ಭಾಗ 3 – ಪ್ರವಾದಿ(ಸ) ರವರ ಜನ್ಮ ದಿನಾಂಕ ಮತ್ತು ಮೌಲಿದ್ ಇತಿಹಾಸ

0
3rd

ಲೇಖಕರು: ಡಾ. ಯಾಸಿರ್‌ ಖಾದಿ

ನಮ್ಮ ಹಿಂದಿನ ಎರಡು ಲೇಖನಗಳಲ್ಲಿ, ಪ್ರವಾದಿ (ಸ) ರವರ ಜನ್ಮ ದಿನಾಂಕವನ್ನು ನಾವು ಚರ್ಚಿಸಿದ್ದೇವೆ ಮತ್ತು ಅರ್ಧ ಡಜನ್‌ಗೂ ಹೆಚ್ಚು ಅಭಿಪ್ರಾಯಗಳಿವೆ ಎಂದು ತೋರಿಸಿದ್ದೇವೆ. ಅವುಗಳಲ್ಲಿ ಆನೆಯ ವರ್ಷದಲ್ಲಿ ರಬೀಅಲ್-ಅವ್ವಲ್ 8 ರಂದು ಜನಿಸಿದರು ಎಂಬುದು ಪ್ರಬಲ ಅಭಿಪ್ರಾಯವಾಗಿದೆ. ಹಿಜರಿ ಆರನೇ ಶತಮಾನದ ಆರಂಭದಲ್ಲಿ ಶಿಯಾ ಫಾತಿಮೀಯ ಈಜಿಪ್ಟ್‌ನಲ್ಲಿ ಮೌಲಿದ್‌ನ ಸಾರ್ವಜನಿಕ ಆಚರಣೆಯ ಮೊದಲ ದಾಖಲಿತ ನಿದರ್ಶನ ಸಂಭವಿಸಿದೆ ಎಂಬುವುದು ನಾವು ಉಲ್ಲೇಖಿಸಿದ್ದೇವೆ. ಈ ಲೇಖನದಲ್ಲಿ, ಸುನ್ನಿ ಪ್ರದೇಶಗಳಲ್ಲಿ ಮೌಲಿದ್‌ನ ಆರಂಭಿಕ ಉಲ್ಲೇಖಗಳನ್ನು ನಾವು ನೋಡೋಣ.

ಸುನ್ನಿ ಪ್ರದೇಶಗಳಲ್ಲಿ ಮೌಲಿದ್

ಸುನ್ನಿ ಪ್ರದೇಶಗಳಲ್ಲಿ ಮೌಲಿದ್‌ನ ಆರಂಭಿಕ ದಾಖಲಿತ ಉಲ್ಲೇಖವು `ಇಮಾದ್ ಅಲ್-ದೀನ್ ಅಲ್-ಇಸ್ಫಹಾನಿ (ಮರಣ: 597 AH/1200 CE) ಬರೆದ ಅಲ್-ಬರ್ಕ್ ಅಲ್-ಶಾಮಿ ಎಂಬ ಇತಿಹಾಸ ಪುಸ್ತಕದಲ್ಲಿ ಕಂಡುಬರುತ್ತದೆ. ಈ ಕೃತಿಯು ಇಸ್ಲಾಮಿಕ್ ಕ್ಯಾಲೆಂಡರ್‌ನ ಆರನೇ ಶತಮಾನದ ಕೊನೆಯ ಮೂರು ದಶಕಗಳ ಕಾಲದಲ್ಲಿ ಗ್ರೇಟರ್ ಸಿರಿಯಾದಲ್ಲಿ (ಅಂದರೆ, ಶಾಮ್) ನಡೆದ ಪ್ರಮುಖ ರಾಜಕೀಯ ಘಟನೆಗಳನ್ನು ಉಲ್ಲೇಖಿಸುತ್ತದೆ. ವಿಶೇಷವಾಗಿ ಕ್ರುಸೇಡರ್‌ಗಳ ವಿರುದ್ಧದ ಮುಸ್ಲಿಮರ ಯುದ್ಧಗಳನ್ನು ದಾಖಲಿಸುತ್ತದೆ. ದುರದೃಷ್ಟವಶಾತ್, ಮೂಲ ಕೃತಿಯು ಹಸ್ತಪ್ರತಿ ರೂಪದಲ್ಲಿ ಉಳಿದಿದ್ದು, ಅದನ್ನು ಇನ್ನಷ್ಟೇ ಸಂಪಾದಿಸಬೇಕಾಗಿದೆ. ಆದರೆ ಆ ಗ್ರಂಥದ ಹಲವಾರು ಸಾರಾಂಶಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಅಲ್-ಬುಂದಾರಿ ರವರ ಸನಾ ಅಲ್-ಬರ್ಕ್ ಅಲ್-ಶಾಮಿ ಅತ್ಯಂತ ಪ್ರಸಿದ್ಧವಾಗಿದೆ. ಈ ಮುದ್ರಿತ ಕೃತಿಯಿಂದ (ಸನಾ ಅಲ್-ಬರ್ಕ್ ಅಲ್-ಶಾಮಿ, ಕೈರೋ ಆವೃತ್ತಿ, ಪುಟ 49-52) ಈ ಕೆಳಗಿನ ಭಾಗವನ್ನು ಆಯ್ದುಕೊಳ್ಳಲಾಗಿದೆ:

ಇರಾಕ್‌ನ ಪ್ರಸಿದ್ಧ ನಗರವಾದ ಮೊಸುಲ್‌ನಲ್ಲಿ, ನೂರ್ ಅಲ್-ದೀನ್ ಅಲ್-ಝಂಗಿ (ಮರಣ. 569/1174) ಅವರ ಸಹೋದರ 566 A.H./1170 CE ವರ್ಷದಲ್ಲಿ ನಿಧನರಾದರು. ನೂರ್ ಅಲ್-ದೀನ್ ರವರು ಝಂಗಿ ರಾಜವಂಶದ ಪ್ರಸಿದ್ಧ ನಾಯಕರಾಗಿದ್ದರು ಮತ್ತು ಸಲಾಹ್ ಅಲ್-ದೀನ್ ಅಲ್-ಅಯ್ಯೂಬಿ (ಮರಣ. 588/1193) ರವರನ್ನು ಖ್ಯಾತಿಗೆ ಕೊಂಡೊಯ್ಯಲು ಸಹಾಯ ಮಾಡಿದ್ದರು. ನೂರ್ ಅಲ್-ದೀನ್‌ ರವರು ಮೊಸುಲ್ ನಗರಕ್ಕೆ ಭೇಟಿ ನೀಡಿ, ಆ ಪ್ರದೇಶದ ಗವರ್ನರ್ ಆಗಿದ್ದ ತನ್ನ ಸಹೋದರನ ಉತ್ತರಾಧಿಕಾರದ ಬಗ್ಗೆ ಇದ್ದ ವಿವಾದವನ್ನು ಶಮನಗೊಳಿಸಿದರು. ಅಲ್ಲಿ, ಅವರು ಝವಿಯಾ (ಸೂಫಿ ವಿಹಾರ)ದ ಉಸ್ತುವಾರಿ ವಹಿಸಿದ್ದ ಉಮರ್ ಅಲ್-ಮುಲ್ಲಾ ರವರನ್ನು ಭೇಟಿಯಾದರು ಎಂದು ಇತಿಹಾಸಕಾರರು ನಮಗೆ ಹೇಳುತ್ತಾರೆ. ಈ ಝವಿಯಾ ಸ್ಥಳೀಯ ನಾಯಕರು ಮತ್ತು ಕುಲೀನರು ಭೇಟಿ ನೀಡುವ ಜನಪ್ರಿಯ ಸ್ಥಳವಾಗಿತ್ತು. ಮತ್ತು ನಿರ್ದಿಷ್ಟವಾಗಿ ಹೇಳುವುದಾದರೆ, “…ಪ್ರತಿ ವರ್ಷ, ಪ್ರವಾದಿ (ಸ) ರವರ ಮೌಲಿದ್ ದಿನಗಳಲ್ಲಿ, ಅವರು ಮೊಸುಲ್‌ನ ಗವರ್ನರ್ ರನ್ನು ಕವಿಗಳೊಂದಿಗೆ ಆಹ್ವಾನಿಸುತ್ತಿದ್ದರು. ಅವರು ಬಂದು ತಮ್ಮ ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಇದಕ್ಕಾಗಿ [ಗವರ್ನರ್] ರವರಿಂದ ಬಹುಮಾನ ಪಡೆಯುತ್ತಿದ್ದರು.” (ನೋಡಿರಿ: ಇಬ್ನ್ ಕಸೀರ್, ಅಲ್-ಬಿದಾಯ ವ-ಲ್-ನಿಹಾಯ, ಸಂಪುಟ. 12, ಪುಟ. 782)

ಈ ಸಣ್ಣ ಉಲ್ಲೇಖವು, ಸುನ್ನಿ ಪ್ರದೇಶಗಳಲ್ಲಿ ಆಚರಿಸಲಾಗುವ ಸಾರ್ವಜನಿಕ ಮೌಲಿದ್‌ಗೆ ನಮಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿಯಾಗಿದೆ. ಇದನ್ನು ಪ್ರಾರಂಭಿಸಿದ ವ್ಯಕ್ತಿ, ಉಮರ್ ಅಲ್-ಮುಲ್ಲಾ ಓರ್ವ ಸೂಫಿ ತಪಸ್ವಿಯಾಗಿದ್ದು ಧರ್ಮದ ವಿದ್ವಾಂಸರಲ್ಲ. ಅವರ ಜೀವನದ ಬಗ್ಗೆ ಅಥವಾ ಮರಣದ ದಿನಾಂಕದ ಬಗ್ಗೆ ನಮಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಇತಿಹಾಸಕಾರರಾದ ಇಮಾದ್ ಅಲ್-ದೀನ್ ರವರು ಆತನನ್ನು ನೀತಿವಂತ ಸಂತ ಎಂದು ಹೇಳಿಕೊಂಡರೂ (ಇಮಾದ್ ಅಲ್-ದೀನ್ ಅವರ ಕೃತಿಯಿಂದ ಕಥೆಯನ್ನು ನಕಲಿಸಿದ ಎಲ್ಲರೂ ಈ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ), ಬೇರೆ ವಿದ್ವಾಂಸರು ಅದನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ. ಇಬ್ನ್ ರಜಬ್ (ಮರಣ. 795), ತಮ್ಮ ಜೀವನಚರಿತ್ರೆಯ ನಿಘಂಟು, ಧೈಲ್ ತಬಕತ್ ಅಲ್-ಹನಾಬಿಲಾ ದಲ್ಲಿ, ಪ್ರಸಿದ್ಧ ಹಂಬಲಿ ವಿದ್ವಾಂಸರನ್ನು ವಿವರಿಸುವ ಸನ್ನಿವೇಶದಲ್ಲಿ ಈ ಉಮರ್ ಅಲ್-ಮುಲ್ಲಾರ ಬಗ್ಗೆ ಸಣ್ಣದಾಗಿ ಪ್ರಸ್ತಾಪಿಸುತ್ತಾರೆ. ಮೊಸುಲ್‌ನ ಹಂಬಲಿ ವಿದ್ವಾಂಸರಾದ ಮುಹಮ್ಮದ್ ಬಿನ್ ಅಬ್ದ್‌ ಅಲ್‌-ಬಾಖಿ(ಮರಣ. 571 AH), ರವರ ಬಗ್ಗೆ ವಿವರಿಸುವಾಗ, ಉಮರ್ ಅಲ್-ಮುಲ್ಲಾ ರವರನ್ನು ಮೊಸುಲ್ ನಗರದಲ್ಲಿ ಹೇಗೆ ಗೌರವಿಸಲಾಗುತ್ತಿತ್ತು ಮತ್ತು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಮುಹಮ್ಮದ್ ಬಿನ್ ಅಬ್ದುಲ್-ಬಾಖಿ ರವರ ಮೇಲೆ ಕಳ್ಳತನದ ಆರೋಪ ಹೊರಿಸಿ ಅವರನ್ನು ಥಳಿಸಲಾಯಿತು ಎಂದು ಅವರು ಉಲ್ಲೇಖಿಸುತ್ತಾರೆ. “ಈ ಉಮರ್ ಬಗ್ಗೆ ಹೇಳುವುದಾದರೆ, ಅವರು ಬಾಹ್ಯವಾಗಿ ತಮ್ಮನ್ನು ಧರ್ಮನಿಷ್ಠ ವ್ಯಕ್ತಿ ಮತ್ತು ಸಂತ ಎಂದು ತೋರಿಸಿಕೊಂಡರೂ, ಅವರು ನವೀನ ಗುಂಪುಗಳವರು [ಅನುಯಾಯಿ] ಎಂದು ನಾನು ನಂಬುತ್ತೇನೆ. ಮತ್ತು [ಮುಹಮ್ಮದ್ ಬಿ. ಅಬ್ದುಲ್-ಬಾಖಿಯೊಂದಿಗಿನ] ಈ ಘಟನೆಯು [ಇತರರ ವಿರುದ್ಧ] ಅವರ ಅನ್ಯಾಯಗಳು ಮತ್ತು ಅಕ್ರಮಗಳನ್ನು ತೋರಿಸುತ್ತದೆ” ಎಂದು ಇಬ್ನ್ ರಜಬ್ [ಧೈಲ್, ಸಂಪುಟ. 1, ಪುಟ. 254] ಬರೆಯುತ್ತಾರೆ.

ಜನರ ಮೇಲೆ ವಿಧಿಸಲಾಗಿದ್ದ ಅನ್ಯಾಯದ ತೆರಿಗೆಗಳನ್ನು ನೂರ್ ಅಲ್-ದೀನ್ ಝಂಗಿ ರದ್ದುಗೊಳಿಸಿದರು. ಆಗ ಉಮರ್ ಅಲ್-ಮುಲ್ಲಾ, ನೂರ್‌ ಅಲ್‌-ದೀನ್‌ರಿಗೆ ಪತ್ರ ಬರೆದು ಈ ನಿರ್ಧಾರಕ್ಕಾಗಿ ಅವರನ್ನು ಖಂಡಿಸಿದರು ಮತ್ತು ಇದು ಪ್ರದೇಶಲ್ಲಿ ದುಷ್ಟತನ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳಿದ್ದರು ಎಂದಾಗಿ‌ ಇಬ್ನ್ ಕಸೀರ್ (ಮರಣ: 774 AH) ಉಲ್ಲೇಖಿಸುತ್ತಾರೆ. ಆ ಪತ್ರಕ್ಕೆ ನೂರ್ ಅಲ್-ದೀನ್ ಪ್ರತಿಕ್ರಿಯಿಸುತ್ತಾ,

ಅಲ್ಲಾಹನು ಸೃಷ್ಟಿಗಳನ್ನು ಸೃಷ್ಟಿಸಿದನು, ಮತ್ತು ಶರೀಅತ್ ಅನ್ನು ಶಾಸನಬದ್ಧಗೊಳಿಸಿದನು. ಜನರಿಗೆ ಏನು ಪ್ರಯೋಜನಕಾರಿ ಎಂಬುವುದು ಆತನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ [ತೆರಿಗೆಗಳಿಂದ ಬರುವ ಆದಾಯದಲ್ಲಿ] ಹೆಚ್ಚಳವಾಗಬೇಕೆಂದು ಆತನು ಬಯಸಿದ್ದರೆ, ಅದನ್ನು ನಮಗಾಗಿ ಕಾನೂನುಬದ್ಧಗೊಳಿಸುತ್ತಿದ್ದನು. ಹಾಗಾಗಿ, ಅಲ್ಲಾಹನು ವಿಧಿಸಿದ್ದಕ್ಕಿಂತ ಹೆಚ್ಚಿನದನ್ನು ನಾವು ತೆಗೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಶರೀಅತ್‌ಗೆ ಹೊಸತಾಗಿ ಸೇರಿಸುವವನು ಶರೀಅತ್ ಅಪೂರ್ಣ ಎಂದು ಭಾವಿಸುತ್ತಾನೆ ಮತ್ತು ತನ್ನ ಸೇರ್ಪಡೆಯ ಮೂಲಕ ಅವನು ಅದನ್ನು ಪರಿಪೂರ್ಣಗೊಳಿಸ ಬಯಸುತ್ತಾನೆ. ಈ ಕೆಲಸ ಮಾಡುವುದು ಅಲ್ಲಾಹನ ವಿರುದ್ಧ ಮತ್ತು ಆತನು ಶಾಸನಬದ್ಧಗೊಳಿಸಿರುವುದ ವಿರುದ್ಧ ದುರಹಂಕಾರವಾಗಿದೆ. ಆದರೆ ಅಂಧಕಾರ ತುಂಬಿದ ಮನಸ್ಸುಗಳು ಎಂದಿಗೂ ಮಾರ್ಗದರ್ಶನ ಪಡೆಯುವುದಿಲ್ಲ. ಅಲ್ಲಾಹನು ನಮ್ಮನ್ನು ಮತ್ತು ನಿಮ್ಮನ್ನು ನೇರ ಮಾರ್ಗಕ್ಕೆ ಕರೆದೊಯ್ಯಲಿ” [ಅಲ್-ಬಿದಾಯ ವ-ಲ್-ನಿಹಾಯ, ಸಂಪುಟ 12, ಪುಟ 805].

ಸಾಂಪ್ರದಾಯಿಕ ಪಾತ್ರಗಳಿಗೆ ವಿರೋಧಭಾಸ ಎಂಬಂತೆ, ಉಮರ್ ಅಲ್-ಮುಲ್ಲಾ ಅನ್ಯಾಯದ ತೆರಿಗೆ ಸಂಗ್ರಹವನ್ನು ಪ್ರೋತ್ಸಾಹಿಸಿದಾಗ, ನೂರ್ ಅಲ್-ದಿನ್ ಅದನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಅವರು ‘ಸಂತ’ನನ್ನು ಖಂಡಿಸಿದ ಆಡಳಿತಗಾರನಾಗಿದ್ದರು.

ಮುಂದುವರಿಯುವ ಮೊದಲು, ಉಮರ್ ಅಲ್-ಮುಲ್ಲಾ ಸ್ಥಾಪಿಸಿದ ಮೌಲಿದ್‌ನಲ್ಲಿ ಪ್ರವಾದಿ (ಸ) ರವರನ್ನು ಸ್ತುತಿಸುವ ಕವಿತೆಗಳನ್ನು ಹಾಡುವುದನ್ನು ಹೊರತು ಪಡಿಸಿ ಹೆಚ್ಚೇನೂ ಇರಲಿಲ್ಲ ಎಂಬುದು ಗಮನಾರ್ಹ. ದುರದೃಷ್ಟವಶಾತ್, ಇತಿಹಾಸದ ಪುಸ್ತಕಗಳು ಈ ಕವಿತೆಗಳ ಸ್ವರೂಪ ಅಥವಾ ವಿಷಯವನ್ನು ಉಲ್ಲೇಖಿಸುವುದಿಲ್ಲ. ಆದಾಗ್ಯೂ, ಈ ಆರಂಭಿಕ ಹಂತದ ಕವಿತೆಗಳಲ್ಲಿ ಪ್ರವಾದಿ(ಸ) ರವರನ್ನು ಯೋಗ್ಯ ರೀತಿಯಲ್ಲಿಯೇ ಹೊಗಳುತ್ತಿದ್ದರು ಮತ್ತು ನಂತರ ಕವಿಗಳು ಪ್ರವಾದಿವರ್ಯರಿಗೆ ಆರೋಪಿಸಿದ ದಿವ್ಯ ಗುಣಲಕ್ಷಣಗಳ ಉಲ್ಲೇಖಗಳಿಂದ ಮುಕ್ತವಾಗಿದ್ದವು ಎಂದು ಊಹಿಸುವುದು ಕಷ್ಟವೇನಲ್ಲ.

ಮೊಸುಲ್ ನಗರವು ತುಲನಾತ್ಮಕವಾಗಿ ಸಣ್ಣ ಪ್ರಾಂತ್ಯದಲ್ಲಿ ನೆಲೆಗೊಂಡಿತ್ತು ಮತ್ತು ವಿಶಾಲ ಝಂಗಿ ಸಾಮ್ರಾಜ್ಯದ ನಿಯಂತ್ರಣದಡಿಯಲ್ಲಿತ್ತು. ಆದ್ದರಿಂದ, ಮೊಸುಲ್‌ನಲ್ಲಿ ನಡೆಸಲಾದ ಮೌಲಿದ್ ಆಚರಣೆಗಳು ಹೆಚ್ಚಿನ ಗಮನವನ್ನು ಸೆಳೆದಿರುವುದಿಲ್ಲ ಅಥವಾ ಮೌಲಿದ್‌ಗಳಿಗೆ ಬಳಸಲು ದೊಡ್ಡ ಬಜೆಟ್ ಅನ್ನು ಹೊಂದಿರಲಿಲ್ಲ ಎಂಬುದು ಸಹಜ. ಬದಲಾಗಿ, ಇದು ಸಂಭವಿಸಬೇಕಾದರೆ, ಅದನ್ನು ಮಾಡಲು ಶಕ್ತವಾಗಿರುವ ರಾಜವಂಶವು ಪ್ರಾಯೋಜಿಸಬೇಕಾಗಿತ್ತು. ಆ ತರದ ರಾಜವಂಶವು ನೆರೆಯ ಪ್ರಾಂತ್ಯದ ಇರ್ಬಿಲ್‌ನಲ್ಲಿ ನೆಲೆಸಿತ್ತು. ಇದು ಮೊಸುಲ್‌ನಿಂದ ಒಂದು ದಿನಕ್ಕಿಂತ ಕಡಿಮೆ ಪ್ರಯಾಣದ ದೂರದಲ್ಲಿರುವ ನಗರವಾಗಿದೆ. ಮೌಲಿದ್‌ನ ಸುದ್ದಿ ಈ ನಗರಕ್ಕೆ ಹರಡುತ್ತಿದ್ದಂತೆ, ಅರೆ ಸ್ವಾಯತ್ತ ಪ್ರಾಂತ್ಯದ ಆಡಳಿತಗಾರನಾದ ಮುಝಫ್ಫರ್ ಅಲ್-ದೀನ್ ಕೊಕ್ಬುರಿ (ಮರಣ. 630/1232), ಮೌಲಿದ್ ಅನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುವ ಜವಾಬ್ದಾರಿಯನ್ನು ತೆಗೆದುಕೊಂಡನು. ಮೌಲಿದ್ ಇಡೀ ಇರ್ಬಿಲ್‌ಗೆ ಹರಡಲು ಇನ್ನೂ ಕೆಲವು ದಶಕಗಳೇ ಬೇಕಾಗುತ್ತಿತ್ತು. ಆದರೆ ಅಂತಿಮವಾಗಿ, ಏಳನೇ ಶತಮಾನದ ಆರಂಭದಲ್ಲಿ, ಮುಝಫ್ಫರ್ ಅಲ್-ದೀನ್ ತನ್ನ ಸಂಸ್ಥಾನದ ರಾಜ್ಯ ಖಜಾನೆಯ ಮೂಲಕ ಪ್ರಾಯೋಜಿಸಲ್ಪಟ್ಟ ಅತಿರಂಜಿತ ಮೌಲಿದ್ ಸಮಾರಂಭಗಳಿಗೆ ಪ್ರಸಿದ್ಧನಾದನು.

ಮುಝಫ್ಫರ್ ಅಲ್-ದೀನ್ ತನ್ನ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದನು, ಏಕೆಂದರೆ ಅವನು ಸೂಫಿಗಳು ಆರಾಧಿಸಲು ಅನೇಕ ಖಾನ್ಗಾ(ವಿಹಾರಗಳು) ಗಳನ್ನು ನಿರ್ಮಿಸಿ ಕೊಟ್ಟಿದ್ದನು ಎಂದು ಇತಿಹಾಸಕಾರ ಇಬ್ನ್ ಖ್ಹಲ್ಲಿಖಾನ್ (ಮರಣ: 681/1282) ಉಲ್ಲೇಖಿಸುತ್ತಾರೆ. ಇಬ್ನ್ ಖ್ಹಲ್ಲಿಖಾನ್ ಕೂಡ ಇರ್ಬಿಲ್‌ ನಿವಾಸಿಯಾಗಿದ್ದು, ಮುಝಫ್ಫರ್ ಅಲ್-ದೀನ್ ರವರ ಸ್ನೇಹಿತನಾಗಿದ್ದನು. ಅಲ್ಲದೇ, ಮೌಲಿದ್ ಆಚರಣೆಗಳನ್ನು ನೇರವಾಗಿ ವೀಕ್ಷಿಸಿದ್ದರು. ಇಬ್ನ್ ಖ್ಹಲ್ಲಿಖಾನ್ (ತನ್ನ ವಫಾಯತ್ ಅಲ್-ಅಯಾನ್, ಸಂಪುಟ 5, ಪುಟ 78-9 ರಲ್ಲಿ) ಬರೆಯುತ್ತಾರೆ:

ಮೌಲಿದ್‌ಗೆ ಎರಡು ದಿನಗಳ ಮುಂಚೆ, ಮುಝಫ್ಫರ್ ಅಲ್-ದೀನ್; ಎಣಿಸಲಾಗದಷ್ಟು ದೊಡ್ಡ ಸಂಖ್ಯೆಯಲ್ಲಿ ಒಂಟೆಗಳು, ಹಸುಗಳು ಮತ್ತು ಕುರಿಗಳನ್ನು ಡ್ರಮ್‌ಗಳು, ಹಾಡು ಮತ್ತು ಇತರ ವಾದ್ಯಗಳೊಂದಿಗೆ ಹೊರಗೆ ಕಳುಹಿಸಿಕೊಡುತ್ತಿದ್ದನು. ಅವು [ನಗರದ ಹೊರಗೆ] ದೊಡ್ಡ ತೆರೆದ ಮೈದಾನವನ್ನು ತಲುಪಿದ ಮೇಲೆ ವಧಿಸಲಾಗುತ್ತಿತ್ತು. ನಂತರ ಹಂಡೆಗಳನ್ನು ಹೊಂದಿಸಿ ಮೌಲಿದ್‌ರಾತ್ರಿ[ಅಂದರೆ ಮೌಲಿದ್‌ಹಿಂದಿನ ರಾತ್ರಿ] ಆಗುವವರೆಗೆ ವಿವಿಧ ಆಹಾರಗಳನ್ನು ಬೇಯಿಸಲಾಗುತ್ತಿತ್ತು. ರಾತ್ರಿ, ಆತನು ತನ್ನ ಕೋಟೆಯಲ್ಲಿ ಸಮʻಅ [ವಿಶೇಷ ಕವಿತೆಗಳನ್ನು] ಗಳನ್ನು ಹಾಡಲು ಅನುಮತಿಸುತ್ತಿದ್ದನು. ನಂತರ ಅವನು [ಜನರ ಬಳಿಗೆ] ತೆರಳುತ್ತಿದ್ದನು. ಮೆರವಣಿಗೆಯನ್ನು ಲೆಕ್ಕವಿಲ್ಲದಷ್ಟು ಮೇಣದಬತ್ತಿಗಳಿಂದ ನಡೆಸಲಾಗುತ್ತಿತ್ತು. ಮೇಣದಬತ್ತಿಗಳಲ್ಲಿ ಎರಡು ಅಥವಾ ನಾಲ್ಕು – ಈಗ ನನಗೆ ನೆನಪಾಗುತ್ತಿಲ್ಲ – ಅವು ಎಷ್ಟು ದೊಡ್ಡದಾಗಿವೆಯೆಂದರೆ ಪ್ರತಿಯೊಂದನ್ನು ಹೇಸರಗತ್ತೆಯ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು ಮತ್ತು ಸೂಫಿ ವಿಹಾರವನ್ನು ತಲುಪುವವರೆಗೆ ಮೇಣದಬತ್ತಿಯನ್ನು [ಹೇಸರಗತ್ತೆಯ ಮೇಲೆ] ನೆಟ್ಟಗೆ ಇಡುವ ಜವಾಬ್ದಾರಿಯನ್ನು ಒಬ್ಬ ವ್ಯಕ್ತಿಗೆ ವಹಿಸಲಾಗುತಿತ್ತು. ನಂತರ, ಮೌಲಿದ್‌ಬೆಳಿಗ್ಗೆ, ರಾಜ ನಿಲುವಂಗಿಯನ್ನು ಅರಮನೆಯಿಂದ ಖಾನ್ಗಾ (ಸೂಫಿ ವಿಹಾರ)ಕ್ಕೆ ಸ್ವತಃ ಸೂಫಿಗಳ ಕೈಯಲ್ಲಿ ತೆಗೆದುಕೊಂಡು ಹೋಗಬೇಕೆಂದು ಆದೇಶಿಸುತ್ತಿದ್ದನು. ಪ್ರತಿಯೊಬ್ಬ ಸೂಫಿಯೂ ತನ್ನ ಕೈಗೆ ದುಬಾರಿ ಪಟ್ಟಿಯನ್ನು ಧರಿಸುತ್ತಿದ್ದರು, ಮತ್ತು ಅವರೆಲ್ಲರೂ ಮೆರವಣಿಗೆಯಲ್ಲಿ ಒಬ್ಬರ ಹಿಂದೆ ಒಬ್ಬರು ನಡೆಯುತ್ತಿದ್ದರು. ನನಗೆ ಪರಿಶೀಲಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಅವರ ಪ್ರಮಾಣವಿತ್ತು. ನಂತರ, ಮುಖಫ್ಫರ್ ಅಲ್-ದೀನ್ ಸ್ವತಃ ಖಾನ್ಗಾಗೆ ಬರುತ್ತಿದ್ದನು. ಎಲ್ಲಾ ಕುಲೀನರು, ನಾಯಕರು ಮತ್ತು ದೊಡ್ಡ ಮನುಷ್ಯರು ಅಲ್ಲಿ ಒಟ್ಟುಗೂಡುತ್ತಿದ್ದರು. ಧರ್ಮೋಪದೇಶಕರಿಗೆ ಒಂದು ಕುರ್ಚಿಯನ್ನು ಇರಿಸಲಾಗುತ್ತಿತ್ತು, ಮತ್ತು‌ ಮರದಿಂದ[ಸಂದರ್ಭಕ್ಕಾಗಿ ನಿರ್ಮಿಸಲಾದ] ಮಾಡಿದ ವಿಶೇಷ ವೇದಿಕೆಯಲ್ಲಿ ಸ್ವತಃ ಮುಸಾಫರ್ ಅಲ್-ದೀನ್ ಆಸೀನನಾಗುತ್ತಿದ್ದನು.  ಆ ವೇದಿಕೆಗೆ ಅನೇಕ ಕಿಟಕಿಗಳಿದ್ದವು, ಅವುಗಳಲ್ಲಿ ಕೆಲವು ಜನರ ಕಡೆಗೆ ತೆರೆದಿದ್ದರೆ ಮತ್ತು ಕೆಲವು ಮೈದಾನದ ಕಡೆಗಿದ್ದವು. ಆ ಮೈದಾನವು ತುಂಬಾನೇ ವಿಶಾಲವೂ ಅಪಾರವೂ ಆಗಿತ್ತು. ಪದಾತಿ ದಳವೂ ಇಲ್ಲಿ ಮೆರವಣಿಗೆಯಲ್ಲಿ ಸೇರುತ್ತಿತ್ತು. ಆದ್ದರಿಂದ ಮುಝಫ್ಫರ್ ಅಲ್-ದೀನ್ ದಿನವಿಡೀ ಜನರನ್ನು ಮತ್ತು ಧರ್ಮ ಉಪದೇಶಗಳನ್ನು ನೋಡುತ್ತಿದ್ದನು. ಕೆಲವೊಮ್ಮೆ ಪದಾತಿ ದಳವನ್ನು ನೋಡುತ್ತಿದ್ದನು. ಪದಾತಿ ದಳವು ತಮ್ಮ ಮೆರವಣಿಗೆಗಳನ್ನು ಮುಗಿಸುವವರೆಗೆ ಇದು ಮುಂದುವರಿಯುತ್ತಿತ್ತು. ನಂತರ, ಬಡವರಿಗಾಗಿ ಸಾಮಾನ್ಯ ಬಟ್ಟೆಯನ್ನು ಹಾಸಲಾಗುತ್ತಿತ್ತು. ಬಯಸುವವರೆಲ್ಲರೂ ಅದರಿಂದ ಬ್ರೆಡ್ ಮತ್ತು ಲೆಕ್ಕವಿಲ್ಲದಷ್ಟು ಇತರ ರೀತಿಯ ಆಹಾರವನ್ನು ತಿನ್ನಬಹುದು! ವಿಹಾರದ ಜನರಿಗೆ, ಸಿಂಹಾಸನದ ಹತ್ತಿರದವರಿಗೆ ಮತ್ತೊಂದು ಬಟ್ಟೆಯನ್ನು ಹಾಸಲಾಗುತಿತ್ತು. ಧರ್ಮ ಉಪದೇಶಗಳನ್ನು ನೀಡಲಾಗುತ್ತಿದ್ದಾಗ, ಸಲ ಬಂದ [ಪ್ರತಿಯೊಬ್ಬ ಭಾಷಣಕಾರರನ್ನು], ಗಣ್ಯರು, ನಾಯಕರು ಮತ್ತು ಅತಿಥಿಗಳು: ವಿದ್ವಾಂಸರು, ಧರ್ಮ ಉಪದೇಶಕರು, ವಾಚನಕಾರರು ಮತ್ತು ಕವಿಗಳನ್ನು ಒಬ್ಬೊಬ್ಬರಾಗಿ ಕರೆದು ಪ್ರತಿಯೊಬ್ಬರಿಗೂ ಬಟ್ಟೆಗಳನ್ನು ನೀಡುತ್ತಿದ್ದನು. ನಂತರ ಅವರು ತಮ್ಮ ಆಸನಗಳಿಗೆ ಹಿಂತಿರುಗುತ್ತಿದ್ದರು. ಇದು ಮುಗಿದ ನಂತರ, ಅವರೆಲ್ಲರೂ ಆಹಾರವನ್ನು ಸೇವಿಸಲು ಹಾಸಿನಲ್ಲಿ ಸೇರುತ್ತಿದ್ದರು. ಇದು ‘ಅಸ್ರ್ ನಮಾಜ್’ ಮುಗಿಯುವವರೆಗೆ ಅಥವಾ ಅದರ ನಂತರವೂ ಮುಂದುವರಿಯುತ್ತಿತ್ತು. ಅವರು ಅಲ್ಲಿಯೇ ರಾತ್ರಿ ಕಳೆಯುತ್ತಿದ್ದರು. ಸಮಾ’ಅಗಳು ಮರುದಿನದವರೆಗೆ ಮುಂದುವರಿಯುತ್ತಿದ್ದವು ಮತ್ತು ಇದನ್ನು ಪ್ರತಿ ವರ್ಷವೂ ಮಾಡಲಾಗುತ್ತಿತ್ತು. ವಾಸ್ತವವಾಗಿ ನಾನು ವಿವರಿಸಿದ್ದು ನಿಜಚಿತ್ರಣದ ಸಣ್ಣ ಸಾರಾಂಶವಾಗಿದೆ. ಏಕೆಂದರೆ ಇದನ್ನು ವಿವರವಾಗಿ ಉಲ್ಲೇಖಿಸುವುದು ತುಂಬಾ ಜಟಿಲವಾಗಿದೆ ಮತ್ತು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಂತಿಮವಾಗಿ, ಸಮಾರಂಭಗಳು ಪೂರ್ಣಗೊಂಡಾಗ, ದೂರದಿಂದ ಬಂದ ಪ್ರತಿಯೊಬ್ಬ ಸಂದರ್ಶಕರಿಗೂ ಅವರ ಮನೆಗೆ ಪ್ರಯಾಣಕ್ಕಾಗಿ ಒಂದು ಮೊತ್ತವನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇಬ್ನ್ ದಿಹ್ಯ, ಇರ್ಬಿಲ್ ಮೂಲಕ ಹಾದುಹೋದಾಗ, ಮುಝಫ್ಫರ್ ಅಲ್-ದೀನ್ ರವರ ಚಟುವಟಿಕೆ ನೋಡಿ, ಮೌಲಿದ್ ಬಗ್ಗೆ ಒಂದು ಕೃತಿಯನ್ನು ಬರೆದಿದ್ದರು. ಅದಕ್ಕಾಗಿ ಅವರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ಕೊಡಲಾಯಿತು ಮತ್ತು ಅವರ ವಾಸ್ತವ್ಯದ ಅವಧಿಯ ವರಗೆ ಅವರಿಗೆ ಉದಾರ ಆತಿಥ್ಯವೂ ಒದಗಿಸಲಾಯಿತು.

ನಾವು‌ ಈ ಮೇಲೆ ಗಮನಿಸಿರುವಂತೆ, ಮುಝಫ್ಫರ್ ಅಲ್-ದೀನ್ ರವರ ಈ ಸಮಾರಂಭವು ಅತ್ಯಂತ ಅದ್ದೂರಿ ಮತ್ತು ಅತಿರಂಜಿತ ವ್ಯವಹಾರವಾಗಿತ್ತು. ಇದು ಸ್ಥಳೀಯರು ಮತ್ತು ಸಂದರ್ಶಕರ ದೊಡ್ಡ ಗುಂಪನ್ನು ಆಕರ್ಷಿಸಿತ್ತು. ತುಲನಾತ್ಮಕವಾಗಿ ನಿರುಪದ್ರವಿಯಾಗಿದ್ದ ಉಮರ್ ಅಲ್-ಮುಲ್ಲಾ ರವರ ಮೌಲಿದ್ ಅನ್ನು ಈಗ ಬೇರೆಯೇ ಹಂತಕ್ಕೆ ಕೊಂಡೊಯ್ಯಲಾಗಿದೆ ಎಂಬುದು ಸ್ಪಷ್ಟ. ಮುಝಫ್ಫರ್ ಅಲ್-ದೀನ್ ಆಚರಣೆಗಳು ಉಮರ್ ಅಲ್-ಮುಲ್ಲಾ ಅವರ ಆಚರಣೆಗಳಿಗಿಂತ ಹೆಚ್ಚಿನ ಗಮನ ಸೆಳೆದ ಕಾರಣ, ಅದು ಮೌಲಿದ್ ಪದ್ಧತಿಯನ್ನು ಹರಡುವಲ್ಲಿ ಮತ್ತು ಅದರ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಇದರಿಂದ, ಇಸ್ಲಾಮಿಕ್ ಕ್ಯಾಲೆಂಡರ್‌ನ ಏಳನೇ ಶತಮಾನದ ಆರಂಭದಲ್ಲಿ ಉಮರ್ ಅಲ್-ಮುಲ್ಲಾ ಮತ್ತು ನಂತರ ಮುಝಫ್ಫರ್ ಅಲ್-ದೀನ್ ಅವರ ಕ್ರಿಯೆಗಳ ಮೂಲಕ ಮೌಲಿದ್ ಅನ್ನು ಸುನ್ನಿ ಪ್ರದೇಶಗಳಿಗೆ ಆಮದು ಮಾಡಿಕೊಳ್ಳಲಾಯಿತು ಎಂಬುದು ಸ್ಪಷ್ಟವಾಗುತ್ತದೆ. ಸಮಕಾಲೀನ ಲೇಖಕರೊಬ್ಬರು ಈ ಅಂಶವನ್ನು ಯಾವುದೇ ಸಂದೇಹವಿಲ್ಲದೆ ಸಾಬೀತುಪಡಿಸುತ್ತಾರೆ. ಅಬು ಶಾಮಾ ಅಲ್-ಮಕ್ದಿಸಿ (ಮರಣ. 665) ಡಮಾಸ್ಕಸ್‌ನ ಪ್ರಸಿದ್ಧ ಇತಿಹಾಸಕಾರರಾಗಿದ್ದರು ಮತ್ತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅವರ ಕಿತಾಬ್ ಅಲ್-ಬೈತ್ ಆಲಾ ಇಂಕಾರ್ ಅಲ್-ಬಿದಾ` ವ-ಲ್-ಹವಾದಿತ್ ಎಂಬ ಪುಸ್ತಕವು ಹೆಚ್ಚು ಪ್ರಸಿದ್ಧವಾಗಿದೆ. ಅದರಲ್ಲಿ, ಧಾರ್ಮಿಕ ನಾವೀನ್ಯತೆಗಳು ಖಂಡನೀಯ ಅಥವಾ ಪ್ರಶಂಸನೀಯವಾಗಿರಬಹುದು (ಇದೊಂದು ದೇವತಾಶಾಸ್ತ್ರೀಯ ಅಭಿಪ್ರಾಯವಾಗಿದ್ದು ವಿದ್ವಾಂಸರ ನಡುವೆ ಚರ್ಚೆಯ ವಿಷಯವಾಗಿದೆ. ಇದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸ ಬಹುದಾಗಿದೆ) ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ. ಮೌಲಿದ್ ಅನ್ನು ಅವರು ಪ್ರಶಂಸನೀಯ ನಾವೀನ್ಯತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ನಮಗೆ ಕಾಳಜಿ ಇರುವುದು ಅಬು ಶಮಾ ಅವರ ಮೌಲಿದ್ ಕುರಿತಾದ ಸಿಂಧುತ್ವದ ತೀರ್ಪಲ್ಲ. ಬದಲಿಗೆ ಅವರ ಐತಿಹಾಸಿಕ ಸಂದರ್ಭ. ಅವರು ಬರೆಯುತ್ತಾರೆ, [ಕಿತಾಬ್ ಅಲ್-ಬೈತ್, (ಕೈರೋ ಮುದ್ರಣ, 1978), ಪುಟ 24],

“ಮತ್ತು ನಮ್ಮ ಕಾಲದಲ್ಲಿ ಪರಿಚಯಿಸಲಾದ ಅತ್ಯುತ್ತಮ ವಿಷಯಗಳಲ್ಲಿ ಇರ್ಬಿಲ್ ನಗರದಲ್ಲಿ ಪ್ರತಿ ವರ್ಷ ಪ್ರವಾದಿ (ಸ) ಜನಿಸಿದ ದಿನದಂದು ಸಂಭವಿಸುತ್ತದೆ‌ – ಅಲ್ಲಾಹನು ಅದನ್ನು ಸಂರಕ್ಷಿಸಲಿ. [ಈ ದಿನ], ದಾನವನ್ನು ವಿತರಿಸಲಾಗುತ್ತದೆ, ಮತ್ತು ಒಳ್ಳೆತನ [ಕಾರ್ಯಗಳನ್ನು ನಡೆಸಲಾಗುತ್ತದೆ], ಮತ್ತು ಸಂಭ್ರಮವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಸಂತೋಷವು [ವಿಪುಲವಾಗಿದೆ]. ಮತ್ತು ಇದೆಲ್ಲವೂ, ಬಡವರಿಗೆ ಪ್ರಯೋಜನಕಾರಿಯಾಗುವುದರ ಜೊತೆಗೆ, ಪ್ರವಾದಿ (ಸ) ರವರ ಪ್ರೀತಿಯ ಬಾಹ್ಯ ಅಭಿವ್ಯಕ್ತಿಯಾಗಿದೆ ಹಾಗೂ ಅವರ ಬಗ್ಗೆ ಗೌರವವನ್ನು ಪ್ರದರ್ಶಿಸುತ್ತದೆ. ಇದನ್ನು [ಆಚರಣೆ] ಮಾಡುವವರ ಹೃದಯದಲ್ಲಿರುವ ಗೌರವವನ್ನು ತೋರಿಸುತ್ತದೆ. ಲೋಕಗಳಿಗೆ ಕರುಣೆಯಾಗಿ ಕಳುಹಿಸಿದ ಸಂದೇಶವಾಹಕರ ಅಸ್ತಿತ್ವದ ಮೂಲಕ ಅಲ್ಲಾಹನು ನಮಗೆ ಆಶೀರ್ವದಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಇದನ್ನು ಪ್ರಪಥಮವಾಗಿ ಮಾಡಿದ ವ್ಯಕ್ತಿ ಮೋಸುಲ್‌ನ [ಒಬ್ಬ ಪುರುಷ], ಶೇಖ್ ಉಮರ್ ಬಿನ್ ಮುಹಮ್ಮದ್ ಅಲ್-ಮುಲ್ಲಾ, ಪ್ರಸಿದ್ಧ ಮತ್ತು ನೀತಿವಂತ ವ್ಯಕ್ತಿ. ಇರ್ಬಿಲ್‌ನ ಗವರ್ನರ್ ಮತ್ತು ಇತರರು ಈ ಕಾರ್ಯವನ್ನು ಆತನಿಂದ ತೆಗೆದುಕೊಂಡಿದ್ದಾರೆ.

ಈ ವಾಕ್ಯವೃಂದದಿಂದ, ಮೌಲಿದ್‌ನ ಪದ್ಧತಿಯು ಡಮಾಸ್ಕಸ್‌ನಲ್ಲಿರುವ ಅಬೂ ಶಾಮಾಗೆ ಈಗಾಗಲೇ ತಿಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಆಚರಣೆಯು ಡಮಾಸ್ಕಸ್‌ನಲ್ಲಿ ಅಲ್ಲ, ಇರ್ಬಿಲ್‌ನಲ್ಲಿ ನಡೆಯುತ್ತದೆ ಎಂದಾಗಿ ಅವರು ಗಮನಸೆಳೆದಿದ್ದಾರೆ. ಆದ್ದರಿಂದ, ಏಳನೇ ಶತಮಾನದ ಮಧ್ಯಭಾಗದ ಈ ಹಂತದಲ್ಲಿ ಮೌಲಿದ್‌ನ ಸುದ್ದಿ ಸುಮಾರು 500 ಮೈಲುಗಳಷ್ಟು ದೂರದಲ್ಲಿರುವ ಡಮಾಸ್ಕಸ್‌ಗೆ ತಲುಪಿದೆ, ಆದರೆ ಡಮಾಸ್ಕಸ್ ನಗರವು ಇನ್ನೂ ತನ್ನದೇ ಆದ ಮೌಲಿದ್ ಅನ್ನು ಪ್ರಾರಂಭಿಸಿರಲಿಲ್ಲ.

ಮೌಲಿದ್‌ನ ಫಾತಿಮೀಯರ ಆಚರಣೆಗಳು ಮತ್ತು ಮುಝಫ್ಫರ್ ಅಲ್-ದೀನ್ ಪ್ರಾಯೋಜಿಸಿದ ಆಚರಣೆಗಳ ನಡುವಿನ ಹೋಲಿಕೆಗಳು ಗಮನಾರ್ಹವಾಗಿದೆ: ಎರಡೂ ಸಂದರ್ಭಗಳಲ್ಲಿ, ಜನತೆಯ ಮೇಲೆ ಹೇರಿದ ಆಡಂಬರ, ಪ್ರದರ್ಶನ ಮತ್ತು ಔದಾರ್ಯವು ಈ ಆಡಳಿತಗಾರರನ್ನು ಜನರಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬೇಕು.

ಮುಂದುವರಿಯುವ ಮೊದಲು, ಕೆಲವು ದಶಕಗಳ ಹಿಂದೆ ಹೋಗಿ ಮೌಲಿದ್‌ (ಅದನ್ನು ಹಾಗೆ ಕರೆಯಬಹುದಾದರೆ) ನ ಮತ್ತೊಂದು ಮೂಲ ಆವೃತ್ತಿಯನ್ನು ಉಲ್ಲೇಖಿಸುವುದು ಪ್ರಸ್ತುತವಾಗಿದೆ. ಈ ಆವೃತ್ತಿಯು ಇಬ್ನ್ ಜುಬೈರ್ (ಮರಣ: 614 AH) ಅವರ ಪ್ರವಾಸ ಕಥನದಲ್ಲಿ ಕಂಡುಬರುತ್ತದೆ. ಹಜ್ ನಿರ್ವಹಿಸಲೆಂದು ಅವರು ಅಂದಲೂಸ್‌ನಿಂದ ಹೊರಟು ಮುಂದಿನ ಕೆಲವು ವರ್ಷಗಳನ್ನು ಮುಸ್ಲಿಮ್‌ ಪ್ರದೇಶದಲ್ಲಿ ಪ್ರವಾಸ ಮಾಡಿದರು. ಅಂತಿಮವಾಗಿ ತನ್ನ ಪ್ರಯಾಣವನ್ನು ದಾಖಲಿಸಲು ಉತ್ತರ ಆಫ್ರಿಕಾದಲ್ಲಿ ನೆಲೆಸಿದರು. ಇಬ್ನ್ ಜುಬೈರ್ ಹಿಜರಿ 579 ರಲ್ಲಿ ಮಕ್ಕಾವನ್ನು ತಲುಪಿದ್ದರು. ಅವರು ಉಲ್ಲೇಖಿಸಿರುವಂತೆ: ರಬೀಅಲ್-ಅವ್ವಲ್ ತಿಂಗಳ ಮೊದಲ ಸೋಮವಾರದಂದು, ಪ್ರವಾದಿ (ಸ) ಜನಿಸಿದ ಮನೆ ಮತ್ತು ಪ್ರವಾದಿವರ್ಯರ ಜೀವನಕ್ಕೆ ಸಂಬಂಧಿಸಿದ ಇತರ ಕೆಲವು ಐತಿಹಾಸಿಕ ಸ್ಥಳಗಳನ್ನು ಸಂದರ್ಶಕರಿಗೆ ತೆರೆದಿಡಲಾಗುತಿತ್ತು. ಸಂದರ್ಶಕರು ಈ ಮನೆಗಳನ್ನು ಪ್ರವೇಶಿಸಿ ಅದರಿಂದ ಆಶೀರ್ವಾದ ಪಡೆಯುತ್ತಿದ್ದರು.* [ನೋಡಿರಿ: The Travels of Ibn Jubayr, ed. M. J. De Goeje, p. 114-5]

ಆದ್ದರಿಂದ, ಮಕ್ಕಾದ ಮುಸ್ಲಿಮರು ರಬೀಅಲ್-ಅವ್ವಲ್ ತಿಂಗಳ ಮೊದಲ ಸೋಮವಾರದಂದು ವಿಶೇಷವಾದದ್ದನ್ನು ಮಾಡಿದರು ಮತ್ತು ಅದು ಪ್ರವಾದಿಯವರ ಜನ್ಮ ತಾಳಿದ ಮನೆಯನ್ನು ತೆರೆಯುವುದು ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಮಹತ್ವದ್ದಾಗಿರುವುದು ಅವರು ಮಾಡಿದ್ದು ಅಷ್ಟೆ. ಯಾವುದೇ ಆಚರಣೆಗಳಿಲ್ಲ, ಹಬ್ಬಗಳಿಲ್ಲ, ಹಾಡುಗಳಿಲ್ಲ, ಸಮಾರಂಭಗಳಿಲ್ಲ. ಇದೆಲ್ಲವೂ ನಂತರ ಬರಬೇಕಿತ್ತಷ್ಟೇ. ವಾಸ್ತವವಾಗಿ, ಮಕ್ಕಾದಲ್ಲಿ ಮೌಲಿದ್ ಅನ್ನು ರಬೀಅಲ್-ಅವ್ವಲ್ 12 ರಂದು ʻಆಚರಿಸಲೂʼ ಇಲ್ಲ. ಬದಲಿಗೆ ತಿಂಗಳ ಮೊದಲ ಸೋಮವಾರದಂದು ಆಚರಿಸಲಾಗುತ್ತಿತ್ತು. ದೂರದ ಇರ್ಬಿಲ್ ನಗರದಲ್ಲಿ ಮುಝಫ್ಫರ್ ಅಲ್-ದೀನ್ ಆಚರಿಸುವ ಮೊದಲು, ಆರನೇ ಶತಮಾನದ ಉತ್ತರಾರ್ಧದಲ್ಲಿ ಮಕ್ಕಾದಲ್ಲಿ ಮೌಲಿದ್‌ನ ವ್ಯಾಪ್ತಿ ಹೀಗಿತ್ತು. ಆದ್ದರಿಂದ, ಆಧುನಿಕ ಮೌಲಿದ್‌ಗಳಿಗೆ ಇದನ್ನು ಸಮರ್ಥನೆಯಾಗಿ ಉಲ್ಲೇಖಿಸುವುದು ಸೂಕ್ತವಲ್ಲ.

ನಿಧಾನವಾಗಿ ಆದರೆ ಖಚಿತವಾಗಿ, ಮೌಲಿದ್ ಆಚರಿಸುವ ಪದ್ಧತಿ ಇತರ ಮುಸ್ಲಿಮ್‌ ಪ್ರದೇಶಗಳಿಗೆ ಹರಡಿತು ಮತ್ತು ದಶಕಗಳು ಶತಮಾನಗಳಾಗಿ ಬದಲಾದಂತೆ, ಹೆಚ್ಚು ಹೆಚ್ಚು ಆಚರಣೆಗಳ ಪದರಗಳನ್ನು ಸೇರಿಸಲಾಯಿತು ಎಂಬುವುದ ಕಾಣಬಹುದು. ಹೆಚ್ಚಿನ ಪ್ರದೇಶಗಳಲ್ಲಿ ಮೌಲಿದ್ ಯಾವಾಗ ಪ್ರಾರಂಭಿಸಲಾಯಿತು ಅಥವಾ ಪ್ರತಿ ಪ್ರದೇಶಗಳಿಗೆ ಈ ಕಲ್ಪನೆಯನ್ನು ರಫ್ತು ಮಾಡಿದ ವ್ಯಕ್ತಿಯನ್ನು ಸಹ ನಿಖರವಾಗಿ ದಾಖಲಿಸುವುದು ಅಸಾಧ್ಯ. ಆದಾಗ್ಯೂ, ಕೆಲವೊಮ್ಮೆ, ನಮಗೆ ಅಂತಹ ಸುಳಿವುಗಳು ಸಿಗುತ್ತದೆ. ಉದಾಹರಣೆಗೆ, ಉತ್ತರ ಆಫ್ರಿಕಾದಲ್ಲಿ ಮೌಲಿದ್‌ನ ಆರಂಭವನ್ನು ನಾವು ಪತ್ತೆಹಚ್ಚಬಹುದು ಮತ್ತು ಅಲ್ಲಿಂದ ಅಂದಲೂಸ್‌ಗೆ ಅಬು ಅಲ್-ಅಬ್ಬಾಸ್ ಅಲ್-ಅಝಫಿ (ಮರಣ: 633 AH) ಎಂಬ ನಿರ್ದಿಷ್ಟ ವ್ಯಕ್ತಿಯ ಪ್ರಯತ್ನಗಳನ್ನು ಗುರುತಿಸಬಹುದು. ಅವರು ‘ದಿ ಎಡಿಟೆಡ್ ಪರ್ಲ್ ರಿಗಾರ್ಡಿಂಗ್ ದಿ ಬರ್ತ್ ಆಫ್ ದಿ ಹಾನರೇಬಲ್ ಪ್ರಾಫೆಟ್’ ಎಂಬ ಕೃತಿಯನ್ನು ಬರೆದರು. ಅಂತಿಮವಾಗಿ ಮೌಲಿದ್ ಆಚರಣೆಯನ್ನು ಒಪ್ಪಿತಗೊಳಿಸುವುದರಲ್ಲಿ ಈ ಕೃತಿಯು ಮುಂಚೂಣಿಯ ಪಾತ್ರವಹಿಸಿದೆ. ಅಬು ಅಲ್-ಅಬ್ಬಾಸ್ ಆ ಕೃತಿಯಲ್ಲಿ ಮೌಲಿದ್ ಆಚರಣೆಯನ್ನು ಒಪ್ಪಿತಗೊಳಿಸುವ ಉದ್ದೇಶವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಅಂದಲೂಸ್‌ನ ಕೆಲವು ಮುಸ್ಲಿಮರು ಈಗಾಗ್ಲೇ ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದ ಕ್ರಿಸ್‌ಮಸ್, ನವ್ರೂಜ್‌ ಮತ್ತು ಇತರ ಪವಿತ್ರ ದಿನಗಳು, ಕ್ರಿಶ್ಚಿಯನ್ನರ ಮತ್ತು ಪೇಗನ್‌ಗಳ ದುಷ್ಟ ಮತ್ತು ಖಂಡನೀಯ ಕ್ರಿಯೆಯಿಂದ ಮುಸ್ಲಿಮರನ್ನು ದೂರವಿರಿಸುವುದು ಅವರ ಉದ್ದೇಶ ಆಗಿತ್ತು. ಅವರು ಬರೆಯುತ್ತಾರೆ, “ಈ ಬಿದ್‌ಅತ್‌ಗಳಿಂದ ಜನರ ಗಮನವನ್ನು ಅನುವದನೀಯವಾದ ಕಾರ್ಯಕ್ಕೆ ಸೆಳೆಯುವಂತೆ ಮಾಡುವುದು ಮತ್ತು ಆ ಕೆಲಸ ಮಾಡುವವರು ಪಾಪಿ ಆಗದಿರುವಂತೆ ತಡೆಯುವುದನ್ನು ಕಂಡುಹಿಡಿಯಲು ನಾನು ತೀವ್ರವಾಗಿ ಹುಡುಕಿದೆ ಮತ್ತು ನನ್ನ ಮೆದುಳನ್ನು ವಿಪರೀತವಾಗಿ ದುಡಿಸಿಕೊಂಡಿದ್ದೇನೆ. ಅದಕ್ಕಾಗಿ, ನಾನು ಅವರ ಗಮನವನ್ನು ಪ್ರವಾದಿ ಮುಹಮ್ಮದ್(ಸ) ರವರ ಜನನದ ಕಡೆಗೆ ಸೆಳೆದಿದ್ದೇನೆ…” ನಂತರ ಆ ಕೃತಿಯಲ್ಲಿ, ಮೌಲಿದ್ ಪ್ರಶಂಸನೀಯ ನಾವೀನ್ಯತೆ, ಖಂಡನೀಯ ಅಲ್ಲ ಎಂದು ಹೇಳುವ ಮೂಲಕ ಈ ಕೃತ್ಯವನ್ನು ಖಂಡನೀಯ ನಾವೀನ್ಯತೆ ಎಂದು ಟೀಕಿಸಿದವರನ್ನು ಅವರು ನಿರಾಕರಿಸುತ್ತಾರೆ. ಈ ಪದ್ಧತಿಯನ್ನು ವಿರೋಧಿಸಿದ ಮತ್ತು ಅದನ್ನು ನಿರಾಕರಿಸಿದ ವಿದ್ವಾಂಸರು ಅಂದಲೂಸ್‌ನಲ್ಲಿ ಇದ್ದರು ಎಂದು ಇದು ಸ್ವತಃ ತೋರಿಸುತ್ತದೆ. ಆದ್ದರಿಂದಲೇ ಅಲ್-ಅಝಫಿ ಈ ಪದ್ಧತಿಯನ್ನು ಸಮರ್ಥಿಸಿಕೊಳ್ಳ ಬೇಕಾಯಿತು. [ನೋಡಿರಿ: P. Shinar, “Traditional and reformist mawlid celebrations in the Maghrib” in: Studies in Memory of G. Wiet, Jerusalem 1977, pp. 371-413; and N. G. J. Kaptien, Muhammad’s Birthday Festival, Brill, pp. 76-96].

ಮೇಲಿನ ಎಲ್ಲ ವಿಚಾರಗಳಿಂದ, ನಾವು ಈ ಕೆಳಗಿನ ವಿಷಯಗಳನ್ನು ಪಡೆಯಬಹುದು:

1) ಮೌಲಿದ್ ಅನ್ನು ಸಾರ್ವಜನಿಕವಾಗಿ ಆಚರಿಸಿದ ಮೊದಲ ಸುನ್ನಿ ವ್ಯಕ್ತಿ ಉಮರ್ ಅಲ್-ಮುಲ್ಲಾ ಎಂಬ ಸೂಫಿ ಅನುಭಾವಿ ಆಗಿದ್ದರು. ಅವರು ಸಂಶಯಾಸ್ಪದ ವ್ಯಕ್ತಿತ್ವದ ಮನುಷ್ಯನಾಗಿ ತೋರುತ್ತಾರೆ. ಅವರ ಬಗ್ಗೆ ಕನಿಷ್ಠವಾಗಿ ಹೇಳಬಹುದಾದದ್ದು ಏನೆಂದರೆ, ಯಾವುದೇ ರೀತಿಯಲ್ಲೂ ಧರ್ಮದ ವಿದ್ವಾಂಸ ಆಗಿರಲಿಲ್ಲ.

2) ಸುನ್ನಿ ಪ್ರದೇಶಗಳಲ್ಲಿ ಸರ್ಕಾರಿ ಪ್ರಾಯೋಜಿತ ಮೌಲಿದ್‌ಗಳನ್ನು ಮೊದಲು ಪರಿಚಯಿಸಿದ್ದು ಮುಝಫ್ಫರ್ ಅಲ್-ದೀನ್, ಅವರು ಉಮರ್ ಅಲ್-ಮುಲ್ಲಾ ರವರಿಂದ ಈ ಕಲ್ಪನೆಯನ್ನು ಪಡೆದಿದ್ದರು. ಈ ಆಚರಣೆಗಳು ಜನಸಾಮಾನ್ಯರಲ್ಲಿ ಅತ್ಯಂತ ಜನಪ್ರಿಯವಾಗಿದ್ದವು ಮತ್ತು ಆಡಳಿತಗಾರರಿಗೆ ಜನಪ್ರಿಯತೆಯನ್ನು ಪಡೆಯಲು ಸಹಾಯ ಮಾಡಿದ್ದವು.

3) ಇಸ್ಲಾಮಿಕ್ ಕ್ಯಾಲೆಂಡರ್‌ನ ಆರನೇ ಶತಮಾನದ ಕೊನೆಯಲ್ಲಿ, ಮೌಲಿದ್ ಅನ್ನು ಕೆಲವು ಸುನ್ನಿ ಪ್ರದೇಶಗಳಿಗೆ ಪರಿಚಯಿಸಲಾಯಿತು. ಆದರೆ, ಇಸ್ಲಾಮ್‌ನ ಮುಖ್ಯ ಭೂಭಾಗಗಳಲ್ಲಿ (ಉದಾ: ಮಕ್ಕಾ, ಡಮಾಸ್ಕಸ್, ಇತ್ಯಾದಿ) ಯಾವುದೇ ಹಬ್ಬದೊಂದಿಗೆ ಆ ದಿನವನ್ನು ಸ್ಮರಿಸಲು ಇನ್ನೂ ಪ್ರಾರಂಭಿಸಿರಲಿಲ್ಲ.

4) ಮಕ್ಕಾದಲ್ಲಿ, ಯಾವುದೇ ಹಬ್ಬ ಅಥವಾ ಸಾರ್ವಜನಿಕ ಆಚರಣೆ ನಡೆದಿರಲಿಲ್ಲ. ಬದಲಿಗೆ ಜನ್ಮ ದಿನಾಂಕವು ಜನರಿಗೆ ಐತಿಹಾಸಿಕ ಸ್ಥಳಗಳನ್ನು ತೆರೆಯುವ ಸಂದರ್ಭವಾಗಿತ್ತು. ಅಲ್ಲದೆ, ಜನ್ಮ ದಿನಾಂಕವು ಇನ್ನೂ ರಬೀ ಅಲ್-ಅವ್ವಲ್‌ನ 12 ನೇ ತಾರೀಖಿನೊಂದಿಗೆ ಸಂಬಂಧ ಹೊಂದಿರಲಿಲ್ಲ. ಬದಲಾಗಿ, ಇದು ರಬೀ ಅಲ್-ಅವ್ವಲ್‌ನ ಮೊದಲ ಸೋಮವಾರದೊಂದಿಗೆ ಸಂಬಂಧ ಹೊಂದಿತ್ತು.

5) ರಬೀ ಅಲ್-ಅವ್ವಲ್‌ನ 12 ನೇ ತಾರೀಖಿನೊಂದಿಗೆ ಮೌಲಿದ್‌ನ ಸಂಬಂಧವು ಸ್ಪಷ್ಟವಾಗಿ ಫಾತಿಮೀಯರ ಪ್ರಭಾವದಿಂದಾಗಿತ್ತು. ನಂತರ ಇದನ್ನು ಇತರ ಸರ್ಕಾರಿ ಪ್ರಾಯೋಜಿತ ಮೌಲಿದ್‌ಗಳು ಅನುಸರಿಸಿದರು.

6) ಮೌಲಿದ್ ವಿವಿಧ ಅಂಶಗಳಿಂದಾಗಿ ವಿವಿಧ ಪ್ರದೇಶಗಳಲ್ಲಿ ಹರಡಿತು. ಕೆಲವು ಪ್ರದೇಶಗಳಲ್ಲಿ, ಇದನ್ನು ಆಡಳಿತಗಾರರು ಪೋಷಿಸಿದರು ಮತ್ತು ಅವರ ಆಡಳಿತವನ್ನು ಒಪ್ಪಿತಗೊಳಿಸುವ ಸಾಧನವಾಗಿ ಬಳಸುತ್ತಿದ್ದರು. ಇತರ ಪ್ರದೇಶಗಳಲ್ಲಿ, ಮುಸ್ಲಿಮರನ್ನು ಸ್ಪಷ್ಟವಾಗಿ ಅನುಮತಿಸಲಾಗದ ವಿಷಯದಿಂದ ಪ್ರಶಂಸನೀಯವೆಂದು ಪರಿಗಣಿಸಲಾದ ವಿಷಯಕ್ಕೆ ತಿರುಗಿಸಲು ಇದನ್ನು ಒಂದು ತಂತ್ರವಾಗಿ ಬಳಸಲಾಗುತ್ತಿತ್ತು.

ಮೌಲಿದ್‌ನ ಆರಂಭದ ಬಗ್ಗೆ ನಂತರದ ವಾದಗಳು:

ಸುನ್ನಿ ಆಚರಣೆಗಿಂತ ಸುಮಾರು ಒಂದು ಶತಮಾನ ಮೊದಲು ಫಾತಿಮೀಯರ ಆಚರಣೆಯು ಮೌಲಿದ್‌ನ ನಿಜವಾದ ಮೂಲವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ನಂತರದ ಹೆಚ್ಚಿನ ವಿದ್ವಾಂಸರು (ಅತ್ಯಂತ ಪ್ರಸಿದ್ಧವಾಗಿ ಅಲ್-ಸುಯುತಿ (ಮರಣ. 911) ಈ ವಿಷಯದ ಕುರಿತು ತಮ್ಮ ಗ್ರಂಥದಲ್ಲಿ), ತಿಳಿದೋ ಅಥವಾ ತಿಳಿಯದೆಯೋ ಮೌಲಿದ್‌ನ ಫಾತಿಮೀಯರ ಮೂಲಗಳನ್ನು ಕಡೆಗಣಿಸಿದರು ಮತ್ತು ಅದನ್ನು ಸುನ್ನಿ ಆಡಳಿತಗಾರ ಮುಝಫ್ಫರ್ ಅಲ್-ದೀನ್ ಕೊಕ್ಬುರಿಗೆ ಆರೋಪಿಸಿದರು. ಕೆಲವು ಆಧುನಿಕ ಸಂಶೋಧಕರು (ಕಪ್ಟೀನ್‌ ರವರಂತಹವರು) ಹಬ್ಬದ ಶಿಯಾ ಮೂಲಗಳನ್ನು ಮುಚ್ಚಿಡುವುದು ಮತ್ತು ಅದನ್ನು ಜನಪ್ರಿಯ ಸುನ್ನಿ ಆಡಳಿತಗಾರ ಮುಝಫ್ಫರ್ ಅಲ್-ದೀನ್‌ಗೆ ಆರೋಪಿಸಿರುವುದು ಉದ್ದೇಶಪೂರ್ವಕವಾಗಿ ಮಾಡಲಾದ ಕೆಲಸ ಎಂದು ವಾದಿಸಿದ್ದಾರೆ. ಆದರೆ ಅಲ್-ಸುಯೂತಿ ರವರಿಗೆ ಮೌಲಿದ್‌ನ ಫಾತಿಮೀಯರ ಮೂಲದ ಬಗ್ಗೆ ತಿಳಿದಿತ್ತೋ ಇಲ್ಲವೋ ಎಂಬುದು ನಮ್ಮ ಈ ಉದ್ದೇಶಕ್ಕೆ ಮುಖ್ಯವಲ್ಲ. ಆದರೆ, ಮೌಲಿದ್‌ನ ಸಾರ್ವಜನಿಕ ಆಚರಣೆಯ ಮೂಲವು ಫಾತಿಮೀಯರ ಸಾಮ್ರಾಜ್ಯಕ್ಕೆ ಹೋಗುತ್ತದೆ ಮತ್ತು ಮುಝಫ್ಫರ್ ಅಲ್-ದೀನ್‌ ರವರ‌, ಅದೇ ರೀತಿಯದ್ದೆಂದು ಸಂಶಯಿಸಬಹುದಾದ ಹಬ್ಬವನ್ನು ಫಾತಿಮೀಯರಿಂದ ಸುಮಾರು ಒಂದು ಶತಮಾನದ ನಂತರ ಮಾಡಿದ್ದಾರೆ ಎಂಬುವುದು ನಿರಾಕರಿಸಲಾಗದ ಸಂಗತಿಯಾಗಿದೆ.

ಆದ್ದರಿಂದ, ಮೌಲಿದ್‌ನ ಮೂಲವನ್ನು ಮುಝಫ್ಫರ್ ಅಲ್-ದೀನ್ ಅಥವಾ ಉಮರ್ ಅಲ್-ಮುಲ್ಲಾಗೆ ಆರೋಪಿಸುವುದು ನಿಖರವಾಗಿಲ್ಲ.

ಉಪಸಂಹಾರ:

ಈ ಲೇಖನದ ಉದ್ದೇಶವು ಪ್ರವಾದಿ(ಸ) ರವರ ಜನ್ಮದಿನದ ಆಚರಣೆಯ ಮೂಲದ ಬಗ್ಗೆ ಸಂಕ್ಷಿಪ್ತ ಅವಲೋಕನವನ್ನು ನೀಡುವುದು ಮತ್ತು ಅದು ಇತರ ಪ್ರದೇಶಗಳಿಗೆ ಹೇಗೆ ಹರಡಿತು ಎಂಬುದರ ಕೆಲವು ಉದಾಹರಣೆಗಳನ್ನು ನೀಡುವುದಾಗಿತ್ತು. ಇಂತಹ ಆಚರಣೆಯ ಸಿಂಧುತ್ವವನ್ನು ಇದು ಚರ್ಚಿಸಲಿಲ್ಲ. ಏಕೆಂದರೆ ಅದು ಸಂಪೂರ್ಣವಾಗಿ ಮತ್ತೊಂದು ವಿಷಯವಾಗಿದೆ.

ನಾನು ಎಂದಿಗೂ ನನ್ನ ನಿಲವುಗಳನ್ನು ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಇಬ್ನ್ ತೈಮಿಯಾ (ಮರಣ: 728) ರವರ ಇಕ್ತಿದಾ ಸಿರಾತ್ ಅಲ್-ಮುಸ್ತಕೀಮ್ ಕೃತಿಯಲ್ಲಿ ಉಲ್ಲೇಖಿಸಿರುವುದನ್ನೇ ನಾನು ಒಪ್ಪುತ್ತೇನೆ. ಆ ಕೃತಿಯಲ್ಲಿ ಹೇಳುತ್ತಾರೆ: ಸಾಮಾನ್ಯ ತೀರ್ಪು ಏನೆಂದರೆ ಅಂತಹ ಆಚರಣೆಯು ಧರ್ಮದ ಭಾಗವಲ್ಲ. ಅದನ್ನು ನಂತರದ ಪೀಳಿಗೆಯವರು ಸೇರಿಸಿದರು. ಆದ್ದರಿಂದ, ಅದನ್ನು ತೊರೆಯಬೇಕು; ಆದರೆ ಅಜ್ಞಾನದಿಂದ ಅದನ್ನು ಆಚರಿಸುವ ಕೆಲವು ಗುಂಪುಗಳ ಜನರು ತಮ್ಮ ಒಳ್ಳೆಯ ಉದ್ದೇಶಗಳಿಂದಾಗಿ ಪ್ರತಿಫಲ ಪಡೆಯುವ ಸಾಧ್ಯತೆಯಿದೆ. ಪ್ರವಾದಿ (ಸ) ರವರ ಸುನ್ನತ್ ಅನ್ನು ಅನುಸರಿಸುವ ಮೂಲಕ ಮತ್ತು ನಮ್ಮ ದೈನಂದಿನ ಜೀವನದಲ್ಲಿ ನಾವು ಏನು ಮಾಡಬೇಕೆಂದು ಅವರು(ಸ) ಬಯಸುತ್ತಾರೋ ಅದನ್ನು ಮಾಡುವ ಮೂಲಕ ಮೌಲಿದ್ ಅನ್ನು ಪ್ರತಿದಿನ ಆಚರಿಸಬೇಕು.

ಸಾರ್ವಜನಿಕವಾಗಿ ಮೌಲಿದ್ ಆಚರಿಸುವುದನ್ನು ನಾನು ಒಪ್ಪದಿದ್ದರೂ ಸಹ, ಎಲ್ಲಾ ಮೌಲಿದ್‌ಗಳು ಒಂದೇ ಅಲ್ಲ. ಮೌಲಿದ್‌ನಲ್ಲಿ ಪ್ರಿಯ ಪ್ರವಾದಿ (ಸ) ರವರನ್ನು ಸೂಕ್ತ ರೀತಿಯಲ್ಲಿ ಪ್ರಶಂಸಿಸುವುದು, ಅವರ ಸೀರತ್‌ನ ಅಂಶಗಳನ್ನು ಉಲ್ಲೇಖಿಸುವುದು ಮತ್ತು ಅವರ ಅನುಯಾಯಿಗಳಾಗಲು ನಮಗೆ ಆಶೀರ್ವಾದ ಮಾಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳುವುದು ಮಾತ್ರ ಮಾಡುವ ವಿಷಯವಾಗಿದ್ದರೆ ಅದು ಅನುವದನೀಯವಾಗಿದೆ. ವಾಸ್ತವದಲ್ಲಿ ಈ ರೀತಿಯ ಆಚರಣೆಯು ವರ್ಷದ ಯಾವುದೇ ದಿನ ಮಾಡಿದರೂ ಪ್ರಶಂಸನೀಯವೇ ಆಗಿದೆ. ಕೆಲವು ಜನವಿಭಾಗವು ಈ ಕೆಲಸ ಮಾಡಲು ಒಂದು ನಿರ್ದಿಷ್ಟ ದಿನವನ್ನು ಆರಿಸಿಕೊಂಡರೂ ಸಹ, ಉಳಿದವರು ಅದನ್ನು ನಿರಾಕರಿಸುವಲ್ಲಿ ಕಾಠಿಣ್ಯ ತೋರಬಾರದು. ಇಬ್ನ್ ಹಜರ್‌ (ಮರಣ. 852) ಮತ್ತು ಅಲ್-ನವವಿ (ಮರಣ. 676) ರಂತಹ ಗೌರವಾನ್ವಿತ ವಿದ್ವಾಂಸರು ನೀಡಿದ ಫತ್ವಾಗಳು ವಾಸ್ತವವಾಗಿ, ಅಂತಹ ‘ಮುಗ್ಧ’ ಮೌಲಿದ್‌ಗಳನ್ನು ಉಲ್ಲೇಖಿಸುತ್ತವೆ ಎಂದು ನಾನು ನಂಬುತ್ತೇನೆ. ದುಃಖಕರವೆಂದರೆ, ನಮ್ಮ ಕಾಲದಲ್ಲಿ ಅಂತಹ ‘ಶುದ್ಧ’ ಮೌಲಿದ್‌ಗಳನ್ನು ಕಾಣುವುದು ಬಹುತೇಕ ಅಸಾಧ್ಯ!

ಕೊನೆಗೊಳಿಸುತ್ತಾ, ಮೌಲಿದ್ ವಿಷಯದಲ್ಲಿ ಪರಿಣತಿ ಹೊಂದಿರುವ ಮತ್ತು ಅದರ ಬಗ್ಗೆ ಡಾಕ್ಟರೇಟ್ ಪ್ರಬಂಧವನ್ನು ಬರೆದ ಮುಸ್ಲಿಮೇತರ ಲೇಖಕ ಎನ್. ಜೆ. ಜಿ. ಕಪ್ಟೀನ್(N. J. G. Kaptein) ಅವರನ್ನು ಉಲ್ಲೇಖಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ಅವರು ತಮ್ಮ ಮೊನೊಗ್ರಾಫ್‌ನಲ್ಲಿ ಬರೆಯುತ್ತಾರೆ [ಪುಟ. 29],

ಈ ಅಧ್ಯಾಯದ ಕೊನೆಯಲ್ಲಿ, ಮೌಲಿದ್ ಅಲ್-ನಬಿಯ ಸಾಮಾನ್ಯ ಇತಿಹಾಸಕ್ಕೆ ಮುಖ್ಯವಾದ ಹಲವಾರು ಅಂಶಗಳ ಬಗ್ಗೆ ನಾನು ಗಮನ ಸೆಳೆಯಲು ಬಯಸುತ್ತೇನೆ:

a) ಮೌಲಿದ್ ಮೂಲತಃ ಶಿಯಾ ಹಬ್ಬವಾಗಿತ್ತು.

b) ಮೌಲಿದ್ ಹಿಜರಿ ಆರನೇ / ಹನ್ನೆರಡನೇ ಕ್ರಿಶ್ಚಿಯನ್ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿದೆ.

c) ಫಾತಿಮೀಯರ ಅವಧಿಯಲ್ಲಿ ಮೌಲಿದ್ ಅನ್ನು ಸದಾ ಒಂದೇ ದಿನಾಂಕದಂದು ಆಚರಿಸಲಾಗುತ್ತಿರಲಿಲ್ಲ: 517 ರಲ್ಲಿ ಮೌಲಿದ್ ಅನ್ನು 13 ನೇ ರಬೀಅಲ್‌ ಅವ್ವಲ್‌ ರಂದು ಆಚರಿಸಲಾಯಿತು, ಆದರೆ ಇಬ್ನ್ ತುವೈರ್ ಪ್ರಕಾರ ಈ ಹಬ್ಬವು ಯಾವಾಗಲೂ 12 ನೇ ರಬೀಅಲ್‌ ಅವ್ವಲ್‌ ರಂದು ಬರುತ್ತಿತ್ತು.

d) ಮೌಲಿದ್ ಅನ್ನು ಹಗಲಿನ ವೇಳೆಯಲ್ಲಿ ಆಚರಿಸಲಾಗುತ್ತಿತ್ತು.

e) ಆಡಳಿತಗಾರನು ಕೇಂದ್ರ ಪಾತ್ರವನ್ನು ವಹಿಸುತ್ತಿದ್ದನು.

f) ಧರ್ಮೋಪದೇಶಗಳನ್ನು ನೀಡಲಾಗುತಿತ್ತು ಮತ್ತು ಕುರ್‌ಆನ್‌ ಪಠಣಗಳು ನಡೆಯುತ್ತಿದ್ದವು.

g) ಅಧಿಕಾರಿಗಳಿಗೆ ಉಪದೇಶಗಳು ನಡೆಯುತ್ತಿದ್ದವು.

h) ಈ ಉಪದೇಶಗಳ ಮೂಲಕ; ಇತರ ವಿಷಯಗಳ ಜೊತೆಗೆ, ಫಾತಿಮೀಯ ಇಮಾಮ್-ಖಲೀಫರೊಂದಿಗೆ ನಿಷ್ಠೆಯನ್ನು ಬೆಳೆಸುವ ಸಲುವಾಗಿ, ಫಾತಿಮೀಯರು ಮತ್ತು ಅಹ್ಲ್ ಅಲ್-ಬೈತ್‌ನೊಂದಿಗಿನ ನಿಕಟ ಸಂಬಂಧವನ್ನು ಒತ್ತಿಹೇಳಲಾಗುತಿತ್ತು.

i) ಫಾತಿಮೀಯರ ಪತನದ ನಂತರವೂ ಮೌಲಿದ್ ಅಸ್ತಿತ್ವ ಮುಂದುವರಿಯಿತು.

ಕಪ್ಟೀನ್‌ರ ತೀರ್ಮಾನಗಳು ಬಹಳ ಸಮಂಜಸವಾಗಿವೆ. ಈ ಲೇಖನವು ಸಹ ತೋರಿಸಿರುವಂತೆ ಅವುಗಳನ್ನು ಬೆಂಬಲಿಸಲು ಸ್ಪಷ್ಟ ಪುರಾವೆಗಳಿವೆ.

ಅಲ್ಲಾಹನೇ ಎಲ್ಲವನ್ನು ಬಲ್ಲವನಾಗಿದ್ದಾನೆ.

* ಇಲ್ಲಿ ಹೇಳಲೇಬೇಕು: ಪ್ರಾಚೀನ ಅವಶೇಷಗಳಿಂದ ಆಶೀರ್ವಾದ ಪಡೆಯುವ ಪದ್ಧತಿಯ ಬಗ್ಗೆ ಇಸ್ಲಾಮೀ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ ಮತ್ತು ಆ ಕಾಲದ ಕಾನೂನು ಪಠ್ಯಪುಸ್ತಕಗಳು ಈ ಸಂಗತಿಯನ್ನು ಉಲ್ಲೇಖಿಸುತ್ತವೆ. ಹೆಚ್ಚಾಗಿ ಸಾಂಪ್ರದಾಯಿಕ ವಿದ್ವಾಂಸರು ಈ ಪದ್ಧತಿಯನ್ನು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ ವಿದ್ವಾಂಸರಲ್ಲದ ಜನಸಾಮಾನ್ಯರು ಇದನ್ನು ಅನುಮೋದಿಸಿದ್ದರು. ಏನೇ ಆದರೂ, ಅದು ಮತ್ತೊಂದು ಪ್ರಬಂಧದ ವಿಷಯವಾಗಿದೆ.

ಡಾ. ಯಾಸಿರ್ ಖಾದಿ

ಶೇಖ್‌ ಯಾಸಿರ್ ರವರು ಮದೀನಾ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಹದೀಸ್‌ನಲ್ಲಿ ಪದವಿ ಮತ್ತು ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಯೇಲ್ ವಿಶ್ವವಿದ್ಯಾಲಯದಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅಲ್ ಮಗ್ರಿಬ್‌ನಲ್ಲಿ ಬೋಧಕ ಮತ್ತು ಶೈಕ್ಷಣಿಕ ವ್ಯವಹಾರಗಳ ಡೀನ್ ಮತ್ತು ಮೆಂಫಿಸ್ ಇಸ್ಲಾಮಿಕ್ ಕೇಂದ್ರದಲ್ಲಿ ವಿದ್ವಾಂಸರಾಗಿದ್ದಾರೆ.

ಕನ್ನಡಾನುವಾಡ: ಎಂ. ಡಿ ಪಾಣೆಮಂಗಳೂರು

ಕೃಪೆ: muslimmatters.org

Leave a Reply