ಈದ್ಉಲ್ ಅಝ್ಹಾ ಸಂದೇಶ

0
GettyImages-1252067522-1686493238

ಲೇಖಕರು: ಹಮೀದುದ್ದೀನ್ ಫಲಾಹಿ

ಈದ್ ಉಲ್ ಅಝ್ಹಾ ಎಂಬುದು ಕೇವಲ ಒಂದು ಹಬ್ಬ ಅಥವಾ ತಾತ್ಕಾಲಿಕ ಸಂತೋಷವಲ್ಲ. ಬದಲಿಗೆ ಇದು ದಾಸ್ಯ, ವಿಧೇಯತೆ ಮತ್ತು ಸಂಪೂರ್ಣ ಶರಣಾಗತಿಯ ಒಂದು ಮಹಾನ್ ಸಂದೇಶವಾಗಿದ್ದು, ಮನುಷ್ಯನ ಇಡೀ ಜೀವನದ ಹಾದಿಯನ್ನೇ ಬದಲಾಯಿಸುತ್ತದೆ. ಈ ದಿನವು ನಮಗೆ ಪ್ರವಾದಿ ಇಬ್ರಾಹೀಮ್(ಅ) ಮತ್ತು ಪ್ರವಾದಿ ಇಸ್ಮಾಯೀಲ್(ಅ) ರವರ ಸರಿಸಾಟಿಯಿಲ್ಲದ ತ್ಯಾಗವನ್ನು ನೆನಪಿಸುತ್ತದೆ. ಆ ಅನನ್ಯ ತ್ಯಾಗವು ಅಲ್ಲಾಹನ ಆಜ್ಞೆಗೆ ತೋರಿದ ಪ್ರೀತಿ, ನಿಷ್ಠೆ ಮತ್ತು ವಿಧೇಯತೆಯ ಅತ್ಯುನ್ನತ ಉದಾಹರಣೆಯಾಗಿದೆ. ಈ ಚೈತನ್ಯವೇ ಈದ್ ಉಲ್ ಅಝ್ಹಾವನ್ನು ಸಾಮಾನ್ಯ ಹಬ್ಬಗಳಿಂದ ಪ್ರತ್ಯೇಕಿಸುತ್ತದೆ ಮತ್ತು ಇದಕ್ಕೆ ಬೌದ್ಧಿಕ ಹಾಗೂ ಪ್ರಾಯೋಗಿಕ ಕ್ರಾಂತಿಯೆಂಬ ಹೆಸರನ್ನು ನೀಡುತ್ತದೆ. ವಾಸ್ತವವಾಗಿ, ಈ ದಿನವು ಮಾನವನ ಇಚ್ಛೆ-ಆಕಾಂಕ್ಷೆಗಳನ್ನು ಬಲಿ ಕೊಡುವ ದಿನವಾಗಿದೆ. ದಾಸನು ತನ್ನ ಪ್ರತಿಯೊಂದು ಆಯ್ಕೆಯನ್ನು ಅಲ್ಲಾಹನ ಇಚ್ಛೆಗೆ ಅಧೀನಗೊಳಿಸುವುದನ್ನು ಕಲಿಯುತ್ತಾನೆ.

ಅಲ್ಲಾಹನು ಕುರ್‌ಆನಿನಲ್ಲಿ ಹೀಗೆ ಹೇಳುತ್ತಾನೆ:

“ನಾವು ಪ್ರತಿಯೊಂದು ಸಮುದಾಯಕ್ಕೆ ಬಲಿದಾನದ ಒಂದು ಕಾಯಿದೆಯನ್ನು ನಿಶ್ಚಯಿಸಿ ಕೊಟ್ಟಿದ್ದೇವೆ. ಇದು, (ಆ ಸಮುದಾಯದ) ಜನರು ತಮಗೆ ಅಲ್ಲಾಹನು ದಯಪಾಲಿಸಿರುವ ಪ್ರಾಣಿಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಲೆಂದು.” (22:34)

ಈ ಸೂಕ್ತದಲ್ಲಿರುವ “ಮನ್ಸಕ್” ಎಂಬ ಪದವು ಬಲಿದಾನ(ತ್ಯಾಗ) ಎಂಬುದು ಕೇವಲ ಒಂದು ಬಾಹ್ಯ ಕ್ರಿಯೆಯಲ್ಲ, ಅದೊಂದು ಆರಾಧನೆಯಾಗಿದ್ದು, ಅದರ ಮೂಲಕ ದಾಸನು ತನ್ನ ಪ್ರಭುವನ್ನು ಸ್ಮರಿಸುತ್ತಾನೆ ಮತ್ತು ಅವನೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸಿಕೊಳ್ಳುತ್ತಾನೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಅಲ್ಲಾಹನು ಬಲಿದಾನದ ನಿಜವಾದ ಉದ್ದೇಶ ಪ್ರಾಣಿಯನ್ನು ಹತ್ಯೆ ಮಾಡುವುದಲ್ಲ, ಹೃದಯಗಳಲ್ಲಿ ಅಲ್ಲಾಹನ ಮಹೋನ್ನತೆಯನ್ನು ಮತ್ತು ಅವನ ಸ್ಮರಣೆಯನ್ನು ಪುನರುಜ್ಜೀವನಗೊಳಿಸುವುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಾನೆ. ಒಬ್ಬ ದಾಸನು ತಾನು ಪ್ರೀತಿಸುವ ವಸ್ತುವನ್ನು ಅಲ್ಲಾಹನ ಹೆಸರಿನಲ್ಲಿ ತ್ಯಾಗ ಮಾಡಿದಾಗ,  ಆತನು ಪ್ರಪಂಚದ ಮೇಲಿನ ಪ್ರೀತಿಯನ್ನು ತನ್ನ ಹೃದಯದಿಂದ ತೆಗೆದುಹಾಕಿ, ಅಲ್ಲಾಹನ ಮೇಲಿನ ಪ್ರೀತಿಯು ಮೇಲುಗೈ ಸಾಧಿಸುವಂತೆ ಮಾಡುತ್ತಾನೆ.

ಪ್ರವಾದಿ ಮುಹಮ್ಮದ್(ಸ) ರವರೂ ಸಹ ತ್ಯಾಗದ ಈ ಚೇತನವನ್ನು ಎತ್ತಿ ತೋರಿಸುತ್ತಾ ಹೀಗೆ ಹೇಳಿದ್ದಾರೆ:

“ಬಲಿದಾನದ ದಿನದಂದು, ರಕ್ತ ಹರಿಸುವುದಕ್ಕಿಂತ (ಕುರ್ಬಾನಿ) ಮಿಗಿಲಾದ ಯಾವುದೇ ಮಾನವನ ಕಾರ್ಯವು ಅಲ್ಲಾಹನಿಗೆ ಹೆಚ್ಚು ಪ್ರಿಯವಾದದ್ದಲ್ಲ.” (ತಿರ್ಮಿದಿ)

ಈ ಪ್ರವಾದಿ ವಚನದ ಬೆಳಕಿನಲ್ಲಿ, ಬಲಿದಾನವು ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಆರಾಧನೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಆತನ ಪ್ರೀತಿಯು ಕೇವಲ ಬಾಹ್ಯ ಕ್ರಿಯೆಗೆ ಸಂಬಂಧಿಸಿದ್ದಲ್ಲ. ಅದರ ಹಿಂದಿರುವ ಸಂಕಲ್ಪ (ನಿಯ್ಯತ್), ಪ್ರಾಮಾಣಿಕತೆ ಮತ್ತು ಭಕ್ತಿಯ ಚೇತನಕ್ಕೆ ಸಂಬಂಧಿಸಿದೆ. ಈ ಚೇತನ ಇಲ್ಲದಿದ್ದರೆ, ಬಲಿದಾನವು ಕೇವಲ ಒಂದು ಆಚರಣೆಯಾಗಿ ಉಳಿಯುತ್ತದೆ.

ಇಂದಿನ ಯುಗದಲ್ಲಿ, ಮನುಷ್ಯನು ಭೌತಿಕವಾದ, ಆಸೆಗಳ ಗುಲಾಮಗಿರಿ ಮತ್ತು ಲೌಕಿಕ ಸುಖಭೋಗಗಳಲ್ಲಿ ಮುಳುಗಿರುವಾಗ, ಈದ್ ಉಲ್ ಅಝ್ಹಾ ನಮಗೆ ಜೀವನದ ನಿಜವಾದ ಉದ್ದೇಶ ಕೇವಲ ಗಳಿಸುವುದು, ಉಣ್ಣುವುದು ಮತ್ತು ಬದುಕುವುದು ಮಾತ್ರವಲ್ಲ. ಬದಲಿಗೆ, ಅಲ್ಲಾಹನ ಸೇವೆ ಮಾಡುವುದಾಗಿದೆ ಎಂದು ನೆನಪಿಸುತ್ತದೆ. ಈ ಈದ್ ನಮ್ಮೊಳಗೆ ಒಂದು ಕ್ರಾಂತಿಯನ್ನು ತರಲು ನಮಗೆ ಆಹ್ವಾನ ನೀಡುತ್ತದೆ. ನಮ್ಮ ಆಸೆಗಳನ್ನು ಅಲ್ಲಾಹನ ಆಜ್ಞೆಗೆ ಅಧೀನಗೊಳಿಸಲು, ಇಬ್ರಾಹೀಮ್‌(ಅ) ರವರ ಪರಂಪರೆಯ ಪ್ರಕಾರ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಮತ್ತು ಅಲ್ಲಾಹನಿಂದ ನಮ್ಮನ್ನು ದೂರವಿಡುವ ಪ್ರತಿಯೊಂದನ್ನೂ ತ್ಯಾಗ ಮಾಡಲು ಸಿದ್ಧರಾಗಲು ಇದು ಕರೆ ನೀಡುತ್ತದೆ.

ಆದ್ದರಿಂದ ಈದ್ ಉಲ್ ಅಝ್ಹಾ ಕೇವಲ ಸಂತೋಷದ ದಿನವಲ್ಲ, ಅದೊಂದು ಸಂದೇಶ. ಮನುಷ್ಯನನ್ನು ಆಚರಣೆಯಿಂದ ವಾಸ್ತವದ ಕಡೆಗೆ ಮತ್ತು ಪ್ರಪಂಚದಿಂದ ಪ್ರಭುವಿನ ಕಡೆಗೆ ಮುನ್ನಡೆಸುವ ಸಂದೇಶವಾಗಿದೆ.

ಬಲಿದಾನದ ಆರಂಭ: ಒಂದು ಕನಸೇ ಅಥವಾ ಮಹಾನ್ ಪರೀಕ್ಷೆಯೇ?

ಬಲಿದಾನದ ಇತಿಹಾಸವು ಸಾಮಾನ್ಯ ಘಟನೆಯಿಂದ ಆರಂಭವಾಗುವುದಿಲ್ಲ. ಸಾರ್ವಕಾಲಿಕವಾಗಿ ನಂಬಿಕೆ, ವಿಧೇಯತೆ ಮತ್ತು ದೇವನ ಮೇಲಿನ ಪ್ರೀತಿಗೆ ಮಾನದಂಡವನ್ನು ನಿಗದಿಪಡಿಸಿದ ಒಂದು ಮಹಾನ್ ಪರೀಕ್ಷೆಯಿಂದ ಆರಂಭವಾಗುತ್ತದೆ. ಪ್ರವಾದಿ ಇಬ್ರಾಹೀಮ್‌(ಅ) ರವರು ಕಂಡ ಕನಸು ಕೇವಲ ವೈಯಕ್ತಿಕ ಅಥವಾ ಮಾನಸಿಕ ಸ್ಥಿತಿಯಾಗಿರಲಿಲ್ಲ. ಅಲ್ಲಾಹನ ಕಡೆಯಿಂದ ಬಂದ ಸ್ಪಷ್ಟ ಆಜ್ಞೆಯಾಗಿತ್ತು. ಏಕೆಂದರೆ, ಪ್ರವಾದಿಗಳ ಕನಸುಗಳೂ ಸಹ ದೈವಿಕ ಸಂದೇಶದ(ವಹೀ) ಸ್ಥಾನವನ್ನು ಹೊಂದಿವೆ. ಈ ದೃಶ್ಯವನ್ನು ಪವಿತ್ರ ಕುರ್‌ಆನಿನಲ್ಲಿ ಈ ಕೆಳಗಿನಂತೆ ವಿವರಿಸಲಾಗಿದೆ:

“ಮಗೂ, ನಾನು ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕನಸಿನಲ್ಲಿ ಕಂಡೆನು.” (37:102)

ಈ ಪದಗಳು ಮೇಲ್ನೋಟಕ್ಕೆ ಚಿಕ್ಕದಾಗಿರಬಹುದು. ಆದರೆ. ಅವುಗಳು ಒಂದು ಮಹಾನ್ ಪರೀಕ್ಷೆಯನ್ನು ಒಳಗೊಂಡಿವೆ. ಒಂದೆಡೆ, ವೃದ್ಧಾಪ್ಯದಲ್ಲಿ ಜನಿಸಿದ ಮಗು, ಯಾರ ಮೇಲಿನ ನೈಸರ್ಗಿಕ ಪ್ರೀತಿಯು ಅದರ ತುತ್ತತುದಿಯನ್ನು ತಲುಪಿತ್ತೋ ಆ ಮಗ, ಮತ್ತು ಇನ್ನೊಂದೆಡೆ, ಅಲ್ಲಾಹನ ಆಜ್ಞೆ – ಮಾನವನ ಬುದ್ಧಿ ಮತ್ತು ಭಾವನೆಗಳೆರಡಕ್ಕೂ ಅತ್ಯಂತ ಕಠಿಣವಾಗಿದ್ದ ಆಜ್ಞೆ! ನಿಜವಾದ ಪರೀಕ್ಷೆಯು ಕೇವಲ ಮಗನನ್ನು ಬಲಿ ಕೊಡುವುದಾಗಿರಲಿಲ್ಲ, ಬದಲಿಗೆ ಒಬ್ಬನ ಆಸೆಗಳು, ಭಾವನೆಗಳು ಮತ್ತು ಪ್ರೀತಿಯನ್ನು ಅಲ್ಲಾಹನ ಇಚ್ಛೆಗೆ ಅಧೀನಗೊಳಿಸುವುದಾಗಿತ್ತು.

ಪ್ರವಾದಿ ಇಬ್ರಾಹೀಮ್‌(ಅ) ರವರು ಈ ಆಜ್ಞೆಯ ಮುಂದೆ ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ, ವಿಳಂಬ ಮಾಡಲಿಲ್ಲ ಮತ್ತು ಯಾವುದೇ ಹಿಂಜರಿಕೆಯನ್ನು ವ್ಯಕ್ತಪಡಿಸಲಿಲ್ಲ. ತಕ್ಷಣವೇ ಅದಕ್ಕೆ ಸಿದ್ಧರಾದರು. ಇದು ವಿಶ್ವಾಸದ (ಈಮಾನ್) ವಾಸ್ತವಿಕತೆಯು ಮುನ್ನೆಲೆಗೆ ಬರುವ ಸಂದರ್ಭವಾಗಿದೆ. ವಿಶ್ವಾಸ ಎಂಬುದು ಕೇವಲ ಒಂದು ಪ್ರತಿಪಾದನೆಯಲ್ಲ. ಎಲ್ಲಾ ಸಂದರ್ಭಗಳಲ್ಲೂ ಅಲ್ಲಾಹನ ಆಜ್ಞೆಯನ್ನು ತನ್ನದೇ ಆದ ಆಸೆಗಳಿಗಿಂತ ಮುಂಚೂಣಿಯಲ್ಲಿಡುವುದರ ಹೆಸರಾಗಿದೆ.

ಪ್ರವಾದಿ(ಸ) ರವರು ಪರೀಕ್ಷೆಗಳ ವಾಸ್ತವತೆಯನ್ನು ವಿವರಿಸುತ್ತಾ ಹೀಗೆ ಹೇಳಿದ್ದಾರೆ:

“ಜನರಲ್ಲಿ ಅತ್ಯಂತ ಕಠಿಣ ಪರೀಕ್ಷೆಗೆ ಒಳಗಾಗುವವರು ಪ್ರವಾದಿಗಳು, ನಂತರ ಅವರಲ್ಲಿ ಅತ್ಯುತ್ತಮರಾದವರು.” (ತಿರ್ಮಿದಿ)

(ಅರ್ಥಾತ್‌: ಅತ್ಯಂತ ದೊಡ್ಡ ಪರೀಕ್ಷೆಗಳು ಪ್ರವಾದಿಗಳ ಮೇಲೆ ಬರುತ್ತವೆ, ನಂತರ ಅಲ್ಲಾಹನಿಗೆ ಯಾರು ಅತ್ಯಂತ ಹತ್ತಿರವಾಗಿದ್ದಾರೋ ಅವರ ಮೇಲೆ ಬರುತ್ತದೆ.)

ಈ ಪ್ರವಾದಿ ವಚನವು ಪರೀಕ್ಷೆಗಳು ವಾಸ್ತವವಾಗಿ ಅಲ್ಲಾಹನ ಸಾಮೀಪ್ಯದ ಸಂಕೇತವಾಗಿದೆ ಎಂಬುದನ್ನು ತೋರಿಸುತ್ತದೆ. ಒಬ್ಬ ದಾಸನು ಅಲ್ಲಾಹನಿಗೆ ಎಷ್ಟು ಹತ್ತಿರವಾಗುತ್ತಾನೋ, ಅವನ ಪರೀಕ್ಷೆಗಳು ಅಷ್ಟು ತೀವ್ರವಾಗುತ್ತವೆ. ಇದರಿಂದಾಗಿ ಆತನ ನಂಬಿಕೆಯು ಹೆಚ್ಚು ಶುದ್ಧ ಮತ್ತು ಬಲಶಾಲಿಯಾಗುತ್ತದೆ. ಪ್ರವಾದಿ ಇಬ್ರಾಹೀಮ್‌(ಅ) ರವರ ಈ ಘಟನೆಯು ಈ ತತ್ವಕ್ಕೆ ಅತ್ಯುನ್ನತ ಉದಾಹರಣೆಯಾಗಿದೆ.

ಜೀವನದಲ್ಲಿ ಬರುವ ಕಷ್ಟಗಳು ಮತ್ತು ಪರೀಕ್ಷೆಗಳು ಕೇವಲ ತೊಂದರೆಗಳಲ್ಲ, ಅವು ನಮ್ಮ ವಿಶ್ವಾಸವನ್ನು ಪರೀಕ್ಷಿಸುವ ಮತ್ತು ಪರಿಷ್ಕರಿಸುವ ಸಾಧನಗಳಾಗಿವೆ ಎಂಬುದನ್ನು ಈ ಘಟನೆಯು ನಮಗೆ ಕಲಿಸುತ್ತದೆ. ನಿಜವಾದ ಯಶಸ್ಸು ಮನುಷ್ಯನು ಪರೀಕ್ಷೆಗಳಿಂದ ಪಾರಾಗುವುದರಲ್ಲಿ ಇಲ್ಲ. ಬದಲಿಗೆ, ಎಲ್ಲಾ ಸಂದರ್ಭಗಳಲ್ಲೂ ಅಲ್ಲಾಹನ ಆಜ್ಞೆಗೆ ಶರಣಾಗುವುದರಲ್ಲಿದೆ. ಒಬ್ಬ ದಾಸನು ಅಲ್ಲಾಹನ ಸಂತುಷ್ಟಿಗಾಗಿ ತನ್ನ ಆಸೆಗಳನ್ನು ತ್ಯಾಗ ಮಾಡಿದಾಗ ಮಾತ್ರ, ಆತ ನಿಜವಾಗಿಯೂ “ತ್ಯಾಗದ” ಚೇತನವನ್ನು ಪಡೆದುಕೊಳ್ಳುತ್ತಾನೆ.

. ಇಸ್ಮಾಯೀಲ್(): ವಿಧೇಯತೆಯ ಮೂರ್ತರೂಪ

ಪ್ರವಾದಿ ಇಬ್ರಾಹೀಮ್‌(ಅ) ರವರ ಬಲಿದಾನದ ಕಥೆಯು ವಿಶ್ವಾಸ ಮತ್ತು ನಿಷ್ಠೆಯ ಅಡಿಪಾಯವನ್ನು ಹಾಕಿದರೆ, ಪ್ರವಾದಿ ಇಸ್ಮಾಯೀಲ್(ಅ) ರವರ ಪಾತ್ರವು ಅದರ ನೆರವೇರಿಕೆ ಮತ್ತು ಔನ್ನತ್ಯದ ರೂಪದಲ್ಲಿ ಮುನ್ನೆಲೆಗೆ ಬರುತ್ತದೆ. ಒಂದೆಡೆ, ತಂದೆಗೆ ಅಲ್ಲಾಹನ ಆಜ್ಞೆ ಲಭಿಸಿತು, ಇನ್ನೊಂದೆಡೆ, ಮಗನನ್ನೂ ಅದೇ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಯಿತು, ಇದರಿಂದಾಗಿ ಅಲ್ಲಾಹನ ಸೇವೆಯು ವಯಸ್ಸು ಅಥವಾ ಸ್ಥಾನಮಾನಕ್ಕೆ ಬದ್ಧವಾಗಿರದೆ, ಹೃದಯದ ಪ್ರಾಮಾಣಿಕತೆ ಮತ್ತು ದೃಢ ವಿಶ್ವಾಸವನ್ನು ಬಯಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರವಾದಿ ಇಬ್ರಾಹೀಮ್‌(ಅ) ರವರು ತಮ್ಮ ಮಗನಿಗೆ ಈ ಕನಸು ಮತ್ತು ದೈವಿಕ ಆಜ್ಞೆಯ ಬಗ್ಗೆ ತಿಳಿಸಿದಾಗ, ಪ್ರವಾದಿ ಇಸ್ಮಾಯೀಲ್(ಅ) ರವರು ಪ್ರತಿಕ್ರಿಯಿಸಿದ ವಿಧಾನವು ಸಾರ್ವಕಾಲಿಕವಾಗಿ ವಿಧೇಯತೆ, ತಾಳ್ಮೆ ಮತ್ತು ವಿಧಿಗೆ ತೃಪ್ತಿಪಡುವ ಅತ್ಯಂತ ಮಹಾನ್ ಉದಾಹರಣೆಯಾಯಿತು. ಪವಿತ್ರ ಕುರ್‌ಆನ್ ಈ ದೃಶ್ಯವನ್ನು ಈ ಕೆಳಗಿನಂತೆ ವಿವರಿಸುತ್ತದೆ:

“ಅಪ್ಪಾ, ತಮಗೆ ಆಜ್ಞಾಪಿಸಲಾಗಿರುವುದನ್ನು ಮಾಡಿಬಿಡಿರಿ. ಅಲ್ಲಾಹನು ಇಚ್ಛಿಸಿದರೆ, ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ.” (37:102)

ಈ ಪದಗಳು ಕೇವಲ ಒಬ್ಬ ಮಗನ ಉತ್ತರವಾಗಿರಲಿಲ್ಲ. ಬದಲಿಗೆ ಸಂಪೂರ್ಣ ನಂಬಿಕೆ, ಸಂಪೂರ್ಣ ಖಾತ್ರಿ ಮತ್ತು ಅಲ್ಲಾಹನ ಇಚ್ಛೆಯ ಸ್ವೀಕಾರದ ಘೋಷಣೆಯಾಗಿತ್ತು. ಹ. ಇಸ್ಮಾಯೀಲ್(ಅ) ರವರು ಯಾವುದೇ ಭಯವಾಗಲಿ ಅಥವಾ ಯಾವುದೇ ಪ್ರತಿರೋಧವಾಗಲಿ ತೋರಿಸದೆ, ಸಂಪೂರ್ಣ ತೃಪ್ತಿ ಮತ್ತು ಖಚಿತತೆಯೊಂದಿಗೆ ಅಲ್ಲಾಹನ ಆಜ್ಞೆಗೆ ತಮ್ಮನ್ನು ಒಪ್ಪಿಸಿಕೊಂಡರು ಎಂಬುದು ಗಮನಾರ್ಹವಾಗಿದೆ. ಇದು ಅವರು ವಿಶ್ವಾಸ, ನಂಬಿಕೆ ಮತ್ತು ವಿಧೇಯತೆಯ ಉನ್ನತ ತತ್ವಗಳ ಮೇಲೆ ತರಬೇತಿ ಪಡೆದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಈ ತರಬೇತಿಯೇ ಒಂದು ಪೀಳಿಗೆಯನ್ನು ಶ್ರೇಷ್ಠವಾಗಿಸುತ್ತದೆ.

ನಿಜವಾದ ಆರಾಧನೆಯು ಕೇವಲ ಹಿರಿಯರಿಗೆ ಅಥವಾ ವಿದ್ವಾಂಸರಿಗೆ ಸೀಮಿತವಾಗಿಲ್ಲ. ಅಲ್ಲಾಹನ ಆಜ್ಞೆಗಳ ಪ್ರಕಾರ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಯುವಕರ ಜವಾಬ್ದಾರಿಯೂ ಆಗಿದೆ ಎಂಬುದನ್ನು ಈ ಘಟನೆಯು ನಮಗೆ ಕಲಿಸುತ್ತದೆ. ಯೌವನವು ಆಸೆಗಳು, ಭಾವನೆಗಳು ಮತ್ತು ಲೌಕಿಕ ಆಕರ್ಷಣೆಗಳು ಉತ್ತುಂಗದಲ್ಲಿರುವ ಹಂತವಾಗಿದೆ. ಆ ಪರಿಸ್ಥಿತಿಯಲ್ಲಿ ಯುವಕನೊಬ್ಬನು ಅಲ್ಲಾಹನ ವಿಧೇಯತೆಯನ್ನು ಅಳವಡಿಸಿಕೊಂಡರೆ, ಅಲ್ಲಾಹನ ದೃಷ್ಟಿಯಲ್ಲಿ ಅವನು ವಿಶೇಷ ಸ್ಥಾನವನ್ನು ಪಡೆಯುತ್ತಾನೆ.

ಪ್ರವಾದಿ(ಸ) ಅವರು ಈ ರೀತಿ ಹೇಳಿದ್ದಾರೆ:

“ಅಲ್ಲಾಹನು ತನ್ನ ನೆರಳಿನಡಿಯಲ್ಲಿ ಆಶ್ರಯ ನೀಡುವ ಏಳು ವಿಭಾಗದ ಜನರಿದ್ದಾರೆ… ಅವರಲ್ಲಿ ಅಲ್ಲಾಹನ ಆರಾಧನೆಯಲ್ಲಿ ಬೆಳೆದ ಯುವಕನೂ ಒಬ್ಬನು.” (ಬುಖಾರಿ, ಮುಸ್ಲಿಂ)

ಈ ಪ್ರವಾದಿ ವಚನದ ಬೆಳಕಿನಲ್ಲಿ, ಯೌವನದಲ್ಲಿ ಅಲ್ಲಾಹನಿಗೆ ವಿಧೇಯರಾಗಿರುವುದು ಒಂದು ಮಹಾನ್ ಆಶೀರ್ವಾದ ಎಂಬುದು ಸ್ಪಷ್ಟವಾಗುತ್ತದೆ. ಹ. ಇಸ್ಮಾಯೀಲ್(ಅ) ರವರ ಉದಾಹರಣೆಯು ಯುವಕರು ತಮ್ಮ ಆತ್ಮ, ಆಸೆಗಳು ಮತ್ತು ಲೌಕಿಕ ಸುಖಗಳನ್ನು ಅಲ್ಲಾಹನ ಇಚ್ಛೆಗೆ ಅಧೀನಗೊಳಿಸಿದರೆ, ಅವರು ತಮ್ಮ ಪರಲೋಕವನ್ನು ಸುಧಾರಿಸಿಕೊಳ್ಳುವುದು ಮಾತ್ರವಲ್ಲದೆ ಆದರ್ಶ ಸಮಾಜದ ಅಡಿಪಾಯವನ್ನೂ ಹಾಕಬಹುದು ಎಂಬುದನ್ನು ಕಲಿಸುತ್ತದೆ.

ಇಂದಿನ ಯುವ ಪೀಳಿಗೆಗೆ, ಹ. ಇಸ್ಮಾಯೀಲ್(ಅ) ರವರ ಚಾರಿತ್ರ್ಯವು ತಮ್ಮ ಜೀವನಕ್ಕೆ ಒಂದು ಉದ್ದೇಶವನ್ನು ನೀಡಲು, ತಮ್ಮ ಆಸೆಗಳಿಗಿಂತ ಅಲ್ಲಾಹನ ಆಜ್ಞೆಗೆ ಆದ್ಯತೆ ನೀಡಲು ಮತ್ತು ಎಲ್ಲಾ ಪರಿಸ್ಥಿತಿಗಳಲ್ಲೂ ಸಹನೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಒಂದು ಸ್ಪಷ್ಟ ಸಂದೇಶವಾಗಿದೆ. ಇದು ಮನುಷ್ಯನನ್ನು ಅಲ್ಲಾಹನಿಗೆ ಹತ್ತಿರವಾಗಿಸುವ ಮತ್ತು ನಿಜವಾದ ಯಶಸ್ಸಿಗೆ ಕಾರಣವಾಗುವ ಹಾದಿಯಾಗಿದೆ.

ಬಲಿದಾನ: ಪ್ರಾಣಿಯದ್ದಲ್ಲ, ಬದಲಿಗೆ ಆತ್ಮಬಲಿ

ಈದ್ ಉಲ್ ಅಝ್ಹಾ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕಾದ ಅತ್ಯಂತ ಪ್ರಮುಖವಾದ ಸತ್ಯವೆಂದರೆ, ಬಲಿದಾನ ಎಂದರೆ ಕೇವಲ ಪ್ರಾಣಿಯನ್ನು ಹತ್ಯೆ ಮಾಡುವುದಲ್ಲ, ಬದಲಿಗೆ ಮನುಷ್ಯನ ಒಳಗಿನ ಅಸ್ತಿತ್ವ, ಅವನ ಹೃದಯ ಮತ್ತು ಅವನ ಸಂಕಲ್ಪಕ್ಕೆ ಸಂಬಂಧಿಸಿದ್ದಾಗಿದೆ. ಬಾಹ್ಯ ಕ್ರಿಯೆಯ ಜೊತೆ ಜೊತೆಗೆ, ಹೃದಯವು ಪ್ರಾಮಾಣಿಕತೆ, ಧರ್ಮನಿಷ್ಠೆ(ತಖ್ವಾ) ಮತ್ತು ಅಲ್ಲಾಹನನ್ನು ಪ್ರಸನ್ನಗೊಳಿಸುವ ಬಯಕೆಯಿಂದ ತುಂಬಿರದಿದ್ದರೆ, ಆ ಬಲಿದಾನವು ನಿಜವಾದ ಸತ್ವದಿಂದ ವಂಚಿತವಾಗಿರುತ್ತದೆ. ಅಲ್ಲಾಹನು ಈ ಸತ್ಯವನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾನೆ:

“ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ, ಅವನಿಗೆ ನಿಮ್ಮ ಧರ್ಮನಿಷ್ಠೆ ತಲಪುತ್ತದೆ” (22:37)

ಈ ಸೂಕ್ತದಲ್ಲಿ ಅಲ್ಲಾಹನು ಮನುಷ್ಯನ ಗಮನವನ್ನು ಬಾಹ್ಯ ಕ್ರಿಯೆಗಳಿಂದ ಆಂತರ್ಯದ ಚೈತನ್ಯದ ಕಡೆಗೆ ತಿರುಗಿಸಿದ್ದಾನೆ. ಮಾಂಸ ಮತ್ತು ರಕ್ತಗಳು ಲೌಕಿಕ ವಸ್ತುಗಳು, ಅಲ್ಲಾಹನಿಗೆ ಅವುಗಳ ಅಗತ್ಯವಿಲ್ಲ. ದೇವನು ದಾಸನ ಹೃದಯದ ಸ್ಥಿತಿ, ಸಂಕಲ್ಪ ಮತ್ತು ಆತನ ಧರ್ಮನಿಷ್ಠೆಯನ್ನು ಸ್ವೀಕರಿಸುತ್ತಾನೆ. ಇದರರ್ಥ ನಿಜವಾದ ಬಲಿದಾನವೆಂದರೆ ದಾಸನು ತನ್ನ ಆಸೆಗಳನ್ನು, ತನ್ನ ಅಹಂಕಾರವನ್ನು ಮತ್ತು ತನ್ನ ಆತ್ಮವನ್ನು ಅಲ್ಲಾಹನ ಸಂತುಷ್ಟಿಗೆ ಅಧೀನಗೊಳಿಸುವುದಾಗಿದೆ.

ಪ್ರವಾದಿಯವರು ಈ ಆಂತರಿಕ ಜಿಹಾದ್‌ನ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೀಗೆ ಹೇಳಿದರು:

“ಅಲ್-ಮುಜಾಹಿದ್ ಎಂದರೆ ಅಲ್ಲಾಹನ ವಿಧೇಯತೆಯಲ್ಲಿ ತನ್ನ ಸ್ವಂತ ಆತ್ಮದೊಂದಿಗೆ ಹೋರಾಡುವವನು.” (ತಿರ್ಮಿದಿ)

ಈ ಪ್ರವಾದಿ ವಚನದಲ್ಲಿ ಅತ್ಯಂತ ದೊಡ್ಡ ಜಿಹಾದ್ ಎಂದರೆ ಮನುಷ್ಯನು ತನ್ನ ಸ್ವಂತ ಆತ್ಮದ ಇಚ್ಚೆಯ ವಿರುದ್ಧ ನಿಲ್ಲುವುದಾಗಿದೆ ಎಂಬ ಸತ್ಯವನ್ನು ವಿವರಿಸುತ್ತದೆ. ಆತ್ಮವು ಮನುಷ್ಯನನ್ನು ಪಾಪಗಳು, ಆಸೆಗಳು ಮತ್ತು ಲೌಕಿಕ ಸುಖಗಳ ಕಡೆಗೆ ಸೆಳೆಯುತ್ತದೆ. ಆದರೆ, ವಿಶ್ವಾಸವು ಅವನನ್ನು ಅಲ್ಲಾಹನ ವಿಧೇಯತೆ, ಸಹನೆ ಮತ್ತು ಧರ್ಮನಿಷ್ಠೆಯ ಕಡೆಗೆ ಕರೆಯುತ್ತದೆ. ಬಲಿದಾನ ಎಂಬುದು ವಾಸ್ತವವಾಗಿ ಈ ಸಂಘರ್ಷದಲ್ಲಿ ಅಲ್ಲಾಹನ ಸಂತುಷ್ಟಿಗೆ ಆದ್ಯತೆ ನೀಡುವುದರ ಹೆಸರಾಗಿದೆ.

ಒಬ್ಬ ವ್ಯಕ್ತಿಯು ನಿಷೇಧಿತ ವಸ್ತುಗಳಿಂದ ದೂರವಿದ್ದಾಗ, ಸತ್ಯವನ್ನು ಅಪ್ಪಿಕೊಂಡಾಗ ಮತ್ತು ಅಲ್ಲಾಹನ ಸಲುವಾಗಿ ತಾನು ಪ್ರೀತಿಸುವದನ್ನು ತ್ಯಜಿಸಿದಾಗ, ವಾಸ್ತವವಾಗಿ ತನ್ನ ಸ್ವಂತ ಆತ್ಮವನ್ನು ತ್ಯಾಗ ಮಾಡುತ್ತಿರುತ್ತಾನೆ. ಇದು ಮನುಷ್ಯನನ್ನು ಅಲ್ಲಾಹನಿಗೆ ಹತ್ತಿರವಾಗಿಸುವ ಮತ್ತು ಆತನ ನಂಬಿಕೆಯನ್ನು ಬಲಪಡಿಸುವ ತ್ಯಾಗವಾಗಿದೆ.

ಆದ್ದರಿಂದ, ಈದ್ ಉಲ್ ಅಝ್ಹಾದ ಮುಖ್ಯ ಸಂದೇಶವೆಂದರೆ ನಾವು ಕೇವಲ ಪ್ರಾಣಿಗಳನ್ನು ಬಲಿ ಕೊಡುವುದರೊಂದಿಗೆ ತೃಪ್ತರಾಗಬಾರದು. ಬದಲಿಗೆ, ನಮ್ಮ ಜೀವನದಲ್ಲಿ ತ್ಯಾಗದ ಚೇತನವನ್ನು ಬೆಳೆಸಿಕೊಳ್ಳಬೇಕು. ನಮ್ಮ ಆಸೆಗಳನ್ನು ನಿಯಂತ್ರಿಸಬೇಕು, ಪಾಪಗಳನ್ನು ತಪ್ಪಿಸಬೇಕು ಮತ್ತು ಯಾವಾಗಲೂ ನಮ್ಮ ಆದ್ಯತೆಗಳಿಗಿಂತ ಹೆಚ್ಚಾಗಿ ಅಲ್ಲಾಹನ ಆಜ್ಞೆಗಳನ್ನು ಮುಂಚೂಣಿಯಲ್ಲಿಡಬೇಕು. ಇದು ಮನುಷ್ಯನನ್ನು ಇಹಲೋಕ ಮತ್ತು ಪರಲೋಕ ಎರಡರಲ್ಲೂ ಯಶಸ್ವಿಯಾಗಿಸುವ ನಿಜವಾದ ಬಲಿದಾನವಾಗಿದೆ.

ಪ್ರಸ್ತುತ ಪರಿಸ್ಥಿತಿ: ಮುಸ್ಲಿಂ ಉಮ್ಮತ್ತಿನ ಪರೀಕ್ಷೆ

ಮುಸ್ಲಿಂ ಸಮಾಜ ಇಂದು ಎದುರಿಸುತ್ತಿರುವ ಪರಿಸ್ಥಿತಿಗಳು ಕೇವಲ ನೋವಿನಿಂದ ಕೂಡಿರದೆ, ಗಂಭೀರವಾದ ಚಿಂತನೆಗೂ ನಮ್ಮನ್ನು ಆಹ್ವಾನಿಸುತ್ತವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ದಬ್ಬಾಳಿಕೆ, ಅನ್ಯಾಯ, ದೌರ್ಬಲ್ಯ, ಬೌದ್ಧಿಕ ಗೊಂದಲ ಮತ್ತು ಧಾರ್ಮಿಕ ಉದಾಸೀನತೆ ಆವರಿಸಿಕೊಂಡಿವೆ. ಈ ಪರಿಸ್ಥಿತಿಯು ಕೇವಲ ಬಾಹ್ಯ ಅಂಶಗಳ ಫಲಿತಾಂಶವಲ್ಲ. ನಮ್ಮದೇ ಆದ ನ್ಯೂನತೆಗಳು, ನಿರ್ಲಕ್ಷ್ಯ ಮತ್ತು ಅಲ್ಲಾಹನಿಂದ ದೂರವಿರುವುದರ ಕಾರಣದಿಂದಲೂ ಆಗಿದೆ. ಪವಿತ್ರ ಕುರ್‌ಆನ್ ಈ ವಾಸ್ತವತೆಯನ್ನು ಅತ್ಯಂತ ಸ್ಪಷ್ಟವಾದ ರೀತಿಯಲ್ಲಿ ವಿವರಿಸುತ್ತದೆ:

“ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ ಪಾಪಗಳನ್ನು ಅವನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ.” (42: 30)

ಈ ಸೂಕ್ತದಲ್ಲಿ ಅಲ್ಲಾಹನು, ನಾವು ಎದುರಿಸುತ್ತಿರುವ ತೊಂದರೆಗಳಲ್ಲಿ ನಮ್ಮದೇ ನ್ಯೂನತೆಗಳು ಸೇರಿವೆ ಎಂದು ನಮ್ಮ ಪರಿಸ್ಥಿತಿಯ ಕನ್ನಡಿಯನ್ನು ನಮಗೆ ತೋರಿಸುತ್ತಾನೆ. ಆದಾಗ್ಯೂ, ಅಲ್ಲಾಹನು ತನ್ನ ಕೃಪೆಯಿಂದ ಅನೇಕ ತಪ್ಪುಗಳನ್ನು ಕ್ಷಮಿಸುತ್ತಾನೆ ಎಂಬ ಭರವಸೆಯನ್ನೂ ನೀಡಲಾಗಿದೆ. ಈ ಸೂಕ್ತ ನಮ್ಮನ್ನು ಹತಾಶೆಗೆ ನೂಕುವುದಿಲ್ಲ. ಬದಲಿಗೆ, ಸುಧಾರಣೆ ಮತ್ತು ಅಲ್ಲಾಹನ ಕಡೆಗೆ ಮರಳಲು ಆಹ್ವಾನಿಸುತ್ತದೆ.

ಇದೇ ರೀತಿ, ಇನ್ನೊಂದು ಸ್ಥಳದಲ್ಲಿ, ಅಲ್ಲಾಹನು ಬದಲಾವಣೆಯ ತತ್ವವನ್ನು ಹೀಗೆ ವಿವರಿಸಿದ್ದಾನೆ:

“ವಾಸ್ತವದಲ್ಲಿ ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹ್ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ.” (13:11)

ಈ ಸೂಕ್ತದಲ್ಲಿ ಪರಿಸ್ಥಿತಿಗಳಲ್ಲಿನ ಬದಲಾವಣೆಯು ಬಾಹ್ಯದಿಂದಲ್ಲ, ಒಳಗಿನಿಂದ ಪ್ರಾರಂಭವಾಗುತ್ತದೆ ಎಂಬ ಮೂಲಭೂತ ಸತ್ಯವನ್ನು ವಿವರಿಸುತ್ತದೆ. ನಾವು ನಮ್ಮ ಹೃದಯಗಳನ್ನು ಸರಿಪಡಿಸಿಕೊಳ್ಳುವವರೆಗೆ, ನಮ್ಮ ಸಂಕಲ್ಪಗಳನ್ನು ಶುದ್ಧೀಕರಿಸುವವರೆಗೆ ಮತ್ತು ನಮ್ಮ ಜೀವನವನ್ನು ಅಲ್ಲಾಹನ ಆಜ್ಞೆಗಳ ಪ್ರಕಾರ ರೂಪಿಸಿಕೊಳ್ಳುವವರೆಗೆ, ನಮ್ಮ ಸಾಮೂಹಿಕ ಪರಿಸ್ಥಿತಿಯಲ್ಲಿ ಯಾವುದೇ ನೈಜ ಬದಲಾವಣೆ ಕಾಣಲು ಸಾಧ್ಯವಿಲ್ಲ.

ಮನುಷ್ಯನು ಪಾಪಗಳಲ್ಲಿ ಮುಳುಗಿದಾಗ, ಅದರ ಪರಿಣಾಮಗಳು ಅವನ ಸಾಮಾಜಿಕ ಜೀವನದಲ್ಲೂ ಪ್ರತಿಫಲಿಸುತ್ತವೆ ಎಂದು ಪ್ರವಾದಿ(ಸ) ರವರೂ ಸಹ ಬೆರಳು ಮಾಡಿ ತೋರಿಸಿದ್ದಾರೆ. ಆದ್ದರಿಂದ, ನಾವು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಪರೀಕ್ಷಿಸುವುದು, ನಮ್ಮ ನ್ಯೂನತೆಗಳನ್ನು ಗುರುತಿಸುವುದು ಮತ್ತು ನಿಜವಾದ ಪಶ್ಚಾತ್ತಾಪದೊಂದಿಗೆ(ತೌಬಾ) ಅಲ್ಲಾಹನ ಕಡೆಗೆ ತಿರುಗುವುದು ಮುಖ್ಯವಾಗಿದೆ.

ಇಂತಹ ಸಂದರ್ಭಗಳಲ್ಲಿ ಈದ್ ಉಲ್ ಅಝ್ಹಾದ ಸಂದೇಶವು ಇನ್ನಷ್ಟು ಮುಖ್ಯವಾಗುತ್ತದೆ. ತ್ಯಾಗವಿಲ್ಲದೆ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ನಮ್ಮ ತಪ್ಪು ಅಭ್ಯಾಸಗಳು, ನಮ್ಮ ಆಸೆಗಳು, ನಮ್ಮ ನಿರ್ಲಕ್ಷ್ಯ ಮತ್ತು ನಮ್ಮ ನಿಷ್ಕ್ರಿಯತೆಯನ್ನು ನಾವು ತ್ಯಾಗ ಮಾಡುವವರೆಗೆ, ನಮ್ಮ ಪರಿಸ್ಥಿತಿಯಾಗಲಿ ಅಥವಾ ಸಮುದಾಯದ ಪರಿಸ್ಥಿತಿಯಾಗಲಿ ಬದಲಾಗುವುದಿಲ್ಲ.

ಈದ್ ಉಲ್ ಅಝ್ಹಾ ನಮಗೆ ಕೇವಲ ಪ್ರಾಣಿಗಳನ್ನು ಹತ್ಯೆ ಮಾಡುವ ಪಾಠವನ್ನು ಕಲಿಸುವುದಿಲ್ಲ. ಅದು ನಮ್ಮನ್ನು ಆತ್ಮಾವಲೋಕನ, ಆತ್ಮಸುಧಾರಣೆ ಮತ್ತು ಸಾಮೂಹಿಕ ಜಾಗೃತಿಗೆ ಆಹ್ವಾನಿಸುತ್ತದೆ. ನಾವು ಈ ಸಂದೇಶವನ್ನು ಅರ್ಥಮಾಡಿಕೊಂಡು ಅದನ್ನು ನಮ್ಮ ಜೀವನದಲ್ಲಿ ಜಾರಿಗೆ ತಂದರೆ, ಈ ತ್ಯಾಗವು ನಮಗೆ ಅವನತಿಯಿಂದ ಉನ್ನತಿಯ ಕಡೆಗಿನ ಹೊಸ ಆರಂಭವಾಗಬಹುದು.

ಭೌತಿಕವಾದ: ಆಧುನಿಕ ಯುಗದ ಅತ್ಯಂತ ದೊಡ್ಡ ಪ್ರಲೋಭನೆ

ಇಂದಿನ ಯುಗದಲ್ಲಿ, ಮನುಷ್ಯನು ತನ್ನ ಹೃದಯ ಮತ್ತು ಮನಸ್ಸನ್ನು ಆವರಿಸಿರುವ ಒಂದು ಪ್ರಲೋಭನೆಯಿಂದ ಬಳಲುತ್ತಿದ್ದಾನೆ. ಅದುವೇ ಭೌತಿಕವಾದ (ಮೆಟೀರಿಯಲಿಸಂ). ಅಂದರೆ ಪ್ರಪಂಚ, ಸಂಪತ್ತು, ಆರಾಮ ಮತ್ತು ಆಸೆಗಳ ಮೇಲಿನ ಕುರುಡು ಪ್ರೀತಿ. ಯಶಸ್ಸಿನ ಮಾನದಂಡವು ಧರ್ಮನಿಷ್ಠೆ ಮತ್ತು ಚಾರಿತ್ರ್ಯದ ಬದಲಾಗಿ ಸಂಪತ್ತು, ಕೀರ್ತಿ ಮತ್ತು ಬಾಹ್ಯ ವೈಭವವಾಗಿ ಮಾರ್ಪಟ್ಟಿದೆ. ಮನುಷ್ಯನು ತನ್ನ ಜೀವನದ ಉದ್ದೇಶವನ್ನು ಮರೆತಿದ್ದಾನೆ ಮತ್ತು ಈ ಪ್ರಪಂಚದ ಅನ್ವೇಷಣೆಯಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾನೆ. ಹಲಾಲ್ ಮತ್ತು ಹರಾಮ್ ನಡುವಿನ ವ್ಯತ್ಯಾಸವೂ ಸಹ ಮಸುಕಾಗುತ್ತಿದೆ. ಪವಿತ್ರ ಕುರ್‌ಆನ್‌ ಈ ಸತ್ಯವನ್ನು ಅತ್ಯಂತ ಸಮಗ್ರವಾದ ರೀತಿಯಲ್ಲಿ ಹೀಗೆ ವಿವರಿಸುತ್ತದೆ:

“ಜನರಿಗೆ ಇಂದ್ರಿಯಾಭಿಲಾಷೆಗಳಾದ- ಸ್ತ್ರೀಯರು, ಮಕ್ಕಳು, ಚಿನ್ನ ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು, ಜಾನುವಾರುಗಳು ಮತ್ತು ಕೃಷಿ ಭೂಮಿ- ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ.” (3:14)

ಈ ಸೂಕ್ತದಲ್ಲಿ ಅಲ್ಲಾಹನು ಲೌಕಿಕ ವಸ್ತುಗಳು ಸ್ವಯಂ ಕೆಟ್ಟದ್ದಲ್ಲ, ಆದರೆ ಅವುಗಳ ಪ್ರೀತಿಯು ಹೃದಯವನ್ನು ಆವರಿಸಿ ಮನುಷ್ಯನನ್ನು ಅಲ್ಲಾಹನ ಸ್ಮರಣೆಯಿಂದ ವಿಮುಖಗೊಳಿಸಿದಾಗ, ಈ ವಸ್ತುಗಳು ಪ್ರಲೋಭನೆಗಳಾಗುತ್ತವೆ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. “ಝೀನಾ” ಎಂಬ ಪದವು ಈ ಆಕರ್ಷಣೆಯನ್ನು ಮನುಷ್ಯನ ಸ್ವಭಾವದಲ್ಲಿ ಇರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ, ಪರೀಕ್ಷೆಯು ಅವನು ಈ ಆಕರ್ಷಣೆಯನ್ನು ನಿಯಂತ್ರಿಸುತ್ತಾನೋ ಅಥವಾ ಅದರ ಗುಲಾಮನಾಗುತ್ತಾನೋ ಎಂಬುದರಲ್ಲಿದೆ.

ಪ್ರವಾದಿ(ಸ) ರವರು ಈ ಅಪಾಯವನ್ನು ಅತ್ಯಂತ ಬಲವಾದ ರೀತಿಯಲ್ಲಿ ವಿವರಿಸಿದ್ದಾರೆ:

“ದೀನಾರ್‌ನ ದಾಸ ಮತ್ತು ದಿರ್ಹಾಮ್‌ನ ದಾಸನು ನಾಶವಾದನು…” (ಬುಖಾರಿ)

ಈ ವಚನದಲ್ಲಿ ಪ್ರವಾದಿಯವರು ಸಂಪತ್ತಿಗೆ ಗುಲಾಮನಾಗುವ ವ್ಯಕ್ತಿಯನ್ನು “ದಾಸ” ಎಂದು ಬಣ್ಣಿಸಿದ್ದಾರೆ. ಅಂದರೆ, ಅವನ ಆಲೋಚನೆಗಳು, ನಿರ್ಧಾರಗಳು ಮತ್ತು ಆದ್ಯತೆಗಳು ಸಂಪತ್ತಿನ ಸುತ್ತಲೇ ಸುತ್ತುತ್ತವೆ. ಇದು ವಾಸ್ತವವಾಗಿ ಒಂದು ಎಚ್ಚರಿಕೆಯಾಗಿದ್ದು, ಮನುಷ್ಯನು ಸಂಪತ್ತನ್ನೇ ತನ್ನ ಗುರಿಯನ್ನಾಗಿ ಮಾಡಿಕೊಂಡರೆ, ಅವನು ಅಲ್ಲಾಹನ ಸೇವೆಯಿಂದ ದೂರವಾಗಿ ಪ್ರಪಂಚದ ಗುಲಾಮನಾಗುತ್ತಾನೆ.

ಇಂದು, ನಾವು ನಮ್ಮ ಪ್ರಾಯೋಗಿಕ ಜೀವನದಲ್ಲಿ ಧರ್ಮವನ್ನು ಹಿಂದೆ ಬಿಟ್ಟು ಪ್ರಪಂಚದ ಹಿಂದೆ ಓಡುತ್ತಿರುವುದನ್ನು ನೋಡುತ್ತಿದ್ದೇವೆ. ಪ್ರಾರ್ಥನೆಗಳಲ್ಲಿ ನಿರ್ಲಕ್ಷ್ಯ, ಹಲಾಲ್ ಮತ್ತು ಹರಾಮ್ ಬಗ್ಗೆ ಉದಾಸೀನತೆ ಮತ್ತು ನೈತಿಕ ದೌರ್ಬಲ್ಯಗಳು ಸಾಮಾನ್ಯವಾಗಿದೆ. ಇಂತಹ ಪರಿಸರದಲ್ಲಿ, ಈದ್ ಉಲ್ ಅಝ್ಹಾದ ಸಂದೇಶವು ನಿಜವಾದ ಯಶಸ್ಸು ಪ್ರಪಂಚವನ್ನು ಸಂಗ್ರಹಿಸುವುದರಲ್ಲಿ ಇಲ್ಲ, ಅಲ್ಲಾಹನನ್ನು ಸಂಪ್ರೀತಿ ಗಳಿಸುವುದರಲ್ಲಿದೆ ಎಂಬ ಪ್ರಬಲ ಜ್ಞಾಪನೆಯಾಗಿ ನಮ್ಮ ಮುಂದೆ ಬರುತ್ತದೆ.

ಅಲ್ಲಾಹನ ಆಜ್ಞೆಗಾಗಿ ನಾವು ಅತ್ಯಂತ ಹೆಚ್ಚು ಪ್ರೀತಿಸುವ ವಸ್ತುಗಳನ್ನು ಸಹ ತ್ಯಜಿಸಬಹುದು ಎಂಬುದನ್ನು ಬಲಿದಾನವು ನಮಗೆ ಕಲಿಸುತ್ತದೆ. ಒಬ್ಬ ವ್ಯಕ್ತಿಯು ಅಲ್ಲಾಹನ ಆಜ್ಞೆಯ ಮೇರೆಗೆ ತನ್ನ ಆಸೆಗಳನ್ನು, ತನ್ನ ಪ್ರೀತಿಯನ್ನು ಮತ್ತು ತನ್ನ ಸಂಪತ್ತನ್ನು ತ್ಯಾಗ ಮಾಡಲು ಸಿದ್ಧನಾದಾಗ, ವಾಸ್ತವವಾಗಿ ಭೌತಿಕವಾದದ ಮೂರ್ತಿಯನ್ನು ಒಡೆಯುತ್ತಾನೆ. ಈದ್ ಉಲ್ ಅಝ್ಹಾ ನಮ್ಮಲ್ಲಿ ಮೂಡಿಸಲು ಬಯಸುವ ಕ್ರಾಂತಿ ಇದಾಗಿದೆ. ಆ ಮೂಲಕ ನಾವು ಪ್ರಪಂಚದ ಗುಲಾಮರಾಗದೆ ಅಲ್ಲಾಹನ ನಿಜವಾದ ದಾಸರಾಗುತ್ತೇವೆ.

ಬಲಿದಾನ ಮತ್ತು ಸಾಮಾಜಿಕ ನ್ಯಾಯ

ಇಸ್ಲಾಮ್‌ ಕೇವಲ ವೈಯಕ್ತಿಕ ಆರಾಧನಾ ಕ್ರಮಗಳ ಸಂಗ್ರಹವಲ್ಲ. ಬದಲಿಗೆ, ಸಾಮಾಜಿಕ ನ್ಯಾಯ, ಸಹಾನುಭೂತಿ ಮತ್ತು ಪರಸ್ಪರ ಸಹಕಾರವು ಮೂಲಭೂತವಾಗಿರುವ ಸಂಪೂರ್ಣ ಜೀವನ ಸಂಹಿತೆಯಾಗಿದೆ. ಈದ್ ಉಲ್ ಅಝ್ಹಾದ ಬಲಿದಾನವು ಸಹ ಈ ಸಾಮೂಹಿಕ ನ್ಯಾಯದ ವ್ಯವಸ್ಥೆಯ ಪ್ರಾಯೋಗಿಕ ಅಭಿವ್ಯಕ್ತಿಯಾಗಿದೆ. ಇದು ಮನುಷ್ಯನಿಗೆ ತನ್ನ ಸ್ವಂತ ಹಿತಾಸಕ್ತಿಯನ್ನು ಮೀರಿ ಇತರರ ಅಗತ್ಯಗಳನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ಅಲ್ಲಾಹನು ಬಲಿದಾನದ ಉದ್ದೇಶವನ್ನು ವಿವರಿಸುತ್ತಾ ಹೀಗೆ ಹೇಳಿದ್ದಾನೆ:

“ಸ್ವತಃ ತಿನ್ನಲಿ ಮತ್ತು ಬಡಬಗ್ಗರಿಗೂ ಕೊಡಲಿ.” (22:28)

ಈ ಸೂಕ್ತದಲ್ಲಿ ಅಲ್ಲಾಹನು ಬಲಿದಾನವನ್ನು ಕೇವಲ ವೈಯಕ್ತಿಕ ಆರಾಧನೆಯಾಗಿ ಪರಿಗಣಿಸದೆ, ಅದನ್ನು ಸಾಮಾಜಿಕ ಕಲ್ಯಾಣದೊಂದಿಗೆ ಜೋಡಿಸಿದ್ದಾನೆ. “ಅಲ್-ಬಾಯಿಸಲ್ ಫಕೀರ್” ಎಂಬ ಪದಗಳು ವಿಶೇಷವಾಗಿ ತೀವ್ರ ಅಗತ್ಯತೆ ಮತ್ತು ವಂಚಿತರಾಗಿರುವವರನ್ನು ಉಲ್ಲೇಖಿಸುತ್ತವೆ. ಸಮಾಜದ ದುರ್ಬಲ ವರ್ಗದವರನ್ನು ಸಂತೋಷದ ಸಂದರ್ಭಗಳಲ್ಲಿ ನಿರ್ಲಕ್ಷಿಸದೆ ಈ ಸಂತೋಷದಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಬೇಕೆಂದು ಇಸ್ಲಾಮ್‌ ಬಯಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಹೀಗೆ ಬಲಿದಾನವು ಸಂಪತ್ತಿನ ಹರಿವು ಕೆಳಮುಖವಾಗಿ ಹರಿಯುವಂತೆ ಮಾಡುವ ಮತ್ತು ಸಮಾಜದಲ್ಲಿ ಸಮತೋಲನವನ್ನು ಸ್ಥಾಪಿಸುವ ಸಾಧನವಾಗುತ್ತದೆ.

ಪ್ರವಾದಿಯವರೂ ಸಹ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ:

“ಯಾವೊಬ್ಬ ವಿಶ್ವಾಸಿಯೂ ತಾನು ತೃಪ್ತನಾಗಿದ್ದು, ತನ್ನ ಪಕ್ಕದಲ್ಲಿರುವ ನೆರೆಹೊರೆಯವನು ಹಸಿದಿರುವಾಗ ವಿಶ್ವಾಸಿಯಾಗಲಾರನು.” (ಬೈಹಕಿ)

ಈ ಪ್ರವಾದಿ ವಚನವು ವಿಶ್ವಾಸದ (ಈಮಾನ್) ವಾಸ್ತವತೆಯನ್ನು ಸಾಮಾಜಿಕ ಸಂವೇದನೆಯೊಂದಿಗೆ ಜೋಡಿಸುತ್ತದೆ. ಅಂದರೆ, ಪರಿಪೂರ್ಣ ನಂಬಿಕೆ ಎಂಬುದು ಕೇವಲ ಆರಾಧನಾ ಕಾರ್ಯಗಳನ್ನು ನಿರ್ವಹಿಸುವುದು ಮಾತ್ರವಲ್ಲ, ಇತರರ ನೋವನ್ನು ಅನುಭವಿಸುವುದು ಮತ್ತು ಅವರ ಅಗತ್ಯಗಳನ್ನು ಪೂರೈಸುವುದೂ ಆಗಿದೆ. ಹಸಿವು, ಬಡತನ ಮತ್ತು ವಂಚನೆಗಳು ತಮ್ಮನ್ನು ಆವರಿಸಿರುವಾಗ ಸಮಾಜದಲ್ಲಿನ ಜನರು ತಮ್ಮದೇ ಆದ ಆರಾಮಗಳಲ್ಲಿ ಮುಳುಗಿದ್ದರೆ, ಇದು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿದೆ.

ಈದ್ ಉಲ್ ಅಝ್ಹಾ ನಮ್ಮ ಸ್ವಂತ ಸಂತೋಷವನ್ನು ನಮಗೇ ಸೀಮಿತಗೊಳಿಸದೆ ಇತರರೊಂದಿಗೆ ಹಂಚಿಕೊಳ್ಳಲು ಕಲಿಸುತ್ತದೆ. ಒಬ್ಬ ವ್ಯಕ್ತಿಯು ಪ್ರಾಮಾಣಿಕತೆಯಿಂದ ಬಲಿ ಕೊಟ್ಟು ಅದರ ಮಾಂಸವನ್ನು ಸಂಬಂಧಿಕರು, ನೆರೆಹೊರೆಯವರು ಮತ್ತು ವಿಶೇಷವಾಗಿ ಅಗತ್ಯವಿರುವವರಿಗೆ ಹಂಚಿದಾಗ, ಅವನು ವಾಸ್ತವವಾಗಿ ಸಹಾನುಭೂತಿ, ಸಮತೋಲನ ಮತ್ತು ಭ್ರಾತೃತ್ವದ ಸಮಾಜವನ್ನು ನಿರ್ಮಿಸುವಲ್ಲಿ ತನ್ನ ಪಾತ್ರವನ್ನು ವಹಿಸುತ್ತಿರುತ್ತಾನೆ.

ಹೀಗೆ, ಬಲಿದಾನವು ಕೇವಲ ಒಂದು ಆರಾಧನೆಯಾಗಿ ಉಳಿಯದೆ ಸಾಮಾಜಿಕ ಕ್ರಾಂತಿಯ ಸಾಧನವಾಗುತ್ತದೆ. ಇದು ಹೃದಯಗಳನ್ನು ಜೋಡಿಸುತ್ತದೆ, ದೂರವನ್ನು ಕಡಿಮೆ ಮಾಡುತ್ತದೆ ಮತ್ತು ಮನುಷ್ಯರ ನಡುವೆ ಪ್ರೀತಿ, ಸಮಾನತೆ ಮತ್ತು ನ್ಯಾಯವನ್ನು ಉತ್ತೇಜಿಸುತ್ತದೆ. ಈ ಚೇತನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಈದ್ ಉಲ್ ಅಝ್ಹಾದ ನಿಜವಾದ ಬೇಡಿಕೆಯಾಗಿದೆ.

ಪ್ರಾಮಾಣಿಕತೆ: ಕ್ರಿಯೆಯ ಚೇತನ

ಇಸ್ಲಾಮ್‌ನಲ್ಲಿ, ಪ್ರತಿಯೊಂದು ಕ್ರಿಯೆಯ ನಿಜವಾದ ಮೌಲ್ಯವನ್ನು ಅದರ ಬಾಹ್ಯ ರೂಪದಿಂದಲ್ಲ, ಬದಲಿಗೆ ಅದರ ಆಂತರಿಕತೆಯಿಂದ, ಅಂದರೆ ಅದರ ಸಂಕಲ್ಪ (ನಿಯ್ಯತ್) ಮತ್ತು ಪ್ರಾಮಾಣಿಕತೆಯಿಂದ (ಇಖ್ಲಾಸ್) ನಿರ್ಧರಿಸಲಾಗುತ್ತದೆ. ಮೇಲ್ನೋಟಕ್ಕೆ ಒಂದೇ ರೀತಿಯ ಕ್ರಿಯೆಯನ್ನು ಇಬ್ಬರು ವಿಭಿನ್ನ ವ್ಯಕ್ತಿಗಳು ಮಾಡುತ್ತಾರೆ. ಆದರೆ, ಒಂದನ್ನು ಅಲ್ಲಾಹನು ಸ್ವೀಕರಿಸುತ್ತಾನೆ ಮತ್ತು ಇನ್ನೊಂದನ್ನು ತಿರಸ್ಕರಿಸುತ್ತಾನೆ. ಈ ವ್ಯತ್ಯಾಸದ ಆಧಾರವು ಕೇವಲ ಸಂಕಲ್ಪವಾಗಿದೆ. ಪ್ರವಾದಿ(ಸ) ರವರು ಈ ಸತ್ಯವನ್ನು ಅತ್ಯಂತ ಸಮಗ್ರ ಮತ್ತು ತತ್ವಬದ್ಧ ರೀತಿಯಲ್ಲಿ ಹೀಗೆ ವಿವರಿಸಿದ್ದಾರೆ:

“ಕ್ರಿಯೆಗಳನ್ನು ಸಂಕಲ್ಪಗಳ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಾನು ಸಂಕಲ್ಪ ಮಾಡಿದ್ದನ್ನು ಪಡೆಯುತ್ತಾನೆ.” (ಬುಖಾರಿ, ಮುಸ್ಲಿಂ)

ಈ ವಚನವು ಇಸ್ಲಾಮ್‌ನ ಮೂಲಭೂತ ತತ್ವಗಳಲ್ಲಿ ಒಂದಾಗಿದೆ. ಇದು ಯಾವುದೇ ಆರಾಧನೆಯ ಸ್ವೀಕಾರವು ಅದರ ಹಿಂದಿರುವ ಸಂಕಲ್ಪದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಂಕಲ್ಪವು ಕೇವಲ ಅಲ್ಲಾಹನ ಸಂತುಷ್ಟಿಗಾಗಿ ಮಾತ್ರವಾಗಿದ್ದರೆ, ಸಣ್ಣ ಕ್ರಿಯೆಯೂ ಸಹ ದೊಡ್ಡ ಪ್ರತಿಫಲಕ್ಕೆ ಕಾರಣವಾಗುತ್ತದೆ. ಆದರೆ, ಅದರೊಂದಿಗೆ ಕಪಟತನ, ತೋರಿಕೆ ಅಥವಾ ಜನರ ಪ್ರಶಂಸೆಯನ್ನು ಪಡೆಯುವ ಬಯಕೆ ಇದ್ದರೆ, ಅದೇ ಕ್ರಿಯೆಯು ತನ್ನ ಆತ್ಮವನ್ನು ಕಳೆದುಕೊಳ್ಳುತ್ತದೆ.

ಬಲಿದಾನದಂತಹ ಮಹಾನ್ ಆರಾಧನೆಯೂ ಸಹ ಇದೇ ತತ್ವಕ್ಕೆ ಒಳಪಟ್ಟಿರುತ್ತದೆ. ಒಬ್ಬ ವ್ಯಕ್ತಿಯು ಕೇವಲ ಒಂದು ಆಚರಣೆಯನ್ನು ಮಾಡಲು, ಜನರ ನಡುವೆ ತನಗೊಂದು ಹೆಸರನ್ನು ಮಾಡಲು ಅಥವಾ ತನ್ನ ಸ್ಥಾನಮಾನವನ್ನು ಪ್ರದರ್ಶಿಸಲು ಬಲಿ ಕೊಟ್ಟರೆ, ಅವನು ಅದರ ನೈಜ ಉದ್ದೇಶವನ್ನು ಕಳೆದುಕೊಳ್ಳುತ್ತಾನೆ. ಅದೇ ಕ್ರಿಯೆಯನ್ನು ಶುದ್ಧ ಸಂಕಲ್ಪದಿಂದ, ಅಲ್ಲಾಹನ ಪ್ರೀತಿಗಾಗಿ ಮತ್ತು ಅವನ ಸಂತುಷ್ಟಿಗಾಗಿ ಮಾಡಿದಾಗ, ಅದು ಇನ್ನು ಮುಂದೆ ಸಾಮಾನ್ಯ ಕ್ರಿಯೆಯಾಗಿ ಉಳಿಯದೆ ಅಲ್ಲಾಹನಿಗೆ ಹತ್ತಿರವಾಗುವ ಸಾಧನವಾಗುತ್ತದೆ.

ಪ್ರಾಮಾಣಿಕತೆಯ ಪ್ರಾಮುಖ್ಯತೆಯನ್ನು ಪವಿತ್ರ ಕುರ್‌ಆನಿನಲ್ಲಿ ಈ ಕೆಳಗಿನಂತೆ ವಿವರಿಸಲಾಗಿದೆ:

“ಅವರಿಗೆ ನೀಡಲಾಗಿದ್ದ ಆದೇಶವು ಅವರು ತಮ್ಮ ಧರ್ಮವನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಏಕ ನಿಷ್ಠೆಯಿಂದ ಅಲ್ಲಾಹನ ದಾಸ್ಯ ಮಾಡಬೇಕು.” (98:5)

ಈ ಸೂಕ್ತವು ಆರಾಧನೆಯ ನಿಜವಾದ ಚೇತನವೇ ಪ್ರಾಮಾಣಿಕತೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರಾಮಾಣಿಕತೆ ಇಲ್ಲದಿದ್ದರೆ, ಆರಾಧನೆಯ ಸಾಂಕೇತಿಕತೆಯು ಉಳಿಯುತ್ತದೆ, ಆದರೆ ಅದರ ಸಾರವು ಮಾಯವಾಗುತ್ತದೆ.

ಈದ್ ಉಲ್ ಅಝ್ಹಾ ನಮ್ಮ ಕ್ರಿಯೆಗಳನ್ನು ಪರೀಕ್ಷಿಸಲು, ನಮ್ಮ ಸಂಕಲ್ಪಗಳನ್ನು ಸರಿಪಡಿಸಿಕೊಳ್ಳಲು ಮತ್ತು ಪ್ರತಿಯೊಂದು ಆರಾಧನೆಯನ್ನು ಕೇವಲ ಅಲ್ಲಾಹನಿಗಾಗಿ ಮಾತ್ರ ನಿರ್ವಹಿಸಲು ನಮಗೆ ಕಲಿಸುತ್ತದೆ. ಮನುಷ್ಯನ ಹೃದಯದಲ್ಲಿ ಪ್ರಾಮಾಣಿಕತೆ ಹುಟ್ಟಿದಾಗ, ಅವನ ಜೀವನದ ಪ್ರತಿಯೊಂದು ಕ್ರಿಯೆಯೂ ಆಶೀರ್ವದಿಸಲ್ಪಡುತ್ತದೆ ಮತ್ತು ಅವನು ಅತ್ಯಂತ ಸಣ್ಣ ಕ್ರಿಯೆಗಳ ಮೂಲಕವೂ ಅಲ್ಲಾಹನಿಗೆ ಹತ್ತಿರವಾಗುತ್ತಾನೆ. ಈ ಪ್ರಾಮಾಣಿಕತೆಯೇ ಬಲಿದಾನವನ್ನು ಕೇವಲ ಆಚರಣೆಯಿಂದ ಜನಪ್ರಿಯ ಆರಾಧನೆಯಾಗಿ ಪರಿವರ್ತಿಸುವ ಚೇತನವಾಗಿದೆ.

ಯುವ ಪೀಳಿಗೆ: ಭರವಸೆಯೇ ಅಥವಾ ಅಪಾಯವೇ?

ಯುವಕರು ಯಾವುದೇ ರಾಷ್ಟ್ರದ ಅತ್ಯಂತ ಅಮೂಲ್ಯವಾದ ಆಸ್ತಿ ಮತ್ತು ಅದರ ಭವಿಷ್ಯದ ನಿಜವಾದ ಅಡಿಪಾಯವಾಗಿದ್ದಾರೆ. ಈ ಯುವಕರು ನಂಬಿಕೆ, ಚಾರಿತ್ರ್ಯ ಮತ್ತು ಉದ್ದೇಶದೊಂದಿಗೆ ಬದುಕಿದರೆ, ರಾಷ್ಟ್ರಗಳು ಉನ್ನತಿಗೆ ಏರುತ್ತವೆ. ಅವರು ನಿರ್ಲಕ್ಷ್ಯ, ದಾರಿ ತಪ್ಪುವಿಕೆ ಮತ್ತು ಆಸೆಗಳ ಗುಲಾಮಗಿರಿಯಲ್ಲಿ ಬಿದ್ದರೆ, ಅದೇ ರಾಷ್ಟ್ರವು ಅವನತಿಯತ್ತ ಸಾಗುತ್ತದೆ. ಆದ್ದರಿಂದ, ಯೌವನವನ್ನು ಜೀವನದ ಕೇವಲ ಒಂದು ಹಂತವೆಂದು ಪರಿಗಣಿಸಬಾರದು, ಅದೊಂದು ನಂಬಿಕೆ (ಅಮಾನತ್) ಮತ್ತು ಜವಾಬ್ದಾರಿಯಾಗಿದೆ.

ಪವಿತ್ರ ಕುರ್‌ಆನ್ ಯುವಕರಿಗೆ ಒಂದು ಆದರ್ಶ ಪಾತ್ರವನ್ನು ವಿವರಿಸುತ್ತಾ ಹೀಗೆ ಹೇಳುತ್ತದೆ:

“ಖಂಡಿತವಾಗಿಯೂ, ಅವರು ತಮ್ಮ ಪ್ರಭುವಿನಲ್ಲಿ ನಂಬಿಕೆ ಇಟ್ಟಿದ್ದ ಯುವಕರಾಗಿದ್ದರು ಮತ್ತು ನಾವು ಅವರಿಗೆ ಸನ್ಮಾರ್ಗದರ್ಶನವನ್ನು ಹೆಚ್ಚಿಸಿದೆವು.” (18:13)

ಈ ಸೂಕ್ತವು ಗುಹಾವಾಸಿಗಳ (ಅಸ್ಹಾಬುಲ್ ಕಹ್ಫ್) ಬಗೆಗಿನದ್ದಾಗಿದೆ. ಅವರು ಬಹುದೇವಾರಾಧನೆ, ದಾರಿ ತಪ್ಪುವಿಕೆ ಮತ್ತು ದಬ್ಬಾಳಿಕೆ ಸಾಮಾನ್ಯವಾಗಿದ್ದ ಸಮಾಜದಲ್ಲಿ ವಾಸಿಸುತ್ತಿದ್ದರು. ತಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರತಿಯೊಂದನ್ನೂ ತ್ಯಾಗ ಮಾಡಿದರು. ಇಲ್ಲಿ “ಫಿತಿಯಃ” (ಯುವಕರು) ಎಂಬ ಉಲ್ಲೇಖವು ಮಾರ್ಗದರ್ಶನ ಮತ್ತು ಸ್ಥಿರತೆಯು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಹೃದಯದ ಪ್ರಾಮಾಣಿಕತೆ ಮತ್ತು ದೃಢ ವಿಶ್ವಾಸಕ್ಕೆ ಸಂಬಂಧಿಸಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲಾಹನು ಅವರ ವಿಶ್ವಾಸವನ್ನು ಶ್ಲಾಘಿಸುತ್ತಾ, ಅವರನ್ನು ಸ್ಥಿರವಾಗಿಟ್ಟಿದ್ದಲ್ಲದೆ ಅವರ ಮಾರ್ಗದರ್ಶನವನ್ನೂ ಹೆಚ್ಚಿಸಿದನು. ಇದು ಅಲ್ಲಾಹನ ಕಡೆಗೆ ಹೆಜ್ಜೆ ಇಡುವ ಯುವಕರಿಗೆ ಅಲ್ಲಾಹನು ಮಾರ್ಗದರ್ಶನದ ಹೆಚ್ಚಿನ ಬಾಗಿಲುಗಳನ್ನು ತೆರೆಯುತ್ತಾನೆ ಎಂಬುದನ್ನು ತೋರಿಸುತ್ತದೆ.

ಪ್ರವಾದಿ(ಸ) ರವರೂ ಸಹ ಯೌವನದ ಮೌಲ್ಯವನ್ನು ವಿವರಿಸುತ್ತಾ ಹೀಗೆ ಹೇಳಿದ್ದಾರೆ:

“ಪುನರುತ್ಥಾನದ ದಿನದಂದು, ಒಬ್ಬ ದಾಸನಿಗೆ ಅವನ ಯೌವನದ ಬಗ್ಗೆ ಮತ್ತು ಅವನು ಅದನ್ನು ಹೇಗೆ ಕಳೆದನು ಎಂಬುದರ ಬಗ್ಗೆ ಕೇಳುವವರೆಗೆ ಅವನ ಹೆಜ್ಜೆಗಳು ಚಲಿಸುವುದಿಲ್ಲ.” (ತಿರ್ಮಿದಿ)

ಈ ವಚನವು ಯೌವನವು ಒಂದು ಅಮೂಲ್ಯವಾದ ನಂಬಿಕೆಯಾಗಿದ್ದು, ಅದಕ್ಕೆ ಲೆಕ್ಕ ಒಪ್ಪಿಸಬೇಕಾಗಿದೆ ಎಂಬುದನ್ನು ಯುವಕರಿಗೆ ಅರಿತುಕೊಳ್ಳುವಂತೆ ಮಾಡುತ್ತದೆ. ಅದನ್ನು ಅಲ್ಲಾಹನ ವಿಧೇಯತೆ, ಜ್ಞಾನವನ್ನು ಗಳಿಸುವುದು ಮತ್ತು ಸತ್ಕರ್ಮಗಳನ್ನು ಮಾಡುವುದರಲ್ಲಿ ಕಳೆದರೆ, ಅದು ಯಶಸ್ಸಿನ ಮೂಲವಾಗುತ್ತದೆ. ನಿರ್ಲಕ್ಷ್ಯ ಹಾಗೂ ಪಾಪಗಳಲ್ಲಿ ವ್ಯರ್ಥ ಮಾಡಿದರೆ, ಅದು ನಷ್ಟಕ್ಕೆ ಕಾರಣವಾಗುತ್ತದೆ.

ಇಂದಿನ ಯುವಕರು ನಿರ್ಣಾಯಕ ಘಟ್ಟದಲ್ಲಿ ನಿಂತಿದ್ದಾರೆ. ಒಂದೆಡೆ ಪ್ರಪಂಚದ ಹೊಳಪು, ಸಾಮಾಜಿಕ ಮಾಧ್ಯಮ, ಫ್ಯಾಷನ್ ಮತ್ತು ಉದ್ದೇಶವಿಲ್ಲದ ಜೀವನದ ಆಕರ್ಷಣೆ ಇದೆ. ಇನ್ನೊಂದೆಡೆ ಧರ್ಮ, ಚಾರಿತ್ರ್ಯ ನಿರ್ಮಾಣ ಮತ್ತು ಉದ್ದೇಶಪೂರ್ವಕ ಜೀವನದ ಹಾದಿ ಇದೆ. ಇಂತಹ ಸಮಯದಲ್ಲಿ ಈದ್ ಉಲ್ ಅಝ್ಹಾ ಯುವಕರಿಗೆ ಪ್ರವಾದಿ ಇಸ್ಮಾಯೀಲ್(ಅ) ಮತ್ತು ಗುಹಾವಾಸಿಗಳನ್ನು ನೆನಪಿಸುತ್ತದೆ. ತಮ್ಮ ಆಸೆಗಳನ್ನು ಅಲ್ಲಾಹನ ಆಜ್ಞೆಗೆ ಅಧೀನಗೊಳಿಸಲು, ದೈವಿಕ ವಿಧೇಯತೆಯ ಚೌಕಟ್ಟಿನಲ್ಲಿ ತಮ್ಮ ಜೀವನವನ್ನು ಅಳವಡಿಸಿಕೊಳ್ಳಲು ಮತ್ತು ಸಹನೆ ಹಾಗೂ ಪರಿಶ್ರಮದಿಂದ ಸತ್ಯದ ಹಾದಿಯಲ್ಲಿ ಸ್ಥಿರವಾಗಿರಲು ನೆನಪಿಸುತ್ತದೆ.

ಯುವಕರು ತಮ್ಮ ಶಕ್ತಿ, ಸಮಯ ಮತ್ತು ಪ್ರತಿಭೆಯನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡಿದರೆ, ಅವರು ತಮ್ಮ ಸ್ವಂತ ಜೀವನವನ್ನು ಸುಧಾರಿಸಿಕೊಳ್ಳುವುದು ಮಾತ್ರವಲ್ಲದೆ ಇಡೀ ರಾಷ್ಟ್ರದ ಹಣೆಬರಹವನ್ನೇ ಬದಲಾಯಿಸಬಹುದು. ಇದಕ್ಕಾಗಿಯೇ ಯುವ ಪೀಳಿಗೆಯು ಒಂದು ಉಜ್ವಲ ಭರವಸೆಯಾಗಬಹುದು ಅಥವಾ ದೊಡ್ಡ ಸಂಕಟವಾಗಬಹುದು. ನಿರ್ಧಾರವು ಅವರದೇ ಆದ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಬಲಿದಾನ: ಒಂದು ಪ್ರಾಯೋಗಿಕ ಕ್ರಾಂತಿ

ಈದ್ ಉಲ್ ಅಝ್ಹಾದ ಬಲಿದಾನವನ್ನು ಅದರ ನೈಜ ಚೇತನದಲ್ಲಿ ಅರ್ಥಮಾಡಿಕೊಂಡರೆ, ಅದು ಕೇವಲ ಒಂದು ಆರಾಧನೆಯಾಗಿ ಉಳಿಯದೆ ಮನುಷ್ಯನ ಇಡೀ ಜೀವನದ ಹಾದಿಯನ್ನೇ ಬದಲಾಯಿಸುವ ಪ್ರಾಯೋಗಿಕ ಕ್ರಾಂತಿಯಾಗುತ್ತದೆ. ಈ ಕ್ರಾಂತಿಯು ಬಾಹ್ಯ ಜಗತ್ತಿಗಿಂತ ಹೆಚ್ಚಾಗಿ ಮನುಷ್ಯನ ಒಳಗಡೆ ಸಂಭವಿಸುತ್ತದೆ. ಆತನು ತನ್ನ ಆಸೆಗಳನ್ನು, ತನ್ನ ಅಹಂಕಾರವನ್ನು ಮತ್ತು ತನ್ನ ಆತ್ಮವನ್ನು ಅಲ್ಲಾಹನ ಆಜ್ಞೆಗೆ ಅಧೀನಗೊಳಿಸುವುದನ್ನು ಕಲಿಯುತ್ತಾನೆ. ಒಬ್ಬ ವ್ಯಕ್ತಿಯು ತನ್ನದೇ ಆದ ಆದ್ಯತೆಗಳನ್ನು, ತನ್ನ ಆಸೆಗಳನ್ನು ಮತ್ತು ತನ್ನ ಅಭ್ಯಾಸಗಳನ್ನು ತ್ಯಜಿಸಿ ಅಲ್ಲಾಹನ ಸಂತುಷ್ಟಿಗೆ ಆದ್ಯತೆ ನೀಡಿದಾಗ, ಅವನು ವಾಸ್ತವವಾಗಿ ತನ್ನ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಸೃಷ್ಟಿಸುತ್ತಿರುತ್ತಾನೆ.

ಪ್ರವಾದಿ(ಸ) ರವರು ನಂಬಿಕೆಯ ಈ ವಾಸ್ತವತೆಯನ್ನು ವಿವರಿಸುತ್ತಾ ಹೀಗೆ ಹೇಳಿದ್ದಾರೆ:

“ನಾನು ತಂದಿರುವ ಧರ್ಮಕ್ಕೆ ನಿಮ್ಮ ಆಸೆಗಳು ಅಧೀನವಾಗುವವರೆಗೆ ನಿಮ್ಮಲ್ಲಿ ಯಾರೂ ನಿಜವಾದ ವಿಶ್ವಾಸಿಯಾಗಲು ಸಾಧ್ಯವಿಲ್ಲ.” (ಶರ್ಹ್ ಸುನ್ನಾ – ಅಲ್-ಬಗವಿ)

ಈ ವಚನವು ಮನುಷ್ಯನು ತನ್ನ ಆಸೆಗಳನ್ನು ಶರಿಯತ್‌ಗೆ ಅಧೀನಗೊಳಿಸಿದಾಗ ವಿಶ್ವಾಸದ ಪರಿಪೂರ್ಣತೆಯನ್ನು ಸಾಧಿಸುತ್ತಾನೆ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಅಂದರೆ, ಅಲ್ಲಾಹನು ಬಯಸುವುದನ್ನು ಆತನೂ ಬಯಸುತ್ತಾನೆ ಮತ್ತು ಅಲ್ಲಾಹನು ನಿಷೇಧಿಸಿದ್ದನ್ನು ಕೈ ಬಿಡುತ್ತಾನೆ. ಅಲ್ಲಾಹನ ಸಂತುಷ್ಟಿಗಾಗಿ ತನ್ನ ಆಸೆಗಳನ್ನು ತ್ಯಾಗ ಮಾಡುವುದು ವಾಸ್ತವವಾಗಿ ತ್ಯಾಗದ ನಿಜವಾದ ಚೇತನವಾಗಿದೆ.

ಈ ಕ್ರಾಂತಿಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಸತ್ಯ, ಪ್ರಾಮಾಣಿಕತೆ, ನ್ಯಾಯ ಮತ್ತು ಧರ್ಮನಿಷ್ಠೆಯನ್ನು ತನ್ನ ಜೀವನದ ಭಾಗವಾಗಿಸಿಕೊಂಡಾಗ, ತನ್ನ ಸುತ್ತಲಿನ ಪರಿಸರದ ಮೇಲೂ ಪ್ರಭಾವ ಬೀರುತ್ತಾನೆ. ನಂತರ ಇದೇ ಬದಲಾವಣೆಯು ಒಂದು ಕುಟುಂಬಕ್ಕೆ, ಸಮಾಜಕ್ಕೆ ಮತ್ತು ಅಂತಿಮವಾಗಿ ಇಡೀ ಉಮ್ಮತ್ತಿಗೆ ಹರಡಬಹುದು.

ನಿಜವಾದ ಬದಲಾವಣೆಯು ಮನುಷ್ಯನ ಒಳಗಿನಿಂದ ಪ್ರಾರಂಭವಾಗುತ್ತದೆ ಮತ್ತು ಹೃದಯವು ಬದಲಾದಾಗ, ಕ್ರಿಯೆಗಳು ಮತ್ತು ಪರಿಸ್ಥಿತಿಗಳೂ ಬದಲಾಗಲು ಪ್ರಾರಂಭಿಸುತ್ತವೆ ಎಂಬ ಇದೇ ತತ್ವವನ್ನು ಪವಿತ್ರ ಕುರ್‌ಆನ್ ಸಹ ವ್ಯಕ್ತಪಡಿಸುತ್ತದೆ. ಬಲಿದಾನವು ಈ ಆಂತರಿಕ ಬದಲಾವಣೆಯ ಪ್ರಾಯೋಗಿಕ ಅಭಿವ್ಯಕ್ತಿಯಾಗಿದೆ. ಇದು ಎಲ್ಲಾ ಸಂದರ್ಭಗಳಲ್ಲೂ ಅಲ್ಲಾಹನ ಆಜ್ಞೆಯನ್ನು ತನ್ನ ಆಸೆಗಳಿಗಿಂತ ಮುಂಚೂಣಿಯಲ್ಲಿಡಲು ಮನುಷ್ಯನಿಗೆ ಕಲಿಸುತ್ತದೆ.

ಇಂದಿನ ಯುಗದಲ್ಲಿ, ಮನುಷ್ಯನು ತನ್ನ ಆಸೆಗಳಿಗೆ ಗುಲಾಮನಾಗಿರುವಾಗ, ಈದ್ ಉಲ್ ಅಝ್ಹಾ ನಮಗೆ ಈ ಗುಲಾಮಗಿರಿಯಿಂದ ಮುಕ್ತಿಯ ಹಾದಿಯನ್ನು ತೋರಿಸುತ್ತದೆ. ಇದು ನಮ್ಮ ಆತ್ಮಗಳನ್ನು ನಿಯಂತ್ರಿಸಲು, ನಮ್ಮ ಜೀವನವನ್ನು ಶರಿಯತ್‌ಗೆ ಅಳವಡಿಸಿಕೊಳ್ಳಲು ಮತ್ತು ನಮ್ಮನ್ನು ಅಲ್ಲಾಹನಿಗೆ ಹತ್ತಿರವಾಗಿಸುವ ಕ್ರಾಂತಿಯನ್ನು ತರಲು ನಮಗೆ ಆಹ್ವಾನ ನೀಡುತ್ತದೆ.

ಹೀಗೆ, ಬಲಿದಾನವು ಕೇವಲ ಒಂದು ದಿನದ ಪ್ರಕ್ರಿಯೆಯಲ್ಲ. ಅದೊಂದು ನಿರಂತರ ಹೋರಾಟವಾಗಿದೆ. ಮನುಷ್ಯನನ್ನು ಬದಲಾಯಿಸುವ ಹೋರಾಟ, ಮತ್ತು ಈ ಬದಲಾವಣೆಯ ಮೂಲಕ ಸಮಾಜವೂ ನಿಜವಾದ ಕ್ರಾಂತಿಯತ್ತ ಸಾಗುತ್ತದೆ.

ಈದ್ ಉಲ್ ಅಝ್ಹಾ: ಒಂದು ಭರವಸೆ, ಒಂದು ನಿರ್ಧಾರ

ಈದ್ ಉಲ್ ಅಝ್ಹಾದ ಸಂದೇಶವು ಕೇವಲ ಹಬ್ಬವನ್ನು ಆಚರಿಸುವುದಕ್ಕಿಂತ ಹೆಚ್ಚಾಗಿ ನಾವು ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಹಂತಕ್ಕೆ ನಮ್ಮನ್ನು ತರುತ್ತದೆ. ಈ ದಿನವು ನಾವು ಕೇವಲ ಒಂದು ಆಚರಣೆಯನ್ನು ಮಾಡಿ ಮುಗಿಸುತ್ತೇವೆಯೇ ಅಥವಾ ಈ ಮಹಾನ್ ಆರಾಧನೆಯು ನಮ್ಮನ್ನು ಆಹ್ವಾನಿಸುವ ಬದಲಾವಣೆಯನ್ನು ನಮ್ಮ ಜೀವನದಲ್ಲಿ ನಿಜವಾಗಿಯೂ ತರುತ್ತೇವೆಯೇ ಎಂಬ ಬಗ್ಗೆ ಯೋಚಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ವಾಸ್ತವವಾಗಿ, ಬಲಿದಾನದ ಅವಶ್ಯಕತೆಯೇನೆಂದರೆ ಮನುಷ್ಯನು ತನ್ನ ಆಲೋಚನೆಗಳು, ಆಸೆಗಳು, ಕ್ರಿಯೆಗಳು, ಜೀವನದ ಪ್ರತಿಯೊಂದು ಮಗ್ಗುಲುಗಳನ್ನು ಹಾಗೂ ಇಡೀ ಅಸ್ತಿತ್ವವನ್ನೇ ಅಲ್ಲಾಹನಿಗೆ ಒಪ್ಪಿಸುವುದಾಗಿದೆ. 

ಅಲ್ಲಾಹನು ಈ ಸಂಪೂರ್ಣ ಶರಣಾಗತಿಯನ್ನು ಈ ಕೆಳಗಿನಂತೆ ವಿವರಿಸುತ್ತಾನೆ:

“ಹೇಳಿರಿ, ಖಂಡಿತವಾಗಿಯೂ ನನ್ನ ನಮಾಝ್‌, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಜಗತ್ತಿನ ಪ್ರಭುವಾದ ಅಲ್ಲಾಹನಿಗಾಗಿಯೇ ಆಗಿದೆ.'” (6:162)

ಈ ಸೂಕ್ತವು ದಾಸ್ಯತನ ಉತ್ತುಂಗ ಸ್ಥಿತಿಯನ್ನು ತೋರಿಸುತ್ತದೆ. ಕೇವಲ ಆರಾಧನೆಯ ಉಲ್ಲೇಖವಿಲ್ಲ, ಬದಲಿಗೆ ಒಬ್ಬನ ಇಡೀ ಜೀವನವನ್ನು ಮತ್ತು ಮರಣವನ್ನೂ ಸಹ ಅಲ್ಲಾಹನಿಗೆ ಮುಡಿಪಾಗಿಡುವ ಘೋಷಣೆಯಿದೆ. “ನುಸುಕಿ” (ಬಲಿದಾನ) ಎಂಬ ಉಲ್ಲೇಖವು ಬಲಿದಾನವು ಕೇವಲ ಒಂದು ಕ್ರಿಯೆಯಲ್ಲ, ಅದೊಂದು ಸಂಕೇತ ಎಂಬುದನ್ನು ಸ್ಪಷ್ಟಪಡಿಸುತ್ತದೆ. ದಾಸನು ಅಲ್ಲಾಹನಿಗಾಗಿ ಎಲ್ಲವನ್ನೂ ಬಿಡಲು ಮತ್ತು ಅಳವಡಿಸಿಕೊಳ್ಳಲು ಸಿದ್ಧನಾಗಿದ್ದಾನೆ ಎಂಬ ಸಂಕೇತ.

ಪ್ರವಾದಿ ಮುಹಮ್ಮದ್(ಸ) ರವರ ಇಡೀ ಜೀವನವು ಈ ಸೂಕ್ತದ ಪ್ರಾಯೋಗಿಕ ವ್ಯಾಖ್ಯಾನವಾಗಿತ್ತು. ಅಲ್ಲಿ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ನಿರ್ಧಾರ ಮತ್ತು ಪ್ರತಿಯೊಂದು ಕ್ರಿಯೆಯೂ ಅಲ್ಲಾಹನ ಸಂತುಷ್ಟಿಗಾಗಿಯೇ ಇತ್ತು. ಈದ್ ಉಲ್ ಅಝ್ಹಾ ನಾವು ಅಳವಡಿಸಿಕೊಳ್ಳಲು ಆಹ್ವಾನಿಸುವ ಮಾನದಂಡ ಇದೇ ಆಗಿದೆ.

ಆದ್ದರಿಂದ ಈ ಈದ್ ನಮ್ಮನ್ನು ಒಂದು ಬದ್ಧತೆಗೆ ಕರೆಯುತ್ತದೆ. ನಮ್ಮ ಜೀವನವನ್ನು ಅಲ್ಲಾಹನಿಗೆ ಒಪ್ಪಿಸಲು, ನಮ್ಮ ಆಸೆಗಳನ್ನು ಅವನ ಆಜ್ಞೆಗೆ ಒಪ್ಪಿಸಲು ಮತ್ತು ನಮ್ಮ ಪ್ರತಿಯೊಂದು ಪ್ರಯತ್ನವನ್ನು ಅವನ ಸಂತುಷ್ಟಿಗಾಗಿ ಮುಡಿಪಾಗಿಡಲು ನಾವು ನಿರ್ಧರಿಸುವ ಬದ್ಧತೆ. ಈ ನಿರ್ಧಾರವು ಕೇವಲ ಒಂದು ದಿನಕ್ಕಾಗಿ ಇರಬಾರದು, ಬದಲಿಗೆ ನಮ್ಮ ಇಡೀ ಜೀವನಕ್ಕಾಗಿ ಇರಬೇಕು.

ತನ್ನಲ್ಲಿರುವ ಪ್ರತಿಯೊಂದೂ ಅಲ್ಲಾಹನಿಗಾಗಿ ಎಂಬ ಅರಿವಿನೊಂದಿಗೆ ಮನುಷ್ಯನು ಬದುಕಲು ಪ್ರಾರಂಭಿಸಿದಾಗ, ಅವನ ಜೀವನದಲ್ಲಿ ನಿಜವಾದ ಕ್ರಾಂತಿ ಸಂಭವಿಸುತ್ತದೆ. ಆರಾಧನೆಯು ಆಧ್ಯಾತ್ಮಿಕವಾಗುತ್ತದೆ, ವ್ಯವಹಾರಗಳು ಪ್ರಾಮಾಣಿಕವಾಗುತ್ತವೆ ಮತ್ತು ಚಾರಿತ್ರ್ಯವು ಸತ್ಯ ಹಾಗೂ ಸ್ಥಿರವಾಗುತ್ತದೆ.

ಹೀಗೆ, ಈದ್ ಉಲ್ ಅಝ್ಹಾದ ನಿಜವಾದ ಸಂದೇಶವೆಂದರೆ ನಾವು ಕೇವಲ ಪ್ರಾಣಿಗಳನ್ನು ಬಲಿ ಕೊಡಬಾರದು, ಬದಲಿಗೆ ನಮ್ಮ ಜೀವನವನ್ನೂ ಅಲ್ಲಾಹನಿಗೆ ಮುಡಿಪಾಗಿಡಬೇಕು. ಇದರಲ್ಲಿ ನಮ್ಮ ಯಶಸ್ಸಿದೆ, ಇದರಲ್ಲಿ ನಮ್ಮ ಮೋಕ್ಷವಿದೆ ಮತ್ತು ಇದು ನಮ್ಮನ್ನು ಇಹಲೋಕ ಮತ್ತು ಪರಲೋಕದಲ್ಲಿ ಯಶಸ್ವಿಯಾಗಿಸಬಲ್ಲ ನಿರ್ಧಾರವಾಗಿದೆ.

ಕೃಪೆ: ಝಿಂದಗೀ ನೌ

ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು

Leave a Reply