ಕುರ್‌ಆನಿನ ಶಿಕ್ಷಣದಲ್ಲಿ ಸ್ವಾತಂತ್ರ್ಯ

0
Folio_Blue_Quran_Met_2004.88

ಲೇಖಕರು: ಡಾ. ತನ್ವೀರ್‌ ಹುಸೇನ್‌

ಮನುಷ್ಯರು ತನ್ನ ಇಚ್ಛೆಯಂತೆ ವರ್ತಿಸಬಹುದಾದ ಮತ್ತು ತನ್ನ ಪ್ರವೃತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸ್ಥಿತಿಯನ್ನು ಸ್ವಾತಂತ್ರ್ಯ ಎಂದು ಗುರುತಿಸಲಾಗುತ್ತದೆ. ಜಾನ್ ಸ್ಟುವರ್ಟ್ ಮಿಲ್ ಸ್ವಾತಂತ್ರ್ಯವನ್ನು ಎರಡು ರೀತಿಯಲ್ಲಿ ಪ್ರತ್ಯೇಕಿಸಿದ್ದಾರೆ: (1) ಬಾಹ್ಯ ಒತ್ತಡದ ಅನುಪಸ್ಥಿತಿ (2) ಕಾರ್ಯನಿರ್ವಹಿಸುವ ಸ್ವಾತಂತ್ರ್ಯ. ಯೆಶಾಯ ಬರ್ಲಿನ್ ಕೂಡ ಸ್ವಾತಂತ್ರ್ಯವನ್ನು ಎರಡು ರೀತಿಯಾಗಿ ಪ್ರತ್ಯೇಕಿಸಿದ್ದಾರೆ. (1) ನಕಾರಾತ್ಮಕ ಸ್ವಾತಂತ್ರ್ಯ – ಇದು ಒಬ್ಬರ ಕ್ರಿಯೆಗೆ ಬಾಹ್ಯ ನಿರ್ಬಂಧಗಳ ಅನುಪಸ್ಥಿತಿ, (2) ಕಾರ್ಯನಿರ್ವಹಿಸಲು ಸಾಧನಗಳು ಮತ್ತು ಅವಕಾಶಗಳ ಉಪಸ್ಥಿತಿ. ಈ ವಿಂಗಡಣೆಯನ್ನು ಬರ್ಲಿನ್‌ ಒಂದು ಹೇಳಿಕೆಯ ಮೂಲಕ ವಿವರಿಸುತ್ತಾರೆ. ಬರ್ಲಿನ್‌ ಪ್ರಕಾರ “ನಾನು ಯಾವುದೇ ಮನುಷ್ಯನ ಗುಲಾಮನಲ್ಲ” ಎಂಬ ಹೇಳಿಕೆ… ಅಂದರೆ, ಇನ್ನೊಬ್ಬ ವ್ಯಕ್ತಿಯ ನೇರ ಹಸ್ತಕ್ಷೇಪದಿಂದ ಸ್ವಾತಂತ್ರ್ಯ ಅನ್ನುವುದು ನಕಾರಾತ್ಮಕ ಸ್ವಾತಂತ್ರ್ಯವಾಗಿದೆ. “ನಾನು ನನ್ನ ಸ್ವಂತ ಯಜಮಾನ” ಅನ್ನುವುದು ಸಕಾರಾತ್ಮಕ ಸ್ವಾತಂತ್ರ್ಯ… ಅಂದರೆ ಜೀವನದಲ್ಲಿ ಒಬ್ಬರ ಸ್ವಂತ ಅನ್ವೇಷಣೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಾಗಿ ವ್ಯತಿರಿಕ್ತಗೊಳಿಸಿದ್ದಾರೆ. ನಕಾರಾತ್ಮಕ ಸ್ವಾತಂತ್ರ್ಯವು, ಯಾರಿಂದ ಸ್ವಾತಂತ್ರ್ಯ ಅನ್ನುವುದನ್ನು ಸೂಚಿಸಿದರೆ, ಸಕಾರಾತ್ಮಕ ಸ್ವಾತಂತ್ರ್ಯವು ಯಾರಿಗೆ ಸ್ವಾತಂತ್ರ್ಯ ಅನ್ನುವುದನ್ನು ಸೂಚಿಸುತ್ತದೆ. ಚಾರ್ಲ್ಸ್ ಟೇಲರ್‌ನು ನಕಾರಾತ್ಮಕ ಸ್ವಾತಂತ್ರ್ಯವನ್ನು ‘ಬಾಹ್ಯ ನಿರ್ಬಂಧಗಳಿಂದ ಸ್ವಾತಂತ್ರ್ಯ’ ಮತ್ತು ಸಕಾರಾತ್ಮಕ ಸ್ವಾತಂತ್ರ್ಯವನ್ನು ‘ಆಂತರಿಕ ನಿರ್ಬಂಧ(ಭಯ, ಅಜ್ಞಾನ, ದೌರ್ಬಲ್ಯ, ಇತ್ಯಾದಿ) ಗಳಿಂದ ಸ್ವಾತಂತ್ರ್ಯʼ ಎಂದು ಪ್ರತ್ಯೇಕಿಸಿದ್ದಾನೆ.

ಪವಿತ್ರ ಕುರ್‌ಆನ್ ಸ್ಪಷ್ಟವಾಗಿ, “ದೀನ್‌ನ (ಒಂದು ನಿರ್ದಿಷ್ಟ ಜೀವನ ವಿಧಾನ ಅಥವಾ ನಂಬಿಕೆಗಳು ಮತ್ತು ಕಾರ್ಯಗಳ ವ್ಯವಸ್ಥೆಯನ್ನು ಆರಿಸಿಕೊಳ್ಳುವುದರಲ್ಲಿ) ವಿಷಯದಲ್ಲಿ ಯಾವುದೇ ಬಲವಂತ ಅಥವಾ ಒತ್ತಾಯವಿಲ್ಲ”(2:256) ಎಂದು ಹೇಳುತ್ತದೆ. ಆಯ್ಕೆಯ ಸ್ವಾತಂತ್ರ್ಯವು ಪ್ರತಿಯೊಬ್ಬ ಮನುಷ್ಯನ ಜನ್ಮಸಿದ್ಧ ಹಕ್ಕಾಗಿದೆ. ಅಲ್ಲಾಹನು ಕುರ್‌ಆನಿನಲ್ಲಿ ಹೇಳುತ್ತಾನೆ: “ಅವನು (ಮನುಷ್ಯರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡದೆ) ಇಚ್ಛಿಸಿದ್ದರೆ, ಪ್ರತಿಯೊಬ್ಬ ಮನುಷ್ಯನನ್ನೂ ವಿಶ್ವಾಸಿಯಾಗಿಯೇ ಮಾಡುತ್ತಿದ್ದನು; ಹಾಗಾದರೆ (ಓ ಮುಹಮ್ಮದ್) ಜನರು ವಿಶ್ವಾಸಿಯಾಗುವವರೆಗೆ ನೀವು ಅವರನ್ನು ಒತ್ತಾಯಿಸುತ್ತೀರಾ?”(10:109), ಅಲ್ಲಾಹನ ಸಂದೇಶವಾಹಕರ(ಸ) ಅತ್ಯಂತ ಮಹತ್ವದ ಕಾರ್ಯಗಳಲ್ಲಿ ಜನರನ್ನು ಅವರ ಹೊರೆಗಳು ಮತ್ತು ಅಧೀನತೆಯ ಸಂಕೋಲೆಗಳಿಂದ ಮುಕ್ತಗೊಳಿಸುವುದು ಒಂದಾಗಿತ್ತು. (7:157)

ಕುರ್‌ಆನಿನ ಪ್ರಕಾರ ಯಾವುದೇ ನಿರ್ದಿಷ್ಟ ಜೀವನ ವಿಧಾನದಲ್ಲಿ ವಿಶ್ವಾಸ ಇರಿಸುವ ಮತ್ತು ಇಡದಿರುವ ಆಯ್ಕೆಯ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಗೂ ಸಂಪೂರ್ಣ ಇರುವುದು. ಕುರ್‌ಆನ್‌ ಹೇಳುತ್ತದೆ: “ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿದ್ದವರು ನಿರಾಕರಿಸಲಿ”(18:110). “ನೀವು ಆತನ ಹೊರತು ಯಾರೆಲ್ಲರ ದಾಸ್ಯ-ಆರಾಧನೆ ಮಾಡಲಿಚ್ಛಿಸುತ್ತೀರೋ ಮಾಡುತ್ತಲಿರಿ”(39:15) ಎಂದು ಹೇಳುವ ಮೂಲಕ ಆರಾಧನೆಯ ವಿಷಯದಲ್ಲಿಯೂ ಕೂಡ ಕುರ್‌ಆನ್‌ ಸಂಪೂರ್ಣವಾಗಿ ಆಯ್ಕೆಯ ಸ್ವಾತಂತ್ರ್ಯವನ್ನು ಕೊಡುತ್ತದೆ. ಆದರೂ ಅದು ಮನುಷ್ಯನನ್ನು ತನ್ನ ಸೃಷ್ಟಿಕರ್ತನನ್ನು ಮಾತ್ರ ಆರಾಧಿಸುವಂತೆ ಆದೇಶಿಸುತ್ತದೆ(2:21). ಕುರ್‌ಆನ್ “ನೀವು ಬಯಸಿದ್ದನ್ನು ಮಾಡಿ…” ಎಂದು ಹೇಳುವ ಮೂಲಕ ಕ್ರಿಯೆಗಳಲ್ಲಿ ಸಂಪೂರ್ಣ ಆಯ್ಕೆಯ ಸ್ವಾತಂತ್ರ್ಯವನ್ನೂ ನೀಡುತ್ತದೆ(41:40). ಕುರ್‌ಆನ್‌ ಮತ್ತಷ್ಟು ಮುಂದ್ವರಿದು, “ಇದೊಂದು ಉಪದೇಶವಾಗಿದೆ. ಇನ್ನು ಇಷ್ಟವಿದ್ದವನು ತನ್ನ ಪ್ರಭುವಿನ ಕಡೆಗೆ ಹೋಗುವ ಮಾರ್ಗವನ್ನು ಸ್ವೀಕರಿಸಿಕೊಳ್ಳಲಿ”(73:19), ಯಾವುದೇ ಮನುಷ್ಯನಿಗೆ – ಅಲ್ಲಾಹನು ಅವನಿಗೆ ಕಾನೂನು ಸಂಹಿತೆ ಅಥವಾ ಅದನ್ನು ಜಾರಿಗೊಳಿಸುವ ಶಕ್ತಿ ಅಥವಾ ನುಬುವ್ವತ್ (ಪ್ರವಾದಿತ್ವದ ಸ್ಥಾನಮಾನ) ನೀಡಿದ್ದರೂ ಸಹ – ಇತರರಿಗೆ: ‘ನೀವು ಅಲ್ಲಾಹನ ಬದಲಿಗೆ ನನಗೆ ಸೇವೆ ಸಲ್ಲಿಸಬೇಕು’ ಎಂದು ಹೇಳುವ ಹಕ್ಕಿಲ್ಲ. ಆತನು, ‘ನೀವು ಓದುತ್ತಿರುವ ಮತ್ತು ಓದಿಸುತ್ತಿರುವ ಗ್ರಂಥದ ಬೋಧನೆಯ ಬೇಡಿಕೆಯ ಪ್ರಕಾರ ಅಪ್ಪಟ ದೇವಭಕ್ತರಾಗಿರಿʼ ಎಂದೇ ಹೇಳಬೇಕು(3:79).

ವ್ಯಕ್ತಿಯು ತಾನು ಮಾಡುವ ಕ್ರಿಯೆಗಳ ತತ್‌ಪರಿಣಾಮದ ಜವಾಬ್ದಾರಿಯ ಜೊತೆ ಜೊತೆಗೆ ಸ್ವಾತಂತ್ರ್ಯವು ಇರುತ್ತದೆ ಎಂದು ಕುರ್‌ಆನ್‌ ಸ್ಪಷ್ಟಪಡಿಸುತ್ತದೆ. “ನಿಮ್ಮ ಪ್ರಭುವಿನ ಕಡೆಯಿಂದ ಅಂತರ್ದೃಷ್ಟಿಯ ಪ್ರಕಾಶಗಳು ಬಂದು ಬಿಟ್ಟಿವೆ. ಈಗ ಚೆನ್ನಾಗಿ ವೀಕ್ಷಿಸುವವನು ತನಗೇ ಹಿತವನ್ನು ಮಾಡಿಕೊಳ್ಳುವನು. ಅಂಧನಾಗಿದ್ದುಕೊಂಡವನು ಸ್ವತಃ ನಷ್ಟ ಹೊಂದುವನು”(6:104), “ಯಾರು ಸತ್ಯವನ್ನು ನಿಷೇಧಿಸುವನೋ ಅವನ ನಿಷೇಧದ ಅಪರಾಧ ಅವನ ಮೇಲೆಯೇ ಇದೆ. ಸತ್ಕರ್ಮವೆಸಗಿವರು ತಮಗಾಗಿಯೇ(ಯಶಸ್ಸಿನ ಮಾರ್ಗವನ್ನು) ಸುಗಮಗೊಳಿಸುತ್ತಿದ್ದಾರೆ”(30:44), “ಜನರೇ, ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಪರಮ ಸತ್ಯವು ಬಂದು ಬಿಟ್ಟಿತು. ಇನ್ನು ಯಾರು ಸನ್ಮಾರ್ಗವನ್ನು ಅನುಸರಿಸುವನೋ ಅವನ ಸನ್ಮಾರ್ಗ ಪ್ರಕ್ರಿಯೆಯು ಅವನಿಗೇ ಫಲಕಾರಿಯಾಗುವುದು ಮತ್ತು ಯಾರು ಪಥಭ್ರಷ್ಟನಾಗಿರುವನೋ ಅವನ ಪಥಭ್ರಷ್ಟತೆಯು ಅವನಿಗೇ ಹಾನಿಕಾರವಾಗುವುದು”(10:109), “ನೀವು ಸತ್ಕರ್ಮ ಮಾಡಿದ್ದರೆ ಅದು ನಿಮ್ಮ ಹಿತಕ್ಕಾಗಿಯೇ ಮಾಡಿದ್ದೀರಿ, ದುಷ್ಕರ್ಮವೆಸಗಿದ್ದರೆ ಅದು ನಿಮಗೇ ಕೇಡಾಗಿ ಪರಿಣಮಿಸಿತು”(17:7), “ಪುಣ್ಯ ಕಾರ್ಯಗಳನ್ನು ಮಾಡುವವನು ತನ್ನ ಹಿತಕ್ಕಾಗಿಯೇ ಮಾಡುವನು. ಪಾಪ ಮಾಡುವವನ ದುಷ್ಪರಿಣಾಮವು ಅವನನ್ನೇ ಬಾಧಿಸುವುದು”(41:46), “ಯಾರಾದರೂ ಪಾಪಗಳಿಸಿಕೊಂಡರೆ ಅವನ ಈ ಗಳಿಕೆಯು ಅವನಿಗೇ ಕೇಡಾಗುವುದು”(4:111), “ನಿಮ್ಮ ದುರಹಂಕಾರ ಅಥವಾ ಉಲ್ಲಂಘನೆಯು ನಿಮ್ಮ ಸ್ವಂತದ ವಿರುದ್ಧವೇ ಆಗಿದೆ”(10:23).

‘ಸ್ವಾತಂತ್ರ್ಯ’ ಎಂದರೆ ‘ಪರವಾನಗಿ’ ಎಂದರ್ಥವಲ್ಲ ಅನ್ನುವುದನ್ನು ಒತ್ತಿ ಹೇಳಬೇಕಾಗಿದೆ. ಪವಿತ್ರ ಕುರ್‌ಆನ್‌ ಹೇಳುತ್ತದೆ: “ಅಲ್ಲಾಹನು ಸನ್ಮಾನಿಸಿರುವ ಜೀವವನ್ನು ನ್ಯಾಯದಿಂದಲ್ಲದೆ ಹರಣ ಮಾಡಬೇಡಿರಿ” ಅನ್ಯಾಯದ ಕೊಲೆ ಎಷ್ಟು ಘೋರ ಅಪರಾಧವೆಂದರೆ – ಕುರ್‌ಆನ್‌ನಲ್ಲಿ, “ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನು ಉಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವಕೋಟಿಗೆ ಜೀವದಾನ ಮಾಡಿದಂತೆ”(5:32), ಅದೇ ರೀತಿ, ಯಾರ ಸಂಪತ್ತು ಅಥವಾ ಆಸ್ತಿಯನ್ನು ಅನ್ಯಾಯವಾಗಿ ಅಥವಾ ಕಾನೂನುಬಾಹಿರವಾಗಿ ಸಂಪಾದಿಸುವ ಸ್ವಾತಂತ್ರ್ಯವನ್ನು ಯಾವೊಬ್ಬ ವ್ಯಕ್ತಿಯು ಹೊಂದಿಲ್ಲ(2:188) ಎಂದು ತಿಳಿಸುತ್ತದೆ.

ಪವಿತ್ರ ಕುರ್‌ಆನ್ ಎಲ್ಲಾ ಮಾನವಕುಲಕ್ಕೂ ಈ ಕೆಳಗಿನ ಸ್ವಾತಂತ್ರ್ಯವನ್ನು ಖಾತ್ರಿಗೊಳಿಸುತ್ತದೆ: ಜೀವನದ ಸ್ವಾತಂತ್ರ್ಯ[5:32]; ವಿಶ್ವಾಸದ ಸ್ವಾತಂತ್ರ್ಯ[18:29]; ಆರಾಧನೆಯ ಸ್ವಾತಂತ್ರ್ಯ[39:15]; ಕ್ರಿಯೆ (ಕಾನೂನುಬದ್ಧ)ಯ ಸ್ವಾತಂತ್ರ್ಯ[41:40]; ತಿರಸ್ಕಾರ ಮತ್ತು ಅಗೌರವದಿಂದ ಸ್ವಾತಂತ್ರ್ಯ[31:18]; ಅಪಹಾಸ್ಯದಿಂದ ಸ್ವಾತಂತ್ರ್ಯ[49:11]; ಬಲವಂತದಿಂದ ಸ್ವಾತಂತ್ರ್ಯ[2:256]; ಗುಲಾಮಗಿರಿಯಿಂದ ಸ್ವಾತಂತ್ರ್ಯ[3:79]; ಹಕ್ಕುಗಳ ನಿರಾಕರಣೆಯಿಂದ ಸ್ವಾತಂತ್ರ್ಯ[7:85]; ಅನ್ಯಾಯ ಅಥವಾ ಕಾನೂನುಬಾಹಿರ ರೀತಿಯಿಂದ ಸಂಪತ್ತು ಅಥವಾ ಆಸ್ತಿಯನ್ನು ಕಬಳಿಸುವುದರಿಂದ ಸ್ವಾತಂತ್ರ್ಯ[ 2:188]; ಅನ್ಯಾಯ ಮತ್ತು ತಾರತಮ್ಯದಿಂದ ಸ್ವಾತಂತ್ರ್ಯ[4:58]. ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವು ಇನ್ನೊಬ್ಬರ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಪ್ರಾರಂಭಿಸುವ ಹಂತದಲ್ಲಿ ಕೊನೆಗೊಳ್ಳುತ್ತದೆ ಮತ್ತು ಬಲವಂತದಿಂದ ಸ್ವಾತಂತ್ರ್ಯ ಅಂದರೆ ಶಿಸ್ತಿನಿಂದ ಸ್ವಾತಂತ್ರ್ಯ ಎಂದರ್ಥ ಅಲ್ಲ.

ಕನ್ನಡಾನುವಾದ: ಅಬೂ ಹುದೈಫಾ

ಕೃಪೆ: quranicteachings.org

Leave a Reply