ಇಸ್ಲಾಮಿಕ್ ಇತಿಹಾಸದಲ್ಲಿ ಮಹಿಳಾ ವಿದ್ವಾಂಸರು ಮತ್ತು ಅವರ ಪ್ರಮುಖ ಪಾತ್ರ 

0
Mahile

ಲೇಖಕಿ: ಜೂಡ್ಎಲ್ಝಿಕ್, ಲಂಡನ್

ಪೀಠಿಕೆ: 

ಇದು ಹತ್ತೊಂಬತ್ತನೇ ಶತಮಾನ, ನಾವು ಯುರೋಪಿಯನ್ ವಿಶ್ವವಿದ್ಯಾಲಯದ ಗ್ರಂಥಾಲಯದ ಸಭಾಂಗಣದಲ್ಲಿ ಕುಳಿತಿದ್ದೇವೆ ಎಂದು ಕಲ್ಪಿಸಿಕೊಳ್ಳಿ. ಈ ಶೈಕ್ಷಣಿಕ ಸ್ಥಳವು ಪ್ರಧಾನವಾಗಿ ಪುರುಷರಿಗೆ ಮಾತ್ರ ಸೀಮಿತವಾಗಿದೆ, ಅದರ ಎತ್ತರದ ಕಪಾಟುಗಳಲ್ಲಿ ಬಹುಪಾಲು ಪುರುಷರು ಬರೆದ ಸಾಹಿತ್ಯವೇ ತುಂಬಿದೆ. ಈ ಕಪಾಟುಗಳ ನಡುವೆ ಇಗ್ನಾಕ್ ಗೋಲ್ಡ್‌ಝಿಹರ್(Ignác Goldziher) ನಿಂತಿದ್ದಾರೆ, ಇವರು ಇಸ್ಲಾಮಿಕ್ ಜ್ಞಾನ ಪರಂಪರೆಯ ಬಗ್ಗೆ ತಮ್ಮ ವಿಮರ್ಶಾತ್ಮಕ ಧೋರಣೆಗೆ ಹೆಸರುವಾಸಿಯಾದ ಹಂಗೇರಿಯನ್ ಓರಿಯಂಟಲಿಸ್ಟ್ ಆಗಿದ್ದಾರೆ. ಈಜಿಪ್ಟಿನ ವಿದ್ವಾಂಸರಾದ ಇಬ್ನ್ ಹಜರ್ ಅಲ್-ಅಸ್ಕಲಾನಿ (ಮರಣ 852/1449) ಬರೆದ ಹದಿನೈದನೇ ಶತಮಾನದ ಅರೇಬಿಕ್ ಗ್ರಂಥವನ್ನು ಪರಿಶೀಲಿಸುತ್ತಿದ್ದಾರೆ. ಕೈಯಲ್ಲಿ ‘ಅಲ್-ದುರರ್ ಅಲ್-ಕಾಮಿನಾ’ ಗ್ರಂಥ ಇದೆ, ಇದು ಇಸ್ಲಾಮಿಕ್ ಇತಿಹಾಸದಲ್ಲಿ ಪ್ರಮುಖ ವಿದ್ವಾಂಸರೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳ ವ್ಯವಸ್ಥಿತ ವಿವರಗಳನ್ನು ಒಳಗೊಂಡಿರುವ ಬಹು-ಸಂಪುಟಗಳ ಜೀವನಚರಿತ್ರೆಯ ವಿಶ್ವಕೋಶ.

ಗೋಲ್ಡ್‌ಝಿಹರ್ ರವರು ‘ಅಲ್-ದುರರ್ ಅಲ್-ಕಾಮಿನಾ’ ಗ್ರಂಥದ ಪುಟಗಳನ್ನು ತಿರುಗಿವುತ್ತಿದ್ದಂತೆ ಚಕಿತರಾಗುತ್ತಿದ್ದಾರೆ! ಇಸ್ಲಾಮಿಕ್ ಪ್ರಪಂಚದ ಬಗ್ಗೆ ತಾವು ಹೊಂದಿದ್ದ ಕಲ್ಪನೆಗೆ ನೇರ ಧಕ್ಕೆ ತರುವಂತಹದ್ದನ್ನು ಅದರಲ್ಲಿ ಎದುರಿಸುತ್ತಾರೆ. ಅವರಿಗೆ ಅಘಾತ ನೀಡಿದ ವಿಷಯವೇನು? ಅದು ಮುಸ್ಲಿಂ ಮಹಿಳಾ ವಿದ್ವಾಂಸರ ದೊಡ್ಡ ಪಟ್ಟಿ. ಏಳನೇ ಶತಮಾನದಿಂದ ಹದಿನೈದನೇ ಶತಮಾನದವರೆಗಿನ ಒಂದಾದ ನಂತರ ಒಂದರಂತೆ, ಮಹಿಳಾ ವಿದ್ವಾಂಸರು ಪಾರಂಪರಿಕ ಇಸ್ಲಾಮಿಕ್ ಜ್ಞಾನದ ಪ್ರಸರಣದಲ್ಲಿ ತಮ್ಮ ಬೌದ್ಧಿಕ ಸ್ಪಷ್ಟತೆ ಮತ್ತು ಪ್ರಭಾವಕ್ಕಾಗಿ ಅಪಾರವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. ಈ ಮಹಿಳೆಯರು ಯಾವುದೋ ಒಂದು ಕಾಲದಲ್ಲಿ ಎಲ್ಲೋ ಕೆಲವೆಡೆ ಕಾಣುವ ಬೆರಳೆಣಿಕೆಯ ಅಪರೂಪದ ವ್ಯಕ್ತಿಗಳಲ್ಲ. ಇಬ್ನ್ ಹಜರ್ ರವರು ಈ ಒಂದೇ ಕೃತಿಯಲ್ಲಿ, ಪಾಂಡಿತ್ಯದ ಉತ್ತುಂಗಕ್ಕೇರಿದ ಸುಮಾರು ಇನ್ನೂರು ಮಹಿಳಾ ವಿದ್ವಾಂಸರ ಪ್ರತ್ಯೇಕ ದಾಖಲೆ ಮಾಡಿದ್ದಾರೆ. ಈ ಮಹಿಳೆಯರಲ್ಲಿ ಅನೇಕರು ಸ್ವಂತ ಇಬ್ನ್ ಹಜರ್ ರವರ ಶಿಕ್ಷಕಿಯರೂ ಆಗಿದ್ದರು.

ಈ ಬಹು-ಸಂಪುಟಗಳ ಗ್ರಂಥದ ಪುಟಗಳಲ್ಲಿ ಡಮಾಸ್ಕಸ್ ಮತ್ತು ಈಜಿಪ್ಟ್‌ನಲ್ಲಿ ಬೋಧಿಸುತ್ತಿದ್ದ ಸಿತ್ ಅಲ್-ವುಜರಾ ಬಿಂತ್ ಉಮರ್ ಇಬ್ನ್ ಅಲ್-ಮುನಝ್ಝಾ (ಮರಣ 716/1316) ರವರಂತಹ ವ್ಯಕ್ತಿಗಳ ಹೆಸರು ಕೆತ್ತಲ್ಪಟ್ಟಿವೆ. ವಿದ್ಯಾರ್ಥಿಗಳು ಬಲು ದೂರದ ಪ್ರದೇಶಗಳಿಂದ ಅವರ ಬಳಿ ಕಲಿಯಲು ಬರುತ್ತಿದ್ದರು. ಅದೇ ರೀತಿ, ನಿಶಾಪುರದ ವಿದ್ವಾಂಸರಾದ ಝೈನಾಬ್ ಬಿಂತ್ ಅಬಿ ಅಲ್-ಖಾಸಿಮ್ ಅಲ್-ಶಿರಿಯಾ (ಮರಣ 615/1218) ಬಗ್ಗೆಯೂ ಗೋಲ್ಡ್‌ಝಿಹರ್ ಅದರಲ್ಲಿ ಓದಿದರು. ಇವರು ಪ್ರಸಿದ್ಧ ವ್ಯಾಖ್ಯಾನಕಾರ ಅಲ್-ಝಮಕ್ಷರಿ (ಮರಣ 538/1143) ರವರಿಂದ ಸೇರಿದಂತೆ ಅಪಾರ ಸಂಖ್ಯೆಯ ‘ಇಜಾಝತ್’ (ಶಿಕ್ಷಣ ನೀಡಲು ಮಾನ್ಯತಾ ಪತ್ರ) ಪಡೆದಿದ್ದರು. ಇಬ್ನ್ ಖಲ್ಲಿಕಾನ್ (ಮರಣ 681/1282) ಅವರಂತಹ ಪ್ರಮುಖ ವಿದ್ವಾಂಸರು ಮತ್ತು ನ್ಯಾಯಶಾಸ್ತ್ರಜ್ಞರು ಇವರ ಬಳಿ ಪರಿಣತಿಯನ್ನು ಪಡೆಯಲು ಉತ್ಸುಕರಾಗಿದ್ದರು. ಅದೇ ಗ್ರಂಥದಲ್ಲಿ, ಆಯಿಶಾ ಬಿಂತ್ ಅಬ್ದ್ ಅಲ್-ಹಾದಿ (ಮರಣ 816/1413) ರವರನ್ನು ಹದೀಸ್‌ನ ಅತ್ಯಂತ ಪ್ರಖ್ಯಾತ ವಿದ್ವಾಂಸರಲ್ಲಿ ಒಬ್ಬರೆಂದು ಪ್ರಶಂಸಿಸಲಾಗಿದೆ. ಜುವೈರಿಯಾ ಬಿಂತ್ ಅಹ್ಮದ್ ಇಬ್ನ್ ಅಲ್-ಹುಸೇನ್ (ಮರಣ 783/1381) ರವರು ತಮ್ಮ ಕಾಲದ ಅತ್ಯಂತ ಪ್ರಮುಖ ಶೈಕ್ಷಣಿಕ ಸ್ಥಳಗಳಲ್ಲಿ ಬೋಧಿಸುತ್ತಿದ್ದರೆಂದು ಉಲ್ಲೇಖಿಸಲಾಗಿದೆ.

ವಿದ್ವತ್ತು ಮತ್ತು ಪಾಂಡಿತ್ಯಕ್ಕಾಗಿ ಮಹಿಳಾ ವಿದ್ವಾಂಸರು ಎಷ್ಟು ಗೌರವಿಸಲ್ಪಟ್ಟಿದ್ದರು ಎಂಬುದು ಅಲ್-ದಹಬಿ (ಮರಣ 748/1348) ರವರ ಜೀವನಚರಿತ್ರೆಯ ಸಾಹಿತ್ಯ ಕೋಶದಲ್ಲಿ ಎದ್ದುಕಾಣುತ್ತದೆ. ಝೈನಬ್ ಬಿಂತ್ ಅಲ್-ಕಮಾಲ್ (ಮರಣ 740/1339) ಕುರಿತಾದ ದಾಖಲೆಯಲ್ಲಿ ಅವರು ಹೀಗೆ ಬರೆಯುತ್ತಾರೆ: “ಅತ್ಯುನ್ನತ ವಿದ್ವತ್ತಿನ ಮಾನ್ಯತೆ(ಇಸ್ನಾದ್‌) ಬೇಕೆನ್ನುವವರು ಆಕೆಯ ಶಿಷ್ಯರಾಗಲಿ. ಆಕೆಯ ಜ್ಞಾನದ ಒಂದು ತುಣುಕಿಗಾಗಿ ಕೈಗೊಳ್ಳುವ ಸುದೀರ್ಘ ಪ್ರಯಾಣವು ಎಂದಿಗೂ ವ್ಯರ್ಥವೆನಿಸದು”. ಬಾಗ್ದಾದ್, ಅಲೆಪ್ಪೊ, ಡಮಾಸ್ಕಸ್ ಮತ್ತು ಅಲೆಕ್ಸಾಂಡ್ರಿಯಾದ ಮಹಾನ್ ಶಿಕ್ಷಕರಿಂದ ರೂಪಿಸಲ್ಪಟ್ಟಿರುವಂತಹ ಝೈನಬ್ ರವರ ಈ ಜ್ಞಾನ ಭಂಡಾರದಿಂದ ಇಸ್ಲಾಮಿಕ್ ವಿದ್ವತ್‌ ಪ್ರಪಂಚದ ವಿಸ್ತಾರವನ್ನು ನಾವು ಗ್ರಹಿಸಬಹುದು. ಝೈನಬ್‌ ರವರ ಜೀವನದ ಕೊನೆಯಲ್ಲಿ, ಸಮಕಾಲೀನರು ಅವರನ್ನು “ಒಂಟೆಯ ಹೊರೆಯಷ್ಟು ಇಜಾಝತ್‌ಗಳನ್ನು(ಮಾನ್ಯತಾ ಪತ್ರ)” ಹೊಂದಿರುವವರು ಎಂದು ಬಣ್ಣಿಸಿದ್ದಾರೆ. ಈ ಹೊಗಲಿಕೆಯು ಅವುಗಳ ಸಂಖ್ಯೆ ಮತ್ತು ಪಾಂಡಿತ್ಯದ ತೂಕ ಎರಡನ್ನೂ ತಿಳಿಸುತ್ತದೆ. ಅವರಿಂದ ನೇರವಾಗಿ ಕಲಿಯಲು ಮತ್ತು ಧರ್ಮಶಾಸ್ತ್ರದ ಉಪನ್ಯಾಸಗಳಿಗೆ ವಿದ್ಯಾರ್ಥಿಗಳು ವಿವಿಧ ನಗರಗಳಿಂದ ಗುಂಪು ಗುಂಪಾಗಿ ಬರುತ್ತಿದ್ದರು. ಅಲ್-ಝಹಬಿ ಮತ್ತು ಇಬ್ನ್ ಹಜರ್ ಅಲ್ಲದೆ, ಸಲಾಹ್ ಅಲ್-ದಿನ್ ಅಲ್-ಸಫಾದಿ (ಮರಣ 764/1363), ತಖಿ ಅಲ್-ದಿನ್ ಅಲ್-ಸುಬ್ಕಿ (ಮರಣ 756/1355) ಮತ್ತು ಪ್ರಸಿದ್ಧ ಇತಿಹಾಸಕಾರ ಇಬ್ನ್ ಬತೂತಾ (ಮರಣ 770/1369) ಸೇರಿದಂತೆ ಪ್ರಮುಖ ವಿದ್ವಾಂಸರಿಗೆ ಝೈನಬ್‌ ರವರು ‘ಇಜಾಝತ್'(ಮಾನ್ಯತಾ ಪತ್ರ) ನೀಡಿದ್ದರು.

ಆರಂಭಿಕ ಇಸ್ಲಾಮಿಕ್ ವಿದ್ವಾಂಸರ ಮಾತುಗಳಿಂದ ಸಾಕ್ಷಿಯಾಗಿರುವಂತೆ, ಮಹಿಳೆಯರು ಕೇವಲ ಇಸ್ಲಾಮಿಕ್ ಜ್ಞಾನಕ್ಕೆ ಕೊಡುಗೆ ನೀಡಲಿಲ್ಲ; ಅವರ ಪಾತ್ರವು ಈ ಕ್ಷೇತ್ರದ ಪಥದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರಿದೆ. ಉದಾಹರಣೆಗೆ, ಅಲ್-ಸುಯೂತಿ (ಮರಣ 911/1505) ರವರು ಅಮಾತ್ ಅಲ್-ಖಾಲಿಕ್ ಅಲ್-ದಿಮಶ್ಖಿಯಾ (ಮರಣ 902/1496) ರವರ ಮರಣದ ನಂತರ, “ಜನರು ಹದೀಸ್‌ನಲ್ಲಿ ಒಂದು ಶ್ರೇಣಿ ಕೆಳಕ್ಕೆ ಬಿದ್ದರು” ಎಂದು ನೋವು ವ್ಯಕ್ತಪಡಿಸಿದ್ದಾರೆ. ಅಂತೆಯೇ, ಒಬ್ಬ ಮಹಿಳಾ ಹದೀಸ್ ವಿದ್ವಾಂಸೆಯ (ಮುಹದ್ದಿತಾ) ಮರಣವು ಈಜಿಪ್ಟ್‌ನಲ್ಲಿ ಹದೀಸ್ ಪ್ರಸರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಅಲ್-ಸಖಾವಿ ಅಭಿಪ್ರಾಯಪಟ್ಟಿದ್ದಾರೆ. ಅಂತಹ ವಿದ್ವಾಂಸರು ಹದೀಸ್ ಕುರಿತಾದ ಬೃಹತ್ ಕೃತಿಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅವರು ಫಿಕ್ಹ್ (ನ್ಯಾಯಶಾಸ್ತ್ರ), ಕುರ್‌ಆನಿಕ್ ಜ್ಞಾನ ಶಾಖೆಗಳು, ಭಾಷೆ ಮತ್ತು ವ್ಯಾಕರಣದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು, ಇದು ಇಸ್ಲಾಮಿಕ್ ಜ್ಞಾನ ಪರಂಪರೆಯ ಅಡಿಪಾಯಕ್ಕೆ ಕೊಡುಗೆ ನೀಡಿತು.

ಇಸ್ಲಾಮಿಕ್ ವಿದ್ವತ್ಪೂರ್ಣ ವಲಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಇತಿಹಾಸದಲ್ಲಿ ಒಂದು ಸವಾಲಾಗಿ ನೋಡದೆ ಸಹಜವೆಂದೇ ಪರಿಗಣಿಸಲಾಗಿತ್ತು ಎಂದು ಈ ಸಾಕ್ಷ್ಯಗಳು ಒತ್ತಿಹೇಳುತ್ತವೆ. ಪವಿತ್ರ ಜ್ಞಾನಕ್ಕೆ ಅವರ ಕೊಡುಗೆಗಳು ಆರಂಭಿಕ ಮಹಿಳಾ ಸಹಚರರು ಮತ್ತು ತಾಬಿಯೀನ್‌ಗಳು (ಅನುಯಾಯಿಗಳು) ಹಾಕಿಕೊಟ್ಟ ಮಾದರಿಯನ್ನು ಅನುಸರಿಸಿದ್ದವು. ಈ ವಿಷಯಕ್ಕೆ ಉದಾಹರಣೆಯಾಗಿ ಅಮ್ರಾ ಬಿಂತ್ ಅಬ್ದ್ ಅಲ್-ರಹಮಾನ್ (ಮರಣ 106/724) ರವರನ್ನು ನೋಡಬಹುದು. ಇಸ್ಲಾಮಿಕ್ ಕಾನೂನಿನಲ್ಲಿ ಇವರು ಪಾಂಡಿತ್ಯ ಗಳಿಸಿದ್ದರು. ಫಿಕ್ಹ್ ಮತ್ತು ಹದೀಸ್‌ನ ಅತ್ಯಂತ ಅಧಿಕೃತ ಪ್ರಸಾರಕರಲ್ಲಿ ಒಬ್ಬರಾದ ವಿಶ್ವಾಸಿಗಳ ತಾಯಿ ಆಯಿಶಾ ಬಿಂತ್ ಅಬಿ ಬಕರ್ (ಮರಣ 58/678) ಅವರಿಂದ ಬೆಳೆಸಲ್ಪಟ್ಟವರು ಮತ್ತು ಶಿಕ್ಷಣ ಪಡೆದವರು. ಪಾರಂಪರಿಕ ಮೂಲಗಳು ಅಮ್ರಾ ಅವರ ವ್ಯಾಪಕ ಪಾಂಡಿತ್ಯ ಮತ್ತು ನ್ಯಾಯಶಾಸ್ತ್ರಜ್ಞರಾಗಿ ಅವರನ್ನು ಯಾವಾಗಲೂ ‘ಹುಜ್ಜಾ’ (ಒಂದು ನಿರ್ಣಾಯಕ ವಿದ್ವತ್ತು) ಎಂದು ಪರಿಗಣಿಸುತ್ತವೆ.

ಹಾಗಾದರೆ, ಇಸ್ಲಾಮಿಕ್ ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಿಸಲ್ಪಟ್ಟಿರುವ ಈ ಐತಿಹಾಸಿಕ ವಾಸ್ತವವು ಮುಸ್ಲಿಂ ಮಹಿಳೆಯ ಬಗ್ಗೆ ನಮ್ಮ ಇಂದಿನ ಸಮಕಾಲೀನ ಕಲ್ಪನೆಗೆ ವಿರುದ್ಧವಾಗಿರುವುದು ಏಕೆ? ಹೆಚ್ಚು ವಿಮರ್ಶಾತ್ಮಕವಾಗಿ ಹೇಳುವುದಾದರೆ, ಆ ಗತಕಾಲವನ್ನು ನಿಖರವಾಗಿ ಮತ್ತು ಸಮಗ್ರತೆಯೊಂದಿಗೆ ಪುನರ್ನಿರ್ಮಿಸಲು ನಮಗೆ ಯಾವ ಅಧಿಕೃತ ಐತಿಹಾಸಿಕ ದಾಖಲೆಗಳು ಅವಕಾಶ ಮಾಡಿಕೊಡುತ್ತವೆ?

ಇತಿಹಾಸದ ಅಳಿಸಿಹಾಕುವಿಕೆ ಮತ್ತು ಅಧೀನ ಚಿತ್ರಣದ ನಿರ್ಮಾಣ

ಪಾಶ್ಚಿಮಾತ್ಯ ವಸಾಹತುಶಾಹಿ ವಾದಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಬಹು ಕಾಲದಿಂದಲೂ ನಿಷ್ಕ್ರಿಯ, ಧ್ವನಿಹೀನ ಮತ್ತು ಸಾಮಾಜಿಕವಾಗಿ ಪ್ರಾಮುಖ್ಯತೆಯಿಲ್ಲದ ವಿಷಯಗಳಾಗಿ ಚಿತ್ರಿಸಲಾಗಿದೆ. ಪೂರ್ವ ಪ್ರದೇಶದ ಜನ ಜೀವನ ಮತ್ತು ಮಹಿಳೆಯರ ಅನುಭವಗಳನ್ನು ದಾಖಲಿಸಿದ ಹಾಗೂ ನಾಟಕೀಯಗೊಳಿಸಿದ ಆರಂಭಿಕ ಯುರೋಪಿಯನ್ ಪ್ರವಾಸಿಗರು, ರಾಜತಾಂತ್ರಿಕರು ಮತ್ತು ಬರಹಗಾರರು ಈ ದೃಷ್ಟಿಕೋನವನ್ನು ರೂಪಿಸಿದ್ದಾರೆ ಮತ್ತು ಬಲಪಡಿಸಿದ್ದಾರೆ. “ತಮ್ಮ ಬಗ್ಗೆ ತಾವೇ ಬರೆಯದವರ ಬಗ್ಗೆ ನಾವು ಬರೆಯುತ್ತೇವೆ” ಎಂದು ಪ್ರತಿಪಾದಿಸುತ್ತಾ, ಮುಸ್ಲಿಂ ಮಹಿಳೆಯನ್ನು ವ್ಯಕ್ತಪಡಿಸಲು ನಿಷ್ಕ್ರಿಯತೆ ಮತ್ತು ಕ್ರಿಯಾಶೀಲತೆಯ ಕೊರತೆಯ ಕಲ್ಪನೆಗಳನ್ನು ಅವರು ಬಳಸಿದರು. ಈ ವಸಾಹತುಶಾಹಿ ಧೋರಣೆಯ ಮುಖ್ಯ ಅಂಶ ಏನಂದರೆ, ಇಸ್ಲಾಮಿಕ್ ಸಂಪ್ರದಾಯವು ಮಹಿಳೆಯರ ಕ್ರಿಯಾಶೀಲತೆಯನ್ನು ತಡೆಯುತ್ತದೆ ಮತ್ತು ಧಾರ್ಮಿಕ ಸಂಪ್ರದಾಯದ ಸಂಕೋಲೆಗಳಿಂದ ಮುಕ್ತರಾಗುವ ಮೂಲಕ ಮಾತ್ರ ಕ್ರಿಯಾಶೀಲತೆಯನ್ನು ಪಡೆಯಬಹುದು ಎಂಬ ಊಹೆಯಾಗಿದೆ. ಅಂತಿಮವಾಗಿ, ಇಸ್ಲಾಮಿಕ್ ಪ್ರಪಂಚದ ಮಹಿಳೆಯರು ಮತ್ತು ಪಾಶ್ಚಿಮಾತ್ಯ ಮಹಿಳೆಯರ ನಡುವೆ ಸ್ಪಷ್ಟವಾದ ಅಸ್ತಿತ್ವ ಮತ್ತು ಜ್ಞಾನದ ವ್ಯತ್ಯಾಸವನ್ನು ಸ್ಥಾಪಿಸಲು ಈ “ವಿಲಕ್ಷಣ ಪೂರ್ವದ”(exotic Orient) ಚಿತ್ರಣಗಳು  ಸಹಕಾರಿಯಾದವು.

ಸಾಮಾಜಿಕವಾಗಿ ಅಧಿಕಾರವನ್ನು ಚಲಾಯಿಸುವ, ನಿರ್ವಹಿಸುವ ಮತ್ತು ಸ್ಥಾಪಿಸುವ ಸಾಮರ್ಥ್ಯದೊಂದಿಗೆ ವ್ಯಕ್ತಿಯ ಬೌದ್ದಿಕ ಸಾಮರ್ಥ್ಯವನ್ನು  ತಳುಕು ಹಾಕಲಾಗುತ್ತದೆ. ಈ ಊಹೆಯಿಂದಾಗಿ ಮುಸ್ಲಿಂ ಮಹಿಳೆಯರು ಸಾಮಾಜಿಕವಾಗಿ ಅಧೀನರು ಎಂಬ ಪೂರ್ವಾಗ್ರಹವು ವಿದ್ವತ್ ವಲಯಗಳಲ್ಲೂ ಹರಡಿತು. ಈ ತಪ್ಪುಕಲ್ಪನೆಯ ಪರಿಣಾಮವಾಗಿ  ಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ದಾಖಲಿಸಿರುವ ಆಧಾರಗಳು ಬಹಳ ಕಡಿಮೆ ಇವೆ, ಹಾಗಾಗಿ ಗಂಭೀರವಾದ ಐತಿಹಾಸಿಕ ಅಧ್ಯಯನ ಅಸಾಧ್ಯ ಎಂಬ ತಪ್ಪು ತಿಳುವಳಿಕೆ ವ್ಯಾಪಕವಾಯಿತು. ಇದರ ಫಲವಾಗಿ, ಇಸ್ಲಾಮಿಕ್ ಇತಿಹಾಸದಲ್ಲಿ ಮಹಿಳೆಯರ ಬಗ್ಗೆ ಇರುವ ಏಕೈಕ ಐತಿಹಾಸಿಕ ದಾಖಲೆಗಳು ಅಂದಿನ ಯುರೋಪಿಯನ್ ಸಂದರ್ಶಕರ ಬರಹಗಳು ಮಾತ್ರ ಎಂಬ ಹೇಳಿಕೆಗಳು ಕ್ರಮೇಣವಾಗಿ ಕೇಳಿಬಂದವು. 

ಇಸ್ಲಾಮ್ ಮತ್ತು ಲಿಂಗತ್ವದ ಕುರಿತಾದ ಇತ್ತೀಚಿನ ಸಾಹಿತ್ಯವನ್ನು ಗಮನಿಸಿದರೆ:‌ ಅವುಗಳಲ್ಲಿ ಪಾರಂಪರಿಕ ಇಸ್ಲಾಮ್ ಮತ್ತು ಅದರ ಸಂಬಂಧಿತ ವಿಷಯಗಳ ʻಇಪ್ಪತ್ತೊಂದನೇ ಶತಮಾನದ ಮರು ಚಿಂತನೆʼ ಅಥವಾ ‘ಸ್ತ್ರೀವಾದಿ ಮರುಚಿಂತನೆ’ ಎಂಬುದು ಒಂದು ಪ್ರಮುಖ ಚರ್ಚೆಯಾಗಿದೆ. ಮಹಿಳೆಯರು ಇತಿಹಾಸದುದ್ದಕ್ಕೂ ವಿದ್ವತ್ ಕ್ಷೇತ್ರದಿಂದ ಹೊರಗಿದ್ದರು ಎಂಬ ಐತಿಹಾಸಿಕವಲ್ಲದ ತರ್ಕದ ಮೇಲೆ ಈ ವಾದವನ್ನು ಮಂಡಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಇಸ್ಲಾಮಿಕ್ ಪರಂಪರೆಯು ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತದೆ ಎಂಬ ಪೂರ್ವಾಗ್ರಹ ಸೃಷ್ಟಿ ಮಾಡಿ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಧಾರ್ಮಿಕ ಶಿಕ್ಷಣ ಅಲಭ್ಯವಾಗಿತ್ತು ಎಂದು ಹೇಳಲಾಗುತ್ತಿದೆ. ಈ ದೃಷ್ಟಿಕೋನದ ಸ್ವಾಭಾವಿಕ ಪರಿಣಾಮವಾಗಿ, ಸಮಕಾಲೀನ ಇಸ್ಲಾಮಿಕ್ ಮಹಿಳಾ ವಿದ್ವತ್ತು ಪಾಶ್ಚಿಮಾತ್ಯ ಸ್ತ್ರೀವಾದ ಮತ್ತು ಇಪ್ಪತ್ತೊಂದನೇ ಶತಮಾನದ ಸುಧಾರಣೆಯ ಪರಿಣಾಮವೆಂದು ಹೇಳಲಾಗುತ್ತದೆ. ಅಲ್ಲದೇ, ಇಸ್ಲಾಮಿಕ್ ಪರಂಪರೆಯ ವಿರುದ್ಧದ ಪ್ರತಿಭಟನೆಯಿಂದಾಗಿ ಸಂಭವಿಸಿರುವುದೆಂದು ಹಣೆಪಟ್ಟಿ ಹಚ್ಚಲಾಗಿದೆ. ಇಸ್ಲಾಮಿಕ್ ಐತಿಹಾಸಿಕ ದಾಖಲೆಗಳ ಸೀಮಿತ ಜ್ಞಾನದಿಂದಾಗಿ ಕೆಲವು ಆಧುನಿಕ ಮುಸ್ಲಿಂ ಸಮುದಾಯಗಳಲ್ಲೂ ಮಹಿಳಾ ವಿದ್ವತ್ತು ಇಸ್ಲಾಮಿಕ್ ಪರಂಪರೆಗೆ ಅನ್ಯವಾದುದು ಎಂದು ಬಿಂಬಿಸುವ ಊಹೆಗಳು  ಹರಡಿದೆ. ಈ ತಪ್ಪು ತಿಳುವಳಿಕೆಯು ಇಂದು ಮುಸ್ಲಿಂ ಸಮುದಾಯಗಳಲ್ಲಿ ಅರ್ಹ ಮಹಿಳಾ ವಿದ್ವಾಂಸರನ್ನು ಗುರುತಿಸುವಲ್ಲಿ ಮತ್ತು ಅವರಿಗೆ ಸರಿಯಾದ ಮಾನ್ಯತೆಯನ್ನು ನೀಡುವಲ್ಲಿ ವಿಫಲವಾಗುವುದು ಸೇರಿದಂತೆ ಗಂಭೀರ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.

ಗತಕಾಲದ ಬಗ್ಗೆ ಇರುವ ಈ ಅಸ್ಪಷ್ಟ ದೃಷ್ಟಿಕೋನಕ್ಕೆ ಪರಿಹಾರವಾಗಿ, ಈ ಲೇಖನವು ಆರಂಭಿಕ ಮುಸ್ಲಿಂ ವಿದ್ವಾಂಸರು ಬರೆದ ಮತ್ತು ನಿರ್ದೇಶಿಸಿದ ಎರಡು ಪ್ರಮುಖ ಸಂಪನ್ಮೂಲಗಳನ್ನು ಎತ್ತಿ ತೋರಿಸುತ್ತದೆ: ಅರೇಬಿಕ್ ಜೀವನಚರಿತ್ರೆಯ ವಿಶ್ವಕೋಶ ಮತ್ತು ಇಜಾಝತ್ ಅಲ್-ಸಮಾ (ಶ್ರವಣ ಪ್ರಸರಣದ ಪ್ರಮಾಣ). ಐತಿಹಾಸಿಕ ವಿದ್ವತ್ ಚಿತ್ರಣಗಳನ್ನು ಪುನರ್ನಿರ್ಮಿಸಲು ಇವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಲು ಪ್ರತಿಯೊಂದನ್ನು ವಿವರವಾಗಿ ಅನ್ವೇಷಿಸಲು ಪ್ರಯತ್ನಿಸಲಾಗಿದೆ. ಜೀವನಚರಿತ್ರೆಯ ವಿಶ್ವಕೋಶಗಳು ಆಯಾ ಕಾಲದ ವಿದ್ವತ್ಪೂರ್ಣ ಜಾಲದ ಬಗ್ಗೆ ವ್ಯಾಪಕ ಮಾಹಿತಿಯನ್ನು ಒದಗಿಸುತ್ತವೆ. ಆದರೆ, ಸಮಾ ಹಸ್ತಪ್ರತಿಗಳು ನಿರ್ದಿಷ್ಟ ಪಠ್ಯಗಳನ್ನು ಕಲಿಸಿದ ಮತ್ತು ಅಧ್ಯಯನ ಮಾಡಿದ ವ್ಯಕ್ತಿಗಳ ಹೆಸರುಗಳನ್ನು ದಾಖಲಿಸುತ್ತವೆ. ಇದು ವಯಸ್ಸು, ಲಿಂಗ, ಸಾಮಾಜಿಕ ರಚನೆಗಳು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಕಲಿಕಾ ಸ್ಥಳಗಳ ಬಳಕೆಗೆ ಸಂಬಂಧಿಸಿದ ವಿದ್ವತ್ಪೂರ್ಣ ಚಟುವಟಿಕೆಗಳನ್ನು ಮ್ಯಾಪ್ ಮಾಡಲು ಅನುವು ಮಾಡಿಕೊಡುತ್ತದೆ. ಇಸ್ಲಾಮಿಕ್ ಇತಿಹಾಸದುದ್ದಕ್ಕೂ ಮುಹದ್ದಿತಾತ್(ಹದೀಸ್ ವಿದ್ವಾಂಸರು), ಫಖಿಹಾತ್(ಮಹಿಳಾ ನ್ಯಾಯಶಾಸ್ತ್ರಜ್ಞರು), ಆಲಿಮಾತ್(ಮಹಿಳಾ ವಿದ್ವಾಂಸರು) ಮತ್ತು ಶೈಖಾತ್(ಮಹಿಳಾ ಉಪದೇಶಕರು) ಇದ್ದಾರೆ ಎಂಬುದಕ್ಕೆ ಬೃಹತ್ ಪ್ರಮಾಣದ ಪುರಾವೆಗಳನ್ನು ನಾವು ಈ ಸಂಗ್ರಹಗಳಲ್ಲಿ ಕಾಣುತ್ತೇವೆ. ಇಸ್ಲಾಮಿಕ್ ವಿದ್ವತ್ಪೂರ್ಣ ಸಂಪ್ರದಾಯದಿಂದ ನೇರವಾಗಿ ಬರುವ ಐತಿಹಾಸಿಕ ದಾಖಲೆಗಳನ್ನು ಉಲ್ಲೇಖಿಸುವುದು ಆಧುನಿಕ ಮುಸ್ಲಿಂ ಓದುಗರಿಗೆ ಉಪಯುಕ್ತವಾಗಬಹುದು. ಏಕೆಂದರೆ, ಮಹಿಳಾ ವಿದ್ವತ್ತು ಆಧುನಿಕ ಮರು ವ್ಯಾಖ್ಯಾನ ಅಥವಾ ಬಾಹ್ಯ ಸೈದ್ಧಾಂತಿಕ ಬಿಂಬಿಸುವಿಕೆಗಿಂತ ಹೆಚ್ಚಾಗಿ ಪಾರಂಪರಿಕ ಸಂಪ್ರದಾಯದಲ್ಲೇ ದೃಢವಾಗಿ ನೆಲೆಗೊಂಡಿದೆ ಎಂಬುದನ್ನು ಇವು ಸ್ಥಾಪಿಸುತ್ತವೆ. ಈ ಕ್ರಮಬದ್ಧವಾದ ವಿಧಾನವನ್ನು ಒಬ್ಬ ಮಹಿಳಾ ವಿದ್ವಾಂಸರಾದ ಫಾತಿಮಾ ಬಿಂತ್ ಸಾದ್ ಅಲ್-ಖೈರ್ (ಮರಣ 600/1203) ಅವರ ಕೇಸ್ ಸ್ಟಡಿಯ ಮೂಲಕ ನೋಡೋಣ:

ಫಾತಿಮಾ ಬಿಂತ್ ಸಾದ್ ಅಲ್ಖೈರ್: ವೃತ್ತಿಜೀವನ 

ಇಸ್ಲಾಮಿಕ್ ಇತಿಹಾಸದಲ್ಲಿ ದಾಖಲಾಗಿರುವ ಸಾವಿರಾರು ಮಹಿಳಾ ವಿದ್ವಾಂಸರಲ್ಲಿ ಫಾತಿಮಾ ಬಿಂತ್ ಸಾದ್ ಅಲ್-ಖೈರ್ ಒಬ್ಬರು. ಇಸ್ಲಾಮಿಕ್ ಜ್ಞಾನವನ್ನು ಪಡೆಯುವ ಮತ್ತು ಹರಡುವ ಉದ್ದೇಶಕ್ಕಾಗಿ ಪ್ರಪಂಚದಾದ್ಯಂತ ಪ್ರಯಾಣಿಸಿದ ಪ್ರಸಿದ್ಧ ಹದೀಸ್ ಪ್ರಸಾರಕಿಯಾಗಿದ್ದರು. ಹಿಜರಿ ಶಕೆ 522 ರಲ್ಲಿ ಕಾಶ್ಗರ್‌ನ ಪೂರ್ವದಲ್ಲಿರುವ ಚೀನಾದಲ್ಲಿ ಜನಿಸಿದರು. “ಗೌರವಾನ್ವಿತ ಮತ್ತು ನೀತಿವಂತ ಶೈಖಾ” ಎಂದು ಬಣ್ಣಿಸಲ್ಪಟ್ಟ ಇವರು, ತಮ್ಮ ತವರಿನಲ್ಲಿ ಜ್ಞಾನದ ಅನ್ವೇಷಣೆಯನ್ನು ಪ್ರಾರಂಭಿಸಿದರು. ನಂತರ ಬುಖಾರಾ, ನಿಶಾಪುರ್ ಮತ್ತು ಇಸ್ಫಹಾನ್‌ನಂತಹ ಪ್ರಮುಖ ಬೌದ್ಧಿಕ ಕೇಂದ್ರಗಳಿಗೆ ವಿಸ್ತರಿಸಿದರು. ಆನಂತರ ಬಾಗ್ದಾದ್, ಡಮಾಸ್ಕಸ್ ಮತ್ತು ಕೈರೋ ಮುಂತಾದ ಪ್ರದೇಶಗಳಿಗೆ ತಮ್ಮ ಪಯಣ ಮುಂದುವರಿಸಿದರು. ಹದೀಸನ್ನು ವ್ಯಾಪಕವಾಗಿ ಬೋಧಿಸಿದರು ಮತ್ತು ತಾವು ಇನ್ನೂ ಭೇಟಿ ನೀಡದ ದೇಶಗಳಿಗೆ ತಮ್ಮ ಜ್ಞಾನವನ್ನು ಕೊಂಡೊಯ್ದ ವಿದ್ಯಾರ್ಥಿಗಳಿಗೆ ‘ಇಜಾಝತ್'(ಮಾನ್ಯತೆ) ನೀಡಿದರು. ತಂದೆ ಸಾದ್ ಅಲ್-ಖೈರ್ (ಮರಣ 541/1146) ಒಬ್ಬ ಪ್ರತಿಷ್ಠಿತ ವಿದ್ವಾಂಸರು, ನ್ಯಾಯಶಾಸ್ತ್ರಜ್ಞರು ಮತ್ತು ಮುಹದ್ದಿಸ್ ಆಗಿದ್ದರು. ಫಾತಿಮಾ ರವರು ತಮ್ಮ ಕಾಲದ ಅತ್ಯಂತ ಅರ್ಹ ಶೈಖಾಗಳು (ಮಹಿಳಾ ವಿದ್ವಾಂಸರು) ಮತ್ತು ಶೈಖ್‌ಗಳ (ಪುರುಷ ವಿದ್ವಾಂಸರು) ಅಡಿಯಲ್ಲಿ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ತಂದೆಯು ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿಯೇ ಆಕೆಯೊಂದಿಗೆ ದೀರ್ಘ ಪ್ರಯಾಣಗಳನ್ನು ಕೈಗೊಳ್ಳಬೇಕಾದಾಗಲೂ ಅವರು ಹಿಂದೆ ಸರಿಯಲಿಲ್ಲ.

ಪವಿತ್ರ ಜ್ಞಾನವನ್ನು ಪಡೆಯುವುದು ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಕಡ್ಡಾಯ ಕರ್ತವ್ಯ ಎಂದು ಪರಿಗಣಿಸುವ ಇಸ್ಲಾಮಿಕ್ ಪರಂಪರೆಗೆ ಅನುಗುಣವಾಗಿ, ಸಾದ್ ಅಲ್-ಖೈರ್ ರವರು ಇಸ್ಫಹಾನ್‌ನ ಪ್ರಸಿದ್ಧ ವಿದ್ವಾಂಸರಾದ ಫಾತಿಮಾ ಅಲ್-ಜೌಝಾದಾನಿಯ್ಯಾ (ಮರಣ 524/1129) ರವರ ಬಳಿ ಕಲಿಯಲು ತಮ್ಮ ಮಗಳನ್ನು ಕರೆದೊಯ್ದರು. ಅಲ್-ಝಹಾಬಿ ರವರು ಅಲ್-ಜೌಝಾದಾನಿಯ್ಯಾ ಅವರನ್ನು “ಆಕೆಯ ಕಾಲದ ಅತ್ಯುತ್ತಮ ಹದೀಸ್ ನಿರೂಪಕಿ” ಎಂದು ಬಣ್ಣಿಸಿದ್ದಾರೆ. ಈ ಮಹಾನರ ಮಾರ್ಗದರ್ಶನದಲ್ಲಿ, ಫಾತಿಮಾ ಬಿಂತ್ ಸಾದ್ ಅಲ್-ಖೈರ್ ರವರು ಅಬು ಖಾಸಿಮ್ ಸುಲೈಮಾನ್ ಅಲ್-ತಬ್ರಾನಿ (ಮರಣ 360/918) ರವರ ಮೂವತ್ತೇಳು ಮುದ್ರಿತ ಸಂಪುಟಗಳನ್ನೊಳಗೊಂಡ ‘ಅಲ್-ಮುಜಮ್ ಅಲ್-ಕಬೀರ್’ ಮತ್ತು ‘ಅಲ್-ಮುಜಮ್ ಅಲ್-ಸಗೀರ್’ ಗ್ರಂಥವನ್ನು ಅಧ್ಯಯನ ಮಾಡಿದರು. ಇವುಗಳನ್ನು ಇಬ್ನ್ ಅಸಾಕಿರ್ (ಮರಣ 571/1176) ವರೆಗಿನ ಅವರ ‘ಇಸ್ನಾದ್’ (ಅಧಿಕೃತ ಸರಣಿ) ನಲ್ಲಿ ಕಾಣಬಹುದು. ಈ ಪಠ್ಯಗಳಲ್ಲಿ ಪರಿಣತಿ ಪಡೆದ ನಂತರ, ಅವರು ಹೊಸ ಪ್ರದೇಶಗಳಲ್ಲಿ ಅವುಗಳನ್ನು ಪ್ರಸಾರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಅಲ್-ಜೌಝಾದಾನಿಯ್ಯಾ ಅವರ ಅಡಿಯಲ್ಲಿ ಎರಡು ವರ್ಷಗಳ ಅಧ್ಯಯನದ ನಂತರ, ತಮ್ಮ ತಂದೆಯ ಜೊತೆಯಲ್ಲಿ ಬಾಗ್ದಾದ್‌ಗೆ ವಲಸೆ ಬಂದು ಹದಿನೆಂಟು ಗಮನಾರ್ಹ ವಿದ್ವಾಂಸರ ಅಡಿಯಲ್ಲಿ ಅಧ್ಯಯನ ಮಾಡಿದರು. ಈ ಪಟ್ಟಿಯಲ್ಲಿ ಮಹಿಳಾ ವಿದ್ವಾಂಸಳಾದ ಕರೀಮಾ ಬಿಂತ್ ಅಲ್-ಹಾಫಿಝ್ ಅಬಿ ಬಕರ್ ಇಬ್ನ್ ಅಲ್-ಖಾಝಿಬಾ (ಮರಣ 527/1133), ಅಲ್ಲದೇ, ಯಹ್ಯಾ ಇಬ್ನ್ ಅಲ್-ಬನ್ನಾ (ಮರಣ 531/1136), ಅಬು ಅಲ್-ಖಾಸಿಮ್ ಇಬ್ನ್ ಅಲ್-ಹುಸೇನ್ (ಮರಣ 525/1130), ಮತ್ತು ಹಿಬತುಲ್ಲಾ ಇಬ್ನ್ ಅಹ್ಮದ್ ಇಬ್ನ್ ಅಲ್-ತಬ್ಬರ್ (ಮರಣ 531/1136) ಸೇರಿದ್ದಾರೆ. ಬಾಗ್ದಾದ್, ಇಸ್ಫಹಾನ್ ಮತ್ತು ಖುರಾಸಾನ್‌ನ ವಿವಿಧ ವಿದ್ವಾಂಸರಿಂದ ‘ಇಜಾಝತ್'(ಮಾನ್ಯತೆ) ಪಡೆದರು. ನಂತರ ಅವರು ತಮ್ಮ ಪತಿ ಇಮಾಮ್ ಜೈನ್ ಅಲ್-ದಿನ್ (ಮರಣ 599/1202) ಅವರೊಂದಿಗೆ ಕೈರೋದಲ್ಲಿ ನೆಲೆಸಿದರು. ಅನೇಕ ವಿದ್ಯಾರ್ಥಿಗಳು ವಿಶೇಷವಾಗಿ ಅವರ ಬಳಿ ಕಲಿಯಲು ಪ್ರಯಾಣ ಬೆಳೆಸುತ್ತಿದ್ದರು ಮತ್ತು ಅಲ್ಲಿ ಅವರು ಹದೀಸ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ನಿರೂಪಿಸಿದ್ದಾರೆ ಎಂದು ವ್ಯಾಪಕವಾಗಿ ದಾಖಲಿಸಲಾಗಿದೆ.

ಇಸ್ಲಾಮಿಕ್ ಜ್ಞಾನ ಶಾಖೆಗಳಲ್ಲಿ ಅವರು ಅಧ್ಯಯನ ಮಾಡಿದ ಪಠ್ಯಗಳನ್ನು ಅವಲೋಕನವು ಅವರ ಜ್ಞಾನದ ಆಳ ಮತ್ತು ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ. ಉದಾಹರಣೆಗೆ, ವರ್ಷ 529/1134 ರಲ್ಲಿ, ಅವರು ಶೈಖ್ ಮನ್ಸೂರ್ ಮುಹಮ್ಮದ್ ಇಬ್ನ್ ಅಬ್ದ್ ಅಲ್-ಮಲಿಕ್ ಅಲ್-ಖೈರೂನ್ (ಮರಣ 539/1144) ಅವರಿಂದ ಅಲಿ ಇಬ್ನ್ ಉಮರ್ ಅಲ್-ದಾರಕುತ್ನಿ (ಮರಣ 385/995) ಅವರ ‘ದುಅಫಾ ವ-ಲ್-ಮತ್ರುಕಿನ್’ ಗ್ರಂಥ ಅಧ್ಯಯನ ಮಾಡಿದರು. ಅಲ್-ದಾರಕುತ್ನಿ ಅವರ ಈ ಕೃತಿಯು ಹದೀಸ್ ವಿಮರ್ಶೆ ಮತ್ತು ದೃಢೀಕರಣದ  ಶಾಖೆಯಲ್ಲಿ ಅತ್ಯಂತ ಪ್ರಮುಖ ಪಠ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಈ ಪಠ್ಯದ ಜ್ಞಾನವನ್ನು ಗಳಿಸುವುದು ಅವರು ಹದೀಸ್ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಉದಾಹರಣೆಯಾಗಿದೆ. ಇದು ಕೇವಲ ಪ್ರಸರಣಕ್ಕಿಂತ ಮೀರಿದ ಕಟ್ಟುನಿಟ್ಟಾದ ಬೌದ್ಧಿಕ ಮೌಲ್ಯಮಾಪನದ ಅಗತ್ಯವಿರುವ ವಿಜ್ಞಾನವಾಗಿದೆ. ಅನೇಕ ಮಹಿಳಾ ಹದೀಸ್ ಪ್ರಸಾರಕರಂತೆ (ಮುಹದ್ದಿತಾತ್), ಫಾತಿಮಾ ಬಿಂತ್ ಸಾದ್ ಅಲ್-ಖೈರ್ ಅವರು ‘ಇಲ್ಮ್ ಅಲ್-ದಿರಾಯಾ’ (ಜ್ಞಾನಗ್ರಹಣ ಶಾಸ್ತ್ರ) ದಲ್ಲಿ ವಿಮರ್ಶಾತ್ಮಕವಾಗಿ ತೊಡಗಿಸಿಕೊಂಡಿದ್ದರು. ಈ ವಿಷಯದ ಪ್ರಮಾಣೀಕೃತ ವಿದ್ವಾಂಸರಾಗಿ, ನಂತರ ಕೈರೋದಲ್ಲಿ ಅದರ ಬೋಧನೆ ಶುರು ಮಾಡಿದರು. ಅಬು ಅಲ್-ಖಾಸಿಮ್ ಅಲ್-ಮುಬಾರಕ್ ಇಬ್ನ್ ಹಸನ್ (ಮರಣ 372/982)ರ ಅಡಿಯಲ್ಲಿ ಹದೀಸ್ ಅಧ್ಯಯನದ ನೀತಿ ಮತ್ತು ನಡಾವಳಿಗಳ ಕುರಿತಾದ ಖತೀಬ್ ಅಲ್-ಬಾಗ್ದಾದಿ (ಮರಣ 463/1071) ರವರ ಮೂಲಭೂತ ಕೃತಿಯಾದ ‘ಅಲ್-ಜಾಮಿ ಅಲ್-ಅಖ್ಲಾಕ್ ಅಲ್-ರಾವಿ ವ-ಆದಾಬ್ ಅಲ್-ಸಾಮಿ’ ಅನ್ನು ಸಹ ಅಧ್ಯಯನ ಮಾಡಿದರು.

ಫಾತಿಮಾ ಬಿಂತ್ ಸಾದ್ ಅಲ್-ಖೈರ್ ರವರು ಹದೀಸ್‌ಗಳನ್ನು “ವ್ಯಾಪಕವಾಗಿ” ವರದಿ ಮಾಡಿದ್ದಾರೆ ಎಂದು ಬಣ್ಣಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಅಲ್-ತಬ್ರಾನಿಯವರ ‘ಅಲ್-ಕಬೀರ್’, ಮತ್ತು ಅಲ್-ತಿರ್ಮಿದಿ, ಇಬ್ನ್ ಮಾಜಾ, ಅಬು ಯಾಲಾ ಮತ್ತು ಮುಸ್ಲಿಂ ಅವರ ಹದೀಸ್ ಸಂಕಲನಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಅಲ್-ಖರ್ರಾಖಿ (ಮರಣ 334/945), ಅಲ್-ಕುದೂರಿ (ಮರಣ 428/1037), ಅಲ್-ಅಬ್ನೂಸಿ (ಮರಣ 457/1065) ಮತ್ತು ಅಬಿ ಯಾಲಾ ಅಲ್-ಮಾವ್ಸಿಲಿ (ಮರಣ 307/919) ರವರ ‘ಮುಸ್ನಾದ್’ ಸೇರಿದಂತೆ ವಿವಿಧ ಹದೀಸ್‌ಗಳನ್ನು ಮತ್ತು  ವಿಷಯಗಳನ್ನು ಫಾತಿಮಾ ದಾಟಿಸಿದ್ದಾರೆ. ನ್ಯಾಯಶಾಸ್ತ್ರಜ್ಞ ಇಸ್ಹಾಕ್ ಇಬ್ನ್ ಮುಹಮ್ಮದ್ ಅಲ್-ಹಮಾತಾನಿ (ಮರಣ 623/1226), ಅಬ್ದುಲ್ಲಾ ಇಬ್ನ್ ಇಬ್ರಾಹಿಂ ಇಬ್ನ್ ಯೂಸುಫ್ ಅಲ್-ಮಿಸ್ರಿ (ಮರಣ 592/1196), ಮತ್ತು ಅಬ್ದ್ ಅಲ್-ರಹಮಾನ್ ಇಬ್ನ್ ಮಕ್ಕಿ ಅಲ್-ಸಾದಿ (ಮರಣ 615/1218) ಸೇರಿದಂತೆ ಅನೇಕ ಪ್ರಮುಖ ವಿದ್ವಾಂಸರು ಫಾತಿಮಾ ರವರ ಅಡಿಯಲ್ಲಿ ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿಯಾಗಿ, ಅಬು ಮೂಸಾ ಇಬ್ನ್ ಅಲ್-ಹಾಫಿಝ್ (ಮರಣ 629/1232), ಮುಹಮ್ಮದ್ ಇಬ್ನ್ ಅಬಿ ಅಲ್-ಖಾಸಿಮ್ ಅಲ್-ಶಾತಿಬಿ (ಮರಣ 590/1194), ಮತ್ತು ಅಬ್ದ್ ಅಲ್-ರಹಮಾನ್ ಇಬ್ನ್ ಮುಕರ್ರಬ್ (ಮರಣ 643/1245) ರವರಂತಹವರು ಫಾತಿಮಾ ರವರಿಂದ ವರದಿ ಮಾಡಿದ್ದಾರೆ. ಫಾತಿಮಾ ರವರು ಎಪ್ಪತ್ತೆಂಟು ವರ್ಷಗಳ ಕಾಲ ಬದುಕಿದ್ದರು ಮತ್ತು ಹಿಜರಿ ಶಕೆ 600 ರಲ್ಲಿ ತಮ್ಮ ಮರಣದ ಮೊದಲು ತಮ್ಮಿಂದ ಜ್ಞಾನ ಪಡೆದ ಕೊನೆಯವರಾದ ಶೈಖ್ ಅಹ್ಮದ್ ಇಬ್ನ್ ಅಬಿ ಅಲ್-ಖೈರ್ ಸಲಾಮಾ (ಮರಣ 678/1279) ಅವರಿಗೆ ‘ಇಜಾಝ'(ಮಾನ್ಯತೆ) ನೀಡಿದರು.

ಫಾತಿಮಾ ರವರ ವೃತ್ತಿಜೀವನದ ಪಥವು ಪ್ರಸಿದ್ಧ ವಿದ್ವಾಂಸರ ಅಡಿಯಲ್ಲಿ ಅಧ್ಯಯನ, ಜ್ಞಾನವನ್ನು ಪಡೆಯಲು ಮತ್ತು ದಾಟಿಸಲು ಬಲು ದೂರದವರೆಗೆ ವ್ಯಾಪಕ ಪ್ರಯಾಣ ಮತ್ತು ಆರಂಭಿಕ ಇಸ್ಲಾಮಿಕ್ ಶಿಕ್ಷಣಕ್ಕೆ ಅವರ ತಂದೆಯ ಸಕ್ರಿಯ ಬೆಂಬಲದ ಮೂಲಕ ಪಾಂಡಿತ್ಯದ ಕಡೆಗೆ ಅವರ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫಾತಿಮಾ ರವರ ಅರ್ಹತೆಗಳು, ಸಂಚಾರ ಮತ್ತು ಇವರ ಶಿಕ್ಷಕರನ್ನು ಒಳಗೊಂಡ ಇಂತಹ ವಿವರವಾದ ವಿದ್ವತ್ಪೂರ್ಣ ದಾಖಲೆಯು ಬೆಳಕಿಗೆ ಬಂದಿದ್ದು ಹೇಗೆ? ಜೀವನಚರಿತ್ರೆಯ ವಿಶ್ವಕೋಶಗಳು ಮತ್ತು ‘ಸಮಾ’ ದಾಖಲೆಗಳ ಸೂಕ್ಷ್ಮ ಅವಲೋಕನದ ಮೂಲಕ ನಿಖರವಾದ ವಿದ್ವತ್ಪೂರ್ಣ ಚಿತ್ರಣವು ಹೊರಹೊಮ್ಮುತ್ತದೆ. ಇವೆರಡನ್ನೂ ಪರಿಶೀಲಿಸೋಣ.

ದೃಢೀಕರಣದ ಪ್ರೇರಣೆ: ಜೀವನಚರಿತ್ರೆಯ ವಿಶ್ವಕೋಶಗಳ ಪ್ರಕಾರ

ಆರಂಭಿಕ ಮುಸ್ಲಿಂ ವಿದ್ವಾಂಸರು ಹದೀಸ್‌ಗಳನ್ನು ದೃಢೀಕರಿಸುವ ಪ್ರಯತ್ನದಲ್ಲಿ ಇಸ್ಲಾಮಿಕ್ ಗ್ರಂಥಾಲಯಗಳ ಕಪಾಟುಗಳು ವ್ಯಾಪಕವಾದ ಜೀವನಚರಿತ್ರೆಯ ಸಾಹಿತ್ಯದಿಂದ ತುಂಬಿತು. ವಿದ್ವತ್ ವಲಯದಲ್ಲಿ ವಿದ್ವಾಂಸರು ಹದೀಸ್‌ನ ಭಾಷಾ, ದೇವತಾಶಾಸ್ತ್ರ, ವ್ಯಾಖ್ಯಾನ ಮತ್ತು ಕಾನೂನು ಆಯಾಮಗಳನ್ನು ಪರಿಶೋಧಿಸಿದರೆ, ಅದರ ಪ್ರಸರಣ, ಸಂಕಲನ ಮತ್ತು ದೃಢೀಕರಣದ ವಿಧಾನಗಳಿಗೂ ಅತ್ಯಂತ ಪ್ರಮುಖವಾದ ಶೈಕ್ಷಣಿಕ ಪ್ರಯತ್ನವನ್ನು ಸಮರ್ಪಿಸಲಾಯಿತು. ಒಂದು ಹದೀಸ್‌ನ ‘ಇಸ್ನಾದ್’ (ವರದಿಗಾರರ ಸರಣಿ) ಅನ್ನು ಸ್ಥಾಪಿಸಲು, ಆ ಸರಣಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ವಿದ್ವಾಂಸರು ಪರಿಶೀಲಿಸಬೇಕಾಗಿತ್ತು. ಆ ಪರಿಣಾಮವಾಗಿ, ಹದೀಸ್ ತಲುಪಿಸಿದವರ ಜನನ ಮತ್ತು ಮರಣದ ದಿನಾಂಕಗಳು, ಪ್ರಯಾಣದ ಇತಿಹಾಸ, ಶಿಕ್ಷಕರು, ವಿದ್ಯಾರ್ಥಿಗಳು, ಅವರ ಪರಿಣತಿ ಮತ್ತು ಚಾರಿತ್ರ್ಯದ ಬಗ್ಗೆ ವಿವರಗಳನ್ನು ದಾಖಲಿಸಲು ವಿಶ್ವಕೋಶದಂತಹ ಬೃಹತ್ ಕೃತಿಗಳನ್ನು ರಚಿಸಲಾಯಿತು. ಹದೀಸ್ ವರದಿಯ ಸರಪಳಿಯಲ್ಲಿ ನಿರಂತರತೆಯನ್ನು (ಅಲ್-ಇತ್ತಿಸಾಲ್) ಸ್ಥಾಪಿಸಲು ಮತ್ತು ಪ್ರತಿಯೊಬ್ಬ ವರದಿಗಾರನ ವಿಶ್ವಾಸಾರ್ಹತೆ ಹಾಗೂ ಸಮಗ್ರತೆಯನ್ನು ದೃಢೀಕರಿಸಲು ಇಂತಹ ಮಾಹಿತಿಯು ಅತ್ಯಗತ್ಯವಾಗಿತ್ತು.  ಹೀಗೆ, ಇಸ್ನಾದ್ ಸರಪಳಿಗಳ ನಡುವಿನ ಸಂಬಂಧಗಳ ಸಿಂಧುತ್ವವನ್ನು (validity) ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಕಾಲ ಮತ್ತು ದೇಶಗಳಾದ್ಯಂತ ಪವಿತ್ರ ಜ್ಞಾನವು ಸಾಗಿಬಂದ ಹಾದಿಯನ್ನು ಜೀವನಚರಿತ್ರೆಯ ಕೋಶಗಳಲ್ಲಿ ಎಚ್ಚರಿಕೆಯಿಂದ ದಾಖಲಿಸಿ ಸಂರಕ್ಷಿಸಲಾಯಿತು. 

ಅರೇಬಿಕ್ ಜೀವನಚರಿತ್ರೆಯ ಗ್ರಂಥಗಳು ಪ್ರಮುಖವಾಗಿ ಪ್ರವಾದಿ ಮುಹಮ್ಮದ್‌(ಸ) ರವರ ಕಾಲದಿಂದ ಹಿಡಿದು ಜೀವನಚರಿತ್ರೆಕಾರನ ಕಾಲದವರೆಗೆ ಬದುಕಿದ್ದ ಪ್ರಮುಖ ವ್ಯಕ್ತಿಗಳನ್ನು ದಾಖಲಿಸುವ ಹಳೆಯ ಸೂಚಿಕೆಗಳಾಗಿ ರೂಪಿಸಲ್ಪಟ್ಟಿವೆ. ಈ ಕೃತಿಗಳನ್ನು ವೈಯಕ್ತಿಕ ಹೆಸರು, ಭೌಗೋಳಿಕ ಮೂಲ, ಕಾಲಾನುಕ್ರಮದ ವಯಸ್ಸು ಅಥವಾ ಕೆಲವು ಸಂದರ್ಭಗಳಲ್ಲಿ ಅವರ ಗಮನಾರ್ಹತೆಯ ಆಧಾರದ ಮೇಲೆ ವ್ಯವಸ್ಥಿತವಾಗಿ ಸಂಘಟಿಸಲಾಗಿದೆ. ಪ್ರಸ್ತುತ ಲಭ್ಯವಿರುವ ಅತ್ಯಂತ ಹಳೆಯ ಜೀವನಚರಿತ್ರೆಯ ಸಂಗ್ರಹಗಳಲ್ಲಿ ಇಬ್ನ್ ಸಾದ್ (ನಿಧನ 230/845) ಅವರ ‘ಕಿತಾಬ್ ಅಲ್-ತಬಕಾತ್ ಅಲ್-ಕಬೀರ್’ ಕೂಡ ಒಂದು. ಜ್ಞಾನ ಪ್ರಸರಣದ ಪ್ರತಿನಿಧಿಗಳ ಬಗ್ಗೆ ಜೀವನಚರಿತ್ರೆಕಾರರು ಸಂರಕ್ಷಿಸಿರುವ ಈ ವಿವರವಾದ ದಾಖಲೆಗಳು ಇಸ್ಲಾಮಿಕ್ ಇತಿಹಾಸದುದ್ದಕ್ಕೂ ಇದ್ದ ಬೋಧನಾ ಪದ್ಧತಿಗಳ ಬಗ್ಗೆ ಅಮೂಲ್ಯವಾದ ದತ್ತಾಂಶವನ್ನು ಒದಗಿಸುತ್ತವೆ ಮತ್ತು ಐತಿಹಾಸಿಕ ತನಿಖೆಗೆ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. 

ವಂಶಾವಳಿಯ (ನಸಬ್) ಜ್ಞಾನವು ಆರಂಭಿಕ ಅರೇಬಿಯನ್ ಸಮಾಜದ ಒಂದು ಪ್ರಮುಖ ಲಕ್ಷಣವಾಗಿತ್ತು. ವ್ಯಕ್ತಿಗಳನ್ನು ಅವರ ಕುಟುಂಬದ ಪರಂಪರೆ ಮತ್ತು ಸಾಮಾಜಿಕ ಸಂಪರ್ಕಗಳ ಮೂಲಕ ಗುರುತಿಸುವುದು ಸಾಮಾನ್ಯ ವಾಡಿಕೆಯಾಗಿತ್ತು. ಈ ವಂಶಾವಳಿಯ ಪ್ರಜ್ಞೆಯು ಜೀವನಚರಿತ್ರೆಯ ಗ್ರಂಥಗಳಲ್ಲೂ ಪ್ರತಿಫಲಿಸುತ್ತದೆ. ವಿದ್ವಾಂಸರು ಇದರಲ್ಲಿ ವ್ಯಕ್ತಿಗಳನ್ನು ಅತ್ಯಂತ ನಿಖರವಾಗಿ ಗುರುತಿಸಲು ಶ್ರಮಿಸಿದ್ದಾರೆ. ಉದಾಹರಣೆಗೆ, ಫಾತಿಮಾ ಬಿಂತ್‌ ಅಬು ಅಲ್-ಹಸನ್ ಸಾದ್ ಅಲ್-ಖೈರ್ ಇಬ್ನ್ ಮುಹಮ್ಮದ್ ಇಬ್ನ್ ಸಹ್ಲ್ ಅಲ್-ಅನ್ಸಾರಿ ಅಲ್-ಅಂದಲುಸಿ ಅಲ್-ಬಲನ್ಸಿ ಎಂಬುವುದು ಅವರ ಪೂರ್ಣ ಹೆಸರು. ಅಲ್ಲದೇ ಅವರ ಜನನ ಹಾಗೂ ಮರಣದ ದಿನಾಂಕಗಳನ್ನು ಇಬ್ನ್ ನುಕ್ತಾ (ನಿಧನ 629/1232) ಅವರ ‘ಅಲ್-ತಕ್ಯೀದ್ ಲಿ-ಮಅರಿಫತ್ ರುವಾತ್ ಅಲ್-ಸುನನ್ ವ-ಲ್-ಮಸಾನೀದ್’ ಎಂಬ ಜೀವನಚರಿತ್ರೆಯ ಗ್ರಂಥದಲ್ಲಿ ಸಂರಕ್ಷಿಸಲಾಗಿದೆ. ಈ ಕೃತಿಯು ವಿಶೇಷವಾಗಿ, ಆರು ಪ್ರಮುಖ ಹದೀಸ್ ಸಂಕಲನಗಳಲ್ಲಿ ಬರುವ ಪ್ರತಿಯೊಬ್ಬ ವರದಿಗಾರನನ್ನು ದಾಖಲಿಸುತ್ತದೆ. ಈ ಪ್ರಮುಖ ಗ್ರಂಥದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ‘ಜರ್ಹ್’ (ಅಮಾನ್ಯಗೊಳಿಸುವುದು) ಮತ್ತು ‘ತಅದಿಲ್’ (ಮಾನ್ಯಗೊಳಿಸುವುದು) ಶಾಸ್ತ್ರದ ಅವಿಭಾಜ್ಯ ಅಂಗಗಳಾಗಿವೆ. ಈ ಮೂಲಕ ಹದೀಸ್ ವರದಿಗಾರರ ಜ್ಞಾನ ಪ್ರಸರಣದ ಸಾಮರ್ಥ್ಯ ಮತ್ತು ಸಮಗ್ರತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. 

ತಕೀ ಅಲ್-ದೀನ್ ಅಲ್-ಫಾಸಿ (ನಿಧನ 832/1429), ತಮ್ಮ ‘ದೈಲ್ ಅಲ್-ತಕ್ಯೀದ್ ಫೀ ರುವಾತ್ ಅಲ್-ಸುನನ್ ವ-ಲ್-ಅಸಾನೀದ್’ ಕೃತಿಯಲ್ಲಿ ಫಾತಿಮಾ ಬಿಂತ್ ಸಾದ್ ಅಲ್-ಖೈರ್‌ ರವರ ಬಗ್ಗೆ ಎಂಟು ವಿಭಿನ್ನ ಜೀವನಚರಿತ್ರೆಯ ಕೋಶಗಳಿಂದ ಉಲ್ಲೇಖಗಳನ್ನು ನೀಡಿದ್ದಾರೆ. ಅವುಗಳೆಂದರೆ: ಅಲ್-ತಕ್ಮಿಲಾ ಲಿ-ವಫಯಾತ್ ಅಲ್-ನಕಲಾ, ಅಲ್-ತಕ್ಯೀದ್, ತದ್ಕಿರತ್ ಅಲ್-ಹುಫ್ಫಾಝ್, ಸಿಯಾರ್ ಅಲಾಮ್ ಅಲ್-ನುಬಾಲಾ, ಶದರಾತ್ ಅಲ್-ದಹಬ್, ತಾರೀಖ್ ಅಲ್-ದುಬೈತಿ, ಅಲ್-ನುಜುಮ್ ಅಲ್-ಝಾಹಿರಾ ಮತ್ತು ಇಬ್ನ್ ರಾಫಿ (ನಿಧನ 632/1234) ಅವರ ಅಲ್-ವಫಯಾತ್. ಇವೆಲ್ಲವುಗಳನ್ನು ಪರಸ್ಪರ ಹೋಲಿಸಿ ಪರಿಶೀಲಿಸಬಹುದು. ಆಕೆ ಯಾರ ಬಳಿಯೆಲ್ಲಾ ಅಧ್ಯಯನ ಮಾಡಿ ‘ಇಜಾಝತ್'(ಮಾನ್ಯತೆ) ಪಡೆದಿದ್ದರೋ ಅಂತಹ ಪ್ರತಿಯೊಬ್ಬ ವಿದ್ವಾಂಸರನ್ನು ಈ ಜೀವನಚರಿತ್ರೆಯ ಕೋಶಗಳಲ್ಲಿ ಗುರುತಿಸಬಹುದು, ಇದು ಆಕೆಯ ಶಿಕ್ಷಣವನ್ನು ದೃಢೀಕರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಆಕೆ ಯಾರ ಅಡಿಯಲ್ಲಿ ‘ದುಅಫಾ ವ-ಲ್-ಮತ್ರುಕೀನ್’ ಅಭ್ಯಾಸ ಮಾಡಿದ್ದರೋ ಆ ಅಬ್ದ್ ಅಲ್-ಮಲಿಕ್ ಅಲ್-ಖೈರೂನ್ ಅವರ ಜೀವನಚರಿತ್ರೆಯ ದಾಖಲೆಯು ಅಲ್-ದಹಬಿಯವರ ‘ಸಿಯರ್’ನಲ್ಲಿ ಲಭ್ಯವಿದೆ. ಕೈರೋದಲ್ಲಿ ಆಕೆಯ ನಡೆಸಿದ ವ್ಯಾಪಕ ಹದೀಸ್ ಬೋಧನೆಯನ್ನು ಇಬ್ನ್ ನುಕ್ತಾ (ನಿಧನ 629/1232) ಮತ್ತು ಇಬ್ನ್ ಅಸಾಕಿರ್ (ನಿಧನ 571/1175) ಸೇರಿದಂತೆ ಇತರರು ದೃಢಪಡಿಸಿದ್ದಾರೆ. ಈಜಿಪ್ಟ್‌ನಲ್ಲಿ ಆಕೆಗಿದ್ದ ಪ್ರಾಮುಖ್ಯತೆ ಮತ್ತು ವಿದ್ವತ್ಪೂರ್ಣ ಪ್ರಭಾವಕ್ಕೆ ಇಬ್ನ್ ತಗ್ರೀ ಬರ್ದಿಯವರ ‘ಅಲ್-ನುಜುಮ್ ಅಲ್-ಜಾಹಿರಾ’ ಕೃತಿಯೇ ಸಾಕ್ಷಿ; ಇದರಲ್ಲಿ ಹಿಜರಿ ವರ್ಷ 600ರಲ್ಲಿ ನಿಧನರಾದ ಈಜಿಪ್ಟ್‌ನ ಅತ್ಯಂತ ಗಮನಾರ್ಹ ವ್ಯಕ್ತಿಗಳ ಪಟ್ಟಿಯಲ್ಲಿ ಆಕೆಯನ್ನು ಸೇರಿಸಲಾಗಿದೆ. ಆಕೆಯ ತಂದೆ ಸಾದ್ ಅಲ್-ಖೈರ್ ಅವರ ಬಗ್ಗೆಯೂ ಸಂಆನಿಯವರ ‘ಕಿತಾಬ್ ಅಲ್-ಅನ್ಸಾಬ್’, ಅಲ್-ದಹಬಿಯವರ ‘ಸಿಯರ್’ ಮತ್ತು ‘ತಾರೀಖ್ ಅಲ್-ಇಸ್ಲಾಂ’ ಸೇರಿದಂತೆ ಹಲವು ಮೂಲಗಳಲ್ಲಿ ದಾಖಲೆಗಳಿವೆ. ಈ ಜೀವನಚರಿತ್ರೆಯ ದಾಖಲೆಗಳು ಅವರು ಸಂಆನಿ (ನಿಧನ 562/1166) ಮತ್ತು ಇಬ್ನ್ ಅಸಾಕಿರ್ (ನಿಧನ 571/1175) ಅಂತಹವರಿಗೆ ಬೋಧಿಸಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಆಕೆಯ ಕುಟುಂಬ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಮ್ಯಾಪ್‌ ಮಾಡುವುದರಿಂದ ಆಕೆಯ ವಿದ್ವತ್ಪೂರ್ಣ ತೊಡಗಿಸಿಕೊಳ್ಳುವಿಕೆಯ ಪೂರ್ಣ ತಿಳುವಳಿಕೆ ದೊರೆಯುತ್ತದೆ. ಅಲ್ಲದೇ, ವಿವಿಧ ಮೂಲಗಳಾದ್ಯಂತ ಸ್ಥಿರತೆ ಹಾಗೂ ವಿಶ್ವಾಸಾರ್ಹತೆಯನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. 

ಫಾತಿಮಾ ಬಿಂತು ಸಾದ್ ಅಲ್-ಖೈರ್ ಅವರ ಜೊತೆಗೆ, ಜೀವನಚರಿತ್ರೆಯ ಬೃಹತ್‌ಕೋಶಗಳು ಜ್ಞಾನ ಕ್ಷೇತ್ರದಲ್ಲಿ ತೊಡಗಿದ್ದ ಬೇರೆ ಬೇರೆ ಮಹಿಳಾ ಪ್ರತಿನಿಧಿಗಳ ಮಾಹಿತಿಯ ಬೃಹತ್ ಸಂಗ್ರಹಗಳಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ‘ಕಿತಾಬ್ ಅತ್-ತಬಕಾತ್ ಅಲ್-ಕಬೀರ್’ ನ ಎಂಟನೇ ಸಂಪುಟವನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗಿದ್ದು, ಇದು 629 ಜೀವನಚರಿತ್ರೆಯ ದಾಖಲೆಗಳನ್ನು ಒಳಗೊಂಡಿದೆ. ಇಬ್ನ್ ಹಜರ್ ಅವರು ‘ಅಲ್-ಇಸಾಬಾ ಫೀ ತಮ್ಯೀಜ್ ಅಲ್-ಸಹಾಬಾ’ ಕೃತಿಯಲ್ಲಿ 1,551 ಮಹಿಳಾ ವಿದ್ವಾಂಸರ ವಿವರಗಳನ್ನು ದಾಖಲಿಸಿದ್ದಾರೆ. ಹದೀಸ್‌ನ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಅಧ್ಯಯನ ಮಾಡಿದ ಇಬ್ನ್ ಅಸಾಕಿರ್ ಅವರಿಗೆ 80 ಕ್ಕೂ ಹೆಚ್ಚು ಮಹಿಳೆಯರು ಬೋಧಿಸಿದ್ದರು. ತಮ್ಮ ಪ್ರಸಿದ್ಧ ಪಠ್ಯವಾದ ‘ತಾರೀಖ್ ದಿಮಾಶ್ಕ್’ ನಲ್ಲಿ ಫಾತಿಮಾ ಬಿಂತು ಸಾದ್ ಅಲ್-ಖೈರ್ ಸೇರಿದಂತೆ ಡಮಾಸ್ಕಸ್‌ನಲ್ಲಿ ವಾಸವಾಗಿದ್ದ ಅಥವಾ ಅಲ್ಲಿಗೆ ಭೇಟಿ ನೀಡಿದ್ದ 200 ಮಹಿಳಾ ಹದೀಸ್ ತಜ್ಞರ ಜೀವನಚರಿತ್ರೆಗಳನ್ನು ಅವರು ಪ್ರಸ್ತುತಪಡಿಸುತ್ತಾರೆ. ಅಲ್-ಸಖಾವಿ (ನಿಧನ 902/1497) ಅವರು ‘ಕಿತಾಬ್ ಅಲ್-ದೌ ಅಲ್-ಲಾಮಿ ಲಿ-ಅಹ್ಲ್ ಅಲ್-ಖರ್ನ್ ಅಲ್-ತಾಸಿ’ ಕೃತಿಯಲ್ಲಿ ಮಹಿಳೆಯರ ಬಗ್ಗೆ 1,075 ದಾಖಲೆಗಳನ್ನು ಸೇರಿಸಿದ್ದಾರೆ. ಇಬ್ನ್ ಹಜರ್ ಅವರ ‘ಅಲ್-ಮುಅ್ಜಮ್ ಅಲ್-ಮುಫಹ್ರಸ್’ ನಲ್ಲಿ, ಪ್ರಮುಖ ಗ್ರಂಥಗಳ ಇಸ್ನಾದ್‌(ವರದಿಗಾರರ ಸರಪಳಿ)ಗಳನ್ನು ವಿವರಿಸುವ ವಿಭಾಗದಲ್ಲಿ, ವಿದ್ವಾಂಸೆ ಝೈನಬ್ ಬಿಂತ್‌ ಅಲ್-ಕಮಾಲ್ ಅವರು 37 ಪ್ರತ್ಯೇಕ ದಾಖಲೆಗಳಲ್ಲಿ ಕಾಣಿಸಿಕೊಂಡು ಅಧಿಕೃತ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಒಟ್ಟಾರೆಯಾಗಿ, ಇಬ್ನ್ ಹಜರ್ ಅವರು ಸ್ವೀಕರಿಸಿದ ಸುಮಾರು 140 ಪ್ರಮುಖ  ಹದೀಸ್‌ಗಳ ಇಸ್ನಾದ್‌ನಲ್ಲಿ ಅವರು ಅತ್ಯಗತ್ಯ ಕೊಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. 

ಐತಿಹಾಸಿಕ ತನಿಖೆಗಾಗಿ ಜೀವನಚರಿತ್ರೆಯ ಕೋಶಗಳನ್ನು ದೀರ್ಘಕಾಲದಿಂದ ಬಳಸಲಾಗುತ್ತಿದ್ದರೂ, ಜೀವನಚರಿತ್ರೆಕಾರನ ಸ್ವಂತ ಆಸಕ್ತಿಗಳು ಮತ್ತು ಗ್ರಹಿಕೆಗಳ ಸಂಭಾವ್ಯ ಪಕ್ಷಪಾತದ ಕಾರಣದಿಂದಾಗಿ ವಿಮರ್ಶಕರು ಅವುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಅರೇಬಿಕ್ ಜೀವನಚರಿತ್ರೆ ಸಾಹಿತ್ಯದ ವಿಶೇಷತೆಯೆಂದರೆ ಹತ್ತು ಶತಮಾನಗಳ ಕಾಲದ ಅಗಾಧ ದಾಖಲೆಗಳು ಲಭ್ಯವಿರುವುದು. ಇವುಗಳಲ್ಲಿ ಹಲವು ಬಾರಿ ಒಂದೇ ವ್ಯಕ್ತಿಯ ಬಗ್ಗೆ ವಿವರಗಳಿರುವುದರಿಂದ, ವಿವಿಧ ಮೂಲಗಳಿಂದ ಮಾಹಿತಿಯನ್ನು ತಾಳೆ ನೋಡಿ ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೇಲೆ ತಿಳಿಸಿದಂತೆ, ಫಾತಿಮಾ ಬಿಂತ್ ಸಾದ್ ಅಲ್-ಖೈರ್ ಅವರ ಜೀವನಚರಿತ್ರೆಯನ್ನು ಎಂಟು ಸ್ವತಂತ್ರ ಜೀವನಚರಿತ್ರೆಯ ಸಂಗ್ರಹಗ್ರಂಥದ ಮೂಲಕ ಪರಸ್ಪರ ಪರಿಶೀಲಿಸಬಹುದು ಮತ್ತು ಅವರ ಪ್ರತಿಯೊಬ್ಬ ಶಿಕ್ಷಕರ ಜೀವನಚರಿತ್ರೆಯನ್ನು ಸಹ ಇದೇ ರೀತಿ ವಿವಿಧ ಪಠ್ಯಗಳಾದ್ಯಂತ ಮೌಲ್ಯಮಾಪನ ಮಾಡಬಹುದು. ಸಂಬಂಧಿತ ಮೂಲಗಳ ದೃಢೀಕರಣವು ಪಕ್ಷಪಾತದ ಅಥವಾ ದಾರಿ ತಪ್ಪಿಸುವ ಮಾಹಿತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಜೀವನಚರಿತ್ರೆಯ ವಿವರಣೆಗಳನ್ನು ವಿವಿಧ ಮಾಹಿತಿಗಳ (ಅಖ್ಬಾರ್) ಆಧಾರದ ಮೇಲೆ ರೂಪಿಸಲಾಗಿದ್ದು, ಆ ಮಾಹಿತಿಯ ಅಧಿಕೃತತೆಯನ್ನು ಪರಿಶೀಲಿಸಲು ಪೂರಕವಾದ ಇಸ್ನಾದ್‌ಗಳನ್ನೂ ಒದಗಿಸಲಾಗಿದೆ.  

ಜೀವನಚರಿತ್ರೆಯ ಕೋಶಗಳನ್ನು ಪುರುಷರೇ ಬರೆದಿರುವುದರಿಂದ, ಪುರುಷ ಪ್ರಧಾನ ದೃಷ್ಟಿಕೋನವು ಮಹಿಳಾ ವಿದ್ವಾಂಸರ ಸಾಧನೆಗಳನ್ನು ಕಡಿಮೆ ಮಾಡಿ ತೋರಿಸಿರಬಹುದು ಎಂದು ಕೆಲವು ವಿಮರ್ಶಕರು ವಾದಿಸಿದ್ದಾರೆ. ಆದರೆ, ಪುರುಷರು ಬರೆದ ಈ ಕೃತಿಗಳಲ್ಲಿರುವ ಮಹಿಳಾ ವಿದ್ವಾಂಸರ ಬಗೆಗಿನ ದಾಖಲೆಗಳನ್ನು ಸೂಕ್ಷ್ಮವಾಗಿ ಓದಿದರೆ, ಈ ಊಹೆಯು ಬಹುಪಾಲು ಆಧಾರರಹಿತವಾದುದು ಎಂದು ತಿಳಿದುಬರುತ್ತದೆ. ಜೀವನಚರಿತ್ರೆಕಾರರು ಮಹಿಳಾ ವಿದ್ವಾಂಸರ ಉನ್ನತ ಮಟ್ಟದ ಸಾಮರ್ಥ್ಯವನ್ನು ಪದೇ ಪದೇ ಗುರುತಿಸಿದ್ದಾರೆ. ಈ ಮಹಿಳೆಯರು ಹೆಚ್ಚಾಗಿ ಆ ಜೀವನಚರಿತ್ರೆಕಾರರಿಗೇ ಶಿಕ್ಷಕರಾಗಿದ್ದರು. ಇದು ಅಂದಿನ ಕಾಲದ ಐತಿಹಾಸಿಕ ಸಂದರ್ಭದಲ್ಲಿ ಮಹಿಳಾ ಪಾಂಡಿತ್ಯವನ್ನು ಒಂದು ಅಸಾಧಾರಣ ವಿಷಯವಾಗಿ ನೋಡುತ್ತಿರಲಿಲ್ಲ ಎಂಬುದನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ, ಇಬ್ನ್ ಹಜರ್ ಅವರು ಯಾವುದೇ ವಿಶೇಷ ಸಮರ್ಥನೆ ಅಥವಾ ರಕ್ಷಣಾತ್ಮಕ ಧೋರಣೆ ಇಲ್ಲದೆ, ತಮ್ಮ ಪುರುಷ ಶಿಕ್ಷಕರನ್ನು ಉಲ್ಲೇಖಿಸುವ ರೀತಿಯಲ್ಲೇ ಮಹಿಳಾ ಶಿಕ್ಷಕರನ್ನೂ ಉಲ್ಲೇಖಿಸುತ್ತಾರೆ. ಅಲ್-ಸಖಾವಿಯವರು ತಾವು ವೈಯಕ್ತಿಕವಾಗಿ ಯಾರಿಂದ ‘ಇಜಾಝತ್’ (ಮಾನ್ಯತೆ) ಪಡೆದಿದ್ದರೋ ಅಂತಹ ನಲವತ್ತಾರು ಮಹಿಳಾ ವಿದ್ವಾಂಸರ ಬಗ್ಗೆ, ತಮ್ಮ ಶಿಕ್ಷಕರಿಗೆ ಬೋಧಿಸಿದ ನಲವತ್ತಮೂರು ಮಹಿಳೆಯರ ಬಗ್ಗೆ ಹಾಗೂ ತಮ್ಮ ಸಮಕಾಲೀನರಿಗೆ ಬೋಧಿಸಿದ ಒಂಬತ್ತು ‘ಮುಹದ್ದಿಸಾತ್’ಗಳ ಬಗ್ಗೆ ಜೀವನಚರಿತ್ರೆಯ ದಾಖಲೆಗಳನ್ನು ಬರೆದಿದ್ದಾರೆ. ಇದಲ್ಲದೆ, ಇಬ್ನ್ ಅಸಾಕಿರ್ ಅವರು ತಾವು ಯಾರಿಂದ ಹದೀಸ್ ನಿರೂಪಿಸಿದ್ದರೋ ಅಂತಹ ಸುಮಾರು ಎಂಬತ್ತು ಮಹಿಳಾ ಮುಹದ್ದಿಸಾತ್‌ಗಳಿಗಾಗಿಯೇ ಪ್ರತ್ಯೇಕ ಪಠ್ಯವನ್ನು ರಚಿಸಿದ್ದಾರೆ. ಇಬ್ನ್ ಅಲ್-ಖಯ್ಯಿಮ್ (ನಿಧನ 751/1350), ತಾಜ್ ಅಲ್-ದೀನ್ ಅಲ್-ಸುಬ್ಕಿ (ನಿಧನ 771/1369), ಅಲ್-ಝರ್ಕಶಿ (ನಿಧನ 794/1392), ಇಬ್ನ್ ರಜಬ್ ಅಲ್-ಹಂಬಲಿ (ನಿಧನ 795/1393) ಮತ್ತು ಇಬ್ನ್ ಕಸೀರ್ (ನಿಧನ 774/1372) ಅಂತಹ ವಿದ್ವಾಂಸರು ಕೂಡ ತಾವು ಹದೀಸ್ ಪಡೆದಿರುವ ಮಹಿಳಾ ವಿದ್ವಾಂಸರ ವಿವರಗಳನ್ನು ದಾಖಲಿಸಿದ್ದಾರೆ. 

ಸ್ವತಃ ಮಹಿಳಾ ವಿದ್ವಾಂಸರಿಂದ ಹದೀಸ್‌ಗಳನ್ನು ಕಲಿತ ಇಬ್ನ್ ತೈಮಿಯ್ಯಾ (ಮರಣ 728/1328) ರವರು, ಅವರಲ್ಲಿ ಕೆಲವರ ಜ್ಞಾನದ ಮಟ್ಟ, ನೀತಿವಂತಿಕೆ ಮತ್ತು ಬುದ್ಧಿವಂತಿಕೆಯನ್ನು ಎತ್ತಿ ತೋರಿಸುತ್ತಾ “ಅವರನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.” ಇಬ್ನ್ ಹಜರ ರವರ ‘ಅಲ್-ದುರರ್’ ಗ್ರಂಥದಲ್ಲಿ ಉಲ್ಲೇಖಿಸಲಾದ ಮಹಿಳಾ ವಿದ್ವಾಂಸರು ತಮ್ಮ ಕಾಲದ ಅತ್ಯುತ್ತಮ ಹದೀಸ್ ವಿದ್ವಾಂಸರೆಂಬ ಬಿರುದುಗಳನ್ನು ಪಡೆದಿದ್ದರು. ದಖೀಖಾ ಬಿಂತ್ ಮುರ್ಷಿದ್ (ಮರಣ 746/1345) ಅವರನ್ನೂ ಸಹ ಇತರ ಮಹಿಳಾ ವಿದ್ವಾಂಸರಿಂದ ಶಿಕ್ಷಣ ಪಡೆದ ಒಬ್ಬ ಪ್ರಮುಖ ‘ಮುಹದ್ದಿತಾ’ ಎಂದು ಕೊಂಡಾಡಲಾಗಿದೆ. ಇಬ್ನ್ ಅಲ್-ಇಮಾದ್, ಅಲ್-ಸಫದಿ ಮತ್ತು ಅಲ್-ದಹಬಿ ರವರು ಉಮ್ ಅಲ್-ಕಿರಾಮ್ ಅಲ್-ಮರ್ವಝಿಯ್ಯಾ (ಮರಣ 465/1073) ರವರನ್ನು ಶ್ಲಾಘಿಸುತ್ತಾ, ಅವರ ವಿಶಿಷ್ಟ ಜ್ಞಾನ ಮತ್ತು ಹದೀಸ್‌ಗಳನ್ನು ರವಾನಿಸುವಲ್ಲಿನ ಅವರ ನಿಖರತೆಯನ್ನು ದೃಢಪಡಿಸಿದ್ದಾರೆ. ಇಬ್ನ್ ಹಿಬ್ಬಾನ್ (ಮರಣ 354/965) ಮತ್ತು ಅಲ್-ಮಿಝ್ಝಿ (ಮರಣ 742/1341) ರವರ ಜೀವನಚರಿತ್ರೆಯ ಕೃತಿಗಳಂತಹ ಆರಂಭಿಕ ಪಠ್ಯಗಳಲ್ಲೂ ಮಹಿಳಾ ವಿದ್ವಾಂಸರ ಬಗ್ಗೆ ಸಕಾರಾತ್ಮಕ ಗೌರವ ವ್ಯಕ್ತವಾಗಿದೆ; ಈ ಗ್ರಂಥವು ಹಫ್ಸಾ ಬಿಂತ್ ಸೀರೀನ್ (ಮರಣ 100/719) ಕುರಿತಾದ ಹಿಶಾಮ್‌ ಇಬ್ನ್ ಹಸ್ಸಾನ್ (ಮರಣ 147/764) ರವರ ನಿರೂಪಣೆಯನ್ನು ದಾಖಲಿಸಿವೆ. “ಹಫ್ಸಾ ಅವರಿಗಿಂತ ಮಿಗಿಲಾದ ಯಾರನ್ನೂ ನಾನು ಭೇಟಿಯಾಗಿಲ್ಲ” ಎಂದು ಅವರು ಹೇಳಿರುವುದು ದಾಖಲಾಗಿದೆ. ಅಲ್-ಹಸನ್ ಅಲ್-ಬಸ್ರಿ ಹಾಗೂ ಮುಹಮ್ಮದ್ ಇಬ್ನ್ ಸೀರೀನ್ ಅವರ ಬಗ್ಗೆ ಕೇಳಿದಾಗ, “ನನ್ನ ಮಟ್ಟಿಗಂತೂ, ನಾನು ಅವರಿಗಿಂತ ಮಿಗಿಲಾಗಿ ಯಾರನ್ನೂ ಪರಿಗಣಿಸುವುದಿಲ್ಲ” ಎಂದು ಹೇಳುವ ಮೂಲಕ ಆಕೆಯ ಸ್ಥಾನಮಾನವನ್ನು ಅನೇಕ ಗಮನಾರ್ಹ ವಿದ್ವಾಂಸರಿಗಿಂತಲೂ ಎತ್ತರಕ್ಕೆ ಏರಿಸಿದ್ದಾರೆ. 

ಜೀವನಚರಿತ್ರೆಗಳ ಕೋಶದಲ್ಲಿರುವ ದತ್ತಾಂಶಗಳು ಬಹಳ ಮುಖ್ಯವಾದವು. ಇವು ಇಸ್ಲಾಮಿಕ್ ಅಧ್ಯಯನಗಳಲ್ಲಿ ಮಾಹಿತಿಯ ಸತ್ಯಾಸತ್ಯತೆಯನ್ನು ಎಷ್ಟು ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ ಎಂಬುದನ್ನು ತೋರಿಸುತ್ತವೆ. ಚಾರಿತ್ರಿಕ ಪದ್ಧತಿಗಳು ಎಷ್ಟರ ಮಟ್ಟಿಗೆ ಸರಿ ಇವೆ ಎಂಬುದನ್ನು ಬೇರೆ ಬೇರೆ ಆಕರಗಳು ಮತ್ತು ದಾಖಲೆಗಳನ್ನು ತಾಳೆ ನೋಡುವ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ಈಗ ಲಭ್ಯವಿರುವ ‘ಸಮಾಆತ್’ ಹಸ್ತಪ್ರತಿಗಳೊಂದಿಗೆ ಜೀವನಚರಿತ್ರೆಯ ಕೆಲಸವನ್ನು ಸೇರಿದಾಗ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಐತಿಹಾಸಿಕವಾಗಿ ಹದೀಸ್‌ಗಳಿಗೆ ಸೇರಿಸಲಾದ ಈ ಹಸ್ತಪ್ರತಿಗಳು ಯಾವಾಗ, ಎಲ್ಲಿ ಮತ್ತು ಯಾರೊಂದಿಗೆ ಪಠ್ಯವನ್ನು ಅಧ್ಯಯನ ಮಾಡಲಾಯಿತು ಎಂಬ ವಿವರಗಳನ್ನು ದಾಖಲಿಸುತ್ತವೆ. ಈ ಲಭ್ಯವಿರುವ ಹಸ್ತಪ್ರತಿಗಳ ದತ್ತಾಂಶಗಳು ಜೀವನಚರಿತ್ರೆಯ ಕೃತಿಗಳಲ್ಲಿನ ನಿರೂಪಣೆಗಳನ್ನು ದೃಢೀಕರಿಸುತ್ತವೆ ಮತ್ತು ಪೂರಕವಾಗಿವೆ ಎಂದು ಕಂಡುಬಂದಿದೆ. ಇದು ಇಸ್ಲಾಮಿಕ್ ಶಿಕ್ಷಣ ಪದ್ಧತಿಗಳ ಬಗ್ಗೆ ಹೆಚ್ಚು ಸಮಗ್ರವಾದ ಒಳನೋಟವನ್ನು ನೀಡುತ್ತದೆ.

ಸಮಾಅ್ (Samāʿ) ದಾಖಲೆಗಳು: ಕಳೆದ ಕಾಲದ ದೃಶ್ಯಗಳು

ಸಮಾಅ್ ದಾಖಲೆಗಳು ಎಂದರೆ ಪಠ್ಯಗಳ ಔಪಚಾರಿಕ ಅಧ್ಯಯನ ಮತ್ತು ಪ್ರಸರಣವನ್ನು ದೃಢೀಕರಿಸುವ ಪ್ರಮಾಣಪತ್ರಗಳು. ‘ಸಮಾಅ್’ ಎಂದರೆ “ಕೇಳುವುದು” ಎಂದರ್ಥ. ಹದೀಸ್ ಮತ್ತು ಇತರ ಇಸ್ಲಾಮಿಕ್ ಜ್ಞಾನ ಶಾಖೆಯ ಅಧಿಕೃತ ಪುಸ್ತಕಗಳ ಪ್ರಸರಣದಲ್ಲಿ ಇವು ಪ್ರಮುಖ ಪಾತ್ರ ವಹಿಸಿವೆ. ಸಮಾಅ್ ಸಭೆಯಲ್ಲಿ, ವಿದ್ಯಾರ್ಥಿಗಳು ಮೂಲ ಲೇಖಕರವರೆಗಿನ ‘ಇಸ್ನಾದ್’ (ಸರಣಿ) ಹೊಂದಿರುವ ಶಿಕ್ಷಕರಿಂದ ಪಠ್ಯಗಳನ್ನು ಕಲಿಯುತ್ತಿದ್ದರು. ಸಾಮಾನ್ಯವಾಗಿ, ಈ ದಾಖಲೆಯನ್ನು ಪ್ರಮಾಣೀಕರಿಸುವವರು (ಮುಸ್ಮಿಅ್) ಸಿದ್ಧಪಡಿಸುತ್ತಿದ್ದರು ಮತ್ತು ಅದನ್ನು ಅಧ್ಯಯನ ಮಾಡಿದ ಪಠ್ಯದ ಕೊನೆಯಲ್ಲಿ ಅಥವಾ ಪಕ್ಕದಲ್ಲಿ ಬರೆಯಲಾಗುತ್ತಿತ್ತು. ಇದರಲ್ಲಿ ಅಧ್ಯಯನದ ದಿನಾಂಕ, ಸ್ಥಳ, ಪಠ್ಯದ ಭಾಗಗಳು, ಶಿಕ್ಷಕರ ವಿವರಗಳು ಮತ್ತು ಪಾಲ್ಗೊಂಡವರ ಪೂರ್ಣ ಹೆಸರುಗಳನ್ನು ನಿಖರವಾಗಿ ದಾಖಲಿಸಲಾಗುತ್ತಿತ್ತು.

ಒಬ್ಬ ವಿದ್ಯಾರ್ಥಿಯು ಪಠ್ಯವನ್ನು “ಕೇಳಿಸಿಕೊಂಡಿದ್ದಾನೆ” (ಸಮಿಅ ಅಥವಾ ಸಮಿಅತ್) ಎಂದರೆ ಅವರು ಅದನ್ನು ಅಧ್ಯಯನ ಮಾಡಿ ಅದರಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ ಎಂದರ್ಥ. “ಓದಿದ್ದಾರೆ” (ಕರಅ ಅಥವಾ ಕರಅತ್) ಎನ್ನುವ ಪದವು ನೆನಪಿನಿಂದ ಪಠ್ಯವನ್ನು ಒಪ್ಪಿಸುವ ತರಬೇತಿಯನ್ನು ಸೂಚಿಸುತ್ತದೆ. ಈ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಲೇಖಕರು ಅಥವಾ ಪ್ರಮಾಣೀಕೃತ ವಿದ್ವಾಂಸರು ಆ ಪಠ್ಯವನ್ನು ಮುಂದೆ ಬೋಧಿಸಲು ಅನುಮತಿ (ಇಜಾಝ) ನೀಡುತ್ತಿದ್ದರು.

ಒಂದು ಸಾಮಾನ್ಯ ಸಮಾಅ್ ದಾಖಲೆಯು ಹೀಗಿರುತ್ತದೆ: ಬರೆಹವನ್ನು [ಶೀರ್ಷಿಕೆ ಮತ್ತು ಲೇಖಕ], [ಹಾಜರಿದ್ದ ವಿದ್ವಾಂಸರ] ಸಮ್ಮುಖದಲ್ಲಿ ಮತ್ತು [ಉಪನ್ಯಾಸಕರ] ಉಪನ್ಯಾಸದಲ್ಲಿ [ಕೇಳುಗರು] ಆಲಿಸಿದ್ದಾರೆ; ಇದನ್ನು [ನಕಲುಗಾರರು] ಬರೆದಿದ್ದು, ಇದರ ನಿಖರತೆಯನ್ನು ಅವರು ಖಚಿತಪಡಿಸುತ್ತಾರೆ. ಇದನ್ನು [ಸ್ಥಳ]ದಲ್ಲಿ [ದಿನಾಂಕ, ತಿಂಗಳು, ವರ್ಷ]ದಂದು ಬರೆಯಲಾಗಿದೆ

ದಾಖಲೆ ನೀಡುವವರು ಸಭೆಯ ಪ್ರತಿಯೊಂದು ವಿವರವನ್ನೂ ದಾಖಲಿಸುತ್ತಿದ್ದರು. ವಿದ್ಯಾರ್ಥಿಗಳು ತಡವಾಗಿ ಬಂದದ್ದು, ಪಾಠದ ಸಮಯದಲ್ಲಿ ತೂಕಡಿಸಿದ್ದು, ಅಥವಾ ಅಳುವ ಮಗುವಿಗಾಗಿ ತಾಯಂದಿರು ಸ್ವಲ್ಪ ಸಮಯ ಹೊರಗೆ ಹೋದದ್ದು – ಹೀಗೆ ಎಲ್ಲವನ್ನೂ ಬರೆಯಲಾಗುತ್ತಿತ್ತು. ವಿದ್ಯಾರ್ಥಿಗಳು ಪಠ್ಯವನ್ನು ಸರಿಯಾಗಿ ಸ್ವೀಕರಿಸಿದ್ದಾರೆಯೇ ಅಥವಾ ಪ್ರಸರಣದ ಪ್ರಕ್ರಿಯೆಯಲ್ಲಿ ಏನಾದರೂ ಲೋಪಗಳಿವೆಯೇ ಎಂದು ಸ್ಪಷ್ಟಪಡಿಸಲು ಈ ವಿವರಗಳು ಅಗತ್ಯವಾಗಿದ್ದವು. ಹಲವು ಬಾರಿ, ಕುಟುಂಬದ ಸಂಬಂಧಗಳು ಮತ್ತು ವೃತ್ತಿಗಳ ಬಗ್ಗೆಯೂ ಮಾಹಿತಿ ಒಳಗೊಳ್ಳಲಾಗುತಿತ್ತು. 

ಹದೀಸ್ ಸಭೆಗಳ ನಿಖರವಾದ ವಿವರಗಳನ್ನು ‘ಸಮಾಆತ್’ ದಾಖಲೆಗಳು ಹೊಂದಿರುವುದರಿಂದ, ಇತಿಹಾಸದ ಕಾಲಾವಧಿಯನ್ನು ನಿಖರವಾಗಿ ಗುರುತಿಸಲು ಇವುಗಳನ್ನು ಬಳಸಲಾಗುತ್ತದೆ. ಈ ಸಂಶೋಧನೆಯಲ್ಲಿ, ಮಹಿಳಾ ಶಿಕ್ಷಣದ ಬಗ್ಗೆ ಜೀವನಚರಿತ್ರೆಯ ಪುಸ್ತಕಗಳಲ್ಲಿರುವ ಮಾಹಿತಿಯನ್ನು ಈ ದಾಖಲೆಗಳ ಮೂಲಕ ತಾಳೆ ನೋಡಬಹುದು. ಉದಾಹರಣೆಗೆ, ಅಬೂ ಬಕರ್ ಅಲ್-ಖತೀಬ್ ಅವರಿಂದ ಮಾನ್ಯತೆ ಪಡೆದಿದ್ದ ಅಬೂ ಅಲ್-ಖಾಸಿಮ್ ಅಲ್-ಮುಬಾರಕ್ ಅವರ ಬಳಿ ಫಾತಿಮಾ ಬಿಂತ್ ಸಅದ್ ಅಲ್-ಖೈರ್ ಶಿಕ್ಷಣ ಪಡೆದಿದ್ದರು. ಅವರು ಖತೀಬ್ ಅಲ್-ಬಾಗ್ದಾದಿಯವರ ಕೃತಿಯನ್ನು ಅಭ್ಯಾಸ ಮಾಡಿದ್ದರು. ಈ ಪಾಠವನ್ನು ಹಮೀದ್ ಇಬ್ನ್ ಅಬೀ ಅಲ್-ಫತ್ ಅವರು ಹಿಜರಿ ವರ್ಷ 529ರ ರಬೀ ಅಲ್-ಅವ್ವಲ್ ಮತ್ತು ರಬೀ ಅಲ್-ಆಖಿರ್ ತಿಂಗಳುಗಳಲ್ಲಿ ನಡೆಸಿಕೊಟ್ಟಿದ್ದರು. ಅಲ್-ಬಾಗ್ದಾದಿಯವರ ಪುಸ್ತಕದ ಮೊದಲ ಸಂಪುಟದ ಕೊನೆಯಲ್ಲಿರುವ ‘ಸಮಾಅ್’ ಟಿಪ್ಪಣಿಯಲ್ಲಿ ಈ ವಿವರಗಳು ಸಿಗುತ್ತವೆ. 

ಮೇಲಾಗಿ, ಲಭ್ಯವಿರುವ ‘ಸಮಾಅ್’ ದಾಖಲೆಯ ಆಧಾರದ ಮೇಲೆ, ಫಾತಿಮಾ ಬಿಂತ್ ಸಅದ್ ಅಲ್-ಖೈರ್ ಅವರು ಹಿಜರಿ ವರ್ಷ 529 ರಲ್ಲಿ ಮನ್ಸೂರ್ ಇಬ್ನ್ ಅಲ್-ಖೈರೂನ್ ಅವರ ಮಾರ್ಗದರ್ಶನದಲ್ಲಿ ‘ದುಅಫಾ ವ-ಲ್-ಮತ್ರುಕಿನ್’ ಕೃತಿಯ ಅಧ್ಯಯನ ಮಾಡಿದ್ದರು ಎಂದು ದೃಢಪಡಿಸಬಹುದು. ತದನಂತರದ ಕಾಲಘಟ್ಟದಲ್ಲಿ, ಅವರು ಇದೇ ಕೃತಿಯನ್ನು ಇತರರಿಗೆ ಬೋಧಿಸುವ ಮಾನ್ಯತೆ ಹೊಂದಿದ್ದರು ಎಂಬುದು ಮತ್ತೊಂದು ದಾಖಲೆಯಿಂದ ಸಾಬೀತಾಗುತ್ತದೆ: 

ಸಮಾಅ್ ದಾಖಲೆಯಲ್ಲಿ ಹೀಗಿದೆ: ಕೃತಿಯನ್ನುಗೌರವಾನ್ವಿತ ಶೈಖಾರವರು ಬೋಧಿಸಿದರು. ಇವರು ಇಬ್ನ್ ಅಲ್ಖೈರೂನ್ ರವರ ಬಳಿ ಅಭ್ಯಾಸ ಮಾಡಿದ್ದರು. ಇಬ್ನ್ ಅಲ್ಖೈರೂನ್ ರವರು ಅಲ್ಜೌಹರಿಯವರಿಂದ ಕಲಿತಿದ್ದು, ಮೂಲ ಲೇಖಕ ಅಲ್ದಾರಕುತ್ನಿಯವರಿಂದಲೇ ಬೋಧನಾ ಹಕ್ಕನ್ನು (ಇಜಾಝಾ) ಪಡೆದಿದ್ದರು

ಕ್ರಿ.ಶ. 595/1199 ರಲ್ಲಿ ಕೈರೋದಲ್ಲಿ ಆಕೆಯ ತರಗತಿಗೆ ದೊಡ್ಡ ಗುಂಪೊಂದು ಹಾಜರಾಗಿತ್ತು ಎಂದು ಈ ಹಸ್ತಪ್ರತಿಯು ವಿವರವಾಗಿ ತಿಳಿಸುತ್ತದೆ, ಮತ್ತು ಹಾಜರಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯ ಪೂರ್ಣ ಹೆಸರನ್ನು ಇದು ಪಟ್ಟಿ ಮಾಡಿದೆ. ಇದರ ಜೊತೆಗೆ, ಆಕೆ ಕೈರೋದಲ್ಲಿ ಹದೀಸ್‌ಗಳನ್ನು ಬೋಧಿಸುತ್ತಿದ್ದರು ಎಂಬ ಇಬ್ನ್ ನುಖ್ತಾ, ಇಬ್ನ್ ಅಲ್-ಇಮಾದ್, ಇಬ್ನ್ ಅಸಾಕಿರ್ ಮತ್ತು ಅಲ್-ದಹಬಿ ಅವರ ಹೇಳಿಕೆಗಳನ್ನು ಈ ಹಸ್ತಪ್ರತಿಯು ದೃಢಪಡಿಸುತ್ತದೆ. ಈ ರೀತಿಯಾಗಿ, ‘ಸಮಾಆತ್’ ದಾಖಲೆಗಳನ್ನು ಜೀವನಚರಿತ್ರೆಯ ಸಾಹಿತ್ಯದೊಂದಿಗೆ ಸೇರಿಸಿ ಬಳಸುವ ಮೂಲಕ ಹಿಂದಿನ ಕಾಲದ ಬೋಧನಾ ಪದ್ಧತಿಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಗಟ್ಟಿಗೊಳಿಸಬಹುದು. 

ಇಂದು ನಮಗೆ ಹಸ್ತಪ್ರತಿಗಳ ದೊಡ್ಡ ಸಂಗ್ರಹವೇ ಲಭ್ಯವಿರುವುದರಿಂದ ಮತ್ತು ಅವುಗಳ ಕಾಲವನ್ನು ‘ಕಾರ್ಬನ್-ಡೇಟಿಂಗ್’ ಮೂಲಕ ನಿಖರವಾಗಿ ತಿಳಿಯಲು ಸಾಧ್ಯವಿರುವುದರಿಂದ, ಇತಿಹಾಸದ ಅಧ್ಯಯನಕ್ಕೆ ‘ಸಮಾಅ್’ ದಾಖಲೆಗಳು ಬಹಳ ಸಹಕಾರಿ. ಉದಾಹರಣೆಗೆ, 1996ರ ಒಂದು ಸಂಕಲನದಲ್ಲಿ ಡಮಾಸ್ಕಸ್‌ನ ಸುಮಾರು 4,000 ಹಸ್ತಪ್ರತಿಗಳನ್ನು ಒಟ್ಟುಗೂಡಿಸಲಾಗಿದೆ. ಇವುಗಳಲ್ಲಿ 6ನೇ/12ನೇ ಶತಮಾನದಿಂದ 8ನೇ/14ನೇ ಶತಮಾನದ ಅವಧಿಯಲ್ಲಿ ಹದೀಸ್ ಕಲಿತ ಸುಮಾರು 50,000 ಸ್ತ್ರೀ-ಪುರುಷರ ವಿವರಗಳಿವೆ. ಈ ಹೆಚ್ಚಿನ ದಾಖಲೆಗಳನ್ನು ಈಗ ವ್ಯವಸ್ಥಿತವಾಗಿ ವರ್ಗೀಕರಿಸಲಾಗಿದೆ. 

ಈ ಪ್ರಾಥಮಿಕ ದಾಖಲೆಗಳನ್ನು ಬಳಸಿಕೊಂಡು ಸಂಶೋಧಕರು ಹಳೆಯ ಕಾಲದ ಶಿಕ್ಷಣ ಪದ್ಧತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಬಹುದು. ಯಾರು ಕಲಿಸುತ್ತಿದ್ದರು, ಯಾರು ಕಲಿಯುತ್ತಿದ್ದರು, ಯಾವ ಪುಸ್ತಕಗಳನ್ನು ಓದುತ್ತಿದ್ದರು ಮತ್ತು ಎಲ್ಲಿ ಓದುತ್ತಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಈ ದಾಖಲೆಗಳು ಅಂದಿನ ಶೈಕ್ಷಣಿಕ ಚಟುವಟಿಕೆಗಳ ನಕ್ಷೆ ತಯಾರಿಸಲು ಮತ್ತು ವಿದ್ಯಾರ್ಥಿಗಳ ವಯಸ್ಸು, ಲಿಂಗ ಹಾಗೂ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಒಂದು ವೈಜ್ಞಾನಿಕ ಸಮೀಕ್ಷೆ ನಡೆಸಲು ನೆರವಾಗುತ್ತವೆ. 

ಈ ಆಕರಗಳು ವಿಶಿಷ್ಟವಾಗಿವೆ, ಏಕೆಂದರೆ ಇವುಗಳನ್ನು ಮೂಲತಃ ಜ್ಞಾನದ ಹಸ್ತಾಂತರದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಾಯೋಗಿಕ ಮತ್ತು ತಾಂತ್ರಿಕ ಉದ್ದೇಶಗಳಿಗಾಗಿ ಸಿದ್ಧಪಡಿಸಲಾಗಿತ್ತು. ಇಸ್ಲಾಮಿಕ್ ಪ್ರಪಂಚದಾದ್ಯಂತ ಈ ದೃಢೀಕರಣ ವ್ಯವಸ್ಥೆಯು ಏಕರೂಪದ್ದಾಗಿದ್ದರಿಂದ (standardized), ಈ ದಾಖಲೆಗಳು ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ಐತಿಹಾಸಿಕ ಸಂಶೋಧನೆ ನಡೆಸಲು ಸಹಾಯ ಮಾಡುತ್ತವೆ. ಮೇಲಾಗಿ, ಶತಮಾನಗಳ ಕಾಲ ರಾಜಕೀಯ ಮತ್ತು ಸೈದ್ಧಾಂತಿಕ ಬದಲಾವಣೆಗಳ ನಡುವೆಯೂ ಸ್ಥಿರವಾಗಿ ಉಳಿದಿರುವ ‘ಇಸ್ನಾದ್'(ವರದಿಗಾರರ ಸರಪಳಿ) ಪದ್ಧತಿಯು, ಸುದೀರ್ಘ ಕಾಲಘಟ್ಟದ ವಿದ್ವತ್ತನ್ನು ಪತ್ತೆಹಚ್ಚಲು ಅವಕಾಶ ಮಾಡಿಕೊಡುತ್ತದೆ. 

ಡ್ಯಾಮ್ನೇಶಿಯೊ ಮೆಮೊರಿಯಾ (Damnatio memoriae) ಮತ್ತು ಇತಿಹಾಸದ ಸರಿಪಡಿಸುವಿಕೆ

ನಿಮ್ಮ ಕಣ್ಣುಗಳನ್ನು ಒಮ್ಮೆ ಮುಚ್ಚಿಕೊಳ್ಳಿರಿ ಮತ್ತು ಇಸ್ಲಾಮಿಕ್ ಜ್ಞಾನ ಶಾಖೆಗಳ ಬೆಳವಣಿಗೆಗೆ ಕೊಡುಗೆ ನೀಡಿದ ಇತಿಹಾಸದ ಗೌರವಾನ್ವಿತ ವಿದ್ವಾಂಸರನ್ನು ಕಲ್ಪಿಸಿಕೊಳ್ಳಿರಿ. ನಿಮ್ಮ ಮನಸ್ಸಿನಲ್ಲಿ ಯಾವ ಚಿತ್ರ ಮೂಡುತ್ತದೆ? ಬಹುಶಃ ಗಡ್ಡಧಾರಿಯಾದ, ಸುಂದರ ನಿಲುವಂಗಿ ಧರಿಸಿದ ಮತ್ತು ತನ್ನ ವಿದ್ಯಾರ್ಥಿಗಳಿಂದ ಸುತ್ತುವರಿಯಲ್ಪಟ್ಟ ಒಬ್ಬ ಪುರುಷ ವಿದ್ವಾಂಸನ ಚಿತ್ರವಷ್ಟೇ ಮೂಡಬಹುದು. ಆದರೆ ಅಲ್-ದಹಬಿ, ಇಬ್ನ್ ಹಜರ್ ಮತ್ತು ಅಲ್-ಸಖಾವಿಯಂತಹ ಹೆಸರಾಂತ ವಿದ್ವಾಂಸರ ಬರಹಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ, ಈ ಪುರುಷ ವಿದ್ವಾಂಸರ ಜೊತೆಗೆ ಅಸಂಖ್ಯಾತ ಮಹಿಳಾ ವಿದ್ವಾಂಸರೂ (ಮುಹದ್ದಿಥಾತ್, ಫಕೀಹಾತ್, ಆಲಿಮಾತ್ ಮತ್ತು ಶೈಖಾತ್) ಇದ್ದದ್ದು ನಮಗೆ ತಿಳಿಯುತ್ತದೆ. ಇವರು ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ ಮತ್ತು ವಿಶಾಲವಾದ ಪ್ರದೇಶಗಳಿಗೆ ಇಸ್ಲಾಮಿಕ್ ಜ್ಞಾನದ ಪ್ರಕಾಶವನ್ನು ಹರಡಿದ್ದಾರೆ. ಅವರ ಅಸ್ತಿತ್ವವನ್ನು ಎಂದಿಗೂ ಸಂಪ್ರದಾಯಕ್ಕೆ ಸವಾಲಾಗಿ ನೋಡಲಾಗಿಲ್ಲ; ಬದಲಿಗೆ, ವಿದ್ವತ್ ಲೋಕದಲ್ಲಿ ಅವರನ್ನು ಕೊಂಡಾಡಲಾಯಿತು ಮತ್ತು ಅವರ ಜ್ಞಾನಕ್ಕೆ ಎಷ್ಟು ಬೇಡಿಕೆಯಿತ್ತೆಂದರೆ ಅನೇಕರು ಅವರಿಂದ ಕಲಿಯಲು ತಿಂಗಳುಗಟ್ಟಲೆ ಪ್ರಯಾಣಿಸುತ್ತಿದ್ದರು. ಅವರ ವೃತ್ತಿಜೀವನದಲ್ಲಿ ಕಂಡುಬರುವ ಜ್ಞಾನದ ಪ್ರಮಾಣ ಮತ್ತು ಉನ್ನತ ಮಟ್ಟವು, ಇಸ್ಲಾಮಿಕ್ ವಿದ್ವತ್ತಿನಲ್ಲಿ ಮುಸ್ಲಿಂ ಮಹಿಳೆಯರ ಪಾತ್ರ ಬಹಳ ಗೌಣವಾದುದು ಎಂಬ ಇಂದಿನ ಸಾಮಾನ್ಯ ದೃಷ್ಟಿಕೋನವನ್ನು ಸುಳ್ಳು ಮಾಡುತ್ತದೆ. ಅಂತಿಮವಾಗಿ ಹೇಳುವುದಾದರೆ, ಹದೀಸ್ ಮತ್ತು ಇಸ್ಲಾಮಿಕ್ ಪಠ್ಯಗಳ ‘ಇಸ್ನಾದ್’ಗಳಿಂದ (ಸರಪಳಿ) ಮಹಿಳೆಯರ ಹೆಸರುಗಳನ್ನು ತೆಗೆದುಹಾಕಿದರೆ, ಅನೇಕ ಜ್ಞಾನದ ಕೊಂಡಿಗಳು ಕಡಿದುಹೋಗುತ್ತವೆ ಮತ್ತು ಪವಿತ್ರ ಜ್ಞಾನದ ಪ್ರಸರಣವು ತಕ್ಷಣವೇ ಸ್ಥಗಿತಗೊಳ್ಳುತ್ತದೆ. 

‘ಇತಿಹಾಸದ ಮರುಪರಿಶೀಲನೆ'(historical revisionism) ಎನ್ನುವ ಮಾತಿಗೆ ಸಕಾರಾತ್ಮಕ ಮತ್ತು ನಕಾರಾತ್ಮಕವಾದ ಎರಡು ಮುಖಗಳಿದ್ದರೂ, ಇದನ್ನು “ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಮರುಪರಿಶೀಲಿಸುವುದು” ಎಂದು ಅರ್ಥೈಸಬಹುದು. ಇಸ್ಲಾಮಿಕ್ ಕಲಿಕಾ ಪದ್ಧತಿಯ ಮೂಲ ದಾಖಲೆಗಳನ್ನು ಸರಿಯಾಗಿ ವಿಶ್ಲೇಷಿಸಿದರೆ, ನಾವು ಇತಿಹಾಸದಲ್ಲಿನ ತಪ್ಪು ಕಲ್ಪನೆಗಳನ್ನು ಸರಿಪಡಿಸಬಹುದು. ಇದರಿಂದ ಮುಸ್ಲಿಂ ಮಹಿಳಾ ವಿದ್ವಾಂಸರು ಅಂದಿನ ಜ್ಞಾನದ ಪರಂಪರೆಯಲ್ಲಿ ಎಷ್ಟು ಮುಖ್ಯವಾದ ಕೊಂಡಿಗಳಾಗಿದ್ದರು ಎಂಬ ಸತ್ಯ ಹೊರಬರುತ್ತದೆ. ಮುಸ್ಲಿಂ ಮಹಿಳೆಯರ ನಿಜವಾದ ಇತಿಹಾಸವನ್ನು ತಿಳಿಯಲು ಬೇಕಾದ ಎಲ್ಲಾ ಮೂಲ ಆಧಾರಗಳು ನಮ್ಮ ಬಳಿಯೇ ಇವೆ; ನಾವು ಮಾಡಬೇಕಾಗಿರುವುದು ಇಷ್ಟೇ – ಅವನ್ನು ಆಳವಾಗಿ ಓದಿ ಅಭ್ಯಾಸ ಮಾಡುವುದು. ಹೀಗೆ ಮಾಡಿದಾಗ, ಇಸ್ಲಾಮಿಕ್ ಜ್ಞಾನಕ್ಕೆ ಬುನಾದಿ ಹಾಕಿದ ಮಹನೀಯರ ಸ್ಮರಣೆಯಲ್ಲಿ ಫಾತಿಮಾ ಬಿಂತ್ ಸಅದ್ ಅಲ್-ಖೈರ್, ಝೈನಬ್ ಬಿಂತು ಅಲ್-ಕಮಾಲ್ ಮತ್ತು ಅಮ್ರಾ ಬಿಂತ್ ಅಬ್ದ್ ಅಲ್-ರಹಮಾನ್ ರಂತಹ ಸಾಧಕಿಯರ ಹೆಸರುಗಳೂ ನಮಗೆ ನೆನಪಾಗುತ್ತವೆ. 

‘ಡ್ಯಾಮ್ನೇಟಿಯೊ ಮೆಮೊರಿಯಾ’ ಎಂಬುದು ಲ್ಯಾಟಿನ್ ಪದವಾಗಿದ್ದು, ಇತಿಹಾಸದಿಂದ ಒಬ್ಬ ವ್ಯಕ್ತಿ ಅಥವಾ ಘಟನೆಯನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕುವುದನ್ನು ಇದು ಸೂಚಿಸುತ್ತದೆ. ಆದರೆ, ಲಭ್ಯವಿರುವ ದಾಖಲೆಗಳ ಮೂಲಕ ಆ ವ್ಯಕ್ತಿಯ ಪರಂಪರೆಯನ್ನು ಮತ್ತೆ ಜೀವಂತಗೊಳಿಸಬಹುದು ಎಂಬುದು ಇದರ ವಿಶೇಷತೆ. ಮಹಿಳಾ ವಿದ್ವಾಂಸರ ವಿಷಯದಲ್ಲಿ, ಅವರ ಕೊಡುಗೆಗಳನ್ನು ಎಂದಿಗೂ ಮರೆಮಾಚಲಾಗಿಲ್ಲ; ವಾಸ್ತವವಾಗಿ, ಸಾಂಪ್ರದಾಯಿಕ ಇಸ್ಲಾಮಿಕ್ ಪಠ್ಯಗಳಾದ್ಯಂತ ಅವರ ಹೆಸರುಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತವೆ. ಆದರೂ ಈ ಸಾಂಪ್ರದಾಯಿಕ ಮೂಲಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಆಳವಾದ ಅಧ್ಯಯನ ನಡೆಯದ ಕಾರಣ ಅವರ ಪರಂಪರೆಗಳು ಹೆಚ್ಚಿನ ಜನರಿಗೆ ಅಪರಿಚಿತವಾಗಿಯೇ ಉಳಿದಿವೆ. ಇತಿಹಾಸವನ್ನು ನಾವು ಅರ್ಥಮಾಡಿಕೊಳ್ಳುವ ರೀತಿ ನಮ್ಮ ವರ್ತಮಾನದ ಬದುಕಿನ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಮುಸ್ಲಿಂ ಮಹಿಳೆಯ ಬಗ್ಗೆ ನಮ್ಮ ಐತಿಹಾಸಿಕ ಸ್ಮರಣೆಯನ್ನು ಸರಿಪಡಿಸುವುದು ಇಸ್ಲಾಮಿಕ್ ಬೌದ್ಧಿಕ ಸಂಪ್ರದಾಯದ ಬಗ್ಗೆ ಹೆಚ್ಚು ನಿಖರವಾದ ತಿಳುವಳಿಕೆಯನ್ನು ನೀಡುವುದಲ್ಲದೆ, ಇಂದಿನ ಕಾಲದಲ್ಲೂ ಧಾರ್ಮಿಕ ಶಿಕ್ಷಣದಲ್ಲಿ ಮಹಿಳೆಯರಿಗೆ ಇರುವ ಗೌರವಯುತ ಸ್ಥಾನವನ್ನು ಎತ್ತಿ ಹಿಡಿಯುತ್ತದೆ.

ಸಮಾಅ’ ಹಸ್ತಪ್ರತಿ:

ಈ ‘ಸಮಾಅ’ ಹಸ್ತಪ್ರತಿ ವಿವರ: ಲೆಡರ್ ಮುಂತಾದವರು ಸಂಪಾದಿಸಿದ ‘ಮುಅ್‌ಜಮ್ ಅಲ್-ಸಮಾಆತ್ ಅಲ್-ದಿಮಶ್ಖಿಯ್ಯಾ’, ಪುಟ 111, ಹಸ್ತಪ್ರತಿ ಸಂಖ್ಯೆ 3778, ಪ್ರಬಂಧ (ರಿಸಾಲಾ) 7, ಸಮಾಅ್ 1 ಮತ್ತು 7, ಪುಟ (ವರಖಾ) 79a ಮತ್ತು 85b. ಇದನ್ನು ನದ್ವಿಯವರ ‘ಅಲ್-ಮುಹದ್ದಿಥಾತ್’ ಪುಸ್ತಕದ 76ನೇ ಪುಟದಿಂದ ಉಲ್ಲೇಖಿಸಲಾಗಿದೆ.

ಲೇಖಕಿ: ಜೂಡ್ ಎಲ್ಝಿಕ್ – ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಧರ್ಮಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಅಭ್ಯರ್ಥಿಯಾಗಿದ್ದಾರೆ. ಇಸ್ಲಾಮೀ ಇತಿಹಾಸದಲ್ಲಿ ಮಹಿಳಾ ವಿದ್ವಾಂಸರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಲಂಡನ್ ವಿಶ್ವವಿದ್ಯಾಲಯದ ಎಸ್‌ಒಎಎಸ್ (SOAS) ನಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಅಬುಧಾಬಿಯ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಸಂಶೋಧನೆ ಮತ್ತು ಸಾರ್ವಜನಿಕ ನೀತಿಯಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. 

ಕೃಪೆ: yaqeeninstitute.org

ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು

Leave a Reply