ಪ್ರವಾದಿ ಇಬ್ರಾಹೀಮ್‌(ಅ)ರ ಪರಂಪರೆ: ಇಂದಿನ ಕಾಲಕ್ಕೆ ಹಜ್ ಪದ್ಧತಿಗಳ ಮಹತ್ವ ಮತ್ತುಅನಿವಾರ್ಯತೆ

0
BTS_YasinOsman1

ಲೇಖಕರು

ಶೇಕ್ಇಬ್ರಾಹೀಮ್‌ ಹಿಂದಿ (ಧಾರ್ಮಿಕ ನಿರ್ದೇಶಕ ಯಕೀನ್ ಇನ್ಸ್‌ಟಿಟ್ಯೂಷನ್‌ ಕೆನಡಾ)

ಡಾ. ನಝೀರ್ ಖಾನ್ (ಇಸ್ಲಾಮಿಕ್ ಧರ್ಮಶಾಸ್ತ್ರದ ಡಾಕ್ಟರೇಟ್ ಅಭ್ಯರ್ಥಿ, ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯ, ಲಂಡನ್)

ಪೀಠಿಕೆ 

ಪ್ರತಿವರ್ಷ ನಡೆಯುವ ಹಜ್ (ಮಕ್ಕಾಕ್ಕೆ ವಾರ್ಷಿಕ ಯಾತ್ರೆ) ದೃಶ್ಯಗಳು ಜಗತ್ತಿನ ಗಮನ ಸೆಳೆಯುವುದನ್ನು ಮುಂದುವರಿಸಿವೆ. ಲಕ್ಷಾಂತರ ಯಾತ್ರಿಕರ ಆಚರಣೆಗಳು ಮತ್ತು ಉದ್ದೇಶಗಳ ಸಮನ್ವಯತೆಯನ್ನು ಜನರು ಸಾಕ್ಷೀಕರಿಸುತ್ತಿದ್ದಂತೆ, ಅವರಿಗೆ ವಿಸ್ಮಯ ಮತ್ತು ಆಶ್ಚರ್ಯದ ಅನುಭವವಾಗುತ್ತದೆ. “ಹಜ್ ಏಕೆ ಮುಖ್ಯ?” ಅಥವಾ “ಆಧುನಿಕ ಕಾಲದಲ್ಲಿ ಈ ತೀರ್ಥಯಾತ್ರೆಯ ಆಚರಣಾ ಪದ್ಧತಿಗಳ ಉದ್ದೇಶವೇನು?” ಎಂದು ಜನರು ಆಗಾಗ್ಗೆ ಕೇಳುತ್ತಿರುತ್ತಾರೆ.

ಈ ಲೇಖನದಲ್ಲಿ, ನಾವು ಆಚರಣಾ ಪದ್ಧತಿಗಳ ಶಕ್ತಿಯ ಬಗ್ಗೆ ಚರ್ಚಿಸುತ್ತೇವೆ ಮತ್ತು ವಿಶೇಷವಾಗಿ ಹಜ್ ವಿಧಿವಿಧಾನಗಳ ವಿವಿಧ ಪ್ರಯೋಜನಗಳು ಹಾಗೂ ಮಹತ್ವದ ಮೇಲೆ ಗಮನ ಹರಿಸುತ್ತೇವೆ. ಈ ಚರ್ಚೆಯ ಸಂದರ್ಭದಲ್ಲಿ, ನಾವು ಮಾನವಶಾಸ್ತ್ರ, ಮನಃಶಾಸ್ತ್ರ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರ, ವ್ಯಾಖ್ಯಾನ, ತತ್ವಶಾಸ್ತ್ರ ಮತ್ತು ಮುಖ್ಯವಾಗಿ ಇಸ್ಲಾಮೀ ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಒಂದು ಸುದೀರ್ಘ ಅವಲೋಕನ ನಡೆಸಲು ಪ್ರಯತ್ನಿಸುತ್ತೇವೆ.

ಆಚರಣಾ ಪದ್ಧತಿ(Rituals)ಗಳು ಏಕೆ ಮುಖ್ಯ?

ಆಧುನಿಕ ಜಗತ್ತಿನಲ್ಲಿ, ಧಾರ್ಮಿಕ ಪದ್ಧತಿಗಳು(Rituals) ಕೇವಲ ಅಂಧಕಾರ ಯುಗದ ಅವಶೇಷಗಳೆಂದು ನೋಡಲಾಗುತ್ತದೆ. ಆಧುನಿಕ ಕೈಗಾರಿಕೀಕರಣದ ಬೆಳಕಿನಲ್ಲಿ ಸಮಾಜವು ಇವುಗಳನ್ನು ಮೀರಿ ಬೆಳೆದಿದೆ ಎಂದು ಭಾವಿಸಲಾಗಿದೆ. ಬಹಳಷ್ಟು ಜನರ ದೃಷ್ಟಿಯಲ್ಲಿ, ಐಹಿಕ ಲಾಭವೇ ಶ್ರೇಷ್ಠ ಮೌಲ್ಯ ಮತ್ತು ಮನುಷ್ಯನ ವರ್ತನೆಗೆ ಇರಬೇಕಾದ ಏಕೈಕ ಸಾರ್ಥಕ ಗುರಿಯಾಗಿದೆ. ಇಂತಹ ವಾದವು ಪದ್ಧತಿ(Rituals) ಗಳ ಆಚರಣೆಯನ್ನು ಯಾವುದೇ ಸ್ಪಷ್ಟ ಮೌಲ್ಯವನ್ನು ನೀಡದ ಅವಿವೇಕದ ವರ್ತನೆಗಳೆಂದು ಚಿತ್ರಿಸುತ್ತದೆ ಮತ್ತು ಇವುಗಳಿಗಿರುವ ಗುರಿಗಳನ್ನು ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಯ ಮೂಲಕ ಉತ್ತಮವಾಗಿ ಸಾಧಿಸಬಹುದು ಎಂದು ಪ್ರತಿಪಾದಿಸುತ್ತದೆ.

ಕ್ಯಾಥರೀನ್ ಬೆಲ್ ಅವರು ತನ್ನ ʻರಿಚುವಲ್ಸ್‌: ಪರ್ಸ್ಪೆಕ್ಟಿವ್ಸ್‌ ಆಂಡ್‌ ಡೈಮಾನ್ಷನ್ಸ್‌ʼ ಎಂಬ ಪುಸ್ತಕದಲ್ಲಿ, “ಆಧುನಿಕೀಕರಣಕ್ಕೆ ಅನುಗುಣವಾಗಿ ಆಚರಣೆ(Rituals)ಗಳು ಮತ್ತು ಧರ್ಮವು ಕ್ಷೀಣಿಸುತ್ತದೆ ಎಂಬ ಜನಪ್ರಿಯ ವಾದವು 19ನೇ ಶತಮಾನದ ಮಧ್ಯಭಾಗದಿಂದಲೂ ಸಮಾಜಶಾಸ್ತ್ರೀಯ ಸತ್ಯದಂತಿದೆ.” ಎಂದು ಅಭಿಪ್ರಾಯಿಸಿದ್ದಾರೆ. ಈ ಸಾಂಪ್ರದಾಯಿಕ ವಾದವು ಆಚರಣೆ(Rituals)ಗಳ ಕಲ್ಪನೆಯನ್ನು ನೇರವಾಗಿ ತರ್ಕದ ವಿರುದ್ಧವಾಗಿ ನಿಲ್ಲಿಸುತ್ತದೆ.

ಕೆವಿನ್ ಎಡ್ವರ್ಡ್ ಶಿಲ್‌ಬ್ರಾಕ್ ರವರು ತನ್ನ ʻಥಿಂಕಿಂಗ್‌ ಥ್ರೂ ರಿಚುವಲ್ಸ್‌: ಫಿಲಾಸಫಿಕಲ್‌ ಪರ್ಸ್ಪೆಕ್ಟಿವ್‌ʼ ಕೃತಿಯಲ್ಲಿ, “ಪ್ರಾಚೀನ ಮನಸ್ಸುಗಳು ತಮ್ಮ ಭಯವನ್ನು ಶಮನಗೊಳಿಸಲು ಮತ್ತು ತಮಗೆ ಸರಿಯಾಗಿ ಅರ್ಥವಾಗದ ವಿಷಯಗಳಿಗೆ ಒಂದು ‘ಅರ್ಥ’ ನೀಡಲು ಆಚರಣಾ ಪದ್ಧತಿ(Rituals)ಗಳನ್ನು ಬಳಸುತ್ತಿದ್ದವು, ಆದರೆ ತರ್ಕದ ಪರಿಪಕ್ವತೆ ಮತ್ತು ಆಧುನಿಕ ವಿಜ್ಞಾನದ ಬೆಳವಣಿಗೆಯೊಂದಿಗೆ ನಾವು ಸಹಜವಾಗಿಯೇ ಆ ಆಚರಣೆ(Rituals)ಗಳನ್ನು ಕೈಬಿಟ್ಟಿದ್ದೇವೆ.” ಎಂದು ವಿವರಿಸುತ್ತಾರೆ.

ಭೌತಿಕ ಜಗತ್ತಿನ ವ್ಯಾಪ್ತಿಯಲ್ಲಿ ಪರೀಕ್ಷಿಸಬಹುದಾದ ವಿಷಯಗಳಿಗೆ ಧಾರ್ಮಿಕ ಆಚರಣೆ(Rituals)ಗಳು ಸಂಬಂಧಿಸಿಲ್ಲದ ಕಾರಣ, ಅವುಗಳನ್ನು ಯಾವುದೇ ತರ್ಕಬದ್ಧ ವಿದ್ಯಾವಂತ ವ್ಯಕ್ತಿಗೆ ಅಸಮರ್ಪಕವೆಂದು ಪರಿಗಣಿಸಲಾಗುತ್ತಿದೆ. ಅಲ್ಲದೇ ಧಾರ್ಮಿಕ ಆಚರಣೆ(Rituals)ಗಳು ಭೌತಿಕ ಲಾಭಗಳ ಮೇಲೆ ಆಸಕ್ತಿ ಹೊಂದಿಲ್ಲದ ಕಾರಣದಿಂದಲೂ ಇವುಗಳನ್ನು ಅವಿವೇಕದ ವರ್ತನೆ ಎಂದು ನೋಡಲಾಗುತ್ತಿದೆ. ಭೌತಿಕ ಪ್ರತಿಫಲವಿಲ್ಲದೆ ಹಣ, ಸಮಯ ಮತ್ತು ಶಕ್ತಿಯಂತಹ ಸಂಪನ್ಮೂಲಗಳನ್ನು ವ್ಯಯಿಸುವ ಕಲ್ಪನೆಯನ್ನೇ ಬುದ್ಧಿಹೀನ ಮತ್ತು ಹಿಂದುಳಿದ ಪದ್ಧತಿ ಎಂದು ಪರಿಗಣಿಸಲಾಗುತ್ತಿದೆ. 

ಈ ವಾದಗಳು ಆಚರಣೆ(Rituals)ಗಳ ಮೌಲ್ಯ ಮತ್ತು ಪ್ರಸ್ತುತತೆಯ ಬಗ್ಗೆ ಮಾಡಿದ ಒಂದು ಬಾಲಿಶ ಚಿತ್ರಣ ಎಂದು ತಜ್ಞರು ಈಗ ಗುರುತಿಸುತ್ತಿದ್ದಾರೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ, ಈ “ಸೆಕ್ಯೂಲರ್ ಸಿದ್ಧಾಂತವನ್ನು” ಹೆಚ್ಚಿನ ಸಂಖ್ಯೆಯ ಸಮಾಜಶಾಸ್ತ್ರಜ್ಞರು ತಿರಸ್ಕರಿಸಿ ಮಾನವ ಜೀವನದ ಎಲ್ಲಾ ಆಯಾಮಗಳಲ್ಲಿ ಆಚರಣೆ(Rituals)ಗಳ ಮೂಲಭೂತ ಪಾತ್ರವನ್ನು ಎತ್ತಿ ತೋರಿಸಿದ್ದಾರೆ. ಆಚರಣೆ(Rituals)ಗಳು ಮಾನವ ನಡವಳಿಕೆಯ ಸಹಜ ಗುಣವೆಂದು ಈಗ ಹೆಚ್ಚಾಗಿ ನೋಡಲಾಗುತ್ತಿದೆ; ಅವುಗಳ ವಿವರಗಳು ಬದಲಾಗುತ್ತಿದ್ದರೂ, ಮಾನವ ಅನುಭವದಲ್ಲಿ ಅವು ಸದಾ ಉಳಿಯುತ್ತದೆ.

ಪೀಟರ್ ಬರ್ಕ್ ಮತ್ತು ರಾಯ್ ಪೋರ್ಟರ್ ರವರ ʻದಿ ಸೋಶಿಯಲ್‌ ಹಿಸ್ಟರಿ ಆಫ್‌ ಲ್ಯಾಂಗ್ವೇಜ್‌ʼ ಎಂಬ ಗ್ರಂಥದಲ್ಲಿ “…ಎಲ್ಲಾ ಸಮಾಜಗಳೂ ಸಮಾನವಾಗಿ ಆಚರಣಾ ಪದ್ಧತಿ(Rituals)ಗಳನ್ನು ಹೊಂದಿವೆ; ಅವು ಕೇವಲ ವಿಭಿನ್ನ ಪದ್ಧತಿಗಳನ್ನು ಆಚರಿಸುತ್ತವೆ ಅಷ್ಟೆ. ಕೈಗಾರಿಕೀಕರಣಗೊಂಡ ಸಮಾಜಗಳಲ್ಲಿ ಹೆಚ್ಚಿನ ಜನರು ನಿಯಮಿತವಾಗಿ ಚರ್ಚ್‌ಗೆ ಹೋಗದಿದ್ದರೆ ಅಥವಾ ವಿಸ್ತಾರವಾದ ದೀಕ್ಷಾ ವಿಧಿಗಳನ್ನು ಆಚರಿಸದಿದ್ದರೆ, ಅದರರ್ಥ ಆಚರಣಾ ಪದ್ಧತಿ(Rituals)ಗಳು ಕ್ಷೀಣಿಸಿವೆ ಎಂದಲ್ಲ. ಅಲ್ಲಿ ಆಗಿರುವುದು ಇಷ್ಟೇ—ಸಂಪ್ರದಾಯಬದ್ಧ ಪದ್ಧತಿಗಳ ಬದಲಿಗೆ ರಾಜಕೀಯ, ಕ್ರೀಡೆ, ಸಂಗೀತ, ವೈದ್ಯಕೀಯ, ಶೈಕ್ಷಣಿಕ ಮುಂತಾದ ಹೊಸ ರೀತಿಯ ಪದ್ಧತಿ(Rituals)ಗಳು ಸ್ಥಾನ ಪಡೆದಿವೆ.”

ಖಂಡಿತವಾಗಿಯೂ, ಪದ್ಧತಿ(Rituals)ಗಳು ಪ್ರತಿ ಸಮಾಜದಲ್ಲಿಯೂ ಹಾಸುಹೊಕ್ಕಾಗಿವೆ. ಇವು ಕೇವಲ ಧಾರ್ಮಿಕ ಆಚರಣೆಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ ಮತ್ತು ದೈನಂದಿನ ಸಾಮಾನ್ಯ ಚಟುವಟಿಕೆಗಳಲ್ಲಿಯೂ ಕಂಡುಬರುತ್ತವೆ. ಎಲ್ಲೆಡೆ ಕಾಣಸಿಗುವ ಅತ್ಯಂತ ಸಾಮಾನ್ಯ ಪದ್ಧತಿ(Rituals)ಯಲ್ಲಿ ಒಂದಾದ ಹಸ್ತಲಾಘವ(Handshake)ವನ್ನು ಗಮನಿಸಿರಿ. ಇದು ಏನನ್ನು ಪ್ರತಿನಿಧಿಸುತ್ತದೆ? ಬಹುಶಃ ಅಡಗಿಸಿಟ್ಟ ಆಯುಧಗಳು ತನ್ನ ಬಳಿ ಇಲ್ಲ ಎಂದು ತೋರಿಸುವ ಕ್ರಿಯೆಯಾಗಿ ಹುಟ್ಟಿಕೊಂಡ ಈ ಪ್ರಾಚೀನ ಪದ್ಧತಿಯು, ಇಂದು ಪರಸ್ಪರ ಸೌಜನ್ಯ, ಸ್ವಾಗತ, ಗೌರವ, ಘನತೆ, ನಂಬಿಕೆ ಮತ್ತು ಶಾಂತಿಯ ಸಂಕೇತವಾಗಿ ಬೆಳೆದಿದೆ. ಈ ಎಲ್ಲಾ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳು ಮನುಷ್ಯನ ಈ ಒಂದು ಸಣ್ಣ ಸಂಕೇತದಲ್ಲಿ ಅಡಕವಾಗಿವೆ. 

ಸಮಾವೇಶಗಳು, ಮೆರವಣಿಗೆಗಳು, ಉತ್ಸವಗಳು, ಪಟ್ಟಾಭಿಷೇಕ ಮತ್ತು ಉದ್ಘಾಟನಾ ಸಮಾರಂಭಗಳಂತಹ ಪ್ರತಿಯೊಂದು ಕಡೆಯೂ ಆಚರಣಾ ವಿಧಿ(Rituals)ಗಳು ಕಂಡುಬರುತ್ತವೆ. ಸಾಮಾಜಿಕ ಬದುಕಿನಲ್ಲಿ ವಿವಾಹ ಮತ್ತು ಶವಸಂಸ್ಕಾರದಂತಹ ವಿಧಿ(Rituals)ಗಳು ಇಂದಿಗೂ ಮುಂದುವರಿದಿವೆ; ಇವುಗಳಿಲ್ಲದಿದ್ದರೆ ಈ ಜೀವನದ ಪ್ರಮುಖ ಘಟನೆಗಳ ಮೌಲ್ಯವೇ ಇಲ್ಲದಂತಾಗುತ್ತದೆ. ಉಡುಗೊರೆಗಳ ವಿನಿಮಯ, ಹಾರೈಕೆ ಅಥವಾ ಸಂತಾಪ ಸೂಚನೆ, ಅತಿಥಿಗಳನ್ನು ಉಪಚರಿಸುವುದು, ಸಂಬಂಧಿಕರ ಭೇಟಿ, ಕೆಲಸದ ದಿನಗಳ ಪಾಲನೆ ಅಥವಾ ಮಕ್ಕಳಿಗೆ ಪದ್ಯಗಳನ್ನು ಹಾಡುವುದು – ಹೀಗೆ ಮನುಷ್ಯನ ಪ್ರತಿಯೊಂದು ಕ್ರಿಯೆಯಲ್ಲೂ ಪದ್ಧತಿ(Rituals)ಗಳು ಇಂದಿಗೂ ಮುಖ್ಯ ಪಾತ್ರ ನಿರ್ವಹಿಸುತ್ತಿರುವುದನ್ನು ನಾವು ಕಾಣಬಹುದು. 

ಆಚರಣಾ ವಿಧಿ(Rituals)ಗಳು ಮೌಖಿಕ ಸಂವಹನಕ್ಕೂ ಮೀರಿದ್ದಾಗಿರುವುದರಿಂದ ಅವು ಇಂದಿಗೂ ಮನುಷ್ಯನ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಮೌಲ್ಯ ಮತ್ತು ಅರ್ಥಗಳ ಕುರಿತಾದ ಸಾಮೂಹಿಕ ಭಾವನೆಗಳನ್ನು ವ್ಯಕ್ತಪಡಿಸಲು ಇವು ಸಹಕಾರಿಯಾಗಿದೆ. ಯಾವುದೇ ಒಂದು ವಿಶೇಷ ಸಂದರ್ಭ ಅಥವಾ ಸಂಬಂಧದ ಘನತೆಯನ್ನು ಪರಸ್ಪರ ಒಪ್ಪಿಕೊಳ್ಳಲು ಇವು ಅತ್ಯಂತ ಪರಿಣಾಮಕಾರಿ ಭಾಷೆಯಾಗಿ ಕೆಲಸ ಮಾಡುತ್ತವೆ. ಬೆಲ್ ಅವರ ಪ್ರಕಾರ, “ಆಚರಣಾ ವಿಧಿ(Rituals)ಗಳು ಕೇವಲ ಅಧಿಕಾರವನ್ನು ಪ್ರದರ್ಶಿಸುವ ಮಾಧ್ಯಮವಲ್ಲ, ಬದಲಿಗೆ ಅದು ಅಧಿಕಾರ ಮತ್ತು ವಿಧೇಯತೆಯ ನಡುವಿನ ಸಂಬಂಧಗಳನ್ನು ರೂಪಿಸುವ ಮಾಧ್ಯಮವಾಗಿದೆ ಎನ್ನುವುದಾಗಿ ಸಿದ್ಧಾಂತಿಗಳು ವಿಶ್ಲೇಷಿಸುತ್ತಾರೆ.” 

ಶಿಲ್‌ಬ್ರಾಕ್ ಅವರು ಪಿಯರೆ ಬೌರ್ಡಿಯು ಅವರ ಅಧ್ಯಯನಗಳನ್ನು ಬಳಸಿಕೊಂಡು ಆಚರಣಾ ವಿಧಿವಿಧಾನ(Rituals)ಗಳನ್ನು ಸಾಮಾಜಿಕ “ಕರೆ” ಎಂದು ಕರೆಯುತ್ತಾರೆ, ಇದು ಮನುಷ್ಯರಲ್ಲಿ ಸುಪ್ತವಾಗಿರುವ ದೈಹಿಕ ಗುಣಗಳನ್ನು ಎಚ್ಚರಿಸುತ್ತದೆ. ಈ ಕಾರಣದಿಂದಾಗಿ ವಿಧಿವಿಧಾನಗಳನ್ನು ಪ್ರತಿಭಟನೆಗಳಿಗೆ ಹೋಲಿಸಬಹುದು; ಅಂದರೆ, ಜನರು ಗುಂಪಾಗಿ ಸೇರುವುದು ಮತ್ತು ಮಂತ್ರಗಳನ್ನು ಅಥವಾ ಘೋಷಣೆಗಳನ್ನು ಪಠಿಸುವುದರಿಂದ ಅವರಲ್ಲಿ ಹೊಸ ಉತ್ಸಾಹ ಹಾಗೂ ಭಾವನೆಗಳು ಮತ್ತೆ ಚಿಗುರೊಡೆಯುತ್ತವೆ. 

ಈ ಕಾರಣಕ್ಕಾಗಿ, ಆಚರಣಾ ವಿಧಿವಿಧಾನ(Rituals)ಗಳು ಯಾವಾಗಲೂ ನಮ್ಮ ಸಾಮೂಹಿಕ ಜೀವನದ ಮಹತ್ವದ ಭಾಗವಾಗಿ ಉಳಿಯುತ್ತವೆ. ಜೀವನದ ಉದ್ದೇಶ ಮತ್ತು ಅರ್ಥವನ್ನು ರೂಪಿಸುವ, ಹಾಗೂ ಆಳವಾದ ಭಾವನೆಗಳನ್ನು ಬದಲಿಸುವ ಅಥವಾ ಸ್ಪರ್ಶಿಸುವ ಈ ಸಾಮರ್ಥ್ಯವು ಮಾನವ ಅನುಭವದಲ್ಲಿ ಯಾವುದರಿಂದಲೂ ಬದಲಾಯಿಸಲಾಗದ ಶಕ್ತಿಯಾಗಿದೆ. 

ಆಚರಣಾ ವಿಧಿವಿಧಾನಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ 

ಅಧ್ಯಾತ್ಮಿಕ ವಿಧಿವಿಧಾನ(Rituals)ಗಳು ವ್ಯಕ್ತಿಯಲ್ಲಿ ಅರ್ಥಪೂರ್ಣತೆಯನ್ನು ಸೃಷ್ಟಿಸುವಲ್ಲಿ ಮತ್ತು ಸುಪ್ತ ಭಾವನೆಗಳನ್ನು ಎಚ್ಚರಿಸುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿವೆ. ಮಾತಿನಲ್ಲಿ ಹೇಳಲಾಗದ ಅನುಭವಗಳನ್ನು ಅಭಿವ್ಯಕ್ತಗೊಳಿಸಲು ನಾವು ಈ ವಿಧಿವಿಧಾನ(Rituals)ಗಳನ್ನು ಬಳಸುತ್ತೇವೆ. ವ್ಯಾಪಕವಾದ ಅರ್ಥಗಳು, ಭಾವನೆಗಳ ಶ್ರೇಣಿಗಳು ಮತ್ತು ನೈತಿಕ ಮೌಲ್ಯಗಳನ್ನು ಒಂದು ಸಣ್ಣ ಕ್ರಿಯೆಯಲ್ಲಿ ಅಡಕಗೊಳಿಸುವ ಶಕ್ತಿ ಇವುಗಳಿಗಿದೆ. ಮಾನವ ಅನುಭವದ ಮಿತಿಗಳನ್ನು ಮೀರಿ ನಿಲ್ಲುವ ಮತ್ತು ಬರಿ ಮಾತಿನ ಸಂವಹನಕ್ಕೆ ನಿಲುಕದ ಅಂಶಗಳನ್ನು ಆಧ್ಯಾತ್ಮಿಕ ಆಚರಣೆ ಹಾಗೂ ಧಾರ್ಮಿಕ ವಿಧಿಗಳ ಮೂಲಕ ಪ್ರಕಟಿಸಲು ಸಾಧ್ಯವಾಗುತ್ತದೆ. 

ಆಚರಣಾ ವಿಧಿವಿಧಾನ(Rituals)ಗಳು ತರ್ಕಹೀನ ಎಂಬ ಆಧುನಿಕ ಪರಿಕಲ್ಪನೆಯು ಮುಖ್ಯವಾಗಿ ಅದರ ದೈಹಿಕ ಚಲನವಲನಗಳನ್ನು ಮೀರಿದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಅಸಮರ್ಥತೆಯಿಂದ ಉಂಟಾಗುತ್ತದೆ. ಅಂತಹ ಕ್ರಿಯೆಗಳ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವುದೇ ಈ ಅಲ್ಪದೃಷ್ಟಿಗೆ ಕಾರಣ. ಪ್ರಾಣಿ ಬಲಿಯ ವಿಧಿಯ ಕುರಿತು ಕುರ್‌ಆನ್ ಹೀಗೆ ಹೇಳುತ್ತದೆ: “ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನನ್ನು ತಲುಪದು, ಆದರೆ ನಿಮ್ಮಲ್ಲಿರುವ ದೇವನಿಷ್ಠೆಯು ಅವನನ್ನು ತಲುಪುತ್ತದೆ” (ಕುರ್‌ಆನ್ 22:37). ಈ ದೈಹಿಕ ಕ್ರಿಯೆಯು ಕೇವಲ ಬಾಹ್ಯ ರೂಪವಾಗಿದ್ದು, ತ್ಯಾಗದ ಭಾಷೆಯ ಮೂಲಕ ದೇವನ ಸಾಮಿಷ್ಯ ಗಳಿಸಲು ಮಾಡುವ ಆಧ್ಯಾತ್ಮಿಕ ಪ್ರಯತ್ನವಾಗಿದೆ. ಇಲ್ಲಿ ತನಗೆ ಪ್ರಿಯವಾದದ್ದನ್ನು ತ್ಯಜಿಸುವ ಮೂಲಕ ದೇವ ಪ್ರೀತಿ ಮತ್ತು ಆತನ ಆಜ್ಞೆಗೆ ಶರಣಾಗುವುದನ್ನು ಅಭಿವ್ಯಕ್ತಗೊಳಿಸಲಾಗುತ್ತದೆ. ಈ ಬಾಹ್ಯ ಆಚರಣೆ(Rituals)ಗಳು ಆಂತರಿಕ ಭಾವನೆಗಳ ಸಂಕೇತಗಳಾಗಿವೆ. ಇದನ್ನೇ ಅಲ್ಲಾಹನು ಕುರ್‌ಆನ್‌ನಲ್ಲಿ ವಿವರಿಸುತ್ತಾ, “ಯಾರು ಅಲ್ಲಾಹನ ಸಂಕೇತಗಳನ್ನು ಪಾಲಿಸುತ್ತಾರೋ, ಅದು ಅವರ ಹೃದಯದ ಧರ್ಮನಿಷ್ಠೆಯ ಸಂಕೇತವಾಗಿದೆ” ಎಂದು ಹೇಳುತ್ತಾನೆ (ಕುರ್‌ಆನ್ 22:32).

ವ್ಯತಿರಿಕ್ತವಾಗಿ, ಅಗತ್ಯವಾದ ಆಧ್ಯಾತ್ಮಿಕ ಅರಿವು, ಪ್ರೇರಣೆ ಮತ್ತು ಸಂಕಲ್ಪವಿಲ್ಲದೆ ಕೇವಲ ದೈಹಿಕವಾಗಿ ಆಚರಣೆ(Rituals)ಗಳನ್ನು ಮಾಡುವುದರಿಂದ ಅವು ಮಾನ್ಯತೆ ಪಡೆದ ಆರಾಧನೆ ಎನಿಸಿಕೊಳ್ಳುವುದಿಲ್ಲ. ಪ್ರವಾದಿ ಮುಹಮ್ಮದ್(ಸ) ರವರು ಈ ಬಗ್ಗೆ ಹೀಗೆ ಹೇಳಿದ್ದಾರೆ: “ಸುಳ್ಳು ನುಡಿ ಮತ್ತು ಅಶಿಸ್ತಿನ ನಡತೆಯನ್ನು ತ್ಯಜಿಸದವನು ಕೇವಲ ಅನ್ನಪಾನಗಳನ್ನು ಬಿಡುವುದರಲ್ಲಿ ದೇವನಿಗೆ ಯಾವುದೇ ಆಸಕ್ತಿಯಿಲ್ಲ.” ಮತ್ತೊಂದು ಕಡೆ, “ಒಬ್ಬ ವ್ಯಕ್ತಿ ದಿನವಿಡೀ ಉಪವಾಸವಿದ್ದು ಹಸಿವಿನ ಹೊರತು ಬೇರೇನನ್ನೂ ಗಳಿಸದಿರಬಹುದು, ಹಾಗೆಯೇ ರಾತ್ರಿಯಿಡೀ ಪ್ರಾರ್ಥನೆ ಮಾಡಿ ನಿದ್ರೆಯಿಲ್ಲದ ಬಳಲಿಕೆಯ ಹೊರತು ಬೇರೇನನ್ನೂ ಪಡೆಯದಿರಬಹುದು” ಎಂದು ಅವರು ಉಪವಾಸದ ಬಗ್ಗೆ ಎಚ್ಚರಿಸಿದ್ದಾರೆ.  

ವಿಧಿವಿಧಾನ(Rituals)ಗಳು ಮರುಕಳಿಸುವ ಸ್ವಭಾವವನ್ನು ಹೊಂದಿದೆ. ಆದರೆ ಪುನರಾವರ್ತನೆಯು ಅವುಗಳ ಮಹತ್ವವನ್ನಾಗಲಿ ಅಥವಾ ಅರ್ಥಪೂರ್ಣತೆಯನ್ನಾಗಲಿ ಕಡಿಮೆ ಮಾಡುವುದಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಪತ್ನಿ ಅಥವಾ ಪತಿಗೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಪದೇ ಪದೇ ಹೇಳಿದರೂ, ಆ ಪದಗಳ ಅರ್ಥ ಮತ್ತು ಬಲ ಕುಗ್ಗುವ ಬದಲು ಹೆಚ್ಚುತ್ತಾ ಹೋಗುತ್ತದೆ. ದೇವನ ಮೇಲಿನ ನಮ್ಮ ಪ್ರೀತಿ, ಪ್ರಾರ್ಥನೆ, ಬೇಡಿಕೆಗಳು ಹಾಗೂ “ಅಲ್-ಹಮ್ದುಲಿಲ್ಲಾಹ್” (ಸರ್ವ ಸ್ತುತಿ ದೇವನಿಗೆ ಮೀಸಲು) ಮತ್ತು “ಸುಬ್ಹಾನಲ್ಲಾಹ್” (ದೇವನು ಪರಮ ಪವಿತ್ರನು) ಎಂಬ ಜಪಗಳೂ ಸಹ ಹಾಗೆಯೇ ಆಗಿದೆ. ಈ ಕಾರ್ಯಗಳನ್ನು ನಾವು ಅರಿವಿನಿಂದ ಮತ್ತು ಆಳವಾದ ಆಲೋಚನೆಯಿಂದ ಮಾಡಿದಾಗ, ಅವು ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿ, ದೇವನ ಮೇಲಿನ ಪ್ರೀತಿ ಮತ್ತು ವಿಶ್ವಾಸದ ಉನ್ನತ ಹಂತಗಳನ್ನು ತಲುಪಲು ನಮಗೆ ನೆರವಾಗುತ್ತವೆ. 

ಆಚರಣೆ(Rituals)ಗಳು ತರ್ಕಾತೀತವಾಗಿದ್ದರೂ(supra-rational), ಅವುಗಳನ್ನು ನಿಗದಿಪಡಿಸಿರುವುದು ತರ್ಕಬದ್ಧ ಗುರಿಗಳಿಗಾಗಿಯೇ—ಅಂದರೆ ಇಹಲೋಕ ಮತ್ತು ಪರಲೋಕದಲ್ಲಿ ಮನುಷ್ಯನ ಆಧ್ಯಾತ್ಮಿಕ ಏಳ್ಗೆ ಹಾಗೂ ಸುಖಕ್ಕಾಗಿಯಾಗಿದೆ. ಅದೇ ವೇಳೆ, ಮುಸ್ಲಿಮರಿಗೆ ತರ್ಕಕ್ಕೆ ವಿರುದ್ಧವಾದ ಅಥವಾ ವಿವೇಚನೆಯಿಲ್ಲದ ವಿಧಿವಿಧಾನಗಳನ್ನು ಅನುಸರಿಸದಂತೆ ನಿರ್ಬಂಧಿಸಲಾಗಿದೆ; ಅಂದರೆ ಪ್ರಾಕೃತಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ಸಮರ್ಥಿಸಲಾಗದ ಆಚರಣೆಗಳನ್ನು ಕೈಬಿಡಬೇಕು. ಅರ್ಥಹೀನ ಆಚರಣೆ(Rituals)ಗಳು ಪ್ರಕೃತಿಯ ಬಗ್ಗೆ ಮೂಢನಂಬಿಕೆಗಳನ್ನು ಹುಟ್ಟುಹಾಕುತ್ತವೆ. ಗ್ರಹಣಗಳು ಯಾರೊಬ್ಬರ ಜನನ ಅಥವಾ ಮರಣದ ಕಾರಣದಿಂದ ಉಂಟಾಗುವುದಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಸ್ಪಷ್ಟಪಡಿಸಿದ್ದಾರೆ. ಆಧ್ಯಾತ್ಮಿಕವಾಗಿ ತರ್ಕಹೀನ ವಿಧಿವಿಧಾನ(Rituals)ಗಳು ಯಾವುದೇ ಧರ್ಮಗ್ರಂಥಗಳ ಆಧಾರವಿಲ್ಲದ ದೈವಿಕ ಹಕ್ಕುಗಳನ್ನು ಪ್ರತಿಪಾದಿಸುತ್ತವೆ (ಉದಾಹರಣೆಗೆ ಕುರ್‌ಆನ್‌ನ 6:138 ಮತ್ತು 5:103 ನೇ ವಚನಗಳನ್ನು ಗಮನಿಸಿರಿ; ಮೂಢನಂಬಿಕೆಯಿಂದ ಕೆಲವು ಪ್ರಾಣಿಗಳನ್ನು ಬಳಸಬಾರದು ಎಂಬ ಅರಬರ ಅಂದಿನ ವಿಧಿ(Rituals)ಗಳನ್ನು ವಿವರಿಸುತ್ತವೆ. ಅಲ್ಲಾಹನು ಆ ವಚನದಲ್ಲಿ “ಅವರಲ್ಲಿ ಹೆಚ್ಚಿನವರಿಗೆ ವಿವೇಕವಿಲ್ಲ” ಎಂದು ಹೇಳುವ ಮೂಲಕ ಆಚರಣೆ(Rituals)ಗಳು ತರ್ಕಬದ್ಧವಾಗಿರಬೇಕು ಎಂದು ಸಾಬೀತುಪಡಿಸುತ್ತಾನೆ). 

ಇಸ್ಲಾಮಿಕ್ ಆಚರಣೆ(Rituals)ಗಳ ಉದ್ದೇಶ:

ಇಸ್ಲಾಮಿಕ್ ವಿಧಿವಿಧಾನಗಳು ಅಥವಾ ‘ಇಬಾದತ್’, ಮುಸ್ಲಿಂ ಧರ್ಮಶಾಸ್ತ್ರಜ್ಞರು ಮತ್ತು ನ್ಯಾಯಶಾಸ್ತ್ರಜ್ಞರಲ್ಲಿ ಆಸಕ್ತಿಯ ವಿಷಯವಾಗಿವೆ. ಆದಾಗ್ಯೂ, ಹೆಚ್ಚಿನ ಇಸ್ಲಾಮಿಕ್ ವಿದ್ವತ್ತು ಈ ವಿಧಿವಿಧಾನ(Rituals)ಗಳ ಅಂತಿಮ ಉದ್ದೇಶಕ್ಕಿಂತ ಹೆಚ್ಚಾಗಿ ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಗಮನ ಹರಿಸುತ್ತದೆ. ನ್ಯಾಯಶಾಸ್ತ್ರಜ್ಞರು ವಿಧಿವಿಧಾನಗಳ ವರ್ಗೀಕರಣ ಮತ್ತು ಅವುಗಳ ರೂಪದ ಕಾನೂನುಬದ್ಧತೆಯ ಮೇಲೆ ಕೇಂದ್ರೀಕರಿಸಿದರೆ, ಧರ್ಮಶಾಸ್ತ್ರಜ್ಞರು ಪ್ರಮುಖವಾಗಿ ಧಾರ್ಮಿಕ ತತ್ವಗಳೊಂದಿಗೆ ಅವುಗಳಿಗಿರುವ ಸಂಬಂಧದ ಬಗ್ಗೆ ಆಸಕ್ತಿ ಹೊಂದಿದ್ದಾರೆ. 

‘ಇಬಾದತ್’ನ ಮೂಲ ಉದ್ದೇಶವು ಅಪ್ರಸ್ತುತ ಎಂದಲ್ಲ, ಬದಲಿಗೆ ಆ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲದ ಕಾರಣ ಅದರ ಚರ್ಚೆಗಳು ಹೆಚ್ಚು ಮುನ್ನೆಲೆಗೆ ಬಂದಿಲ್ಲ. ಈ ವಿಷಯದ ಬಗ್ಗೆ ಲಭ್ಯವಿರುವ ಮಾಹಿತಿಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ‘ತಝ್ಕಿಯ ಅಲ್-ನಫ್ಸ್’ (ಆತ್ಮದ ಶುದ್ಧೀಕರಣ) ವಿಭಾಗದ ಕೆಲವು ಸಂಶೋಧನೆಗಳು ಇಸ್ಲಾಮೀ ಆರಾಧನಾ ಪದ್ಧತಿ(Rituals)ಗಳ ಹಿಂದಿರುವ ಅಸಲಿ ಆಶಯವನ್ನು ವಿವರಿಸಲು ಶ್ರಮಿಸಿವೆ.

ವಾಸ್ತವವಾಗಿ, ಇಸ್ಲಾಮೀ ಆಚರಣೆ(Rituals)ಗಳ ಹಿಂದಿರುವ ಉದ್ದೇಶವು ಅತ್ಯಂತ ಪ್ರಮುಖವಾದುದು. ನಾವು ಹಜ್ ಯಾತ್ರೆಯ ವಿಶಿಷ್ಟ ವಿಧಿ(Rituals)ಗಳನ್ನು ವಿಶ್ಲೇಷಿಸುವಾಗ ಮತ್ತು ಹಜ್ ಅನುಭವವು ಒಬ್ಬ ವಿಶ್ವಾಸಿಯ ಆಂತರ್ಯದಲ್ಲಿ ಯಾವ ರೀತಿಯ ಭಾವನೆಗಳನ್ನು ಎಚ್ಚರಿಸಲು ಬಯಸುತ್ತದೆ ಎಂಬುದನ್ನು ಗಮನಿಸಿದಾಗ ಈ ಉದ್ದೇಶದ ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ. 

‘ಇಬಾದತ್’ ಎಂಬುದು ‘ಅಬ್ದ್’ ಪದದಿಂದ ಹುಟ್ಟಿಕೊಂಡಿದ್ದು, ಇದರ ಅರ್ಥ ಸೇವಕ ಎಂದಾಗಿದೆ. ಮುಹಮ್ಮದ್ ಇಬ್ನ್ ಮುಕರ್ರಾಮ್ ಇಬ್ನ್ ಮಂಝೂರ್ (ನಿಧನ 711 H / 1311 CE) ರವರ ‘ಲಿಸಾನ್ ಅಲ್-ಅರಬ್’ ಗ್ರಂಥದ ಪ್ರಕಾರ, ಅಬ್ದ್ ಪದದ ಮೂಲ ಅರ್ಥ ನಮ್ರತೆ ಅಥವಾ ವಿಧೇಯತೆಯಾಗಿದೆ. ಇದನ್ನು ಪುರಾತನ ಅರೇಬಿಕ್ ಭಾಷೆಯ ‘ಅಲ್-ತರೀಖ್ ಅಲ್-ಮಅಬದ್’ ಎಂಬ ಪದಪ್ರಯೋಗಕ್ಕೆ ಹೋಲಿಸಲಾಗಿದೆ. ಇದರರ್ಥ, ಅನೇಕರು ಪದೇ ಪದೇ ನಡೆದ ಕಾರಣದಿಂದ ಸವೆದು ಸಮತಟ್ಟಾಗಿರುವ ದಾರಿ ಅಥವಾ ಹಾದಿ ಎಂದರ್ಥ. 

ಮುಸ್ಲಿಂ ಪಂಡಿತರು ‘ಉಬೂದಿಯಾ’ (ದಾಸ್ಯ) ಮತ್ತು ‘ಇಬಾದತ್’ (ಆರಾಧನಾ ಕ್ರಮಗಳು) ಎಂಬ ವಿಷಯಗಳನ್ನು ಗ್ರಹಿಸಿರುವುದು ಈ ಮೂಲ ಅರ್ಥಗಳ ಆಧಾರದ ಮೇಲೆಯೇ ಆಗಿದೆ. ಇವೆಲ್ಲವೂ ‘ಅಬ್ದ್’ ಎಂಬ ಒಂದೇ ಪದದಿಂದ ಹುಟ್ಟಿದವುಗಳಾಗಿವೆ. ಧಾರ್ಮಿಕ ನಿಷ್ಠೆ ಮತ್ತು ಸಮರ್ಪಣಾ ಭಾವವನ್ನು ವರ್ಣಿಸಲು ದೇವನು ಬೇರೆ ಶಬ್ದಗಳನ್ನು ಬಳಸುವ ಅವಕಾಶವಿತ್ತಾದರೂ, ದೇವ ಮತ್ತು ದಾಸನ ನಡುವಿನ ಸಂಬಂಧವನ್ನು ತಿಳಿಸಲು ‘ಅಬ್ದ್’ ಪದದ ಮೂಲವನ್ನೇ ವಿಶೇಷವಾಗಿ ಆಯ್ದುಕೊಳ್ಳಲಾಗಿದೆ. 

ಇಬ್ನ್ ತೈಮಿಯ್ಯಾ (ನಿಧನ 728 ಹಿ) ರವರು ತನ್ನ ʻಜಾಮಿ ಅಲ್-ರಸೈಲ್ʼ ಗ್ರಂಥದಲ್ಲಿ ಈ ಕುರಿತು ಹೀಗೆ ಅಭಿಪ್ರಾಯಪಡುತ್ತಾರೆ: “ಆರಾಧನಾ ಕ್ರಮ (‘ಇಬಾದಾ’) ಎಂಬುದು ದೈವಿಕ ಪ್ರೀತಿಯ ಪರಾಕಾಷ್ಠೆ ಮತ್ತು ದೈವಿಕ ನಮ್ರತೆಯ ಪರಾಕಾಷ್ಠೆಯ ಜೋಡಿಯಾಗಿದೆ. ಈ ಹಿನ್ನೆಲೆಯಲ್ಲಿ ‘ಅಬ್ದ್’ ಎಂದರೆ ದೇವನ ಮುಂದೆ ಶರಣಾದ ಪ್ರೇಮಿ ಎಂದರ್ಥ.” 

ಇಬ್ನ್ ಅಲ್-ಖಯ್ಯಿಮ್ (ನಿಧನ 751 ಹಿ) ರವರು ತನ್ನ ʻಮದರಿಜ್ ಅಲ್-ಸಲಿಕೀನ್ʼ ಗ್ರಂಥದಲ್ಲಿ ಈ ಕುರಿತು ವಿಸ್ತರಿಸುತ್ತಾ ಹೀಗೆ ತಿಳಿಸುತ್ತಾರೆ: “ಆರಾಧನಾ ನಿಷ್ಠೆ (‘ಇಬಾದಾ’) ಎಂಬುದು ಪ್ರೀತಿಯ ಪರಮೋಚ್ಚ ಸ್ಥಿತಿಯಾಗಿದೆ. ‘ಪ್ರೀತಿಯು ಅವನನ್ನು ಸಂಪತ್ತಿನಂತೆ ತನ್ನ ದಾಸನನ್ನಾಗಿ (‘ಅಬ್ದಹು’) ಮಾಡಿಕೊಂಡಿದೆ’ ಎಂಬ ಜನಪ್ರಿಯ ಗಾದೆಯು ದೈವಿಕ ಪ್ರೀತಿಯ ನೈಜ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.” 

ಇಸ್ಲಾಮೀ ಪಂಡಿತರು ಆಚರಣೆ(Rituals)ಗಳನ್ನು ಮಾನವನ ಭಾವನಾತ್ಮಕ ಸ್ಥಿತಿಗಳೊಂದಿಗೆ ಹೇಗೆ ಜೋಡಿಸಿದ್ದಾರೆ ಎಂಬುದು ಈ ಎರಡೂ ವಿವರಣೆಗಳಿಂದ ಸ್ಪಷ್ಟವಾಗುತ್ತದೆ. ಇದರ ಅರ್ಥವೇನೆಂದರೆ, ಮನುಷ್ಯನಲ್ಲಿ ದೈವಿಕ ಪ್ರೀತಿ ಮತ್ತು ವಿಧೇಯತೆಯಂತಹ ಭಾವನೆಗಳನ್ನು ಎಚ್ಚರಿಸದ ಹೊರತು, ಯಾವುದೇ ಆಚರಣೆಯ ಬಾಹ್ಯ ರೂಪಕ್ಕೆ ಸಂಪೂರ್ಣ ಮೌಲ್ಯವಿರುವುದಿಲ್ಲ. 

ಅಬು ಹಿಲಾಲ್ ಅಲ್-ಅಸ್ಕರಿ (ನಿಧನ 395 ಹೆಚ್) ಅವರು ತನ್ನ ʻಅಲ್-ಫಾರೂಕ್ ಫಿ ಅಲ್-ಲುಘಾʼ ಕೃತಿಯಲ್ಲಿ, “ದೈವಿಕ ಜ್ಞಾನವಿಲ್ಲದೆ ಯಾವುದೇ ಆರಾಧನೆ (‘ಇಬಾದಾ’) ಅಸ್ತಿತ್ವದಲ್ಲಿಲ್ಲ.” ಅಂದರೆ, ಭಾವನಾತ್ಮಕ ಜೋಡಣೆ ಮತ್ತು ದೇವನ ಬಗೆಗಿನ ಅರಿವು ಇಲ್ಲದಿದ್ದರೆ ಆಚರಣೆ(Rituals)ಗಳಿಗೆ ಜೀವವಿರುವುದಿಲ್ಲ. ಆದ್ದರಿಂದ ನಮಾಝ್, ಉಪವಾಸ, ದಾನ ಅಥವಾ ಹಜ್ ಸೇರಿದಂತೆ ಪ್ರತಿ ಇಸ್ಲಾಮೀ ಆರಾಧನೆಯೂ ವ್ಯಕ್ತಿಯಲ್ಲಿ ಸುಪ್ತ ಭಾವನೆಗಳನ್ನು ಎಚ್ಚರಿಸುವ ಗುರಿ ಹೊಂದಿರುತ್ತದೆ. ನಮ್ಮ ಆರಾಧನೆಯಲ್ಲಿ ಸಂಪೂರ್ಣ ಮನಃಪೂರ್ವಕ ಏಕಾಗ್ರತೆ (ಹುದೂರ್ ಅಲ್-ಖಲ್ಬ್) ಕೊರತೆಯಿದ್ದರೂ ಸಹ, ಅದಕ್ಕೆ ದೈವಿಕ ಪ್ರತಿಫಲವಿರುತ್ತದೆ; ಏಕೆಂದರೆ ಆ ಹಂತವನ್ನು ತಲುಪಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುತ್ತೇವೆ ಎಂಬುದು ಗಮನಾರ್ಹ.  ‌

ಇಸ್ಲಾಮೀ ಆಚರಣೆಗಳು ಸಾಂಕೇತಿಕವಾದವುಗಳಾಗಿವೆ. ನಮಾಝ್‌ನಲ್ಲಿನ ಯಾವುದಾದರೂ ಒಂದು ನಿರ್ದಿಷ್ಟ ಭಂಗಿಯ ಬಗ್ಗೆ ಸ್ಪಷ್ಟವಾದ ಧಾರ್ಮಿಕ ಆಧಾರಗಳಿಲ್ಲದ ಕಾರಣಕ್ಕಾಗಿ ಮುಸ್ಲಿಂ ನ್ಯಾಯಶಾಸ್ತ್ರಜ್ಞರ ನಡುವೆ ಅಭಿಪ್ರಾಯ ಭೇದ ಉಂಟಾದಾಗ, ಅವರು ದೈವಿಕ ವಿಧೇಯತೆಯನ್ನು ಅತಿ ಹೆಚ್ಚಾಗಿ ಪ್ರತಿಬಿಂಬಿಸುವ ಭಂಗಿಯನ್ನೇ ಆಯ್ದುಕೊಳ್ಳುತ್ತಿದ್ದರು. ಪ್ರತಿ ಆಚರಣೆಯ ಹಿಂದೆಯೂ ಸಾಂಕೇತಿಕ ಅರ್ಥಗಳು ಅಡಗಿವೆ ಎಂಬುದು ಮುಸ್ಲಿಂ ಪಂಡಿತರ ಗ್ರಹಿಕೆಯಾಗಿತ್ತು. 

ವಾಸ್ತವವಾಗಿ, ನಮ್ಮ ತಸ್ಬೀಹ್ (ದೇವನ ಮಹಿಮೆಯನ್ನು ಸಾರುವುದು) ಹೇಗೆ ನಮ್ಮ ನಾಲಿಗೆಯ ಭಾಷೆಯೋ, ಹಾಗೆಯೇ ನಮ್ಮ ಸಲಾಹ್ (ನಮಾಝ್) ನಮ್ಮ ದೇಹದ ಭಾಷೆಯಾಗಿದೆ. ನಾವು ಸುಜೂದ್‌ನಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿದಾಗ, ನಾವು ಶಹಾದತ್ (ಸತ್ಯದ ಸಾಕ್ಷ್ಯ) ಮೂಲಕ ನಮ್ಮ ನಾಲಿಗೆಯಿಂದ ಹೇಗೆ ಹೇಳುತ್ತೇವೆಯೋ, ಹಾಗೆಯೇ ಆತನ ದಿವ್ಯ ಪ್ರಭುತ್ವ ಮತ್ತು ಏಕತೆಯನ್ನು ನಮ್ಮ ದೇಹದ ಮೂಲಕ ದೃಢೀಕರಿಸುತ್ತೇವೆ. 

ಹಜ್ ವಿಧಿವಿಧಾನ(Rituals)ಗಳು: ಇಬ್ರಾಹೀಮರ ಪರಂಪರೆ 

ಹಜ್ ವೃತ್ತಾಂತದಲ್ಲಿ ಇಬ್ರಾಹೀಮ್(ಅ) ರವರನ್ನು ಪ್ರಮುಖ ವ್ಯಕ್ತಿಯಾಗಿ ಕುರ್‌ಆನ್ ಪದೇ ಪದೇ ಬಿಂಬಿಸುತ್ತದೆ. ಇಬ್ರಾಹೀಮ(ಅ)ರಿಗೆ ಮಕ್ಕಾದ ಕಾಬಾ ಇರುವ ಸ್ಥಳವನ್ನು ತೋರಿಸಲಾಯಿತು (ಕುರ್‌ಆನ್ 22:26) ಮತ್ತು ಅವರು ತಮ್ಮ ಪುತ್ರ ಇಸ್ಮಾಯಿಲರ ಜೊತೆಗೂಡಿ ಕಾಬಾ  ಭವನವನ್ನು ನಿರ್ಮಿಸಿದರು ಎಂದು ಕುರ್‌ಆನ್ (2:127) ಹೇಳುತ್ತದೆ. ಇನ್ನು ಪ್ರವಾದಿ ವಚನಗಳಲ್ಲಿ ಹಜ್‌ನ ಆಚರಣೆ(Rituals)ಗಳನ್ನು “ಇಬ್ರಾಹೀಮರ ಪರಂಪರೆಯಿಂದ ಬಂದ ಬಳುವಳಿ” ಎಂದು ನೇರವಾಗಿ ಕರೆಯಲಾಗಿದೆ. 

ಹಜ್ ಆಚರಣೆ(Rituals)ಗಳನ್ನು ಗ್ರಹಿಸಲು ಇಬ್ರಾಹೀಮ್(ಅ) ರವರ ಜೀವನದ ಅರಿವು ಬಹಳ ಮುಖ್ಯ. ಈ ವಿಧಿಗಳ ಮೂಲಕ ತೀರ್ಥಯಾತ್ರಿಕರು ಒಂದು ಸಮಾನ ಇತಿಹಾಸದೊಂದಿಗೆ ಮತ್ತು ಇಬ್ರಾಹೀಮ್(ಅ) ಹಾಗೂ ಅವರ ಕುಟುಂಬದ ಪರಂಪರೆಯೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. 

ಇದೇ ಕಾರಣಕ್ಕಾಗಿ, ಇಸ್ಲಾಮ್‌ ಪೂರ್ವ ಅರಬರು ಇಬ್ರಾಹೀಮ(ಅ)ರ ಏಕದೇವೋಪಾಸನೆಯಿಂದ ದೂರ ಸರಿದಿದ್ದರೂ ಸಹ ಹಜ್ ಅನ್ನು ಆಚರಿಸುತ್ತಿದ್ದರು. ಹಜ್ ವಿಧಿಯು ಅವರನ್ನು ಅವರ ಪೂರ್ವಜರಾದ ಇಬ್ರಾಹೀಮ್(ಅ) ಮತ್ತು ಇಸ್ಮಾಯಿಲ(ಅ)ರೊಂದಿಗೆ ಜೋಡಿಸಿತ್ತು; ಅವರು ಇಬ್ರಾಹೀಮ(ಅ)ರ ಸಂದೇಶದ ಮೂಲ ತತ್ವಕ್ಕೆ ವಿರುದ್ಧವಾದ ಬಹುದೇವೋಪಾಸನೆಯನ್ನು ಅಪ್ಪಿಕೊಂಡಿದ್ದಾಗಲೂ ಈ ನಂಟು ಮುಂದುವರಿದಿತ್ತು. 

ವಾಸ್ತವವಾಗಿ, ಒಂದು ಸಮಾನ ಇತಿಹಾಸ, ವೃತ್ತಾಂತ ಮತ್ತು ಸಮುದಾಯದೊಂದಿಗೆ ನಂಟು ಬೆಳೆಸಿಕೊಳ್ಳುವುದು ಹಜ್ ಆಚರಣೆಗಳ ಅತಿ ದೊಡ್ಡ ಉದ್ದೇಶಗಳಲ್ಲಿ ಒಂದಾಗಿದೆ. ಹಜ್‌ನ ವಿಧಿವಿಧಾನ(Rituals)ಗಳ ಮೂಲಕ ವಿಶ್ವಾಸಿಯು ತನ್ನ ಕಾಲಘಟ್ಟದ ಆಚೆಗೆ ಹೋಗಿ, ಇತಿಹಾಸದಾದ್ಯಂತ ಬಿಲಿಯನ್ಗಟ್ಟಲೆ ಜನರನ್ನು ಒಂದುಗೂಡಿಸುವ ಮಹಾನ್ ಪರಂಪರೆಯನ್ನು ಗೌರವಿಸುತ್ತಾನೆ. 

ಕುರ್‌ಆನ್ ಮಂಡಿಸುವ ಹಜ್‌ನ ಅಪೂರ್ವ ವೃತ್ತಾಂತದ ಪ್ರಕಾರ, ಹಜ್ ತೀರ್ಥಯಾತ್ರೆಯ ಬಗ್ಗೆ ಜನರಿಗೆ ಘೋಷಣೆ ಮಾಡಲು ನಿಯೋಜಿತರಾದ ಮೊದಲಿಗರು ಇಬ್ರಾಹೀಮ್(ಅ) (ಕುರ್‌ಆನ್ 22:27) ಆಗಿದ್ದಾರೆ. ಆದರೆ, ಕುರ್‌ಆನಿನಲ್ಲಿ ಇಬ್ರಾಹೀಮ(ಅ)ರನ್ನು ತಮ್ಮ ಹತ್ತಿರದ ಕುಟುಂಬದವರಲ್ಲದೆ ಬೇರೆ ಯಾರೂ ಬೆಂಬಲಿಗರಿಲ್ಲದ ಒಬ್ಬ ವ್ಯಕ್ತಿಯಾಗಿ ಹೆಚ್ಚಾಗಿ ಬಿಂಬಿಸಲಾಗಿದೆ. ಅವರ ಏಕಾಂಗಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕುರ್‌ಆನ್ ಅವರನ್ನು “ಒಬ್ಬರೇ ಒಂದು ಸಮುದಾಯ” (ಉಮ್ಮತ್) ಎಂದು ಸಂಬೋಧಿಸುತ್ತದೆ (ಕುರ್‌ಆನ್ 16:120). 

ಹಾಗಿದ್ದರೂ, ಇಬ್ರಾಹೀಮ(ಅ)ರು ಹಜ್‌ಗಾಗಿ ನೀಡಿದ ಕರೆಯು ತಲೆಮಾರುಗಳ ನಂತರ ಫಲ ನೀಡಿದೆ; ಇಂದು ಪ್ರಪಂಚದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಅವರ ಹೆಜ್ಜೆಗಳನ್ನು ಅನುಸರಿಸಲು ಶ್ರಮಿಸುತ್ತಿದ್ದಾರೆ. ಇದು ಭರವಸೆ, ಆಶಾವಾದ ಮತ್ತು ದೇವನ ಮೇಲಿನ ಅಚಲ ನಂಬಿಕೆಯ ಸಂದೇಶವನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ದೇವನ ಇಚ್ಛೆಯಿದ್ದರೆ ಅಸಾಧ್ಯವಾದ ಫಲಿತಾಂಶಗಳನ್ನು ಸಹ ಹೇಗೆ ಸಾಧಿಸಬಹುದು ಎಂಬುದನ್ನು ಇದು ತೋರಿಸಿಕೊಡುತ್ತದೆ. 

ಹಜ್ ಯಾತ್ರೆಯು ಒಂದು ಬೃಹತ್ ಸಮುದಾಯದೊಂದಿಗೆ ಬೆರೆಯುವ ಅವಕಾಶವನ್ನೂ ಒದಗಿಸುತ್ತದೆ. ವಿವಿಧ ಜನಾಂಗೀಯ ಹಿನ್ನೆಲೆ ಮತ್ತು ವಯೋಮಾನದ ಮಿಲಿಯನ್ಗಟ್ಟಲೆ ಸ್ತ್ರೀ-ಪುರುಷರು, ಸಾಮಾನ್ಯ ಗುರಿಯೊಂದಿಗೆ ತಮ್ಮ ಆಚರಣೆಗಳನ್ನು ಸಮನ್ವಯಗೊಳಿಸುವುದು, ತೀರ್ಥಯಾತ್ರಿಕರಲ್ಲಿ ಅನ್ಯೋನ್ಯ ಸಹೋದರತ್ವ ಮತ್ತು ಆತ್ಮೀಯತೆಯ ಭಾವನೆಯನ್ನು ಮೂಡಿಸುತ್ತದೆ. ಈ ವಿಶಿಷ್ಟ ಅನುಭವವನ್ನು ಅನ್ಯತ್ರ ಪಡೆಯಲು ಸಾಧ್ಯವಿಲ್ಲ. 

ಈ ನಿಟ್ಟಿನಲ್ಲಿ ಮಾಲ್ಕಮ್ ಎಕ್ಸ್ ಅವರ ಹೇಳಿಕೆಯು ಹೆಚ್ಚು ಉಲ್ಲೇಖನೀಯವಾಗಿದೆ. ಅಮೆರಿಕದ ವರ್ಣಭೇದ ನೀತಿಯಿಂದಾಗಿ ಶ್ವೇತವರ್ಣೀಯರ ವಿರೋಧಿಯಾಗಿದ್ದ ಅವರು, ಹಜ್ ಯಾತ್ರೆಯ ನಂತರ ತಮ್ಮ ನಿಲುವನ್ನು ಬದಲಿಸಿಕೊಂಡರು. ಹಜ್ ಯಾತ್ರೆಯ ಸಂದರ್ಭದಲ್ಲಿ ಬರೆದ ಪತ್ರದಲ್ಲಿ ಆ ಅನುಭವವು ತಮ್ಮನ್ನು ಹೇಗೆ ಮಾರ್ಪಡಿಸಿತು ಎಂಬುದನ್ನು ಅವರು ಹೀಗೆ ವಿವರಿಸಿದ್ದಾರೆ:

“ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಯಾತ್ರಿಕರಿದ್ದರು. ನೀಲಿ ಕಣ್ಣಿನವರಿಂದ ಹಿಡಿದು ಕಪ್ಪು ವರ್ಣೀಯರವರೆಗೆ ಎಲ್ಲರೂ ಒಂದೇ ಆಚರಣೆಯಲ್ಲಿ ಭಾಗಿಯಾಗಿದ್ದರು. ಬಿಳಿಯರು ಮತ್ತು ಇತರರ ನಡುವೆ ಇಂತಹ ಸಹೋದರತ್ವ ಸಾಧ್ಯವೇ ಇಲ್ಲ ಎಂದು ನಾನು ಅಮೆರಿಕದಲ್ಲಿ ಭಾವಿಸಿದ್ದೆ, ಆದರೆ ಇಲ್ಲಿ ಆ ಏಕತೆ ಕಾಣಿಸುತ್ತಿತ್ತು…

…ಇಲ್ಲಿ ಕಳೆದ ಹನ್ನೊಂದು ದಿನಗಳಲ್ಲಿ, ಬಿಳಿಯ ಮುಸ್ಲಿಂ ಸಹೋದರರೊಂದಿಗೆ ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇನೆ ಮತ್ತು ಒಂದೇ ದೇವರನ್ನು ಆರಾಧಿಸಿದ್ದೇನೆ. ನೈಜೀರಿಯಾ ಅಥವಾ ಸುಡಾನ್‌ನ ಕಪ್ಪು ಮುಸ್ಲಿಮರಲ್ಲಿ ನಾನು ಯಾವ ಪ್ರಾಮಾಣಿಕತೆಯನ್ನು ಕಂಡಿದ್ದೆನೋ, ಅದನ್ನೇ ಈ ಬಿಳಿ ಮುಸ್ಲಿಮರ ನಡವಳಿಕೆಯಲ್ಲೂ ಕಂಡೆ. ನಾವೆಲ್ಲರೂ ನಿಜವಾಗಿಯೂ ಸಹೋದರರು ಮತ್ತು ಸಮಾನರು.”

ಹಜ್ ಆಚರಣೆಗಳು ಮಾನವನ ಅಂತರಂಗದ ಭಾವನೆಗಳನ್ನು ಜಾಗೃತಗೊಳಿಸಿ, ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹೇಗೆ ಸಹಕಾರಿಯಾಗುತ್ತವೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ. ಈ ಆಚರಣೆಗಳು ನಮ್ಮನ್ನು ಒಂದು ಉನ್ನತ ಉದ್ದೇಶದೊಂದಿಗೆ ಮತ್ತು ಒಂದು ಬೃಹತ್ ಸಮುದಾಯದೊಂದಿಗೆ ಬೆಸೆಯುತ್ತವೆ. ಅಷ್ಟೇ ಅಲ್ಲದೆ, ಇಬ್ರಾಹೀಮ(ಅ)ರ ಶ್ರೇಷ್ಠ ಪರಂಪರೆ ಮತ್ತು ಇತಿಹಾಸದೊಂದಿಗೆ ನಮಗೆ ನಂಟು ಕಲ್ಪಿಸುತ್ತವೆ. 

ಹಜ್ ವಿಧಿವಿಧಾನ(Rituals)ಗಳ ಸಾಂಕೇತಿಕತೆ 

ನಾವು ಈ ಹಿಂದೆ ಚರ್ಚಿಸಿದಂತೆ, ಇಸ್ಲಾಮೀ ವಿಧಿವಿಧಾನ(Rituals)ಗಳು ಉದ್ದೇಶವಿಲ್ಲದವುಗಳಲ್ಲ; ಬದಲಾಗಿ ಅವು ವಿಶ್ವಾಸಿಗಳ ಹೃದಯದಲ್ಲಿ ಭಾವನೆಗಳನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತವೆ. ಹಜ್‌ನ ಆಚರಣೆಗಳು ಮತ್ತು ವಿಧಿಗಳು ಇದಕ್ಕೆ ಹೊರತಲ್ಲ. ವಾಸ್ತವವಾಗಿ, ಹಜ್‌ನ ಮೂಲಕ ‘ಹೃದಯಗಳನ್ನು ಒಲಿಸಿಕೊಳ್ಳುವ’ (ಅಂದರೆ ಭಾವನೆಗಳು ಮತ್ತು ಆಸಕ್ತಿಗಳು) ಗುರಿಯನ್ನು ಕುರ್‌ಆನ್ ನಿರ್ದಿಷ್ಟವಾಗಿ ತಿಳಿಸುತ್ತದೆ. ಇದು ಇಬ್ರಾಹೀಮ(ಅ)ರ ಪ್ರಾರ್ಥನೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ, ಇದನ್ನು ನಂತರ ದೇವನು ಹಜ್‌ನ ಆಜ್ಞೆಯ ಮೂಲಕ ನೆರವೇರಿಸಿದನು: 

“ಓ ನನ್ನ ಪ್ರಭೂ, ನಾನು ನನ್ನ ಸಂತತಿಯ ಒಂದು ಭಾಗವನ್ನು ಒಂದು ಬಂಜರು ಕಣಿವೆಯಲ್ಲಿ ನಿನ್ನ ಸನ್ಮಾನ್ಯ ಗೃಹದ ಬಳಿ ತಂದು ನೆಲೆಗೊಳಿಸಿದ್ದೇನೆ. ಓ ನನ್ನ ಪ್ರಭೂ, ಇವರು ನಮಾಝನ್ನು ಸಂಸ್ಥಾಪಿಸಲೆಂದು ಹೀಗೆ ಮಾಡಿದ್ದೇನೆ. ಆದುದರಿಂದ ನೀನು ಜನಮನಗಳು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ತಿನ್ನಲು ಫಲಗಳನ್ನು ನೀಡು. ಇವರು ಕೃತಜ್ಞರಾಗಲೂ ಬಹುದು.” (ಕುರ್‌ಆನ್‌ 14:37)

ಕುರ್‌ಆನ್ ಪ್ರಾಣಿ ಬಲಿಯ ವಿಧಿವಿಧಾನಗಳನ್ನು ಉಲ್ಲೇಖಿಸುವಾಗ ಇದನ್ನು ಮತ್ತೊಮ್ಮೆ ನೆನಪಿಸುತ್ತದೆ: “ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ, ಆದರೆ ನಿಮ್ಮಲ್ಲಿರುವ ಧರ್ಮನಿಷ್ಠೆಯು(ತಕ್ವಾ) ಆತನನ್ನು ತಲುಪುತ್ತದೆ” (ಕುರ್‌ಆನ್ 22:37). 

ಹೀಗಾಗಿ, ಹಜ್‌ನ ಪ್ರತಿಯೊಂದು ವಿಧಿ ಮತ್ತು ಪದ್ಧತಿ(Rituals)ಯನ್ನು ಪರಿಶೀಲಿಸುವುದರಿಂದ, ಆ ಪ್ರತಿಯೊಂದು ಆಚರಣೆಯ ಉದ್ದೇಶಿತ ಆಧ್ಯಾತ್ಮಿಕ ಅರ್ಥಗಳನ್ನು ನಾವು ಕಂಡುಕೊಳ್ಳಬಹುದು. ಪ್ರತಿಯೊಂದು ವಿಧಿಯು ಕೇವಲ ಮಾತಿನಲ್ಲಿ ವ್ಯಕ್ತಪಡಿಸಲಾಗದ ಅರ್ಥಗಳನ್ನು ಹೇಗೆ ಒಳಗೊಂಡಿದೆ ಮತ್ತು ತೀರ್ಥಯಾತ್ರಿಕನನ್ನು ಆಧ್ಯಾತ್ಮಿಕತೆ, ಪರಂಪರೆ ಮತ್ತು ಸಮುದಾಯದ ಶ್ರೀಮಂತಿಕೆಯೊಂದಿಗೆ ಹೇಗೆ ಬೆಸೆಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. 

ತವಾಫ್ ಸಾಂಕೇತಿಕತೆ:

ಹಜ್ ಅಥವಾ ಉಮ್ರಾ ಸಂದರ್ಭದಲ್ಲಿ ಕಾಬಾ ಭವನದ ಸುತ್ತ ಏಳು ಪ್ರದಕ್ಷಿಣೆ ಹಾಕುವ ವಿಧಿಗೆ ತವಾಫ್ ಎಂದು ಕರೆಯಲಾಗುತ್ತದೆ. ಹಜ್ ಯಾತ್ರೆಯ ಆಚರಣೆಗಳಲ್ಲಿ ತವಾಫ್ ಅತ್ಯಂತ ಪ್ರಮುಖ ವಿಧಿಯಾಗಿದೆ; ಮಕ್ಕಾದ ಕಾಬಾದ ಸುತ್ತ ಮಿಲಿಯನ್ಗಟ್ಟಲೆ ಜನರು ಪ್ರದಕ್ಷಿಣೆ ಬರುವ ಸಾಂಕೇತಿಕ ಚಿತ್ರಣವು ಇದರಿಂದಲೇ ಮೂಡಿಬರುತ್ತದೆ. 

ದೇವನ ಆರಾಧನೆಗಾಗಿ ಭೂಮಿಯಲ್ಲಿ ನಿರ್ಮಿಸಲಾದ ಪ್ರಪ್ರಥಮ ಭವನ ಮತ್ತು ಸೃಷ್ಟಿಕರ್ತನ ಮಹಿಮೆಗಾಗಿ ಮೀಸಲಾದ ಮೊದಲ ಧಾರ್ಮಿಕ ಕೇಂದ್ರ ಕಾಬಾ ಎಂದು ಹೇಳಲಾಗುತ್ತದೆ. ಕುರ್‌ಆನ್ ಇದನ್ನು ಮಾನವಕುಲದ “ಮತಾಬಾ” (ಆಶ್ರಯ ತಾಣ) ಮತ್ತು “ದೈವಿಕ ಭವನ” ಎಂದು ಬಣ್ಣಿಸಿದೆ (ಕುರ್‌ಆನ್ 2:125). ಹೀಗಾಗಿ, ಕಾಬಾದ ಉಪಸ್ಥಿತಿಯು ಭಕ್ತರಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತದೆ ಮತ್ತು ದೇವನೊಂದಿಗಿನ ನಂಟನ್ನು ಮರುಸ್ಥಾಪಿಸುತ್ತದೆ. 

ಇಮಾಮ್ ಅಬು ಹಮೀದ್ ಅಲ್-ಗಝಾಲಿ (ಮರಣ 505 ಹಿ) ತನ್ನ ʻಇಹ್ಯಾ ಉಲುಮ್ ಅಲ್-ದೀನ್ʼ ಕೃತಿಯಲ್ಲಿ ಹೀಗೆ ಹೇಳಿದ್ದಾರೆ: “ದೇವನ ಭವನದ ಸುತ್ತ ಮಾಡುವ ತವಾಫ್ ಒಂದು ರೀತಿಯ ನಮಾಝ್‌ ಇದ್ದಂತೆ; ಅದನ್ನು ಸಲ್ಲಿಸುವಾಗ ನಿಮ್ಮ ಮನಸ್ಸು ಭಕ್ತಿ, ಭಯ, ಆಸೆ ಮತ್ತು ಪ್ರೀತಿಯಿಂದ ತುಂಬಿರಲಿ. ತವಾಫ್ ಮಾಡುವಾಗ ನೀವು ದೈವಿಕ ಅರ್ಷ್ (ಸಿಂಹಾಸನ) ಸುತ್ತ ಪ್ರದಕ್ಷಿಣೆ ಹಾಕುವ ಮಲಕ್‌ಗಳನ್ನು (ದೇವದೂತರನ್ನು) ಅನುಕರಿಸುತ್ತಿದ್ದೀರಿ ಎಂಬ ಪ್ರಜ್ಞೆ ಇರಲಿ. ತವಾಫ್ ಎಂದರೆ ಕೇವಲ ದೇಹದ ಓಡಾಟವಲ್ಲ, ಅದು ಭವನದ ಒಡೆಯನಾದ ದೇವನ ಸ್ಮರಣೆಯೊಂದಿಗೆ ಮನಸ್ಸು ಮಾಡುವ ಪ್ರದಕ್ಷಿಣೆ. ಹಜ್ ಯಾತ್ರೆಯು ತವಾಫ್‌ನಿಂದಲೇ ಆರಂಭವಾಗಿ ತವಾಫ್‌ನಲ್ಲೇ ಮುಗಿಯುವಂತೆ, ನಿಮ್ಮ ಬದುಕಿನ ಪ್ರತಿ ಆಲೋಚನೆಯೂ ದೇವನ ಸ್ಮರಣೆಯಲ್ಲೇ ಇರಬೇಕು. ಈ ಭೌತಿಕ ತವಾಫ್ ಎಂಬುದು ಅದೃಶ್ಯ ಲೋಕದಲ್ಲಿ ದೇವನ ಸಾರ್ವಭೌಮತ್ವದ ಸುತ್ತ ನಿಮ್ಮ ಹೃದಯವು ಮಾಡುವ ಆಧ್ಯಾತ್ಮಿಕ ಪ್ರದಕ್ಷಿಣೆಯ ಸಾಂಕೇತಿಕ ರೂಪವಾಗಿದೆ. ಇದು ಅದೃಶ್ಯ ಲೋಕದ ‘ಖಲ್ಬ್’ (ಆಧ್ಯಾತ್ಮಿಕ ಹೃದಯ) ಅನ್ನು ಈ ಲೋಕದಲ್ಲಿ ದೇಹವು ಬಿಂಬಿಸುವಂತೆಯೇ ಆಗಿದೆ.” 

ಮುಸ್ಲಿಮರು ಕಾಬಾವನ್ನು ಪೂಜಿಸುತ್ತಾರೆ ಎಂಬ ತಪ್ಪು ತಿಳುವಳಿಕೆ ಕೆಲವರಲ್ಲಿದೆ. ಆದರೆ ಕಾಬಾದ ಕಟ್ಟಡದ ವಸ್ತುಗಳಲ್ಲಾಗಲಿ, ಇಟ್ಟಿಗೆಯಲ್ಲಾಗಲಿ, ಗಾರೆಯಲ್ಲಾಗಲಿ ಅಥವಾ ಅದರ ಮೇಲಿನ ಬಟ್ಟೆಯಲ್ಲಾಗಲಿ ಯಾವುದೇ ಸ್ವತಃಸಿದ್ಧ ಪವಿತ್ರತೆ ಇಲ್ಲ. ಕಾಬಾವು ಕೇವಲ ‘ಕಿಬ್ಲಾ’ ಅಂದರೆ ಮುಸ್ಲಿಮರು ಪ್ರಾರ್ಥನೆಗಾಗಿ ಬಳಸುವ ದಿಕ್ಕನ್ನು ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ರವರ ಕಾಲದ ಆರಂಭಿಕ ಹಂತದಲ್ಲಿ ಜೆರುಸಲೆಮ್‌ನ ಮಸೀದಿದುಲ್ ಅಕ್ಸಾ ಕಿಬ್ಲಾ ಆಗಿತ್ತು. ನಂತರ ಕಿಬ್ಲಾವನ್ನು ಕಾಬಾಕ್ಕೆ ಬದಲಾಯಿಸಿದಾಗ, ಯಾವುದೇ ಭೌತಿಕ ದಿಕ್ಕು ಅಥವಾ ಕಟ್ಟಡವು ತನ್ನಷ್ಟಕ್ಕೆ ತಾನೇ ಪವಿತ್ರವಲ್ಲ ಎಂಬ ಸತ್ಯವನ್ನು ಕುರ್‌ಆನ್ ನೆನಪಿಸಿತು. ಯಾವುದೇ ವಸ್ತು ಅಥವಾ ದಿಕ್ಕಿಗೆ ಪವಿತ್ರತೆ ಲಭಿಸುವುದು ದೇವನು ಅದಕ್ಕೆ ನೀಡುವ ವಿಶೇಷ ಸ್ಥಾನಮಾನ ಮತ್ತು ಅರ್ಥದಿಂದ ಮಾತ್ರವಾಗಿದೆ.

“ನೀವು ನಿಮ್ಮ ಮುಖಗಳನ್ನು ಪೂರ್ವದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿಕೊಳ್ಳುವುದು ಧರ್ಮಶೀಲತೆಯಲ್ಲ. ನಿಜವಾಗಿ ಒಬ್ಬನು ಅಲ್ಲಾಹನನ್ನೂ ನಿರ್ಣಾಯಕ ದಿನವನ್ನೂ ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ  ಅವನ ಸಂದೇಶವಾಹಕರನ್ನೂ ಹೃತ್ಪೂರ್ವಕ ಒಪ್ಪಿಕೊಳ್ಳುವುದೂ ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ ಅನಾಥರಿಗೂ ನಿರ್ಗತಿಕರಿಗೂ ಪ್ರಯಾಣಿಕರಿಗೂ ಸಹಾಯಾರ್ಥಿಗಳಿಗೂ ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದೂ ನಮಾಝನ್ನು ಸಂಸ್ಥಾಪಿಸುವುದೂ ಝಕಾತ್(ಕಡ್ಡಾಯದಾನ) ನೀಡುವುದೂ ವಾಗ್ದಾನ ಮಾಡಿದರೆ ಪೂರೈಸುವುದೂ ಕಷ್ಟಕಾರ್ಪಣ್ಯಗಳಲ್ಲಿಯೂ ಸತ್ಯಾಸತ್ಯಗಳ ಸಮರವಾಗುತ್ತಿರುವಾಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರು ಮತ್ತು ಇವರೇ ಧರ್ಮನಿಷ್ಠರು.” (ಕುರ್‌ಆನ್‌ 2:177)

ಅದೇ ರೀತಿ, ತವಾಫ್ ಸಮಯದಲ್ಲಿ ‘ಹಜ್ರೇ ಅಸ್ವದ್’ (ಕಪ್ಪು ಕಲ್ಲು) ಅನ್ನು ಚುಂಬಿಸುವುದು ಪಶ್ಚಾತ್ತಾಪ ಮತ್ತು ಕ್ಷಮೆಯಾಚನೆಯ ಒಂದು ಸಾಂಕೇತಿಕ ಕ್ರಿಯೆಯಾಗಿದೆ. ಉಮರ್ ಇಬ್ನ್ ಅಲ್-ಖತ್ತಾಬ್ ಅವರು ಆ ಕಲ್ಲನ್ನು ಚುಂಬಿಸುತ್ತಾ ಹೀಗೆ ಹೇಳಿದ್ದರು: “ಅಲ್ಲಾಹನ ಆಣೆಯಾಗಿ, ನೀನು ಕೇವಲ ಒಂದು ಕಲ್ಲು ಎಂಬುದು ನನಗೆ ತಿಳಿದಿದೆ. ಒಂದು ವೇಳೆ ಅಲ್ಲಾಹನ ಸಂದೇಶವಾಹಕರು ನಿನ್ನನ್ನು ಚುಂಬಿಸುವುದನ್ನು ನಾನು ಕಾಣದಿದ್ದರೆ, ನಾನು ಎಂದಿಗೂ ನಿನ್ನನ್ನು ಚುಂಬಿಸುತ್ತಿರಲಿಲ್ಲ.” 

ಹೇಗೆ ಕಾಬಾ ಈ ಧಾರ್ಮಿಕ ವಿಧಿಯ ಕೇಂದ್ರವಾಗಿದೆಯೋ, ಹಾಗೆಯೇ ದೇವನು ನಮ್ಮ ಬದುಕಿನ ಕೇಂದ್ರಬಿಂದುವಾಗಿರಬೇಕು ಎಂದು ತವಾಫ್ ನಮಗೆ ನೆನಪಿಸುತ್ತದೆ. ಇದು ಒಂದು ವಿಧೇಯತೆಯ ಕ್ರಿಯೆಯಾಗಿದ್ದು, ವಿಶ್ವಾಸಿಗಳು ತಮ್ಮ ಆರಾಧನೆಯ ಕೇಂದ್ರದಲ್ಲಿ ದೇವನನ್ನು ಇರಿಸಿದ್ದಾರೆ ಎಂಬ ಸತ್ಯವನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಅಲ್ಲದೆ, ನಾವು ಅದನ್ನು ಅರಿತಿರಲಿ ಅಥವಾ ಬಿಟ್ಟಿರಲಿ, ನಮ್ಮ ಒಟ್ಟಾರೆ ಅಸ್ತಿತ್ವವು ಆ ದೇವನ ಸುತ್ತಲೇ ಆವರಿಸಿದೆ ಎಂಬ ಅರಿವನ್ನು ಇದು ಮೂಡಿಸುತ್ತದೆ. 

ಸಯೀ ಆಚರಣೆಯ ಸಾಂಕೇತಿಕ ಅರ್ಥ 

ಸಯೀ ಎಂದರೆ ಅಕ್ಷರಶಃ ಅನ್ವೇಷಣೆ ಅಥವಾ ಪ್ರಯತ್ನ ಎಂದರ್ಥ; ಇದು ಸಫಾ ಮತ್ತು ಮರ್ವಾ ಎಂಬ ಎರಡು ಬೆಟ್ಟಗಳ ನಡುವೆ ಓಡಾಡುವ ವಿಧಿಯಾಗಿದೆ. ಈ ಆಚರಣೆಯು ಹಾಜರಾ ಮತ್ತು ಅವರ ಪುತ್ರ ಇಸ್ಮಾಯಿಲರ ಇತಿಹಾಸವನ್ನು ನೆನಪಿಸುತ್ತದೆ. ದೇವನ ಆಜ್ಞೆಯಂತೆ ಇಬ್ರಾಹೀಮ(ಅ)ರು ಅವರಿಬ್ಬರನ್ನೂ ಜನಶೂನ್ಯ ಮರುಭೂಮಿಯಲ್ಲಿ ಬಿಟ್ಟಿದ್ದರು. ನಿರ್ಜನ ಪ್ರದೇಶದಲ್ಲಿ ತಮ್ಮನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ಹಾಜರಾ ಅವರು ಇಬ್ರಾಹೀಮ(ಅ)ರನ್ನು ಪ್ರಶ್ನಿಸಿದರು. “ದೇವನು ನಿನಗೆ ಹೀಗೆ ಮಾಡಲು ಆದೇಶಿಸಿದ್ದಾನೆಯೇ?” ಎಂದು ಕೇಳಿದಾಗ ಇಬ್ರಾಹೀಮ(ಅ)ರು ‘ಹೌದು’ ಎಂದರು. ಆಗ ಹಾಜರಾ ಅವರು ದೇವನ ಮೇಲೆ ಅಚಲ ವಿಶ್ವಾಸವಿಟ್ಟು, “ಹಾಗಾದರೆ ದೇವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಹೇಳಿದರು. 

ಹಾಜರಾ ಅವರು ಅಳುತ್ತಿದ್ದ ಮಗುವಿನ ಬಳಿಗೆ ಮರಳಿದಾಗ, ಸಹಾಯಕ್ಕಾಗಿ ಏನಾದರೂ ಸಿಗಬಹುದೇ ಎಂದು ಹುಡುಕುತ್ತಾ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡಲಾರಂಭಿಸಿದರು. ಅವರು ನಿರಾಶೆಯಿಂದ ಆ ಬೆಟ್ಟಗಳ ನಡುವೆ ಏಳು ಬಾರಿ ಓಡಾಟ ನಡೆಸಿದರು. ಆ ಸಮಯದಲ್ಲಿ ಮಗುವಿನ ಕಾಲುಗಳ ಬಳಿ ದೇವದೂತ ಜಿಬ್ರೀಲರು ಕಾಣಿಸಿಕೊಂಡು, ನೆಲಕ್ಕೆ ಹಿಮ್ಮಡಿಯಿಂದ ಒದ್ದಾಗ ನೀರಿನ ಕಾರಂಜಿ ಹೊರಹೊಮ್ಮಿತು; ಇದನ್ನೇ ಮುಂದೆ ಝಮ್‌ಝಮ್ ಎಂದು ಕರೆಯಲಾಯಿತು. ತದನಂತರ ಜುರ್ಹುಮ್ ಬುಡಕಟ್ಟಿನವರು ಅಲ್ಲಿಗೆ ಬಂದು, ಹಾಜರಾ ರವರ ಅನುಮತಿ ಪಡೆದು ಝಮ್‌ಝಮ್ ನೀರನ್ನು ಬಳಸುತ್ತಾ ಅಲ್ಲಿಯೇ ವಾಸವದರು. ಹೀಗೆ ಮಕ್ಕಾ ನಗರವು ಉದಯಿಸಿತು.

ಇದು ಹಜ್‌ನ ‘ಸಯೀ’ ಆಚರಣೆಯ ಉಗಮ ಸ್ಥಾನವಾಗಿದೆ ಮತ್ತು ಹಜ್ ವೃತ್ತಾಂತವನ್ನು ಅರಿಯಲು ಹಾಜರಾ ರವರ ಚರಿತ್ರೆಯು ಪ್ರಮುಖವಾಗಿದೆ. ಅವರ ಈ ಚರಿತ್ರೆಯು ಅಚಲವಾದ ದೈವಭಕ್ತಿ, ನಿಷ್ಠೆ ಮತ್ತು ಅತಿ ಹೆಚ್ಚಿನ ದೈವವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ತನ್ನನ್ನು ಮತ್ತು ತನ್ನ ಹಸುಗೂಸನ್ನು ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಹೋಗುವುದು ದೇವನ ಆದೇಶ ಎಂದು ತಿಳಿದಾಗ, ತಾಯಿ ಹಾಜರಾ ಆ ಸ್ಥಿತಿಯನ್ನು ಒಪ್ಪಿಕೊಂಡಿದ್ದು ದೇವನ ಮೇಲಿನ ಅಚಲ ವಿಶ್ವಾಸಕ್ಕೆ ಇರುವ ಅತ್ಯುತ್ತಮ ನಿದರ್ಶನವಾಗಿದೆ. 

ತೀರ್ಥಯಾತ್ರಿಕರು ಇಂದಿಗೂ ಅನುಸರಿಸುವ ಆ ಬೆಟ್ಟಗಳ ನಡುವಿನ ಓಟವು, ದೇವನ ನೆರವಿಗಾಗಿ ನಾವೆಲ್ಲರೂ ಹೊಂದಿರುವ ಹತಾಶೆ ಮತ್ತು ಅನಿವಾರ್ಯತೆಯನ್ನು ನೆನಪಿಸುತ್ತದೆ. ಮುಸ್ಲಿಂ ವಿದ್ವಾಂಸರೊಬ್ಬರು (ಹೆಸರು ಉಲ್ಲೇಖಿಸಿಲ್ಲ) ಹೇಳಿರುವಂತೆ: “ಅಲೆಗಳ ಅಬ್ಬರಕ್ಕೆ ಸಿಲುಕಿ ಹಲಗೆಯೊಂದನ್ನು ನೆಚ್ಚಿ ಸಮುದ್ರದ ನಡುವೆ ತೇಲುತ್ತಿರುವವನಿಗೆ ದೇವನ ಅವಶ್ಯಕತೆ ಎಷ್ಟಿದೆಯೋ, ಅಷ್ಟೇ ಅವಶ್ಯಕತೆ ನಿಮಗೂ ಇದೆ ಎಂಬುದು ನೆನಪಿರಲಿ.” ದೇವನ ನಿರಂತರ ಆಸರೆಯಿಲ್ಲದೆ ಹೋದರೆ, ನಾವು ಮರುಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ದಾರಿ ಕಾಣದೆ ಸಿಲುಕಿದವರಿಗಿಂತಲೂ ಶೋಚನೀಯ ಸ್ಥಿತಿಯಲ್ಲಿರುತ್ತಿದ್ದೆವು ಎಂಬ ಅತೀಂದ್ರಿಯ ಅರಿವನ್ನು ಇದು ಮೂಡಿಸುತ್ತದೆ. 

ದೇವನ ಮೇಲಿನ ಅಚಲ ಭರವಸೆ ಮತ್ತು ಆಶಾವಾದಕ್ಕಾಗಿ ಹಾಜರಾ ರವರ ವ್ಯಕ್ತಿತ್ವವು ಸ್ಮರಣೀಯವಾಗಿದೆ. ಬೆಟ್ಟಗಳ ನಡುವೆ ಓಡುವ ಪ್ರತಿಯೊಬ್ಬ ತೀರ್ಥಯಾತ್ರಿಕನಿಗೂ ಹಾಜರಾ ರವರು ಅಂದು ಅನುಭವಿಸಿದ ಕಠಿಣ ಪರಿಸ್ಥಿತಿಯ ನಡುವೆಯೂ ಕುಂದದಿದ್ದ ಅವರ ಧೈರ್ಯದ ಅರಿವಾಗುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡದಿದ್ದರೂ, ಮನುಷ್ಯನು ಪ್ರಯತ್ನವನ್ನು ಕೈಬಿಡದೆ ಆಶಾವಾದಿಯಾಗಿರಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾರು ದೇವನ ಮೇಲೆ ಭರವಸೆಯಿಟ್ಟು ಪರಿಶ್ರಮ ಪಡುತ್ತಾರೋ, ಅವರಿಗೆ ಆತನು ಖಂಡಿತವಾಗಿಯೂ ಜೀವನೋಪಾಯವನ್ನು ಒದಗಿಸುತ್ತಾನೆ ಎಂಬ ಅರಿವು ಹಾಜರಾ ಅವರಿಗಿತ್ತು. 

ಸಯೀ ಆಚರಣೆ ಮತ್ತು ಅದರ ಸಾಂಕೇತಿಕತೆಯು ಅತ್ಯಂತ ಕುತೂಹಲಕಾರಿಯಾಗಿದೆ. ಇದು ಇಸ್ಲಾಮಿನ ಮೂಲ ಪರಂಪರೆಗೆ ಸೇರಿದ್ದಾಗಿದ್ದು, ಸ್ವತಃ ಮಕ್ಕಾ ಉದಯದ ಇತಿಹಾಸವನ್ನು ಸಾರುತ್ತದೆ. ಮಹಾನರಾದ ಹಾಜರಾ ರವರು ಮರುಭೂಮಿಯಲ್ಲಿ ನಡೆಸಿದ ಆ ಸಯೀ ನಂತರದ ಘಟನೆಗಳನ್ನೇ ಹಜ್‌ನ ಇತರ ಆಚರಣೆಗಳು ನೆನಪಿಸುತ್ತವೆ. ಈ ವಿಧಿಯ ಶ್ರೇಷ್ಠತೆಯು ನಾವು ಯಾರನ್ನು ಅನುಕರಿಸುತ್ತಿದ್ದೇವೆ ಎಂಬುದರಲ್ಲಿದೆ. ಇಲ್ಲಿ ನಾವು ಹಾಜರಾ ರವರ ಅಚಲ ನಂಬಿಕೆಯನ್ನು ಗೌರವಿಸುತ್ತೇವೆ— ಅವರು ಒಬ್ಬ ಮಹಿಳೆ, ಮೂಲತಃ ಈಜಿಪ್ಟಿನ ದಾಸಿಯಾಗಿದ್ದವರು, ಯಾವುದೇ ಅಂತಸ್ತು, ಪ್ರಸಿದ್ಧಿ ಅಥವಾ ಸಂಪತ್ತು ಹೊಂದಿರದವರು. ಆದರೂ, ದೇವನ ಮೇಲಿನ ಅವರ ನಿಷ್ಠೆಯು ದೇವನಿಗೆ ಎಷ್ಟು ಪ್ರಿಯವಾಯಿತೆಂದರೆ, ಅದನ್ನು ಪ್ರಪಂಚದಾದ್ಯಂತದ ಜನರು ಅನುಸರಿಸಬೇಕಾದ ಶಾಶ್ವತ ವಿಧಿಯನ್ನಾಗಿ ಆತನು ಸ್ಥಾಪಿಸಿದನು. ಒಬ್ಬ ಪುಣ್ಯವತಿ ಮಹಿಳೆಯ ಹೆಜ್ಜೆಗುರುತುಗಳಲ್ಲಿ ನಡೆಯಲು ಲಕ್ಷಾಂತರ ಪುರುಷರಿಗೆ ಆಜ್ಞಾಪಿಸಲಾಗಿದೆ. ಪ್ರವಾದಿ ವಚನವೊಂದು ಹೀಗೆ ಹೇಳುತ್ತದೆ, “ಓ ಸ್ವರ್ಗೀಯ ನೀರಿನ ಮಕ್ಕಳೇ, ಅದು ನಿಮ್ಮ ತಾಯಿ.” 

ಸಯೀ ಎಂಬುದು ಒಂದು ಸಮೃದ್ಧ ಪರಂಪರೆಯ ಸಂಕೇತವಾಗಿದೆ. ಸಾಮಾನ್ಯ ಹಿನ್ನೆಲೆಯಲ್ಲಿ ಜನಿಸಿದರೂ, ದೇವನ ಮೇಲಿನ ಪ್ರೀತಿ ಮತ್ತು ದೈವಿಕ ಹಾದಿಯಲ್ಲಿ ಮಾಡಿದ ತ್ಯಾಗದಿಂದಾಗಿ ಉನ್ನತ ಸ್ಥಾನಕ್ಕೇರಿದ ಒಬ್ಬ ಮಹಿಳೆಯ ಹೆಜ್ಜೆಗಳನ್ನು ಸಾವಿರಾರು ವರ್ಷಗಳಿಂದ ಸ್ತ್ರೀ-ಪುರುಷರೆಲ್ಲರೂ ಅನುಸರಿಸುತ್ತಿರುವುದು ಅತ್ಯಂತ ಸ್ಮರಣೀಯವಾಗಿದೆ. 

ಹಜ್‌ನ ಇತರ ಆಚರಣೆಗಳಂತೆ ‘ಸಯೀ’ ವಿಧಿಯೂ ಸಹ ಪರಲೋಕದ ಬದುಕಿನೊಂದಿಗೆ ನಂಟನ್ನು ಹೊಂದಿದೆ. ಇಮಾಮ್ ಅಬು ಹಮೀದ್ ಅಲ್-ಗಝಾಲಿ ರವರು ʻಇಹ್ಯಾ ಉಲುಮ್ ಅಲ್-ದೀನ್ʼ ಗ್ರಂಥದಲ್ಲಿ ಹೇಳಿರುವ ಪ್ರಕಾರ, ಸಫಾ ಮತ್ತು ಮರ್ವಾ ನಡುವಿನ ಸಂಚಾರವು ತೀರ್ಪಿನ ದಿನದಂದು ನಡೆಯುವ ಪಾಪ-ಪುಣ್ಯಗಳ ತೂಕದ ಪ್ರಕ್ರಿಯೆಯನ್ನು ನೆನಪಿಸುತ್ತದೆ. ಮಾನವ ಜೀವನವು ಪುಣ್ಯ-ಪಾಪ ಹಾಗೂ ಯಶಸ್ಸು-ವೈಫಲ್ಯಗಳ ಸಂಗಮವಾಗಿದೆ. ಈ ಎರಡು ಬೆಟ್ಟಗಳ ನಡುವೆ ವೇಗವಾಗಿ ಚಲಿಸುವುದು ಜೀವನದ ಈ ಏರಿಳಿತಗಳ ನಡುವಿನ ನಮ್ಮ ಪಯಣದ ಸಂಕೇತವಾಗಿದೆ. ಅಂತಿಮ ತೀರ್ಪಿನ ದಿನದಂದು ನಮ್ಮ ಕೆಟ್ಟ ಕೆಲಸಗಳಿಗಿಂತ ಒಳ್ಳೆಯ ಕೆಲಸಗಳ ತೂಕವೇ ಹೆಚ್ಚಿರಲಿ ಎಂಬ ಭರವಸೆಯನ್ನು ಇದು ಬಿಂಬಿಸುತ್ತದೆ. 

ಅರಾಫಾದ ಸಾಂಕೇತಿಕತೆ 

ಅರಾಫಾ ಎಂಬುದು ಮಕ್ಕಾದ ಪೂರ್ವಕ್ಕಿರುವ ಒಂದು ಪರ್ವತ ಶ್ರೇಣಿ ಮತ್ತು ಅದರ ಸುತ್ತಮುತ್ತಲಿನ ಬಯಲು ಪ್ರದೇಶದ ಹೆಸರಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ದುಲ್ ಹಿಜ್ಜಾ ತಿಂಗಳ 9ನೇ ದಿನವನ್ನು ‘ಯೌಮ್ ಅರಾಫಾ’ (ಅರಾಫಾ ದಿನ) ಎಂದು ಕರೆಯಲಾಗುತ್ತದೆ. ಅರಾಫಾ ದಿನದಂದು ಯಾತ್ರಿಕರೆಲ್ಲರೂ ಅರಾಫಾ ಪರ್ವತ ಮತ್ತು ಅದರ ಸುತ್ತಲಿನ ಬಯಲು ಪ್ರದೇಶದಲ್ಲಿ ಸೇರುತ್ತಾರೆ. ಅಲ್ಲಿ ಅವರು ಸೂರ್ಯಾಸ್ತದವರೆಗೆ ದೇವನಲ್ಲಿ ಕ್ಷಮೆಗಾಗಿ ಪ್ರಾರ್ಥಿಸುತ್ತಾ ದಿನವನ್ನು ಕಳೆಯುತ್ತಾರೆ. 

ಹಜ್ ಆಚರಣೆಗಳನ್ನು ಪೂರೈಸಲು ಸಾಮಾನ್ಯವಾಗಿ ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಅರಾಫಾ ದಿನದಂದು ಅರಾಫಾ ಮೈದಾನದಲ್ಲಿ ಒಟ್ಟುಗೂಡುವುದು ಹಜ್‌ನ ಒಂದು ವಿಶಿಷ್ಟ ವಿಧಿಯಾಗಿದ್ದು, ಇದು ಎಲ್ಲಾ ಯಾತ್ರಿಕರನ್ನು ಏಕಕಾಲದಲ್ಲಿ ಒಂದೇ ಜಾಗದಲ್ಲಿ ಒಂದೇ ರೀತಿಯ ವಿಧಿಗಳನ್ನು ಪೂರೈಸಲು ಸೇರಿಸುತ್ತದೆ. ಪ್ರವಾದಿ(ಸ) ರವರು “ಹಜ್ ಅಂದರೆ ಅರಾಫಾ” ಎಂದು ಹೇಳುವ ಮೂಲಕ ಹಜ್ ಯಾತ್ರೆಯಲ್ಲಿ ಈ ವಿಧಿಯು ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.

ಇಸ್ಲಾಮಿಕ್ ಪರಂಪರೆಯಲ್ಲಿ ಅರಾಫಾ ದಿನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಮೊದಲನೆಯದಾಗಿ, ಇಸ್ಲಾಮ್ ಧರ್ಮವು ಪರಿಪೂರ್ಣಗೊಂಡಿದೆ ಮತ್ತು ಮಾನವಕುಲಕ್ಕಾಗಿ ಇನ್ನು ಮುಂದೆ ಯಾವುದೇ ಹೊಸ ಧರ್ಮಶಾಸ್ತ್ರಗಳು ಇಳಿಸಲ್ಪಡುವುದಿಲ್ಲ ಎಂದು ಘೋಷಿಸುವ ಕುರ್‌ಆನ್‌ನ 5ನೇ ಅಧ್ಯಾಯ ಅಲ್‌ ಮಾಇದಃ ದ 3 ನೇ ಸೂಕ್ತವು ಇದೇ ದಿನ ಅವತೀರ್ಣವಾಯಿತು. ಎರಡನೆಯದಾಗಿ, ಇದನ್ನು ‘ಪ್ರಮಾಣ ವಚನದ ದಿನ’ ಎಂದೂ ಕರೆಯುತ್ತಾರೆ. ಇದು ಸೃಷ್ಟಿಯ ಆರಂಭದಲ್ಲಿ ದೇವನು ಪ್ರತಿಯೊಂದು ಆತ್ಮದಿಂದ ವಾಗ್ದನವನ್ನು ಪಡೆದ ಸಂದರ್ಭವನ್ನು ನೆನಪಿಸುತ್ತದೆ. ಈ ಬಗ್ಗೆ ಕುರ್‌ಆನ್‌ನಲ್ಲಿ ಹೀಗೆ ಪ್ರಸ್ತಾಪಿಸಲಾಗಿದೆ:

“ಓ ಪೈಗಂಬರರೇ, ನಿಮ್ಮ ಪ್ರಭು ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರತಂದಿದ್ದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ “ನಾನು ನಿಮ್ಮ ಪ್ರಭುವಲ್ಲವೇ?” ಎಂದು ಕೇಳಿದ್ದ ಸಂದರ್ಭವನ್ನು ಜನರಿಗೆ ನೆನಪಿಸಿರಿ. ಆಗ ಅವರು, “ಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು. ನಾವು ಇದಕ್ಕೆ ಸಾಕ್ಷ್ಯ ವಹಿಸುತ್ತೇವೆ”  ಎಂದರು. ನೀವು ಪುನರುತ್ಥಾನ ದಿನದಂದು “ನಾವು ಈ ಬಗ್ಗೆ ಅಜ್ಞರಾಗಿದ್ದೆವು” ಎಂದು ಹೇಳಿಬಿಡಬಾರದೆಂದು” (ಕುರ್‌ಆನ್‌ 7:172)

ಅಲ್ಲದೇ, ಇದು ದೈವಿಕ ಕ್ಷಮೆ ಮತ್ತು ಪ್ರಸನ್ನತೆಯ ದಿನ. ಪ್ರವಾದಿ(ಸ) ರವರ ಒಂದು ವಚನದಂತೆ, “ಅರಾಫಾ ದಿನದಂದು ಅಲ್ಲಾಹನು ನರಕದ ಶಿಕ್ಷೆಯಿಂದ ಅತಿ ಹೆಚ್ಚು ಜನರನ್ನು ಬಿಡುಗಡೆಗೊಳಿಸುತ್ತಾನೆ.” ಮತ್ತೊಂದು ಪ್ರವಾದಿ ವಚನ ಹೀಗಿದೆ: “ಅಲ್ಲಾಹನು ದೇವದೂತರ ಎದುರು ಅರಾಫಾದ ತೀರ್ಥಯಾತ್ರಿಕರ ಬಗ್ಗೆ ಹೆಮ್ಮೆ ಪಡುತ್ತಾ—’ನನ್ನ ದಾಸರನ್ನು ನೋಡಿರಿ, ಅವರು ಧೂಳು ಹಿಡಿದ ತಲೆಗೂದಲಿನೊಂದಿಗೆ ದೂರದೂರುಗಳಿಂದ ಕಷ್ಟಪಟ್ಟು ನನ್ನೆಡೆಗೆ ಬಂದಿದ್ದಾರೆ. ಇವರನ್ನೆಲ್ಲಾ ನಾನು ಕ್ಷಮಿಸಿದ್ದೇನೆ ಎಂಬುದಕ್ಕೆ ನೀವೇ ಸಾಕ್ಷಿಗಳು’ ಎನ್ನುತ್ತಾನೆ.” ಅರಾಫಾದ ದಿನದಂದು ದೊರೆಯುವ ಕ್ಷಮೆಯು ಎಷ್ಟು ಅಪಾರವೆಂದರೆ, “ಅರಾಫಾದಲ್ಲಿ ಪಾಲ್ಗೊಂಡ ಮೇಲೆಯೂ ದೇವನು ನನ್ನನ್ನು ಕ್ಷಮಿಸಿಲ್ಲ ಎಂದು ಅನುಮಾನ ಪಡುವುದು ದೊಡ್ಡ ಪಾಪವಾಗಿದೆ” ಎಂದು ಅನೇಕ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ದೇವನ ಕಾರುಣ್ಯವು ಎಲ್ಲವನ್ನೂ ವ್ಯಾಪಿಸಿದೆ ಎಂಬ ಅರಿವಿರುವ ವಿಶ್ವಾಸಿಯು ಸದಾ ಭರವಸೆ ಮತ್ತು ದೇವನ ಬಗ್ಗೆ ಉತ್ತಮ ಆಲೋಚನೆಗಳನ್ನು ಹೊಂದಿರುತ್ತಾನೆ. 

ಮಾನವ ಜನ್ಮಕ್ಕೂ ಮೊದಲು ನಡೆದ ‘ಒಪ್ಪಂದದ ದಿನ’ವಾಗಿ ಅರಾಫಾ ಹೇಗೆ ಗುರುತಿಸಲ್ಪಟ್ಟಿದೆಯೋ, ಅದೇ ರೀತಿ ಅದು ಮರಣೋತ್ತರ ಜೀವನ ಮತ್ತು ಪುನರುತ್ಥಾನದ ದಿನದ ಕುರಿತು  ವಿಶ್ವಾಸಿಯಲ್ಲಿ ಚಿಂತನೆಯನ್ನು ಪ್ರಚೋದಿಸುತ್ತದೆ. 

ಕುರ್‌ಆನಿನಲ್ಲಿ ಪುನರುತ್ಥಾನದ ದಿನವನ್ನು ಲೆಕ್ಕ ಒಪ್ಪಿಸುವ ದಿನ (ಯೌಮ್ ಅಲ್-ಹಿಸಾಬ್), ಮಹಾ ಸಂಕಷ್ಟದ ದಿನ(ಯೌಮುನ್ ಅಕೀಮ್) ಮತ್ತು ಪಶ್ಚಾತ್ತಾಪದ ದಿನ(ಯೌಮ್ ಅಲ್-ಹಸ್ರಾಹ್) ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ವಿಶೇಷವೆಂದರೆ, ಅಂತಿಮ ದಿನದ ಹಲವು ಹೆಸರುಗಳು ಅರಾಫಾ ದಿನದ ಆಚರಣೆಗಳಿಗೆ ಹೋಲುವಂತಿವೆ. ಉದಾಹರಣೆಗೆ, ಎದ್ದು ನಿಲ್ಲುವ ದಿನ(ಯೌಮ್ ಅಲ್-ಕಿಯಾಮಾ), ಹೊರಬರುವ ದಿನ(ಯೌಮ್ ಅಲ್-ಖುರೂಜ್) ಮತ್ತು ಪರಸ್ಪರ ಭೇಟಿಯಾಗುವ ದಿನ(ಯೌಮ್ ಅಲ್-ತಲಾಖ್). 

ದೇವನ ಕರುಣೆಗಾಗಿ ಹಾತೊರೆಯುತ್ತಿರುವ ಲಕ್ಷಾಂತರ ಜನರು ಒಂದೇ ಕಡೆ ಸೇರಿರುವುದನ್ನು ನೋಡುವ ಯಾತ್ರಿಕನಿಗೆ, ಅದು ಅಂತಿಮ ತೀರ್ಪಿನ ದಿನದ ನೆನಪು ತರುತ್ತದೆ. ಹಜ್‌ನ ಉಡುಪಾದ ಬಿಳಿ ಹೊದಿಕೆಯು ಮೃತದೇಹಕ್ಕೆ ಬಳಸುವ ಕಫನ್ (ಶವವಸ್ತ್ರ) ಬಟ್ಟೆಯನ್ನು ಹೋಲುತ್ತದೆ. ಈ ಎಲ್ಲ ಸಂಗತಿಗಳು ಅರಾಫಾ ದಿನವನ್ನು ಮನುಷ್ಯನ ಸಾವು ಮತ್ತು ಪುನರುತ್ಥಾನದ ಒಂದು ಶಕ್ತಿಯುತ ನೆನಪಿನ ದಿನವನ್ನಾಗಿ ರೂಪಿಸುತ್ತವೆ. ಪ್ರತಿಯೊಬ್ಬ ಯಾತ್ರಿಕನಿಗೂ ತಾನು ಒಂದು ದಿನ ದೇವನ ಮುಂದೆ ನಿಂತು ತನ್ನ ಕರ್ಮಗಳಿಗೆ ಲೆಕ್ಕ ಒಪ್ಪಿಸಬೇಕಿದೆ ಎಂಬ ಅರಿವನ್ನು ಇದು ಮೂಡಿಸುತ್ತದೆ. 

ಮುಝ್ದಲಿಫಾದ ಸಾಂಕೇತಿಕತೆ 

ಅರಾಫಾದಲ್ಲಿ ದಿನವಿಡೀ ಪ್ರಾರ್ಥನೆ ಮತ್ತು ದುವಾ ಮಾಡಿದ ನಂತರ, ಹಜ್‌ನ ಮುಂದಿನ ಹಂತವೆಂದರೆ ಸೂರ್ಯಾಸ್ತದ ನಂತರ ಅರಾಫಾವನ್ನು ಬಿಟ್ಟು ಮಕ್ಕಾದ ಹೊರವಲಯದಲ್ಲಿರುವ ‘ಮುಜ್ದಲಿಫಾ’ ಎಂಬ ಖಾಲಿ ಪ್ರದೇಶದಲ್ಲಿ ರಾತ್ರಿ ಕಳೆಯುವುದು. ಭಾಷಾಶಾಸ್ತ್ರದ ಪ್ರಕಾರ ಈ ಪದವು ‘ಝುಲ್ಫಾ’ ಎಂಬ ಮೂಲದಿಂದ ಬಂದಿದೆ, ಇದರರ್ಥ ಹತ್ತಿರವಾಗುವುದು ಅಥವಾ ಒಟ್ಟುಗೂಡುವುದು; ಇಲ್ಲಿ ಯಾತ್ರಿಕರು ಮಕ್ಕಾದ ಹೊರಗೆ ಒಟ್ಟುಗೂಡುತ್ತಾರೆ. ಈ ಸ್ಥಳದಲ್ಲಿ ಪ್ರವಾದಿ ಮುಹಮ್ಮದ್(ಸ) ರವರು ತಮ್ಮ ಸೂರ್ಯಾಸ್ತದ (ಮಗ್ರಿಬ್) ಮತ್ತು ರಾತ್ರಿಯ (ಇಶಾ) ಪ್ರಾರ್ಥನೆಗಳನ್ನು ಒಟ್ಟಿಗೆ ನಿರ್ವಹಿಸಿದರು, ನಂತರ ಮರುದಿನ ಮುಂಜಾನೆ ಮಿನಾಕ್ಕೆ ಅಲ್ಲಿಂದ ಹೊರಟರು. ರಾತ್ರಿಯ ಸಮಯದಲ್ಲಿ, ಯಾತ್ರಿಕರು ಮುಕ್ತ ಆಕಾಶದ ಅಡಿಯಲ್ಲಿ, ಲೌಕಿಕ ಜೀವನದ ವ್ಯಾಕುಲತೆ ಮತ್ತು ಸೌಕರ್ಯಗಳಿಂದ ದೂರವಾಗಿ, ನೆಲದ ಮೇಲೆ ಮಲಗುತ್ತಾರೆ. 

ಮುಝ್ದಲಿಫದಲ್ಲಿನ ವಾಸ್ತವ್ಯವು ಕುರ್‌ಆನಿನಲ್ಲಿಯೇ ವಿಧಿಸಲಾದ ವಿಷಯವಾಗಿದೆ: “ನೀವು ‘ಅರಫಃ’ದಿಂದ ಹೊರಟು ‘ಮಶ್‍ಅರುಲ್ ಹರಾಮ್’ನ (ಮುಝ್ದಲಿಫಃದ) ಬಳಿ ತಂಗಿ, ಅಲ್ಲಾಹನನ್ನು ಸ್ಮರಿಸಿರಿ. ಆತನು ನಿಮಗೆ ಮಾರ್ಗದರ್ಶನ ಮಾಡಿದ ರೀತಿಯಲ್ಲೇ ಸ್ಮರಿಸಿರಿ. ಇದಕ್ಕೆ ಮುಂಚೆ ನೀವು ಪಥಃಭ್ರಷ್ಟರಾಗಿದ್ದಿರಿ.” (2:198)

ಈ ವಚನದಲ್ಲಿ ಉಲ್ಲೇಖಿಸಲಾದ ಪವಿತ್ರ ಸ್ಥಳವು ಬೇರೆ ಯಾವುದೂ ಅಲ್ಲ, ಅದು ಮುಝ್ದಲಿಫಾ ಆಗಿದೆ. ಈ ವಚನದಲ್ಲಿ, ಇಸ್ಲಾಮ್‌ಗಿಂತ ಮೊದಲು ಇದ್ದ ಅಜ್ಞಾನದ ದಿನಗಳಲ್ಲಿ ದೇವನನ್ನು ಆರಾಧಿಸುತ್ತಿದ್ದ ರೀತಿಯಲ್ಲಿ ಅಲ್ಲದೆ, ಆತನು ನಮಗೆ ಮಾರ್ಗದರ್ಶನ ನೀಡಿದ ನಿಖರವಾದ ರೀತಿಯಲ್ಲಿಯೇ ಆತನನ್ನು ಸ್ಮರಿಸಲು ಮತ್ತು ಆರಾಧಿಸಲು ವಿಶ್ವಾಸಿಗಳಿಗೆ ಸೂಚಿಸಲಾಗಿದೆ. ಇಸ್ಲಾಮ್‌ಗಿಂತ ಮುಂಚಿನ ಅಜ್ಞಾನದ ಕಾಲದಲ್ಲಿ ವಿಗ್ರಹಾರಾಧಕರು ಅರಾಫಾ ಮತ್ತು ಮುಝ್ದಲಿಫಾ ಪ್ರದೇಶಗಳನ್ನು ಬಳಸುತ್ತಿದ್ದರು. ಆದರೆ ಅವರು ಸೂರ್ಯಾಸ್ತಕ್ಕೆ ಮುನ್ನವೇ ಅರಾಫಾದಿಂದ ಮತ್ತು ಸೂರ್ಯೋದಯದ ಬಳಿಕ ಮುಝ್ದಲಿಫಾದಿಂದ ಹೊರಡುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಇಸ್ಲಾಮಿಕ್ ಸಂಪ್ರದಾಯವು ಅರಾಫಾದಿಂದ ಸೂರ್ಯಾಸ್ತದ ನಂತರ ಮತ್ತು ಮುಝ್ದಲಿಫಾದಿಂದ ಸೂರ್ಯೋದಯಕ್ಕೆ ಮೊದಲೇ ಹೊರಡುವಂತೆ ವಿಶ್ವಾಸಿಗಳಿಗೆ ಆದೇಶಿಸಿದೆ. ‌

ಇಷ್ಟು ಸಣ್ಣ ವ್ಯತ್ಯಾಸಗಳ ಪ್ರಾಮುಖ್ಯತೆಯಾದರೂ ಏನು ಎಂಬ ಪ್ರಶ್ನೆ ಮೂಡಬಹುದು. ಜೀವನದ ಹಾದಿಯಲ್ಲಿ ಎರಡು ಆಯ್ಕೆಗಳ ನಡುವಿನ ವ್ಯತ್ಯಾಸವು ಅಲ್ಪವೆಂದು ತೋರಿದರೂ, ಅವುಗಳ ಫಲಿತಾಂಶಗಳು ಗಂಭೀರವಾಗಿರುತ್ತವೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸರಿಯಾದ ಹಾದಿಯನ್ನು ನಿಷ್ಠೆಯಿಂದ ಅನುಸರಿಸುವ ಶಿಸ್ತು ಮತ್ತು ಜಾಗೃತಿಯನ್ನು ಬೆಳೆಸಿಕೊಳ್ಳುವುದು ಯಶಸ್ವಿ ಜೀವನಕ್ಕೆ ಅಡಿಪಾಯವಾಗಿದೆ. ದೈವಿಕ ಮಾರ್ಗಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು ಇಸ್ಲಾಮ್ ಧರ್ಮದ ಸಾರವಾಗಿದೆ. ಅತ್ಯಂತ ಸಣ್ಣ ವಿಚಾರಗಳಲ್ಲಿ ದೈವಿಕ ಆಜ್ಞೆಗಳನ್ನು ನಿರ್ಲಕ್ಷಿಸುವುದು ಭವಿಷ್ಯದಲ್ಲಿ ದೊಡ್ಡ ಆಧ್ಯಾತ್ಮಿಕ ಕುಸಿತಕ್ಕೆ ಕಾರಣವಾಗಬಹುದು. ಯಾವುದೇ ವೃತ್ತಿಯಲ್ಲಾಗಲಿ, ನೀಡಲಾದ ಸೂಚನೆಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದು ಅತಿ ಮುಖ್ಯ. ಉದಾಹರಣೆಗೆ, ವೈದ್ಯಕೀಯ ಚಿಕಿತ್ಸೆಯಲ್ಲಿ ಔಷಧದ ಡೋಸೇಜ್‌ನಲ್ಲಿ ಉಂಟಾಗುವ ಅತ್ಯಲ್ಪ ವ್ಯತ್ಯಾಸವೂ ರೋಗಿಯ ಪ್ರಾಣಕ್ಕೆ ಅಪಾಯ ತರಬಲ್ಲದು. ಹಾಗೆಯೇ, ದೇವನ ಆಜ್ಞೆಗಳನ್ನು ಶ್ರದ್ಧೆಯಿಂದ ಪಾಲಿಸುವುದು ಸೃಷ್ಟಿಕರ್ತನ ಮೇಲಿರುವ ಅತೀವ ಪ್ರೀತಿ ಮತ್ತು ನಿಷ್ಠೆಯ ಸಂಕೇತವಾಗಿದೆ. 

ಮುಝ್ದಲಿಫಾದ ಕಲ್ಲಿನ ಮೈದಾನದಲ್ಲಿ ಮುಕ್ತವಾಗಿ ಮಲಗುವುದು ಮರಣಾನಂತರದ ಸಮಾಧಿಯ ಜೀವನವನ್ನು ಸಂಕೇತಿಸುತ್ತದೆ. ಅರಾಫಾದಲ್ಲಿ ದೇವನ ಕೃಪೆಗಾಗಿ ಮೊರೆಯಿಡಲು ಸಿಗುವ ಅಲ್ಪ ಸಮಯದಷ್ಟೇ ಮನುಷ್ಯನ ಬದುಕು ಕೂಡ ಕ್ಷಣಿಕವಾಗಿದೆ. ಅಲ್ಲಿಂದ ಮುಂದೆ ನಾವು ಪುನರುತ್ಥಾನಗೊಂಡು ದೇವನೆಡೆಗೆ ಮರಳುವ ಮೊದಲು, ಈ ಭೂಮಿಯ ಮಣ್ಣಿನಲ್ಲಿ ಒಂದು ತಾತ್ಕಾಲಿಕ ಅವಧಿಯನ್ನು ಕಳೆಯಬೇಕಾಗುತ್ತದೆ. ಹಜ್‌ನ ಆಚರಣೆಗಳು ಮರಣೋತ್ತರ ಬದುಕಿನ ಹಂತಗಳನ್ನು ಬಿಂಬಿಸುತ್ತವೆ ಎಂಬ ಆಳವಾದ ಅರ್ಥವನ್ನು ಇದು ಪುನರುಚ್ಚರಿಸುತ್ತದೆ ಮತ್ತು ನಾವೆಲ್ಲರೂ ಅಲ್ಲಾಹನ ಬಳಿಗೆ ಮರಳಲೇಬೇಕಾದ ಅನಿವಾರ್ಯತೆಯನ್ನು ನೆನಪಿಸುತ್ತದೆ. 

ಉಲುಹಿಯಾದ ಸಾಂಕೇತಿಕತೆ

ಹಜ್ ಅವಧಿಯ ಈದ್ ಅಲ್-ಅಝ್ಹಾ ಹಬ್ಬದ ದಿನ ಅಥವಾ ಅದರ ನಂತರದ ದಿನಗಳಲ್ಲಿ ನೆರವೇರಿಸುವ ಪ್ರಾಣಿ ಬಲಿಯ ಆಚರಣೆಯನ್ನು ಉಲುಹಿಯಾ(أُضْحِيَّة) ಎನ್ನಲಾಗುತ್ತದೆ. ಇದು ಮುಸ್ಲಿಮರ ಎರಡು ಪ್ರಮುಖ ವಾರ್ಷಿಕ ಹಬ್ಬಗಳಲ್ಲಿ ಒಂದಾಗಿದೆ. ಪ್ರಾಣಿ ಬಲಿಯ ಸಂದರ್ಭದಲ್ಲಿ ಅದಕ್ಕೆ ಕನಿಷ್ಠ ನೋವಾಗುವಂತೆ ಮಾನವೀಯತೆಯಿಂದ ವರ್ತಿಸಬೇಕು ಮತ್ತು ಪ್ರಾಣಿಯು ಭಯಭೀತಗೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಪ್ರವಾದಿ ಮುಹಮ್ಮದ್(ಸ) ರವರು ಆದೇಶಿಸಿದ್ದಾರೆ. ಈ ತ್ಯಾಗವು ದೇವನ ಮೇಲಿನ ನಿಷ್ಠೆ ಮತ್ತು ಕೃತಜ್ಞತೆಯ ಸಂಕೇತವಾಗಿದ್ದು, ಮಾಂಸವನ್ನು ಬಡಬಗ್ಗರಿಗೆ ವಿತರಿಸುವ ಮೂಲಕ ಸಮಾಜದ ಬಗ್ಗೆ ಇರುವ ಉದಾರ ಮನೋಭಾವವನ್ನೂ ಇದು ಎತ್ತಿ ತೋರಿಸುತ್ತದೆ. 

ಈ ರೀತಿಯಾಗಿ ಈದ್ ಅಲ್-ಅಝ್ಹಾ ಹಬ್ಬದಂದು ಇಸ್ಲಾಮ್ ಧರ್ಮದ ಮಾನವೀಯ ಸಂದೇಶವು ಬಲವಾಗಿ ವ್ಯಕ್ತವಾಗುತ್ತದೆ. ಮುಸ್ಲಿಮರು ತಮ್ಮ ಕುಟುಂಬದೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವಾಗಲೇ ಇತರರ ಕಷ್ಟಗಳಿಗೂ ಸ್ಪಂದಿಸುತ್ತಾರೆ. “ಅವರು ಇಲ್ಲಿ ಅವರಿಗಾಗಿ ಇರಿಸಲಾಗಿರುವ ಪ್ರಯೋಜನಗಳನ್ನು ಪ್ರತ್ಯಕ್ಷವಾಗಿ ನೋಡುವಂತಾಗಲಿ ಮತ್ತು ಅವರು ಕೆಲವು ನಿಶ್ಚಿತ ದಿನಗಳಲ್ಲಿ ಅಲ್ಲಾಹನು ಅವರಿಗೆ ದಯ ಪಾಲಿಸಿರುವ ಜಾನುವಾರುಗಳ ಮೇಲೆ ಅವನ ನಾಮವನ್ನುಚ್ಚರಿಸಲಿ. ಸ್ವತಃ ತಿನ್ನಲಿ ಮತ್ತು ಬಡ ಬಗ್ಗರಿಗೂ ಕೊಡಲಿ.”(22:28) ಎಂಬ ಕುರ್‌ಆನ್ ವಾಕ್ಯವು ಹಜ್‌ನ ಈ ಉದ್ದೇಶವನ್ನು ಸಾರುತ್ತದೆ. ಇದೇ ಮಾನವೀಯ ಕಳಕಳಿಯನ್ನು ಮುಂದಿನ ವಚನಗಳೂ ಪುನರುಚ್ಚರಿಸುತ್ತವೆ: “ಬಲಿ ಪ್ರಕ್ರಿಯೆ ಮುಗಿದ ನಂತರ ಆ ಮಾಂಸವನ್ನು ನೀವು ಸೇವಿಸಿರಿ ಮತ್ತು ದಾರಿದ್ರ್ಯದಲ್ಲಿರುವವರಿಗೂ, ಯಾಚಿಸುವವರಿಗೂ ಉಣಿಸಿರಿ. ನೀವು ಕೃತಜ್ಞತೆ ಸಲ್ಲಿಸಲಿಕ್ಕಾಗಿಯೇ ನಾವು ಇವುಗಳನ್ನು ನಿಮ್ಮ ವಶಕ್ಕೆ ನೀಡಿದ್ದೇವೆ.”(22:36) ಇಡೀ ಮಾನವಕುಲದ ಸೇವೆಯ ಅಂಗವಾಗಿ, ಮಾಂಸವನ್ನು ಯಾವುದೇ ಧರ್ಮದ ಭೇದವಿಲ್ಲದೆ ಬಡವರಿಗೆ ಹಂಚಲಾಗುತ್ತದೆ. “ಎಲ್ಲಾ ನಂಬಿಕೆಗಳ ಜನರಿಗೂ ದಾನ ಧರ್ಮಗಳನ್ನು ಮಾಡಿರಿ” ಎಂದು ಪ್ರವಾದಿ ಮುಹಮ್ಮದ್(ಸ) ಅವರು ಕಲಿಸಿಕೊಟ್ಟಿದ್ದಾರೆ. 

ಈ ಆಚರಣೆಯ ಉಗಮವು ಇಬ್ರಾಹೀಮ್‌(ಅ) ರವರು ತಮ್ಮ ಪುತ್ರನನ್ನೇ ಬಲಿ ಕೊಡಬೇಕೆಂಬ ದೈವಿಕ ಆಜ್ಞೆಯ ಕುರಿತಾದ ಪ್ರಸಿದ್ಧ ಘಟನೆಯಲ್ಲಿದೆ. ಇಬ್ರಾಹೀಮ್‌(ಅ) ರವರನ್ನು ಆಧ್ಯಾತ್ಮಿಕ ಮೂಲಪುರುಷರೆಂದು ನಂಬುವ ಎಲ್ಲಾ ಧರ್ಮಗಳಿಗೂ ಈ ಚರಿತ್ರೆಯು ಆಧಾರಸ್ತಂಭವಾಗಿದೆ. ಆದಾಗ್ಯೂ, ಈ ವೃತ್ತಾಂತವು ತೀವ್ರ ವಾದವಿವಾದ ಮತ್ತು ಟೀಕೆಗಳಿಗೆ ಗುರಿಯಾಗಿದೆ. ಕ್ರಿಸ್ಟೋಫರ್ ಹಿಚೆನ್ಸ್ ಸೇರಿದಂತೆ ಹಲವು ಆಧುನಿಕ ನಾಸ್ತಿಕರು, ಧರ್ಮದ ಲೋಪದೋಷಗಳನ್ನು ಎತ್ತಿ ತೋರಿಸಲು ಈ  ಘಟನೆಯನ್ನೇ ಪ್ರಬಲ ಅಸ್ತ್ರವಾಗಿ ಬಳಸಿದ್ದಾರೆ. ಮಗನನ್ನೇ ಬಲಿ ನೀಡಲು ತಂದೆಗೆ ಆದೇಶಿಸುವ ದೇವರು, ಆ ಕೃತ್ಯಕ್ಕೆ ಸಮ್ಮತಿಸುವ ತಂದೆ ಮತ್ತು ದೈವಿಕ ಆಜ್ಞೆಯ ಹೆಸರಿನಲ್ಲಿ ಅಂತಹ ಕಾರ್ಯಕ್ಕೆ ಮುಂದಾದ ವ್ಯಕ್ತಿಯನ್ನು ಗೌರವಿಸುವ ಧರ್ಮ—ಇವುಗಳ ನೈತಿಕತೆ ಏನು ಎಂದಾಗಿ ಅವರು ಪ್ರಶ್ನಿಸುತ್ತಾರೆ. 

ಈ ಟೀಕೆಗಳ ಬಗ್ಗೆ ವಿವೇಚನೆ ನಡೆಸುವುದು ಅನಿವಾರ್ಯವಾಗಿದೆ. ನಾವು ಈ ಘಟನೆಯನ್ನು ಸರಿಯಾಗಿ ಗ್ರಹಿಸಿದ್ದೇವೆಯೇ ಮತ್ತು ಇತರರಿಗೆ ಇದನ್ನು ಸರಿಯಾಗಿ ವಿವರಿಸಬಲ್ಲವೇ ಎಂದು ಪರೀಕ್ಷಿಸಲು ಹಾಗೂ ಟೀಕಾಕಾರರು ಈ ಘಟನೆಯನ್ನು ಹೇಗೆ ತಿರುಚಿದ್ದಾರೆಂದು ತಿಳಿಯಲು ಇದು ಅಗತ್ಯ. ವಾಸ್ತವದಲ್ಲಿ, ಇಬ್ರಾಹೀಮ್‌(ಅ) ರವರಿಗೆ ಎದುರಾದದ್ದು ವಿಶ್ವಾಸದ ಅತಿದೊಡ್ಡ ಪರೀಕ್ಷೆ. ಇಬ್ರಾಹೀಮ್‌(ಅ) ರವರು ದೇವನ ಮಾರ್ಗದಲ್ಲಿ ತಮ್ಮ ಮನೆ-ಮಠಗಳನ್ನು ತೊರೆದು ಕೇವಲ ಸತ್ಯವಿಶ್ವಾಸದೊಂದಿಗೆ ವಲಸೆ ಬಂದಾಗ, “ನನ್ನ ಒಡೆಯನೇ, ನನಗೆ ಒಬ್ಬ ಸದ್ಗುಣಶೀಲ ಪುತ್ರನನ್ನು ನೀಡು” ಎಂದು ಪ್ರಾರ್ಥಿಸಿಕೊಂಡರು. ಆಗ ದೇವನು ಅವರಿಗೆ ಒಬ್ಬ ಸೌಮ್ಯ ಸ್ವಭಾವದ ಮಗನ ಜನನದ ಸುಸುದ್ದಿ ನೀಡಿದನು. ಇಸ್ಮಾಯಿಲ್(ಅ) ಬೆಳೆದು ತಂದೆಯ ಜೊತೆ ಓಡಾಡುವ ವಯಸ್ಸಿಗೆ ಬಂದಾಗ, ಬಾಲಕನ ಮೇಲೆ ಇಬ್ರಾಹೀಮ್(ಅ) ರವರಿಗೆ ಪ್ರೀತಿ ಎಷ್ಟಿರಬಹುದೆಂದು ನಾವು ಊಹಿಸಬಹುದು. ಅಂತಹ ಘಟ್ಟದಲ್ಲೇ ಅವರಿಗೆ ಅತ್ಯಂತ ಕಠಿಣವಾದ ದೈವಿಕ ಆಜ್ಞೆ ಬಂತು; ಅದೆಂದರೆ ತಮಗೆ ಪ್ರಾಣಕ್ಕಿಂತಲೂ ಪ್ರಿಯವಾದ ಮಗನನ್ನೇ ಬಲಿ ಕೊಡಬೇಕೆಂಬ ಪರೀಕ್ಷೆ. 

ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಬ್ರಾಹೀಮ್‌(ಅ) ರವರು ನೀಡಿದ ಬಲಿಯ ಇಸ್ಲಾಮಿಕ್ ವೃತ್ತಾಂತದಲ್ಲಿರುವ ಕೆಲವು ವಿಶೇಷತೆಗಳು ಈ ಘಟನೆಯ ನೈತಿಕ ಮಹತ್ವದ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ದೂರ ಮಾಡುತ್ತವೆ. ಇಸ್ಲಾಮೀ ದೇವಶಾಸ್ತ್ರದ ಒಂದು ಮುಖ್ಯ ತತ್ವವು ಈ ಘಟನೆಯಲ್ಲಿ ಸೃಷ್ಟಿಗೆ ಒಳ್ಳೆಯದನ್ನು ಮಾಡುವುದು (ನೈತಿಕತೆ) ಮತ್ತು ದೇವರು ಇಚ್ಛಿಸುವುದನ್ನು ಮಾಡುವುದು (ಧರ್ಮ)—ಇವೆರಡರ ನಡುವೆ ಯಾವುದೇ ಸಂಘರ್ಷ ಏಕೆ ಇಲ್ಲ ಎಂಬುದನ್ನು ವಿವರಿಸುತ್ತದೆ: ಅಲ್ಲಾಹನು ಅತ್ಯಂತ ಕರುಣಾಮಯಿಯಾಗಿದ್ದಾನೆ ಮತ್ತು ಆತನು ಯಾವುದೇ ಮನುಷ್ಯನಿಗೆ ಕಷ್ಟ ಅಥವಾ ಹಾನಿಯನ್ನು ವಿಧಿಸುವುದಿಲ್ಲ ಎಂಬುದು ಇದರ ಸಾರವಾಗಿದೆ. “ನಿಶ್ಚಯವಾಗಿಯೂ, ಅಲ್ಲಾಹ್ ಲೋಕವಾಸಿಗಳ ಮೇಲೆ ಅಕ್ರಮವೆಸಗುವ ಇರಾದೆಯನ್ನೇನೂ ಇಟ್ಟಿರುವುದಿಲ್ಲ.” (3:108)

ಈ ವೃತ್ತಾಂತವನ್ನು ಟೀಕಿಸುವವರಿಗೆ ಅರ್ಥವಾಗದ ಒಂದು ಆಳವಾದ ಸತ್ಯವೆಂದರೆ ಇಬ್ರಾಹೀಮ್‌(ಅ) ರವರ ಅಚಲ ನಂಬಿಕೆ. ಇಬ್ರಾಹೀಮ್‌(ಅ) ರವರು ಇಸ್ಮಾಯಿಲ್(ಅ) ರವರನ್ನು ಎಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದರೂ, ಇಸ್ಮಾಯಿಲ್(ಅ) ರವರ ಮೇಲೆ ದೇವರಿಗಿರುವ ಪ್ರೀತಿ ಅದಕ್ಕಿಂತ ಅನಂತ ಪಟ್ಟು ದೊಡ್ಡದು ಎಂಬುದು ಅವರಿಗೆ ತಿಳಿದಿತ್ತು. ಪ್ರವಾದಿ ಮುಹಮ್ಮದ್(ಸ) ರವರು ವಿವರಿಸಿದಂತೆ, ಒಬ್ಬ ತಾಯಿ ತನ್ನ ಮಗುವನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ದೇವನು ಮನುಕುಲವನ್ನು ಪ್ರೀತಿಸುತ್ತಾನೆ. ಅಲ್ಲಾಹನ ಆಜ್ಞೆಗಳನ್ನು ಪಾಲಿಸುವುದು ಎಂದಿಗೂ ಹಾನಿಗೆ ಕಾರಣವಾಗುವುದಿಲ್ಲ ಮತ್ತು ಅದು ಹೇಗೆ ಎಂಬುದು ತಮಗೆ ತಿಳಿಯದಿದ್ದರೂ, ಅಂತಿಮವಾಗಿ ಫಲಿತಾಂಶವು ಒಳ್ಳೆಯದೇ ಆಗಿರುತ್ತದೆ ಎಂದು ಇಬ್ರಾಹೀಮ್‌(ಅ) ರವರಿಗೆ ತಿಳಿದಿತ್ತು. ವಿಮರ್ಶಕರು ಈ ಜ್ಞಾನದ ಅಂಶವನ್ನು ನಿರ್ಲಕ್ಷಿಸುತ್ತಾರೆ; ಒಬ್ಬ ಪ್ರವಾದಿಯಾಗಿ ಇಬ್ರಾಹೀಮ್‌(ಅ) ರವರಿಗೆ ದೇವನು ಏನನ್ನು ಆಜ್ಞಾಪಿಸುತ್ತಿದ್ದಾನೆಂಬ ನಿಖರವಾದ ಅರಿವಿತ್ತು ಮತ್ತು ದೇವನ ಇಚ್ಛೆಯು ನೈತಿಕವಾಗೂ ಒಳ್ಳೆಯದಾಗೂ ಇರುತ್ತದೆ ಎಂಬ ಖಚಿತ ಜ್ಞಾನವಿತ್ತು. ಆದ್ದರಿಂದಲೇ ದೇವನ ಸೂಚನೆಯನ್ನು ಪಾಲಿಸುವುದರಿಂದ ಕೆಟ್ಟ ಫಲಿತಾಂಶ ಬರುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಇವರು ಯಾರೋ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ—ಬದಲಾಗಿ ಬೆಂಕಿಯ ಕುಂಡಕ್ಕೆ ಎಸೆಯಲ್ಪಟ್ಟರೂ ಸುರಕ್ಷಿತವಾಗಿ ಹೊರಬಂದವರು, ಪುನರುತ್ಥಾನದ ಪವಾಡವನ್ನು ಕಣ್ಣಾರೆ ಕಂಡವರು ಮತ್ತು ಅಚಲವಾದ ವಿಶ್ವಾಸವನ್ನು ಹೊಂದಲು ಸ್ವರ್ಗ ಹಾಗೂ ಭೂಮಿಯ ರಹಸ್ಯಗಳನ್ನು ವೀಕ್ಷಿಸಿದವರಾಗಿದ್ದಾರೆ.

ಎರಡನೆಯದಾಗಿ, ಕುರ್‌ಆನಿನ ನಿರೂಪಣೆಯ ಒಂದು ವಿಶಿಷ್ಟ ಅಂಶವೆಂದರೆ ಇಬ್ರಾಹೀಮ್‌(ಅ) ರವರು ವಾಸ್ತವವಾಗಿ ತಮ್ಮ ಮಗನ ಬಳಿಗೆ ಹೋಗಿ ಈ ವಿಷಯದ ಬಗ್ಗೆ ಮಾತನಾಡುತ್ತಾರೆ: “ನನ್ನ ಪ್ರೀತಿಯ ಮಗನೇ, ನಾನು ನಿನ್ನನ್ನು ಬಲಿ ನೀಡುತ್ತಿರುವಂತೆ ನನ್ನ ಕನಸಿನಲ್ಲಿ ಕಂಡಿದ್ದೇನೆ, ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?” ಅದಕ್ಕೆ ಇಸ್ಮಾಯಿಲ್ ಹೀಗೆ ಉತ್ತರಿಸುತ್ತಾರೆ, “ನನ್ನ ತಂದೆಯೇ, ನಿಮಗೆ ಆಜ್ಞಾಪಿಸಿರುವುದನ್ನು ಮಾಡಿ, ದೇವನು ಇಚ್ಛಿಸಿದರೆ ನಾನು ತಾಳ್ಮೆಯಿಂದ ಇರುವವರಲ್ಲಿ ಒಬ್ಬನಾಗಿರುವುದನ್ನು ನೀವು ಕಾಣುವಿರಿ.”(37:102) ಇಬ್ರಾಹೀಮ್‌(ಅ) ರವರ ಉದ್ದೇಶದ ಅರಿವಿಲ್ಲದೆ ಬಲಿ ನೀಡಲ್ಪಡುವುದಕ್ಕಿಂತ ಹೆಚ್ಚಾಗಿ, ಇಸ್ಮಾಯಿಲ್(ಅ) ಈ ವಿಷಯದಲ್ಲಿ ಸ್ವಇಚ್ಛೆಯಿಂದ ಮತ್ತು ನಿಷ್ಠೆಯಿಂದ ಪಾಲ್ಗೊಳ್ಳುತ್ತಾರೆ. ಇಸ್ಲಾಮೀ ನಿರೂಪಣೆಯಲ್ಲಿ ಯಾವುದೇ ಮುಚ್ಚುಮರೆ ಅಥವಾ ಬಲವಂತವಿಲ್ಲ. ಈ ಘಟನೆಯು ತಂದೆ ಮತ್ತು ಮಗ ಇಬ್ಬರೂ ದೈವೇಚ್ಛೆಯನ್ನು ಕರ್ತವ್ಯವೆಂದು ನಂಬುವ ಸೌಂದರ್ಯದ ಬಗ್ಗೆ ಹೇಳುತ್ತದೆ. ಕುರ್‌ಆನ್ ಹೀಗೆ ಹೇಳುತ್ತದೆ: “ಕೊನೆಗೆ ಇಬ್ಬರೂ ವಿಧೇಯತೆಯೊಂದಿಗೆ ಶಿರಬಾಗಿದರು ಮತ್ತು ಇಬ್ರಾಹೀಮರು ಮಗನನ್ನು ಅಧೋಮುಖಿಯಾಗಿ ಮಲಗಿಸಿದರು. ಆಗ ನಾವು ಹೀಗೆ ಕೂಗಿ ಹೇಳಿದೆವು – ಇಬ್ರಾಹೀಮ್, ನೀವು ಸ್ವಪ್ನವನ್ನು ಸತ್ಯಗೊಳಿಸಿ ತೋರಿಸಿದಿರಿ. ನಾವು ಪುಣ್ಯ ಕಾರ್ಯವೆಸಗುವವರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ.” (37:103-105) 

ಪ್ರಾಚೀನ ವಿದ್ವಾಂಸರು ಈ ಘಟನೆಯನ್ನು ಹೇಗೆ ಅರ್ಥಮಾಡಿಕೊಂಡಿದ್ದರು ಎಂಬುದನ್ನು ಪರಿಶೀಲಿಸಿದರೆ, ವಿಮರ್ಶಕರ ವಾದವು ಮೂಲಭೂತವಾಗಿ ಎಷ್ಟು ತಪ್ಪಾಗಿದೆ ಎಂಬುದು ತಿಳಿಯುತ್ತದೆ. ದೇವರು ಇಬ್ರಾಹೀಮ್(ಅ) ರವರಿಗೆ ಇಸ್ಮಾಯಿಲ್(ಅ) ರವರನ್ನು ಬಲಿ ನೀಡುವಂತೆ ಏಕೆ ಆಜ್ಞಾಪಿಸಿದನು ಎಂಬುದರ ಕುರಿತು ಇಬ್ನ್ ಅಲ್-ಖಯ್ಯಿಮ್ (ಮರಣ ಕ್ರಿ.ಶ. 1350) ತನ್ನ ʻಮಿಫ್ತಾ ದಾರ್ ಅಲ್-ಸಾದಾʼ ಎಂಬ ಗ್ರಂಥದಲ್ಲಿ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ: 

“ಅಲ್ಲಾಹನು ತನ್ನ ಪ್ರಿಯ ಸ್ನೇಹಿತ ಇಬ್ರಾಹೀಮ್‌(ಅ)ರಿಗೆ ತನ್ನ ಮಗನನ್ನು ಬಲಿ ನೀಡಲು ಆಜ್ಞಾಪಿಸಿದರ ಹಿಂದಿನ ಉದ್ದೇಶವು ಬಲಿಯು ನಡೆಯಲಿ ಎಂಬುದಾಗಿರಲಿಲ್ಲ, ಬದಲಾಗಿ ತಂದೆ ಮತ್ತು ಮಗ ಇಬ್ಬರೂ ದೇವನ ಆಜ್ಞೆಗೆ ದೃಢವಾಗಿ ಮತ್ತು ಸಂಪೂರ್ಣವಾಗಿ ಶರಣಾಗಲಿ ಎಂಬುದು ಅದರ ಉದ್ದೇಶವಾಗಿತ್ತು. ಆ ಉದ್ದೇಶವು ನೆರವೇರಿದ ನಂತರ, [ಬಲಿಯನ್ನು ಪೂರೈಸುವ] ಕೊಲೆಯು ಅವರಿಬ್ಬರಿಗೂ ಹಾನಿಕಾರಕವಾಗುತ್ತಿತ್ತು. ಆದ್ದರಿಂದ, ದೇವನು ಆ ಆಜ್ಞೆಯನ್ನು ರದ್ದುಗೊಳಿಸಿದನು [ಮತ್ತು ಅದರ ಬದಲಾಗಿ ಕುರಿಯನ್ನು ಬಲಿ ನೀಡಲು ಇಬ್ರಾಹೀಮರಿಗೆ ಆದೇಶಿಸಿದನು]. ಈ ವಿಷಯದಲ್ಲಿ ಇದು ನಿಜವಾದ ಮತ್ತು ಸಮರ್ಪಕವಾದ ಉತ್ತರವಾಗಿದೆ.”

ಡ್ಯಾನಿಶ್ ತತ್ವಜ್ಞಾನಿ ಸೊರೆನ್ ಕೀರ್ಕೆಗಾರ್ಡ್ ಅವರು ಇಬ್ರಾಹೀಮ್‌(ಅ) ರವರ ವೃತ್ತಾಂದಲ್ಲಿ ಕಂಡುಬರುವ ನಂಬಿಕೆ ಮತ್ತು ನೀತಿಶಾಸ್ತ್ರದ ನಡುವಿನ ಸಂಘರ್ಷದ ಬಗ್ಗೆ ಆಳವಾದ ಆಸಕ್ತಿ ಹೊಂದಿದ್ದರು. ಇದು ನಂಬಿಕೆಯ ನೈಜ ಸ್ವರೂಪಕ್ಕೆ ಅತ್ಯುತ್ತಮ ಉದಾಹರಣೆ ಎಂದು ಅವರು ಪರಿಗಣಿಸಿದ್ದರು. ತಮ್ಮ ‘ಫಿಯರ್ ಅಂಡ್ ಟ್ರೆಂಬ್ಲಿಂಗ್’ ಎಂಬ ಕೃತಿಯಲ್ಲಿ ಅವರು ಈ ಬಲಿಯ ಘಟನೆಯನ್ನು ಚರ್ಚಿಸುತ್ತಾ, ಪ್ರಿಯ ಪುತ್ರನ ಬಲಿ ಪ್ರಕ್ರಿಯೆಯ ಸಮಯದಲ್ಲಿ ಇಬ್ರಾಹೀಮ್‌(ಅ) ಅನುಭವಿಸಿದ ಮಾನಸಿಕ ತಳಮಳವನ್ನು ವಿಶ್ಲೇಷಿಸಿದ್ದಾರೆ. ಈ ಕೃತಿಯ ಸಾರಾಂಶವೇನೆಂದರೆ, ಇಬ್ರಾಹೀಮ್‌(ಅ) ಎಂದಿಗೂ ಕೊಲೆಯಂತಹ ಅನೈತಿಕ ಕೃತ್ಯಕ್ಕೆ ಬದ್ಧರಾಗಿರಲಿಲ್ಲ. ಅಂದು ದೇವನು ಕೇಳಿದ ಕಾರ್ಯವು ಮೇಲ್ನೋಟಕ್ಕೆ ಅನೈತಿಕವಾಗಿ ಕಂಡರೂ, ದೇವನು ಎಂದಿಗೂ ಅಧರ್ಮವನ್ನು ಆಜ್ಞಾಪಿಸುವುದಿಲ್ಲ ಎಂಬ ಅರಿವು ಅವರಿಗಿತ್ತು; ಆದ್ದರಿಂದ ಅಂತಿಮವಾಗಿ ಒಳ್ಳೆಯದೇ ಸಂಭವಿಸುತ್ತದೆ ಎಂದು ಅವರು ನಂಬಿದ್ದರು. ದೇವನು ತನ್ನ ಮಗನನ್ನು ರಕ್ಷಿಸುತ್ತಾನೆ ಎಂಬ ಅಚಲ ವಿಶ್ವಾಸದೊಂದಿಗೆ ಇಬ್ರಾಹೀಮ್‌ ಮುಂದುವರಿದರು (ಇದನ್ನು ಕೀರ್ಕೆಗಾರ್ಡ್ ‘teleological suspension of the ethical’ ಎಂದು ಕರೆದಿದ್ದಾರೆ). ಈ ಮೂಲಕ ಕೀರ್ಕೆಗಾರ್ಡ್ ಅವರು ಎರಡು ವಿಚಾರಗಳ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಾರೆ: ಒಂದು, ಅನೈತಿಕ ಕೃತ್ಯವನ್ನು ಹಿಂಜರಿಕೆಯಿಲ್ಲದೆ ಮಾಡುವ ಕುರುಡು ವಿಧೇಯತೆ; ಎರಡು, ತನ್ನ ನೈತಿಕ ಪ್ರಜ್ಞೆಯನ್ನು ಜೀವಂತವಾಗಿರಿಸಿಕೊಂಡು, ದೈವಿಕ ಆಜ್ಞೆಯನ್ನು ಪಾಲಿಸಿದರೆ ಅಂತಿಮವಾಗಿ ಶುಭವೇ ಉಂಟಾಗುತ್ತದೆ ಎಂದು ನಂಬುವ ನೈಜ ವಿಶ್ವಾಸ.  

ಖ್ಯಾತ ವಿದ್ವಾಂಸ ಇಮಾಮ್ ಅಲ್-ಶೌಕಾನಿ ಅವರು ತನ್ನ ʻಫತ್ ಅಲ್-ಖಾದಿರ್ʼ ಗ್ರಂಥದಲ್ಲಿ ಈ ಕುರಿತು ಗಮನಾರ್ಹವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ: “ಇಬ್ರಾಹೀಮ್‌ ರವರು ಇಸ್ಮಾಯಿಲ್ ಅವರನ್ನು ಬಲಿ ನೀಡುವ ಹಂತಕ್ಕೆ ತಲುಪಿದಾಗ, ಪರ್ವತದ ಕಡೆಯಿಂದ ದೈವವಾಣಿಯೊಂದು ಬಂದಿತು: “ಓ ಇಬ್ರಾಹೀಮ್‌, ನೀನು ನಿನ್ನ ಕನಸನ್ನು ನಿಜವಾಗಿಸಿದ್ದೀಯೆ.” ಅಂದರೆ, ಅವರು ವಾಸ್ತವದಲ್ಲಿ ಬಲಿಯನ್ನು ಪೂರ್ಣಗೊಳಿಸದಿದ್ದರೂ, ಅದನ್ನು ಮಾಡಲು ಅವರು ಮಾಡಿದ ದೃಢ ಸಂಕಲ್ಪವೇ ಅವರ ಆಜ್ಞಾ ಪಾಲನೆಯ ಪೂರ್ಣತೆಗೆ ಸಾಕ್ಷಿಯಾಯಿತು. ಅವರು ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದ್ದರು. ಅಲ್ಲಿನ ಮೂಲ ಉದ್ದೇಶವು ಬಲಿ ಪ್ರಕ್ರಿಯೆಯಲ್ಲ, ಬದಲಾಗಿ ಅವರಿಬ್ಬರೂ ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದಾಗಿತ್ತು. ಅದನ್ನು ಅವರು ಯಶಸ್ವಿಯಾಗಿ ನೆರವೇರಿಸಿದರು.”

ಒಟ್ಟಾರೆಯಾಗಿ, ಇಬ್ರಾಹೀಮ್(ಅ) ರವರ ಮನೋಸ್ಥಿತಿಯು ನಾಸ್ತಿಕ ವಿಮರ್ಶಕರು ಟೀಕಿಸುವಂತೆ ಕುರುಡು ವಿಧೇಯತೆಯಾಗಿರಲಿಲ್ಲ. ಬದಲಿಗೆ, “ದೇವರು ನನಗೆ ಅತ್ಯಂತ ಕಠಿಣ ಪರೀಕ್ಷೆಯನ್ನು ನೀಡಿದ್ದಾನೆ, ಆದರೆ ಆತನ ಮೇಲೆ ನನಗಿರುವ ಅಚಲ ವಿಶ್ವಾಸವು ನನ್ನನ್ನು ಮತ್ತು ಇಸ್ಮಾಯಿಲ್‌ನನ್ನು ಯಾವುದೇ ಅನಾಹುತದಿಂದ ಕಾಪಾಡುತ್ತದೆ; ದೇವರು ನಮ್ಮ ನಂಬಿಕೆಯನ್ನು ಮೆಚ್ಚಿ ನಮಗೆ ಶುಭವನ್ನು ಕರುಣಿಸುತ್ತಾನೆ” ಎಂಬ ದೃಢ ವಿಶ್ವಾಸ ಅವರದಾಗಿತ್ತು. ಇದನ್ನು ಒಬ್ಬ ವ್ಯಕ್ತಿಯು ತನ್ನ ಸಂಗಾತಿಯು ತನ್ನನ್ನು ಹಿಡಿಯುತ್ತಾನೆ ಎಂಬ ಭರವಸೆಯೊಂದಿಗೆ ಹಿಂದಕ್ಕೆ ಬೀಳುವ ‘ಟ್ರಸ್ಟ್ ಫಾಲ್’ ಪ್ರಕ್ರಿಯೆಗೆ ಹೋಲಿಸಬಹುದು. ಕೆಳಕ್ಕೆ ಬೀಳುವುದರಿಂದ ಗಾಯವಾಗುತ್ತದೆ ಎಂಬ ಅರಿವು ಆ ವ್ಯಕ್ತಿಗಿದ್ದರೂ, ತಾನು ನೆಲಕ್ಕೆ ಬೀಳುವ ಮೊದಲೇ ಮತ್ತೊಬ್ಬರು ತನ್ನನ್ನು ರಕ್ಷಿಸುತ್ತಾರೆ ಎಂಬ ಅತೀವ ನಂಬಿಕೆಯನ್ನು ಅವರು ಅಲ್ಲಿ ತೋರಿಸುತ್ತಾರೆ. ಇಬ್ರಾಹೀಮ್‌(ಅ) ರವರು ದೇವನ ಮೇಲೆ ಇಟ್ಟಿದ್ದ ನಂಬಿಕೆಯೂ ಅಷ್ಟೇ ಗಾಢವಾಗಿತ್ತು. 

ಹೀಗೆ ಈ ಘಟನೆಯನ್ನು ಸೂಕ್ತವಾಗಿ ವಿಶ್ಲೇಷಿಸಿದರೆ, ಇದು ನೈಜ ಆಧ್ಯಾತ್ಮಿಕ ಸಮರ್ಪಣೆಗೆ ಒಂದು ಅತ್ಯುತ್ತಮ ನಿದರ್ಶನವಾಗಿ ಕಾಣಿಸುತ್ತದೆ. ದೇವನು ನಮ್ಮಿಂದ ಮಕ್ಕಳ ಬಲಿಯನ್ನು ಬಯಸುವುದಿಲ್ಲವಾದರೂ, ಬದುಕಿನಲ್ಲಿ ಸರಿಯಾದ ಹಾದಿಯಲ್ಲಿ ನಡೆಯಲು ಮತ್ತು ಶುಭ ಬದಲಾವಣೆ ತರಲು ಕಷ್ಟನಷ್ಟಗಳನ್ನು ಅನುಭವಿಸಬೇಕಾದ ಸವಾಲುಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನಮ್ಮ ಆಸ್ತಿಪಾಸ್ತಿ ಅಥವಾ ಬಂಧುಬಳಗವನ್ನು ನಾವು ಕಳೆದುಕೊಳ್ಳಬೇಕಾಗಬಹುದು. ಕುರುಡು ಆಜ್ಞಾಪಾಲನೆಗಾಗಿ ಮನುಷ್ಯನು ತನ್ನ ನೈತಿಕತೆಯನ್ನು ಬಿಟ್ಟುಕೊಡುವುದು ನಿಜವಾದ ವಿಶ್ವಾಸವಲ್ಲ. ಅದರ ಬದಲಾಗಿ, ದೇವಪ್ರೀತಿಗಾಗಿ ಮತ್ತು ಜನಸೇವೆಗಾಗಿ ಶ್ರೇಷ್ಠವಾದುದನ್ನು ಮಾಡುವ ಸಂದರ್ಭ ಬಂದಾಗ, ನಮಗೆ ಅತೀ ಪ್ರಿಯವಾದದ್ದನ್ನೇ ತ್ಯಾಗ ಮಾಡಲು ಸಜ್ಜಾಗುವುದು ನಿಜವಾದ ವಿಶ್ವಾಸವಾಗಿದೆ. ಏಕೆಂದರೆ ದೈವಿಕ ಮಾರ್ಗದಲ್ಲಿ ಸತ್ಕರ್ಮಗಳನ್ನು ಮಾಡುವವರ ಜೊತೆಗೆ ದೇವನು ಖಂಡಿತವಾಗಿಯೂ ಇರುತ್ತಾನೆ ಎಂಬುದು ನಮಗೆ ಗೊತ್ತಿದೆ. 

ಜಮಾರತ್ ಸಾಂಕೇತಿಕತೆ

ಜಮರಾತ್ (ಅಕ್ಷರಶಃ ಅರ್ಥ: ಸಣ್ಣ ಕಲ್ಲುಗಳ ಸ್ಥಳ) ಎಂಬುದು ಮಕ್ಕಾದ ಸಮೀಪವಿರುವ ಮಿನಾದಲ್ಲಿನ ಮೂರು ನಿರ್ದಿಷ್ಟ ಸ್ಥಳಗಳನ್ನು ಸೂಚಿಸುತ್ತದೆ. ಹಜ್ ಯಾತ್ರೆಯ ಸಮಯದಲ್ಲಿ ಯಾತ್ರಿಕರು ಈ ಜಮರಾತ್‌ಗಳಿಗೆ ಭೇಟಿ ನೀಡುತ್ತಾರೆ ಮತ್ತು ಅಲ್ಲಿನ ಮೂರು ಸ್ತಂಭಗಳಿಗೆ ಸಣ್ಣ ಕಲ್ಲುಗಳನ್ನು ಎಸೆಯುತ್ತಾರೆ. 

ಒಂದು ನಿರೂಪಣೆಯ ಪ್ರಕಾರ, ಈ ಆಚರಣೆಯು ಇಬ್ರಾಹೀಮ್‌(ಅ) ರವರು ದೇವನ ಆಜ್ಞೆಯನ್ನು ಪಾಲಿಸಲು ತಮ್ಮ ಮಗ ಇಸ್ಮಾಯಿಲ್‌ನನ್ನು ಬಲಿ ನೀಡಲು ಹೋಗುತ್ತಿದ್ದಾಗ ಮಾಡಿದ ಕಾರ್ಯದ ನೆನಪಿಗಾಗಿ ನಡೆಸಲಾಗುತ್ತದೆ. ಇಸ್ಮಾಯಿಲ್‌ರನ್ನು ಬಲಿ ನೀಡುವುದು ದೇವರ ಇಚ್ಛೆ ಎಂದು ಇಬ್ರಾಹೀಮ್‌(ಅ) ರವರಿಗೆ ಮನವರಿಕೆಯಾದ ನಂತರ, ಅವರು ಮಗನ ಬಳಿಗೆ ಹೋಗುವ ದಾರಿಯಲ್ಲಿ ಸೈತಾನನು ಅವರನ್ನು ತಡೆಯಲು ಮತ್ತು ದಾರಿ ತಪ್ಪಿಸಲು ಮೂರು ಬಾರಿ ಪ್ರಯತ್ನಿಸಿದನು. ಆ ಪ್ರತಿಯೊಂದು ಬಾರಿಯೂ ಇಬ್ರಾಹೀಮ್‌(ಅ) ರವರು ಸೈತಾನನಿಗೆ ಕಲ್ಲು ಎಸೆಯುವ ಮೂಲಕ ಪ್ರತಿಕ್ರಿಯಿಸಿದರು.(ಮುಸ್ನದ್ ಅಹ್ಮದ್, 2791)

ಜಮರಾತ್ ಕಂಬಗಳಿಗೆ ಕಲ್ಲು ಎಸೆಯುವುದು ಸೈತಾನನಿಗೆ ನೀಡುವ ದೈಹಿಕ ಶಿಕ್ಷೆಯೆಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಆದರೆ, ಇದು ಮೂಲತಃ ಇಬ್ರಾಹೀಮ್‌(ಅ) ರವರ ಶ್ರದ್ಧೆಯನ್ನು ಸ್ಮರಿಸುವ ಸಾಂಕೇತಿಕ ಕ್ರಿಯೆಯಾಗಿದೆ. ದೇವನ ಮಾರ್ಗದಿಂದ ನಮ್ಮನ್ನು ದಾರಿತಪ್ಪಿಸಲು ಹವಣಿಸುವ ಮನಸ್ಸಿನೊಳಗಿನ ಮತ್ತು ಸಮಾಜದಲ್ಲಿನ ಕೆಡುಕುಗಳ ಬಗ್ಗೆ ಎಚ್ಚರದಿಂದಿರಲು ಈ ಆಚರಣೆಯು ಪ್ರೇರೇಪಿಸುತ್ತದೆ. ಸತ್ಯ ಮತ್ತು ನಿಷ್ಠೆಯ ಹಾದಿಯಲ್ಲಿ ಸಾಗುವಾಗ ಬಾಹ್ಯ ಅಡೆತಡೆಗಳು ಎದುರಾಗುವುದು ಸಹಜ ಎಂದು ಇದು ಎಚ್ಚರಿಸುತ್ತದೆ. ಆದ್ದರಿಂದ, ದೈವೇಚ್ಛೆಯನ್ನು ಪೂರೈಸುವ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬ ವಿಶ್ವಾಸಿಯೂ ಸನ್ನದ್ಧನಾಗಿರಬೇಕು ಎಂಬುದನ್ನು ಇದು ತಿಳಿಸಿಕೊಡುತ್ತದೆ. 

ಉಪಸಂಹಾರ 

ಜೀವನದ ಹಾದಿಯಲ್ಲಿ ಎದುರಾಗುವ ಕಠಿಣ ಪರೀಕ್ಷೆಗಳು ಮತ್ತು ಸಂಕಷ್ಟಗಳ ವಿರುದ್ಧ ಹೋರಾಡುತ್ತಲೇ, ನಾವು ನೈತಿಕ ಹಾಗೂ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಮನುಷ್ಯರಾಗಿ ಸತತ ಪ್ರಯತ್ನ ಮಾಡುತ್ತೇವೆ. ಈ ಆಚರಣೆಗಳ ಸಾಂಕೇತಿಕತೆಯು ನಮ್ಮ ಅಸ್ತಿತ್ವದ ಆಳವಾದ ಅರ್ಥವನ್ನು ನಮಗೆ ಪರಿಚಯಿಸುತ್ತದೆ—ನಮ್ಮ ಮೂಲ, ನಮ್ಮ ಗುರುತು ಮತ್ತು ನಮ್ಮ ಬದುಕಿನ ಗುರಿಯನ್ನು ಇದು ನೆನಪಿಸುತ್ತದೆ. ಸೃಷ್ಟಿಕರ್ತನನ್ನು ಅರಿಯುವುದು ಮತ್ತು ಆತನ ಸಾನ್ನಿಧ್ಯವನ್ನು ಬದುಕಿನಲ್ಲಿ ಅನುಭವಿಸುವುದೇ ಶ್ರೇಷ್ಠವಾದ ಆಧ್ಯಾತ್ಮಿಕ ಪಯಣವಾಗಿದೆ. ಹಜ್ ಯಾತ್ರೆಯು ಇಂತಹ ಹಲವಾರು ಪ್ರಭಾವಿ ಆಚರಣಾ ಪದ್ಧತಿಗಳ ಮೂಲಕ ದೇವನು ಮತ್ತು ಸಹಮಾನವರೊಂದಿಗೆ ನಾವು ಹೊಂದಿರಬೇಕಾದ ಸಂಬಂಧದ ಬಗ್ಗೆ ನಮ್ಮನ್ನು ಜಾಗೃತಗೊಳಿಸುತ್ತದೆ. 

ಕನ್ನಡಾನುವಾದ: ಅಬೂ ಹುದೈಫಾ ಪಾಣೆಮಂಗಳೂರು

ಕೃಪೆ: yaqeeninstitute.org 

ಲೇಖಕರು:

ಶೇಕ್ಇಬ್ರಾಹಿಂ ಹಿಂದಿ – ಟೊರೊಂಟೊದಲ್ಲಿ ಜನನ ಮತ್ತು ಬೆಳವಣಿಗೆ. ಕೆನಡಾದ ಅತಿದೊಡ್ಡ ಮಸೀದಿಗಳಲ್ಲಿ ನಿಯಮಿತವಾಗಿ ಖುತ್ಬಾ ನೀಡುತ್ತಾರೆ. ಯಕೀನ್ ಇನ್ಸ್‌ಟಿಟ್ಯೂಷನ್‌ ಕೆನಡಾದ ಧಾರ್ಮಿಕ ನಿರ್ದೇಶಕರಾಗಿದ್ದಾರೆ.

ಡಾ. ನಝೀರ್ ಖಾನ್ – ಇಸ್ಲಾಮೀ ಧರ್ಮಶಾಸ್ತ್ರಜ್ಞ, ಕುರ್‌ಆನಿಕ್‌ ಸಯನ್ಸ್‌ ತಜ್ಞರು, ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಅಭ್ಯರ್ಥಿಯೂ ಆಗಿದ್ದಾರೆ.

Leave a Reply