉನ್ನತ ಗುಣಗಳನ್ನು ಬೆಳೆಸಲು ರಮಝಾನ್ನ ವಸಂತ ಮಾಸವು ಬಹಳ ಫಲವತ್ತವಾಗಿರುತ್ತದೆ.
—-
ಉಪವಾಸ ವ್ರತವು ಕೇವಲ ಹಸಿವು-ದಾಹದ ಭಾವನೆಯನ್ನು ಉದ್ದೀಪಿಸುವ ಪ್ರಕ್ರಿಯೆಯಲ್ಲ. ಅದು ಮಾನವನಲ್ಲಿ ಅನೇಕ ಸದ್ಗುಣಗಳಿಗೆ ಆಹಾರವನ್ನು ಒದಗಿಸುತ್ತದೆ. ಸಹನೆಯ ಗುಣ, ಸಹಾನುಭೂತಿಯ ಗುಣ, ದಾನಶೀಲತೆಯ ಗುಣ, ಒಳಿತುಗಳನ್ನು ಇಷ್ಟಪಡುವ ಗುಣ, ಶಾಂತಿಪ್ರಿಯ ಗುಣ, ಆತ್ಮಾವಲೋಕನದ ಗುಣ ಒಟ್ಟಿನಲ್ಲಿ ಅನೇಕ ಗುಣವಿಶೇಷಗಳು ಉಪವಾಸ ವ್ರತದ ಫಲವಾಗಿ ಬೆಳೆದು ಬರುತ್ತವೆ. ಆದರೆ ಅದಕ್ಕಾಗಿ ಸಂಕಲ್ಪ ಮತ್ತು ಗಮನದ ಅಗತ್ಯವಿರುತ್ತದೆ. ಮಳೆಯು ಗದ್ದೆಗಳಲ್ಲಿ ಬೆಳೆಸಿದ ತೆನೆಗಳಿಗೆ ಪೋಷಣೆ ನೀಡುತ್ತದೆ, ಅವುಗಳನ್ನು ಹಚ್ಚಹಸುರಾಗಿಸುತ್ತದೆ. ಆದರೆ ರೈತನು ಅವುಗಳ ಕಡೆಗೆ ಗಮನವನ್ನೇ ಹರಿಸದಿದ್ದರೆ, ಮಳೆಯಿಂದಾಗಿ ಬೆಳೆಯುವ ಮತ್ತು ಹರಡುವ ಹುಲ್ಲುಗಳು ತೆನೆಗಳ ಪೋಷಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ರಮಝಾನ್ ತಿಂಗಳು ಒಳಿತುಗಳ ವಸಂತವಾಗಿದೆ. ಆದರೆ ಒಳಿತುಗಳ ಕಡೆಗೆ ಸೂಕ್ತ ಗಮನವನ್ನು ಹರಿಸಲಾದರೆ ಮಾತ್ರವೇ ಅವು ಹಚ್ಚಹಸುರಾಗಿ ಬೆಳೆದು ಬರಬಲ್ಲುದು.
—-
ರಮಝಾನ್ ಆಧ್ಯಾತ್ಮಿಕತೆಯ ಉನ್ನತಿಯ ತಿಂಗಳಾಗಿದೆ. ಈ ತಿಂಗಳಲ್ಲಿ ದೇಹದ ಮೇಲೆ ಆತ್ಮದ ಪ್ರಾಬಲ್ಯವಿರುತ್ತದೆ. ಈ ತಿಂಗಳಲ್ಲಿ ದೈಹಿಕ ಬೇಡಿಕೆಗಳನ್ನು ದಮನಿಸಿ ಆಧ್ಯಾತ್ಮಿಕ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ಒಂದು ವೇಳೆ ಈ ಇಡೀ ತಿಂಗಳಲ್ಲಿ ದೇಹದ ಮೇಲೆ ಗಮನ ಕೇವಲ ಅಗತ್ಯದಷ್ಟೇ ಇದ್ದು, ಎಲ್ಲ ಗಮನವು ಆತ್ಮದ ಮೇಲೆ ಕೇಂದ್ರೀಕರಿಸಿದಲ್ಲಿ, ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ. ಆದರೆ ಈ ತಿಂಗಳಲ್ಲಿಯೂ ದೈಹಿಕ ಬೇಡಿಕೆಗಳ ಕಡೆಗೆ ಹೆಚ್ಚು ಗಮನ ಹರಿಸಲಾದರೆ, ದೈಹಿಕ ಬೇಡಿಕೆಗಳದೇ ಚಿಂತೆ ಅಧಿಕವಾಗಿದ್ದರೆ, ರಮಝಾನ್ನ ಆಧ್ಯಾತ್ಮಿಕ ರಾತ್ರಿಗಳು ಹೊಟೇಲುಗಳಲ್ಲಿ ತಿಂಡಿ-ತಿನಸುಗಳಲ್ಲಿ ಕಳೆದು ಹೋಗುತ್ತಿದ್ದರೆ, ಉಪವಾಸ ವ್ರತಕ್ಕಿಂತ ಹೆಚ್ಚು ಗಮನವು ಸಹ್ರಿ ಮತ್ತು ಇಫ್ತಾರ್ಗಳ ಮೇಲೆಯೇ ಇದ್ದರೆ ದೈಹಿಕ ಭಾರದಲ್ಲಿ ಹೆಚ್ಚಳವಾಗುವುದು ಖಂಡಿತ; ಆದರೆ ಆಧ್ಯಾತ್ಮಿಕ ಶಕ್ತಿಯಲ್ಲಿ ಯಾವುದೇ ಹೆಚ್ಚಳವಾಗಲಾರದು. ನೆನಪಿಡಿ, ಉಪವಾಸ ವ್ರತಾಚರಿಸಲಿಕ್ಕಾಗಿ ಸಹ್ರಿ ಮತ್ತು ಇಫ್ತಾರ್ಗಳ ಪಾಲನೆಯಾಗಬೇಕೇ ಹೊರತು ಸಹ್ರಿ ಮತ್ತು ಇಫ್ತಾರ್ಗಾಗಿಯೇ ಉಪವಾಸ ವ್ರತಾಚರಣೆಯಾಗಬಾರದು. ರಮಝಾನನ್ನು ಸವಿಯಾದ ಆಹಾರಕ್ಕಾಗಿಯಲ್ಲ, ಬದಲಾಗಿ ಹಸಿವು-ದಾಹಗಳಿಗಾಗಿ ನೆನಪಿಸುಂತಾಗಬೇಕು.
ಅತ್ತ ಉಪವಾಸಗಳು ನೀರು ಮಾತ್ರದಿಂದ ಪಾರಣೆಯಾಗುತ್ತಿದೆ
ಇತ್ತ ಉಪವಾಸದ ನಾಮದಲ್ಲಿ ಇಫ್ತಾರ್ನ ಪಾಲನೆಯಾಗುತ್ತಿದೆ
ರಮಝಾನ್ನಲ್ಲಿ ನೀವು ಭೌತಿಕ ಬೇಡಿಕೆಗಳ ಮೇಲೆ ಆಧ್ಯಾತ್ಮಿಕ ಬೇಡಿಕೆಗಳ ಪ್ರಾಬಲ್ಯವನ್ನು ಪಡೆಯುವ ಯಶಸ್ವಿ ಅನುಭವವನ್ನು ಹೊಂದಿದರೆ, ಆ ಅನುಭವದಿಂದ ಜೀವನದಾದ್ಯಂತ ಪ್ರಯೋಜನ ಪಡೆಯಬಲ್ಲಿರಿ.
ಪ್ರಸಕ್ತ ಯುಗದ ಮಾನವನ ಮೇಲೆ ಭೌತಿಕ ಆಲೋಚನೆಗಳ ಪ್ರಾಬಲ್ಯವಿರುತ್ತದೆ. ಭೌತಿಕ ಬೇಡಿಕೆಗಳ ಕುರಿತು ಚಿಂತಿಸುವ ಭರದಲ್ಲಿ ಮಾನವನಿಗೆ ತನ್ನ ನೈತಿಕ ಮತ್ತು ಆಧ್ಯಾತ್ಮಿಕ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅವಕಾಶ ಬಹಳ ಕಡಿಮೆ ಸಿಗುತ್ತದೆ. ಭೌತಿಕ ಬೇಡಿಕೆಗಳ ಕಡೆಗಿರುವ ಏಕಾಗ್ರತೆಯು ಮಾನವನ ವ್ಯಕ್ತಿತ್ವವನ್ನು ಗೆದ್ದಲಿನಂತೆ ತಿಂದು ಮುಗಿಸುತ್ತದೆ; ಅವನಲ್ಲಿ ಗೊಂದಲ ಮತ್ತು ಚಿಂತೆಗಳನ್ನು ನಿರಂತರ ಹೆಚ್ಚಿಸುತ್ತ ಇರುತ್ತದೆ. ಹಾಗಾಗಿ ರಮಝಾನ್ನ ಯಶಸ್ವಿ ಆಧ್ಯಾತ್ಮಿಕ ಅನುಭವದ ಬಳಿಕ ಮಾನವನ ಅವಸ್ಥೆಯಲ್ಲಿ ಬದಲಾವಣೆ ಬರಬೇಕಾದುದು ಅಗತ್ಯ. ಅವನು ಐಹಿಕ ಲಾಭ-ನಷ್ಟಕ್ಕೆ ಬದಲು ಪಾರತ್ರಿಕ ಲಾಭ-ನಷ್ಟಗಳ ಬಗ್ಗೆ ಹೆಚ್ಚು ಚಿಂತಿತನಾಗಬೇಕಾಗಿದೆ.
ಭೌತಿಕತೆಯ ಭಾರವಾದ ಸಂಕೋಲೆಗಳಿಂದ ತನ್ನ ಬಳಲಿದ ಅಸ್ತಿತ್ವವನ್ನು ಮುಕ್ತಗೊಳಿಸುವುದೇ ಈ ಯುಗದ ಮಾನವನ ಅತಿ ದೊಡ್ಡ ಸ್ವಾತಂತ್ರ್ಯವಾಗಿದೆ.
—-
ರಮಝಾನ್, ಚಿತ್ತಾಕಾಂಕ್ಷೆಗಳನ್ನು ನಿಯಂತ್ರಣದಲ್ಲಿರಿಸುವ ತಿಂಗಳಾಗಿದೆ. ಉಪವಾಸ ವ್ರತದ ಸ್ಥಿತಿಯಲ್ಲಿ ನೀವು ಅನೇಕ ರೀತಿಯ ಆಗ್ರಹ-ಇಚ್ಛೆಗಳನ್ನು ನಿಯಂತ್ರಣದಲ್ಲಿರಿಸುತ್ತೀರಿ.
ಜಗತ್ತಿನ ಸಕಲ ಕ್ಷೋಭೆಗಳ ಮೂಲ ಬೇರು ಚಿತ್ತಾಕಾಂಕ್ಷೆಯಾಗಿದೆ. ಮಾನವನ ಯಶಸ್ಸಿನ ಹಾದಿಯಲ್ಲಿ ಅದುವೇ ಅತಿ ದೊಡ್ಡ ಅಡೆತಡೆಯಾಗಿ ಪರಿಣಮಿಸುತ್ತದೆ. ಈ ಚಿತ್ತಾಕಾಂಕ್ಷೆಗಳೇ ಮಾನವನನ್ನು ಜೀವನದ ಉನ್ನತೋದ್ದೇಶಗಳಿಂದ ಅಲಕ್ಷ್ಯನನ್ನಾಗಿ ಮಾಡುತ್ತದೆ.
ನೀವು ರಮಝಾನ್ ತಿಂಗಳಲ್ಲಿ ನಿಮ್ಮ ಚಿತ್ತಾಕಾಂಕ್ಷೆಗಳನ್ನು ನಿಯಂತ್ರಿಸುವಲ್ಲಿ ಒಂದು ಹಂತದ ಮಟ್ಟಿಗೆ ಯಶಸ್ಸು ಪಡೆಯುತ್ತೀರಿ. ಆ ಯಶಸ್ಸನ್ನು ರಮಝಾನ್ ನಂತರ ವೈಫಲ್ಯವಾಗಿ ಮಾರ್ಪಡಲು ಬಿಡಬಾರದು. ಹಸಿವು-ದಾಹಗಳ ಅತೀವ ಆಗ್ರಹವನ್ನು ನಿಯಂತ್ರಿಸುವ ಮೂಲಕ ನಿಮ್ಮನ್ನು ನೀವು ಬಲಶಾಲಿಯನ್ನಾಗಿ ಮಾಡಿರುತ್ತೀರಿ. ಇನ್ನು ಆ ಬಲವನ್ನು ಭರಪೂರ ಬಳಸಬೇಕು ಮತ್ತು ಎಲ್ಲ ರೀತಿಯ ಚಿತ್ತಾಕಾಂಕ್ಷೆಗಳನ್ನು ಅವುಗಳಿಗೆ ನಿರ್ಧರಿಸಲಾದ ಮೇರೆಗಳೊಳಗೆ ಇರಿಸಲು ಪ್ರಯತ್ನಿಸಿರಿ.
—-
ದೇಹ ಮತ್ತು ವಸ್ತ್ರದ ಮಾಲಿನ್ಯವು ಮಾನವನಿಗೆ ಸಹ್ಯವಾಗುವುದಿಲ್ಲ. ತನ್ನ ದೇಹದ ಮತ್ತು ವಸ್ತ್ರದ ಮಾಲಿನ್ಯದ ಅರಿವು ಜನರಿಗೆ ಆಗಬಾರದು ಎಂದು ಅವನು ಬಯಸುತ್ತಾನೆ. ಆದ್ದರಿಂದ ಜನರಿಗೆ ತಿಳಿದು ಬರುವುದಕ್ಕೆ ಮುಂಚೆಯೇ ಸ್ವಯಂ ಅರಿತು ತನ್ನ ದೇಹ ಮತ್ತು ವಸ್ತ್ರವನ್ನು ಸ್ವಚ್ಛಗೊಳಿಸುತ್ತಾನೆ.
ಅದೇ ವೇಳೆ ಮನಸ್ಸಿನಾಳದ ಮಾಲಿನ್ಯ ಇತರರಿಗೆ ಕಾಣುವುದಿಲ್ಲ. ಆದ್ದರಿಂದ ಮಾನವನು ಸ್ವಯಂ ಅದನ್ನು ನಿವಾರಿಸುವ ಅಗತ್ಯವನ್ನು ಪರಿಗಣಿಸುವುದಿಲ್ಲ. ಮಾನವನು ತನ್ನ ಬಾಹ್ಯದಲ್ಲಿ ತೋರುವ ಮಾಲಿನ್ಯವನ್ನು ಸಹಿಸದಿರುವುದು ಮತ್ತು ಆಂತರ್ಯದಲ್ಲಿರುವ ಮಾಲಿನ್ಯವನ್ನು ಅರಿಯದೆ ಅದರೊಂದಿಗೆ ಸಸಂತೋಷ ಬಾಳುವುದಿದೆಯಲ್ಲ, ಅದು ಅವನ ಬಹುದೊಡ್ಡ ದೌರ್ಬಲ್ಯವಾಗಿದೆ.
ವಾಸ್ತವದಲ್ಲಿ ಮನಸ್ಸಿನ ಸ್ವಚ್ಛತೆಯು ಎಲ್ಲಕ್ಕಿಂತ ಹೆಚ್ಚು ಅಗತ್ಯವಾಗಿದೆ. ಏಕೆಂದರೆ ಮನಸ್ಸಿನ ಮೇಲೆ ಅಲ್ಲಾಹನ ವಿಶೇಷ ಗಮನವಿರುತ್ತದೆ. ಒಂದು ವೇಳೆ ನಮ್ಮ ದೇಹ ಮತ್ತು ವಸ್ತ್ರದ ಮೇಲಿನ ಮಾಲಿನ್ಯ ಮಾನವರಿಗೆ ಕಾಣುತ್ತದೆ, ತಿಳಿಯುತ್ತದೆ ಎಂದು ಅದನ್ನು ಸ್ವಚ್ಛಗೊಳಿಸುವ ಬಗ್ಗೆ ಆಲೋಚಿಸುತ್ತೇವೆ ಎಂದಾದರೆ, ಮನಸ್ಸಿನ ಕಡೆಗೆ ಮಾನವನ ಪ್ರಭುವಾದ ಅಲ್ಲಾಹನ ಗಮನ ಇರುತ್ತದೆ ಎಂಬುದನ್ನು ಮನಗಂಡು, ಮನಸ್ಸಿನ ಸ್ವಚ್ಛತೆಯ ಕಡೆಗೆ ಅದಕ್ಕಿಂತ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ.
ಉಪವಾಸವು ಒಂದು ರೀತಿಯಲ್ಲಿ ಆಂತರಿಕವಾದ ಅವಸ್ಥೆಯಾಗಿದೆ. ಮೇಲ್ನೋಟಕ್ಕೆ ಎಲ್ಲರಂತೆ ಕಾಣುವ ಉಪವಾಸಿಗನು ತನ್ನ ಆಂತರ್ಯದಲ್ಲಿ ಇತರರಿಗಿಂತ ಭಿನ್ನವಾಗಿರುತ್ತಾನೆ. ಅವನು ಅಲ್ಲಾಹನ ಸಂಪ್ರೀತಿಯ ಆಕಾಂಕ್ಷೆಯೊಂದಿಗೆ ತನ್ನಲ್ಲಿ ಹಸಿವು-ದಾಹದ ಸವಿಯನ್ನು ಅನುಭವಿಸುತ್ತಾನೆ. ಉಪವಾಸದಲ್ಲಿ ತನ್ನ ಆಂತರ್ಯದ ಕಡೆಗೆ ನೋಡುವ ಅವಕಾಶ ಬಹಳ ಸಿಗುತ್ತದೆ. ಈ ಅವಕಾಶದಿಂದ ಸಂಪೂರ್ಣ ಪ್ರಯೋಜನ ಪಡೆಯಿರಿ ಮತ್ತು ನಿಮ್ಮ ಆಂತರ್ಯದ ಎಲ್ಲ ಮಾಲಿನ್ಯವನ್ನು ಸ್ವಚ್ಛಗೊಳಿಸಿಬಿಡಿ. ಅಸೂಯೆ, ದ್ವೇಷ, ಹೊಟ್ಟೆಯುರಿ, ಅಹಂಕಾರ, ಜಂಭ, ತೋರಿಕೆ, ಬೂಟಾಟಿಕೆ ಇತ್ಯಾದಿ ಮಾಲಿನ್ಯಗಳ ಜೊತೆಗೆ ಜನರಿಂದ ಬಹಳಷ್ಟು ಮಿಥ್ಯ ದೂರುಗಳು ಹೃದಯದ ವಾತಾವರಣವನ್ನು ಮಲಿನಗೊಳಿಸುತ್ತವೆ.
—-
ಮಾನವನು ದಿನನಿತ್ಯ ವ್ಯಸ್ತನಾಗಿರುವಂತಹ ಕೆಲವು ಸಾಮಾನ್ಯ ಚಟುವಟಿಕೆಗಳಿರುತ್ತವೆ. ಹಾಗಾಗಿ ವಿಶೇಷ ಸಂದರ್ಭಗಳಿಗೆ ಅವುಗಳದೇ ಆದ ಬೇಡಿಕೆಗಳಿರುತ್ತವೆ. ರಮಝಾನ್ ತಿಂಗಳು ಸತ್ಯವಿಶ್ವಾಸಿಯ ಜೀವನದ ಅತಿ ವಿಶೇಷವಾದ ಸಂದರ್ಭವಾಗಿದೆ. ರಮಝಾನ್ ತಿಂಗಳಲ್ಲಿ ಹೆಚ್ಚಿನ ಸಮಯವನ್ನು ರಮಝಾನ್ನ ಕಾರ್ಯಗಳಿಗಾಗಿ ಮೀಸಲಿರಿಸಬೇಕಾಗಿದೆ. ಪವಿತ್ರ ಕುರ್ಆನ್ನ ಅಧ್ಯಯನ ಮತ್ತು ಪರ್ಯಾಲೋಚನೆ, ರಾತ್ರಿಗಳಲ್ಲಿ ಕಿಯಾಮುಲ್ಲೈಲ್, ಅಧಿಕಾಧಿಕ ದಿಕ್ರ್-ದುಆಗಳು, ಬಡ-ನಿರ್ಗತಿಕರಿಗೆ ಸಾಧ್ಯಂತ ದಾನಧರ್ಮ, ಆತ್ಮಾವಲೋಕನ ಮತ್ತು ಆತ್ಮಸಂಸ್ಕರಣೆ ಇತ್ಯಾದಿ ಕಾರ್ಯಗಳು ರಮಝಾನ್ನ ಕಾರ್ಯಗಳಾಗಿವೆ.
ನಿರರ್ಥಕ ಮತ್ತು ನಿಷ್ಪ್ರಯೋಜಕ ಕಾರ್ಯಗಳಲ್ಲಿ ತನ್ನ ಅಮೂಲ್ಯ ಸಮಯವನ್ನು ಪೋಲು ಮಾಡುವುದು ಯಾವತ್ತಿಗೂ ಸಲ್ಲದು. ಆದರೆ ರಮಝಾನ್ನಂತಹ ಸಮೃದ್ಧ ತಿಂಗಳಲ್ಲಿಯಂತೂ ಅಮೂಲ್ಯ ಕ್ಷಣವನ್ನೂ ವ್ಯರ್ಥಗೊಳಿಸುವುದೆಂದರೆ ಅದು ಅತಿ ದೊಡ್ಡ ಮೂರ್ಖತನವಾಗುತ್ತದೆ.
ರಮಝಾನ್ ತಿಂಗಳಲ್ಲಿ ನೀವು ನಿರರ್ಥಕ ಕಾರ್ಯಗಳಿಂದ ದೂರವಿದ್ದು, ಅತ್ಯುತ್ತಮ ಕಾರ್ಯಗಳಲ್ಲಿ ನಿಮ್ಮ ಸಮಯವನ್ನು ತೊಡಗಿಸಿಕೊಳ್ಳುತ್ತೀರಿ. ಅದು ವಸ್ತುತಃ ನೀವು ಸಮಯದ ಕುರಿತಾಗಿ ಅತ್ಯುತ್ತಮ ವ್ಯವಹಾರದ ಅರಿವನ್ನು ಹೊಂದಿರುವಿರಿ ಎಂಬುದಕ್ಕೆ ಸಾಕ್ಷಿಯಾಗಿದೆ. ನೀವು ಸಮಯ ಪೋಲು ಮಾಡುವ ಬದಲು ಸಮಯದ ಸದುಪಯೋಗ ಮಾಡುವಂತಹ ಅಮೂಲ್ಯವಾದ ಅನುಭವವನ್ನು ಹೊಂದುತ್ತೀರಿ. ಇಷ್ಟು ಪ್ರಬಲವಾದ ಅರಿವಿನ ಬಳಿಕ ನೀವು ರಮಝಾನ್ ತಿಂಗಳ ಬಳಿಕವೂ ನಿಮ್ಮ ಸಮಯದ ಸದುಪಯೋಗವನ್ನು ಮಾಡುವುದನ್ನು ಇಷ್ಟಪಡುವಿರಿ ಎಂದು ನಿರೀಕ್ಷಿಸಬಹುದಾಗಿದೆ.
—-
ರಮಝಾನ್ ತಿಂಗಳಲ್ಲಿ ಪವಿತ್ರ ಕುರ್ಆನ್ ಪಠಣ ಮತ್ತು ಅದರ ಕುರಿತು ಚಿಂತನೆ-ಪರ್ಯಾಲೋಚನೆಯು ಅಲ್ಲಾಹನ ಸಂದೇಶವಾಹಕರ(ಸ) ವಿಶೇಷ ಚಟುವಟಿಕೆಯಾಗಿತ್ತು. ರಮಝಾನ್ ತಿಂಗಳಿಗೆ ಪವಿತ್ರ ಕುರ್ಆನ್ನೊಂದಿಗೆ ಗಾಢವಾದ ಸಂಬಂಧವಿದೆ. ರಮಝಾನ್ ತಿಂಗಳಲ್ಲಿ ಕುರ್ಆನ್ನೊಂದಿಗಿನ ನಿಮ್ಮ ಸಂಬಂಧವೂ ಬಲಗೊಳ್ಳಬೇಕಾಗಿದೆ. ನಿಮ್ಮ ಸಂಭಾಷಣೆಯನ್ನು ಕುರ್ಆನಿನೊಂದಿಗೆ ಜೋಡಿಸಿಕೊಳ್ಳಿರಿ. ಕುರ್ಆನಿನ ಮಾತುಗಳು ನಿಮ್ಮ ಪ್ರತಿಯೊಂದು ಮಾತಿನ ವಿಷಯವಾಗಲಿ. ಮನೆಯಲ್ಲೂ ಕುರ್ಆನಿ ಸಂಭಾಷಣೆ ಮತ್ತು ಮನೆಯಿಂದ ಹೊರಗೂ ಕುರ್ಆನಿ ಸಂಭಾಷಣೆ ಆಗಿ ತೀರಲಿ. ನಿಮ್ಮ ಚಿಂತನೆಯನ್ನು ಕುರ್ಆನ್ನೊಂದಿಗೆ ಜೋಡಿಸಿಕೊಳ್ಳಿರಿ. ಕುರ್ಆನ್ ಯಾವ ವಿಷಯಗಳನ್ನು ಪ್ರಸ್ತಾಪಿಸುತ್ತದೋ ಆ ವಿಷಯಗಳ ಕುರಿತು ಚಿಂತಿಸಿರಿ, ಪರ್ಯಾಲೋಚಿಸಿರಿ. ಕುರ್ಆನಿನೊಂದಿಗಿನ ನಿಮ್ಮ ಬಂಧವನ್ನು ಹೆಚ್ಚಿಸಿರಿ ಮತ್ತು ಇತರರಲ್ಲೂ ಕುರ್ಆನ್ನೊಂದಿಗಿನ ಬಂಧವನ್ನೂ ಹೆಚ್ಚಿಸಲು ಪ್ರಯತ್ನಿಸಿರಿ. ನಿಮ್ಮ ಯಶಸ್ಸು ಕುರ್ಆನಿನೊಂದಿಗೆ ಜೋಡಿಕೊಂಡಿದೆ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ಕುರ್ಆನ್ನಿಂದಾಗಿ ವಿಶ್ವಾಸವು ಬೆಳೆಯುತ್ತದೆ. ಕುರ್ಆನ್ನಿಂದಾಗಿ ಪರೋಪಕಾರದ ಹಾದಿ ತೆರೆದುಕೊಳ್ಳುತ್ತದೆ. ಕುರ್ಆನ್ನಿಂದಲೇ ಯುಕ್ತಿ ಹುಟ್ಟಿಕೊಳ್ಳುತ್ತದೆ. ಕುರ್ಆನ್ ಮನಸ್ಸುಗಳನ್ನು ಮೃದುಗೊಳಿಸುತ್ತದೆ. ಕುರ್ಆನ್ ಮೂಲಕ ಉನ್ನತಿಗೇರುವ ಸೋಪಾನ ದೊರೆಯುತ್ತದೆ. ಕುರ್ಆನ್ನಿಂದ ನೈಜ ಯಶಸ್ಸಿನ ರಹಸ್ಯ ಬೇಧಿಸಲ್ಪಡುತ್ತದೆ. ಯಾರು ಕುರ್ಆನಿನವನಾಗಿ ಮಾರ್ಪಡುತ್ತಾನೋ ಅವನೇ ನಿಜವಾಗಿ ಅಲ್ಲಾಹನವನಾಗಿರುತ್ತಾನೆ.
—-
ನೆನಪಿಡಿರಿ, ನೀವು ಸ್ವಯಂ ನಿಮ್ಮನ್ನು ನೋಡುವ ರೀತಿಯಲ್ಲಿ ಬೇರೆ ಯಾರೂ ನೋಡಲಾರರು. ಆದ್ದರಿಂದ ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿರಿ. ತಿಳಿದುಕೊಳ್ಳಿರಿ, ನೀವು ನಿಮ್ಮನ್ನು ಎಷ್ಟು ಅರಿತುಕೊಳ್ಳುತ್ತೀರೋ ಅಷ್ಟೇ ಲಾಭದಲ್ಲಿರುವಿರಿ. ಇತರರು ನಿಮ್ಮನ್ನು ನೋಡುವ ದೃಷ್ಟಿಯಲ್ಲಿ ಅಥವಾ ಇತರರು ನಿಮ್ಮನ್ನು ಯಾವ ರೀತಿ ನೋಡಬೇಕು ಎಂದು ನೀವು ಬಯಸುತ್ತೀರೋ ಆ ದೃಷ್ಟಿಯಲ್ಲಿ ನಿಮ್ಮನ್ನು ನೀವು ನೋಡಬೇಡಿರಿ. ನಿಮ್ಮನ್ನು ನೀವು ಸುಧಾರಣೆಯ ದೃಷ್ಟಿಯೊಂದಿಗೆ ನೋಡಿರಿ, ಹೊಗಳಿಕೆಯ ದೃಷ್ಟಿಯಲ್ಲಿ ನೋಡಬೇಡಿರಿ.
ಕೆಡುಕನ್ನು ಅರಿಯುವ ಮಾಧ್ಯಮ ಒಂದೇ. ಇತರರು ನಿಮ್ಮೊಂದಿಗೆ ಏನಾದರೂ ಮಾಡಿದರೆ ಅದು ನಿಮಗೆ ಕೆಡುಕೆನಿಸಿದರೆ ಅದು ಕೆಡುಕಾಗಿದೆ. ನೀವು ಇತರರಿಗೆ ಸಂಬಂಧಿಸಿ ಒಂದು ಕಾರ್ಯವೆಸಗುತ್ತೀರಿ. ಅದು ನಿಮಗೆ ಕೆಟ್ಟದೆಂದು ಅನಿಸದಿದ್ದರೂ ಅದನ್ನೇ ನಿಮ್ಮೊಡನೆ ಯಾರಾದರೂ ಮಾಡಿದರೆ ಅದರಿಂದ ನಿಮಗೆ ಕೆಡುಕೆನಿಸಿಸುತ್ತದೆ. ಇದು ಒಳಿತು-ಕೆಡುಕುಗಳನ್ನು ಅರಿಯುವ ಮಾನದಂಡವಾಗಿದೆ. ಇದನ್ನು ಅಲ್ಲಾಹನು ಸಕಲ ಮಾನವರ ಪ್ರಕೃತಿಯಲ್ಲಿ ಇರಿಸಿದ್ದಾನೆ. ನೀವು ಇತರರ ಹಿಂದಾಡುವ ಮೂಲಕ ಬಹಳ ಆನಂದವನ್ನು ಹೊಂದುತ್ತೀರಿ. ಆದರೆ ಯಾರಾದರೂ ನಿಮ್ಮ ಹಿಂದಾಡಿದ್ದಾರೆಂದು ತಿಳಿದು ಬಂದರೆ ನಿಮಗೆ ಅದು ಕೆಡುಕೆನಿಸುತ್ತದೆ ಮತ್ತು ನಿಮ್ಮ ಮನದಲ್ಲಿ ಅವನ ಬಗ್ಗೆ ದ್ವೇಷದ ಭಾವನೆ ಹುಟ್ಟಿಕೊಳ್ಳುತ್ತದೆ. ಇದರಿಂದ ಹಿಂದಾಡುವುದು (ಪರದೂಷಣೆ) ಬಹಳ ಕೆಟ್ಟ ಕೃತ್ಯವಾಗಿದೆ ಎಂದು ಅರಿವಾಗುತ್ತದೆ. ಪರದೂಷಣೆ ಮಾಡುವುದು ಮತ್ತು ಅದನ್ನಾಲಿಸುವುದು ಎರಡೂ ಕೆಟ್ಟ ಕೃತ್ಯಗಳಾಗಿವೆ. ಆದರೆ ಈ ಕೆಡುಕು ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿ ಮಾರ್ಪಟ್ಟಿದೆ; ಹಾಗಾಗಿ ಅದರ ಬಗ್ಗೆ ನಮ್ಮ ಗಮನ ಹರಿಯುವುದೇ ಇಲ್ಲ. ಇಂತಹ ಅನೇಕ ಕೆಡುಕುಗಳು ನಮ್ಮ ವ್ಯಕ್ತಿತ್ವದ ಗೋಡೆ-ಬಾಗಿಲುಗಳಲ್ಲಿ ಕೆಟ್ಟ ಪಾಚಿಯಂತೆ ಅಂಟಿಕೊಂಡಿವೆ. ನಾವು ಅದನ್ನು ಬಣ್ಣದ ಚಿತ್ತಾರವೆಂದು ಭ್ರಮಿಸಿ ಕಡೆಗಣಿಸುತ್ತಿದ್ದೇವೆ. ಯಾವ ರೀತಿ ಭವ್ಯ ಮಹಲುಗಳ ಗೋಡೆಗಳಿಗೆ ಅಂಟಿದ ಪಾಚಿಗಳು ಅದರ ಬಣ್ಣವನ್ನು ಮರೆಮಾಚುತ್ತದೋ ಅದೇ ರೀತಿ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವ ಕೆಡುಕುಗಳು ವ್ಯಕ್ತಿತ್ವದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಯಾವಾಗ ನಮ್ಮ ವ್ಯಕ್ತಿತ್ವಕ್ಕೆ ಅಂಟಿರುವ ಪಾಚಿಗಳನ್ನು ಸ್ವಚ್ಛಗೊಳಿಸಲು ಆರಂಭಿಸುತ್ತೇವೋ ಆವಾಗಿನಿಂದ ನಮ್ಮ ವ್ಯಕ್ತಿತ್ವದ ಪ್ರತಿಷ್ಠೆ ಹೆಚ್ಚತೊಡಗುತ್ತದೆ.
ರಮಝಾನ್ ತಿಂಗಳು ಉನ್ನತಿಯೆಡೆಗೆ ಕೊಂಡೊಯ್ಯುವ ತಿಂಗಳಾಗಿದೆ. ಆದ್ದರಿಂದ ನಾವು ಆ ಔನ್ನತ್ಯಕ್ಕೆ ತಲುಪುವ ಮತ್ತು ಅದರಲ್ಲಿ ಸ್ಥಿರವಾಗಿ ನಿಲ್ಲುವ ಸಂಕಲ್ಪ ತೊಡಬೇಕಾಗಿದೆ. ಆದರೆ ರಮಝಾನ್ ಮುಗಿಯುತ್ತಿದ್ದಂತೆಯೇ ನಮ್ಮ ಹೆಜ್ಜೆಗಳು ಹಿಂದಕ್ಕೆ ಸರಿಯಲು ಆರಂಭವಾಗದಿರಲಿ. ಅದಕ್ಕಾಗಿ ನಮ್ಮ ಹಳೆಯ ರೋಗಗಳಿಂದ ಮುಕ್ತಿಯನ್ನು ಹೊಂದುವ ಅಗತ್ಯವಿದೆ.
ಅಲ್ಲಾಹನು ಈ ರಮಝಾನ್ ತಿಂಗಳನ್ನು ನಮ್ಮ ಕಲ್ಯಾಣದ ತಿಂಗಳಾಗಿ ಮಾರ್ಪಡಿಸಲಿ. (ಆಮೀನ್)
ಕನ್ನಡಾನುವಾದ: ಮುಹಮ್ಮದ್ ಅಶ್ರಫ್ ಬಾವಾ