ಇತಿಹಾಸದ ನ್ಯಾಯ ವಂಚಿತ ಮಹಾನ್ ಚಿಂತಕ ಇಮಾಮ್ ಅತ್ವಬರಿ
ಲೇಖಕರು: ಅಬ್ದುಲ್ ಹಫೀದ್ ನದ್ವಿ
ಕುರ್ಆನ್ ವ್ಯಾಖ್ಯಾನವನ್ನು ಅನಶ್ವರಗೊಳಿಸಿದ ಇಮಾಮ್ ಅಬೂ ಜಅಫರ್ ಮುಹಮ್ಮದ್ ಬಿನ್ ಜರೀರ್ ಬಿನ್ ಯಝೀದ್ ಅತ್ವಬರಿ (224-310 AH/ 839-923 CE) ಇಸ್ಲಾಮೀ ಇತಿಹಾಸದ ಮೇರು ವ್ಯಕ್ತಿತ್ವ ಎಂಬುವುದಕ್ಕಿಂತ ಕುರ್ಆನ್ ವ್ಯಾಖ್ಯಾನಗಾರರ ಯುದ್ದಕುದುರೆ (ಫರಸುಲ್ ಮುಫಸ್ಸಿರೀನ್) ಎಂದೇ ಪ್ರಖ್ಯಾತರಾದ ಮಹಾವಿದ್ವಾಂಸ. ಅಬ್ಬಾಸಿಯಾ ಖಿಲಾಫತ್ನ ಸುವರ್ಣ ಕಾಲಘಟ್ಟದಲ್ಲಿ (ಹಿಜರಿ ಮೂರನೇ ಶತಮಾನದ ಅಂತಿಮ ಘಟ್ಟ ಮತ್ತು ಹಿಜರಿ 4ನೇ ಶತಮಾನದ ಪ್ರಾರಂಭ ಕಾಲ) ಬದುಕಿದ್ದ ಅವರು ಜ್ಞಾನ ರಂಗದ ವಿವಿಧ ಶಾಖೆಗಳಲ್ಲಿ ಕೈಯಾಡಿಸಿ ತನ್ನದೇ ಆದ ಅಮೂಲ್ಯ ಸ್ಥಾನವನ್ನು ಸಾಧಿಸಿ ಕಾಲವು ಮರೆಯಲಾಗದ ಪರಂಪರೆಯನ್ನು ಜಗತ್ತಿಗೆ ಸಮರ್ಪಿಸಿದರು. ಅವರ ಅಮೋಘ ಬದುಕು, ಜ್ಞಾನದ ಬಗ್ಗೆ ಇರುವ ಅತೀವ ಕಾಳಜಿ, ಅನಶ್ವರವಾದ ಗ್ರಂಥಗಳು ಕೊನೆಯಲ್ಲಿ ಎದುರಿಸಬೇಕಾಗಿ ಬಂದ ಹಲವು ಸತ್ವ ಪರೀಕ್ಷೆಗಳು ಮುಂತಾದವುಗಳೆಲ್ಲಾ ಇಸ್ಲಾಮಿನ ಜ್ಞಾನ ಜಗತ್ತಿನ ಅತ್ಯಂತ ಗಮನಾರ್ಹ ಅಧ್ಯಾಯಗಳಲ್ಲಿ ಒಂದಾಗಿದೆ.
ಜ್ಞಾನ ಸಾಗರ:
ಇಮಾಮ್ ತ್ವಬರಿಯವರು ಕೇವಲ ಒಬ್ಬ ಧಾರ್ಮಿಕ ವಿದ್ವಾಂಸರಾಗಿರಲಿಲ್ಲ. ಇತಿಹಾಸಗಾರ, ಕರ್ಮಶಾಸ್ತ್ರಜ್ಞ (ಫಿಕ್ಹ್), ಭಾಷಾ ತಜ್ಞ, ಕುರ್ಆನ್ ವ್ಯಾಖ್ಯಾನಕಾರ, ಹೀಗೆ ಒಂದೇ ಕಾಲದಲ್ಲಿ ಹಲವಾರು ಜ್ಞಾನ ಶಿಖರಗಳ ವಿದ್ವತ್ತು ಕರಗತ ಮಾಡಿಕೊಂಡಿದ್ದರು. ಇಂದಿನ ಎಕ್ಸ್ಪರ್ಟ್ಗಳಂತೆ ಯಾವುದಾದರೂ ಒಂದೇ ವಿಷಯಕ್ಕೆ ಸೀಮಿತವಾಗದೆ ಜ್ಞಾನದ ಎಲ್ಲಾ ಮಗ್ಗುಲುಗಳಲ್ಲಿ ಪ್ರಾವೀಣ್ಯತೆ ಗಳಿಸಿ ಅಂದಿನ ವಿದ್ವಾಂಸರಲ್ಲಿ ಸಾಲಿನಲ್ಲಿ ಮಿನುಗು ನಕ್ಷತ್ರದಂತಿದ್ದರು.
ಇತಿಹಾಸ, ವ್ಯಾಕರಣ(ನಕ್ವ), ಭಾಷೆ, ಕುರ್ಆನ್ ವ್ಯಾಖ್ಯಾನ, ಕರ್ಮಶಾಸ್ತ್ರ ಮುಂತಾದ ಜ್ಞಾನ ಶಾಖೆಗಳಲ್ಲಿ ಅವರು ಗಳಿಸಿದ ಪಾಂಡಿತ್ಯದಿಂದಾಗಿ ಅಂದಿನ ವಿದ್ವಾಂಸರ ಜಗತ್ತಿನಲ್ಲಿ ಅವರು ಅಸಾಮಾನ್ಯ ಸ್ಥಾನ ಪಡೆದಿದ್ದರು. ವಿವಿಧ ಕರ್ಮಶಾಸ್ತ್ರ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಅದರಲ್ಲಿ ಅತ್ಯಂತ ಶ್ರೇಷ್ಟ ಅಭಿಪ್ರಾಯಗಳನ್ನು ಸಮನ್ವಯಗೊಳಿಸುವ ತನ್ನ ಸ್ವಂತ ಮದ್ಹಬ್ (ಕರ್ಮಶಾಸ್ತ್ರ ಸರಣಿ) ಆವಿಷ್ಕರಿಸಿದರು. ಆದರೂ ಅದು ನಂತರ ಪ್ರಬಲವಾಗಲಿಲ್ಲ. ಅವರಿಗೆ ಅನುಯಾಯಿಗಳು ಇಲ್ಲದ ಕಾರಣದಿಂದ ಮುಖ್ಯವಾಹಿನಿಯಿಂದ ತಬ್ರಿ ಮದ್ಹಬ್ ಹೊರಗಿರುವಂತಾಯಿತು.
ಅಸಾಮಾನ್ಯ ಗ್ರಂಥಗಳು:
ತ್ವಬರಿಯವರ ಬದುಕಿನಲ್ಲಿ ಅತ್ಯಂತ ದೊಡ್ಡ ಕೊಡುಗೆಗಳಾಗಿ ಎರಡು ಜ್ಞಾನ ಶಾಖೆಗಳು ಹರಡಿಕೊಂಡಿದೆ. ಇವೆರಡೂ ಇಸ್ಲಾಮೀ ಇತಿಹಾಸದ ಮೈಲುಗಲ್ಲಾಗಿ ನಿಂತಿವೆ.
- ತಫ್ಸೀರುತ್ತಬರಿ: ಕುರ್ಆನ್ ವ್ಯಾಖ್ಯಾನ ಗ್ರಂಥಗಳ ಮಾತೆ ಎಂದೇ ಪ್ರಸಿದ್ದವಾದ ಈ ಮಹತ್ತರವಾದ ಕೃತಿಯು, ಕುರ್ಆನಿನ ವ್ಯಾಖ್ಯಾನದ ರೂಪು ರೇಷೆಯನ್ನೇ ಬದಲಿಸಿತು. ಕುರ್ಆನ್ ವ್ಯಾಖ್ಯಾನ ಹೇಗೆ ಬರೆಯಬೇಕು? ಅದನ್ನು ಸ್ವೀಕರಿಸಲು ತಳೆಯಬೇಕಾದ ನಿಲುವುಗಳು ಯಾವ ರೀತಿಯಲ್ಲಿರಬೇಕು ಎಂಬುದನ್ನು ಈ ಗ್ರಂಥವು ಜಗತ್ತಿಗೆ ಕಲಿಸಿಕೊಟ್ಟಿತು. ಪೂರ್ವಜರಿಂದ ದೊರೆತ ನಿವೇದನೆಗಳ ತಳಹದಿಯಲ್ಲಿ ಅದರ ರಚನೆಯಿರಬೇಕು. ಪ್ರತಿಯೊಂದು ಆಯತ್ನ ವ್ಯಾಖ್ಯಾನ, ಪ್ರವಾದಿವರ್ಯ(ಸ)ರಿಂದ, ಸಹಾಬಿಗಳಿಂದ, ತಾಬಿಈಗಳಿಂದ ದೊರೆತ ಅಧಿಕೃತ ಆಧಾರ ಪ್ರಮಾಣಗಳ ಉಲ್ಲೇಖವನ್ನು ಕ್ರಮಬದ್ದವಾಗಿ ವಿವರಿಸಲಾಗಿದೆ. ಈ ಗ್ರಂಥವು ಮಅಸೂರ್ (ನಿವೇದನೆಯನ್ನು ತಳಹದಿನ್ನಾಗಿಸಿದ) ತಫ್ಸೀರ್ನ ಅತ್ಯಂತ ಪ್ರಮುಖ ಮತ್ತು ಅಧಿಕೃತವಾದ ಅಧ್ಯಯನ ಗ್ರಂಥವಾಗಿ ನೆಲೆನಿಂತಿದೆ. ನಂತರದ ಎಲ್ಲ ಕುರ್ಆನ್ ವ್ಯಾಖ್ಯಾನಕಾರರು ಈ ಗ್ರಂಥವನ್ನು ಆಧಾರ ಪ್ರಮಾಣಗಳಿಗೆ ಬಳಸಿಕೊಂಡರು.
- ತಾರೀಖುತ್ವಬರಿ: ವಿಶ್ವದ ಆರಂಭದಿಂದ ತನ್ನ ಕಾಲಘಟ್ಟದ ವರೆಗಿನ ಇತಿಹಾಸವನ್ನು ದಾಖಲಿಸಿದ ಗ್ರಂಥ. ಇದು ಇಸ್ಲಾಮೀ ಇತಿಹಾಸದ ಅಧ್ಯಯನದ ಪ್ರಮುಖ ಆಧಾರ ಪ್ರಮಾಣವಾಗಿದೆ. ಇತಿಹಾಸಕಾರರಿಗೆ ಅತ್ಯಗತ್ಯದ ರೆಫೆರೆನ್ಸ್ ಗ್ರಂಥವಾಗಿದೆ. ಇತಿಹಾಸದ ರಚನಾ ಶಾಸ್ತ್ರ, ಐತಿಹಾಸಿಕ ಘಟನೆಗಳನ್ನು ದಾಖಲಿಸುವುದರಲ್ಲಿ ಅವರು ಸ್ವೀಕರಿಸಿದ ಶೈಲಿಶಾಸ್ತ್ರವು ಈ ಕೃತಿಯನ್ನು ಹೆಚ್ಚು ಅಧಿಕೃತಗೊಳಿಸಿದೆ. ಪ್ರತಿಯೊಂದು ವರದಿಗಾರರು ಸ್ವೀಕರಿಸಿದ ದಿನಾಂಕಗಳನ್ನು ಆದಾರವಾಗಿರಿಸಿದ “ತಾರೀಖುಲ್-ಹುದುಸ್”(ಘಟನೆಗಳ ದಿನಾಂಕ) ಎಂಬ ಶೈಲಿಯನ್ನು ತ್ವಬರಿಯವರು ಅವಲಂಭಿಸಿದ್ದರು. ಅಥವಾ ಇತಿಹಾಸವನ್ನು ದಿನಾಂಕಗಳೊಂದಿಗೆ ಜೋಡಿಸಿ ಅದು ಕಟ್ಟು ಕತೆಯಲ್ಲ ಎಂಬುದನ್ನು ನಿರೂಪಿಸಿದರು. ವಿವಿಧ ನಿವೇದನೆಗಳ ಶೃಂಖಲೆಗಳನ್ನು ಕ್ರಮೀಕರಿಸಿ ಘಟನೆಗಳ ಕಾಲಕ್ರಮಗಳಿಗನುಗುಣವಾಗಿ ಅವತರಣಗೊಳಿಸಿದ ರೀತಿಯು ಇತಿಹಾಸದ ರಚನೆಗೆ ಹೊಸ ಮಾನದಂಡಗಳನ್ನು ನೀಡಿತು.
ಜ್ಞಾನಸಂಪಾದನೆಗಾಗಿ ಬದುಕನ್ನೇ ಸವೆಸಿದ ಇಮಾಮ್ ತ್ವಬರಿಯವರಿಗೆ ಬದುಕಿನ ಕೊನೆಯ ಘಟ್ಟದಲ್ಲಿ ಅತ್ಯಂತ ಸಂಕಷ್ಟದ ಸತ್ವ ಪರೀಕ್ಷೆಗಳನ್ನು ಎದುರಿಸಬೇಕಾಯಿತು. ಆ ಕಾಲದಲ್ಲಿ ನೆಲೆ ನಿಂತಿದ್ದ ಕರ್ಮಶಾಸ್ತ್ರೀಯ, ರಾಜಕೀಯ ವಿಭಾಗೀಯತೆಗಳ ಮಧ್ಯೆ ಅವರ ವಿರುದ್ದ “ರಾಫಿದೀಯತ್”(ಶಿಯಾಇಝಂ) ಎಂಬ ಆರೋಪ ಹೊರಿಸಲಾಯಿತು. ತೀವ್ರ ಶಿಯಾ ಪಂಗಡಗಳಿಗೆ ಹೇಳಲಾಗುವ ಈ ಪದ ಬಳಕೆ ಅಂದಿನ ಪ್ರಬಲವಾದ ಹಂಬಲಿ ವಿಭಾಗದ ತೀವ್ರ ವಿರೋಧಗಳಿಗೆ ತುತ್ತಾಗಬೇಕಾಯಿತು.
ಯಾವುದೇ ಪ್ರತ್ಯೇಕ ಮದ್ಹಬ್ಗಳ ಜೊತೆ ಗುರುತಿಸದೆ, ಆಧಾರ ಪ್ರಮಾಣಗಳ ತಳಹದಿಯಲ್ಲಿ ಮಾತ್ರ ನಿಲುವು ತಾಳುವ ಅವರ ಸ್ವಾತಂತ್ರ್ಯವು ಕರ್ಮಶಾಸ್ತ್ರ ಪಂಗಡಗಳಿಗೆ ಅವರ ಬಗ್ಗೆ ಒಲವು ತೋರದಿರಲು ಕಾರಣವಾಯಿತು. ಜೊತೆಗೆ ಅವರ ವಿರುದ್ದ ಶತ್ರುತ್ವ ಬೆಳೆಸಲೂ ಕಾರಣವಾಯಿತು. ಕೆಲವು ಕರ್ಮ ಶಾಸ್ತ್ರಜ್ಞರು, ದೈವಿಕ ಶಾಸ್ತ್ರದ ಕೆಲವು ವಿದ್ವಾಂಸರು ಕೂಡ ಅವರ ವಿರುದ್ದ ಜನರನ್ನು ಎತ್ತಿಕಟ್ಟಿದರು. ಇದು ಅವರನ್ನು ಏಕಾಂಗಿಯನ್ನಾಗಿಸಿತು. ಅವರ ವಿಯೋಗದ ಬಳಿಕ ಈ ದ್ವೇಷ ಹೆಚ್ಚು ಮೂರ್ತರೂಪ ತಾಳಿತು. ಸಾರ್ವಜನಿಕರು ಅವರ ಮೃತದೇಹವನ್ನು ಸಾರ್ವಜನಿಕ ಕಬರ ಸ್ಥಾನದಲ್ಲಿ ದಫನಮಾಡುವುದನ್ನು ತಡೆದರು. ಕೊನೆಗೆ ಮೃತದೇಹವನ್ನು ಅವರ ಮನೆಯಲ್ಲಿಯೇ ದಫನ ಮಾಡಬೇಕಾಯಿತು. ಜ್ಞಾನಜ್ಯೋತಿಯನ್ನು ಪಸರಿಸಿದ ಓರ್ವ ಮಹಾ ವಿದ್ವಾಂಸ ಎದುರಿಸಬೇಕಾಗಿ ಬಂದ ಈ ಕಟು ಅನ್ಯಾಯ ಅವರ ಸಮಕಾಲೀನರಿಗೆ ತೀವ್ರ ಖೇದವನ್ನುಂಟು ಮಾಡಿತು. ಆದರೆ, ಇತಿಹಾಸದಿಂದ ಅವರ ಹೆಸರನ್ನು ಅಳಿಸಿ ಹಾಕಲು ಈ ಸತ್ವ ಪರೀಕ್ಷೆಗಳಿಗೆ ಸಾಧ್ಯ ಆಗಲಿಲ್ಲ. ಓರ್ವ ಸತ್ಯ ಸಂಧ, ಪ್ರಾಮಾಣಿಕ, ವಿದ್ವಾಂಸರು ತನ್ನ ನಿಲುವಿನಲ್ಲಿ ಅಚಲರಾಗಿ ನಿಂತದ್ದಕ್ಕಾಗಿ ಎದುರಿಸಬೇಕಾಗಿ ಬಂದ ತ್ಯಾಗದ ಪ್ರತೀಕವಾಗಿ ಈ ಘಟನೆಯು ನೆಲೆನಿಂತಿದೆ.
ಇತಿಹಾಸದ ಮರು ಪ್ರಕಾಶನ:
ಇಮಾಮ್ ತ್ವಬರಿಯವರ ಗ್ರಂಥಗಳ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಅವರ ಕೃತಿಗಳಿಗೆ ಕಾಲಾಂತರದಲ್ಲಿ ಹೊಸ ರೂಪ ನೀಡಲಾಯಿತು. ಕಿಂಗ್ ಅಬ್ದುಲ್ ಅಝೀಝ್ ಫೌಂಡೇಶನ್ ಫಾರ್ ರಿಸರ್ಚ್ ಆಂಡ್ ಆರ್ಕೈವ್ಸ್ ಬಿಡುಗಡೆಗೊಳಿಸಿದ “ತ್ವಾರೀಖ್ ಅತ್ವಬರಿ” ಹೊಸ ಅಕಾಡೆಮಿಯ ಆವೃತ್ತಿ(ತಹ್ಪಿಕ್) ಇದರಲ್ಲಿ ಪ್ರಮುಖವಾದುದು. ಹಳೆಯ ಕೈಬರಹಗಳ ಪ್ರತಿಯನ್ನು ಪರಿಶೀಲಿಸಿ ಅದರಲ್ಲಿನ ಗೊಂದಲಗಳನ್ನು ತಿದ್ದಿ, ವ್ಯಾಖ್ಯಾನಗಳು ಬೇಕಾದೆಡೆಗೆ ಸೇರಿಸಿ, ಮೂಲ ಗ್ರಂಥಗಳಿಗೆ ಅತೀಹೆಚ್ಚು ನಿಕಟ ರೂಪದಲ್ಲಿ ಒಂದು ಹೊಸ ಕೃತಿಯನ್ನು ಮರು ಮುದ್ರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಸಿದ್ದ ಇಸ್ಲಾಮೀ ಸಂಶೋಧಕ ಡಾಕ್ಟರ್ ಬಶಾರ್ ಅವ್ವಾದ್ ರಂತಹವರ ಮೇಲ್ನೊಟದಲ್ಲಿ ನಡೆಯುವ ಈ ಮರು ಪ್ರಕಾಶನ ಇತಿಹಾಸ/ಇಸ್ಲಾಮೀ ಅಧ್ಯಯನ ವಿದ್ಯಾರ್ಥಿಗಳಿಗೆ ತ್ವಬರಿಯವರ ಕೃತಿಗಳು ಹೆಚ್ಚು ಅಧಿಕೃತ ರೀತಿಯಲ್ಲಿ ಕಲಿಯಲು ಅವಕಾಶ ದೊರೆಯುತ್ತದೆ.
ಇಮಾಮ್ ಅತ್ವಬರಿಯವರ ಸತ್ವಪರೀಕ್ಷೆಯಿಂದ ಕೂಡಿದ ಬದುಕು, ಜ್ಞಾನಗಳಿಕೆಯಲ್ಲಿ ಅವರ ಅಚಂಚಲವಾದ ಸಮರ್ಪಣಾ ಪ್ರಜ್ಞೆ, ತಫ್ಸೀರುತ್ವಬರಿ, ತಾರೀಕುತ್ವಬರಿ ಮುಂತಾದ ಅನಶ್ವರ ಗ್ರಂಥಗಳು ಅವರು ಎದುರಿಸಿದ ಸವಾಲುಗಳು ಮುಂತಾದವುಗಳೆಲ್ಲಾ ಅವರನ್ನು ಇಸ್ಲಾಮೀ ಜ್ಞಾನರಂಗದಲ್ಲಿ ನಕ್ಷತ್ರವಾಗಿ ಬೆಳಗುವಂತೆ ಮಾಡಿದೆ. ಬದುಕಿನಲ್ಲಿ ಅವರು ಎದುರಿಸಿದ ಅನ್ಯಾಯಗಳಿಗೆ ಅವರ ಅಪಾರ ಜ್ಞಾನ ಕೊಡುಗೆಗಳನ್ನು ಮರೆ ಮಾಚಲಾಗಲಿಲ್ಲ. ಕುರ್ಆನ್ ವ್ಯಾಖ್ಯಾನ ರಚನೆಗೆ, ಇಸ್ಲಾಮೀ ಇತಿಹಾಸಗಳ ರಚನೆಗೆ ಅವರು ನೀಡಿದ ಕೊಡುಗೆ ಕಾಲಾಂತರವಾಗಿ ನೆಲೆನಿಂತಿದೆ. ಜ್ಞಾನಗಳಿಸ ಬಯಸುವವರಿಗೆ, ಇತಿಹಾಸದ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ವಾಂಸರಿಗೆ ತ್ವಬರಿಯವರ ಬದುಕು ಮತ್ತು ಕೃತಿಗಳು ನಿರಂತರ ಪ್ರೇರಣೆಯಾಗಿದೆ.
ಕನ್ನಾಡಾನುವಾದ: ಸಲೀಮ್ ಬೋಳಂಗಡಿ
ಕೃಪೆ: ಇಸ್ಲಾಮ್ ಆನ್ಲೈವ್