ನಿಮ್ಮ ಮಕ್ಕಳನ್ನು ಉತ್ತಮ ನೆರೆಯವರನ್ನಾಗಿಸಿರಿ

0
Gemini_Generated_Image_t7b259t7b259t7b2 (1)

ಲೇಖಕರು: ಉಮ್ಮು ಮುಸಫರಾ ಮುಬಶ್ಶಿರಾ

ಸರ್ವಶಕ್ತನ ನಾಮದಿಂದ

ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡುವುದು ಮತ್ತು ವೈಯಕ್ತಿಕ ಪ್ರತಿಭೆಗಳಲ್ಲದೆ ಅವರಲ್ಲಿ ಉನ್ನತ ಸಾಮಾಜಿಕ ಗುಣಗಳನ್ನು ಪೋಷಿಸುವುದು ಹೆತ್ತವರ ಹೊಣೆಗಾರಿಕೆಯಾಗಿದೆ. ಮಕ್ಕಳು ತಮ್ಮ ವೈಯಕ್ತಿಕ ಲಾಭ-ನಷ್ಟಗಳೊಂದಿಗೆ ಇತರರ ಲಾಭ-ನಷ್ಟಗಳ ವಿಷಯದಲ್ಲೂ ಸಂವೇದನಶೀಲರಾಗಬೇಕು. ಅವರು ತಮ್ಮ ಮನೆಯಲ್ಲೂ ತಮ್ಮ ಸಮಾಜದ ಪಾಲಿಗೂ ಅನುಗ್ರಹದ ದೇವಚರರಾಗಬೇಕು. ಅವರ ಹಿತಚಿಂತನೆ ಮತ್ತು ಹಿತಾಕಾಂಕ್ಷೆಯ ಗುಣವು ಸ್ವಯಂ ಅವರ ವೈಯಕ್ತಿಕ ಪರಿಧಿಯಿಂದ ಹೊರಗೆ ಬಂದು ಇಡೀ ಸಮಾಜದಲ್ಲಿ ಪಸರಿಸಬೇಕು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮಕ್ಕಳು ಉತ್ತಮ ಸಂತಾನವಾಗುವುದರೊಂದಿಗೆ ಉತ್ತಮ ನೆರೆಯವರಾಗಿ ಬೆಳೆಯುವಂತೆ ಅವರನ್ನು ತರಬೇತುಗೊಳಿಸಬೇಕು.

ಮಕ್ಕಳ ಪಾಲಿಗೆ ಮನೆಯ ನಂತರ ಮೊದಲ ಬಾಹ್ಯ ಪರಿಸರ ಮೊಹಲ್ಲ ಅಥವಾ ಸಮಾಜವಾಗಿರುತ್ತದೆ. ಮನೆಯ ಹೊರಗೆ ಮಕ್ಕಳ ಮೊದಲ ಗೆಳೆತನವು ನೆರೆಕರೆಯ ಮಕ್ಕಳೊಂದಿಗಾಗುತ್ತದೆ. ನೆರೆಕರೆಯವರಿಂದಲೇ ಅವರು ಮೂಲಭೂತ ಸಾಮಾಜಿಕ ಪ್ರತಿಭೆಗಳನ್ನು ಕಲಿಯಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ, ಮಾತನಾಡುವ ಕಲೆ, ಸಹಾನುಭೂತಿ, ಗೌರವ, ಸಹಬಾಳುವೆ, ಪರಸ್ಪರ ಸಹಕಾರ ಮತ್ತು ಮಾನವೀಯತೆಯ ಇತರ ಅನೇಕ ನೀತಿ ಹಾಗೂ ಮೌಲ್ಯಗಳು. ನಾವು ಮಕ್ಕಳಿಗೆ ನೆರೆಯವರೊಂದಿಗೆ ಸದ್ವರ್ತನೆ ತೋರಲು ಕಲಿಸುವಾಗ, ಮಕ್ಕಳು ಸಾಮಾಜಿಕ ಹೊಣೆಗಾರಿಕೆಗಳನ್ನು ಚೆನ್ನಾಗಿ ನಿಭಾಯಿಸಲು ಸಿದ್ಧರಾಗುತ್ತಾರೆ. ಈ ಲೇಖನದಲ್ಲಿ, ಮಕ್ಕಳಿಗೆ ಉತ್ತಮ ನೆರೆಯವರಾಗುವ ಶಿಕ್ಷಣ ನೀಡುವುದು ಹೇಗೆ ಮತ್ತು ಮಕ್ಕಳಲ್ಲಿ ಉನ್ನತ ಸಾಮಾಜಿಕ ಗುಣಗಳು ಪೋಷಣೆ ಪಡೆಯುವಂತಹ ಅತ್ಯುತ್ತಮ ವಿಧಾನವೇನು ಎಂಬ ಕುರಿತು ತಿಳಿಯೋಣ.

ಮಕ್ಕಳಿಗೆ ನೆರೆಕರೆಯವರೊಂದಿಗೆ ಸದ್ವರ್ತನೆಯ ಶಿಕ್ಷಣವನ್ನು ಯಾಕೆ ನೀಡಬೇಕು?

A) ಇಸ್ಲಾಮ್ ಒಂದು ಪರಿಪೂರ್ಣ ಜೀವನ ವ್ಯವಸ್ಥೆಯಾಗಿದೆ. ಅದು ಮಾನವನ ಸಾಮಾಜಿಕ ಬಂಧ ಮತ್ತು ಪರಸ್ಪರ ವ್ಯವಹಾರಗಳನ್ನು ಸುಧಾರಿಸುತ್ತದೆ. ಈ ಸಂಬಂಧಗಳ ಪೈಕಿ ಒಂದು ಪ್ರಮುಖ ಸಂಬಂಧವು ನೆರೆಕರೆಯವರದಾಗಿದೆ. ನೆರೆಯವರೊಂದಿಗೆ ಸದ್ವರ್ತನೆಯ ಆದೇಶವು ಪವಿತ್ರ ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ತಾಕೀತಿನೊಂದಿಗೆ ಅನೇಕ ಬಾರಿ ಉಲ್ಲೇಖಿಸಲ್ಪಟ್ಟಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿರುವರು,

“ಜಿಬ್ರೀಲ್(ಅ)ರವರು ನನಗೆ ನೆರೆಕರೆಯವರ ಹಕ್ಕುಗಳ ಕುರಿತು ಎಷ್ಟು ತಾಕೀತು ಮಾಡುತ್ತಿದ್ದರೆಂದರೆ, ವಾರೀಸಿನ ಹಕ್ಕಿನಲ್ಲಿ ನೆರೆಯವರನ್ನೂ ಸೇರಿಸಬೇಕಾಗುವುದೋ ಎಂದು ನಾನು ಭಾವಿಸುವಂತಾಗುತ್ತಿತ್ತು.” (ಬುಖಾರಿ, ಮುಸ್ಲಿಮ್)

ಹೆತ್ತವರು ಮಕ್ಕಳಿಗೆ ಸಾಮಾನ್ಯ ಧಾರ್ಮಿಕ ತರಬೇತಿ ನೀಡುವ ಕುರಿತು ಕಾಳಜಿ ವಹಿಸಬೇಕಾದುದೇನೋ ಸರಿ, ಅದೇ ವೇಳೆ ಯಾವ ವಿಷಯಗಳ ಬಗ್ಗೆ ವಿಶೇಷ ಗಮನ ಸೆಳೆಯಲಾಗಿದೆಯೋ ಅವುಗಳ ಕುರಿತೂ ವಿಶೇಷ ತರಬೇತಿ ನೀಡಬೇಕಾದುದು ಅಗತ್ಯ.

B) ನೆರೆಕರೆಯವರಿಂದ ಮಕ್ಕಳ ಮೇಲೆ ಯಾವ ಪ್ರಭಾವವುಂಟಾಗುತ್ತದೆ ಮತ್ತು ನೆರೆಯವರೊಂದಿಗೆ ಮಕ್ಕಳ ಸಹವಾಸ ಯಾಕೆ ಅಗತ್ಯವಿದೆ ಎಂಬುದರ ಕುರಿತು ಅನೇಕ ಮನೋವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ. ಉದಾಹರಣೆಗೆ, ಪರಿಸರ ವಿಜ್ಞಾನಿ ಯೂರಿ ಬ್ರೋನ್ಫೆನ್ ಬ್ರೆನ್ನರ್‌ರ ಪರಿಸರ ವ್ಯವಸ್ಥೆಯ ಸಿದ್ಧಾಂತವು ಒಂದು ಪ್ರಸಿದ್ಧ ಸಂಶೋಧನೆಯಾಗಿದೆ. ಅದರಲ್ಲಿ ಒಂದು ಮಗುವಿನ ಮೇಲೆ ನಿಕಟ ಪರಿಸರವು ಎಷ್ಟರ ಮಟ್ಟಿಗೆ, ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಸವಿವರವಾಗಿ ತಿಳಿಸಲಾಗಿದೆ. ಈ ಅಧ್ಯಯನದಲ್ಲಿ ನೆರೆಕರೆಯವರ ಪ್ರಭಾವವೂ ಸೇರಿದೆ. ಒಂದೆಡೆ ಪರಿಸರ ತಜ್ಞರು ನೆರೆಕರೆಯವರಿಂದ ವ್ಯಕ್ತಿತ್ವ ಮತ್ತು ಚಾರಿತ್ರ್ಯದ ಮೇಲೆ ಆಗುವ ಪರಿಣಾಮಗಳನ್ನು ಉಲ್ಲೇಖಿಸಿದರೆ, ಇನ್ನೊಂದೆಡೆ ನೆರೆಕರೆಯವರೊಂದಿಗಿನ ಮಕ್ಕಳ ಉತ್ತಮ ಬಾಂಧವ್ಯವವನ್ನೂ ವಿಶದೀಕರಿಸುತ್ತದೆ.

C) ಸಮಾಜ ವಿನ್ಞಾನದಲ್ಲಿ ಮಾನವರ ಪರಸ್ಪರ ಸಂಬಂಧ ಮತ್ತು ಅವರ ಮೇಲೆ ಪರಿಸರದ ಪ್ರಭಾವಗಳ ಅಧ್ಯಯನ ನಡೆಸಲಾಗುತ್ತದೆ. ಈ ರಂಗದ ತಜ್ಞರೂ ನೆರೆಯವರೊಂದಿಗಿನ ಉತ್ತಮ ಸಂಬಂಧದ ಮಹತ್ವವನ್ನು ಉಲ್ಲೇಖಿಸಿದ್ದಾರೆ. ಒಂದು ಯಶಸ್ವಿ ಸಮಾಜವು ನೆರೆಕರೆ ಮತ್ತು ಸಮುದಾಯದ ಬಲಿಷ್ಠ ಸಂಬಂಧದ ಮೇಲೆ ನಿಂತಿದೆ ಎಂದು ಅವರು ಹೇಳುತ್ತಾರೆ. ಅವರ ವಾದದ ಪ್ರಕಾರ, ಮಕ್ಕಳು ಕಲಿಯುವ ಮೂಲ ಆಧಾರವು ಸಾಮಾಜಿಕ ಸಂಬಂಧಗಳಾಗಿವೆ. ಅವರು ಇತರರಿಂದ (ಮಾತಾಪಿತರು, ಅಧ್ಯಾಪಕರು ಅಥವಾ ನೆರೆಯವರಿಂದ) ಕಲಿಯುತ್ತಾರೆ. ಮಕ್ಕಳಿಗೆ ಸಮುದಾಯದ ಭಾಗವಾಗುವಂತೆ ತರಬೇತಿ ನೀಡುವುದು ಅವರ ಭವಿಷ್ಯದ ನಿಟ್ಟಿನಲ್ಲಿ ತೀರಾ ಅಗತ್ಯವಾಗಿದೆ.

D) ಭಾಷಾತಜ್ಞರು ಹೇಳುವ ಪ್ರಕಾರ, ಮಕ್ಕಳ ಪದ ಭಂಡಾರವು ಕೇವಲ ಅವರ ಮಾತಾಪಿತರ ಕಾರಣದಿಂದ ಹೆಚ್ಚುವುದಲ್ಲ, ಬದಲಾಗಿ ಮನೆಯ ಹೊರಗೆ ನರೆಕರೆಯಲ್ಲಿ, ಮೊಹಲ್ಲದಲ್ಲಿ, ಸಮಾಜದಲ್ಲಿ ವಿಭಿನ್ನ ರೀತಿಯ ಜನರೊಂದಿಗೆ ಬೆರೆಯುವುದರಿಂದ ಮಕ್ಕಳು ವಿವಿಧ ಭಾಷೆ, ಪದೋಚ್ಚಾರ ಮತ್ತು ಮಾತುಗಾರಿಕೆಯನ್ನು ಕಲಿತುಕೊಳ್ಳುತ್ತಾರೆ.

E) ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದರೆ ಅಥವಾ ಮನೆಯ ಹೊರಗೆ ಜನರೊಂದಿಗೆ ಬೆರೆಯಲು ಮತ್ತು ಮಾತನಾಡಲು ಹಿಂದೇಟು ಹಾಕುತ್ತಿದ್ದರೆ, ಮಾತಾಪಿತರು ಅವರನ್ನು ನೆರೆಕರೆಯ ಮಕ್ಕಳೊಂದಿಗೆ ಗೆಳೆತನ ಮಾಡಿಸುವ ಮೂಲಕ ಅವರ ಈ ತೊಂದರೆಯನ್ನು ಸುಲಭದಲ್ಲಿ ಕಡಿಮೆಗೊಳಿಸಲು ಪ್ರಯತ್ನಿಸಬಹುದಾಗಿದೆ.

F) ಕೆಲವೊಮ್ಮೆ ಕಾರಣಾಂತರಗಳಿಂದ ನೆರೆಯವರೊಂದಿಗಿನ ಸಂಬಂಧ ಕೆಡುತ್ತದೆ. ಆ ಪೈಕಿ ಒಂದು ಕಾರಣ ಮಕ್ಕಳಾಗಿರುತ್ತಾರೆ. ಮಕ್ಕಳ ಕಾರಣವಾಗಿ ಸಂಬಂಧ ಉತ್ತಮವೂ ಆಗುತ್ತದೆ ಮತ್ತು ಅದೇ ಮಕ್ಕಳು ಸಂಬಂಧ ಕೆಡಲು ಕಾರಣವೂ ಆಗುತ್ತಾರೆ. ಆದ್ದರಿಂದ ನೆರೆಕರೆಯವರೊಂದಿಗೆ ಮತ್ತು ಅವರ ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕಾದುದು ಅತ್ಯಗತ್ಯ.

ನೆರೆಯವರೊಂದಿಗೆ ನಮಗೆ ರಕ್ತ ಸಂಬಂಧ ಅಥವಾ ನೆಂಟಸ್ತಿಕೆಯ ಸಂಬಂಧ ಇಲ್ಲದಿದ್ದರೂ ಜೀವನದಲ್ಲಿ ಅವರ ಮಹತ್ವವು ಯಾವ ನಿಟ್ಟಿನಲ್ಲೂ ಕಡಿಮೆಯೇನಿಲ್ಲ. ಮನೆಯ ಬಾಗಿಲು ತೆರೆಯುವಾಗ ಎದುರಲ್ಲಿ ಕಾಣುವ ಇನ್ನೊಂದು ಬಾಗಿಲು ಇದೆಯಲ್ಲ, ಅದು ಆ ನೆರೆಕರೆಯವರ ಮನೆಬಾಗಿಲಾಗಿರುತ್ತದೆ. ಅವರೊಂದಿಗೇ ಬಾಂಧವ್ಯ, ಸಂತೋಷ ಮತ್ತು ಸುರಕ್ಷತಾ ಭಾವವನ್ನು ನಿರೀಕ್ಷಿಸಲಾಗುತ್ತದೆ. ಇವೆಲ್ಲವನ್ನು ನಾವು ಅವರಿಗೂ ನೀಡುವಾಗ ಒಂದು ಸುಮಧುರವಾದ ವಾತಾವರಣ ಹುಟ್ಟಿಕೊಳ್ಳುತ್ತದೆ. ಒಂದು ವೇಳೆ ನೆರೆಯ ಪರಿಸರವು ವ್ಯಕ್ತಿತ್ವ ನಿರ್ಮಾಣಕಾಗಿ ಸೃಜನಾತ್ಮಕವೂ ಆಹ್ಲಾದಕರವೂ ಆಗಿದ್ದರೆ ಮಕ್ಕಳು ಹೆಚ್ಚೆಚ್ಚು ಸಚ್ಚಾರಿತ್ರ್ಯವಂತರಾಗುತ್ತಾರೆ, ಪರಹಿತಚಿಂತಕರಾಗುತ್ತಾರೆ ಮತ್ತು ಅವರಲ್ಲಿ ಆತ್ಮವಿಶ್ವಾಸ ಬೆಳೆದು ಬರುತ್ತದೆ. ಒಂದು ವೇಳೆ ಈ ಪರಿಸರವು ಪೂರಕವಾಗಿಲ್ಲದಿದ್ದರೆ, ಮಕ್ಕಳ ಸಾಮಾಜಿಕ ತರಬೇತಿಯೂ ಪ್ರಭಾವಕ್ಕೀಡಾಗುತ್ತದೆ. ಆದ್ದರಿಂದ ಮಾತಾಪಿತರು ಕೆಲವು ಯುಕ್ತಿಗಳನ್ನು ಬಳಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ನೆರೆಯವರಾಗುವ ಮತ್ತು ನೆರೆಕರೆಯವರೊಂದಿಗೆ ಸದ್ವರ್ತನೆ ತೋರುವ ತರಬೇತಿ ನೀಡಬಹುದಾಗಿದೆ.

1.         ಮಕ್ಕಳು ತಮ್ಮ ಮಾತಾಪಿತರು ಮತ್ತು ಹಿರಿಯರು ಮಾಡುವುದನ್ನು ಕಂಡು ಕಲಿಯುತ್ತಾರೆ. ಒಂದು ವೇಳೆ ನಾವು ನಮ್ಮ ನೆರೆಕರೆಯವರ ಬಗ್ಗೆ ಕಾಳಜಿ ವಹಿಸುವುದನ್ನು, ಅವರ ಕ್ಷೇಮ ವಿಚಾರಿಸುವುದನ್ನು, ಸುಖ-ದುಃಖಗಳಲ್ಲಿ ಅವರ ಜೊತೆಗಿರುವುದನ್ನು ಕಾಣುವಾಗ ಮಕ್ಕಳೂ ಅದೇ ವ್ಯವಹಾರವನ್ನು ತಮ್ಮದಾಗಿಸುತ್ತಾರೆ. ಈ ರೀತಿಯಾಗಿ ಮಕ್ಕಳು ಬಾಲ್ಯದಲ್ಲಿಯೇ ಸಹಾನುಭೂತಿ, ತ್ಯಾಗ-ಬಲಿದಾನ, ಸಹಬಾಳುವೆಯ ಮಹತ್ವವನ್ನು ಅರ್ಥ ಮಾಡಲು ಪ್ರಾರಂಭಿಸುತ್ತಾರೆ. ಹಾಗಾಗಿ ಹೆತ್ತವರು ತಮ್ಮ ವ್ಯವಹಾರಗಳ ಮೂಲಕ ನೆರೆಕರೆಯವರನ್ನು ಗೌರವಿಸುವುದು ಮತ್ತು ಅವರಿಗೆ ಸಹಕಾರ ನೀಡುವುದು ಈಮಾನ್‌ನ ಭಾಗವಾಗಿದೆ ಹಾಗೂ ಓರ್ವ ಉತ್ತಮ ಸುಸಂಸ್ಕೃತ ಮಾನವನ ಗುರುತಾಗಿದೆ ಎಂಬ ಪಾಠವನ್ನು ಮಕ್ಕಳಿಗೆ ನೀಡಬೇಕು.

2.         ಹೊಸ ನೆರೆಯವರು ಮೊಹಲ್ಲ ಅಥವಾ ಸೊಸೈಟಿಯಲ್ಲಿ ಇರಲು ಬಂದಾಗ ಅಥವಾ ಹಳೆಯ ನೆರೆಯವರು ಬೇರೆಡೆಗೆ ಸ್ಥಳಾಂತರಗೊಳ್ಳುವಾಗ ಅವರೊಡನೆ ಏನಾದರೂ ಸಹಾಯದ ಅಗತ್ಯವಿದೆಯೇ ಎಂದು ವಿಚಾರಿಸಬೇಕು. ತರುವಾಯ ನಿಮ್ಮಿಂದ ಸಾಧ್ಯವಿರುವಷ್ಟು ಸಹಾಯ-ಸಹಕಾರವನ್ನು ನೀಡಬೇಕು. ಜತೆಗೆ ನಿಮ್ಮ ಮಕ್ಕಳನ್ನೂ ಅದರಲ್ಲಿ ಸೇರಿಸಬೇಕು. ಈ ಮೂಲಕ ಅವರೂ ಇತರರ ಬಗ್ಗೆ ಕಾಳಜಿ ವಹಿಸಲು ಮತ್ತು ಸಹಕರಿಸಲು ಕಲಿಯುತ್ತಾರೆ. ಈ ರೀತಿ ಮಕ್ಕಳು ನೆರೆಯವರೊಂದಿಗೆ ಸದ್ವರ್ತನೆ ತೋರುವುದು ಕೇವಲ ಒಂದು ಸಂಪ್ರದಾಯವಲ್ಲ, ಬದಲಾಗಿ ಒಂದು ಪ್ರಮುಖ ಸಾಮಾಜಿಕ ಮತ್ತು ಧಾರ್ಮಿಕ ಹೊಣೆಗಾರಿಕೆಯಾಗಿದೆ ಎಂಬುದನ್ನು ಕಲಿಯುತ್ತಾರೆ.

3.         ಮಕ್ಕಳಿಗೆ ಯಾವಾಗ ಹೊರಗೆ ಆಟವಾಡುವುದು ಸರಿ ಮತ್ತು ಯಾವಾಗ ಅಲ್ಲ ಎಂಬುದನ್ನು ಕಲಿಸಬೇಕು. ಒಂದು ವೇಳೆ ಯಾರಾದರೂ ವಿಶ್ರಾಂತಿ ಪಡೆಯುತ್ತಿದ್ದರೆ, ರೋಗಿಯಾಗಿದ್ದರೆ ಅಥವಾ ಯಾರದಾದರೂ ಮನೆಯಲ್ಲಿ ಪುಟ್ಟ ಮಗು ನಿದ್ರಿಸುತ್ತಿದ್ದರೆ ಗುಲ್ಲುಗದ್ದಲ ಮಾಡುವುದು ತರವಲ್ಲ ಎಂಬುದನ್ನು ತಿಳಿಸಿಕೊಡಬೇಕು. ಆಟವಾಡುವಾಗ ಸಮಯ ಮತ್ತು ಸ್ಥಳದ ಬಗ್ಗೆ ಗಮನವಿರಿಸಬೇಕಾದುದು ನೆರೆಕರೆಯವರ ಕ್ಷೇಮ ಮಾತ್ರವಲ್ಲ, ಬದಲಾಗಿ ಅದು ಉತ್ತಮ ಚಾರಿತ್ರ್ಯ ಮತ್ತು ಹೊಣೆಗಾರಿಕಾ ಪ್ರಜ್ಞೆಯ ಒಂದು ಭಾಗವೂ ಆಗಿದೆ. ಈ ಪ್ರಕಾರ ಇತರರ ಸವಲತ್ತುಗಳನ್ನು ಗೌರವಿಸುವುದು ಉತ್ತಮ ನರೆಕರೆ ಮತ್ತು ಸುಸಂಸ್ಕೃತ ಮಾನವನ ಗುಣವಾಗಿದೆ ಎಂಬ ಪಾಠವನ್ನು ಮಕ್ಕಳು ಕಲಿಯುತ್ತಾರೆ.

4.         ವಸ್ತುಗಳನ್ನು ಹಂಚುವ ಅಭ್ಯಾಸಕ್ಕೆ ಮಹತ್ವ ಯಾಕೆ ಇದೆ ಎಂಬುದನ್ನು ಮಕ್ಕಳಿಗೆ ಕಲಿಸಬೇಕಾದುದು ಅಗತ್ಯ. ಆಟಿಕೆ, ಪುಸ್ತಕಗಳು ಅಥವಾ ಇತ್ತರ ವಸ್ತುಗಳನ್ನು ಬೇರೆ ಮಕ್ಕಳೊಂದಿಗೆ ಹಂಚುವುದರಿಂದ ಪ್ರೀತಿ, ಗೆಳೆತನ ಮತ್ತು ಭರವಸೆ ಬೆಳೆಯುತ್ತದೆ ಎಂದು ಮಕ್ಕಳಿಗೆ ಹೇಳಿ ಕೊಡಬೇಕು. ಮಕ್ಕಳು ತಮ್ಮ ವಸ್ತುಗಳನ್ನು ಇತರರಿಗೆ ನೀಡುವಾಗ, ಅವರು ತ್ಯಾಗ-ಬಲಿದಾನದ ಭಾವನೆಯನ್ನು ಕಲಿಯುತ್ತಾರೆ. ಸಂತೋಷ ಕೇವಲ ವಸ್ತುಗಳನ್ನು ಪೇರಿಸಿಡುವುದರಲ್ಲಿ ಇರುವುದಲ್ಲ, ಬದಲಾಗಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ದೊರೆಯುವುದು ಎಂಬ ಅರಿವು ಅವರಲ್ಲಿ ಮೂಡುತ್ತದೆ. ಈ ಪ್ರಕಾರ ಮಕ್ಕಳು ಸಣ್ಣ ಪ್ರಾಯದಲ್ಲಿಯೇ ಪರಹಿತಚಿಂತನೆ ಮತ್ತು ಸಹಬಾಳುವೆಯನ್ನು ಕಲಿಯುತ್ತಾರೆ.

5.         ನಿಮ್ಮ ಸೊಸೈಟಿ ಅಥವಾ ಮೊಹಲ್ಲದ ಮಕ್ಕಳಿಗಾಗಿ ನಿಮ್ಮ ಮನೆಯಲ್ಲಿ ಔತಣಕೂಟ ಆಯೋಜಿಸಿರಿ. ಈ ಸಂದರ್ಭದಲ್ಲಿ ಅವರಿಗಾಗಿ ಆಟಿಕೆಗಳು ಅಥವಾ ಆಸಕ್ತಿಕರ ಚಟುವಟಿಕೆಗಳ ವ್ಯವಸ್ಥೆಯನ್ನೂ ಮಾಡಬೇಕು. ಇದರಿಂದ ಮಕ್ಕಳೆಲ್ಲರೂ ಸಂತೋಷದಿಂದ ಸ್ಮರಣಾರ್ಹ ಸಮಯವನ್ನು ವ್ಯಯಿಸುವರು. ಈ ಪ್ರಕಾರ ಇತರರನ್ನು ತಮ್ಮ ಮನೆಗೆ ಕರೆಯುವುದು, ಅವರನ್ನು ಸತ್ಕರಿಸುವುದು, ಒಟ್ಟು ಸರಿ ಆಡುವುದು ಮತ್ತು ಸಂತೋಷ ಹಂಚುವುದು ಇತ್ಯಾದಿಗಳಿಂದ ಗೆಳೆತನ ಬೆಳೆಯುತ್ತದೆ; ಮಾತ್ರವಲ್ಲ ಉತ್ತಮ ಬಾಂಧವ್ಯವವನ್ನು ಸ್ಥಾಪಿಸುವ ವಿಧಾನವೂ ಆಗಿದೆ ಎಂಬುದನ್ನು ಮಕ್ಕಳು ಕಲಿಯುತ್ತಾರೆ.

6.         ಸೊಸೈಟಿ ಅಥವಾ ಮೊಹಲ್ಲದ ಮಕ್ಕಳಿಗಾಗಿ ಯಾವುದಾದರೂ ಸ್ಪರ್ಧೆಯನ್ನು ಏರ್ಪಡಿಸಿರಿ. ಉದಾಹರಣೆಗೆ, ಚಿತ್ರಕಲೆ, ಅಧ್ಯಯನ, ಆಟ, ಕವನ ಅಥವಾ ಕುರ್‌ಆನ್ ಪಠಣ ಅಥವಾ ಸ್ಪೆಲ್ ಬೀ ಇತ್ಯಾದಿ. ಈ ಸ್ಪರ್ಧೆಗಳ ಕೊನೆಯಲ್ಲಿ ಮಕ್ಕಳಿಗಾಗಿ ಉಡುಗೊರೆಗಳು ಮತ್ತು ಬಹುಮಾನಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಿರಿ. ಹಿರಿಯರ ಮೂಲಕ ಸ್ಪರ್ಧೆಯ ಫಲಿತಾಂಶಗಳ ಘೋಷಣೆ ಆದ ಬಳಿಕ ಮಕ್ಕಳೇ ಪರಸ್ಪರರಿಗೆ ಈ ಬಹುಮಾನಗಳನ್ನು ವಿತರಿಸಬೇಕು. ಈ ಮೂಲಕ ಪರಸ್ಪರರ ಪ್ರತಿಭೆಗಳನ್ನು ಸ್ವೀಕರಿಸುವ, ಅವುಗಳನ್ನು ಪ್ರೋತ್ಸಾಹಿಸುವ ಮತ್ತು ಪರಸ್ಪರರ ಯಶಸ್ಸಿಗೆ ಸಂತೋಷ ಪಡುವ ಗುಣವನ್ನು ಕಲಿಯುತ್ತಾರೆ.

7.         ನಾವು ಎಲ್ಲ ಧರ್ಮಗಳನ್ನೂ ಅವುಗಳ ಅನುಯಾಯಿಗಳನ್ನೂ ಗೌರವಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದು ಇಸ್ಲಾಮೀ ಶಿಕ್ಷಣಕ್ಕೆ ವಿರುದ್ಧವಾಗಿದೆ ಎಂಬ ಅರಿವನ್ನು ಅವರಲ್ಲಿ ಮೂಡಿಸಬೇಕು. ನೆರೆಕರೆಯವರೊಂದಿಗೆ ಅವರ ಧರ್ಮಕ್ಕೆ ಸಂಬಂಧಿಸಿ ವಾದವಿವಾದ ಮತ್ತು ತಕರಾರು ಎತ್ತುವುದು ಒಳ್ಳೆಯ ಗುಣವಲ್ಲ, ಅದಕ್ಕೆ ಬದಲಾಗಿ ತಮ್ಮ ಉತ್ತಮ ವರ್ತನೆ ಮತ್ತು ಉತ್ತಮ ಮಾತುಗಳ ಮೂಲಕ ಇಸ್ಲಾಮಿನ ಶಿಕ್ಷಣವನ್ನು ಇತರರ ಮುಂದಿಡಲು ಕಲಿಸಬೇಕು. ಮೊಹಲ್ಲದಲ್ಲಿ ಅಥವಾ ನಗರದಲ್ಲಿ ಮಂದಿರ, ಇಗರ್ಜಿ, ಗುರುದ್ವಾರ ಇತ್ಯಾದಿ ಇದ್ದರೆ ಇತರ ಧರ್ಮೀಯರ ಆರಾಧನೆಗಳನ್ನು ಗೌರವಿಸುವುದು ಇಸ್ಲಾಮಿನ ಶಿಕ್ಷಣವಾಗಿದೆ, ಇತರರ ಆರಾಧನಾಲಯಗಳ ಮುಂದೆ ಗುಲ್ಲು-ಗದ್ದಲ ಎಬ್ಬಿಸಬಾರದು ಹಾಗೂ ಅಲ್ಲಿರುವ ವಿಗ್ರಹ ಮತ್ತಿತರ ವಸ್ತುಗಳಿಗೆ ಯಾವುದೇ ಹಾನಿಯನ್ನುಂಟು ಮಾಡಬಾರದು ಎಂಬುದನ್ನು ಮಕ್ಕಳಿಗೆ ತಿಳಿಸಿ ಕೊಡಬೇಕು. ಈ ಪ್ರಕಾರ ಮಕ್ಕಳು ಸಭ್ಯ ಮತ್ತು ಗೌರವಾರ್ಹ ಮುಸ್ಲಿಮರಾಗಿ ಬೆಳೆಯುತ್ತಾರೆ ಹಾಗೂ ನಿಜಾರ್ಥದಲ್ಲಿ ಇಸ್ಲಾಮಿನ ಪ್ರತಿನಿಧಿಗಳಾಗಿ ಮೂಡಿ ಬರುತ್ತಾರೆ.

8.         ಯಾವುದೇ ರೀತಿಯ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದೆಂದೂ ಅವುಗಳನ್ನು ಕಸದ ಬುಟ್ಟಿಗೇ ಎಸೆಯಬೇಕೆಂದೂ ಮಕ್ಕಳಿಗೆ ಕಲಿಸಬೇಕಾದುದು ಅಗತ್ಯ. ಮಾಲಿನ್ಯ ಹರಡುವುದರಿಂದ ಕೇವಲ ಪರಿಸರ ಕೆಡುವುದಷ್ಟೇ ಅಲ್ಲ, ಆರೋಗ್ಯದ ಸಮಸ್ಯೆಗಳೂ ಎದುರಾಗುತ್ತವೆ ಎಂಬುದನ್ನು ಅವರಿಗೆ ತಿಳಿ ಹೇಳಬೇಕು. ಸ್ವಚ್ಛತೆ ಪಾಲಿಸುವುದರಿಂದ ಕೇವಲ ನಮ್ಮ ಮನೆಯಷ್ಟೇ ಅಲ್ಲ, ಇಡೀ ಸಮಾಜವೂ ಸ್ವಚ್ಛ ಮತ್ತು ಆರೋಗ್ಯವಂತವಾಗುತ್ತದೆ. ಈ ಅಭ್ಯಾಸದೊಂದಿಗೆ ಸಮಾಜವನ್ನು ಸ್ವಚ್ಛವಾಗಿರಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಮತ್ತು ಈ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ನಮ್ಮ ಪಾತ್ರವನ್ನೂ ನಿರ್ವಹಿಸಬಲ್ಲೆವು ಎಂದು ಮಕ್ಕಳು ಕಲಿತುಕೊಳ್ಳುತ್ತಾರೆ.

9.         ನಿಮ್ಮ ಮಗು ಬೇರೆ ಮಕ್ಕಳೊಂದಿಗೆ ಜಗಳಾಡಿದರೆ ಅಥವಾ ಯಾರಾದರೂ ಕಿಡಿಗೇಡಿ ಮಕ್ಕಳು ನಿಮ್ಮ ಮಗುವಿಗೆ ತೊಂದರೆ ನೀಡಿದರೆ, ನೀವು ಸಹನೆ-ಯುಕ್ತಿಯೊಂದಿಗೆ ಉತ್ತಮ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು. ಅದಕ್ಕಾಗಿ ಮೊತ್ತಮೊದಲು ನಿಮ್ಮ ಮಗುವಿನೊಂದಿಗೆ ಗೆಳೆತನದ ಬಾಂಧವ್ಯವವನ್ನು ಬಲಗೊಳಿಸಬೇಕು. ಬಳಿಕ ಮಗುವಿನಲ್ಲಿ ಸುರಕ್ಷತಾಭಾವವನ್ನು ಬೆಳೆಸಬೇಕು. ಒಂದು ವೇಳೆ ನಿಮ್ಮ ಮಗುವೇ ಜಗಳವನ್ನು ಆರಂಭಿಸಿದ್ದರೆ, ಇನ್ನೊಮ್ಮೆ ಹಾಗೆ ಮಾಡಬಾರದು ಎಂದು ತಿಳಿ ಹೇಳಬೇಕು. ಮಕ್ಕಳ ನಡುವಿನ ಜಗಳ ದೀರ್ಘಗೊಳ್ಳುವುದರಿಂದ ತಡೆಯಲು ಸಾದ್ಯಂತ ಪ್ರಯತ್ನಿಸಬೇಕು. ವಿನಾ ಕಾರಣ ನಿಮ್ಮ ಮಗುವಿನ ಸಮರ್ಥನೆ ಮಾಡುವುದರ ಬದಲು ಸಂಬಂಧಿತ ಮಕ್ಕಳೊಡನೆ ಉತ್ತಮ ರೀತಿಯಲ್ಲಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕು. ಇಷ್ಟೆಲ್ಲ ಮಾಡಿಯೂ ಒಂದು ವೇಳೆ ನಿಮ್ಮ ಮಗುವನ್ನು ಸತಾಯಿಸುವುದು ನಿಲ್ಲದಿದ್ದರೆ ಕೆಲವು ದಿನಗಳ ವರೆಗೆ ಮಗುವನ್ನು ಮನೆಯಲ್ಲಿಯೇ ತಡೆದಿರಿಸಿಕೊಳ್ಳಿರಿ ಮತ್ತು ಹೊರಗೆ ಹೋಗಬೇಕಾಗಿ ಬಂದರೆ ನಿಮ್ಮ ಜೊತೆಯಲ್ಲಿಯೇ ಕರಕೊಂಡು ಹೋಗಿರಿ. ಅಗತ್ಯ ತಲೆದೋರಿದರೆ ಸಂಬಂಧಿತ ಮಕ್ಕಳ ಮನೆಯವರೊಂದಿಗೆ ನಯವಾಗಿ ಮಾತನಾಡಿ ವಿಷಯವನ್ನು ಇನ್ನಷ್ಟು ಬಿಗಡಾಯಿಸುವುದರಿಂದ ತಡೆಯಬೇಕು. ಹೆಚ್ಚಿನ ವೇಳೆ ಮಕ್ಕಳ ಜಗಳವು ಹಿರಿಯರ ನಡುವೆ ವಿವಾದವನ್ನು ಹುಟ್ಟು ಹಾಕುತ್ತದೆ.

ಆದ್ದರಿಂದ ನಿಮ್ಮ ಮಕ್ಕಳಿಗೆ ಇತರ ಮಕ್ಕಳನ್ನು ಸತಾಯಿಸದಂತೆ ಮತ್ತು ಯಾರೊಂದಿಗೂ ಜಗಳ ಕಾಯದಂತೆ ತರಬೇತುಗೊಳಿಸಬೇಕು. ಅದರೊಂದಿಗೇ ಮಕ್ಕಳಲ್ಲಿ ಸುಧಾರಣೆಯ ಪ್ರತಿಭೆಯನ್ನು ಬೆಳೆಸಬೇಕು. ಹೀಗೆ ಅವರೊಡನೆ ಯಾರಾದರೂ ಜಗಳ ಕಾಯ್ದರೆ ಅವರೇ ಸ್ವತಃ ಸಂಬಂಧ ಸುಧಾರಿಸಿಕೊಳ್ಳುವರು.

10.       ಮಕ್ಕಳಿಗೆ ನೆರೆಕರೆಯ ಮೇರೆ ಮತ್ತು ಶಿಷ್ಟಾಚಾರವನ್ನು ಕಲಿಸುವುದು ಹೆತ್ತವರ ಪ್ರಮುಖ ಹೊಣೆಗಾರಿಕೆಯಾಗಿದೆ. ಇತರರ ಮನೆಯ ಮುಂದೆ ಜೋರಾಗಿ ಬೊಬ್ಬೆ ಹೊಡೆಯುವುದು ಅಥವಾ ಏರುದನಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅವರಿಗೆ ತಿಳಿ ಹೇಳಬೇಕು. ಅದೇ ರೀತಿ ನೆರೆಮನೆಯವರು ಒಣಗಲು ಹಾಕಿದ ಬಟ್ಟೆ ಎಳೆಯುವುದು, ಅವರ ಗಿಡಗಳಿಗೆ ಹಾನಿಯುಂಟು ಮಾಡುವುದು ಅಥವಾ ಬೇಕುಬೇಕೆಂದೇ ಅವರ ಮನೆಯ ಕರೆಗಂಟೆ ಬಾರಿಸಿ ಅವರಿಗೆ ತೊಂದರೆ ಕೊಡುವುದು ಇತ್ಯಾದಿಗಳೆಲ್ಲವೂ ಅಸಭ್ಯ ಕೆಲಸಗಳಾಗಿವೆ ಎಂದು ಹೇಳಿ ಕೊಡಬೇಕು. ಜತೆಗೆ ಇತರ ಸ್ಥಳ(ಕಛೇರಿ)ಗಳಿಗೂ ಬೆಲೆ ಕೊಡಬೇಕು ಎಂದು ಮಕ್ಕಳಿಗೆ ಹೇಳಿ ಕೊಡಬೇಕು. ಈ ತರಬೇತಿಯ ಮೂಲಕ ಇತರರಿಗೆ ತೊಂದರೆ ಕೊಡದೆ ಶಾಂತ ರೀತಿಯಲ್ಲಿ ಮತ್ತು ಸಭ್ಯ ರೂಪದಲ್ಲಿ ಇರುವುದೂ ಉತ್ತಮ ಮಾನವ ಹಾಗೂ ಉತ್ತಮ ನೆರೆಕರೆಯವರ ಗುರುತಾಗಿದೆ ಎಂಬುದನ್ನು ಕಂಡುಕೊಳ್ಳುವರು.

11.       ಒಂದು ವೇಳೆ ನೆರೆಕರೆಯವರು ಮಕ್ಕಳೊಂದಿಗೆ ಏನಾದರೂ ಸಹಾಯ ಕೇಳಿದರೆ, ಅವರಿಗೆ ಸಹಕಾರ ನೀಡಲು ಮಕ್ಕಳಿಗೆ ತಿಳಿಸಿಕೊಡಬೇಕು. ಉದಾಹರಣೆಗೆ, ಅಂಗಡಿಯಿಂದ ಸಾಮಾನು ತರುವುದು, ಕಟ್ಟುಗಳನ್ನು ಎತ್ತುವುದು ಅಥವಾ ಕಸ ಎಸೆಯುವುದು ಇತ್ಯಾದಿ. ಈ ಪ್ರಕಾರ ಮಕ್ಕಳು ಇತರರಿಗೆ ಸಹಾಯ ಮಾಡುವುದು ಮತ್ತು ನೆರೆಕರೆಯವರಿಗೆ ಸೌಲಭ್ಯ ಒದಗಿಸಿ ಕೊಡುವುದನ್ನು ಕಲಿಯುವರು.

12.       ನೆರೆಯವರು ರೋಗಪಿಡಿತರಾದರೆ, ಮನೆಯ ಹಿರಿಯರು ಅವರ ಶುಶ್ರೂಷೆಗೆ ಹೋಗಬೇಕು. ಯಾರಾದರೂ ಮರಣ ಹೊಂದಿದರೆ, ಸಂತಾಪ ಸೂಚಿಸಲು ಹೋಗಬೇಕು. ಅಲ್ಲದೆ ನಿಮ್ಮಿಂದ ಸಾಧ್ಯವಿದ್ದಷ್ಟು ಅವರಿಗೆ ಸಹಕಾರ ನೀಡಬೇಕು. ಈ ಮೂಲಕ ನಿಮ್ಮ ಮಕ್ಕಳಿಗೆ ಸಂಕಷ್ಟ ಮತ್ತು ದುಃಖದ ವೇಳೆ ನೆರೆಕರೆಯವರಿಗೆ ಯಾವ ರೀತಿ ನೆರವಾಗಬೇಕು ಎಂಬುದನನು ಮಕ್ಕಳು ಕಲಿಯುವಂತಾಗಬೇಕು.

ಒಂದು ವೇಳೆ ನೆರೆಮನೆಯಲ್ಲಿ ಏನಾದರೂ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಅವರ ಸಂತೋಷದಲ್ಲಿ ಭಾಗಿಯಾಗಬೇಕು ಮತ್ತು ಅವರಿಗಾಗಿ ಉಡುಗೊರೆಗಳನ್ನೂ ಕೊಂಡು ಹೋಗಬೇಕು. ಇದರಿಂದ ನಿಮ್ಮ ಮಕ್ಕಳು ನೆರೆಯವರ ಸಂತೋಷದಲ್ಲಿ ಹೇಗೆ ಪಾಲುಗೊಳ್ಳುವುದು ಎಂಬುದನ್ನು ಅರಿಯುವರು.

13.       ಮಕ್ಕಳ ಮುಂದೆ ನೆರೆಕರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು, ಅವರ ಬಗ್ಗೆ ಹಿಂದಾಡಬಾರದು. ಇದರಿಂದ ನಿಮ್ಮ ಮಕ್ಕಳ ಮನದಲ್ಲಿ ನೆರೆಕರೆಯವರ ಮೇಲೆ ಗೌರವ ಇಲ್ಲದಾಗುತ್ತದೆ ಮತ್ತು ಅವರಿಗೆ ಸಂಬಂಧಿಸಿ ಕೆಟ್ಟ ಗುಮಾನಿ ಇರಿಸಿಕೊಳ್ಳಬಹುದು.

14.       ನೆರೆಯ ಮನೆಯನ್ನು ಪ್ರವೇಶಿಸುವಾಗ ಅವರ ಅನುಮತಿಯನ್ನು ಪಡಕೊಳ್ಳಬೇಕು ಎಂದು ಮಕ್ಕಳಿಗೆ ಕಲಿಸಬೇಕು. ಮಕ್ಕಳು ನೆರೆಯ ಮನೆಗೆ ಹೋಗಿ ನೆರೆಯವರಿಗೆ ಇಷ್ಟವಿಲ್ಲದಂತಹ ಕೃತ್ಯವನ್ನು ಎಸಗದಂತೆ ತರಬೇತುಗೊಳಿಸಬೇಕು. ಉದಾಹರಣೆಗೆ, ಬೆಡ್‌ರೂಮ್ ಅಥವಾ ಕಿಚನ್‌ಗೆ ಹೋಗುವುದು, ಪರದೆ ಹಿಡಿದು ಎಳೆಯುವುದು, ಸೋಫಾದಲ್ಲಿ ಜಿಗಿದಾಡುವುದು, ಕಂಪ್ಯೂಟರ್ ಆನ್ ಮಾಡುವುದು ಇತ್ಯಾದಿ. ನಿಮ್ಮ ಮಕ್ಕಳು ಇಡೀ ದಿನ ನೆರೆಮನೆಯಲ್ಲಿರುವುದೂ ಒಳ್ಳೆಯದಲ್ಲ. ಆದ್ದರಿಂದ ನೆರೆಯವರೊಂದಿಗೆ ಚರ್ಚಿಸಿ ಮಕ್ಕಳಿಗೆ ಒಂದು ಸೂಕ್ತ ಸಮಯವನ್ನು ನಿಗದಿ ಪಡಿಸುವುದು ಉತ್ತಮ.

15.       ಮಕ್ಕಳು ನೆರೆಯ ಮಕ್ಕಳೊಂದಿಗೆ ಉತ್ತಮ ಆಟ ಆಡಲು, ಪ್ರಯೋಜನಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವರಿಗೆ ಉತ್ತಮ ತರಬೇತಿ ನೀಡಬೇಕು. ಅವರಿಗೆ ಉಪದೇಶ ನೀಡಬೇಕು ಮತ್ತು ಅವರು ಅಪ್ಪಿತಪ್ಪಿಯೂ ಕೆಟ್ಟ ವೀಡಿಯೋಗಳನ್ನು ನೋಡದಂತೆ, ಕೆಟ್ಟ ಆಟದಲ್ಲಿ ಶಾಮೀಲಾಗದಂತೆ ಅವರ ಮೇಲೆ ನಿಗಾ ಇರಿಸಬೇಕು. ಈ ಮೂಲಕ ಮೊಹಲ್ಲ ಮತ್ತು ನೆರೆಕರೆಯ ಉತ್ತಮ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮತ್ತು ಕೆಡುಕಿನಿಂದ ದೂರವಿರಲು ಕಲಿತುಕೊಳ್ಳುವರು.

16.       ಒಂದು ವೇಳೆ ನೆರೆಯ ಯಾವುದಾದರೂ ಮನೆಯವರ ನೈತಿಕತೆ ಚೆನ್ನಾಗಿಲ್ಲದಿದ್ದರೆ, ಮಕ್ಕಳನ್ನು ಅವರ ಚಾರಿತ್ರ್ಯ ಮತ್ತು ಕೇಡಿನಿಂದ ರಕ್ಷಿಸಲು ಅವರನ್ನು ಆ ನೆರೆಯವರೊಂದಿಗೆ ಬೆರೆಯುವುದನ್ನು ಕಡಿಮೆಗೊಳಿಸಬೇಕು. ಈ ಮೂಲಕ ಮಕ್ಕಳು ಕೆಟ್ಟ ನೆರೆಯವರ ಕೇಡಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಅರಿತುಕೊಳ್ಳುವರು. ಇದರ ಹೊರತಾಗಿ, ನಿಮ್ಮ ಆ ನೆರೆಯವರ ನೈತಿಕ ತರಬೇತಿಯ ಕರ್ತವ್ಯದಿಂದ ಅಲಕ್ಷ್ಯರಾಗಿರಲೂ ಬಾರದು.

17.       ಮಕ್ಕಳು ನೆರೆಯವರಿಂದ ಏನನ್ನು ಕಲಿಯುತ್ತಾರೆ ಎಂಬುದರ ಮೇಲೆ ನಿಗಾ ಇರಿಸಬೇಕು. ಎಲ್ಲ ಭಾಷೆಗಳು, ಪದಗಳು, ಉಚ್ಚಾರಗಳು ಮತ್ತು ಸಂಸ್ಕೃತಿಯು ನಿಮ್ಮ ಮಟ್ಟಿಗೆ ಅಂಗೀಕರಾರ್ಹ ಆಗಿರಬೇಕೆಂದೇನಿಲ್ಲ. ಮಕ್ಕಳಿಗೆ ಉತ್ತಮ ಅಭ್ಯಾಸ, ರೀತಿ-ನೀತಿ ಮತ್ತು ಪದಗಳನ್ನು ಕಲಿಯಲು ಹಾಗೂ ಕೆಟ್ಟ ಅಭ್ಯಾಸ ಅಥವಾ ಪದಗಳನ್ನು ತೊರೆಯಲು ತರಬೇತಿ ನೀಡಬೇಕು. ಆದ್ದರಿಂದ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ relearning ಮತ್ತು unlearningಗಳನ್ನು ಕಲಿಸಬೇಕು. ಅದರಿಂದ ಅವರು ಎಂತಹುದೇ ಸಾಂಗತ್ಯ ಹೊಂದಲಿ ಹಾಗೂ ಎಂತಹ ನೆರೆಕರೆಯವರನ್ನೇ ಹೊಂದಿರಲಿ, ಅವರು ತಮ್ಮ ಸುಧಾರಣೆ, ಸೃಜನಾತ್ಮಕತೆಯಲ್ಲಿ ಅಚಲರಾಗಿರುತ್ತಾರೆ.

18.       ಒಂದು ವೇಳೆ ನೆರೆಕರೆಯಲ್ಲಿ ವೃದ್ಧರು ಮತ್ತು ಅಂಗವಿಕಲರು ಇದ್ದರೆ, ಮಕ್ಕಳಿಗೆ ಅವರ ಬಗ್ಗೆ ಸಹಾನುಭೂತಿ ಹೊಂದಲು ಹಾಗೂ ಅವರನ್ನು ಗೌರವಿಸಲು ಕಲಿಸಬೇಕು. ಇದರಿಂದ ಮಕ್ಕಳಲ್ಲಿ ಮಾನವೀಯ ಭಾವನೆಯು ಪೋಷಣೆ ಪಡೆಯುತ್ತದೆ.

19.       ನೆರೆಕರೆಯವರಿಗೆ ಸಲಾಮ್ ಹೇಳಬೇಕು ಮತ್ತು ವಿನಮ್ರವಾಗಿ ಸಂಭಾಷಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕು. ನೆರೆಕರೆಯವರೊಂದಿಗೆ ನಿರ್ಲಿಪ್ತತೆ ಮತ್ತು ಉಪೇಕ್ಷೆಯ ವರ್ತನೆ ತೋರುವುದು ಅಸಭ್ಯತೆಯಾಗಿದೆ.

ಉಪಸಂಹಾರ:

‘It takes a village to raise a child’

ಈ ಪ್ರಸಿದ್ಧ ಉಕ್ತಿಯ ತಾತ್ಪರ್ಯವೇನೆಂದರೆ, ಒಂದು ಮಗುವಿನ ಯಶಸ್ವಿ ಮತ್ತು ಅತ್ಯುತ್ತಮ ತರಬೇತಯಲ್ಲಿ ಅದರ ಮಾತಾಪಿತರಲ್ಲದೆ ಸುತ್ತಮುತ್ತಲಿನ ವ್ಯಕ್ತಿಗಳು ಅರ್ಥಾತ್ ಬಂಧುಬಳಗ, ಮಿತ್ರರು, ಅಧ್ಯಾಪಕರು ಮತ್ತು ನೆರೆಕರೆಯವರ ಪಾತ್ರವೂ ಇರುತ್ತದೆ. ಯಾವ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೋ ಅವರ ಮಾತಾಪಿತರಿಗೆ ಸಹಕಾರ ನೀಡಬೇಕು ಮತ್ತು ಆ ಮಕ್ಕಳ ಮೇಲೆ ಇತ್ಯಾತ್ಮಕ ಪ್ರಭಾವ ಬೀರಲು ಪ್ರಯತ್ನಿಸಬೇಕು. ಈ ಮೂಲಕ ನಿಮ್ಮ ಮಕ್ಕಳೂ ಪರಹಿತಚಿಂತನೆ ಕಲಿಯುತ್ತಾರೆ.

ನಮ್ಮ ಮೊಹಲ್ಲವು ನಮ್ಮ ದೊಡ್ಡ ಸಮಾಜದ ಒಂದು ಸಣ್ಣ ರೂಪವಾಗಿದೆ. ಇಲ್ಲಿ ಮಕ್ಕಳ ಮಟ್ಟಿಗೆ ವಿವಿಧ ರೀತಿಯ ಪಾತ್ರಗಳು ಮತ್ತು ವಿಧಾನಗಳು ಕಾಣಸಿಗುತ್ತವೆ. ಮಕ್ಕಳು ತಮ್ಮ ನೆರೆಕರೆಯವರಿಂದ ಬಹಳಷ್ಟನ್ನು ಕಲಿಯುತ್ತಾರೆ; ಇವೇ ಸಾಮಾಜಿಕ ಬಂಧುತ್ವದಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಹಾಗಾಗಿ ಸಮಾಜದಲ್ಲಿ ಮಕ್ಕಳ ಪಾತ್ರ ಬಹಳ ಹಿರಿದು ಮತ್ತು ಅವರು ಅದನ್ನು ಚೆನ್ನಾಗಿ ನಿಭಾಯಿಸಬೇಕು ಎಂದು ಹೆತ್ತವರು ತಮ್ಮ ಮಕ್ಕಳಿಗೆ ತರಬೇತಿ ನೀಡಬೇಕು. ಆದ್ದರಿಂದ ಮಾತಾಪಿತರು ತಮ್ಮ ನೆರೆಕರೆಯವರೊಂದಿಗಿನ ಸಂಬಂಧವನ್ನು ಯುಕ್ತಿ ಮತ್ತು ಸದುದ್ದೇಶದಿಂದ ನಿಭಾಯಿಸುವಾಗ ಸ್ವತಃ ತಮ್ಮ ಧಾರ್ಮಿಕ ಕರ್ತವ್ಯವನ್ನು ನಿರ್ವಹಿಸುವುದಷ್ಟೇ ಅಲ್ಲ, ಬದಲಾಗಿ ತಮ್ಮ ಮಕ್ಕಳಿಗೂ ಸಾಮಾಜಿಕ ಪ್ರಜ್ಞೆಯನ್ನು ಕಲಿಯಲು ವೇದಿಕೆಯನ್ನು ಕಲ್ಪಿಸುತ್ತಾರೆ.

(ಅನುವಾದ: ಅಬೂ ಆಫಿಯಾ)

Leave a Reply