ಪರಸ್ಪರ ಸಂಬಂಧ ಬೆಳೆಸುವಲ್ಲಿ ಕುರ್ಆನಿನ ಪಾತ್ರ
ಲೇಖಕರು: ಡಾ. ಅಬ್ದುಲ್ ಹಫೀದ್ ನದ್ವಿ
ಪ್ರೀತಿ, ಸ್ನೇಹ, ಸಂಬಂಧಗಳು ಮಾನವನ ಬದುಕಿನ ಅತ್ಯಂತ ಸುಂದರ ಮತ್ತು ಆಳವಾದ ಅನುಭವಗಳಾಗಿವೆ. ಜನರ ನಡುವಿನ ಈ ಪರಸ್ಪರ ಆತ್ಮೀಯತೆ ಮತ್ತು ಒಡನಾಟವು ವಿಶ್ವದ ಒಡೆಯನಾದ ಅಲ್ಲಾಹನು ಮನುಷ್ಯನಿಗೆ ನೀಡಿರುವ ಮಹತ್ತರವಾದ ಅನುಗ್ರಹಗಳಲ್ಲಿ ಒಂದಾಗಿದೆ. “ಅಂಟಿಕೊಳ್ಳುವಿಕೆ” ಎಂಬುದು ಅಲಕ್ ಎಂಬ ಪದದಿಂದಲೇ ಅಲಕತ್ (ರಿಲೇಶನ್) ಎಂಬ ಪದವೂ ಹುಟ್ಟಿಕೊಂಡಿದೆ. ಆದರೆ ಈ ಆತ್ಮೀಯ ಮತ್ತು ಗಾಢವಾದ ಸಂಬಂಧಗಳ ಕುರಿತು ಮೂಲಭೂತವಾದ ದೃಷ್ಟಿಕೋನಗಳಲ್ಲಿ ಇಂದು ಬಹಳಷ್ಟು ವ್ಯತ್ಯಯ ಉಂಟಾಗುತ್ತಿವೆ. ಸಂಬಂಧಗಳು ಎಂಬುದು ಸಂತೋಷ ಮತ್ತು ಶಾಂತಿಯ ಮೂಲವಾಗಬೇಕಿರುವ ಕಡೆಯಲ್ಲಿ ಮಾನಸಿಕ ಸಂಘರ್ಷ ಮತ್ತು ಮಾನಸಿಕ ಯಾತನೆಯ ಅನುಭವಗಳಾಗಿ ಮಾರ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಪವಿತ್ರ ಕುರ್ಆನ್ ಮುಂದಿಡುವಂತಹ ಉದಾತ್ತ ದೃಷ್ಟಿಕೋನಗಳನ್ನು ಮತ್ತು ಪ್ರವಾದಿ ವಚನಗಳಲ್ಲಿ ವ್ಯಕ್ತವಾಗಿರುವ ಸುಂದರ ಮಾನವೀಯ ಭಾವನೆಗಳನ್ನು ಆಧಾರವಾಗಿಟ್ಟುಕೊಂಡು ಪ್ರೀತಿ ಸಂಬಂಧಗಳ ಆಧ್ಯಾತ್ಮಿಕ ಮತ್ತು ಮಾನವೀಯ ಆಯಾಮಗಳನ್ನು ಪರಿಶೀಲಿಸುವ ಅಗತ್ಯವಿದೆ.
ಪ್ರೀತಿ ಮತ್ತು ಕರುಣೆಯು ಮಾನವನ ಸಾಮಾಜಿಕ ಬದುಕಿನ ತಳಹದಿಯಾಗಿದೆ. ಸಂಬಂಧಗಳು ಆಕಸ್ಮಿಕವಾಗಿ ಬರುವಂತಹದ್ದಲ್ಲ. ಅವೆಲ್ಲವೂ ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹನ ನಿರ್ಣಯದ ಭಾಗವಾಗಿದೆ. ಅಲ್ಲಾಹನು ಕುರ್ಆನಿನಲ್ಲಿ ಸ್ಪಷ್ಟಪಡಿಸಿದಂತೆ, “ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ”(30:21). ಇದು ಸಂಬಂಧಗಳ ಮೂಲ ಉದ್ದೇಶವಾಗಿದೆ.
ಪರಸ್ಪರರನ್ನು ಸೋಲಿಸುವುದಕ್ಕಾಗಲೀ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇತರರನ್ನು ಶೋಷಿಸುವುದಕ್ಕಾಗಲೀ ಮನುಷ್ಯನನ್ನು ಸೃಷ್ಟಿಸಲಾಗಿಲ್ಲ. ಸಂಬಂಧಗಳು ಹೃದಯಗಳಿಗೆ ಸಾಂತ್ವನ, ನೆಮ್ಮದಿ ನೀಡಬೇಕೇ ಹೊರತು ನರಕ ಯಾತನೆ ಹಿಂಸೆ ನೀಡುವಂತಾಗಬಾರದು. ಈ ಅರಿವಿನ ಕೊರತೆಯಿಂದ ಮನುಷ್ಯನು ಕುಸಿದು ಹೋಗುತ್ತಾನೆ.
ಮಾನವ ಸಂಬಂಧಗಳ ಅತ್ಯಂತ ಸುಂದರ ಹೃದಯಸ್ಪರ್ಶಿಯಾದ, ವೈವಿಧ್ಯಮಯ ಚಿತ್ರಣಗಳನ್ನು ನೀಡುತ್ತದೆ. ಅದರಲ್ಲಿ ಪರಸ್ಪರ ಸಹಕಾರ ಮತ್ತು ಸಾಂತ್ವನ ಮುಖ್ಯವಾಗಿರುತ್ತದೆ. ಪ್ರವಾದಿ ಮೂಸಾ(ಅ)ರವರು ತನಗೆ ಮಹತ್ತರವಾದ ಜವಾಬ್ದಾರಿಯನ್ನು ನೀಡುವ ಕುರಿತು ಚಿಂತಿಸಿದಾಗ ಅಲ್ಲಾಹನಲ್ಲಿ ತನ್ನೊಡನೆ ತನ್ನ ಸಹೋದರ ಹಾರೂನ್(ಅ)ರನ್ನು ಕಳುಹಿಸಿಕೊಡುವಂತೆ ಪ್ರಾರ್ಥಿಸುತ್ತಾರೆ. ಅಲ್ಲಾಹನು ಅದನ್ನು ಮಾನ್ಯ ಮಾಡುತ್ತಾನೆ.
“ನಿಮ್ಮ ಸಹೋದರನ ಮೂಲಕ ನಾವು ಬೆಂಬಲ ನೀಡುವೆವು. ಮತ್ತು ಅವರು ನಿಮಗೇನೂ ಹಾನಿ ಮಾಡಲಾಗದಂತಹ ವರ್ಚಸ್ಸನ್ನು ನಿಮಗಿಬ್ಬರಿಗೂ ದಯಪಾಲಿಸುವೆವು” (ಅಲ್ ಕಸಸ್: 35)
ಜೀವನದ ಪಯಣದಲ್ಲಿ ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಸಂಕಷ್ಟದ ಸಂದರ್ಭದಲ್ಲಿ ನಮಗೆ ಸಹಾಯಕವಾಗಲು ಸಮಾನ ಮನಸ್ಕರಾದ ಸ್ನೇಹಿತರು ಮತ್ತು ಪ್ರೀತಿ ಪಾತ್ರರು ಜೊತೆಯಾಗುವುದು ಒಂದು ದೊಡ್ಡ ಅನುಗ್ರಹ ಮತ್ತು ಸೌಭಾಗ್ಯವಾಗಿದೆ. ಸಂಬಂಧಗಳು ಓರ್ವನ ಭಾರವನ್ನು ಕಡಿಮೆಗೊಳಿಸುವಂತಿರಬೇಕು. ಸಂಬಂಧಗಳು ಓರ್ವನನ್ನು ಮತ್ತಷ್ಟು ದುರ್ಬಲಗೊಳಿಸುವಂತಿರಬಾರದು.
ಪ್ರವಾದಿ ಯೂಸುಫ್(ಅ) ರವರು ತಮ್ಮ ಸಹೋದರ ಬಿನ್ ಯಾಮೀನ್ಗೆ ವಾಸ್ತವ ವಿಚಾರವನ್ನು ಮನದಟ್ಟು ಮಾಡಿದ ಸಂದರ್ಭದಲ್ಲಿ ನೀಡಿದ ಸಾಂತ್ವನದ ಮಾತುಗಳ ಕುರಿತು ಪವಿತ್ರ ಕುರ್ಆನಿನಲ್ಲಿ ಹೀಗೆ ಹೇಳಲಾಗಿದೆ. “(ಕಾಣೆಯಾಗಿದ್ದ) ನಿನ್ನ ಆ ಸಹೋದರನೇ ನಾನು, ಇನ್ನು ನೀನು ಇವರು ವರ್ತಿಸುತ್ತಿದ್ದುದರ ಬಗ್ಗೆ ಚಿಂತಿಸಬೇಡ” ಎಂದರು (ಯೂಸುಫ್: 69). ಬದುಕಿನ ಅತ್ಯಂತ ಸಂಧಿಗ್ದ ಪರಿಸ್ಥಿತಿಯಲ್ಲಿ “ನೀನು ದುಃಖಿಸಬೇಡ, ಆತಂಕಿತನಾಗಬೇಡ ನಿನ್ನೊಂದಿಗೆ ನಾನಿದ್ದೇನೆ” ಎಂದು ಸಾಂತ್ವನದ ಮಾತನ್ನಾಡುವುದು ಹೃದಯಕ್ಕೆ ನೆಮ್ಮದಿ ಶಾಂತಿಯ ತಣ್ಣೀರು ಹರಿಸುತ್ತದೆ. ನಿಜವಾದ ಸಂಬಂಧಿಗಳು ಯಾರೆಂದರೆ ನೋವುಗಳನ್ನು ಹಂಚಿಕೊಳ್ಳಲು ಮತ್ತು ಕಣ್ಣೀರನ್ನು ಒರೆಸಲು ಜೊತೆಯಾಗಿರುವವರಾಗಿದ್ದಾರೆ. ಪ್ರೇಮ ಮತ್ತು ಅನುಕಂಪದ ತಳಹದಿಯ ಕುರಿತು ಸೂರ ರ್ರೂಮ್ನಲ್ಲಿ ದಾಂಪತ್ಯ ಮತ್ತು ಸಾಮಾಜಿಕ ಸಂಬಂಧಗಳ ಪರಮ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಅದರಲ್ಲಿ ನಿಮ್ಮ ನಡುವೆ ಪ್ರೇಮ ಮತ್ತು ಅನುರಾಗವನ್ನುಂಟು ಮಾಡಿದನು ಎಂದು ಹೇಳಲಾಗಿದೆ.
ಪ್ರೇಮ, ಪ್ರೀತಿ, ಅನುರಾಗ, ಸ್ನೇಹ ಕರುಣೆ ಇಲ್ಲದ ಯಾವುದೇ ಸಂಬಂಧಗಳು ಹೆಚ್ಚು ದೀರ್ಘಕಾಲ ಉಳಿಯದು. ಪರಸ್ಪರ ಕೇಡುಂಟು ಮಾಡಲು ದಬ್ಬಾಳಿಕೆ ನಡೆಸಲು ಭಾವನೆಗಳನ್ನು ನೀಡಲಾಗಿಲ್ಲ.
ಪ್ರೀತಿ ಎಂದರೆ ಓರ್ವನನ್ನು ಬಂಧಿಯಾಗಿ ಮಾಡಲಿಕ್ಕಿರುವಂತಹದ್ದಲ್ಲ. ಆತನ ಹೃದಯದ ಭಾವನೆಯನ್ನು ಸುಡಲಿಕ್ಕಿರುವಂತಹದ್ದೂ ಅಲ್ಲ. ಅದು ಮಾನವನಿಗೆ ನೆಮ್ಮದಿ, ಸ್ವಾತಂತ್ರ್ಯ ನೀಡುವಂತಿರಬೇಕು. ಅನಗತ್ಯ ಹೊರೆಗಳು ಮತ್ತು ತಪ್ಪಾದ ನಿರೀಕ್ಷೆಗಳನ್ನು ಹೊತ್ತುಕೊಂಡು ಜೀವನವನ್ನು ವ್ಯರ್ಥಗೊಳಿಸುವ ಸ್ಥಿತಿಯಿಂದ ಮುಕ್ತವಾಗಬೇಕಾದ ಅಗತ್ಯವಿದೆ. ಸಂಬಂಧಗಳನ್ನು ಸುಂದರವಾಗಿ ಉಳಿಸಲು ಕೆಲವು ಮೂಲಭೂತ ತತ್ವಗಳನ್ನು ಪಾಲಿಸಬೇಕು. ಇತರರ ವ್ಯಕ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದು ಸಂಬಂಧಗಳ ಮೊದಲ ಹೆಜ್ಜೆಯಾಗಿದೆ. ಯಾವುದೇ ಸಂಬಂಧದಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಪರಸ್ಪರ ಕ್ಷಮಿಸುವ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವವು ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ತಪ್ಪುತಿಳುವಳಿಕೆಗಳನ್ನು ಬೆಳೆಸಲು ಅವಕಾಶ ನೀಡದೆ ವಿಷಯಗಳನ್ನು ಮುಕ್ತವಾಗಿ ಮಾತನಾಡುವುದು ಹೃದಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇತರರಿಗೆ ಆಸರೆ ಅಥವಾ ನೆಮ್ಮದಿಯಾಗಲು ಸಾಧ್ಯವಾಗದಿದ್ದರೂ ಕನಿಷ್ಟಪಕ್ಷ ಅವರಿಗೆ ಹೊರೆಯಾಗದೆ ನೋವು ಯಾತನೆಯುಂಟು ಮಾಡದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದುದು.
ಎಲ್ಲಾ ಸಂಬಂಧಗಳೂ ಶಾಂತಿ ಮತ್ತು ಕರುಣೆಗಾಗಿ ಸ್ಥಾಪಿತವಾದದ್ದಾಗಿದೆ ಎಂಬ ವಾಸ್ತವವನ್ನು ನಾವು ಅರಿತುಕೊಳ್ಳಬೇಕು. ಪರಸ್ಪರ ಪ್ರೀತಿಸಿ, ಆಸರೆಯಾಗಿ ಮತ್ತು ಪರಸ್ಪರರ ಬದುಕಿನಲ್ಲಿ ಬೆಳಕಾಗಲು ಅಲ್ಲಾಹನು ನಮ್ಮನ್ನು ಈ ಭೂಮಿಗೆ ಕಳುಹಿಸಿರುತ್ತಾನೆ.
ಕಣ್ಣೀರು ಮತ್ತು ನೋವಿನಲ್ಲಿ ಬದುಕನ್ನು ಸುಟ್ಟು ಕರಕಲಾಗಿಸಲು ಮನುಷ್ಯನು ಜನ್ಮ ತಳೆದಿಲ್ಲ. ಕುರ್ಆನ್ ಕಲಿಸಿಕೊಟ್ಟ ಆಧ್ಯಾತ್ಮಿಕ ಪಾವಿತ್ರ್ಯ ಮತ್ತು ಪರಸ್ಪರ ಪ್ರೀತಿಯೊಂದಿಗೆ ನಮ್ಮ ಸಂಬಂಧಗಳನ್ನು ಮರು ಪರಿಶೀಲಿಸೋಣ. ಅವುಗಳನ್ನು ಹೃದಯಗಳಿಗೆ ಆಸರೆ ಮತ್ತು ಸಾಂತ್ವನ ನೀಡುವಂತೆ ರೂಪಿಸೋಣ. ಪರಸ್ಪರ ಪ್ರೀತಿ ಸ್ನೇಹವಿಶ್ವಾಸದಿಂದ ಕೂಡಿದ ಬದುಕು ಒಂದು ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹತ್ತರದ ಪಾತ್ರವಹಿಸಬಹುದು. ಬದುಕಿನ ಹಾದಿಯಲ್ಲಿ ನಾವು ದಣಿದು ಸಂಚರಿಸುತ್ತಿರುವಾಗ ಪರಸ್ಪರರಿಗೆ ಸಹಾಯಕವಾಗಲು ಆಸರೆಯಾಗಲು, ನೆಮ್ಮದಿ ನೀಡಲು ನಮ್ಮಿಂದ ಸಾಧ್ಯವಾಗಬೇಕು. ಸಂಬಂಧಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಮುನ್ನಡೆಸುವ ಜೀವನವೇ ನಿಜವಾದ ಅರ್ಥದಲ್ಲಿ ಯಶಸ್ವಿ ಜೀವನವಾಗಿರುತ್ತದೆ. ಅಂತಹ ಜೀವನ ಸಾಗಿಸಲು ಮತ್ತು ನೈಜ ಪ್ರೀತಿಯ ಬೆಳಕನ್ನು ನಮ್ಮ ಸುತ್ತಮುತ್ತಲ ಜನರಿಗೆ ಹಂಚಲು ಈ ಚಿಂತನೆಗಳು ನಮಗೆ ಪ್ರಚೋದಕವಾಗಬೇಕು.
ಕನ್ನಡಾನುವಾದ: ಅಬೂ ಸಲಾಹುದ್ದೀನ್