ಕುರ್‌ಆನ್ ಮತ್ತು ನೀರು: ಒಂದು ಧಾರ್ಮಿಕ ವಿಶ್ಲೇಷಣೆ
ಲೇಖಕರು: ಎಂ. ಅಶೀರುದ್ದೀನ್ ಆಲಿಯಾ ಸಾರ್ತಬೈಲ್
ಕುರ್‌ಆನ್‌ನಲ್ಲಿ ನೀರನ್ನು ಅಲ್ಲಾಹನ ಮಹಾನ್ ಅನುಗ್ರಹಗಳಲ್ಲಿ ಒಂದಾಗಿ ವಿವರಿಸಲಾಗಿದೆ. ಅದೊಂದು ವಿಸ್ಮಯ ಎಂದು ಅಲ್ಲಾಹನು ವಿಶ್ಲೇಷಿಸುತ್ತಾನೆ. ಜೀವಿಯ ಅಸ್ತಿತ್ವ, ಪ್ರಕೃತಿಯ ಸಮತೋಲನ ಮತ್ತು ಮಾನವನ ಬದುಕಿಗೆ ನೀರು ಅತೀ ಅವಶ್ಯಕ ಹಾಗೂ ದೈವಿಕ ಕರುಣೆಯ ಸಂಕೇತವಾಗಿದೆ. ಒಬ್ಬ ಮನುಷ್ಯ ಆಹಾರವಿಲ್ಲದೆ ಒಂದು ತಿಂಗಳವರೆಗೆ ಬದುಕಬಲ್ಲನು, ಆದರೆ ನೀರಿಲ್ಲದೆ ಗರಿಷ್ಠ ಒಂದು ವಾರಕ್ಕಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಸಾಗರಗಳು, ನದಿಗಳು, ಕೆರೆಗಳು, ಬಾವಿಗಳು ಮತ್ತು ಸರೋವರಗಳಲ್ಲಾಗಿ ಹಂಚಿಕೊಂಡಿರುವ ಶೇ. 70 ರಷ್ಟು ನೀರು ಎಲ್ಲಿಂದ ಬಂತು? ಈ ನೀರು ಇತರ ಗ್ರಹಗಳಲ್ಲೇಕೆ ಕಂಡುಬರುವುದಿಲ್ಲ? ನೀರನ್ನು ಮಾತ್ರ ಏಕೆ ಮನುಷ್ಯನಿಗೆ ಜೀವಾಮೃತವಾಗಿ ಮಾಡಲಾಗಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕುರ್‌ಆನ್ ಸಮರ್ಪಕವಾಗಿ ಉತ್ತರಿಸುತ್ತದೆ.
ಕುರ್‌ಆನಿನ ಅಧ್ಯಾಯ 29: ಅಲ್ ಅಂಕಬೂತ್ ಸೂಕ್ತ: 63ರಲ್ಲಿ ಹೀಗೆ ಹೇಳುತ್ತದೆ:
وَلَئِنْ سَأَلْتَهُمْ مَنْ نَزَّلَ مِنَ السَّمَاءِ مَاءً فَأَحْಯَا بِهِ الْأَرْضَ مِنْ بَعْدِ مَوْتِهَا لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ
“ಆಕಾಶದಿಂದ ನೀರನ್ನು ಸುರಿಸಿದವನೂ ಅದರ ಮೂಲಕ, ನಿರ್ಜೀವವಾಗಿ ಬಿದ್ದಿರುವ ಭೂಮಿಯನ್ನು ಸಜೀವಗೊಳಿಸಿದವನೂ ಯಾರೆಂದು ನೀವು ಇವರೊಡನೆ ಕೇಳಿದರೆ, ಇವರು ಖಂಡಿತವಾಗಿಯೂ ಅಲ್ಲಾಹನೆನ್ನುವರು. ‘ಸರ್ವಸ್ತುತಿಗಳೂ ಅಲ್ಲಾಹನಿಗೇ ಮೀಸಲು’ ಎನ್ನಿರಿ. ಆದರೆ ಇವರಲ್ಲಿ ಹೆಚ್ಚಿನವರು ಗ್ರಹಿಸುವುದಿಲ್ಲ”.
ಕುರ್‌ಆನಿನಲ್ಲಿ ಮಳೆಯ ನೀರಿನ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ “ಅನ್ಝಲ” (انزل) ಮತ್ತು “ನಝ್ಝಲ” (نزّل) ಎಂಬ ಪ್ರಯೋಗ ಬಳಸಲಾಗಿದೆ. ‘ನಝ್ಝಲ’ ಎಂದರೆ ಲಕ್ಷಾಂತರ ವರ್ಷಗಳಿಂದ ಒಂದು ಪ್ರಮಾಣದಲ್ಲಿ ಧಾರಾಕಾರವಾಗಿ ಸುರಿದ ಮಳೆ. “ಅನ್ಝಲ” ಎಂದರೆ ಪ್ರಸ್ತುತ ವರ್ಷಗಳಲ್ಲಿ ಹಂತ ಹಂತವಾಗಿ ಸುರಿಯುತ್ತಿರುವ ಮಳೆ ಎಂದು ವ್ಯಾಖ್ಯಾನಿಸಲಾಗಿದೆ.
ಕುರ್‌ಆನಿನ ಅಧ್ಯಾಯ 43, ಅಝ್ಝುಖ್‍ರುಫ್ ಸೂಕ್ತ 11ರಲ್ಲಿ ಹೀಗೆ ಹೇಳಲಾಗಿದೆ:
“ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿದನು ಮತ್ತು ನಾವು ಅದರ ಮೂಲಕ ಮೃತ ಭೂಮಿಯನ್ನು ಜೀವಂತಗೊಳಿಸಿದೆವು. ಇದೇ ರೀತಿಯಲ್ಲಿ ಒಂದು ದಿನ ನೀವು ಭೂಮಿಯಿಂದ ಹೊರತರಲ್ಪಡುವಿರಿ.”
ಇಲ್ಲಿ ಕುರ್‌ಆನ್ ‘ನಝ್ಝಲ’ ಎಂಬ ಪದ ಬಳಸಿದೆ. ಅಂದರೆ ಸಮತೂಕದಲ್ಲಿ ಸುರಿಯುವುದು ಎಂದರ್ಥ. ಅಲ್ಲಾಹನು ಭೂಮಿಯಲ್ಲಿ ಮನುಷ್ಯನನ್ನು ಸೃಷ್ಟಿಸುವ ಮೊದಲೇ ಭೂಮಿ ಆಕಾಶಗಳನ್ನು ಸೃಷ್ಟಿಸಿದ್ದಾನೆಂದು ಕುರ್‌ಆನ್ ಸ್ಪಷ್ಟವಾಗಿ ಹೇಳಿದೆ. ಅಲ್ಲಾಹನು ಸೃಷ್ಟಿಸಿದ ಭೂಮಿ ಆಕಾಶ ಕೂಡಿಕೊಂಡಿದ್ದು ಮತ್ತೆ ಅದನ್ನು ಬೇರ್ಪಡಿಸಿದ ಬಗ್ಗೆಯೂ ವಿವರಿಸುತ್ತಾನೆ.
أَوَلَمْ يَرَ الَّذِينَ كَفَرُوا أَنَّ السَّمَاوَاتِ وَالْأَرْضَ كَانَتَا رَتْقًا فَفَتَقْنَاهُمَا
“ಆಕಾಶಗಳೂ ಭೂಮಿಯೂ ಕೂಡಿಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದೆವು”
ಭೂಮಿಯಲ್ಲಿ ನಡೆದ ಮಹಾಸ್ಫೋಟಕ್ಕೆ ಕುರ್‌ಆನ್ “ರತ್ಕನ್” (رَتْقًا) ಎಂಬ ಪದ ಬಳಸಿದೆ. ಆದ್ದರಿಂದ ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯು ವಾಸಯೋಗ್ಯವಾಗಿರಲಿಲ್ಲ, ಮಳೆಯ ಮೂಲಕ ಅಲ್ಲಾಹನು ಜೀವಂತಗೊಳಿಸಿದನು. ಭೂಮಿಯನ್ನು ಫಲವತ್ತತೆಗೆ ಯೋಗ್ಯವಾಗಿಸಲು ಮಳೆ ಸುರಿಸಿದ್ದಾನೆ ಎಂದು ಕುರ್‌ಆನಿನ 50ನೇ ಅಧ್ಯಾಯ ಅಲ್ ಕಾಫ್ ಸೂಕ್ತ 9ರಲ್ಲಿ ಹೀಗೆ ಹೇಳಲಾಗಿದೆ:
وَنَزَّلْنَا مِنَ السَّಮَاءِ مَاءً مُبَارَكًا
“ನಾವು ಆಕಾಶದಿಂದ ಸುಸಮೃದ್ಧ ನೀರನ್ನಿಳಿಸಿದೆವು”.
ನಿರಂತರವಾಗಿ ಸುರಿದಿದ್ದ ಮಳೆ ಮತ್ತು ಬಿರುಗಾಳಿಯಿಂದಾಗಿ ಭೂಮಿಯು ಇಂದಿನ ರೂಪ ತಾಳಿದೆ ಎಂದು ಆಧುನಿಕ ವಿಜ್ಞಾನವು ಕುರ್‌ಆನಿನ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.
ಇಂದು ಭೂಮಿಯ ಮೇಲೆ ವರ್ಷಿಸುತ್ತಿರುವ ಮಳೆಗೆ “ಅನ್ಝಲ” (أَنْزَلَ) ಎನ್ನಲಾಗುತ್ತದೆ. ಕುರ್‌ಆನ್ ಹೀಗೆನ್ನುತ್ತದೆ; وَاللَّهُ أَنْزَلَ مِنَ السَّمَاءِ مَاءً.
ಮಳೆಯ ಮುಖಾಂತರ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಾ ಕುರ್‌ಆನಿನ ಹಲವು ಕಡೆ “ಅನ್ಝಲ” ಎಂದು ಪ್ರಯೋಗಿಸಿದೆ. ಪ್ರತೀ ವರ್ಷ ಈ ರೀತಿಯ ಮಳೆಯನ್ನು ನಾವು ನೋಡುತ್ತೇವೆ. ಮೇಲಿನ ಸೂಕ್ತದ ವಿವರಣೆ ಹೀಗಿದೆ; “ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದನು ಮತ್ತು ನಿರ್ಜೀವವಾಗಿ ಬಿದ್ದುಕೊಂಡಿದ್ದ ನೆಲದಲ್ಲಿ ಅದರಿಂದಾಗಿ ಜೀವಕಳೆಯನ್ನುಂಟು ಮಾಡಿದನು. (ಇದನ್ನು ನೀವು ಪ್ರತಿಯೊಂದು ಮಳೆಗಾಲದಲ್ಲಿ ನೋಡುತ್ತೀರಿ) ನಿಶ್ಚಯವಾಗಿಯೂ ಆಲಿಸುವವರಿಗೆ ಇದರಲ್ಲಿ ಒಂದು ನಿದರ್ಶನವಿದೆ.” (ಅಧ್ಯಾಯ 16: ಅನ್ನಹ್ಲ್ ಸೂಕ್ತ: 65)
ಈ ಪ್ರಯೋಗವು ನೀರಿನ ವಿಸ್ಮಯ ಮತ್ತು ಅದರಿಂದ ಭೂಮಿಯಲ್ಲಿ ಉಂಟಾಗುವ ಬದಲಾವಣೆ ಹಾಗೂ ಮನುಷ್ಯನಿಗೆ ಅವನ ನಿದರ್ಶನದ ಬಗ್ಗೆ ಪ್ರಜ್ಞೆ ಮೂಡಿಸಲಿಕ್ಕಾಗಿ ಎಂದು ವ್ಯಾಖ್ಯಾನಕಾರರು ವಿವರಿಸುತ್ತಾರೆ. ಕುರ್‌ಆನಿನಲ್ಲಿ ಅಲ್ಲಾಹನ ಎಚ್ಚರಿಕೆಯೊಂದಿಗೆ ಮಳೆಯ ಪ್ರಸ್ತಾಪ ಇರುವ ಹೆಚ್ಚಿನ ಕಡೆಗಳಲ್ಲಿ “ಅನ್ಝಲ” (أَنْزَلَ) ಎಂದು ಪ್ರಯೋಗಿಸಿದೆ. ಆದರೆ, ಲಕ್ಷಾಂತರ ವರ್ಷಗಳ ಹಿಂದೆ “ನಝ್ಝಲ” ರೂಪದಲ್ಲಿ ಸುರಿದ ಮತ್ತು ನಾವು ನೋಡುತ್ತಿರುವ “ಅನ್ಝಲ” ರೂಪದಲ್ಲಿ ಸುರಿಯುತ್ತಿರುವ ಮಳೆಯ ನೀರು ಒಂದೇ ಆಗಿದೆ.
ಕುರ್‌ಆನಿನಲ್ಲಿ ಜಲಚಕ್ರದ ವಿವರಣೆ:
ವೈಜ್ಞಾನಿಕವಾಗಿ ಜಲಚಕ್ರ (Water Cycle) ಎಂದರೆ ಭೂಮಿಯ ಮೇಲೆ ಇರುವ ನೀರು ನಿರಂತರವಾಗಿ ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಮಾರ್ಪಟ್ಟು ಮತ್ತೆ ಭೂಮಿಗೆ ಮರಳುವ ಪ್ರಕ್ರಿಯೆ. ಇದರ ಕುರಿತು ಕುರ್‌ಆನಿನ ವೈಜ್ಞಾನಿಕ ವಿಶ್ಲೇಷಣೆ ಹೀಗಿದೆ;
وَأَنْزَلْنَا مِنَ السَّಮَاءِ مَاءً بِقَدَرٍ فَأَسْكَنَّاهُ فِي الْأَرْضِ
“ಮತ್ತು ನಾವು ಆಕಾಶದಿಂದ ಸರಿಯಾದ ಲೆಕ್ಕ ಪ್ರಕಾರ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಸುರಿಸಿದೆವು ಮತ್ತು ಅದನ್ನು ನೆಲದಲ್ಲಿ ನಿಲ್ಲಿಸಿ ಬಿಟ್ಟೆವು.” (ಅಧ್ಯಾಯ 23: ಅಲ್ ಮುಮಿನೂನ್ ಸೂಕ್ತ: 18) ಅಲ್ಲಾಹನು ಆಕಾಶದಿಂದ ಅಳತೆಯಂತೆ ನೀರನ್ನು ಇಳಿಸಿ ಭೂಮಿಯಲ್ಲಿ ಸಂಗ್ರಹಿಸುತ್ತಾನೆ ಎಂದು ಹೇಳಲಾಗಿದೆ.
ಅಗತ್ಯಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ನೀರನ್ನು ಇಳಿಸಿದ್ದಾನೆ. ಆ ನೀರು ಭೂಮಿಯ ತಗ್ಗು ಪ್ರದೇಶಗಳಲ್ಲಿ ನಿಂತಿತು. ಇದರಿಂದ ಸಾಗರ ಮತ್ತು ಸಮುದ್ರಗಳು, ಭೂಗರ್ಭ ಜಲ (Subterranean water) ಉಂಟಾಯಿತು. ಈಗ ಶೀತೋಷ್ಣ ಮತ್ತು ಗಾಳಿಯ ಮೂಲಕ ಆ ನೀರಿನ ಸಂಕ್ರಮಣವಾಗುತ್ತಿದೆ. ಅದನ್ನು ಮಳೆಯು ಹಿಮ ಪರ್ವತ, ನದಿ ನಾಲೆ, ಸರೋವರ ಮತ್ತು ಬಾವಿಗಳ ಮೂಲಕ ಭೂಮಿಯ ನಾನಾ ಕಡೆಗಳಲ್ಲಿ ಹಬ್ಬಿಸಿ ಅಸಂಖ್ಯಾತ ವಸ್ತುಗಳ ಬೆಳವಣಿಗೆ ಮತ್ತು ವ್ಯವಸ್ಥೆಗೆ ಕಾರಣವಾಗುತ್ತದೆ. ಅನಂತರ ಆವಿಯಾಗಿ ವಾತಾವರಣವನ್ನು ಸೇರಿ ಮೂಲ ಸಂಗ್ರಹಕ್ಕೆ ಮರಳುತ್ತದೆ. ಆರಂಭದಿಂದ ಇಂದಿನ ತನಕ ಈ ಸಂಗ್ರಹದಲ್ಲಿ ಒಂದು ಹನಿಯೂ ಕಡಿಮೆಯಾಗಿಲ್ಲ. ಹಾಗೆಯೇ ಈ ತನಕ ಒಂದು ಹನಿಯನ್ನಾದರೂ ಸೇರಿಸುವ ಅಗತ್ಯವೂ ಬಂದಿಲ್ಲ.
ಇದಕ್ಕಿಂತ ಅಚ್ಚರಿದಾಯಕವಾದ ಇನ್ನೊಂದು ವಿಷಯವಿದೆ – ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ನೀರು ಉತ್ಪಾದನೆಯಾಗುವುದೆಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗೂ ತಿಳಿದಿದೆ. ಸಮುದ್ರಗಳಲ್ಲಿ ನೀರು ತುಂಬಿಕೊಂಡಿವೆ. ಅದರಲ್ಲಿ ಒಂದು ಕಣವೂ ಹೆಚ್ಚುವುದಿಲ್ಲ. ಆರಂಭದಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿಸಿ ಇಷ್ಟೊಂದು ಅಪಾರ ನೀರನ್ನು ಯಾರು ನಿರ್ಮಿಸಿದರು? ಆ ಎರಡು ಅನಿಲಗಳು ಈಗಲೂ ವಾತಾವರಣದಲ್ಲಿ ಧಾರಾಳವಾಗಿದೆ. ಆದರೂ ಈ ಎರಡು ಅನಿಲಗಳು ನಿರ್ದಿಷ್ಟ ಅನುಪಾತದಲ್ಲಿ ಸಂಯೋಜಿಸದಂತೆ ತಡೆದವರಾರು? ನೀರಾವಿಯಲ್ಲಿರುವ ಆಕ್ಸಿಜನ್ ಮತ್ತು ಹೈಡ್ರೋಜನ್‌ಗಳನ್ನು ಪ್ರತ್ಯೇಕವಾಗಿರಿಸಿ ವಾತಾವರಣದ ಆಕ್ಸಿಜನ್ ಮತ್ತು ಹೈಡ್ರೋಜನ್‌ಗಳೊಂದಿಗೆ ಬೆರೆಯದಂತೆ ಮಾಡಿದವರಾರು? (ತಫ್ಹೀಮುಲ್ ಕುರ್ ಆನ್ ಕನ್ನಡ ಭಾವಾನುವಾದ ಭಾಗ-3 ಪುಟ: 240)
ಜಲಚಕ್ರದ ಪ್ರಮುಖ ಹಂತವಾದ ಬಾಷ್ಪೀಕರಣ (Evaporation) ವ್ಯವಸ್ಥೆಯ ಮೂಲಕ ನೀರಿನ ಸಂಗ್ರಹ ಮಾಡುವವನು ಅಲ್ಲಾಹನಾಗಿದ್ದಾನೆಂದು ಹೀಗೆ ವಿವರಿಸಲಾಗಿದೆ;
وَأَرْسَلْنَا الرِّيَاحَ لَوَاقِحَ فَأَنْزَلْنَا مِنَ السَّಮَاءِ مَاءً فَأَسْقَيْنَاكُمُوهُ وَمَا أَنْتُمْ لَهُ بِخَازِنِينَ
“ಫಲಪ್ರದವಾದ ಮಾರುತಗಳನ್ನು ನಾವೇ ಕಳುಹಿಸುತ್ತೇವೆ. ಅನಂತರ ಆಕಾಶದಿಂದ ನೀರನ್ನು ಸುರಿಸುತ್ತೇವೆ ಮತ್ತು ನಿಮ್ಮ ದಾಹವನ್ನು ತಣಿಸುತ್ತೇವೆ. ಈ ಸಂಪತ್ತಿನ ಸಂಗ್ರಾಹಕರು ನೀವಲ್ಲ.” (ಅಧ್ಯಾಯ 15: ಅಲ್ ಹಿಜ್ರ್ ಸೂಕ್ತ: 22)
ನೀರು ಶುದ್ಧವಾಗಿದೆ:
ನೀರನ್ನು ಅಲ್ಲಾಹ್ ಶುದ್ಧೀಕರಣದ ಸಾಧನವಾಗಿಸಿದ್ದಾನೆ ಎಂದು ಹೇಳುತ್ತಾನೆ. ನೀರು ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುವ ಒಂದು ವರದಾನವಾಗಿದೆ.
“…ಆಕಾಶದಿಂದ ಶುದ್ಧ ನೀರನ್ನಿಳಿಸುತ್ತಾನೆ.” (ಅಧ್ಯಾಯ 25: ಅಲ್ ಫುರ್ಕಾನ್ ಸೂಕ್ತ: 48) ಪವಿತ್ರ ಕುರ್‌ಆನಿನಲ್ಲಿ ನೀರನ್ನು “ಮಾ ತಹೂರ್” (ماء طهور) “ಶುದ್ಧ” ಅಥವಾ “ಶುದ್ಧೀಕರಿಸುವ” ನೀರು ಎನ್ನಲಾಗಿದೆ. ನೀರು ಶುದ್ಧೀಕರಿಸುತ್ತದೆ, ಸಸ್ಯಗಳಿಗೆ ಜೀವ ನೀಡುತ್ತದೆ ಮತ್ತು ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಪಾನೀಯವನ್ನು ಒದಗಿಸುತ್ತದೆ. ಸತ್ತ ಭೂಮಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಸ್ವಚ್ಛಗೊಳಿಸಲು ಆಕಾಶದಿಂದ ಶುದ್ಧವಾದ ನೀರನ್ನು ಕಳುಹಿಸಿದನು. ನೀರು ಸ್ವತಃ ಶುದ್ಧವಾಗಿರುವುದಲ್ಲದೆ ಇತರ ವಸ್ತುಗಳನ್ನು ಶುದ್ಧೀಕರಿಸುತ್ತದೆ ಎಂದು ಸೂಚಿಸುತ್ತದೆ. ಮಳೆಯು ಸಮಾಜಕ್ಕೆ ಜೀವ ತುಂಬುತ್ತದೆ. ಸ್ವರ್ಗದಲ್ಲಿ ವಿಶ್ವಾಸಿಗಳಿಗೆ ನೀಡುವಂತಹ ಪಾನೀಯವನ್ನು ವಿವರಿಸಿದ ಕಡೆ ಕೂಡಾ “ತಹೂರ್” ಎಂಬ ಪದವನ್ನು ಅಲ್ಲಾಹನು ಪ್ರಯೋಗಿಸಿದ್ದಾನೆ.
وَسَقَاهُمْ رَبُّهُمْ شَرَابًا طَهُورًا
ಪ್ರಭು ಅವರಿಗೆ ನಿರ್ಮಲವಾದ ಪಾನೀಯವನ್ನು ಕುಡಿಸುವನು. (ಅಧ್ಯಾಯ 76: ಅದ್ದಹ್ರ್ ಸೂಕ್ತ: 21)
ನೀರಿನ ಶುದ್ಧತೆಯು ದೈವಿಕವಾಗಿ ದಯಪಾಲಿಸಲ್ಪಟ್ಟ ಆಶೀರ್ವಾದವಾಗಿದೆ. ಎಲ್ಲಾ ರೀತಿಯ ಕೊಳಕು, ಮಾಲಿನ್ಯಕಾರಕಗಳು, ವಿಷ ವಸ್ತುಗಳಿಂದ, ಧಾರ್ಮಿಕ ಮತ್ತು ಸಾಮಾಜಿಕ ಕಲ್ಮಶಗಳನ್ನು ಶುದ್ಧೀಕರಿಸುವ ಮತ್ತು ಮಾನವರು, ಪ್ರಾಣಿಗಳು, ಮತ್ತು ಸಸ್ಯಗಳಿಗೆ ಜೀವಕಳೆ ನೀಡುವ ಸಾಧನವನ್ನಾಗಿ ಮಾಡಿದ್ದಾನೆ. ಹೀಗಾಗಿ ನೀರು ಮಾನವ ಜೀವನವನ್ನು ಆರೋಗ್ಯಕರವಾಗಿಸುತ್ತದೆ. ಕುರ್‌ಆನ್ ಹೇಳುತ್ತದೆ: “ಅಲ್ಲಾಹನು ತನ್ನ ಕಡೆಯಿಂದ ತೂಕಡಿಕೆಯ ರೂಪದಲ್ಲಿ ನಿಮ್ಮ ಮೇಲೆ ನೆಮ್ಮದಿ ಹಾಗೂ ನಿರ್ಭಯತೆಯನ್ನು ಆಚ್ಛಾದಿಸುತ್ತಿದ್ದ ಹಾಗೂ ನಿಮ್ಮನ್ನು ಶುದ್ಧೀಕರಿಸಲಿಕ್ಕೂ ಶೈತಾನನಿಂದ ಹಾಕಲಾದ ಮಾಲಿನ್ಯವನ್ನು ನಿಮ್ಮಿಂದ ದೂರೀಕರಿಸಲಿಕ್ಕೂ ನಿಮ್ಮ ಹೃದಯಗಳಲ್ಲಿ ಧೈರ್ಯ ತುಂಬಿಸಿ ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕಾಗಿ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ” (ಅಧ್ಯಾಯ 8: ಅಲ್ ಅನ್‌ಫಾಲ್ ಸೂಕ್ತ: 11). ಅಂಗಶುದ್ಧಿ, ಸ್ನಾನದ ಮೂಲಕ ಆಂತರಿಕ ಮತ್ತು ಬಾಹ್ಯ ಶುದ್ಧಿಯನ್ನು ನೀರಿನಿಂದ ಮಾಡಲು ಸಾಧ್ಯವಿದೆ. “ದ್ವೇಷದ ಮತ್ತು ಭಯದ ಸಂದರ್ಭದಲ್ಲಿ ಅಂಗಶುದ್ಧಿ ಮಾಡಬೇಕು” ಎಂದು ಪ್ರವಾದಿ ಬೋಧಿಸಿದ್ದಾರೆ.
ಪ್ರವಾದಿ (ಸ) ರು ಹೀಗೆ ಪ್ರಾರ್ಥಿಸುತ್ತಿದ್ದರೆಂದು ಅಬೂ ಹುರೈರಾ (ರ) ಹೇಳುತ್ತಾರೆ: “ಅಲ್ಲಾಹನೇ, ನನ್ನ ಪಾಪಗಳನ್ನು ನೀರು, ಹಿಮ ಮತ್ತು ಆಲಿಕಲ್ಲುಗಳಿಂದ ತೊಳೆ.” ಇನ್ನೊಂದು ಕಡೆ ಹೀಗೆ ಹೇಳುತ್ತಾರೆ; “ಮೃತ ವ್ಯಕ್ತಿಯನ್ನು ನೀರು, ಹಿಮ ಮತ್ತು ಆಲಿಕಲ್ಲುಗಳಿಂದ ತೊಳೆಯಿರಿ. ಬಿಳಿ ಬಟ್ಟೆಯನ್ನು ಕೊಳಕಿನಿಂದ ಶುದ್ಧೀಕರಿಸಿದಂತೆ ಅವನನ್ನು ಪಾಪಗಳಿಂದ ಶುದ್ಧೀಕರಿಸಿ.” [ಮುಸ್ಲಿಮ್] ನೀರಿನ ಜೊತೆ ಅದರ ಇತರ ರೂಪಗಳನ್ನು ಉಲ್ಲೇಖಿಸಿರುವುದರ ಉದ್ದೇಶ ನೀರಿನ ಎಲ್ಲಾ ನೈಸರ್ಗಿಕ ರೂಪಗಳು ಶುದ್ಧವಾಗಿವೆ ಎಂಬ ಕಾರಣಕ್ಕಾಗಿದೆ.
ಕುರ್‌ಆನ್ 63 ಬಾರಿ “ಅಲ್-ಮಾ” (الماء) ನೀರು ಎಂಬ ಪದವನ್ನು ಉಪಯೋಗಿಸಿದೆ. ಅಲ್ಲಾಹನು ವಿಧಿಸಿದ ಜೀವನದ ಸುಸ್ಥಿರತೆಯಲ್ಲಿ ಶುದ್ಧ ನೀರಿನ ಮಹತ್ವವನ್ನು ಪ್ರತಿಬಿಂಬಿಸುವ ಹಲವಾರು ವಿವರಣೆಗಳು ಕುರ್‌ಆನಿನಲ್ಲಿ ಕಂಡುಬರುತ್ತವೆ. ಇದನ್ನು ಧಾರ್ಮಿಕವಾಗಿ ಶುದ್ಧ, ಆಶೀರ್ವಾದ, ಸಮೃದ್ಧ, ಸಿಹಿ ಮತ್ತು ಸುರಿಯುವ ನೀರು ಎಂದು ವಿವರಿಸಲಾಗಿದೆ.