ಭಾಗ 2 – ಪ್ರವಾದಿ(ಸ) ರವರ ಜನ್ಮ ದಿನಾಂಕ ಮತ್ತು ಮೌಲಿದ್ ಇತಿಹಾಸ

0
prophet-birthday-and-mawlid-history

ಭಾಗ 2 – ಪ್ರವಾದಿ(ಸ) ರವರ ಜನ್ಮ ದಿನಾಂಕ ಮತ್ತು ಮೌಲಿದ್ ಇತಿಹಾಸ

ಲೇಖಕರು: ಡಾ. ಯಾಸಿರ್‌ ಖಾದಿ

ಎಲ್ಲಾ ವಿಭಾಗಗಳ ಇತಿಹಾಸಕಾರರು, ಕಾನೂನು ತಜ್ಞರು ಮತ್ತು ದೇವತಾಶಾಸ್ತ್ರಜ್ಞರು ಸರ್ವಾನುಮತದಿಂದ ಒಪ್ಪಿರುವ ವಿಷಯ ಏನಂದರೆ, ಪ್ರವಾದಿ(ಸ) ರವರು ಅನುಯಾಯಿಗಳಲ್ಲಿ ತನ್ನ ಜನನವನ್ನು ಆಚರಿಸಲು ಎಂದಿಗೂ ಆದೇಶಿಸಲಿಲ್ಲ ಮತ್ತು ಇಸ್ಲಾಮ್‌ ಧರ್ಮದ ಆರಂಭಿಕ ಕೆಲವು ಶತಮಾನಗಳವರೆಗೆ ಈ ಪದ್ಧತಿ ಪರಿಚಿತವಾಗಿರಲಿಲ್ಲ. ಆದ್ದರಿಂದ, ಈ ಪದ್ಧತಿ ಹೇಗೆ ಶುರುವಾಯಿತು ಮತ್ತು ಪ್ರವಾದಿ(ಸ) ರವರ ಹುಟ್ಟುಹಬ್ಬವನ್ನು ಆಚರಿಸುವ ಕಲ್ಪನೆಯ ಬಗ್ಗೆ ಯೋಚಿಸಿದ ಮೊದಲ ಗುಂಪು ಯಾರು ಎಂಬ ಪ್ರಶ್ನೆಯು ಸಾಮಾನ್ಯವಾಗೇ ಉದ್ಭವಿಸುತ್ತದೆ.

ಮೌಲಿದ್‌ಆರಂಭ

ಇತಿಹಾಸ ಕೃತಿಯಲ್ಲಿ ಮೌಲಿದ್ ಆಚರಣೆಯ ಬಗ್ಗೆ ಪ್ರಥಮ ಉಲ್ಲೇಖವು, ಜಮಾಲ್ ಅಲ್-ದೀನ್ ಇಬ್ನ್ ಅಲ್-ಮಾಮೂನ್(ಮರಣ 587 AH/1192 CE) ರವರ ಬರಹದಲ್ಲಿ ಕಂಡುಬರುತ್ತದೆ. ಇಬ್ನ್ ಅಲ್-ಮಾಮೂನ್‌ರ ತಂದೆಯು ಫಾತಿಮೀಯ ಖಲೀಫರಾಗಿದ್ದ ಅಲ್-ಅಮೀರ್ (494-524 AH/1101-1130 CE ಆಳ್ವಿಕೆ) ರವರ ಗ್ರ್ಯಾಂಡ್ ವಝೀರ್ ಆಗಿದ್ದರು. ಇಬ್ನ್ ಅಲ್-ಮಾಮೂನ್ ಅವರ ಕೃತಿಗಳು ಈಗ ಕಳೆದುಹೋಗಿದ್ದರೂ, ಅದರ ಹಲವು ಭಾಗಗಳನ್ನು ನಂತರದ ವಿದ್ವಾಂಸರು, ವಿಶೇಷವಾಗಿ ಈಜಿಪ್ಟ್‌ನ ಅತ್ಯಂತ ಪ್ರಸಿದ್ಧ ಮಧ್ಯಕಾಲೀನ ಇತಿಹಾಸಕಾರ ಅಲ್-ಮಕ್ರೀಝಿ (ಮರಣ. 845/1442) ತಮ್ಮ ಪ್ರಸಿದ್ಧ ಕೃತಿಯಾದ ಮಾವಾ’ಇಝ್‌ ಅಲ್-ಇತಿಬಾರ್ ಫಿ ಖ್ಹಿತತ್ ಮಿಸ್ರ್‌ ವ-ಅಲ್-ಅಮ್ಸಾರ್ (ಸರಳವಾಗಿ ಖ್ಹಿತತ್ ಎಂದು ಹೇಳಲಾಗುತ್ತದೆ) ನಲ್ಲಿ ಉಲ್ಲೇಖಿಸಿದ್ದಾರೆ. ಅಲ್-ಮಕ್ರೀಝಿಯವರ ಪುಸ್ತಕವು ಫಾತಿಮೀಯರ ಮತ್ತು ಆರಂಭಿಕ ಮಮ್ಲೂಕ್ ಈಜಿಪ್ಟ್‌ರ ಬಗ್ಗೆ ಮಾಹಿತಿಯ ಪ್ರಮಾಣಿತ ಮೂಲವಾಗಿದೆ. ಇತರ ಹಲವು ಪುಸ್ತಕಗಳಿಗಿಂತ ಈ ಕೃತಿಯು ಎದ್ದು ಕಾಣಲು ಅದರ ಸಮಗ್ರತೆ ಮಾತ್ರ ಕಾರಣವಲ್ಲ, ಅಲ್-ಮಕ್ರೀಝಿ ರವರು ಈಗ ಕಳೆದುಹೋಗಿರುವ ಅನೇಕ ಹಿಂದಿನ ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಆ ಮೂಲವನ್ನು ಉಲ್ಲೇಖಿಸಲು ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಇದು ಆ ಕಾಲಕ್ಕೆ ಬಹಳ ಅಪರೂಪವಾಗಿತ್ತು.

ಫಾತಿಮೀಯರ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನೀತಿಗಳ ಆರನೇ ಶತಮಾನದ ಆರಂಭ ಕಾಲದ ಮಾಹಿತಿಗಾಗಿ ಅಲ್-ಮಕ್ರೀಝಿ ರವರು ಇಬ್ನ್ ಅಲ್-ಮಾಮೂನ್‌ರ ಕೃತಿಗಳನ್ನು ಅವಲಂಬಿಸಿದ್ದಾರೆ. ಈ ಅವಧಿಯಲ್ಲಿಯೇ ಇಬ್ನ್ ಅಲ್-ಮಾಮೂನ್‌ರ ತಂದೆ ಫಾತಿಮೀಯ ಖಲೀಫರಿಗಾಗಿ ಕೆಲಸ ಮಾಡುತ್ತಿದುದು. ಅವರ ತಂದೆಗೆ ಇದ್ದ ಉನ್ನತ ಸ್ಥಾನದಿಂದಾಗಿ, ಹೊರಗಿನ ಇತಿಹಾಸಕಾರರಿಗೆ ತಿಳಿದಿರದ ಅನೇಕ ವಿವರಗಳನ್ನು ಒದಗಿಸಿದ್ದಾರೆ.

ಮುಂದುವರಿಯುವ ಮೊದಲು, ಫಾತಿಮೀಯರ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಸುವುದು ಮುಖ್ಯ. ಬಾಗ್ದಾದ್‌ನಲ್ಲಿ ಅಬ್ಬಾಸೀಯರಿಗೆ ಪ್ರತಿಸ್ಪರ್ಧಿ ರಾಜವಂಶವಾಗಿ ಫಾತಿಮೀಯರು ತಮ್ಮನ್ನು ಸ್ಥಾಪಿಸಿಕೊಂಡರು. ಅವರು ಹಿಜರಿ ಶಕೆ 358 AH/969 CE ನಲ್ಲಿ ಈಜಿಪ್ಟ್ ಅನ್ನು ವಶಪಡಿಸಿಕೊಂಡು ಆಧುನಿಕ ಕೈರೋ ನಗರವನ್ನು ಸ್ಥಾಪಿಸಿದರು. ಪ್ರವಾದಿ(ಸ) ರವರ ವಂಶಾವಳಿಯಿಂದ ಬಂದವರು ಎಂದು ಘೋಷಿಸಿಕೊಂಡರು(ಬೇರೆ ಎಲ್ಲರೂ ಇದನ್ನು ಕಟ್ಟುಕಥೆ ಎಂದೇ ಪರಿಗಣಿಸಿದ್ದಾರೆ). ಇವರು ‘ಇಸ್ಮಾಯಿಲಿಸಂ’ ಎಂದೂ ಕರೆಯಲ್ಪಡುವ ಶಿಯಾ ಇಸ್ಲಾಮ್‌ನ ಏಳರ ಶಾಖೆ(Sevener Branch) ಯನ್ನು ಅನುಸರಿಸುತ್ತಿರು. ಅವರ ನಂಬಿಕೆಗಳು ಮತ್ತು ಪದ್ಧತಿಗಳು ಇಸ್ಲಾಮ್‌ನ ಇತರ ಶಾಖೆಗಳಿಗಿಂತ ಎಷ್ಟು ಭಿನ್ನವಾಗಿದ್ದವೆಂದರೆ, ಎಲ್ಲಾ ಸುನ್ನಿಗಳು ಮತ್ತು ಇತರ ಅನೇಕ ಇಸ್ಮಾಯಿಲೇತರ ಶಿಯಾ ಗುಂಪುಗಳು ಅವರನ್ನು ಧರ್ಮದ ಹೊರಗೆ ಹೋಗಿದ್ದಾರೆಂದು ಪರಿಗಣಿಸಿದ್ದರು. ಇಸ್ಮಾಯಿಲಿಗಳು ಇಸ್ಲಾಮ್‌ನ ಐದು ಸ್ತಂಭಗಳನ್ನು ಎಷ್ಟರ ಮಟ್ಟಿಗೆ ಮರು ವ್ಯಾಖ್ಯಾನಿಸಿದ್ದರು ಎಂದರೆ, ಇತರ ಮುಸ್ಲಿಮರು ಒಗ್ಗಿಕೊಂಡಿರುವ ನಿಯಮಿತ (ಐದು ದೈನಂದಿನ ಪ್ರಾರ್ಥನೆಗಳಂತಹ) ಆಚರಣೆಗಳಿಗೆ ಅನುಗುಣವಾಗಿ ಇರಲಿಲ್ಲ. ಈ ಕಾಲದಲ್ಲೂ ಫಾತಿಮೀ ಖಿಲಾಫತ್‌ನ ವೈಚಾರಿಕ (ಮತ್ತು ಕೆಲವೊಮ್ಮೆ ಜೈವಿಕ) ವಂಶಸ್ಥರು ಅನೇಕರಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇಸ್ಮಾಯಿಲಿ ಅಗಾ ಖಾನ್ ಇಮಾಮ್‌ಗಳು ಮತ್ತು ಬೋಹ್ರಿ ಇಮಾಮ್‌ಗಳು ಇಬ್ಬರೂ ಫಾತಿಮೀ ಖಿಲಾಫತ್‌ ಜೊತೆ ತಮ್ಮ ನೇರ ವಂಶಾವಳಿಯನ್ನು ಗುರುತಿಸುತ್ತಾರೆ. ಡ್ರೂಝ್‌ (Druze) ಎಂದು ಕರೆಯಲ್ಪಡುವ ಗುಂಪು ಕೂಡ ಫಾತಿಮೀರ ಒಂದು ಶಾಖೆಯಾಗಿದೆ. ಪ್ರಪಥಮವಾಗಿ ಮೌಲಿದ್ ಆಚರಣೆಯನ್ನು ಪ್ರಾರಂಭಿಸಿದವರು ಇವರಾಗಿದ್ದಾರೆ.

ಈಗ ನಮ್ಮ ವಿಷಯಕ್ಕೆ ಹಿಂತಿರುಗೋಣ, ಅಲ್-ಮಕ್ರೀಝಿ ತನ್ನ ಖ್ಹಿತಾತ್‌ನಲ್ಲಿ, ಇಬ್ನ್ ಅಲ್-ಮಾಮೂನ್ ರವರನ್ನು ಉಲ್ಲೇಖಿಸಿ, 517 A.H. ನ ಘಟನೆಗಳ ಬಗ್ಗೆ ಹೀಗೆ ಬರೆಯುತ್ತಾರೆ:

ರಬೀ ಅಲ್-ಅವ್ವಲ್ ತಿಂಗಳು ಬಂತು, ಈ ತಿಂಗಳು ಯಾಕೆ ಪ್ರಸಿದ್ಧ ಆಯಿತು ಎಂದು ತಿಳಿಸುವುದುರ[ತಿಂಗಳ ಘಟನೆಗಳನ್ನು] ಮೂಲಕ ನಾವು ಶುರು ಮಾಡಬೇಕಿದೆ. ತಿಂಗಳ, ಹದಿಮೂರನೇ[sic.] ದಿನದಂದು ಆದಿ ಮತ್ತು ಅಂತ್ಯದ ನಾಯಕರಾದ ಮುಹಮ್ಮದ್ ರವರ ಜನ್ಮದಿನ. ನಜಾವಾ ನಿಧಿಯಿಂದ 6000 ದಿರ್ಹಮ್‌ಗಳನ್ನು [ಇಸ್ಮಾಯೀಲಿ ದಶಾಂಶ] ಖಲೀಫರು ದಾನವಾಗಿ ನೀಡಿದರು. ದಾರ್ ಅಲ್-ಫಿತ್ರದಿಂದ ಅವರು 40 ಭಕ್ಷ್ಯಗಳನ್ನು ನೀಡಿದರು. ಅಲ್ ಅಲ್-ಬೈತ್ ಇರುವ ಬೆಟ್ಟ ಮತ್ತು ಖರಾಫಾದ ನಡುವೆ ಇರುವ ಮಕ್ಬರಗಳ ಟ್ರಸ್ಟಿಗಳು ಮತ್ತು ಉಸ್ತುವಾರಿಗಳ ಕಛೇರಿಯಿಂದ, ಅವರು ಪ್ರತಿ ಮಕ್ಬರಕ್ಕೆ ಸಕ್ಕರೆ, ಬಾದಾಮಿ, ಜೇನುತುಪ್ಪ ಮತ್ತು ಎಳ್ಳೆಣ್ಣೆಯನ್ನು [ಉಡುಗೊರೆಯಾಗಿ] ನೀಡಿದರು. ಮತ್ತು [ಅವರ ವಜೀರರು] 400 ಪೌಂಡ್ (ರಾಟಲ್) ಸಿಹಿತಿಂಡಿಗಳು ಮತ್ತು 1000 ಪೌಂಡ್ ಬ್ರೆಡ್ ವಿತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಈ ಪ್ಯಾರಾಗ್ರಾಫ್‌ನ ಪದಗಳು ಮೌಲಿದ್ ಈ ಸಮಯದಲ್ಲಿ ಸ್ಪಷ್ಟವಾಗಿ ಸ್ಥಾಪಿತವಾದ ಆಚರಣೆಯಾಗಿತ್ತು ಎಂದು ನಿಖರವಾಗಿ ಸೂಚಿಸುತ್ತದೆ.

ಮೌಲಿದ್ ಅನ್ನು ಉಲ್ಲೇಖಿಸುವ ಮತ್ತೊಂದು ಆರಂಭಿಕ ಮೂಲವೆಂದರೆ ಇಬ್ನ್ ಅಲ್-ತುವೈರ್ (ಮರಣ: 617/1220), ಅವರ ಕೃತಿ ನುಝ್ಹತ್ ಅಲ್-ಮುಖ್ಲತೈನ್ ಫಿ ಅಖ್ಬರ್ತ್ ಅಲ್-ದೌಲತೈನ್. ಇಬ್ನ್ ಅಲ್-ತುವೈರ್ ಫಾತಿಮೀ ಆಡಳಿತದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು ಮತ್ತು 567/1071 ರಲ್ಲಿ ಸಲಾಹ್ ಅಲ್-ದೀನ್ ಅಲ್-ಅಯ್ಯೂಬಿಯ ನೇತೃತ್ವದಲ್ಲಿ ಅಧಿಕಾರವು ಫಾತಿಮೀಯರಿಂದ ಅಯ್ಯೂಬಿಗಳಿಗೆ ಬದಲಾಗಿರುವುದಕ್ಕೆ ಸಾಕ್ಷಿಯಾದರು. ಅವರ ಕೌಶಲ್ಯಗಳು ತುಂಬಾ ಮೆಚ್ಚುಗೆ ಪಡೆದಿದ್ದರಿಂದ, ಸಲಾಹ್ ಅಲ್-ದಿನ್ ಸರ್ಕಾರದಲ್ಲಿಯೂ ಕೆಲಸ ಮಾಡಿದ್ದರು. ಇಬ್ನ್ ಅಲ್-ತುವೈರ್‌ ರವರು ಮೌಲಿದ್‌ಗೆ ಸಂಬಂಧಿಸಿದ ಪ್ರದರ್ಶನ ಮತ್ತು ಆಡಂಬರವನ್ನು ಸಹ ವಿವರಿಸುತ್ತಾರೆ. ಆ ದಿನದಂದು ವಿತರಿಸಲಾದ ದೊಡ್ಡ ಪ್ರಮಾಣದ ಆಹಾರಗಳನ್ನು, ವಿಶೇಷವಾಗಿ ಕೈರೋದ ಪ್ರಸಿದ್ಧ ಸಮಾಧಿ(ಮಕ್ಬರ)ಗಳ ಸುತ್ತಲೂ (ಅವುಗಳಲ್ಲಿ ಕೆಲವನ್ನು ಫಾತಿಮೀಯರು ತಮ್ಮ ಇಮಾಮ್‌ಗಳೆಂದು ಪರಿಗಣಿಸುತ್ತಿದ್ದರು) ವಿತರಿಸಲಾಗುತ್ತಿದ್ದಂತವುಗಳನ್ನು ವಿವರವಾಗಿ ಚಿತ್ರಿಸುತ್ತಾರೆ [ನೋಡಿರಿ. ನುಝ್ಹತ್‌ ಪು. 217-219]. ಸಹಜವಾಗಿಯೇ ಈ ಪ್ರದರ್ಶನಗಳ ಕೇಂದ್ರಬಿಂದು ಖಲೀಫರ ಅರಮನೆಯಾಗಿತ್ತು ಮತ್ತು ಇಲ್ಲಿ ಗಣ್ಯರಿಗೆ ಮಾತ್ರ ಹಾಜರಾಗಬಹುದಿತ್ತು. ಆ ದಿನದ ಆಚರಣೆಗಳು ಅರಮನೆಯ ಕಿಟಕಿಯಿಂದ (ಇಸ್ಮಾಯಿಲಿಯರಿಗೆ ಜೀವಂತ ಇಮಾಮ್ ಆಗಿದ್ದ) ಖಲೀಫರೂ ಬಂದು ಮುಖ ತೋರಿಸುತ್ತಿದ್ದರು ಮತ್ತು ಅವರ ಮುಖವನ್ನು ಪೇಟದಿಂದ ಮರೆ ಮಾಡಲಾಗುತಿತ್ತು. ಖುದ್ದು ಅವರೇ ಮಾತನಾಡುವುದಿಲ್ಲ – ಬದಲಿಗೆ, ಅವರ ಖಾಸಗಿ ಸೇವಕರು; ಖಲೀಫರು ತಮ್ಮ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ ಮತ್ತು ತಾವು ಪ್ರಕಟಿಸುತ್ತಿರುವ ಪ್ರೀತಿಯನ್ನು ನೋಡಿದ್ದಾರೆ ಎಂದು ಪ್ರೇಕ್ಷಕರಿಗೆ ಸೂಚಿಸುತ್ತಿದ್ದರು. ಅಂಗಳದ ಮಂಟಪದಿಂದ ವಿವಿಧ ಪ್ರವಚನಕಾರರು ಮತ್ತು ಧರ್ಮೋಪದೇಶಕರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಂತಿಮವಾಗಿ ಅಝ್ಹರ್ ಮಸೀದಿ(ಆ ಸಮಯದಲ್ಲಿ, ಅದು ಇಸ್ಮಾಯಿಲಿ ವಿದ್ವಾಂಸರ ಕೇಂದ್ರವಾಗಿತ್ತು)ಯ ಖತೀಬರು ಸಮರೋಪವಾಗಿ ಮಾತನಾಡುತ್ತಿದ್ದರು.

ಫಾತಿಮೀಯರು ಬರೇ ಮೌಲಿದ್‌ ಆಚರಣೆಯನ್ನು ಮಾತ್ರ ಪ್ರಾಯೋಜಿಸಿರುವುದಲ್ಲ. ಅಲ್-ಮಕ್ರೀಝ್‌, ತಮ್ಮ ಖ್ಹಿತಾತ್ [ಸಂಪುಟ 1, ಪುಟ 490] ನಲ್ಲಿ, ಫಾತಿಮೀಯ ರಜಾದಿನಗಳ ವಿವರಗಳಿಗೆ ಸಂಪೂರ್ಣ ಅಧ್ಯಾಯವನ್ನು ಮೀಸಲಿಟ್ಟಿದ್ದಾರೆ. “ವರ್ಷವಿಡೀ ಫಾತಿಮೀ ಖಲೀಫರು ಆಚರಣೆಯಾಗಿ ಮತ್ತು ಹಬ್ಬಗಳಾಗಿ ತೆಗೆದುಕೊಂಡ ದಿನಗಳ ಉಲ್ಲೇಖ, ಅದರ ಮೇಲೆ ಜನರ ಪರಿಸ್ಥಿತಿ ಸುಧಾರಣೆ ಮತ್ತು ಪ್ರಯೋಜನಗಳ ಹೆಚ್ಚಳ” ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಬರೆಯುತ್ತಾರೆ:

ವರ್ಷವಿಡೀ ಫಾತಿಮೀ ಖಲೀಫರು ಹಲವಾರು ಹಬ್ಬಗಳು ಮತ್ತು ಆಚರಣೆಗಳನ್ನು ಹೊಂದಿದ್ದರು. ಅವುಗಳೆಂದರೆ: 1. ಹೊಸ ವರ್ಷದ ಮುನ್ನಾದಿನ, 2. ಹೊಸ ವರ್ಷಾರಂಭದ ಆಚರಣೆಗಳು, 3. ‘ಆಶೂರಾ’ ದಿನ, 4. ಪ್ರವಾದಿ (ಸ) ರವರ ಜನ್ಮದಿನ, 5. ‘ಅಲಿ’ ರವರ ಜನ್ಮದಿನ, 6. ಅಲ್-ಹಸನ್ ಅವರ ಜನ್ಮದಿನ, 7. ಅಲ್-ಹುಸೈನ್ ಅವರ ಜನ್ಮದಿನ, 8. ಫಾತಿಮಾ ಅಲ್-ಝಹ್ರಾ ಅವರ ಜನ್ಮದಿನ, 9. ಪ್ರಸ್ತುತ ಖಲೀಫರ ಜನ್ಮದಿನ, 10. ರಜಬ್‌ಪ್ರಥಮ ದಿನ, 11. ರಜಬ್‌ಹದಿನೈದನೇ ದಿನ, 12. ಶಾಬಾನ್‌ಪ್ರಥಮ ದಿನ, 13. ಶಾಬಾನ್‌ಹದಿನೈದನೇ ದಿನ, 14. ರಂಝಾನ್ ಹಬ್ಬ, 15. ರಂಝಾನ್‌ಪ್ರಥಮ ದಿನ, 16. ರಂಝಾನ್‌ಮಧ್ಯಭಾಗ, 17. ರಂಜಾನ್‌ಅಂತ್ಯ, 18. ಖತ್ಮ್‌ ನ ರಾತ್ರಿ, 19. ಈದ್ ಅಲ್-ಫಿತರ್ ದಿನ, 20. ತ್ಯಾಗದ ಈದ್ ದಿನ, 21. ಈದ್ ಅಲ್-ಘದೀರ್ ದಿನ, 22. ‘ಚಳಿಗಾಲದ ಉಡುಪು’, 23. ‘ಬೇಸಿಗೆಯ ಉಡುಪು’, 24. ‘ಪರ್ಷಿಯನ್ ಪರ್ಯಾಯ ದ್ವೀಪದ ವಿಜಯ’ ದಿನ, 25. ನವ್ರೂಜ್ ದಿನ [ಪರ್ಷಿಯನ್ ಹಬ್ಬ], 26. ಪೂಜೆಯ ದಿನ [ಕ್ರಿಶ್ಚಿಯನ್], 27. ಕ್ರಿಸ್‌ಮಸ್ [ಕ್ರಿಶ್ಚಿಯನ್], 28 ಲೆಂಟ್ [ಕ್ರಿಶ್ಚಿಯನ್]

ಮೇಲೆ ತಿಳಿಸಿರುವಂತೆ, ಫಾತಿಮೀಯರು ತಮ್ಮ ಆಚರಣೆಗಳನ್ನು ಇಷ್ಟಪಡುತ್ತಿದ್ದರು ಎಂಬುವುದು ಸ್ಪಷ್ಟ! ಅವರು ಏಕೆ ಇಷ್ಟೊಂದು ಆಚರಣೆಗಳನ್ನು ಹೊಂದಿದ್ದರು ಎಂಬುದು ಕೂಡ ಸ್ಪಷ್ಟವಾಗಿದೆ ಮತ್ತು ಅಲ್-ಮಕ್ರೀಝಿ ತನ್ನ ಶೀರ್ಷಿಕೆಯಲ್ಲಿ ಇದರ ಸುಳಿವು ನೀಡಿದ್ದಾರೆ. ‘ಅಬ್ಬಾಸೀ ರಾಜವಂಶʼದ ಪ್ರಮುಖ ಪ್ರತಿಸ್ಪರ್ಧಿಯಾಗಿ, ಫಾತಿಮೀಯರು ಜನಸಾಮಾನ್ಯರ ದೃಷ್ಟಿಯಲ್ಲಿ ತಮ್ಮ ಆಡಳಿತವನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸಲು ಹತಾಶರಾಗಿದ್ದರು. ಹಾಗೆ ಮಾಡಲು ಒಂದು ಮಾರ್ಗವೆಂದರೆ ಈ ದಿನಗಳಲ್ಲಿ ಜನರಿಗೆ ಉಡುಗೊರೆಗಳನ್ನು ವರ್ಷಿಸುವುದು ಮತ್ತು ಜನರು ಸಂತೋಷಿಸಲು ಮತ್ತು ಆನಂದಿಸಲು ಒಂದು ಮಾರ್ಗವನ್ನು ಒದಗಿಸುವುದು. ಈ ದಿನಗಳಲ್ಲಿ ಜನರಿಗೆ ನೀಡಲಾಗುವ ಉಡುಗೊರೆಗಳ ಪ್ರಕಾರಗಳನ್ನು ಅಲ್-ಮಕ್ರೀಝಿ ವಿವರವಾಗಿ ಉಲ್ಲೇಖಿಸುತ್ತಾರೆ, ಕೆಲವೊಮ್ಮೆ ಮಾಂಸ ಮತ್ತು ಬ್ರೆಡ್‌ನ ವಿಲಕ್ಷಣ ಭಕ್ಷ್ಯಗಳು, ಹೆಚ್ಚಿನ ಸಮಯ ಪೇಸ್ಟ್ರಿಗಳು ಮತ್ತು ಸಿಹಿತಿಂಡಿಗಳು ಹಾಗೂ ವಿಶೇಷ ರೀತಿಯ ಬಟ್ಟೆ(‘ಉಡುಪು’ ದಿನಗಳಲ್ಲಿ) ಗಳು. ಕೈರೋಗೆ ಹೋಗಿರುವ ಯಾರಾದರೂ ಫಾತಿಮೀಯರ ವಾಸ್ತುಶಿಲ್ಪ ವೈಭವವನ್ನು ದೃಢೀಕರಿಸಬಹುದು. ಆದರೆ, ಫಾತಿಮೀಯರು ಅಬ್ಬಾಸಿಯರಿಗಿಂತ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಬಯಸಿದ್ದು ವಾಸ್ತುಶಿಲ್ಪದ ಮೂಲಕ ಮಾತ್ರ ಅಲ್ಲ.

ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಝೋರಾಸ್ಟ್ರಿಯನ್ ಮತ್ತು ಕ್ರಿಶ್ಚಿಯನರಿಗೆ ಕೂಡ ಅನೇಕ ಪೇಗನ್ ಹಬ್ಬಗಳನ್ನು ಪಟ್ಟಿ ಮಾಡಲಾಗಿದೆ. ಈ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಮತ್ತು ಆಡಳಿತದ ವಿರುದ್ಧ ದಂಗೆ ಏಳದಂತೆ ತಡೆಯಲು ಇದೆಲ್ಲವನ್ನೂ ಮಾಡಲಾಗಿತ್ತು.

ಇಲ್ಲಿ ಹಲವಾರು ಅಂಶಗಳನ್ನು ಚರ್ಚಿಸಬೇಕಾಗಿದೆ.

1) ಮೇಲಿನಿಂದ ನೋಡುವಾಗ, ಫಾತಿಮೀಯರು ಹಲವಾರು ಪ್ರಮುಖ ವಾರ್ಷಿಕ ಆಚರಣೆಗಳನ್ನು ಸ್ಥಾಪಿಸಿದ್ದರು ಎಂದು ತೋರುತ್ತದೆ ಮತ್ತು ಇವೆಲ್ಲವೂ ಹೆಚ್ಚಿನ ಆಡಂಬರ ಮತ್ತು ವೈಭವವನ್ನು ಒಳಗೊಂಡಿತ್ತು. ಪ್ರಾಥಮಿಕ ಆಚರಣೆಗಳಾದ ಪ್ರವಾದಿ ಮತ್ತು ಇಮಾಮ್‌ಗಳ ಮೌಲಿದ್‌ಗಳು ಮತ್ತು ಗದೀರ್ ಖುಮ್ (ಎಲ್ಲಾ ಶಿಯಾ ಗುಂಪುಗಳು ಪ್ರವಾದಿ ರವರು ‘ಅಲಿ ಬಿನ್ ಅಬಿ ತಾಲಿಬ್ ಅವರನ್ನು ಉತ್ತರಾಧಿಕಾರಿ ಎಂದು ಗೊತ್ತುಪಡಿಸಿದ ದಿನ ಎಂದು ನಂಬುವ ದಿನ) ದಿನದ ಆಚರಣೆಯಾಗಿತ್ತು. ಮೊದಲೇ ಹೇಳಿದಂತೆ, ಇಷ್ಟೊಂದು ಪ್ರದರ್ಶನಗಳ ಪ್ರಾಥಮಿಕ ಉದ್ದೇಶವು ಜನಸಾಮಾನ್ಯರೊಂದಿಗೆ ತಮ್ಮನ್ನು ತಾವು ಮೆಚ್ಚಿಸಿಕೊಳ್ಳುವುದಾಗಿತ್ತು. ಅಂತಹ ಆಚರಣೆಗಳು ಸಾರ್ವಜನಿಕ ರಜಾದಿನಗಳಾಗಿ ಹಾಗೂ ಉತ್ತಮ ಆಹಾರ ಮತ್ತು ಸಿಹಿತಿಂಡಿಗಳನ್ನು ಆನಂದಿಸುವ ಉಲ್ಲಾಸದ ದಿನಗಳಾಗಿ ಮತ್ತು ಸರ್ಕಾರದ ಅಭಿನಂದನೆಗಳನ್ನು ನಿರೀಕ್ಷಿಸುವ ದಿನಗಳಾಗಿತ್ತು.

2) ಮೌಲಿದ್ ಅನ್ನು ಪರಿಚಯಿಸಿದ ಯುಗದ ಬಗ್ಗೆ ನಾವು ಸ್ಥೂಲವಾಗಿ ಊಹಿಸಬಹುದು. ಯಾವುದೇ ಇತರ ಮೂಲಗಳಿಲ್ಲದೆ, ಫಾತಿಮೀಯರು ಮೌಲಿದ್ ಅನ್ನು ಪ್ರಾರಂಭಿಸಿದ[1] ನಿಖರವಾದ ಕಾಲಘಟ್ಟವನ್ನು ಮರುಸ್ಥಾಪಿಸುವುದು ಅಸಾಧ್ಯ. ಅದಲ್ಲದೇ, ಅಲ್-ಮಕ್ರೀಝಿ ರವರ ಇತಿಹಾಸ (ಖ್ಹಿತತ್) ಕೃತಿಯು, ಹಲವಾರು ಇತಿಹಾಸಕಾರರ ಈಗಾಗಲೇ ಕಾಣೆಯಾಗಿರುವ ಉಲ್ಲೇಖಗಳ ಸಂಕಲನವಾಗಿದೆ ಎಂಬುದನ್ನು ನಾವು ಮರೆಯಬಾರದು. ಈ ಇತಿಹಾಸಕಾರರಲ್ಲಿ ಇಬ್ನ್ ಅಲ್-ಮಾಮೂನ್ ಮತ್ತು ಇಬ್ನ್ ತುವೈರ್ ರವರಂತಹ ಹಲವು ಪ್ರತ್ಯಕ್ಷದರ್ಶಿಗಳೂ ಇದ್ದಾರೆ. ಆಧುನಿಕ ವಿದ್ವಾಂಸರು ಅಲ್-ಮಕ್ರೀಝಿ ರವರ ಇತಿಹಾಸದ ಮೂಲಗಳನ್ನು ವಿಶ್ಲೇಷಿಸಿ, ಪ್ರತಿ ಯುಗಕ್ಕೂ, ಅಲ್-ಮಕ್ರೀಝಿ ನಿರ್ದಿಷ್ಟ ಲೇಖಕರನ್ನು ಅವಲಂಬಿಸಿದ್ದಾರೆ ಎಂದು ತೋರಿಸಿದ್ದಾರೆ. ಮೂರನೇ, ನಾಲ್ಕನೇ ಮತ್ತು ಐದನೇ ಶತಮಾನಗಳ ಘಟನೆಗಳಿಗೆ, ಅಲ್-ಮಕ್ರೀಝಿ ಇತರ ಕೃತಿಗಳ ಲೇಖಕರಿಂದ ತೆಗೆದುಕೊಂಡಿದ್ದಾರೆ; ಆರನೇ ಶತಮಾನದ ಘಟನೆಗಳಿಗೆ ಮಾತ್ರ ಅವರು ಇಬ್ನ್ ಅಲ್-ಮಾಮೂನ್‌ ರನ್ನು ಉಲ್ಲೇಖಿಸಿದ್ದಾರೆ ಎಂದು ಸಂಶೋಧಿಸಲಾಗಿದೆ. ಹಾಗಾಗಿ, ಮೌಲಿದ್‌ನ ಮೊದಲ ಸೂಚನೆಯು ಇಬ್ನ್ ಅಲ್-ಮಾಮೂನ್‌ರ ವೃತ್ತಾಂತಗಳಲ್ಲಿ ಕಂಡುಬರುವುದರಿಂದ, ಮೌಲಿದ್ ಅನ್ನು ಪ್ರಥಮವಾಗಿ ಆರನೇ ಹಿಜ್ರಿ ಶತಮಾನದ ಆರಂಭದಲ್ಲಿ ಆಚರಿಸಲಾಯಿತು ಎಂಬ ಊಹೆಯನ್ನು ನಾವು ಸುರಕ್ಷಿತವಾಗಿ ಮುಂದಿಡಬಹುದು.

3) ಪ್ರವಾದಿ(ಸ) ರವರ ಮೌಲಿದ್ ಅನ್ನು ಹೊರತುಪಡಿಸಿ, ಫಾತಿಮೀಯರು ಪರಿಚಯಿಸಿದ ಎಲ್ಲಾ ಮೌಲಿದ್‌ಗಳು ಪ್ರವಾದಿ(ಸ) ರವರ ಕುಟುಂಬದ ಸುತ್ತವೇ ಕೇಂದ್ರೀಕೃತವಾಗಿವೆ. ಫಾತಿಮೀ ರಾಜವಂಶದ ಶಿಯಾ ಸ್ವಭಾವ ಮತ್ತು ಅಲ್ಲಿ ಆಚರಿಸಲಾಗುತ್ತಿದ್ದ ಇತರ ಆಚರಣೆಗಳು, ಹುಟ್ಟುಹಬ್ಬಗಳನ್ನು ಆಚರಿಸುವ ಸಂಪೂರ್ಣ ಪರಿಕಲ್ಪನೆಯು ಇಮಾಮ್‌ಗಳ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಶಿಯಾಗಳದ್ದಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ವಾಸ್ತವವಾಗಿ, ಈ ಮೂಲ ಪುಸ್ತಕಗಳು ಇತರ ಮೌಲಿದ್‌ಗಳ ದಿನಗಳಲ್ಲಿ, ಹೆಚ್ಚಿನ ಸಮಾರಂಭಗಳು ಫಾತೀಮಿಯರ ಮಕ್ಬರಗಳು ಮತ್ತು ಗೋರಿಗಳ ಸುತ್ತಲೂ ನಡೆಯುತ್ತಿದ್ದವು ಎಂದೂ ಉಲ್ಲೇಖಿಸುತ್ತವೆ. ಈ ಸಮಾಧಿ ಸ್ಥಳಗಳಲ್ಲಿಯೇ ಹೆಚ್ಚಿನ ಆಹಾರವನ್ನು ವಿತರಿಸಲಾಗುತ್ತಿತ್ತು. ಆದ್ದರಿಂದ, ಫಾತಿಮೀಯರು ಇಮಾಮರುಗಳ ಮತ್ತು ‘ಅಹ್ಲ್ ಅಲ್-ಬೈತ್’ ರವರ ಮತವನ್ನು ಉತ್ತೇಜಿಸಲು ಮತ್ತು ಅವರ ಧಾರ್ಮಿಕ ವ್ಯಕ್ತಿಗಳನ್ನು ಉನ್ನತೀಕರಿಸಲು ಬಯಸಿದ್ದರು ಎಂಬುವುದು ಸ್ಪಷ್ಟ. ಫಾತಿಮೀಯ ರಾಜವಂಶವು ಕುಸಿದಾಗ, ಇತರ ಮೌಲಿದ್‌ಗಳನ್ನು ಸರಳವಾಗಿ ಮರೆತುಬಿಡಲಾಯಿತು. ಏಕೆಂದರೆ, ಸುನ್ನಿಗಳಿಗೆ ಅವು ಯಾವುದೇ ಮಹತ್ವವನ್ನು ಹೊಂದಿರಲಿಲ್ಲ. ಆದರೆ ಪ್ರವಾದಿ(ಸ) ರವರ ಮೌಲಿದ್ ಮುಂದುವರೆಯಿತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮೌಲಿದ್ ಅಂತಿಮವಾಗಿ ತನ್ನ ಶಿಯಾ ಮೂಲದ ಕಳಂಕವನ್ನು ಕಳೆದುಕೊಂಡರೂ ಮೂಲತಃ ಇಸ್ಮಾಯಿಲಿ ಶಿಯಾರ ಹಬ್ಬವಾಗಿತ್ತು.

4) ಮೌಲಿದ್ ಅನ್ನು ರಬಿ ಅಲ್-ಅವ್ವಲ್ 13 ರಂದು ಆಚರಿಸಲಾಯಿತು ಎಂದು ಆರಂಭಿಕ ಉಲ್ಲೇಖ (ಇಬ್ನ್ ಅಲ್-ಮಾಮುನ್ ಅವರದು)ಗಳು  ನಿರ್ದಿಷ್ಟವಾಗಿ ಹೇಳುತ್ತದೆ. ವಿದ್ವಾಂಸರು ಇದು ಒಂದು ತಪ್ಪು (ಮತ್ತು ಇದನ್ನು ಸಾಬೀತುಪಡಿಸುವ ಅಂಶವೆಂದರೆ ನಂತರದ ಇಬ್ನ್ ಅಲ್-ತುವೈರ್ ಇದನ್ನು ರಬೀ ಅಲ್-ಅವ್ವಲ್ 12 ನೇ ತಾರೀಖಿನಂದು ಆಚರಿಸಲಾಯಿತು ಎಂದು ಸ್ಪಷ್ಟವಾಗಿ ಬರೆದಿದ್ದಾರೆ), ಅಥವಾ ಇದನ್ನು ಆರಂಭದಲ್ಲಿ 13 ನೇ ತಾರೀಖಿನಂದು ಶುರು ಮಾಡಲಾಯಿತು, ಆದರೆ ಒಂದು ಪೀಳಿಗೆಯೊಳಗೆ 12 ನೇ ತಾರೀಖಿಗೆ ಬದಲಾಯಿಸಲಾಯಿತು ಎಂದು ಹೇಳಿದ್ದಾರೆ. ಹೇಗೇ ಆಗಿದ್ದರೂ, ಆರನೇ ಶತಮಾನದ ಮಧ್ಯಭಾಗದಲ್ಲಿ, ಫಾತಿಮೀ ಈಜಿಪ್ಟ್‌ನಲ್ಲಿ ಮೌಲಿದ್ ಅಧಿಕೃತ ರಜಾದಿನವಾಗಿತ್ತು.

ನಂತರ ಒಂದು ಪ್ರಶ್ನೆ ಉದ್ಭವಿಸುತ್ತದೆ: ಈ ಮೌಲಿದ್ ಸುನ್ನಿ ಪ್ರದೇಶಗಳಿಗೆ ಹೇಗೆ ಹರಡಿತು ಮತ್ತು ಫಾತಿಮೀ ಈಜಿಪ್ಟ್‌ನ ಪೂರ್ವ ಮತ್ತು ಪಶ್ಚಿಮದ ಪ್ರದೇಶಗಳಿಗೆ ಅದನ್ನು ಮೊದಲು ಪರಿಚಯಿಸಿದವರು ಯಾರು? ಅದು ಈ ಲೇಖನದ ಮೂರನೇ ಮತ್ತು ಅಂತಿಮ ಭಾಗದ ಸಂವಾದಿಸೋಣ, ಇನ್ಶಾ ಅಲ್ಲಾಹ್.

_______________________________________

[1] ಆಧುನಿಕ ಈಜಿಪ್ಟಿನ ಲೇಖಕ ಹಸನ್ ಅಲ್-ಸಂದುಬಿ, ಈ ವಿಷಯದ ಬಗ್ಗೆ ಅರೇಬಿಕ್ ಭಾಷೆಯ ಏಕೈಕ ಮಾನೋಗ್ರಾಫ್‌ನಲ್ಲಿ, ಈ ಆಚರಣೆಯನ್ನು ಮೊದಲು ಪ್ರಾರಂಭಿಸಿದವರು ಫಾತಿಮೀ ಖಲೀಫ ಅಲ್-ಮುಯಿಜ್ ಎಂದು ಸೂಚಿಸುತ್ತಾರೆ. ಆದರೆ ಅವರು ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಒಂದು ಪುರಾವೆಯನ್ನೂ ಒದಗಿಸಲಿಲ್ಲ. ಅಲ್-ಮುಯಿಝ್ 341 ರಿಂದ 365 A.H. ವರೆಗೆ ಆಳ್ವಿಕೆ ನಡೆಸಿದ್ದರು.

ಡಾ. ಯಾಸಿರ್ ಖಾದಿ

ಶೇಖ್‌ ಯಾಸಿರ್ ರವರು ಮದೀನಾ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಹದೀಸ್‌ನಲ್ಲಿ ಪದವಿ ಮತ್ತು ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಯೇಲ್ ವಿಶ್ವವಿದ್ಯಾಲಯದಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅಲ್ ಮಗ್ರಿಬ್‌ನಲ್ಲಿ ಬೋಧಕ ಮತ್ತು ಶೈಕ್ಷಣಿಕ ವ್ಯವಹಾರಗಳ ಡೀನ್ ಮತ್ತು ಮೆಂಫಿಸ್ ಇಸ್ಲಾಮಿಕ್ ಕೇಂದ್ರದಲ್ಲಿ ವಿದ್ವಾಂಸರಾಗಿದ್ದಾರೆ.

ಕನ್ನಡಾನುವಾಡ: ಎಂ. ಡಿ ಪಾಣೆಮಂಗಳೂರು

ಕೃಪೆ: muslimmatters.org

Leave a Reply