ಭಾಗ- 1 ಕೌಟುಂಬಿಕ ನ್ಯಾಯ – ಅನ್ಯಾಯ: ಇಸ್ಲಾಮೀ ಶಿಕ್ಷಣ

0
gettyimages-1486876976-612x612

ಪರಮ ದಯಾಮಯನೂ ಕೃಪಾಶೀಲನೂ ಆದ ಅಲ್ಲಾಹನ ನಾಮದಿಂದ

ಲೇಖಕರು: ಮುಹ್ಯುದ್ದೀನ್ ಗಾಝಿ

ತಮ್ಮ ಮನೆಯವರ ನಡುವೆ ನ್ಯಾಯ ಪಾಲಿಸದವರು ಇತರರ ನಡುವೆ ನ್ಯಾಯ ಪಾಲಿಸುವುದಾದರೂ ಹೇಗೆ?

ಗೃಹ ಹಿಂಸೆ ಎಂಬುದೊಂದು ಸುವ್ಯಕ್ತವಾದ ಕ್ಷೋಭೆಯಾಗಿದೆ. ಅದರ ಆರ್ತನಾದವು ದೂರದೂರದ ವರೆಗೂ ಪ್ರತಿಧ್ವನಿಸುತ್ತದೆ. ಅದರ ಕೇಡಿನ ಬಗ್ಗೆ ಎಲ್ಲರೂ ಒಮ್ಮತ ಹೊಂದಿದ್ದಾರೆ. ಅದರ ವಿವಿಧ ರೂಪಗಳ ಬಗ್ಗೆಯೂ ಯಾರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ರೀತಿ ಗೃಹ ಹಿಂಸೆಯಲ್ಲಿ ತೊಡಗಿಕೊಂಡಿರುವವರು ಸಾಮಾನ್ಯವಾಗಿ ಧರ್ಮ ಮತ್ತು ನೈತಿಕತೆಯಿಂದ ಅಜ್ಞರಾಗಿರುತ್ತಾರೆ; ಕೆಲವೊಮ್ಮೆ ಅವರು ಮಾನಸಿಕ ರೋಗಿಗಳೂ ಆಗಿರುತ್ತಾರೆ.

ಕೌಟುಂಬಿಕ ಅನ್ಯಾಯ ಎಂಬುದು ಒಂದು ಸುಪ್ತವಾದ ಕ್ಷೋಭೆಯಾಗಿದೆ. ಅದರ ಕೇಡಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ. ಹೆಚ್ಚಿನ ವೇಳೆ ಅದನ್ನ ಎಸಗುವವನು, ತನ್ನಿಂದ ಇಂತಿಂತಹ ಕೆಡುಕು ಸಂಭವಿಸಿದೆ ಎಂಬ ಅರಿವನ್ನೇ ಹೊಂದಿರುವುದಿಲ್ಲ. ಕೆಲವು ಅನ್ಯಾಯಗಳನ್ನಂತೂ ಹೆಚ್ಚಿನ ಮಂದಿ ಸಮರ್ಥಿಸುವುದನ್ನೂ ನಾವು ಕಾಣುತ್ತೇವೆ. ಸೋಜಿಗವೇನೆಂದರೆ, ಧರ್ಮನಿಷ್ಠರು, ಸಚ್ಚಾರಿತ್ರ್ಯವಂತರು ಮತ್ತು ಬುದ್ಧಿಜೀವಿಗಳೇ ಇಂತಹ ಅನ್ಯಾಯಗಳನ್ನು ಎಸಗುತ್ತಿರುವುದಾಗಿ ಕಂಡು ಬರುತ್ತದೆ.

ಪವಿತ್ರ ಕುರ್‌ಆನ್ ಸಂಬಂಧಿಕರ ಹಕ್ಕುಗಳ ಬಗ್ಗೆ ಆಗಾಗ ತಾಕೀತು ಮಾಡುವ ಮೂಲಕ ಕೌಟುಂಬಿಕ ಅನ್ಯಾಯವನ್ನು ತೊಡೆದು ಹಾಕಿದೆ.

ಸಂಬಂಧಿಕನಿಗೆ ಅವನ ಹಕ್ಕನ್ನು ನೀಡಿರಿ.” (ಕುರ್‌ಆನ್‌, ಸೂರಃ ಬನೀ ಇಸ್ರಾಈಲ್: 26, ಸೂರಃ ರ‍್ರೂಮ್: 38)

ನಿಮ್ಮಲ್ಲಿ ಅನುಗ್ರಹೀತರು ಮತ್ತು ಸಾಮರ್ಥ್ಯವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗುವವರಿಗೂ ಸಹಾಯ ಮಾಡಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಬಾರದು. ಅವರನ್ನು ಕ್ಷಮಿಸಿ ಬಿಡಬೇಕು ಮತ್ತು ಮನ್ನಿಸಬೇಕು. ಅಲ್ಲಾಹ್ ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.” (ಸೂರಃ ಅನ್ನೂರ್: 22)

ಅಲ್ಲಾಹನ ಸಂದೇಶವಾಹಕರು(ಸ) ಬಹಳ ವಿಸ್ತಾರವಾಗಿ ಕೌಟುಂಬಿಕ ಅನ್ಯಾಯಕ್ಕೆ ಸಂಬಂಧಿಸಿ ಎಚ್ಚರಿಸಿದ್ದಾರೆ.

ಒಮ್ಮೆ ಸಲ್ಮಾನ್‌ ಫಾರ್ಸಿಯವರು(ರ) ತಮ್ಮ ದೀನೀ ಸಹೋದರರಾದ ಅಬುದ್ದರ್ದಾ(ರ)ರೊಡನೆ ಹೀಗೆಂದರು, ಪ್ರತಿಯೋರ್ವ ಹಕ್ಕುದಾರನ ಹಕ್ಕನ್ನು ತೀರಿಸಿರಿ.” ಈ ಮಾತಿಗೆ ಅಲ್ಲಾಹನ ಸಂದೇಶವಾಹಕರು(ಸ) ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೊಂದು ಸಮಗ್ರವಾದ ನೀತಿಯಾಗಿದೆ. ಒಂದು ವೇಳೆ ಮಾನವನು ತನ್ನ ಮೇಲಿರುವ ಎಲ್ಲ ಜನರ ಹಕ್ಕುಗಳ ಕುರಿತು ಸೂಕ್ಷ್ಮತೆ ಪಾಲಿಸಿದರೆ, ಅನ್ಯಾಯದ ಅನೇಕ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ; ಅಷ್ಟೇ ಅಲ್ಲ, ಅಸಂಖ್ಯ ಬಿರುಕುಗಳೂ ಮುಚ್ಚಿಹೋಗುತ್ತವೆ.

ನಾವು ಈ ಲೇಖನದಲ್ಲಿ ಕೌಟುಂಬಿಕ ಅನ್ಯಾಯದ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿದ್ದೇವೆ. ಇವುಗಳ ಬೆಳಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅನುಭವ ಮತ್ತು ದರ್ಶನದಿಂದ ಇನ್ನಷ್ಟು ವಿಧಗಳನ್ನು ಕಂಡುಕೊಳ್ಳಬಹುದು; ಅಂತೆಯೇ ಸ್ವಯಂ ತನ್ನನ್ನೂ ಇತರರನ್ನೂ ಈ ಅನ್ಯಾಯದ ಕೇಡಿನಿಂದ ದೂರವಿರಿಸಬಹುದಾಗಿದೆ.

ಸಣ್ಣ ಮಕ್ಕಳ ಹಕ್ಕುಚ್ಯುತಿ:

ತಿಳಿಯದೆ ಆಗುವ ಅನ್ಯಾಯದ ಒಂದು ರೂಪ ಇದಾಗಿದ್ದು, ಸಣ್ಣ ಮಕ್ಕಳು ಇಂತಹ ಅನ್ಯಾಯವನ್ನು ಅನುಭವಿಸಬೇಕಾಗಿ ಬರುತ್ತದೆ. ಕುಟುಂಬದಲ್ಲಿ ಎರಡನೆಯ ಮಗು ಹುಟ್ಟಿದಾಗ, ಮಾತಾಪಿತರ ಎಲ್ಲ ಗಮನವೂ ನವಜಾತ ಶಿಶುವಿನ ಮೇಲಿರುತ್ತದೆ. ಹಿರಿಯ ಮಗ ಅಥವಾ ಮಗಳು ತೀವ್ರ ಆಘಾತಕ್ಕೆ ಒಳಗಾಗುತ್ತದೆ. ಅದುವರೆಗೂ ಎಲ್ಲರ ಗಮನಕೇಂದ್ರವಾಗಿದ್ದವನಿ/ಳಿಗೆ, ತನ್ನೆಲ್ಲ ಆಗ್ರಹಗಳು ತಕ್ಷಣ ಈಡೇರುತ್ತಿತ್ತು, ತನ್ನೆಲ್ಲ ಹಠಗಳಿಗೂ, ಕೊಂಡಾಟಗಳಿಗೂ ಮಹತ್ವ ನೀಡಲಾಗುತ್ತಿತ್ತು, ಬಹಳ ಮುದ್ದು ಮಾಡಲಾಗುತ್ತಿತ್ತು… ಆದರೆ ಒಂದೇ ಘಳಿಗೆಗೆ ಅವೆಲ್ಲವೂ ತನ್ನಿಂದ ಕಸಿದುಕೊಂಡು ಎರಡನೆಯ ಮಗುವಿಗೆ ನೀಡಲಾಗುತ್ತಿರುವುದನ್ನು ಕಾಣುತ್ತಾನೆ/ಳೆ. ತತ್ಪರಿಣಾಮವಾಗಿ ಹಿರಿಯ ಮಗುವಿನಲ್ಲಿ ಕೋಪ ಮಡುಗಟ್ಟತೊಡಗುತ್ತದೆ. ಕೆಲವೊಮ್ಮೆ ಅದು ಹಿಂಸೆಯ ಮಾರ್ಗವನ್ನೂ ತುಳಿಯತೊಡಗುತ್ತದೆ. ಇವೆಲ್ಲವೂ ಮಾತಾಪಿತರು ತಮ್ಮ ಮಕ್ಕಳ ನಡುವೆ ನ್ಯಾಯ ಪಾಲಿಸಲಾಗದ ಕಾರಣ ನಡೆಯುತ್ತದೆ. ಅವರು ಭಾವಿಸುವುದೇನು? ಹಿರಿಮಗುವಿಗೆ ಅದರ ಪಾಲಿನ ಮುದ್ದು, ಪ್ರೀತಿ ಎಲ್ಲವೂ ದೊರೆತಾಗಿದೆ. ಇನ್ನು ಕಿರಿ ಮಗುವಿನ ಸರದಿ. ಆದರೆ ವಾಸ್ತವದಲ್ಲಿ ಹಿರಿಮಗುವಿಗೆ ಅವರ ಪ್ರೀತಿಯ ಅಗತ್ಯ ಇನ್ನೂ ಇದ್ದಿರುತ್ತದೆ. ಅವರು ಕೊಂಚ ಬುದ್ಧಿವಂತಿಕೆಯಿಂದ ಮತ್ತು ವಿಶಾಲ ಮನಸ್ಕತೆಯಿಂದ ವರ್ತಿಸಿದರೆ ಎರಡು ಮಕ್ಕಳೂ ಮಾತಾಪಿತರ ಪ್ರೀತಿ-ಅನುನಯದಿಂದ ಲಾಭಾ ಗಳಿಸಲು ಸಾಧ್ಯವಿದೆ.

ಉಡುಗೊರೆಗಳಲ್ಲಿ ಅನ್ಯಾಯ:

ಕೆಲವು ಮಂದಿ ತಮ್ಮ ಮಕ್ಕಳಿಗೆ ಬೆಲೆಬಾಳುವ ಉಡುಗೊರೆ ನೀಡುವಾಗಲೂ ನ್ಯಾಯದ ಬೇಡಿಕೆಗಳನ್ನು ಪರಿಗಣಿಸುವುದಿಲ್ಲ. ಯಾವ ಮಗುವಿನಿಂದ ಅವರು ಹೆಚ್ಚು ಸಂತುಷ್ಟರಾಗುತ್ತಾರೋ ಅವನಿ/ಳಿಗೆ ಹೆಚ್ಚು ನೀಡುತ್ತಾರೆ ಮತ್ತು ಇತರ ಮಕ್ಕಳನ್ನು ಅವಕಾಶ ವಂಚಿತತೆಯ ಭಾವನೆಗೆ ತಳ್ಳಿ ಬಿಡುತ್ತಾರೆ. ಒಂದನೆಯದಾಗಿ ಒಂದು ಮಗುವಿನ ಮೇಲೆ ಹೆಚ್ಚು ಪ್ರೀತಿಯನ್ನು ವ್ಯಕ್ತಪಡಿಸುವುದು ಮತ್ತು ಇನ್ನೊಂದು ಮಗುವಿನ ಮೇಲೆ ಕಡಿಮೆ ಪ್ರೀತಿ ಪ್ರಕಟಿಸುವುದು ಯಾವ ಕಾರಣಕ್ಕೂ ಸಲ್ಲದು. ಅದರಿಂದ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ. ಮೇಲಾಗಿ ಈ ಪ್ರೀತಿಯ ಪ್ರಕಟನೆಯಲ್ಲಿ ಒಂದು ಮಗುವಿಗೆ ಅಮೂಲ್ಯ ಉಡುಗೊರೆಗಳನ್ನು ನೀಡಿ, ಇತರ ಮಕ್ಕಳನ್ನು ಕಡೆಗಳಿಸುವುದಂತೂ ಸ್ಪಷ್ಟವಾದ ಅಕ್ರಮ ಮತ್ತು ಅನ್ಯಾಯವಾಗಿದೆ. ಒಂದು ವೇಳೆ ಮಕ್ಕಳು ಮಾತಾಪಿತರ ಮೇಲಿನ ಗೌರವದಿಂದ ತಮ್ಮ ಕೋಪವನ್ನು ಪ್ರಕಟಿಸದಿದ್ದರೂ ಅವರೊಂದಿಗೆ ಮಾಡಲಾದ ಹಕ್ಕುಚ್ಯುತಿ ಮತ್ತು ಅನ್ಯಾಯದ ಪ್ರಭಾವವು ಅವರ ಮನಪಟಲದಲ್ಲಿ ಅಚ್ಚೊತ್ತಿಕೊಂಡಿರುತ್ತದೆ. ಮುಂದೆಂದಾದರೂ ಅದು ಪ್ರಕಟಗೊಂಡೇ ತೀರುವುದು.

ಮಕ್ಕಳು ಬೇರೆ ಬೇರೆ ತಾಯಂದಿರಿಂದ ಆಗಿದ್ದರೆ ಇಂತಹ ಅನ್ಯಾಯದ ಆತಂಕ ಇನ್ನೂ ಹೆಚ್ಚುತ್ತದೆ. ಅಲ್ಲಾಹನ ಸಂದೇಶವಾಹಕರ(ಸ) ಕಾಲದಲ್ಲಿ ನಡೆದ ಒಂದು ಘಟನೆಯು ಜೀವನದ ವಿವಿಧ ರಂಗಗಳಲ್ಲಿ ಮಾರ್ಗದರ್ಶನ ಮಾಡುತ್ತದೆ.

ನುಅ‌ಮಾನ್ ಬಿನ್ ಬಶೀರ್(ರ)ರಿಂದ ವರದಿ: “ಒಮ್ಮೆ ನನ್ನ ತಾಯಿ ನನ್ನ ತಂದೆ ಬಶೀರ್(ರ)ರೊಡನೆ, ತನ್ನ ಸಂಪತ್ತಿನಿಂದ ನನಗೆ ಒಂದು ಅಮೂಲ್ಯ ಉಡುಗೊರೆಯನ್ನು ನೀಡುವಂತೆ ಹೇಳಿದರು. ಆರಂಭದಲ್ಲಿ ತಂದೆಯವರು ನಿರಾಕರಿಸಿದರು, ಬಳಿಕ ನನಗೆ ಉಡುಗೊರೆ ನೀಡಲು ಮುಂದಾದರು. ಅದರಂತೆ ನನಗೆ ಒಂದು ಉಡುಗೊರೆಯನ್ನೂ ನೀಡಿದರು. ಆದರೆ ಅಷ್ಟು ಹೊತ್ತಿಗೆ ನನ್ನ ತಾಯಿಯ ಮನಸ್ಸು ಬದಲಾಯಿತು. ಅವರೆಂದರು, “ನಾನು ಇದರಿಂದ ತೃಪ್ತಳಾಗಿಲ್ಲ. ಈ ವಿಷಯವನ್ನು ಅಲ್ಲಾಹನ ಸಂದೇಶವಾಹಕರ(ಸ) ಅರಿವಿಗೆ ತರಬೇಕು ಮತ್ತು ಅವರನ್ನು ಇದರಲ್ಲಿ ಸಾಕ್ಷಿಯಾಗಿಸುವುದು ಒಳ್ಳೆಯದು.” ನಾನು ಆಗ ಬಾಲಕನಾಗಿದ್ದೆ. ನನ್ನ ತಂದೆಯು ನನ್ನ ಕೈ ಹಿಡಿದುಕೊಂಡು ಅಲ್ಲಾಹನ ಸಂದೇಶವಾಹಕರ(ಸ) ಸನ್ನಿಧಿಯಲ್ಲಿ ಹಾಜರಾಗಿ ಹೇಳಿದರು, “ಓ ಅಲ್ಲಾಹನ ಸಂದೇಶವಾಹಕರೇ(ಸ)! ನನ್ನ ಈ ಮಗನಿಗೆ ನನ್ನ ಸಂಪತ್ತಿನಿಂದ ಬೆಲೆಬಾಳುವ ಉಡುಗೊರೆ ನೀಡಬೇಕೆಂದು ಇವನ ತಾಯಿ ನನ್ನೊಡನೆ ಹೇಳಿದ್ದಾಳೆ.” ಅಲ್ಲಾಹನ ಸಂದೇಶವಾಹಕರು(ಸ) ಕೇಳಿದರು, “ನಿಮಗೆ ಇವನ ಹೊರತು ಬೇರೆ ಮಕ್ಕಳಿದ್ದಾರೆಯೇ?” ತಂದೆಯವರು ಹೌದೆಂದರು. ಪ್ರವಾದಿವರ್ಯರು(ಸ) ಕೇಳಿದರು, “ಆ ಮಕ್ಕಳಿಗೂ ಇಂತಹುದೇ ಉಡುಗೊರೆಯನ್ನು ನೀಡಿರುವಿರಾ?” ಇಲ್ಲವೆಂದು ಉತ್ತರಿಸಿದಾಗ ಪ್ರವಾದಿವರ್ಯರು(ಸ) ಹೀಗೆಂದರು, “ಹಾಗಿದ್ದರೆ ನನ್ನನ್ನು ಈ ಅಕ್ರಮದಲ್ಲಿ ಸಾಕ್ಷಿಯನ್ನಾಗಿ ಮಾಡದಿರಿ?” ತರುವಾಯ ಹೇಳಿದರು, “ಅಲ್ಲಾಹನನ್ನು ಭಯಪಡಿರಿ. ನಿಮ್ಮ ಮಕ್ಕಳ ನಡುವೆ ನ್ಯಾಯ ಪಾಲಿಸಿರಿ. ನಿಮ್ಮ ಮಕ್ಕಳು ನಿಮ್ಮೊಡನೆ ಸದ್ವರ್ತನೆ ತೋರಬೇಕೆಂದು ನೀವು ಬಯಸುವುದಿಲ್ಲವೇ?” (ಸಹೀಹ್ ಬುಖಾರಿ)

ಇಂತಹ ಘಟನೆಯು ಸಮಾಜದಲ್ಲಿ ಅನೇಕ ಕಡೆಗಳಲ್ಲಿ ಸಂಭವಿಸಿರುತ್ತದೆ. ಒಬ್ಬ ವ್ಯಕ್ತಿಯ ಪತ್ನಿ ಮರಣ ಹೊಂದಿದಾಗ, ಅವನು ಎರಡನೆಯ ಮದುವೆಯಾಗುತ್ತಾನೆ. ಬಳಿಕ ಮೊದಲ ಪತ್ನಿಯಿಂದ ಆಗಿರುವ ಮಕ್ಕಳನ್ನು ಸಂಪೂರ್ಣ ಕಡೆಗಣಿಸಿ, ತನ್ನೆಲ್ಲ ಆಸ್ತಿಯನ್ನು ಎರಡನೆಯ ಪತ್ನಿ ಮತ್ತು ಅವಳ ಮಕ್ಕಳ ಹೆಸರಿಗೆ ಮಾಡುತ್ತಾನೆ. ತತ್ಪರಿಣಾಮವಾಗಿ ಆ ಮಕ್ಕಳು ತಮ್ಮ ಮಲತಾಯಿ ಮತ್ತು ಆಕೆಯ ಮಕ್ಕಳನ್ನು ತೀವ್ರವಾಗಿ ದ್ವೇಷಿಸತೊಡಗುತ್ತಾರೆ.

ಸಣ್ಣ ವಸ್ತುಗಳಲ್ಲಿಯೂ ನ್ಯಾಯ ಪಾಲನೆ ಅಗತ್ಯ:

ಕೆಲವೊಮ್ಮೆ ಮಕ್ಕಳ ನಡುವೆ ದೊಡ್ಡ ವಸ್ತುಗಳಿಗೆ ಸಂಬಂಧಿಸಿ ನ್ಯಾಯ ಪಾಲಿಸಲಾಗುತ್ತದೆ. ಆದರೆ ಸಣ್ಣ ಸಣ್ಣ ವಸ್ತು ವಿಷಯಗಳಲ್ಲಿ ವ್ಯತ್ಯಾಸವನ್ನು ಸಹ್ಯವೆಂದು ಗ್ರಹಿಸಲಾಗುತ್ತದೆ. ವಸ್ತುತಃ ದೊಡ್ಡ ವಸ್ತುಗಳಲ್ಲಿ ಅನ್ಯಾಯವು ಮನಸ್ಸನ್ನು ನೋಯಿಸುವಂತೆಯೇ ಸಣ್ಣಪುಟ್ಟ ವಿಷಯಗಳಲ್ಲಾಗುವ ಅನ್ಯಾಯವೂ ಹೃದಯಗಳನ್ನು ಒಡೆಯುತ್ತದೆ. ಉದಾಹರಣೆಗೆ, ಎಲ್ಲ ಮಕ್ಕಳಿಗೂ ಬೆಲೆಬಾಳುವ ಆಟಿಕೆಗಳನ್ನು ಖರೀದಿಸಿ ಕೊಟ್ಟ ಮೇಲೆ ಆ ಪೈಕಿ ಒಂದು ಮಗುವಿಗೆ ಮಿಠಾಯಿ ನೀಡಿದರೆ, ಉಳಿದ ಮಕ್ಕಳು ಬೆಲೆಬಾಳುವ ಉಡುಗೊರೆಗಳ ಸಂತೋಷವನ್ನು ಮರೆತು ಮಿಠಾಯಿ ದೊರೆಯದಿರುವುದಕ್ಕೆ ದುಃಖಪಡುವರು. ಈ ನೀತಿಯನ್ನು ಅನೇಕ ಸಂದರ್ಭಗಳಲ್ಲಿ ಹಿರಿಯರಿಗೆ ಸಂಬಂಧಿಸಿಯೂ ಪಾಲಿಸಬೇಕಾದ ಅಗತ್ಯವಿದೆ. ಅನ್ಯಥಾ ಹೃದಯಗಳಲ್ಲಿ ಕೇಡು ಉಂಟಾಗತೊಡಗುತ್ತದೆ.

ಅಲ್ಲಾಹನ ಸಂದೇಶವಾಹಕರು(ಸ) ಸಣ್ಣ ಸಣ್ಣ ವಿಷಯಗಳಿಗೂ ಬಹಳ ಮಹತ್ವವನ್ನು ನೀಡುತ್ತಿದ್ದರು. ಒಮ್ಮೆ ಅಲ್ಲಾಹನ ಸಂದೇಶವಾಹಕರು(ಸ) ಸಭೆಯೊಂದರಲ್ಲಿ ಸಹಾಬಿಗಳೊಡನೆ ಸಂಭಾಷಿಸುತ್ತಿದ್ದರು. ಅಷ್ಟರಲ್ಲಿ ಒಬ್ಬ ಬಾಲಕ ಅಲ್ಲಿಗೆ ಆಗಮಿಸಿದ ಮತ್ತು ಓರ್ವ ವ್ಯಕ್ತಿಯ ಬಳಿ ಸಾಗಿದ. ಆತ ಆ ವ್ಯಕ್ತಿಯ ಮಗನಾಗಿದ್ದ. ಆ ವ್ಯಕ್ತಿಯು ಮಗುವಿನ ತಲೆ ನೇವರಿಸಿದರು ಮತ್ತು ತನ್ನ ಮಡಿಲಲ್ಲಿ ಕೂರಿಸಿದರು. ಸ್ವಲ್ಪ ಹೊತ್ತಿನಲ್ಲಿ ಅವರ ಪುಟ್ಟ ಮಗಳು ಆಗಮಿಸಿದಳು. ಅವರು ಆಕೆಯ ತಲೆಯನ್ನು ನೇವರಿಸಿದರು ಮತ್ತು ತನ್ನ ಬಳಿ ನೆಲದಲ್ಲಿ ಕೂರಿಸಿದರು. ಅಲ್ಲಾಹನ ಸಂದೇಶವಾಹಕರು(ಸ) ಅದನ್ನು ನೋಡಿ ತಮ್ಮ ಮಾತುಕತೆಯನ್ನು ನಿಲ್ಲಿಸಿ, ಆ ವ್ಯಕ್ತಿಯನ್ನುದ್ದೇಶಿಸಿ ಕೇಳಿದರು, “ನಿಮ್ಮ ಮಗಳನ್ನು ನಿಮ್ಮ ಮಡಿಲಲ್ಲೇಕೆ ಕೂರಿಸಲಿಲ್ಲ?” ಅವರು ಮಗಳನ್ನು ಎತ್ತಿ ತಮ್ಮ ಮಡಿಲಲ್ಲಿ ಕೂರಿಸಿದರು. ಆಗ ಪ್ರವಾದಿವರ್ಯರು(ಸ) ಈ ರೀತಿ ಉದ್ಗರಿಸಿದರು, “ಈಗ ನೀವು ನ್ಯಾಯ ಪಾಲಿಸಿದಿರಿ.” (ಇಬ್ನು ಅಬಿದ್ದುನ್ಯಾ)

ಅಲ್ಲಾಹನ ಸಂದೇಶವಾಹಕರ(ಸ) ತರಬೇತಿಯ ಪ್ರಭಾವವಾಗಿಯೇ ಸಹಾಬಿಗಳು ತಮ್ಮ ಮಕ್ಕಳ ನಡುವೆ ಸಣ್ಣ ಸಣ್ಣ ವಿಷಯಗಳಲ್ಲೂ ನ್ಯಾಯ ಪಾಲಿಸುತ್ತಿದ್ದರು. ಹಝ್ರತ್ ಇಬ್ರಾಹೀಮ್ ನಖಈ(ರ) ಹೇಳುವ ಪ್ರಕಾರ, ಅವರು ತಮ್ಮ ಮಕ್ಕಳನ್ನು ಮುದ್ದಿಸುವುದರಲ್ಲೂ ನ್ಯಾಯ ಪಾಲಿಸುತ್ತಿದ್ದರು.

ಹುಡುಗ-ಹುಡುಗಿಯರ ನಡುವೆ ಅನ್ಯಾಯ:

ಹುಡುಗ-ಹುಡುಗಿಯರ ನಡುವೆ ವ್ಯತ್ಯಾಸ ಮಾತ್ರವಲ್ಲ, ಹುಡುಗಿಯರನ್ನು ಅಗತ್ಯಕ್ಕಿಂತ ಹೆಚ್ಚೇ ತುಚ್ಛೀಕರಿಸುವುದು ಮಾನವ ಸಮಾಜದಲ್ಲಿ ಸದಾ ನಡೆದು ಬರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಇಸ್ಲಾಮ್ ಈ ಕೆಡುಕನ್ನು ದೂರೀಕರಿಸಿ, ಇಬ್ಬರಿಗೂ ಸಮಾನ ಗೌರವ ದೊರಕಿಸಿ ಕೊಟ್ಟಿತು. ಆದರೆ ಇಸ್ಲಾಮೀ ಶಿಕ್ಷಣದ ಪ್ರತಿಬಿಂಬವು ಯಾವ ರೀತಿ ಮುಸ್ಲಿಮ್ ಸಮುದಾಯದಲ್ಲಿ ಕಾಣಿಸಬೇಕಿತ್ತೋ ಆ ರೀತಿ ಕಾಣಿಸುತ್ತಿಲ್ಲ. ಗಂಡು-ಹೆಣ್ಣಿನ ನಡುವೆ ವಿಭಿನ್ನ ರೂಪದಲ್ಲಿ ಅಸಮಾನತೆ ಆಗುತ್ತಲೇ ಇರುತ್ತದೆ. ನಾವಿಲ್ಲಿ ಕೆಲವು ಉದಾಹರಣೆಗಳನ್ನು ನೀಡುತ್ತಿದ್ದೇವೆ. ಇದು ಎಲ್ಲ ಮನೆಗಳಲ್ಲಿ ನಡೆಯುವಂತಹ ಘಟನೆಗಳಂತೂ ಅಲ್ಲ. ಆದರೆ ಬಹಳಷ್ಟು ಮನೆಗಳಲ್ಲಿ ಇಂತಹ ದೃಶ್ಯ ಕಾಣಲು ಸಿಗುತ್ತಾ ಇರುತ್ತದೆ.

  • ಮನೆಯ ಕೆಲಸಗಳಿಗೆ ಸಂಬಂಧಿಸಿ, ಹುಡುಗಿಯರ ಮೇಲೆ ಹುಡುಗರಿಗಿಂತ ಹೆಚ್ಚು ಹೊರೆಯನ್ನು ಹೇರಲಾಗುತ್ತದೆ.
  • ಶಿಕ್ಷಣ ಮತ್ತು ವ್ಯಕ್ತಿತ್ವ ನಿರ್ಮಾಣದ ಅವಕಾಶಗಳನ್ನು ಹುಡುಗರಿಗೆ ಹೆಚ್ಚು ಒದಗಿಸಲಾಗುತದೆ ಮತ್ತು ಹುಡುಗಿಯರಿಗೆ ಕಡಿಮೆ ಕೊಡಲಾಗುತ್ತದೆ.
  • ಅರ್ಹ ಆಗ್ರಹಗಳ ಈಡೇರಿಕೆಯ ಅವಕಾಶ ಹುಡುಗರಿಗೆ ಹೆಚ್ಚು ದೊರೆಯುತ್ತದೆ ಮತ್ತು ಹುಡುಗಿಯರಿಗೆ ಕಡಿಮೆ ಸಿಗುತ್ತದೆ.
  • ಮನೆಯ ಸಣ್ಣ ದೊಡ್ಡ ತೀರ್ಮಾನಗಳಲ್ಲಿ ಹುಡುಗರ ಸಲಹೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಮತ್ತು ಹುಡುಗಿಯರ ಸಲಹೆಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಾಗುವುದಿಲ್ಲ.
  • ಜೀವನ ಸಂಗಾತಿಗೆ ಸಂಬಂಧಿಸಿ ಹುಡುಗರಿಗೆ ತಮ್ಮಿಷ್ಟವನ್ನು ತಿಳಿಸುವ ಅವಕಾಶವಿರುತ್ತದೆ. ಆದರೆ ಹುಡುಗಿಯರಿಗೆ ಅಂತಹ ಅವಕಾಶವೇ ಇರುವುದಿಲ್ಲ.
  • ಹುಡುಗರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗುತ್ತದೆ ಮತ್ತು ಹುಡುಗಿಯರ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರಲಾಗುತ್ತದೆ.

ಶರೀಅತ್‌ನಲ್ಲಿ ಅಗತ್ಯದ ನಿರ್ಬಂಧಗಳ ಏನಿವೆಯೋ ಅವು ಹುಡುಗರೂ ಹುಡುಗಿಯರೂ ಸಮಾನವಾಗಿ ಪಾಲಿಸಬೇಕಾಗಿದೆ. ಆದರೆ ಒಂದು ವರ್ಗದ ಮೇಲೆ ಅನಗತ್ಯ ನಿರ್ಬಂಧಗಳು ಹೇರುವುದರಿಂದ ಅದು ಅಕ್ರಮ, ಅನ್ಯಾಯದ ಕಡೆಗೆ ಕೊಂಡೊಯ್ಯುತ್ತದೆ. ಉದಾಹರಣೆಗೆ, ಕೆಲವು ಸಮಾಜಗಳಲ್ಲಿ ಹುಡುಗಿಯರಿಗೆ ಶಿಕ್ಷಣ ಗಳಿಕೆಯನ್ನೇ ನಿಷೇಧಿಸಲಾಗಿರುತ್ತದೆ.

ಹಳೆಯ ಮತ್ತು ಹೊಸ ಸಂಬಂಧಗಳ ನಡುವೆ ಅನ್ಯಾಯ:

ಮದುವೆಯಾಗುತ್ತಲೇ ಪತಿ-ಪತ್ನಿ ಇಬ್ಬರ ಸಂಬಂಧಗಳಲ್ಲಿ ಒಂದೊಂದು ಹೊಸ ಕೂಟದ ಹೆಚ್ಚಳವಾಗುತ್ತದೆ. ತಂದೆ-ತಾಯಿ, ಸಹೋದರ-ಸಹೋದರಿ ಮುಂತಾದವರಲ್ಲದೆ, ಈಗ ಮದುವೆಯೊಂದಿಗೇ ಜೀವನ ಸಂಗಾತಿ ಮತ್ತು ಜೀವನ ಸಂಗಾತಿಯ ಸಕಲ ಸಂಬಂಧಿಕರೊಂದಿಗೆ ಒಂದು ಹೊಸದಾದ ಸಂಬಂಧ ಸ್ಥಾಪಿತವಾಗುತ್ತದೆ. ಇದನ್ನು ನೆಂಟಸ್ಥಿಕೆ ಸಂಬಂಧ ಎನ್ನುತ್ತೇವೆ. ಇಲ್ಲಿಂದಲೇ ಪತಿ ಮತ್ತು ಪತ್ನಿಯ ಪರೀಕ್ಷೆಯು ಆರಂಭವಾಗುತ್ತದೆ. ಅವರು ಹಳೆಯ ರಕ್ತ ಸಂಬಂಧವನ್ನೂ ನೆಂಟಸ್ಥಿಕೆ ಸಂಬಂಧವನ್ನೂ ಯಾವ ರೀತಿ ನ್ಯಾಯದೊಂದಿಗೆ ಸಮತೋಲನ ಕಾಪಾಡುತ್ತಾ ನಿಭಾಯಿಸುತ್ತಾರೆ ಎಂದು ನೋಡಲಾಗುತ್ತದೆ. ಕೆಲವೊಮ್ಮೆ ನಮ್ಮ ಹುಡುಗ ಮದುವೆಯಾದ ಮೇಲೆ ತನ್ನ ರಕ್ತಸಂಬಂಧವನ್ನು ಕಡೆಗಣಿಸಿ ಮಾವನ ಮನೆಯವನಾಗಿ ಬಿಟ್ಟನೆಂದು ದೂರಲಾಗುತ್ತದೆ. ಹುಡುಗಿಯೂ ಅಷ್ಟೇ, ತಾನು ಮದುವೆಯಾಗಿ ಹೋದ ಮನೆಯನ್ನು ತನ್ನ ಮನೆಯೆಂದು ಭಾವಿಸುವುದೇ ಇಲ್ಲ, ತನ್ನ ಮಾವನ ಮನೆಯವರನ್ನು ತನ್ನ ಮನೆಯವರೆಂದು ಪರಿಗಣಿಸುವುದೇ ಇಲ್ಲ ಮತ್ತು ತನ್ನ ಎಲ್ಲ ಸಂಬಂಧಗಳನ್ನು ತವರು ಮನೆಯಗಷ್ಟೇ ಸೀಮಿತಗೊಳಿಸಿ ಬಿಟ್ಟಿರುತ್ತಾಳೆ ಎಂದು ದೂರಲಾಗುತ್ತದೆ.

ಸಂಬಂಧಿಕರು ಅಲ್ಲಾಹನ ಅನುಗ್ರಹವಾಗಿದ್ದಾರೆ. ಸಂಬಂಧಗಳು ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಸಹಕಾರಿಗಳಾಗಿವೆ. ಮಾನವನು ತನ್ನ ಕೆಲವು ಸಂಬಂಧಗಳ ಹಕ್ಕು ಸಂದಾಯ ಮಾಡುವುದು ಮತ್ತು ಕೆಲವು ಸಂಬಂಧಗಳ ಹಕ್ಕುಚ್ಯುತಿ ಮಾಡುವುದು ವಸ್ತುತಃ ಮಾನವನ ನೈತಿಕ ದೌರ್ಬಲ್ಯವಾಗಿದೆ. ಅಲ್ಲಾಹನು ಮಾನವನನ್ನು ಸಂಬಂಧಗಳಲ್ಲಿ ಜೋಡಿಸಿದ್ದಾನೆ. ಮಾನವನಲ್ಲಿ ಎಲ್ಲ ಸಂಬಂಧಗಳನ್ನೂ ನಿಭಾಯಿಸುವ ಸಾಮರ್ಥ್ಯವನ್ನೂ ನೀಡಿದ್ದಾನೆ. ಆದ್ದರಿಂದ ಕೆಲವು ಸಂಬಂಧಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ಇನ್ನು ಕೆಲವು ಸಂಬಂಧಗಳನ್ನು ಕಡೆಗಣಿಸುವುದು ನಿಜವಾಗಿಯೂ ಸಂಬಂಗಳಿಗೆ ಎಸಗುವ ಅವಮಾನವಾಗಿದೆ. ಅಂತೆಯೇ ಸ್ವಯಂ ತನ್ನ ಸಾಮರ್ಥ್ಯದ ಅವಗಣನೆಯೂ ಆಗಿದೆ.

ತಾಯಿಯ ಕುಟುಂಬ ಮತ್ತು ತಂದೆಯ ಕುಟುಂಬ:

ಮಾನವನು ಈ ಜಗತ್ತಿಗೆ ಬರುವಾಗ ಅವನನ್ನು ಎರಡು ದೊಡ್ಡ ಕುಟುಂಬಗಳು ಸ್ವಾಗತಿಸಲು ಸಿದ್ಧವಾಗಿರುತ್ತದೆ. ಇದು ಮಾನವನ ಮೇಲೆ ಅಲ್ಲಾಹನ ಬಲುದೊಡ್ಡ ಅನುಗ್ರಹವಾಗಿದೆ. ಇಷ್ಟು ವೈಭವಯುತವಾದ ಸ್ವಾಗತ ಜಗತ್ತಿನಲ್ಲಿ ಮಾನವನಿಗೆ ಮಾತ್ರವೇ ಲಭಿಸುವುದು. ಬೇರೆ ಯಾವ ಜೀವಿಗೂ ಈ ಸೌಭಾಗ್ಯವಿಲ್ಲ. ಈ ಉಭಯ ಕುಟುಂಬಗಳಿಂದಲೂ ಪ್ರೀತಿ, ಅನುನಯ ಮತ್ತು ಮೇಲ್ನೋಟ ದೊರೆಯಬೇಕಾದುದು ಮಗುವಿನ ಹಕ್ಕಾಗಿದೆ. ಅಂತೆಯೇ ಮಗುವಿನ ಸಂತೋಷ ಮತ್ತು ಮಗುವಿಗೆ ಸಂಬಂಧಿಸಿರುವ ಎಲ್ಲ ವಿಷಯಗಳಲ್ಲಿಯೂ ಶಾಮೀಲಾಗುವುದು ಉಭಯ ಕುಟುಂಬಗಳ ಹಕ್ಕಾಗಿದೆ.

ಕೆಲವೊಮ್ಮೆ ತಂದೆಯಾದವನಿಗೆ ತನ್ನ ಮಾವನ ಮನೆಯವರೊಂದಿಗೆ ಉತ್ತಮ ಸಂಬಂಧವಿರುವುದಿಲ್ಲ. ಹಾಗಾಗಿ ಅವನು ತನ್ನ ಮಕ್ಕಳನ್ನು ಮಾತಾಮಹಿಯರ ಪ್ರೀತಿಯಿಂದ ಲಾಭಾಗಳಿಸಲು ಬಿಡುವುದಿಲ್ಲ. ಇನ್ನೊಂದೆಡೆ ತಾಯಿಯಾದವಳಿಗೆ ತನ್ನ ಪತಿಯ ಮನೆಯವರೊಂದಿಗಿನ ಸಂಬಂಧವು ದೃಢವಾಗಿರುವುದಿಲ್ಲ. ಆಕೆ ತನ್ನ ಮಗುವನ್ನು ಪಿತಾಮಹಿಯರಿಂದ ಬಹುತೇಕ ದೂರವಿರಿಸಿಕೊಳ್ಳುತ್ತಾಳೆ. ಮಕ್ಕಳು ಕೇವಲ ತಮ್ಮ ಮಾತಾಮಹಿಯರನ್ನೇ ತನ್ನ ಸಂಬಂಧಿಕರೆಂದು ಗ್ರಹಿಸುತ್ತಾರೆ. ತಾಯಿಯ ಪ್ರಭಾವದಿಂದಾಗಿ ಮಕ್ಕಳು ಪಿತಾಮಹಿಯರೊಂದಿಗೆ ಸಂಬಂಧವನ್ನೇ ಇರಿಸಿಕೊಂಡಿರುವುದಿಲ್ಲ; ಕೆಲವೊಮ್ಮೆ ಅವರ ಮೇಲೆ ದ್ವೇಷವನ್ನೂ ಬೆಳೆಸಿಕೊಂಡಿರುತ್ತಾರೆ.

ಇದು ತೀರಾ ಅನ್ಯಾಯದ ವರ್ತನೆಯಾಗಿದೆ. ಮಕ್ಕಳ ವ್ಯಕ್ತಿತ್ವದ ಮೇಲೆ ಅದು ಬಹಳ ಪ್ರತಿಕೂಲ ಪ್ರಭಾವವನ್ನು ಬೀರುತ್ತದೆ. ಅವರು ಸಂಬಂಧಗಳ ಒಂದು ಬಲವಾದ ಮತ್ತು ಅಮೂಲ್ಯವಾದ ಸಂಪತ್ತಿನಿಂದ ವಂಚಿತರಾಗಿ ಬಿಡುತ್ತಾರೆ.

ಇಂತಹ ಮಾತಾಪಿತರು ತಮ್ಮನ್ನು ಸಮರ್ಥಿಸಲಿಕ್ಕಾಗಿ ಇದಿರು ಕುಟುಂಬದವರ ಕೆಡುಕುಗಳನ್ನು ಮಕ್ಕಳ ಮುಂದೆ ಹೇಳುತ್ತಿರುತ್ತಾರೆ. ಈ ರೀತಿ ಮಕ್ಕಳನ್ನು ಸಂಬಂಧಗಳಿಂದ ದೂರವಿರಿಸುತ್ತಾರೆ. ಅವರು ತಮ್ಮ ಕುಟುಂಬದವರೆಲ್ಲರೂ ಉತ್ತಮರಾಗಿದ್ದು, ಅವರ ಕುಟುಂಬದವರೆಲ್ಲ ಕೆಟ್ಟವರು ಎಂಬಂತೆ ಬಿಂಬಿಸುತ್ತಾರೆ. ಇದು ಕೆಟ್ಟ ಗುಮಾನಿಯ ಹೊರತು ಬೇರೇನೂ ಅಲ್ಲ. ಪ್ರತಿಯೊಂದು ಕುಟುಂಬದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಆದರೆ ಮಾತಾಪಿತರು ತಮ್ಮ ಭಾವನೆಗಳ ಸಮಾಧಾನಕ್ಕಾಗಿ ತಮ್ಮ ಮಕ್ಕಳನ್ನು ಅನೇಕ ಪ್ರೀತಿ ಮತ್ತು ಸಂಬಂಧಗಳಿಂದ ವಂಚಿತಗೊಳಿಸಿ ಬಿಡುತ್ತಾರೆ.

ಸಂಬಂಧವೆಲ್ಲವೂ ಪ್ರೀತಿಗಾಗಿರುತ್ತದೆ:

ಅಲ್ಲಾಹನು ಎಲ್ಲ ಸಂಬಂಧಗಳನ್ನೂ ಮಾಡಿಟ್ಟಿದ್ದಾನೆ. ಆದ್ದರಿಂದ ಪ್ರತಿಯೊಂದು ಸಂಬಂಧವನ್ನೂ ಪರಿಗಣಿಸಬೇಕು ಮತ್ತು ಅದರ ಹಕ್ಕುಗಳನ್ನು ತೀರಿಸಬೇಕು. ಪ್ರತಿಯೊಂದು ಸಂಬಂಧಕ್ಕೂ ಪ್ರೀತಿಯ ವರ್ಣದಿಂದ ರಂಜಿತವಾಗಬೇಕಾಗಿದೆ. ರಕ್ತ ಸಂಬಂಧ ಮತ್ತು ನೆಂಟಸ್ಥಿಕೆಯ ಸಂಬಂಧ, ಮಾತಾಮಹಿ ಸಂಬಂಧ ಮತ್ತು ಪಿತಾಮಹಿ ಸಂಬಂಧ, ಎಲ್ಲಿಯ ವರೆಗೆಂದರೆ ಸ್ತನಪಾನಿ ಸಂಬಂಧ ಮತ್ತು ಮಲತಾಯಿ-ಮಲತಂದೆ ಸಂಬಂಧವೂ ಪ್ರೀತಿಯ ಹಕ್ಕನ್ನು ಹೊಂದಿದೆ.

ಆದರೆ ಮಾನವರು ಸಂಬಂಧಗಳ ಜೊತೆ ಹಕ್ಕುಚ್ಯುತಿ ಮತ್ತು ಅನ್ಯಾಯದ ವ್ಯವಹಾರ ತೋರುತ್ತಾರೆ ಹಾಗೂ ಕೆಲವು ಸಂಬಂಧ ಪ್ರೀತಿಯದು, ಇನ್ನು ಕೆಲವು ಸಂಬಂಧ ಅಪರಿಚಿತತೆಯದು, ಮತ್ತೆ ಕೆಲವು ಸಂಬಂಧ ದ್ವೇಷದ್ದಾಗಿ ಮಾಡಿ ಬಿಟ್ಟಿರುತ್ತಾರೆ.

  • ತಂದೆ, ತಾಯಿ, ಸಹೋದರ, ಸಹೋದರಿಯರೊಂದಿಗೆ ಪ್ರೀತಿಯ ಸಂಬಂಧ ಮತ್ತು ಅವರ ತಪ್ಪುಗಳೆಲ್ಲ ಕ್ಷಮಾರ್ಹ.
  • ಮಾವನ ಮನೆಯವರೊಂದಿಗೆ ಸಂಬಂಧ ಇಲ್ಲದಂತಿರುವುದು, ನಿರಂತರ ಕೆಟ್ಟ ಗುಮಾನಿ ಮತ್ತು ಸಾಸಿವೆಯನ್ನು ಪರ್ವತವನ್ನಾಗಿ ಮಾಡುವ ಚಾಳಿ.
  • ಮಲಸಂಬಂಧದೊಂದಿಗೆ ದ್ವೇಷ ಮತ್ತು ಬಹುತೇಕ ಸಂಬಂಧ ಕಡಿದುಕೊಂಡೇ ಇರುವುದು.

ಸಂಬಂಧಗಳ ಈ ವಿಂಗಡನೆಯು ತೀರಾ ಕೆಟ್ಟದು, ಅಲ್ಲಾಹನ ಕಾನೂನಿಗೆ ವಿರುದ್ಧವಾಗಿದೆ ಮತ್ತು ಈ ವಿಂಗಡನೆಯು ಮನಸ್ಸುಗಳಲ್ಲಿ ಹಾಸುಹೊಕ್ಕಾಗ ನಿರಂತರ ಅನ್ಯಾಯ-ಹಕ್ಕುಚ್ಯುತಿಗೆ ಕಾರಣವಾಗುತ್ತದೆ. ಈ ವಿಂಗಡನೆಯ ಪ್ರಕಾರ ಮಾನವನ ಪಾಲನೆ-ಪೋಷಣೆಯಾದರೆ, ಅವನು ಸಂಬಂಧಗಳೊಂದಿಗೆ ಬಹಳಷ್ಟು ಅನ್ಯಾಯ ಮತ್ತು ಹಕ್ಕುಚ್ಯುತಿಯನ್ನು ಮಾಡತೊಡಗುತ್ತಾನೆ; ಅವನಿಗೆ ಯಾವುದೇ ಕಡುಕಿನ ಬಗ್ಗೆ ಖೇದವೂ ಉಂಟಾಗುವುದಿಲ್ಲ. ಅವನಾದರೂ ತಾನು ಸರಿಯಾದ ವ್ಯವಹಾರವನ್ನೇ ಮಾಡುತ್ತಿದ್ದೇನೆ ಎಂದೇ ಬಗೆಯುತ್ತಾನೆ. ಆದರೆ ವಾಸ್ತವದಲ್ಲಿ ಅವನೇ ತಪ್ಪುದಾರಿಯಲ್ಲಿರುತ್ತಾನೆ. ಅವನು ತನ್ನ ಧರ್ಮನಿಷ್ಠ ಮತ್ತು ಮುತ್ತಕೀಗಳಾದ ಹಿರಿಯರು ಈ ರೀತಿ ಮಾಡುವುದನ್ನು ಕಂಡು ಅದನ್ನೇ ಅನುಸರಿಸುತ್ತಾನೆ.

ಅಲ್ಲಾಹನ ಸಂದೇಶವಾಹಕರ(ಸ) ಚರ್ಯೆಯಲ್ಲಿ ನಮಗೆ ಅತ್ಯುತ್ತಮ ಮಾದರಿ ಇದೆ. ಅವರು ತಮ್ಮ ಎಲ್ಲ ಸಂಬಂಧಿಕರೊಂದಿಗೂ ಪ್ರೀತಿ, ಅನುರಾಗದ ಸಂಬಂಧವಿರಿಸಿಕೊಂಡಿದ್ದರು. ಅವರು ತಮ್ಮ ಎಲ್ಲ ಪತ್ನಿಯರೊಂದಿಗೆ ಸಮಾನವಾಗಿ ಪ್ರೀತಿಸಿದರು, ತಮ್ಮ ಎಲ್ಲ ಮಕ್ಕಳನ್ನೂ ಪ್ರೀತಿಸಿದರು ಮತ್ತು ತಮ್ಮ ಸ್ತನಪಾನಿ ಸಂಬಂಧಿಗಳೊಂದಿಗೂ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲಾಹನ ಸಂದೇಶವಾಹಕರು(ಸ) ತಮ್ಮ ಪತ್ನಿಯರು ಮತ್ತು ಪುತ್ರಿಯರಿಗೆ ನೀಡಿದ ತರಬೇತಿಯ ಪರಿಣಾಮವಾಗಿ, ಅವರು ಪರಸ್ಪರರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮಲತಾಯಿ ಅಥವಾ ಮಲಮಗಳು ಎಂಬ ಕಲ್ಪನೆಯೇ ಅವರ ಮನದಲ್ಲಿ ಉದ್ಭವಿಸಿರಲಿಲ್ಲ.

ಮನೆಯ ಕೆಲಸ ಎಲ್ಲರಿಗೂ, ವಿಶ್ರಾಂತಿ ಎಲ್ಲರಿಗೂ:

ಮನೆಗಳಲ್ಲಿ ವಿಶ್ರಾಂತಿಯ ಅವಕಾಶ ಬಹಳವಿರುತ್ತದೆ; ಅದೇ ರೀತಿ ಕೆಲಸಗಳೂ ಬಹಳವಿರುತ್ತದೆ. ವಿಶ್ರಾಂತಿಯನ್ನಂತೂ ಎಲ್ಲರೂ ಬಯಸುತ್ತಾರೆ. ಆದರೆ ಕೆಲಸಗಳಲ್ಲಿ ಒಟ್ಟು ಸೇರುವುದರಿಂದ ತಪ್ಪಿಸುತ್ತಾರೆ. ತತ್ಪರಿಣಾಮವಾಗಿ ಮನೆಯ ಕೆಲಸಗಳ ಹೊರೆಯು ಕೆಲವೇ ಮಂದಿಯ ಮೇಲೆ, ಕೆಲವೊಮ್ಮೆ ಕೇವಲ ಒಬ್ಬರ ಮೇಲೆ ಬೀಳುತ್ತದೆ. ಇದು ನ್ಯಾಯಕ್ಕೆ ವಿರುದ್ಧವಾದ ಸ್ಥಿತಿಯಾಗಿದೆ. ಮನೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಅವರೆಲ್ಲರೂ ಮನೆಯ ಆರಾಮ ಮತ್ತು ಸವಲತ್ತುಗಳಿಂದ ಪ್ರಯೋಜನ ಪಡೆಯುತ್ತಾರಷ್ಟೇ. ಹಾಗಾಗಿ ಮನೆಯ ಕೆಲಸಗಳಲ್ಲಿಯೂ ಸಮಾನವಾಗಿ ಪಾಲ್ಗೊಳ್ಳುವುದು ಅವರ ನೈತಿಕ ಹೊಣೆಗಾರಿಕೆಯಾಗಿದೆ.

ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳನ್ನು ನೀಡುವುದು ಅಗತ್ಯವೆನಿಸುತ್ತದೆ. ಅವುಗಳಲ್ಲದೆಯೂ ಅನೇಕ ಉದಾಹರಣೆಗಳು ಇರಬಹುದು. ಆ ಕುರಿತು ಲೇಖನದ ಭಾಗ 2 ರಲ್ಲಿ ಅರಿಯೋಣ.

ಕನ್ನಡಾನುವಾದ: ಅಬೂ ಆಫಿಯಾ

Leave a Reply