ಅಲ್ಲಾಹನ ಮೇಲೆ ವಿಶ್ವಾಸ

0
Young muslim man praying in the Great Mosque

Young muslim man praying in the Great Mosque

ಪ್ರತಿಯೊಬ್ಬ ಮುಸ್ಲಿಮನು ಆರು ವಿಶ್ವಾಸಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅದನ್ನು ಈಮಾನ್(ವಿಶ್ವಾಸ) ಕಾರ್ಯಗಳು ಎನ್ನುತ್ತೇವೆ. ಅವುಗಳು ಈ ಕೆಳಗಿನಂತಿವೆ. 1.ಅಲ್ಲಾಹನ ಮೇಲಿನ ವಿಶ್ವಾಸ, 2. ಅಲ್ಲಾಹನ ಮಲಾಯಿಕ್(ದೇವಚರರ)ಗಳ ಮೇಲಿನ ವಿಶ್ವಾಸ, 3. ಅಲ್ಲಾಹನ ಗ್ರಂಥಗಳ ಮೇಲಿನ ವಿಶ್ವಾಸ, 4. ಅಲ್ಲಾಹನ ಪ್ರವಾದಿಗಳ ಮೇಲಿನ ವಿಶ್ವಾಸ, 5. ಪರಲೋಕದ ಬಗೆಗಿರುವ ವಿಶ್ವಾಸ ಮತ್ತು 6. ವಿಧಿಯ ಮೇಲಿನ ವಿಶ್ವಾಸ.

ಅಲ್ಲಾಹನ ಮೇಲಿರುವ ವಿಶ್ವಾಸದ ಮೊದಲ ಹೆಜ್ಜೆಯೇ ಅಲ್ಲಾಹನ ಅಸ್ಥಿತ್ವವನ್ನು ಅಂಗೀಕರಿಸುವುದು. ಪ್ರಾಮಾಣಿಕವಾಗಿ ಹೇಳುವುದಾದರೆ ಖಂಡಿತವಾಗಿಯೂ ಓರ್ವನಿಗೆ ದೇವನ ಅಸ್ಥಿತ್ವವನ್ನು ನಿರಾಕರಿಸಲು ಸಾಧ್ಯವಿಲ್ಲ.  ದೇವ ನಿಷೇಧಿಗಳಾದವರೂ ಕೂಡಾ ಕೆಲವು ವಿಶೇಷ ಸಂದರ್ಭಗಳಲ್ಲಿ ಅವರಿಗರಿವಿಲ್ಲದೇ “ದೇವನೇ…” ಎಂದು ಕೂಗುವುದಿದೆ. ದುರಂತ, ಭೂಕಂಪ ಸಂಭವಿಸುವಾಗ ಹಾಗೆ ಹೇಳದವರು ಯಾರಾದರೂ ಇದ್ದಾರೆಯೇ?! ಅಂದರೆ ದೇವ ವಿಶ್ವಾಸವನ್ನು ಪೃಕೃತಿಯೇ ಮನಸ್ಸಿಗೆ ತುಂಬುತ್ತದೆ.  ಅದನ್ನು ಮಟ್ಟ ಹಾಕಿ ದಮನಿಸುವ ದಿಕ್ಕಾರ ಭಾವ ಸತ್ಯನಿಷೇಧದ ಹಿಂದಿರುವ ವಾಸ್ತವಿಕತೆಯಾಗಿದೆ.
ದೇವನೊಂದಿಗೆ ಪ್ರಾರ್ಥಿಸಿ ಉತ್ತರ ದೊರೆತು ನಮ್ಮ ಬೇಡಿಕೆಗಳು ಸಫಲವಾಗಿ ನಮ್ಮ ಸಂಕಷ್ಟಗಳು ದೂರವಾದ ಹಲವರು ಘಟನೆಗಳು ನಾವು ನೋಡುತ್ತಾ ಆಲಿಸುತ್ತಾ ಇರುತ್ತೇವೆ. ಅಂದರೆ ಮಾನವನ ಗಮನ ಪೃಕೃತಿಯ ಜೊತೆ ಅನುಭವದ ಮೂಲಕ ದೇವನ ಆಸ್ಥಿತ್ವವನ್ನು ಸಾಬೀತು ಪಡಿಸುತ್ತದೆ ಎಂಬುದು ಇದರ ಸಾರವಾಗಿದೆ.

ಯಾವುದೇ ವಿಚಾರದ ಹಿಂದೆ ಒಂದು ಕಾರಣ ಇದೆ ಎಂಬುದನ್ನು ಎಲ್ಲರೂ ಅಂಗೀಕರಿಸುತ್ತಾರೆ.  ಓರ್ವ ಕರ್ತನಿಲ್ಲದೆ ಯಾವುದೇ ಕ್ರಿಯೆ ಸಂಭವಿಸದು. ವಿಶಾಲವಾದ ಭೂಮಿ, ಅನಂತವಾದ ಆಕಾಶ, ತೆರೆಗಳಂದಾವೃತವಾದ ಕಡಲು, ಬೃಹತ್ ಗಾತ್ರದ ಸೂರ್ಯ ಚಂದ್ರಾದಿ ನಕ್ಷತ್ರಗಳಿಂದ ಹಿಡಿದು ಕ್ಷುಲ್ಲಕ ಜೀವಿಯ ತನಕ ಓರ್ವ ಸೃಷ್ಟಿಕರ್ತನಿಲ್ಲದೆ ಸ್ವಯಂ ಉಂಟಾಗಿದೆ ಎಂದು ವಿವೇಕವಿರುವ ಯಾರಿಗಾದರೂ ಹೇಳಲು ಸಾಧ್ಯವೇ?

ಇವರು ಒಬ್ಬ ಸೃಷ್ಟಿಕರ್ತನಿಲ್ಲದೆ ಸ್ವಯಂ ಹುಟ್ಟಿಕೊಂಡರೇ? ಅಥವಾ ಇವರು ತಾವೇ ತಮ್ಮ ಸೃಷ್ಟಿಕರ್ತರೇ?” (ಕುರ್‌ಆನ್‌ 52: 35)

ಭೂಮಿಯಲ್ಲಿರುವ ಸಸ್ಯ ಲತಾದಿಗಳು ಅದರ ಸೃಷ್ಟಿ ಜಾಲಗಳಲ್ಲಿನ ಹೊಂದಾಣಿಕೆ, ಸ್ಪಷ್ಟತೆ, ವೈವಿಧ್ಯತೆ ಪ್ರತಿಯೊಬ್ಬರಿಗೂ ವಿಸ್ಮಯ ಹುಟ್ಟಿಸುವಂತಹದ್ದು.

ಎಲ್ಲ ತರದ ಜೋಡಿಗಳನ್ನುಅವುಗಳು ಭೂಮಿಯ ವನಸ್ಪತಿಗಳಲ್ಲಿರಲಿ, ಸ್ವತಹ ಇವರ(ಮನುಷ್ಯರ) ವರ್ಗದಲ್ಲಿರಲಿಅಥವಾ ಇವರಿಗೆ ತಿಳಿದೇ ಇಲ್ಲದಂತಹಾ ವಸ್ತುಗಳಲ್ಲಿರಲಿ ಸೃಷ್ಟಿಸಿದವನು ಪರಮ ಪಾವನನು. ಇವರಿಗೆ ರಾತ್ರಿಯು ಇನ್ನೊಂದು ನಿದರ್ಶನವಾಗಿದೆ. ನಾವು ಅದರ ಮೇಲಿಂದ ಹಗಲನ್ನು ಸರಿಸಿ ಬಿಡುತ್ತೇವೆ. ಆಗ ಇವರ ಮೇಲೆ ಕತ್ತಲು ಕವಿಯುತ್ತದೆ. ಮತ್ತು ಸೂರ್ಯನು ತನ್ನ ಸ್ಥಾನದ ಕಡೆಗೆ ಚಲಿಸುತ್ತಿದ್ದಾನೆ. ಪ್ರಬಲನೂ ಸರ್ವಜ್ಞನೂ ಆದವನ ನಿರ್ಣಯವಿದು.” (ಕುರ್‌ಆನ್‌ 36: 36 – 38)

ಅಲ್ಲಾಹನ ಅಸ್ಥಿತ್ವವನ್ನು ಒಪ್ಪಿ ಆತನಿದ್ದಾನೆ ಎಂದು ಅಂಗೀಕರಿಸಿದರೆ ಸಾಲದು. ಅಲ್ಲಾಹನ ಶಕ್ತಿ ಸಾಮರ್ಥ್ಯದ ಬಗ್ಗೆ ಅರಿತು ಆತನ ಏಕತೆಯನ್ನು ಅಂಗೀಕರಿಸಬೇಕು. ಅಥವಾ ಸಕಲ ಚರಾಚರಗಳ ಯಥಾರ್ಥ ಒಡೆಯ, ಸೃಷಿಕರ್ತ, ರಕ್ಷಕ ಅಲ್ಲಾಹನು ಮಾತ್ರವಾಗಿದ್ದಾನೆ, ಅವನ ಆಧಿಪತ್ಯದಲ್ಲಿಯೇ, ಆತನ ನಿಯಂತ್ರಣದಲ್ಲಿಯೇ ಸರ್ವವೂ ನೆಲೆ ನಿಂತಿದೆ ಎಂಬ ವಿಶ್ವಾಸವು  ಅಲ್ಲಾಹನ ಮೇಲಿ ವಿಶ್ವಾಸದ ಪ್ರಮುಖ ಭಾಗವಾಗಿದೆ.
“ಅಲ್ಲಾಹನು ಸಕಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನೇ ಸಕಲ ವಸ್ತುಗಳ ಮೇಲ್ವಿಚಾರಕನು.” (ಕುರ್‌ಆನ್‌ 39:62)

“ನಿಮ್ಮಲ್ಲಿ ಸತ್ಕರ್ಮವೆಸಗುವನಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಭೂಮಿ ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇಅದಕ್ಕಿಂತ ಮುಂಚೆ ಆತನ ಸಿಂಹಾಸನ(ಅರ್ಶ್) ಅರ್ಥಾತ್ ಆಧಿಪತ್ಯವು ನೀರಿನ ಮೇಲಿತ್ತು. ಪೈಗಂಬರರೇ, ಮರಣಾ ನಂತರ ನೀವು ಇನ್ನೊಮ್ಮೆ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದಾಗ ಸತ್ಯ ನಿಷೇಧಿಗಳುಇದಂತು ಸುಸ್ಪಷ್ಟ ಮಾಟಗಾರಿಕೆಎಂದು ಥಟ್ಟನೆ ಹೇಳಿಬಿಡುತ್ತಾರೆ (ಕುರ್‌ಆನ್‌ 11:7)

ಭೂಮಿ ಆಕಾಶಗಳ ಮತ್ತು ಅವುಗಳೊಳಗಿರುವ ಸರ್ವಸ್ವದ ಸಾರ್ವಭೌಮತೆ ಅವನಿಗೇ ಇದೆ. ಮತ್ತು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನು (ಕುರ್‌ಆನ್‌ 5:120)

“ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದವರು ಯಾರು ಎಂದು ನೀವು ಇವರೊಡನೆ ಕೇಳಿದಾಗ, ಇವರು ಅಲ್ಲಾಹನೆಂದೇ ಹೇಳುವರು. ಅಲ್ ಹಮ್ದುಲಿಲ್ಲಾಹ್ (ಅಲ್ಲಾಹನಿಗೆ ಸ್ತುತಿ) ಎನ್ನಿರಿ. ಆದರೆ ಇವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.” (ಕುರ್‌ಆನ್‌ 31:25)

ಪವಿತ್ರ ಕುರ್‌ಆನಿನ ಸೂರಾ ಅಲ್ ಮೂಮಿನೂನ್ ನ 48 ರಿಂದ 69 ರವರೇಗಿನ ಸೂಕ್ತಗಳು ಇದನ್ನು ಸವಿವರವಾಗಿ ಪ್ರಸ್ತುತಪಡಿಸಿದೆ.

ಭೂಮಿ ಸಸ್ಯ ಲತಾದಿಗಳನ್ನು ವ್ಯವಸ್ಥೆಗೊಳಿಸಿ ಮಳೆ ಸುರಿಸುವಂತಹದ್ದು, ಸರ್ವವನ್ನು ನಿಯಂತ್ರಿಸುವುದು ಅಲ್ಲಾಹನು ಮಾತ್ರವಾಗಿದ್ದಾನೆಂಬುದನ್ನು ಅವರು ಅರಿತು ಅಂಗೀಕರಿಸಿದರು. ಹೀಗಿರುವ ಏಕೈಕನಾದ ಅಲ್ಲಾಹನಿಗೆ ಮಾತ್ರ ಆರಾಧನೆಗಳನ್ನು ಅರ್ಪಿಸಬೇಕೆಂಬ ವಾಸ್ತವ ಸತ್ಯವನ್ನು ಅಳವಡಿಸಿಕೊಳ್ಳಲು ಅವರು ಸಿದ್ದರಿಲ್ಲ ಎಂಬುದು ಅವರಿಗೆ ಸಂಭವಿಸಿದ ಮಹಾ ಲೋಪವಾಗಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಅದು ಮಹಾ ಅಪರಾಧವಾಗಿದೆ.

ಲುಕ್ಮಾನರು ತಮ್ಮ ಪುತ್ರನಿಗೆ ಉಪದೇಶ ವೀಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ‘ಮಗನೇ ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬೇಡ. ನಿಜವಾಗಿಯೂ ಬಹುದೇವವಿಶ್ವಾಸ ಮಹಾ ಅಕ್ರಮವಾಗಿದೆಎಂದರು.” (ಕುರ್‌ಆನ್‌ 31:13)

ಅಲ್ಲಾಹನ ತೀರ್ಮಾನದನುಸಾರವೇ ಈ ವಿಶ್ವದ ಚಿಕ್ಕಪುಟ್ಟ ಮತ್ತು ದೊಡ್ಡ ಎಲ್ಲಾ ವಿಚಾರಗಳು ನಡೆಯುತ್ತದೆ. ಸೃಷ್ಟಿಗಳೆಲ್ಲವೂ ಆತನ ನಿಯಂತ್ರಣಗಳಿಗೆ ವಿಧೇಯವಾಗಿದೆ. ಆತನ ಅರಿವು ಅನುಮತಿಯಿಲ್ಲದೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ.  ಆತನು ಸರ್ವ ಶಕ್ತನಾದ ಜಗನ್ನಿಯಂತ್ರಕ ಎಂಬ ಜ್ಞಾನ, ಅವನನ್ನು ಮಾತ್ರ ಎಲ್ಲವೂ ಆಶ್ರಯಿಸುವುದರಲ್ಲಿ, ಅವನಿಗೆ ಮಾತ್ರ ಆರಾಧನೆಯನ್ನು ಸಮರ್ಪಿಸುವುದರಲ್ಲಿ ನಿಜವಾದ ಏಕ ದೇವಾರಾಧಕನಾಗುವುದಕ್ಕೆ… ಆ ಮೂಲಕ ಸಂಕಷ್ಟ ದುಖ ದುಮ್ಮಾನಗಳನ್ನು ಮುಂದಿರಿಸಿ ನೆಮ್ಮದಿ ಕಂಡುಕೊಳ್ಳಲು ಓರ್ವ ಸತ್ಯ ವಿಶ್ವಾಸಿಗೆ ಸಹಾಯಕವಾಗುತ್ತದೆ.

ಅಲ್ಲಾಹನು ಹೇಳುತ್ತಾನೆ; ಅನಂತರ ಅವರು ತಮ್ಮ (ಇದ್ದತ್) ಕಾಲಾವಧಿಯ ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ (ನಿಮ್ಮವಿವಾಹವನ್ನು ತಡೆದಿರಿಸಿಕೊಳ್ಳಿರಿ. ಇಲ್ಲವೇ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ ಮತ್ತು ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ. ಮತ್ತು (ಸಾಕ್ಷಿಗಳಾಗುವವರೇ) ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಲಾಹನಿಗಾಗಿ ನೀಡಿರಿ. ನಿಮಗೆ ಉಪದೇಶಿಸಲಾಗುತ್ತಿರುವ ವಿಷಯಗಳಿವು. ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವ ಪ್ರತಿಯೊಬ್ಬನಿಗೆ ಅಲ್ಲಾಹನನ್ನು ಭಯಪಡುತ್ತಾ ಕಾರ್ಯವೆಸಗುವವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ತೆರೆಯುವನು. ಮತ್ತು ಅವನು ಊಹಿಸಿಯೂ ಇರದಂತಹಾ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. ಅಲ್ಲಾಹನ ಮೇಲೆ ಭರವಸೆ ಇಡುವವನ ಪಾಲಿಗೆ ಅವನೇ ಸಾಕು. ಅಲ್ಲಾಹನು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುತ್ತಾನೆ. ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿಟ್ಟಿರುತ್ತಾನೆ.” (ಕುರ್‌ಆನ್‌ 65:2-3)

ಇಂತಹವರೇ( ಪ್ರವಾದಿಯ ಆಹ್ವಾನವನ್ನು) ಸ್ವೀಕರಿಸಿದ್ದಾರೆ ಮತ್ತು ಅವರ ಹೃದಯಗಳಿಗೆ ಅಲ್ಲಾಹನ ಸ್ಮರಣೆಯಿಂದ ಶಾಂತಿಯೊದಗುತ್ತದೆ. ಕೇಳಿರಿ ಮನಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ.” (ಕುರ್‌ಆನ್‌ 13:28)

ದುರ್ಬಲರಾದ ಸೃಷ್ಟಿಗಳನ್ನು ಬಹುದೇವ ವಿಶ್ವಾಸಿಗಳು ಆಶ್ರಯಿಸಿ ಅವರೊಂದಿಗೆ ತಮ್ಮ ಸಂಕಟ ನೋವುಗಳನ್ನು ಹೇಳಿ ಆರಾಧನೆಯನ್ನರ್ಪಿಸಿ ಒಂದು ರೀತಿಯ ದಾಸ್ಯತನ ಮತ್ತು ಮೂರ್ಖತನದಿಂದ ವರ್ತಿಸುತ್ತಿರುವಾಗ  ಸರ್ವಶಕ್ತನೂ ಕರುಣಾಳುವೂ ಆದ ಅಲ್ಲಾಹನನ್ನು ಆಶ್ರಯಿಸಿ ಆತನೊಂದಿಗೆ ಪ್ರಾರ್ಥಿಸಿ ಏಕದೇವಾರಾಧನೆಯ ಪ್ರಬಲವಾದ ತಳಹದಿಯಲ್ಲಿ ಬದುಕಿ ಬಾಳುವ ಓರ್ವ ಯಥಾರ್ಥ ಸತ್ಯವಿಶ್ವಾಸಿಯು ನಿರ್ಭಯದ ಆತ್ಮ ಸಂತೃಪ್ತಿ ಮತ್ತು ನೆಮ್ಮದಿಯನ್ನು ಗಳಿಸುತ್ತಾನೆ.

ಅಲ್ಲಾಹನು ಹೇಳುತ್ತಾನೆ. ಜನರೇ, ಒಂದು ಉದಾಹರಣೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾವ ಆರಾಧ್ಯರನ್ನು ಪ್ರಾರ್ಥಿಸುತ್ತೀರೋ ಅವರೆಲ್ಲರೂ ಒಟ್ಟಾಗಿ ಒಂದು ನೊಣವನ್ನೂ ಸೃಷ್ಟಿಸಲಾರರು.  ಮಾತ್ರವಲ್ಲ ನೊಣವು ಅವರಿಂದೇನನ್ನಾದರೂ ಕಸಿದು ಕೊಂಡೊಯ್ದರೆ ಅವರಿಗೆ ಅದನ್ನು ಬಿಡಿಸಿಕೊಳ್ಳಲಿಕ್ಕೂ ಸಾಧ್ಯವಾಗದು. ಸಹಾಯಾರ್ಥಿಗಳು, ದುರ್ಬಲರು, ಯಾರಿಂದ ಸಹಾಯ ಬೇಡಲಾಗುತ್ತದೋಅವರೂ ದುರ್ಬಲರು.” (ಕುರ್‌ಆನ್‌ 22:73)

ಪ್ರವಾದಿ ಇಬ್ರಾಹೀಮ್(ಅ)ರ ಬದುಕಿನಲ್ಲಿ ಅದರ ಉದಾತ್ತ ಉದಾಹರಣೆಯನ್ನು ಕಾಣಬಹುದು. “ಅವರ ಜನಾಂಗವು ಅವರೊಡನೆ ಜಗಳಾಡತೊಡಗಿದಾಗ ಅವರು ಜನಾಂಗದೊಡನೆನೀವು ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತೀರಾ? ವಸ್ತುತಃ ಅಲ್ಲಹನು ನನಗೆ ಸನ್ಮಾರ್ಗ ದರ್ಶನ ಮಾಡಿರುತ್ತಾನೆ. ಮತ್ತು ನೀವು ಅಲ್ಲಾಹನೊಂದಿಗೆ ಸಹಭಾಗಿಗಳಾಗಿರಿಸಿಕೊಂಡವರನ್ನು ನಾನು ಭಯ ಪಡುವುದಿಲ್ಲ.  ನನ್ನ ಪ್ರಭು ಇಚ್ಚಿಸುದುದು ಮಾತ್ರ ಆಗಲು ಸಾಧ್ಯವಿದೆ. ನನ್ನ ಪ್ರಭುವಿನ ಜ್ಞಾನವು ಪ್ರತಿಯೊಂದು ವಸ್ತುವನ್ನಾವರಿಸಿಕೊಂಡಿದೆ. ಇನ್ನೇನು ನೀವು ಎಚ್ಚರಗೊಳ್ಳಲಾರಿರಾ? ಅಲ್ಲಾಹನು ಯಾವ ಆಧಾರ ಪ್ರಮಾಣವನ್ನೂ ಇಳಿಸದ ವಸ್ತುಗಳನ್ನು ಅಲ್ಲಾಹನೊಂದಿಗೆ ದೇವತ್ವದಲ್ಲಿ ಸಹಭಾಗಿಗಳನ್ನಾಗಿ ಮಾಡಲು ನೀವು ಭಯಪಡುವುದಿಲ್ಲ. ಹೀಗಿರುತ್ತಾ ನೀವು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿಸಿದವುಗಳನ್ನು ನಾನೇಕೆ ಭಯಪಡಲಿ?  ನಮ್ಮೆರಡು ಪಂಗಡಗಳ ಪೈಕಿ ಹೆಚ್ಚು ನಿರ್ಭಯತೆ ಮತ್ತು ಮನಶ್ಶಾಂತಿಗೆ ಅರ್ಹರು ಯಾರು? ನೀವು ಬಲ್ಲವರಾಗಿದ್ದರೆ ಹೇಳಿರಿ. ವಾಸ್ತವದಲ್ಲಿ ಯಾರು ವಿಶ್ವಾಸವಿಟ್ಟು ತಮ್ಮ ವಿಶ್ವಾಸವನ್ನು ಅನ್ಯಾಯದೊಂದಿಗೆ ಕಲುಶಿತಗೊಳಿಸದಿರುವರೋ ಅವರಿಗೆ ಶಾಂತಿಯಿದೆ ಮತ್ತು ಅವರು ಮಾತ್ರ ಸನ್ಮಾರ್ಗದಲ್ಲಿರುತ್ತಾರೆ.” (ಕುರ್‌ಆನ್‌ 6:80-82)

ಅಲ್ಲಾಹನನ್ನು ಮಾತ್ರ ಆರಾಧಿಸಿ ಆತನ ಹೊರತು ಯಾರಿಗೂ ಆರಾಧನೆಯ ಯಾವ ಭಾಗವನ್ನೂ ನೀಡದೆ ಇರುವಾಗ ಓರ್ವನು ನೈಜ ಏಕದೇವ ವಿಶ್ವಾಸಿಯಾಗುತ್ತಾನೆ.   ಅಲ್ಲಾಹನು ಹೇಳುತ್ತಾನೆ ನಿಮ್ಮ ದೇವ ಏಕೈಕ ದೇವ. ದಯಾಮಯನೂ ಕರುಣಾನಿಧಿಯೂ ಆಗಿರುವವನ ಹೊರತು ಇನ್ನೊಬ್ಬ ದೇವನಿಲ್ಲ.” (ಕುರ್‌ಆನ್‌ 2:163)

ಮನುಷ್ಯವರ್ಗವನ್ನೂ ಜಿನ್ ವರ್ಗವನ್ನು ಸೃಷ್ಟಿಸಿದ ಉದ್ದೇಶವನ್ನು ಪವಿತ್ರ ಕುರ್‌ಆನ್ ಹೀಗೆ ವಿವರಿಸುತ್ತದೆ. ನಾನು ಯಕ್ಷ(ಜಿನ್‌)ಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” (ಕುರ್‌ಆನ್‌ 51:56)
ಅಲ್ಲಾಹನು ದಿವ್ಯ ಗ್ರಂಥಗಳನ್ನು ಅವತರಿಸಿದ್ದು ಮತ್ತು ಪ್ರವಾದಿಗಳನ್ನು ನಿಯೋಜಿಸಿದ್ದುದರ ಹಿಂದಿನ ಪ್ರಮುಖ ಉದ್ದೇಶವೇ ಇದಾಗಿದೆ ಎಂಬುದನ್ನು ಅಲ್ಲಾಹನು ವಿಶೇಷವಾಗಿ ನೆನಪಿಸುತ್ತಾನೆ. ಅಲಿಫ್ ಲಾಮ್ ರಾ, ಇದು ಫರಮಾನು. ಇದರ ಸೂಕ್ತಗಳು ಪ್ರಭುದ್ದ ಮತ್ತು ಕೂಲಂಕಷವಾಗಿದ್ದು ನೀವು ಅಲ್ಲಾಹನ ಹೊರತು ಇನ್ನಾರ ದಾಸ್ಯ ಆರಾಧನೆಯನ್ನೂ ಮಾಡಬಾರದೆಂದು ಓರ್ವ ಧೀಮಂತನೂ ವಿವರಪೂರ್ಣನೂ ಆದವನ ಕಡೆಯಿಂದ ನಿರ್ದೇಶಿಸಲ್ಪಟ್ಟಿದೆ. ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ಕೊಡುವವನೂ ಸುವಾರ್ತೆ ನೀಡುವವನೂ ಆಗಿರುತ್ತೇನೆ.” (ಕುರ್‌ಆನ್‌ 11:1-2)

ನಾವು ಪ್ರತಿಯೊಂದು ಸಮುದಾಯದಲ್ಲಿ ಒರ್ವ ಸಂದೇಶವಾಹಕನನ್ನು ಕಳುಹಿಸಿದೆವು ಮತ್ತು ʻಅಲ್ಲಾಹನ ದಾಸ್ಯಾರಾಧನೆ ಮಾಡಿರಿ ಮತ್ತು ತಾಗೂತ್‌ನ ಆರಾಧನೆಯಿಂದ ದೂರವಿರಿʼ ಎಂದು ಅವರ ಮುಖಾಂತರ ಎಚ್ಚರಿಕೆ ನೀಡಿದೆವು. ಅನಂತರ ಅಲ್ಲಾಹನು ಕೆಲವರಿಗೆ ಸನ್ಮಾರ್ಗದರ್ಶನ ಮಾಡಿದನು ಮತ್ತು ಇನ್ನು ಕೆಲವರ ಮೆಲೆ ಪಥಭ್ರಷ್ಟತೆ ಹೇರಲ್ಪಟ್ಟಿತು. ಹೀಗೆ ಸುಳ್ಳಾಗಿಸುವವರ ಅಂತಿಮ ಪರಿಣಾಮ‌ ಏನಾಗಿದೆಯೆಂದು ಭೂಮಿಯ ಮೇಲೆ ಸಂಚರಿಸಿ ನೋಡಿಕೊಳ್ಳಿರಿ.” (ಕುರ್‌ಆನ್‌ 16:36)

ಅಲ್ಲಾಹನ ಪ್ರವಾದಿ(ಸ) ಅಥವಾ ಅಲ್ಲಾಹನಿಗಾಗಿ ಇರುವ ನಾಮ ವಿಶೇಷಣಗಳು ನಿಷೇಧಿಸುವುದಾಗಲೀ ಅದನ್ನು ತಪ್ಪಾಗಿ ವ್ಯಾಖ್ಯಾನಿಸುವುದಾಗಲೀ ಸೃಷ್ಟಿಗಳದ್ದು ಎಂಬಂತೆ ಲೆಕ್ಕ ಹಾಕುವುದು ಇಂತಹದ್ದನ್ನು ಮಾಡದೆ ಅಲ್ಲಾಹನ ಮಹಿಮೆ ಮತ್ತು ಔನ್ನತ್ಯವನ್ನು ಅನುಯೋಜ್ಯವಾದ ವಿಧದಲ್ಲಿ ಅಂಗೀಕರಿಸಬೇಕು. ಅಲ್ಲಾಹನಿಗೆ ಅತ್ಯುತ್ತಮ ಸುಗುಣ ಸಂಪೂರ್ಣವಾದ ನಾಮ ವಿಶೇಷಣಗಳಿವೆ. ಅಲ್ಲಾಹನು ಹೇಳುತ್ತಾನೆ ಅಲ್ಲಾನು ಉತ್ತಮ ನಾಮಗಳಿಗೆ ಅರ್ಹನಾಗಿದ್ದಾನೆ. ಆತನನ್ನು ಉತ್ತಮ ನಾಮಗಳಿಂದಲೇ ಕರೆಯಿರಿ. ಅವನ ನಾಮಗಳನ್ನಿಡುವುದರಲ್ಲಿ ಅತಿರೇಕವೆಸಗುವವರನ್ನು ಬಿಟ್ಟು ಬಿಡಿರಿ. ಅವರು ಮಾಡುವುದರ ಪ್ರತಿಫಲವನ್ನು ಅವರು ಪಡೆದೇ ತೀರುವರು.” (ಕುರ್‌ಆನ್‌ 7:180)

ಸೃಷ್ಟಿಯ ಆರಂಭ ಮಾಡುವವನೂ ಅವನೇ ಮತ್ತು ಅದರ ಪುನರಾವರ್ತನೆ ಮಾಡುವವನೂ ಅವನೇ, ಇದು ಅವನಿಗೆ ಅತ್ಯಂತ ಸುಲಭವಾದುದು. ಭೂಮಿ ಆಕಾಶಗಳಲ್ಲಿ ಅವನ ಗುಣವು ಸರ್ವಶ್ರೇಷ್ಟವಾಗಿದ್ದು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.” (ಕುರ್‌ಆನ್‌ 30:27)

ಆತನ ನಾಮ ವಿಶೇಷಣಗಳನ್ನು ಎಂದಿಗೂ ಸೃಷ್ಟಿಗಳಿಗೆ ಇರುವಂತಹದ್ದಲ್ಲ.  ಅಲ್ಲಾಹನು ಆತನ ನಾಮ ವಿಶೇಷಣಗಳಲ್ಲಿ ಏಕನೂ ಅದ್ವಿತೀಯನೂ ಆಗಿದ್ದಾನೆ. ಅಲ್ಲಾಹನು ಹೇಳುತ್ತಾನೆ. ಭೂಮಿ ಆಕಾಶಗಳ ನಿರ್ಮಾಪಕ, ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೊತೆಗಳನ್ನು ಸೃಷ್ಟಿಸಿದನು. ಹಾಗೆಯೇ ಪ್ರಾಣಿಗಳಲ್ಲೂ (ಅವುಗಳ ವರ್ಗದಿಂದಲೇ) ಜೋಡಿಗಳನ್ನು ಉಂಟು ಮಾಡಿದನು.   ರೀತಿಯಲ್ಲಿ ಅವನು ನಿಮ್ಮ ಸಂತತಿಗಳನ್ನು ಹಬ್ಬಿಸುತ್ತಾನೆ. ವಿಶ್ವದ ಯಾವ ವಸ್ತುವೂ ಅವನನ್ನು ಹೋಲುವುದಿಲ್ಲ.  ಅವನು ಎಲ್ಲವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿದ್ದಾನೆ.” (ಕುರ್‌ಆನ್‌ 42:11)

ಅಲ್ಲಾಹನ ಆಲಿಸುವಿಕೆ, ನೋಟ, ಕರುಣೆಯು ಸೃಷ್ಟಿಗಳಲ್ಲಿ ಯಾವುದಕ್ಕೂ ಸಮಾನ ಅಲ್ಲ. ಆತನ ಸಾಮರ್ಥ್ಯಕ್ಕೆ ಯಾವುದೇ ರೀತಿಯ ಕೊರತೆ, ಪರಿಧಿಯೂ ಇರದು. ಆತನು ಕರುಣಾಮಯಿಯೂ ಪರಮದಯಾಮಯನೂ ಆಗಿರುವನು. ಅವನು ಸೃಷ್ಟಿಸಿದ ಕರುಣೆಯ ನೂರರಲ್ಲಿ ಒಂದಂಶ ಮಾತ್ರ ನಾವು ಈ ಜಗತ್ತಿನಲ್ಲಿ ಕಾಣುವ ಸಕಲ ಪ್ರೀತಿ, ಸ್ನೇಹ, ವಾತ್ಸಲ್ಯವಾಗಿದೆ. ಎಲ್ಲಿಯವರೇಗೆಂದರೆ ಒಂದು ಕುದುರೆಯು ಅದರ ಮರಿಯ ದೇಹಕ್ಕೆ ಗೊರಸು ತಾಗದಂತೆ ಕಾಲೆತ್ತಿ ಹಿಡಿಯುವುದು ಕೂಡಾ ಅದರದೇ ಭಾಗವಾಗಿದೆ!

ಅಲ್ಲಾಹನ ನಿಯಮ ನಿರ್ದೇಶನಗಳನ್ನು ಪಾಲಿಸುತ್ತಾ ಜೀವಿಸುವ ನೈಜ ಸತ್ಯವಿಸ್ವಾಸಿಗಳಿಗಾಗಿ ಶೇಕಡಾ 99 ರಷ್ಟನ್ನು ಪರಲೋಕಕ್ಕೆ ಆತನು ತೆಗೆದಿಟ್ಟಿರುತ್ತಾನೆ. ಅಲ್ಲಾಹನು ಹೇಳುತ್ತಾನೆ. ನಮಗಾಗಿ ಇಹಲೋಕದ ಹಿತವನ್ನೂ ಪರಲೋಕದ ಹಿತವನ್ನೂ ಲಿಖೀತಗೊಳಿಸು. ನಾವು ನಿನ್ನ ಕಡೆಗೆ ಮರಳಿದೆವು. ಇದಕ್ಕುತ್ತರವಾಗಿ ಹೀಗೆ ಅಪ್ಪಣೆಯಾಯಿತುನಾನು ಇಷ್ಟಬಂದವರಿಗೆ ಶಿಕ್ಷೆ ವಿಧಿಸುತ್ತೇನೆ. ಆದರೆ ನನ್ನ ಕರುಣೆಯು ಸರ್ವವನ್ನೂ ವ್ಯಾಪಿಸಿಕೊಂಡಿದೆ. ನಾನು ಅದನ್ನು ಆಜ್ಞೋಲ್ಲಂಘನೆ ಮಾಡದ ಝಕಾತ್ ಕೊಡುವ ಮತ್ತು ನನ್ನ ನಿದರ್ಶನಗಳ ಮೇಲೆ ವಿಶ್ವಾಸವಿರಿಸುವವರಿಗಾಗಿ ಲಿಖಿತಗೊಳಿಸುವೆನು (ಕುರ್‌ಆನ್‌ 7:156)

ಆತನ ಜ್ಞಾನವು ಅತ್ಯಂತ ಸೂಕ್ಷ್ಮವೂ ವಿಶಾಲವಾಗಿರುವುದು ಆಗಿದೆ. ಭವಿಷ್ಯ, ಭೂತ, ವರ್ತಮಾನ ಹೀಗೆ ಇರುವ ಕಾಲ ವ್ಯತ್ಯಾಸಗಳು ಆತನಿಗೆ ಇಲ್ಲ. ಅಲ್ಲಾಹನು ಹೇಳುತ್ತಾನೆ. ಪರೋಕ್ಷದ ಬೀಗದ ಕೈಗಳು ಅವನ ವಶದಲ್ಲೇ ಇವೆ. ಅವುಗಳನ್ನು ಅವನ ಹೊರತು ಇನ್ನಾರೂ ಅರಿಯರು. ನೆಲ ಜಲಗಳಲ್ಲಿರುವುದೆಲ್ಲವನ್ನೂ ಅವನು ತಿಳಿದಿರುತ್ತಾನೆ. ಮರದಿಂದ ಉದುರುವ ಒಂದು ಎಲೆಯ ಹಾಗೂ ಭೂಮಿಯ ಅಂಧಕಾರಗಳಲ್ಲಿ ಹುದುಗಿರುವ ಒಂದು ದಾನ್ಯದ ಬಗೆಗೂ ಅವನಿಗೆ ತಿಳಿಯದೆ ಇಲ್ಲ. ಒಣಹಸಿಗಳೆಲ್ಲವೂ ಒಂದು ತೆರೆದ ಗ್ರಂಥದಲ್ಲಿ ಲಿಖಿತಗೊಂಡಿದೆ.” (ಕುರ್‌ಆನ್‌ 6:59)

ಅಲ್ಲಾಹನ ಗುಣ ನಾಮ ವಿಶೇಷಣಗಳ ಕುರಿತ ಸ್ಪಷ್ಟವಾದ ಜ್ಞಾನವು; ಅಲ್ಲಾಹನ ಕುರಿತಾಗಿ ನಮಗೆ ಹೆಚ್ಚು ಅರಿಯಲು, ಆತನಿಗೆ ಗೌರವಾದರ ತೋರಲು ಮತ್ತು ಅದು ಹೆಚ್ಚಾಗಲು, ಆತನನ್ನು ಸರಿಯಾದ ರೀತಿಯಲ್ಲಿ ಅರಿತು ಬದುಕಲು, ಅದು ಅಂತರಾಳದಲ್ಲಿ ಗಟ್ಟಿಯಾಗಿ ಬೇರೂರಲು ಪ್ರಚೋದಿಸುತ್ತದೆ. ಅಲ್ಲಾಹನನ್ನು ಹೊಗಳಲು, ಆತನ ಕೀರ್ತನೆಗಳನ್ನು ಮಾಡಿ ಆತನೊಂದಿಗೆ ಪ್ರಾರ್ಥಿಸಲು ಆತನ ನಾಮಗಳ ಬಗೆಗಿನ ಜ್ಞಾನವು ಅನಿವಾರ‍್ಯವಾಗಿದೆ.  

ಅಲ್ಲಾಹನು ಹೇಳುತ್ತಾನೆ. ಸತ್ಯವಿಶ್ವಾಸಿಗಳೇ ಅಲ್ಲಾಹನನ್ನು ಬಹಳವಾಗಿ ಸ್ಮರಿಸಿರಿ. ಮತ್ತು ಬೆಳಗು ಬೈಗುಗಳಲ್ಲಿ ಅವನ ಗುಣಗಾನ ಮಾಡುತ್ತಲಿರಿ. ಅವನೇ ನಿಮ್ಮ ಮೇಲೆ ಕೃಪೆ ತೋರುವವನು ಮತ್ತು ಅವನು ನಿಮ್ಮನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ತರುವಂತೆ ಅವನ ದೇವಚರರು ನಿಮಗಾಗಿ ಕೃಪಾ ಪ್ರಾರ್ಥನೆ ಮಾಡುತ್ತಾರೆ. ಅವನು ಸತ್ಯವಿಶ್ವಾಸಿಗಳ ಮೇಲೆ ತುಂಬಾ ಕರುಣೆಯುಳ್ಳವನು.” (ಕುರ್‌ಆನ್‌ 33:41-43)

ಅಲ್ಲಾಹನ ಕುರಿತಾದ ಸರಿಯಾದ ಜ್ಞಾನ, ಅರಿವು, ವಿಶ್ವಾಸವು ಸತ್ಯವಿಶ್ವಾಸಿಗಳಿಗೆ ಧೈರ್ಯ ಮತ್ತು ಮನಶ್ಶಾಂತಿ ನೀಡುತ್ತದೆ. ಅಲ್ಲಾಹನೊಂದಿಗಿನ ಪ್ರೀತಿ ವರ್ದಿಸಿ ಅವನ ಅನುಮತಿ ಮತ್ತು ನಿಷೇಧಗಳನ್ನು ಪಾಲಿಸಿ ಸೂಕ್ಷ್ಮತೆಯಿಂದ ಬದುಕಲು ವಿಶ್ವಾಸಿಗಳಿಗೆ ಸಹಾಯ ಮಾಡುತ್ತದೆ. ಅದು ಸಂತುಷ್ಟವಾದ ಒಂದು ಉತ್ತಮ ಬದುಕನ್ನು ಕಲ್ಪಿಸುತ್ತದೆ. ಅಲ್ಲಾಹನು ಹೇಳುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ಪರವಾಗಿ ರಕ್ಷಣೆ ಮಾಡುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಯಾವುದೇ ವಿಶ್ವಾಸ ಘಾತುಕ ಕೃತಘ್ನನನ್ನು ಮೆಚ್ಚುವುದಿಲ್ಲ.” (ಕುರ್‌ಆನ್‌ 22:38)

“ಪುರುಷನಾಗಿರಲಿ ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯವಿಶ್ವಾಸಿಯಾಗಿದ್ದರೆ ಅವನಿಗೆ ನಾವು ಇಹಲೋಕದಲ್ಲಿ ಪರಿಶುದ್ದ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ (ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು.” (ಕುರ್‌ಆನ್‌ 16:97)

ಅವರೊಡನೆ ಹೇಳಿರಿಅಲ್ಲಾಹನೇ ನಮಗಾಗಿ ಲಿಖಿತಗೊಳಿಸಿದುದರ ಹೊರತು ಬೇರಾವುದೂ (ಒಳಿತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿರುತ್ತಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿಡಬೇಕು.” (ಕುರ್‌ಆನ್‌ 9:51)

ಅಲ್ಲಾಹನ ಕುರಿತಾಗಿ ಜ್ಞಾನಿಗಳು ಮತ್ತುಅಜ್ಞಾನಿಗಳು ಎಂದಿಗೂ ಸರಿಸಮಾನವಾಗಲಾರರು. ಅಲ್ಲಾಹನು ಹೇಳುತ್ತಾನೆ. ಜ್ಞಾನಿಗಳು ಮತ್ತು ಅಜ್ಞಾನಿಗಳು ಎಂದಾದರೂ ಸರಿ ಸಮಾನರಾಗಬಲ್ಲರೇ? ಎಂದು ಇವರೊಡನೆ ಕೇಳಿರಿ. ಬುದ್ದಿ ಜೀವಿಗಳು ಮಾತ್ರ ಉಪದೇಶ ಸ್ವೀಕರಿಸುತ್ತಾರೆ. (ಕುರ್‌ಆನ್‌ 39:9)

ಅಲ್ಲಾಹನ ಕುರಿತು ಯಥಾರ್ಥ ಜ್ಞಾನವನ್ನು ಆತನು ನಮಗೆ ಹಚ್ಚು ಹೆಚ್ಚು ವರ್ಧಿಸಿ ಕೊಡಲಿ, ಆತನ ಸಾಮೀಪ್ಯದೊಂದಿಗೆ ಆತನ ಪ್ರೀತಿ ಸಂತೃಪ್ತಿ ಗಳಿಸಲು ಅವನು ನಮ್ಮನ್ನು ಅನುಗ್ರಹಿಸಲಿ. ಆಮೀನ್.

ಕನ್ನಡಾನುವಾದ: ಅಬೂಸಫ್ವಾನ್

ಕೃಪೆ: theislambasics.com

Leave a Reply