ಕಳಂಕವಿಲ್ಲದ ಬದುಕು: ಇಮಾಮ್ ಬುಖಾರಿಯವರ ಜೀವನದ ಒಂದು ಝಲಕ್

0
Screenshot 2026-04-09 160428

ಲೇಖಕರು: ಶಂಸೀರ್ ಎಪಿ

ಇಮಾಮ್ ಬುಖಾರಿ ಎಂದೇ ಸುಪ್ರಸಿದ್ಧರಾದ ಮುಹಮ್ಮದ್ ಬಿನ್ ಇಸ್ಮಾಈಲ್(ರ) ರವರ ಸಹೀಹುಲ್ ಬುಖಾರಿ ವಿಖ್ಯಾತಿ ಪಡೆದ ಗ್ರಂಥವಾಗಿದೆ. ಅದರ ವಿಖ್ಯಾತಿಯೂ ವಿಸ್ಮಯವೆನಿಸುವಂತಹದ್ದು. ಕುರ್‌ಆನಿನ ಬಳಿಕ ಆಧಾರ ಪ್ರಮಾಣಗಳಿಗೆ ಬಳಸುವ ಅತಿ ಮಹತ್ತರವಾದ ಗ್ರಂಥ ಯಾವುದೆಂದು ಯಾರಲ್ಲಿಯಾದರೂ ಕೇಳಿದರೆ ವಿದ್ವಾಂಸರ ಸಹಿತ ಜನಸಾಮಾನ್ಯರು ಕೂಡಾ ಸಹೀಹುಲ್ ಬುಖಾರಿ ಎಂಬ ಉತ್ತರ ನೀಡುತ್ತಾರೆ. ಆರು ಲಕ್ಷ ಹದೀಸ್‌ಗಳಲ್ಲಿ ಸುದೀರ್ಘ ಕಾಲದ ಸೂಕ್ಷ್ಮ ಪರಿಶೀಲನೆಯ ಬಳಿಕ ಆಯ್ದ 7397 ಹದೀಸ್‌ಗಳು ಈ ಗ್ರಂಥದಲ್ಲಿ ಸಮಾಹಾರಗೊಂಡಿವೆ. ಈ ಗ್ರಂಥದ ನಿಜವಾದ ಹೆಸರು “ಅಲ್ ಜಮೀಅ ಅಸ್ವಹೀಹ್” ಎಂದಾಗಿದೆ. ನಂತರ ಅವರು ತಮ್ಮ ಜನ್ಮ ನಾಡು ಸೋವಿಯತ್ ರಷ್ಯಾದ ಬುಖಾರವನ್ನು(ಈಗಿನ ಉಝ್ಬೇಕಿಸ್ತಾನದಲ್ಲಿದೆ) ಜೋಡಿಸಿ ಸಹೀಹುಲ್ ಬುಖಾರಿ ಎಂದೇ ಹೆಸರುವಾಸಿಯಾಯಿತು.

ಗ್ರಂಥವು ಇಷ್ಟೊಂದು ಜನಪ್ರಿಯವಾಗಲು, ಜನರಿಗೆ ಹೆಚ್ಚು ಸ್ವೀಕಾರಾರ್ಹವಾಗಲು ಕಾರಣಗಳೇನು? ಎಂದು ಕೇಳಿದರೆ ಅದಕ್ಕೆ ಬಹಳಷ್ಟು ಉತ್ತರಗಳಿವೆ. ಅದರಲ್ಲಿ ಹದೀಸ್‌ನ ಪ್ರಮಾಣಿಕತೆಯ ಬಗ್ಗೆ ವಹಿಸಿದ ಎಚ್ಚರ, ಸೂಕ್ಷ್ಮ ರೀತಿಯ ಪರಿಶೀಲನೆಯೇ ಪ್ರಮುಖ ಮಾನದಂಡವಾಗಿತ್ತು ಎಂಬುದು ಮುಖ್ಯ. ವರದಿಗಾರರಲ್ಲಿರುವ ಗುಣ ಸ್ವಭಾವಗಳ ಸಣ್ಣ ಸಣ್ಣ ಲೋಪದೋಷಗಳು, ಉದಾಹರಣೆಗೆ – ಪ್ರಾಮಾಣಿಕತೆ, ವರ್ತನೆ, ಸ್ವೀಕಾರಾರ್ಹತೆ, ವಿವೇಕತನದ ಪ್ರಜ್ಞೆ, ಜ್ಞಾನ ಮುಂತಾದವುಗಳನ್ನು ಅಳೆದು ತೂಗಿ ನೋಡಿದ ಬಳಿಕ ಹದೀಸ್‌ನ ಅಧಿಕೃತತೆಯ ಬಗ್ಗೆ ಖಾತ್ರಿ ಪಡಿಸಿದ್ದರು. ಹೀಗಿರುವಾಗ ಇಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆಯೊಂದಿದೆ – ಅದು ಇಮಾಮ್ ಬುಖಾರಿಯವರ ವ್ಯಕ್ತಿತ್ವದ ಬಗ್ಗೆ ಇರುವ ಪ್ರಶ್ನೆಯಾಗಿದೆ. ಅವರ ಬದುಕಿನಲ್ಲಿ, ವ್ಯವಹಾರದಲ್ಲಿ, ನಿಷ್ಠೆಯಲ್ಲಿ, ಯಾವುದಾದರೂ ಕುಂದು ಕೊರತೆಗಳು ಕಂಡು ಬಂದಿವೆಯೇ? ಉಂಟು ಎಂದಾದರೆ ಅವರು ಸಂಗ್ರಹಿಸಿದ ಹದೀಸ್‌ಗಳ ಸ್ವೀಕಾರಾರ್ಹತೆಯನ್ನು ಅದು ದುರ್ಬಲಗೊಳಿಸಬಹುದು. ಅವರ ಬದುಕಿನಲ್ಲಿ ಅಂತಹ ಕಳಂಕ ಮೆತ್ತಿದಂತ ಯಾವುದೇ ಘಟನೆ ಸಂಭವಿಸಿಲ್ಲ ಎಂಬುದು ಗಮನಾರ್ಹ. ಇದು ಅಂತಹ ಪ್ರಶ್ನೆಗಳಿಗೆ ನೀಡುವ ಸರಳ ಉತ್ತರವಾಗಿದೆ. ಮಾತ್ರವಲ್ಲ, ವೈಯಕ್ತಿಕವಾಗಿ ಅವರ ಬದುಕಿನ ಸಂಪೂರ್ಣ ಅವಧಿಯು ಅತೀವ ಎಚ್ಚರಿಕೆಯ ಪ್ರಜ್ಞೆಯ ಬದುಕಾಗಿತ್ತು. ಇದಕ್ಕೆ ಪೂರಕವಾದ ಒಂದು ಘಟನೆಯನ್ನು ವಾಚಿಸಿ ನೋಡಿ.

ಒಮ್ಮೆ ಇಮಾಮ್ ಬುಖಾರಿಯವರು ಹಡಗಿನಲ್ಲಿ ಸಂಚರಿಸುತ್ತಿದ್ದರು. ಅವರ ಪ್ರಯಾಣ ಮತ್ತಿತರ ಖರ್ಚು ವೆಚ್ಚಕ್ಕಾಗಿ ಸಾವಿರ ದಿರ್ಹಮ್ ಜೊತೆಗಿರಿಸಿಕೊಂಡಿದ್ದರು. ಹೀಗಿರುವಾಗ ಓರ್ವರು ಇಮಾಮ್ ಬುಖಾರಿಯವರ ಜೊತೆ ಪ್ರಯಾಣದ ಮಧ್ಯೆ ಸೇರಿಕೊಂಡರು. ಈ ಸಂದರ್ಭದಲ್ಲಿ ತಮ್ಮ ಬಳಿ ಇರುವ ಸಾವಿರ ದಿರ್ಹಮ್ ಬಗ್ಗೆ ಆ ಸಹ ಪ್ರಯಾಣಿಕನಲ್ಲಿ ಹೇಳಿಕೊಂಡರು. ಇದನ್ನು ಕಬಳಿಸಬೇಕೆಂಬ ಉದ್ದೇಶದಿಂದ ಆ ಪ್ರಯಾಣಿಕ ಮಧ್ಯರಾತ್ರಿಯಲ್ಲಿ ತನ್ನ ಬಳಿಯಿರುವ ಸಾವಿರ ದಿರ್ಹಮ್ ಯಾರೋ ಕದ್ದಿದ್ದಾರೆ ಎಂದು ಬೊಬ್ಬೆ ಹೊಡೆಯ ತೊಡಗಿದ. ಹಡಗಿನಲ್ಲಿದ್ದ ಪ್ರಯಾಣಿಕರು, ಹಡಗಿನ ನೌಕರರು ಎಲ್ಲರೂ ಎಚ್ಚರಗೊಂಡರು. ಇಮಾಮ್ ಬುಖಾರಿಯವರು ಈ ಸಂಚಿನ ಬಗ್ಗೆ ಅರಿತುಕೊಂಡರು. ತಮ್ಮಲ್ಲಿರುವ ಈ ಸಾವಿರ ದಿರ್ಹಮ್ ಕಬಳಿಸಲು ಈತ ಮಾಡಿದ ಸಂಚಿದು ಎಂಬುದನ್ನು ತಿಳಿದುಕೊಂಡರು. ಹಡಗಿನ ನೌಕರರು ತಪಾಸಣೆ ನಡೆಸುವ ಮೊದಲೇ ಅವರು ಆ ಹಣದ ಚೀಲವನ್ನು ತಂತ್ರದಿಂದ ಸಮುದ್ರಕ್ಕೆ ಎಸೆದರು. ತಪಾಸಣೆಯಲ್ಲಿ ಏನೂ ಸಿಗದೇ ಇದ್ದಾಗ ಬೊಬ್ಬೆ ಹಾಕಿ ನಿದ್ದೆ ಕೆಡಿಸಿದ ಆತನನ್ನು ಎಲ್ಲರೂ ಜರೆದರು. ಹಡಗಿನಿಂದ ಇಳಿಯಲು ಎಲ್ಲರೂ ಸಿದ್ಧರಾಗುತ್ತಿರುವಾಗ ಆ ದುಷ್ಟ ಪ್ರಯಾಣಿಕ ಇಮಾಮ್ ಬುಖಾರಿಯವರ ಬಳಿ ಬಂದು “ನಿಮ್ಮಲ್ಲಿದ್ದ ಆ ಹಣದ ಚೀಲವನ್ನು ಎಲ್ಲಿಟ್ಟಿದ್ದೀರಿ?” ಎಂದು ಕೇಳಿದನು.

ಆಗ ಇಮಾಮ್ ಬುಖಾರಿಯವರು: “ನನ್ನ ಬದುಕು ಪ್ರವಾದಿ ಮುಹಮ್ಮದ್ (ಸ) ರವರ ವಚನಗಳ ಸಂಗ್ರಹಣೆಗಾಗಿ ಮುಡುಪಾಗಿಟ್ಟಿದ್ದೇನೆ. ಜಗತ್ತು ನನ್ನ ಪ್ರಾಮಾಣಿಕತೆಯ, ನನ್ನ ವಿಶ್ವಾಸದ ಬಗ್ಗೆ ಅಂಗೀಕಾರ ನೀಡಿದೆ. ಹೀಗಿರುವಾಗ ನಾನು ಮಾಡದ ಒಂದು ಅಪರಾಧದ ಹೆಸರಲ್ಲಿ ನನಗೆ ಕೆಟ್ಟ ಹೆಸರು ಬರುವುದನ್ನು ನಾನು ಸಹಿಸುವೆನು ಎಂದು ನೀನು ಭಾವಿಸಿರುವೆಯಾ? ಈ ಚಿಲ್ಲರೆ ಹಣದ ಮೊತ್ತಕ್ಕಾಗಿ ಅತ್ಯಂತ ಬೆಲೆಬಾಳುವ ಪ್ರಾಮಾಣಿಕತೆ, ಸತ್ಯಸಂಧತೆಯನ್ನು ಕಳೆದುಕೊಳ್ಳುವೆನು ಎಂದು ಭಾವಿಸಿರುವೆಯಾ?” ಎಂದು ಕೇಳಿದರು.

ಇದು ಇಮಾಮ್ ಬುಖಾರಿಯ ಬದುಕಿನ ಸಣ್ಣ ಒಂದು ಝಲಕ್. ಈ ಕಾರಣದಿಂದಲೇ ಅನುವಾಚಕರೆಲ್ಲರಿಗೂ ಅವರು ಪ್ರೀತಿಪಾತ್ರರಾದ ಸತ್ಯಸಂಧರಾದ ವಿದ್ವಾಂಸರಾಗಿದ್ದರು. ಇಮಾಮ್ ಬುಖಾರಿಯವರ ಬದುಕಿನಲ್ಲಿ ಯಾವುದಾದರೂ ಒಂದು ಸಣ್ಣ ಲೋಪ ದೋಷ ಸಂಭವಿಸಿದ್ದರೆ ಮುಂದಿನ ದಿನಗಳಲ್ಲಿ ಅದೊಂದು ದೊಡ್ಡ ಚರ್ಚಾ ವಿಷಯವಾಗುತ್ತಿತ್ತು. ಆದರೆ ಅವರ ಅತಿ ಗಂಭೀರ ಮತ್ತು ಅಮೋಘವಾದ ಪ್ರಾಮಾಣಿಕತೆಯಿಂದಾಗಿ ಯಾವುದೇ ಸಣ್ಣ ವಿವಾದವೂ ಸಂಭವಿಸದಂತೆ ಬಹಳ ಎಚ್ಚರ ವಹಿಸಿ, ವಿವಾದದ ಎಲ್ಲಾ ಬಾಗಿಲುಗಳನ್ನು ಮುಚ್ಚಿದರು ಎಂಬುದು ಕೂಡಾ ಬಹಳ ವಿಸ್ಮಯಕಾರೀ ಸಂಗತಿಯಾಗಿದೆ.

ಕನ್ನಡಾನುವಾದ: ಸಲೀಮ್ ಬೋಳಂಗಡಿ

Leave a Reply