ಇಸ್ಲಾಮ್‌: ಒಂದು ದೈವಿಕ ಅನುಗ್ರಹ

0
1002528624

ಲೇಖಕರು: ಉಬೈದ್ ಉರ್ ರೆಹಮಾನ್

ಅತ್ಯಮೂಲ್ಯ ಉಡುಗೊರೆ:

ನೀವು ಇದುವರೆಗೆ ಪಡೆದ ಅತ್ಯಂತ ಸಂತೋಷದಾಯಕ ಉಡುಗೊರೆಯನ್ನು ನೆನಪಿಸಿಕೊಳ್ಳಿರಿ. ಅದು ಒಂದು ಕಲಾಕೃತಿಯೋ? ಅಥವಾ ಯಾವುದಾದರೂ ಧಿರಿಸೋ? ಆಗಿದ್ದಿರಬಹುದು. ಒಮ್ಮೆ ಅವಲೋಕಿಸಿ ನೋಡಿರಿ: ಒಬ್ಬ ಮುಸ್ಲಿಮನಾಗಿ, ನಿಮಗೆ ಇರುವ ಅತ್ಯಂತ ಶ್ರೇಷ್ಠ ಕೊಡುಗೆ ಅಥವಾ ಅನುಗ್ರಹ ಯಾವುದು?

ಈ ಜಗತ್ತಿನಲ್ಲಿ ಅಲ್ಲಾಹನು ನಮಗೆ ದಯಪಾಲಿಸಿದ ಶ್ರೇಷ್ಠ ಅನುಗ್ರಹ ಇಸ್ಲಾಮ್‌ ಆಗಿದೆ ಎಂದು ನಮ್ಮಲ್ಲಿ ಅನೇಕರು ಪ್ರಾಮಾಣಿಕವಾಗಿ ನಂಬುತ್ತಾರೆ.

ಅಲ್ಲಾಹನು ಸ್ವತಃ ಇಸ್ಲಾಮನ್ನು ತನ್ನ ದಾಸರಿಗಾಗಿ ನೀಡಿದ ಅತ್ಯಮೂಲ್ಯ ಉಡುಗೊರೆ ಎಂದು ವಿವರಿಸುತ್ತಾನೆ:

ಇಂದು ನಾನು ನಿಮ್ಮ ಧರ್ಮವನ್ನು ನಿಮಗಾಗಿ ಪರಿಪೂರ್ಣಗೊಳಿಸಿದ್ದೇನೆ. ನನ್ನ ಕೊಡುಗೆಯನ್ನು ನಿಮ್ಮ ಮೇಲೆ ಪರಿಪೂರ್ಣಗೊಳಿಸಿದ್ದೇನೆ ಮತ್ತು ಇಸ್ಲಾಮನ್ನು ನಿಮ್ಮ ಧರ್ಮ ಎಂಬ ನೆಲೆಯಲ್ಲಿ ಅಂಗೀಕರಿಸಿದ್ದೇನೆ.” (ಅಲ್-ಮಾಇದ 5: 3)

ವಿಶ್ವಾಸದ ನೈಜ ಅರ್ಥ:

ಈ ಅಗಾಧವಾದ ಅನುಗ್ರಹವನ್ನು ಸರಿಯಾದ ರೀತಿಯಲ್ಲಿ ಪ್ರಶಂಸಿಸಬೇಕೆಂದರೆ, ಅಲ್ಲಾಹನೆಡೆಗೆ ಇರುವ ಕರ್ತವ್ಯಗಳನ್ನು ನಾವು ಪೂರೈಸಬೇಕು. ಅಂದರೆ, ನಾವು ನೈಜ ಮುಸ್ಲಿಮರಾಗುವ ಮೂಲಕ ಈ ಕೆಲಸವನ್ನು ಮಾಡಬಹುದು. ಆದರೆ ನೈಜ ಮುಸ್ಲಿಮ್‌ ಎಂದರೆ ಏನು?

ಒಂದು ಮೂಲಭೂತ ಅಂಶದಿಂದ ಈ ಚರ್ಚೆಯನ್ನು ಪ್ರಾರಂಭಿಸೋಣ. ಈ ವಿಚಾರವಿಲ್ಲದೇ ವಿಶ್ವಾಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

ಮೊದಲನೆಯದಾಗಿ, ಒಬ್ಬ ವ್ಯಕ್ತಿಯು ಹುಟ್ಟಿನಿಂದ ಮುಸ್ಲಿಮ್‌ ಆಗಲು ಸಾಧ್ಯವೇ?

ಇಂಗ್ಲಿಷನೊಬ್ಬನ ಮಗ ಇಂಗ್ಲಿಷನೇ ಆಗುವಂತೆ ಅಥವಾ ಬಿಳಿಯ ವ್ಯಕ್ತಿಯ ಮಗ ಬಿಳಿ ಮನುಷ್ಯನಾಗಿ ಹುಟ್ಟುವಂತೆಯೇ, ಒಬ್ಬ ವ್ಯಕ್ತಿ ಮುಸ್ಲಿಮ್‌ ಕುಟುಂಬದಲ್ಲಿ ಜನಿಸಿದ ಮಾತ್ರಕ್ಕೆ ಆ ವ್ಯಕ್ತಿ ಮುಸ್ಲಿಮ್‌ ಆಗಿರುತ್ತಾನೆಯೇ?

ಕೇವಲ ಮುಸ್ಲಿಮ್‌ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ನೈಜ ಮುಸ್ಲಿಮ್‌ ಆಗುವುದಿಲ್ಲ. ಇದು ಆನುವಂಶಿಕವಾಗಿ ಬರುವ ವಿಷಯವಲ್ಲ; ವ್ಯಕ್ತಿಯ ವಿಚಾರ ಮತ್ತು ಕರ್ಮಗಳನ್ನು ಪರಿಗಣಿಸುವುದು ಅಗತ್ಯವಾಗಿದೆ. ಇದು ಕೇವಲ ಪೋಷಕರಿಂದ ಬಂದ ಲೇಬಲ್ ಅಥವಾ ಸಾಂಸ್ಕೃತಿಕ ಗುರುತಲ್ಲ, ಇಸ್ಲಾಮಿನ ಬೋಧನೆಗಳ ಪ್ರಕಾರ ಬದುಕಲು ನಡೆಸುವ ನಿರಂತರ ಪ್ರಯತ್ನ ಮತ್ತು ಹೋರಾಟವಾಗಿದೆ.

ಎರಡನೆಯದಾಗಿ, ಇದು ಕೇವಲ ಮೌಖಿಕ ವೃತ್ತಿಯೇ?

ಕೇವಲ, ‘ನಾನು ಮುಸ್ಲಿಮ್‌’ ಎಂದು ಹೇಳುವುದರಿಂದ ಒಬ್ಬ ನೈಜ ಮುಸ್ಲಿಮ್‌ ಆಗುತ್ತಾನೆಯೇ? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ‘ಇಲ್ಲ’ ಎಂದಾಗಿದೆ. ಬದಲಿಗೆ, ಪ್ರವಾದಿ ಮುಹಮ್ಮದ್ (ಸ) ಕಲಿಸಿದ್ದನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ಒಪ್ಪಿಕೊಂಡು ಅದರ ಪ್ರಕಾರ ಜೀವನ ನಡೆಸುವ ಒಬ್ಬನು ನೈಜ ಮುಸ್ಲಿಮ್‌ ಆಗುತ್ತಾನೆ.

ಆದ್ದರಿಂದ, ಇಸ್ಲಾಮ್‌ ಮೊದಲನೆಯದಾಗಿ ಜ್ಞಾನದಿಂದಲೂ ಮತ್ತು ಎರಡನೆಯದಾಗಿ, ಆ ಜ್ಞಾನವನ್ನು ಆಚರಣೆಗೆ ತರುವುದರಿಂದಲೂ ಕೂಡಿದೆ. ಪ್ರಜ್ಞಾಪೂರ್ವಕ ಮುಸ್ಲಿಮ್‌ ಆಗಲು ಜ್ಞಾನವು ಮೊದಲ ಹೆಜ್ಜೆ; ಒಬ್ಬನು ಮುಸ್ಲಿಮನಾಗಿದ್ದು, ಅಜ್ಞಾನದಲ್ಲಿ ಉಳಿದು ಬಿಡುವುದು ಅಸಾಧ್ಯ.

ಸಂಪೂರ್ಣ ಅಜ್ಞಾನದಲ್ಲಿರುವ ವ್ಯಕ್ತಿಯ ಉದಾಹರಣೆಯು, ದಟ್ಟ ಕತ್ತಲೆಯ ಹಾದಿಯಲ್ಲಿ ನಡೆಯುವ ವ್ಯಕ್ತಿಯಂತಿದೆ. ಆತನ ಹೆಜ್ಜೆಗಳು ಅವನ ಅರಿವಿಲ್ಲದೆ ದಾರಿಯಿಂದ ಬೇರೆಡೆಗೆ ಅಥವಾ ಮತ್ತೊಂದು ಹಾದಿಗೆ ಸಾಗಿಬಿಡುವ ಸಾಧ್ಯತೆಯೇ ಹೆಚ್ಚು. ಬಹುಶಃ ಅವನು ಶೈತಾನನ ಸಿಹಿ ಮಾತುಗಳಿಗೆ ಮರುಳಾಗಿಬಿಡಬಹುದು.

ಆದ್ದರಿಂದ, ಒಬ್ಬ ಮುಸ್ಲಿಮನು ಕನಿಷ್ಠವಾಗಿ ಕುರ್‌ಆನಿನ ಬೋಧನೆಗಳ ಸಾರವನ್ನು ಮತ್ತು ಅದು ಯಾವ ಉದ್ದೇಶಕ್ಕಾಗಿ ಅವತೀರ್ಣಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನವನ್ನು ಪಡೆಯಲೇಬೇಕು.

ಇಸ್ಲಾಮ್‌ ಎಂದರೆ ದೇವರಿಗೆ ಸಂಪೂರ್ಣ ಶರಣಾಗತಿ ಎಂದೂ, ಕುಫ್ರ್‌ (Kufr) ಎಂದರೆ ದೇವನನ್ನು ನಿರಾಕರಿಸುವುದು ಮತ್ತು ಅವಿಧೇಯತೆ ತೋರಿಸುವುದು ಎಂದರ್ಥ.

ಒಬ್ಬ ಮುಸ್ಲಿಮ್‌ ತನ್ನ ಪ್ರಭುವನ್ನು ಗುರುತಿಸುವುದರಿಂದ, ಆತನ ಆಜ್ಞೆಗಳನ್ನು ಪಾಲಿಸುವುದರಿಂದ ಮತ್ತು ಅವನಿಗೆ ಅವಿಧೇಯನಾಗುವುದರ ಪರಿಣಾಮಗಳಿಗೆ ಹೆದರುವುದರ ಮೂಲಕ ಯೋಗ್ಯನಾಗುತ್ತಾನೆ.

ನೆನಪಿಡಿರಿ, ಮೊದಲ ಹೆಜ್ಜೆ ಜ್ಞಾನವನ್ನು ಗಳಿಸುವುದು – ಅಂದರೆ, ಆ ಪ್ರಭು ಯಾರು? ಆತನ ಆಜ್ಞೆಗಳೇನು? ಯಾವ ಕಾರ್ಯಗಳು ಆತನ ಸಂಪ್ರೀತಿಯಲ್ಲಿದೆ ಮತ್ತು ಯಾವ ಕಾರ್ಯಗಳು ಆತನ ನಿರಾಶೆಯಲ್ಲಿದೆ? ಎಂದು ತಿಳಿಯುವುದು. ಎರಡನೆಯ ಹೆಜ್ಜೆ – ದೇವನ ಬಯಕೆಗಳ ಮುಂದೆ ನಿಮ್ಮ ಇಚ್ಛೆಗಳನ್ನು ಬಿಟ್ಟುಕೊಡುವುದರ ಮೂಲಕ ಯಜಮಾನನ ನೈಜ ದಾಸರನ್ನಾಗಿ ನಿಮ್ಮನ್ನ ನೀವು ಮಾಡಿಕೊಳ್ಳುವುದು. ನೀವು ದೇವನನ್ನು ಹೆಚ್ಚು ಅರಿತಂತೆ ಮತ್ತು ಆತನ ಆಜ್ಞೆಗಳನ್ನು ಹೆಚ್ಚು ಪಾಲಿಸಿದಂತೆ, ಆತನ ದೃಷ್ಟಿಯಲ್ಲಿ ನೀವು ಹೆಚ್ಚು ಗೌರವಾನ್ವಿತರಾಗುತ್ತೀರಿ.

ಸರ್ವಶಕ್ತನಾದ ಅಲ್ಲಾಹನು ಲಂಚ ಕೊಡುವ ಮತ್ತು ತೆಗೆದುಕೊಳ್ಳುವ ಎಲ್ಲರಿಗೂ ನರಕವನ್ನು ನೆಲೆಯೆಂದು ಘೋಷಿಸಿದ್ದಾನೆ, ಬಡ್ಡಿ ನೀಡುವ ಮತ್ತು ಪಡೆಯುವವರನ್ನು ಮಹಾಪಾಪಿಗಳೆಂದು ಖಂಡಿಸಿದ್ದಾನೆ, ಮಾನಹಾನಿಯನ್ನು ಖಂಡಿಸಿದ್ದಾನೆ ಮತ್ತು ಅಶ್ಲೀಲ ವರ್ತನೆಗೆ ತೀವ್ರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರೂ ಸಹ, ನಾವು ದೇವನ ಅಸಮ್ಮತಿಯ ಬಗ್ಗೆ ಸಂಪೂರ್ಣವಾಗಿ ಭಯವಿಲ್ಲದವರಂತೆ ಈ ದುರ್ಗುಣಗಳಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳುತ್ತೇವೆ.

ಕುರ್‌ಆನ್ – ಏಕೈಕ ಮಾರ್ಗದರ್ಶಿ:

ಈ ಜಗತ್ತಿನಲ್ಲಿ ಮುಸ್ಲಿಮರು ಮಹಾಅದೃಷ್ಟಶಾಲಿಗಳು. ಯಾಕೆಂದರೆ, ಪ್ರವಾದಿ ಮುಹಮ್ಮದ್(ಸ) ರವರಿಗೆ ದಿವ್ಯವಾಣಿ ಮೂಲಕ ಅವತೀರ್ಣಗೊಂಡ ಅದೇ ರೂಪದಲ್ಲಿ, ಯಾವುದೇ ಹಸ್ತಕ್ಷೇಪ ಇಲ್ಲದೇ, ತನ್ನ ಮೂಲ ಸ್ವರೂಪದಲ್ಲಿ ಸಂರಕ್ಷಿಸಲ್ಪಟ್ಟ ದೇವವಾಣಿಯನ್ನು ಹೊಂದಲು ಮುಸ್ಲಿಮರಿಗೆ ಸಾಧ್ಯವಾಗಿದೆ.

ಈ ಗ್ರಂಥದೊಂದಿಗೆ ನಮ್ಮ ವರ್ತನೆಯ ಬಗ್ಗೆ ಒಂದು ನಿಮಿಷ ಆಲೋಚನೆ ಮಾಡಿರಿ.

ಅನೇಕ ಮುಸ್ಲಿಮರಿಗೆ ಕುರ್‌ಆನ್‌ ತಮ್ಮ ಮನೆಗಳಲ್ಲಿ ಪ್ರೇತಬಾಧೆಯನ್ನು ಓಡಿಸಲು ಅಥವಾ ಕುರ್‌ಆನಿನ ವಿಚಾರಗಳನ್ನು ಯಾವುದೇ ರೀತಿಯಲ್ಲಿ ವಿವೇಚಿಸದೇ ಕೇವಲ ಓದಿ ಪುಣ್ಯಗಳಿಸುವುದಕ್ಕೆ ಮಾತ್ರ ಸೀಮಿತವಾಗಿ ಉಳಿದಿದೆ.

ನಮ್ಮ ಅಸ್ತಿತ್ವ ಮತ್ತು ನಡವಳಿಕೆಯ ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಲು ನಾವು ಈ ಗ್ರಂಥದ ಕಡೆಗೆ ತಿರುಗುವುದನ್ನೇ ಮರೆತುಬಿಟ್ಟಿದ್ದೇವೆ.

ಕುರ್‌ಆನ್ ಮನುಷ್ಯರಿಗೆ ನೀಡಿದ್ದು, ಅದನ್ನು ಓದಲು, ಅರ್ಥಮಾಡಿಕೊಳ್ಳಲು, ಅದರ ಮೇಲೆ ಕಾರ್ಯನಿರ್ವಹಿಸಲು ಮತ್ತು ಅದರ ಸಹಾಯದಿಂದ ದೇವನ ಈ ಭೂಮಿಯ ಮೇಲೆ ಆತನ ಕಾನೂನಿನ ಆಡಳಿತವನ್ನು ಸ್ಥಾಪಿಸಲು. ಕುರ್‌ಆನ್ ಮನುಷ್ಯನಿಗೆ ಘನತೆ ಮತ್ತು ಶಕ್ತಿಯನ್ನು ನೀಡಲು ಬಂದಿದೆ. ಮನುಷ್ಯನನ್ನು ಭೂಮಿಯ ಮೇಲೆ ದೇವನ ನೈಜ್ಯ ಪ್ರತಿನಿಧಿಗಳನ್ನಾಗಿ (vicegerents) ಮಾಡಲು ಬಂದಿದೆ. ಇತಿಹಾಸವು ಸಾಕ್ಷಿಯಾಗಿರುವಂತೆ, ಜನರು ಕುರ್‌ಆನಿನ ಮಾರ್ಗದರ್ಶನದ ಪ್ರಕಾರ ಕಾರ್ಯನಿರ್ವಹಿಸಿದಾಗಲೆಲ್ಲಾ, ಅದು ಅವರನ್ನು ಜಗತ್ತಿನ ನಾಯಕರನ್ನಾಗಿ ಮಾಡಿದೆ.

ಯಾರಾದರೂ ವೈದ್ಯರ ಚೀಟಿಯನ್ನು (prescription) ಸ್ವೀಕರಿಸಿ, ಅದನ್ನು ಬಟ್ಟೆಯಲ್ಲಿ ಸುತ್ತಿ ತಮ್ಮ ಕುತ್ತಿಗೆಗೆ ನೇತುಹಾಕಿದರೆ ಅಥವಾ ಅದನ್ನು ನೀರಿನಲ್ಲಿ ತೊಳೆದು ಕುಡಿದರೆ ಹೇಗಿರುತ್ತೆ ಎಂದು ಊಹಿಸಿ. ಅಂತಹ ನಡವಳಿಕೆ ನಿಮಗೆ ಹಾಸ್ಯಾಸ್ಪದ ಮತ್ತು ಮೂರ್ಖತನವೆನಿಸುವುದಿಲ್ಲವೇ? ವೈದ್ಯರ ಚೀಟಿಯನ್ನು ಅನುಸರಿಸಲು ನೀಡಲಾಗುತ್ತದೆ, ಕೇವಲ ಒಂದು ಮೋಡಿವಸ್ತುವಾಗಿ ಪರಿಗಣಿಸಲು ಅಲ್ಲ ಎಂಬುದನ್ನು ನಾವು ಅರಿತುಕೊಳ್ಳಲು ವಿಫಲರಾಗಿದ್ದೇವೆ.

ಹಾಗೆಯೇ, ನಿಮಗೆ ಅರ್ಥವಾಗದ ಭಾಷೆಯಲ್ಲಿ ವ್ಯಾಪಾರ ಪತ್ರವೊಂದು ಬಂದರೆ, ಅದನ್ನು ಭಾಷಾಂತರಿಸಲು ಭಾಷೆ ತಿಳಿದಿರುವವರನ್ನು ನೀವು ಹುಡುಕುತ್ತೀರಿ. ಅದು ಕೇವಲ ಲೌಕಿಕ ಲಾಭವನ್ನು ತಂದರೂ ಸಹ, ನೀವು ಅರ್ಥಮಾಡಿಕೊಳ್ಳಲು ಉತ್ಸುಕರಾಗಿರುತ್ತೀರಿ.

ಈ ಸಂಗತಿಗಳ ಬಗ್ಗೆ ಯೋಚಿಸಿ, ಆಗ ಕುರ್‌ಆನ್‌ಗೆ ತಾವು ಮಾಡುತ್ತಿರುವ ದೊಡ್ಡ ಅನ್ಯಾಯ ಅರಿವಾಗುತ್ತದೆ. ವಿಪರ್ಯಾಸವೆಂದರೆ, ಕುರ್‌ಆನ್‌ನಲ್ಲಿ ತಮ್ಮ ನಂಬಿಕೆಯನ್ನು ಮತ್ತು ಅದಕ್ಕಾಗಿ ತ್ಯಾಗ ಮಾಡಲು ತಮ್ಮ ಇಚ್ಛೆಯನ್ನು ಘೋಷಿಸುವವರೇ ಆಗಾಗ್ಗೆ ಅದಕ್ಕೆ ಅಗೌರವ ತೋರುತ್ತಾರೆ. ಕುರ್‌ಆನ್‌ ಬಗ್ಗೆ ಆಳವಾದ ಪ್ರೀತಿಯಿದ್ದರೂ, ಅವರು ಅದನ್ನು ಅಗೌರವದಿಂದ ನಿರ್ವಹಿಸುತ್ತಾರೆ, ಇದು ಕೆಲವೊಂದು ಅಡ್ಡ ಪರಿಣಾಮಗಳಿಗೆ ಕಾರಣವಾಗಿ ಬಿಡುತ್ತದೆ.

ಜನರು ಅಲ್ಲಾಹನ ಗ್ರಂಥವನ್ನು ಹೊಂದಿದ್ದೂ ಸಹ, ಅವಮಾನ ಮತ್ತು ಅಧೀನತೆಯ (subjugation) ಬದುಕು ನಡೆಸುತ್ತಿದ್ದರೆ, ಅವರು ಖಂಡಿತವಾಗಿಯೂ ಅಲ್ಲಾಹನ ಮಾತಿಗೆ ಅನ್ಯಾಯ ಮಾಡಿದ ಕಾರಣಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದೇ ಅರ್ಥ. ಅಲ್ಲಾಹನ ಕೋಪದಿಂದ ನಮ್ಮನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ, ಕೂಡಲೇ ಈ ಘೋರ ಪಾಪದಿಂದ ಹಿಂದೆ ಸರಿದು, ಆತನ ಗ್ರಂಥಕ್ಕೆ ನ್ಯಾಯಯುತ ಸ್ಥಾನವನ್ನು ನೀಡಲು ಪ್ರಯತ್ನಿಸುವುದು. ನೀವು ಪ್ರತಿ ಹಳ್ಳಿಯಲ್ಲಿ ಕಾಲೇಜುಗಳನ್ನು ತೆರೆದರೂ, ನಿಮ್ಮ ಎಲ್ಲ ಮಕ್ಕಳು ವಿಶ್ವವಿದ್ಯಾಲಯಗಳಿಂದ ಪದವಿ ಪಡೆದರೂ ಮತ್ತು ನೀವು ನಿರ್ಲಜ್ಜ ವಿಧಾನಗಳ ಮೂಲಕ ಲಕ್ಷಾಂತರ ಹಣವನ್ನು ಸಂಗ್ರಹಿಸಿದರೂ, ನಿಮ್ಮ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ.

ದಿವ್ಯವಚನದ ಸಾರ:

ಮುಸ್ಲಿಮರು ಹೀಗೆ ಹೇಳುತ್ತಾರೆ:

ಲಾ ಇಲಾಹ ಇಲ್ಲಲ್ಲಾಹ್‌ ಮುಹಮ್ಮದುರ್ ರಸೂಲುಲ್ಲಾಹ್ – ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ; ಮುಹಮ್ಮದರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ.

ಈ ವಚನ(ಕಲಿಮಾ)ವನ್ನು ಅಂಗೀಕರಿಸಿದ ನಂತರ ಒಬ್ಬ ಮನುಷ್ಯನು ಮೂಲಭೂತವಾಗಿ ಬದಲಾಗುತ್ತಾನೆ ಎಂದು ನಂಬಲಾಗಿದೆ.

ಈ ಕಲಿಮಾ ವ್ಯಕ್ತಿಯಲ್ಲಿ ಏಕೆ ಅಂತಹ ದೊಡ್ಡ ವ್ಯತ್ಯಾಸವನ್ನು ತರಬೇಕು? ಅದರಲ್ಲಿರೋ ವಿಶೇಷತೆ ಏನು?

ಈ ವಚನದ ಪರಿಣಾಮಕಾರಿತ್ವವು ಅವುಗಳ ಅರ್ಥದಲ್ಲಿ ಅಡಗಿದೆ. ಅವು ನಿಮ್ಮ ಹೃದಯದೊಳಗೆ ಆಳವಾಗಿ ಇಳಿಯದಿದ್ದರೆ ಮತ್ತು ನಿಮ್ಮ ವೈಚಾರಿಕತೆ, ನಿಮ್ಮ ನೈತಿಕತೆ ಮತ್ತು ನಿಮ್ಮ ಕರ್ಮದಲ್ಲಿ ಬದಲಾವಣೆ ಉಂಟುಮಾಡುವಷ್ಟು ಪ್ರಬಲ ಪರಿಣಾಮ ಬೀರದಿದ್ದರೆ, ಆ ಮಾತುಗಳ ಉಚ್ಚಾರಣೆಯು ಅರ್ಥಹೀನ ಮತ್ತು ನಿಷ್ಪ್ರಯೋಜಕ.

ಕೇವಲ ಆರು ಅಥವಾ ಏಳು ಪದಗಳನ್ನು ಉಚ್ಚರಿಸುವುದರಿಂದ ಒಬ್ಬ ಕಾಫಿರನು ಮುಸ್ಲಿಮನಾಗಿ ಅಥವಾ ಅಪವಿತ್ರ ವ್ಯಕ್ತಿಯು ಪವಿತ್ರನಾಗಿ ರೂಪಾಂತರಗೊಳ್ಳಲು ಸಾಧ್ಯವಿಲ್ಲ. ಈ ಪದಗಳ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡು, ಅದನ್ನು ಹೃದಯದಲ್ಲಿ ಇಳಿಸಿ ಜೀವನವನ್ನು ಬದಲಾಯಿಸಿದ ನಂತರವಷ್ಟೇ ಈ ರೂಪಾಂತರ ಕಾಣಲು ಸಾಧ್ಯ.

ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು ಎರಡು ಅರ್ಥವನ್ನು ಒಳಗೊಂಡಿದೆ:

  1. ಮೊದಲನೆಯದಾಗಿ, ಈ ಜಗತ್ತು ದೇವನಿಲ್ಲದೆ ಅಸ್ತಿತ್ವಕ್ಕೆ ಬಂದಿಲ್ಲ ಅಥವಾ ಅನೇಕ ದೇವರುಗಳನ್ನು ಹೊಂದಿಲ್ಲ ಎಂದು ನೀವು ಒಪ್ಪಿಕೊಂಡಿದ್ದೀರಿ. ದೇವನು ಇದ್ದಾನೆ; ಆತನೊಬ್ಬನೇ ದೇವರು, ಮತ್ತು ಆತನ ಹೊರತು ದೈವತ್ವವನ್ನು ಹೊಂದಿರುವ ಬೇರೆ ಯಾವುದೇ ಅಸ್ತಿತ್ವ ಇಲ್ಲ.
  2. ಎರಡನೆಯದಾಗಿ, ಇದೇ ದೇವನು ಇಡೀ ವಿಶ್ವಕ್ಕೂ ಹಾಗೂ ನಿಮಗೂ ಸಹ ಪ್ರಭು ಮತ್ತು ಒಡೆಯ ಎಂದು ನೀವು ಒಪ್ಪಿಕೊಂಡಿದ್ದೀರಿ. ಸ್ವತಃ ನೀವು, ಮತ್ತು ನಿಮ್ಮಲ್ಲಿರುವ ಪ್ರತಿಯೊಂದು ವಸ್ತುವೂ ಅಥವಾ ಜಗತ್ತಿನಲ್ಲಿ ಕಂಡುಬರುವ ಪ್ರತಿಯೊಂದು ವಸ್ತುವೂ ಆತನಿಗೆ ಮಾತ್ರ ಸೇರಿದೆ. ಆತನೇ ಸೃಷ್ಟಿಕರ್ತ ಮತ್ತು ಪೋಷಕನಾಗಿದ್ದಾನೆ.

ದಿವ್ಯವಚನದ ಎರಡನೇ ಭಾಗ – ಮುಹಮ್ಮದುರ್ರಸೂಲುಲ್ಲಾಹ್ ಎಂದು ಹೇಳಿದಾಗ, ಪ್ರವಾದಿವರ್ಯರು ನೀಡಿರುವ ಮಾರ್ಗ ಮತ್ತು ಕಾನೂನನ್ನು ಅನುಸರಿಸುವುದಾಗಿಯೂ ಮತ್ತು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ತಿರಸ್ಕರಿಸುವುದಾಗಿಯೂ ನೀವು ಪ್ರತಿಜ್ಞೆ ಮಾಡುತ್ತೀರಿ. ಈ ಸಾಕ್ಷ್ಯ ವಹಿಸಿದ ನಂತರ, ಪ್ರವಾದಿ (ಸ) ರವರು ತಂದಿರುವ ಜೀವನ ಸಂಹಿತೆಗಿಂತ ಬೇರೆ ಯಾವುದೇ ಸಂಹಿತೆಯನ್ನು ನೀವು ತ್ಯಜಿಸುತ್ತೀರಿ.

ಸರ್ವಶಕ್ತನಾದ ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳುತ್ತಾನೆ:

ವಾಸ್ತವದಲ್ಲಿ ಅಲ್ಲಾಹ್‌ ಸತ್ಯವಿಶ್ವಾಸಿಗಳಿಂದ ಅವರ ತನು-ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡಿರುತ್ತಾನೆ.” (ಅತ್ತೌಬಃ 9: 111).

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ದಿವ್ಯ ವಚನ (ಕಲಿಮಾ ತಯ್ಯಿಬಾ)ವು ಎರಡು ಪ್ರಮುಖ ಕಾರ್ಯಗಳನ್ನು ಬೇಡುತ್ತದೆ: ಮೊದಲನೆಯದು ‘ಸರ್ವಶಕ್ತನಾದ ಅಲ್ಲಾಹನಿಗೆ ಶರಣಾಗತಿ’ ಮತ್ತು ಎರಡನೆಯದು ‘ಪ್ರವಾದಿವರ್ಯ ಅನುಸರಣೆ’.

ಪರಲೋಕದಲ್ಲಿ ನಮ್ಮ ವಿಧಿಯು ಈ ಲೋಕದ ಜೀವನದಲ್ಲಿ ನಮ್ಮ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ನಾವು ನಿಜವಾಗಿಯೂ ನಂಬುವುದಾದರೆ, ದೇವನು ಬಯಸಿದಂತೆ ಬದುಕುವಲ್ಲಿ ನಾವು ಎಂದಿಗೂ ನಿರ್ಲಕ್ಷ್ಯ ವಹಿಸುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ.

ನಾವು ಈಗ ಬಿತ್ತುತ್ತಿರುವವುಗಳು ಮುಂದೆ ಮುಳ್ಳುಗಳನ್ನು ಉತ್ಪಾದಿಸುತ್ತದೆ ಮತ್ತು ಆ ಮುಳ್ಳುಗಳು ನಮಗೇ ಹಾನಿಯನ್ನುಂಟುಮಾಡುತ್ತವೆ ಎಂದು ನಿಜವಾಗಿಯೂ ನಂಬದವನು ಮಾತ್ರ ಅಂತಹ ಕೆಲಸವನ್ನು ಮಾಡುತ್ತಾನೆ. ನಿಮಗೆ ಸುಡುತ್ತದೆ ಎಂದು ತಿಳಿದಿರುವುದರಿಂದ ನೀವು ಎಂದಿಗೂ ಪ್ರಜ್ಞಾಪೂರ್ವಕವಾಗಿ ಉರಿಯುವ ಕೆಂಡವನ್ನು ಕೈಯಲ್ಲಿ ತೆಗೆದುಕೊಳ್ಳುವುದಿಲ್ಲ. ಮಕ್ಕಳು ಮಾತ್ರ ಬೆಂಕಿಯಲ್ಲಿ ಕೈ ಹಾಕುತ್ತಾರೆ, ಏಕೆಂದರೆ ಏನಾಗಲಿದೆ ಎಂಬುವುದರ ಅರಿವು ಅವರಿಗೆ ಇರುವುದಿಲ್ಲ.

ಸಮಾರೋಪ:

ಇಸ್ಲಾಮ್‌ ದಿವ್ಯ ಕೊಡುಗೆಯಾಗಿ, ಮಾರ್ಗದರ್ಶನದ ಆಕರವಾಗಿ, ಮತ್ತು ಜ್ಞಾನೋದಯದ (enlightenment) ಹೆದ್ದಾರಿಯಾಗಿ ಉದಯವಾಗಿದೆ. ಇದು ಹುಟ್ಟಿನಿಂದ ಆನುವಂಶಿಕವಾಗಿ ಬರುವ ಬಿರುದೋ ಅಥವಾ ಮೂಡನಂಭಿಕೆಯ ಹೆಸರೋ ಅಲ್ಲ. ನೈಜ ಇಸ್ಲಾಮ್‌ ಅನ್ನುವುದು ಜ್ಞಾನ, ತಿಳುವಳಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸತ್ಕರ್ಮವನ್ನು ಬಯಸುತ್ತದೆ. ಇಸ್ಲಾಮಿನ ಬೋಧನೆಗಳ ಪ್ರಕಾರ ಬದುಕಲು, ಅದರ ಸಾರವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ತತ್ವಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಲು ಒಂದು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಬಯಸುತ್ತದೆ.

ಕುರ್‌ಆನಿನ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲು, ಪ್ರವಾದಿ ಮುಹಮ್ಮದ್(ಸ) ರವರ ಆದರ್ಶಗಳನ್ನು ಅನುಸರಿಸಲು ಮತ್ತು ಜೀವನದ ಎಲ್ಲಾ ಕ್ಷೇತ್ರದಲ್ಲಿ ಔನ್ನತ್ಯಕ್ಕಾಗಿ ಶ್ರಮಿಸಲು ಮುಸ್ಲಿಮರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಸ್ಲಿಮ್‌ ಆಗಿರುವುದು ಕೇವಲ ಒಂದು ಬಿರುದು ಅಲ್ಲ; ಅದು ಅಲ್ಲಾಹನ ಇಚ್ಛೆಗೆ ಶರಣಾಗತಿ ಮತ್ತು ಆತನ ಸೃಷ್ಟಿಯ ಕಡೆಗೆ ಸಹಾನುಭೂತಿ ಒಳಗೊಂಡಿರುವ ಒಂದು ಜೀವನ ವಿಧಾನಕ್ಕೆ ತೋರುವ ಬದ್ಧತೆಯಾಗಿದೆ ಎಂಬುದನ್ನು ನಾವು ಮರೆಯದಿರೋಣ.

ಕನ್ನಡಾನುವಾದ: ಎಂ. ಡಿ ಪಾಣೆಮಂಗಳೂರು

ಕೃಪೆ: thecompanion.in

Leave a Reply