ಭಾಗ 2 – ಕೌಟುಂಬಿಕ ನ್ಯಾಯ-ಅನ್ಯಾಯ: ಇಸ್ಲಾಮೀಶಿಕ್ಷಣ

0
Naumann

Cuculus canorus L. Geminer Kuckuck ... Cuckoos By: Johann Andreas Naumann 1905 Page or plate: IV. 43

‌ಲೇಖಕರು: ಮುಹ್ಯುದ್ದೀನ್ ಗಾಝಿ

ಪರಮ ದಯಾಮಯನೂ ಕೃಪಾಶೀಲನೂ ಆದ ಅಲ್ಲಾಹನ ನಾಮದಿಂದ

ಹುಡುಗ-ಹುಡುಗಿಯರ ನಡುವೆ ವ್ಯತ್ಯಾಸ:

ಮನೆಯ ಕೆಲಸಗಳೆಲ್ಲವೂ ಹುಡುಗಿಯರು ಮಾಡುವಂತಹುದು, ಹುಡುಗರಿಗೆ ಮನೆಯ ಯಾವುದೇ ಕೆಲಸ ಹೊಣೆ ಇಲ್ಲ ಎಂಬ ಭಾವನೆಯು ಹೆಚ್ಚಿನ ಮನೆಗಳಲ್ಲಿ ಬೇರೂರಿ ಬಿಟ್ಟಿದೆ. ಅಂದರೆ ಎಂಜಲು ಪಾತ್ರೆ ಹುಡುಗಿಯರು ತೊಳೆಯಬೇಕು, ಕಸ ಗುಡಿಸುವ ಹೊಣೆ ಹುಡುಗಿಯರದು, ಬಟ್ಟೆ ತೊಳೆಯುವ ಕೆಲಸ ಹುಡುಗಿಯರದು, ಆಹಾರ ಹುಡುಗಿಯರು ಬೇಯಿಸಬೇಕು ಮತ್ತು ಅತಿಥಿಗಳು ಬಂದರೆ (ಅವರು ಹುಡುಗರ ಕಡೆಯಿಂದಾಗಿರಬಹುದು ಅಥವಾ ಹುಡುಗಿಯರ ಕಡೆಯಿಂದಾಗಿರಬಹುದು) ಚಾ-ತಿಂಡಿ ತಯಾರಿಸಬೇಕಾದವರು ಹುಡುಗಿಯರೇ! ಹುಡುಗರಿಗೆ ತೊಳೆದಿಟ್ಟ ವಸ್ತ್ರ ಸಿಗಬೇಕು, ಹೊತ್ತು ಹೊತ್ತಿಗೆ ಚಾ ಸಿಗುತ್ತಿರಬೇಕು… ಇವೆಲ್ಲವೂ ಹುಡುಗಿಯರ ಹೊಣೆಯಾಗಿದೆ!!

ಇದು ವಸ್ತುತಃ ಒಂದು ತಪ್ಪಾದ ಭಾವನೆಯಾಗಿದ್ದು, ಅನ್ಯಾಯಪರವಾದ ವ್ಯವಹಾರವಾಗಿದೆ. ಮನೆಯ ಕೆಲಸಗಳು ಹುಡುಗರು ಮತ್ತು ಹುಡುಗಿಯರಲ್ಲಿ ವಿಂಗಡನೆಯಾಗಬೇಕಾಗಿದೆ. ಯಾರ ಮೇಲೂ ಕೆಲಸಗಳ ಹೊರೆ ಬೀಳುವಂತಾಗಬಾರದು. ಪತಿಯು ತನ್ನ ಸತಿಗೆ ಸಹಾಯ ಮಾಡಬೇಕು. ಪುತ್ರರು ಮತ್ತು ಪುತ್ರಿಯರು ತಮ್ಮ ಮಾತಾಪಿತರಿಗೆ ಕೆಲಸದ ಹೊರೆ ಕಡಿಮೆಯಾಗುವಂತೆ ಪರಸ್ಪರ ಮನೆ ಕೆಲಸಗಳನ್ನು ವಿಂಗಡಿಸಿ ವಹಿಸಿಕೊಳ್ಳಬೇಕು. ಮಕ್ಕಳಿಗೆ ಮನೆಯ ಕೆಲಸಗಳ ತರಬೇತಿ ನೀಡುವುದು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿವಿಧ ಕೆಲಸಗಳನ್ನು ಅವರಿಗೆ ವಹಿಸಿ ಕೊಡುವುದು ಮನೆಯ ಹಿರಿಯರ ಹೊಣೆಗಾರಿಕೆಯಾಗಿದೆ. ಹೀಗೆ ಮನೆಯ ಕೆಲಸಗಳ ತರಬೇತಿ ಮತ್ತು ಸಕ್ರಿಯ ಪಾಲುಗೊಳ್ಳುವಿಕೆಯು ಮಕ್ಕಳ ವ್ಯಕ್ತಿತ್ವವನ್ನು ಉತ್ತಮ ಪಡಿಸುವಲ್ಲಿ ಸಹಕಾರಿಯಾಗುತ್ತದೆ. ಕೆಲವು ಮಾತೆಯಂದಿರು ತಮ್ಮ ಮಕ್ಕಳಿಗೆ ಕೆಲಸವೇನೂ ಕೊಡದೆ ಎಲ್ಲವನ್ನೂ ಸ್ವಯಂ ವಹಿಸಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಇದು ಮಕ್ಕಳ ತರಬೇತಿಯ ಮಟ್ಟಿಗೆ ಒಳ್ಳೆಯದಲ್ಲ.

ಸೊಸೆ ಮತ್ತು ಮಗಳ ನಡುವೆ ವ್ಯತ್ಯಾಸ:

ಒಂದು ಮನೆಯಲ್ಲಿ ಏಕಕಾಲದಲ್ಲಿ ಎಷ್ಟು ಮಂದಿ ಉಪಸ್ಥಿತರಿರುತ್ತಾರೋ ಅವರೆಲ್ಲರೂ ಮನೆಯ ಕೆಲಸದಲ್ಲಿ ಪಾಲುಗೊಳ್ಳಬೇಕಾದುದು ನ್ಯಾಯದ ಬೇಡಿಕೆಯಾಗಿದೆ. ಆದರೆ ಕೆಲವು ಮನೆಗಳಲ್ಲಿ ಕೆಲವು ವಿಚಿತ್ರ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಹುಡುಗಿಯು ತನ್ನ ಪತಿಯ ಮನೆಯಲ್ಲಿ ಕೆಲಸ ಮಾಡಬೇಕು ಮತ್ತು ತವರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂಬುದು ಆ ಸಂಪ್ರದಾಯಗಳಲ್ಲಿ ಒಂದಾಗಿದೆ. ತತ್ಪರಿಣಾಮವಾಗಿ ಮನೆಯ ಕೆಲಸಗಳ ಎಲ್ಲ ಹೊರೆಯು ಸೊಸೆಯ ಮೇಲೆ ಬೀಳುತ್ತದೆ. ಆಮೇಲೆ ಒಂದೋ ಮನೆಯಲ್ಲಿ ಒತ್ತಡದ ಅವಸ್ಥೆ ಬೆಳೆಯತೊಡಗುತ್ತದೆ ಮತ್ತು ಪ್ರತ್ಯೇಕ ಮನೆ ಮಾಡುವ ಹಠ ಆರಂಭವಾಗುತ್ತದೆ, ಇಲ್ಲವೇ ಅನ್ಯಾಯದ ಈ ಅವಸ್ಥೆ ಮುಂದುವರಿಯುತ್ತಲೇ ಹೋಗುತ್ತದೆ.

ಕೆಲವು ಮನೆಗಳಲ್ಲಿ ತದ್ವಿರುದ್ಧ ಅವಸ್ಥೆಯೂ ಇರುತ್ತದೆ. ಅಂದರೆ ಸೊಸೆಯು ತನ್ನ ಗಂಡನ ಮನೆಯಲ್ಲಿ ಕೆಲಸ ಮಾಡುವುದಿಲ್ಲ, ಅವಳ ಅತ್ತೆ ಮತ್ತು ನಾದಿನಿಯರಿಗೇ ಎಲ್ಲ ಕೆಲಸ ಮಾಡಬೇಕಾಗಿ ಬರುತ್ತದೆ. ಇದೂ ನ್ಯಾಯಕ್ಕೆ ವಿರುದ್ಧವಾದ ವಿಷಯವಾಗಿದೆ.

ವಾಸ್ತವದಲ್ಲಿ ಹುಡುಗಿ ತವರಿನಲ್ಲಿದ್ದರೂ ಗಂಡನ ಮನೆಯಲ್ಲಿದ್ದರೂ ಕೆಲಸವನ್ನೂ ಮಾಡಬೇಕು, ವಿಶ್ರಾಂತಿಯನ್ನೂ ಪಡೆಯಬೇಕು ಎಂಬುದೇ ನ್ಯಾಯದ ಬೇಡಿಕೆಯಾಗಿದೆ. ಇದು ಮನೆಯ ಎಲ್ಲ ಸದಸ್ಯರೂ ಕೆಲಸಗಳನ್ನು ಅತ್ಯುತ್ತಮ ರೀತಿಯಲ್ಲಿ ವಿಂಗಡಿಸಿದರೆ ಮತ್ತು ಪಾಲಿನ ಕೆಲಸವನ್ನು ಅತ್ಯುತ್ತಮ ರೂಪದಲ್ಲಿ ಮಾಡಿದರೆ ಅದು ಸಾಧ್ಯವಾಗುತ್ತದೆ. ಇದರಿಂದಾಗಿ ಎಲ್ಲರಿಗೂ ಮನೆಯ ಸುಖಸವಲತ್ತುಗಳಿಂದ ಲಾಭಾ ಗಳಿಸಲು ಸಾಧ್ಯ ಆಗುತ್ತದೆ.

ಕಿರಿಯರಿಂದ ಕೆಲಸ ಮಾಡಿಸುವ ಚಾಳಿ:

ಕೆಲವು ಮನೆಗಳಲ್ಲಿ ಹಿರಿಯ ಸಹೋದರರು ಕಿರಿಯ ಸಹೋದರರಿಂದ ಕೆಲಸ ಮಾಡಿಸುವುದು ತನ್ನ ಹಕ್ಕೆಂದು ಭಾವಿಸಿರುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಕಿರಿಯರನ್ನು ಓಡಿಸುವುದು ಅವರ ಚಾಳಿಯಾಗಿರುತ್ತದೆ. ಆದೇಶ ಪಾಲಿಸದಿದ್ದರೆ ಅವರಿಗೆ ಶಿಕ್ಷೆಯನ್ನೂ ನೀಡಲಾಗುತ್ತದೆ. ತತ್ಪರಿಣಾಮವಾಗಿ ಕೆಲವು ಮಕ್ಕಳು ತಮ್ಮ ಬಾಲ್ಯದ ಸಂತೋಷದಿಂದಲೇ ವಂಚಿತರಾಗಿ ಬಿಡುತ್ತಾರೆ. ಅನೇಕ  ತರದ ಅತೃಪ್ತಿಕರ ನೆನಪುಗಳೊಂದಿಗೆ ತಮ್ಮ ಬಾಲ್ಯಕ್ಕೆ ವಿದಾಯ ಕೋರುತ್ತಾರೆ. ಇದು ಸರಿಯಾದ ವ್ಯವಹಾರವಲ್ಲ. ಮನೆಯ ಹಿರಿಯರು ತಮ್ಮನ್ನು ಪ್ರೀತಿಸುತ್ತಾರೆ, ತಮಗಾಗಿ ಪರಿಶ್ರಮ ಪಡುತ್ತಾರೆ ಎಂಬ ಭಾವನೆಯು ಕಿರಿಯರ ಮನದಲ್ಲಿ ಬೆಳೆದು ಬರುವಂತಾಗಬೇಕು. ಹಿರಿಯ ಸಹೋದರ/ರಿ ಸೇವೆಯ ಮಾದರಿಯನ್ನು ಸ್ವಯಂ ಆಚರಿಸಿ ತೋರಿಸಬೇಕು ಮತ್ತು ಕಿರಿಯರು ಆ ಮಾದರಿಯನ್ನು ಆಸಕ್ತಿಯಿಂದ ಅನುಸರಿಸುವಂತಾಗಬೇಕು. ಒಟ್ಟಿನಲ್ಲಿ ಸೇವೆಯು ಹಿರಿಯರಿಂದ ಆರಂಭವಾಗಬೇಕು ಮತ್ತು ಕಿರಿಯರಿಗೆ ಅದು ಒಂದು ಮಾದರಿಯಾಗಿ ವರ್ಗಾವಣೆಗೊಳ್ಳಬೇಕು.

ಪತ್ನಿಯರ ನಡುವೆ ಅನ್ಯಾಯ:

ಅಲ್ಲಾಹನು ತನ್ನ ಶರೀಅತ್‌ನಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಅನುವದನೀಯವೆಂದು ಸಾರಿದ್ದಾನೆ. ಏಕೆಂದರೆ ಒಂದಕ್ಕಿಂತ ಹೆಚ್ಚು ಮದುವೆಗಳು ಮಾನವೀಯ ಸಮಾಜದ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಮತ್ತು ಅನೇಕ ವಿಧದ ದುಃಖವೇದನೆಗಳನ್ನು ದೂರ ಮಾಡುತ್ತವೆ. ಆದರೆ ಅದರಲ್ಲಿ ನ್ಯಾಯ-ಸಮಾನತೆಯ ಬೇಡಿಕೆಗಳನ್ನು ಪೂರೈಸಿದರಷ್ಟೇ ಶರೀಅತ್‌ನ ಈ ಅಧ್ಯಾಯವು ಸುಂದರಗೊಳ್ಳಲು ಸಾಧ್ಯ. ಅನ್ಯಾಯವು ಈ ಕರ್ಮವನ್ನು ತೀರಾ ಕೆಟ್ಟ ದುಷ್ಕರ್ಮವನ್ನಾಗಿ ಮಾರ್ಪಡಿಸುತ್ತದೆ. ಅನ್ಯಾಯಪರವಾದ ಮದುವೆಗಳ ಮಾದರಿಯು ಸಮಾಜವನ್ನು ಈ ಕಲ್ಪನೆಯ ಮೇಲೆ ದ್ವೇಷಿಸುವಂತೆ ಮಾಡುತ್ತದೆ.

ಹಾಗಾಗಿ ನ್ಯಾಯ-ಸಮಾನತೆಯ ಬೇಡಿಕೆಗಳನ್ನು ಪೂರ್ತಿಗೊಳಿಸುವ ಮೂಲಕ ಬಹುಪತ್ನಿತ್ವದ ಸರಿಯಾದ ಕಲ್ಪನೆಯನ್ನು ಸಮಾಜಕ್ಕೆ ತೋರಿಸುವ ಹೊಣೆ ಮುಸ್ಲಿಮರದಾಗಿತ್ತು. ಆದರೆ ದುರದೃಷ್ಟವಶಾತ್ ಧರ್ಮನಿಷ್ಠ ಮನೆತನದಲ್ಲಿಯೂ ಬಹುಪತ್ನಿತ್ವಕ್ಕೆ ಸಂಬಂಧಿಸಿ ಅಪ್ರಿಯತೆಯ ಭಾವನೆಯು ಸಾಮಾನ್ಯವಾಗ ತೊಡಗಿದೆ. ಈ ಚಿತ್ರಣವನ್ನು ಸರಿಪಡಿಸುವುದು ಮುಸ್ಲಿಮರ ಹೊಣೆಗಾರಿಕೆಯಾಗಿದೆ. ಅಲ್ಲಾಹನ ಸಂದೇಶವಾಹಕರು(ಸ) ನ್ಯಾಯ-ಸಮಾನತೆಯ ಅತ್ಯುತ್ತಮ ಮಾದರಿಯನ್ನು ಸ್ಥಾಪಿಸಿದ್ದಾರೆ.

ಈ ಎಲ್ಲ ವಿಷಯಗಳಲ್ಲಿ ಮಾನವನ ಸಾಮರ್ಥ್ಯದ ಪರಿಧಿಯಲ್ಲಿ ಏನೆಲ್ಲ ಬರುತ್ತದೋ ಅದರಲ್ಲಿ ನ್ಯಾಯ ಪಾಲಿಸಬೇಕು. ಎಲ್ಲಿಯ ವರೆಗೆಂದರೆ ಮುಗುಳ್ನಗುವುದರಲ್ಲಿಯೂ ಪತ್ನಿಯರ ನಡುವೆ ನ್ಯಾಯ ಪಾಲಿಸಬೇಕು ಎಂದು ವಿದ್ವಾಂಸರು ಹೇಳುತ್ತಾರೆ.

ಮಾತಾಪಿತರ ನಡುವೆ ಅನ್ಯಾಯ:

ಹೆಚ್ಚಿನ ಮನೆಗಳಲ್ಲಿ ಮಕ್ಕಳು ಬಾಲ್ಯದಿಂದಲೇ ಕೆಲವು ಅರ್ಥವಿಲ್ಲದ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಪ್ಪ ಒಳ್ಳೆಯವರಾ ಅಥವಾ ಅಮ್ಮನಾ? ನಿನಗೆ ಅಪ್ಪ ಇಷ್ಟನಾ ಅಥವಾ ಅಮ್ಮನಾ? ಇಲ್ಲಿಂದಲೇ ಮಾತಾಪಿತರ ನಡುವೆ ತುಲನೆ ಮಾಡುವ ಮನಸ್ಥಿತಿ ಬೆಳೆದು ಬರುತ್ತದೆ. ಮುಂದುವರಿದು ಒಂದು ವೇಳೆ ಮಾತಾಪಿತರ ನಡುವೆ ಯಾವುದೇ ವಿಷಯಕ್ಕೆ ಮನಸ್ತಾಪ ಉಂಟಾಗಿ ಬಿಟ್ಟರೆ, ಮಗು ತಡಮಾಡದೆ ಯಾರಾದರೊಬ್ಬರ ಕಡೆಗೆ ವಾಲಿ ಬಿಡುತ್ತದೆ. ಕೆಲವೊಂದು ಸಂದರ್ಭದಲ್ಲಿ ಮಕ್ಕಳು ಮಾತಾಪಿತರ ಪೈಕಿ ಯಾರಾದರೊಬ್ಬರಿಗಾಗಿ ಇನ್ನೊಬ್ಬರೊಂದಿಗಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಂಡು ಬಿಡುತ್ತಾರೆ. ಹೆಚ್ಚಿನ ಘಟನೆಗಳಲ್ಲಿ ಮಕ್ಕಳು ತಾಯಿಯ ಪಕ್ಷ ವಹಿಸುತ್ತಾರೆ ಮತ್ತು ತಂದೆಯನ್ನು ಸಂಪೂರ್ಣ ಕಡೆಗಣಿಸುತ್ತಾರೆ. ಇದರಿಂದಾಗುವ ನಷ್ಟವೇನೆಂದರೆ, ಮಾತಾಪಿತರ ನಡುವೆ ಸಮನ್ವಯ ಉಂಟು ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಬೇಕಾದ ಮಕ್ಕಳು ಸ್ವತಃ ಪಕ್ಷಪಾತ ತೋರತೊಡಗುತ್ತಾರೆ.

ಮಕ್ಕಳಿಗೆ ಯಾವ ರೀತಿಯ ಶಿಕ್ಷಣ-ತರಬೇತಿ ನೀಡಬೇಕೆಂದರೆ, ಅವರು ತಮ್ಮ ಮಾತಾಪಿತರ ಪೈಕಿ ಇಬ್ಬರನ್ನೂ ತಮ್ಮ ಪಾಲಿಗೆ ಅನಿವಾರ್ಯವೆಂದು ಭಾವಿಸಬೇಕು, ಇಬ್ಬರೊಡನೆಯೂ ಗಾಢ ಪ್ರೀತಿಯ ಸಂಬಂಧವಿರಿಸಬೇಕು ಮತ್ತು ಇಬ್ಬರೊಂದಿಗೂ ಜೀವನದಾದ್ಯಂತ ಸಂಬಂಧವಿರಿಸಿಕೊಂಡಿರಬೇಕು. ಮಕ್ಕಳು ಮಾತಾಪಿತರ ಮೇಲೆ ಸಮಾನ ಪ್ರೀತಿಯನ್ನು ಹೊಂದಿದರೆ ಮನೆಯ ಅನೇಕ ಸಮಸ್ಯೆಗಳು ಬೆಳೆಯುವುದಕ್ಕೆ ಮುನ್ನವೇ ಪರಿಹರಿಸಲ್ಪಡುತ್ತವೆ. ಅದಕ್ಕಾಗಿ ಮಾತಾಪಿತರು ತಮ್ಮ ಮಕ್ಕಳ ಮೇಲೆ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ ವಿಶೇಷ ಸಮಯವನ್ನು ನಿಗದಿಪಡಿಸಬೇಕಾದ ಅಗತ್ಯವಿದೆ. ಮಕ್ಕಳ ಮುಂದೆ ಪರಸ್ಪರರನ್ನು ದೂರಬಾರದು, ದೂಷಿಸಬಾರದು. ಪರಸ್ಪರರ ಭಿನ್ನಾಭಿಪ್ರಾಯಗಳನ್ನೂ ಮಕ್ಕಳಿಂದ ದೂರವಿದ್ದು ಚರ್ಚಿಸಿ ಪರಿಹರಿಸಬೇಕು.

ಸಂಬಂಧದ ಹಕ್ಕುಗಳೇನು?

ಸಂಬಂಧಿಕರ ಹಕ್ಕುಗಳನ್ನು ಪೂರೈಸಿರಿ ಎಂದು ಅಲ್ಲಾಹನು ಆಗಾಗ ಆದೇಶ ನೀಡಿರುವನು. ಇದರಲ್ಲಿ ನಿಸ್ಸಂಶಯವಾಗಿಯೂ ಸಂಬಂಧಿಕರಿಗೆ ಆರ್ಥಿಕ ಸಹಾಯ ಮಾಡುವುದು ಸೇರಿದೆ, ಇದಕ್ಕೆ ಬಹಳ ಮಹತ್ವವೂ ಇದೆ ಮತ್ತು ದೊಡ್ಡ ಪ್ರತಿಫಲವೂ ಇದೆ. ಆದರೆ ಸಂಬಂಧವನ್ನು ಸಂರಕ್ಷಿಸುವುದು ಸಂಬಂಧದ ಹಕ್ಕಾಗಿದೆ. ಸಂಬಂಧದಲ್ಲಿ ಸದಾ ಪ್ರೀತಿಯ ಬೆಸುಗೆ ಇರಿಸಿಕೊಳ್ಳಬೇಕು. ಸಂಬಂಧಗಳಲ್ಲಿ ಪ್ರೀತಿಯ ಮಹತ್ವವು ನಿಮ್ಮ ಅನುಭೂತಿಯಲ್ಲಿ ಸದಾ ಇರಬೇಕು ಮತ್ತು ನೀವು ಸಂಬಂಧಗಳನ್ನು ಮಾನ್ಯ ಮಾಡುತ್ತೀರಿ ಎಂಬ ಭಾವನೆ ನಿಮ್ಮ ಸಂಬಂಧಿಕರಲ್ಲೂ ಬೆಳೆದು ಬರಬೇಕು. ಇದುವೇ ಸಂಬಂಧಗಳೊಂದಿಗೆ ನ್ಯಾಯದ ಬೇಡಿಕೆಯಾಗಿದೆ.

ಸಂಬಂಧಗಳನ್ನು ಕಾಪಾಡುವುದರ ಕುರಿತು ಇಮಾಮ್ ನವವಿ(ರ) ಹೇಳುತ್ತಾರೆ, ಸಂಬಂಧಿಕರೊಂದಿಗೆ ಸದ್ವರ್ತನೆ ತೋರುವುದು ಸಂಬಂಧ ಕಾಪಾಡುವುದಾಗಿದೆ. ಅದರಲ್ಲಿ ಸಂಬಂಧ ಪಾಲಿಸುವವರು ಮತ್ತು ಯಾರೊಂದಿಗೆ ಸಂಬಂಧ ಪಾಲಿಸಲಾಗುತ್ತದೆ ಇಬ್ಬರೊಡನೆಯೂ ವಿಚಾರಣೆ ನಡೆಸಲಾಗುವುದು. ಕೆಲವೊಮ್ಮೆ ಸಂಬಂಧ ರಕ್ಷಣೆ ಸಂಪತ್ತಿನ ಮೂಲಕವಾಗಬಹುದು, ಇನ್ನು ಕೆಲವೊಮ್ಮೆ ಸೇವೆಯ ಮೂಲಕ ಮತ್ತು ಸಹಾಯ-ಸಹಕಾರದ ಮೂಲಕ, ಮತ್ತೆ ಕೆಲವೊಮ್ಮೆ ಭೇಟಿ ಮತ್ತು ಸಲಾಮ್ ಇತ್ಯಾದಿಗಳ ಮೂಲಕ.”

ಸಂಬಂಧಗಳ ನಡುವೆ ಸಮಾನತೆಯ ವರ್ಣ ಮೇಳೈಸಿರಬೇಕಾದುದು ನ್ಯಾಯದ ಬೇಡಿಕೆಯಾಗಿದೆ. ಶಿಕ್ಷಣ, ಸಂಪತ್ತು, ಹುದ್ದೆ ಮತ್ತು ಸಾಮಾಜಿಕ ಸ್ಥಾನಮಾನಗಳ ಕಾರಣದಿಂದಾಗಿ ಸಂಬಂಧಗಳಲ್ಲಿ ಮೇಲು-ಕೀಳು ಹಾಗೂ ಅಸಮಾನತೆಯ ಅವಸ್ಥೆ ಎಂದೂ ಹುಟ್ಟಿಕೊಳ್ಳಬಾರದು. ಜನರು ನಿಮ್ಮ ವ್ಯಕ್ತಿತ್ವದ ಸುವ್ಯಕ್ತ ಮಗ್ಗುಲುಗಳ ಕಾರಣವಾಗಿ ನಿಮ್ಮನ್ನು ಗೌರವಾದರದಿಂದ ಕಾಣತೊಡಗುತ್ತಾರೆ. ಆದರೆ ಸ್ವಯಂ ನಿಮ್ಮಲ್ಲಿ ಅಹಂಕಾರದ ಲವಲೇಶವೂ ಕಾಣಬಾರದು. ಸಂಬಂಧಿಕರ ನಡುವೆ ತನ್ನ ಹಿರಿಮೆಯನ್ನು ವ್ಯಕ್ತಪಡಿಸುವುದು ಬಹದೊಡ್ಡ ಅನೈತಿಕತೆಯಾಗಿದೆ. ತದ್ವಿರುದ್ಧವಾಗಿ ವಿನಯಶೀಲತೆ ಮತ್ತು ವಿನಮ್ರತೆಯೇ ಅತ್ಯುತ್ತಮ ವ್ಯವಹಾರವಾಗಿದೆ.

ದೂರದ ಮತ್ತು ಹತ್ತಿರದ ಸಂಬಂಧಗಳೊಂದಿಗೆ ಸಮಾನವಾಗಿ ವ್ಯವಹರಿಸುವುದು ಸಾಧ್ಯವಿಲ್ಲ ಎಂಬುದು ಸರಿ. ಆದರೆ ಸಂಬಂಧ ಸುಧಾರಣೆಯ ಮೂಲಭುತ ಬೇಡಿಕೆಗಳನ್ನಂತೂ ಎಲ್ಲರೊಂದಿಗೆ ಪಾಲಿಸಲು ಸಾಧ್ಯವಿದೆ.

ಸಾಮಾನ್ಯ ಸ್ಥಿತಿಯಲ್ಲಿ ನಿಮ್ಮ ತಂದೆಗಿಂತ ತಾಯಿಯ ಬಗ್ಗೆ ಹೆಚ್ಚು ಗಮನ ವಹಿಸಬೇಕಾದ ಅಗತ್ಯ ಇರುತ್ತದೆ. ಅದೇ ರೀತಿ ಸಹೋದರರಿಗಿಂತ ಸಹೋದರಿಯರ ಬಗ್ಗೆ ಕಾಳಜಿ ವಹಿಸಬೇಕಾದುದು ಅಗತ್ಯವೆನಿಸುತ್ತದೆ. ದುಡಿಯುವ ಸಹೋದರರಿಗಿಂತ ಇನ್ನೂ ತನ್ನ ಕಾಲ ಮೇಲೆ ನಿಲ್ಲದ ಕಿರಿಯ ಸಹೋದರರು ನಿಮ್ಮ ಕಾಳಜಿಗೆ ಹೆಚ್ಚು ಅರ್ಹರಾಗಿರುತ್ತಾರೆ.

ಅದೇನಿದ್ದರೂ ಕೆಲವು ಸಂಬಂಧಗಳೊಂದಿಗೆ ಸಾದ್ಯಂತ ಸಮಾನತೆಯ ವ್ಯವಹಾರ ತೋರಬೇಕಾದ ಅಗತ್ಯವಿದೆ. ಉದಾಹರಣೆಗೆ, ಮಕ್ಕಳ ನಡುವೆ, ಪತ್ನಿಯರ ನಡುವೆ ತನ್ನಿಂದ ಎಷ್ಟರ ಮಟ್ಟಿಗೆ ಸಮಾನತೆ ಪಾಲಿಸಲು ಸಾಧ್ಯವೋ ಅಷ್ಟೂ ಪಾಲಿಸಬೇಕು.

ಅದೇ ವೇಳೆ ಅಗತ್ಯಗಳಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರತಿಯೊಂದು ಮಗುವಿನ ಅಗತ್ಯ ಪ್ರತ್ಯೇಕವಾಗಿರುತ್ತದೆ. ಅದರ ಈಡೇರಿಕೆಗೆ ಬೇಕಾದ ಮೊತ್ತವೂ ಭಿನ್ನವಾಗಿರುತ್ತದೆ. ಅವೆಲ್ಲವನ್ನೂ ಅಂಗೀಕರಿಸಬೇಕಾಗುತ್ತದೆ. ಆದ್ದರಿಂದ ಅವೆಲ್ಲವೂ ನ್ಯಾಯ ಮತ್ತು ಯುಕ್ತಿಯ ಪರಿಧಿಯಲ್ಲಿ ಈಡೇರಬೇಕಾಗಿದೆ. ಒಟ್ಟಿನಲ್ಲಿ ಯಾರಿಗೂ ದೂರಿಕೊಳ್ಳುವ ಅವಕಾಶ ನೀಡಬಾರದು ಮತ್ತು ಎಲ್ಲರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಅಂತಿಮ ಫಲಿತಾಂಶವು ಹಕ್ಕುಚ್ಯುತಿ ಮತ್ತು ಅನ್ಯಾಯಯುತವಾಗಿ ಕಾಣದೆ ನ್ಯಾಯ-ಸಮಾನತೆಯ ರೂಪದಲ್ಲಿ ಮೂಡಿ ಬರಬೇಕು.

ಕೌಟುಂಬಿಕ ಅನ್ಯಾಯ: ಪ್ರತಿಕ್ರಿಯೆ ಹೇಗಿರಬೇಕು?

ಸ್ವಯಂ ತನ್ನ ಮನೆಯವರು ಮತ್ತು ತನ್ನ ಸಂಬಂಧಿಕರು ಅನ್ಯಾಯ ಎಸಗಿದರೆ ವಿಶೇಷತಃ ತನ್ನ ಮಾತಾಪಿತರೇ ಅನ್ಯಾಯ-ಹಕ್ಕುಚ್ಯುತಿ ಮಾಡಿದರೆ ಅದಕ್ಕೆ ಈಡಾದವರು ಯಾವ ರೀತಿಯ ಪ್ರತಿಕ್ರಿಯೆ ತೋರಬೇಕು? ಇದೊಂದು ತೀರಾ ಕ್ಲಿಷ್ಟಕರವಾದ ಪ್ರಶ್ನೆಯಾಗಿದೆ. ಹೆಚ್ಚಿನ ಮನೆಗಳಲ್ಲಿ, ಇಂತಹ ಹಕ್ಕುಚ್ಯುತಿ ಮತ್ತು ಅನ್ಯಾಯಗಳನ್ನು ನೆಪ ಮಾಡಿಕೊಂಡು ಅದೆಷ್ಟೋ ನಿಕಟ ಸಂಬಂಗಳು ಶಾಶ್ವತವಾಗಿ ಸಂಬಂಧವನ್ನೇ ಕಡಿದುಕೊಳ್ಳಬೇಕಾಗಿ ಬಂದ ಅನೇಕ ದುರ್ಘಟನೆಗಳು ನಡೆದಿವೆ.

ಇದಕ್ಕೆ ಪರಿಹಾರ ಪವಿತ್ರ ಕುರ್‌ಆನ್ ಮತ್ತು ಪ್ರವಾದಿಚರ್ಯೆಯಲ್ಲಿ ಇದೆ. ಸಂಬಂಧ ಸುಧಾರಣೆಗೆ ಮಾನವನು ತನ್ನ ಕಡೆಯಿಂದ ಸಾದ್ಯಂತ ಪ್ರಯತ್ನಿಸಬೇಕು. ಒಂದು ವೇಳೆ ಅವನ ಸಂಬಂಧಿಕರು ಅವನೊಡನೆ ಅನ್ಯಾಯಯುತವಾಗಿ ವ್ಯವಹರಿಸಿದರೂ ಅವನು ಅವರೊಡನೆ ಉದಾರವಾಗಿ ವರ್ತಿಸಬೇಕು.

ಅನ್ಯಾಯವಾಯಿತೆಂದು ಸಂಬಂಧ ಕಡಿದು ಬಿಡುವುದು ಸುಲಭ. ಆದರೆ ಪರಿಣಾಮದ ನಿಟ್ಟಿನಲ್ಲಿ ಅದು ಸಹ್ಯವಾದ ಕಾರ್ಯವಲ್ಲ. ಅನ್ಯಾಯದ ಹೊರತಾಗಿಯೂ ಸಂಬಂಧ ಸ್ಥಾಪಿಸಿಕೊಂಡಿರುವುದು ಸುಲಭದ ಕೆಲಸವೇನಲ್ಲ. ಮುನಿಸಿದ ಮನಸ್ಸುಗಳನ್ನು ಸಂತೈಸುವುದು ಬಲುದೊಡ್ಡ ಪರಿಶ್ರಮದ ಕಾರ್ಯವಾಗಿದೆ. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಅದು ಬಹಳ ಅನುಗ್ರಹೀತ ಸ್ಥಾನ ಹೊಂದಿದೆ; ಮತ್ತದು ಸೌಭಾಗ್ಯವಂತರಿಗಷ್ಟೇ ದೊರೆಯುವುದು.

ನ್ಯಾಯ ಪಾಲಿಸುವವನ ಸ್ಥಾನಮಾನವು ಉನ್ನತವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅನ್ಯಾಯಕ್ಕೆ ಪ್ರತಿಯಾಗಿ ಸೌಜನ್ಯದ ವ್ಯವಹಾರ ತೋರುವವನು ಇನ್ನೂ ಉನ್ನತವಾದ ಸ್ಥಾನಮಾನವನ್ನು ಗಳಿಸಿಕೊಳ್ಳುತ್ತಾನೆ.

ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿರುವರು, ತನ್ನೊಡನೆ ವ್ಯವಹರಿಸಿದಂತೆ ತಾನೂ ವ್ಯವಹರಿಸುತ್ತೇನೆ ಎನ್ನುವವನು ಸಂಬಂಧ ಸುಧಾರಿಸುವವನಲ್ಲ; ಬದಲಾಗಿ ತನ್ನಿಂದ ಸಂಬಂಧ ಕಡಿದವರೊಂದಿಗೂ ತಾನು ಸಂಬಂಧ ಸ್ಥಾಪಿಸಲು ಪ್ರಯತ್ನಿಸುವವನೇ ನಿಜವಾದ ಸಂಬಂಧ ಸುಧಾರಕನಾಗಿದ್ದಾನೆ.”

ಪವಿತ್ರ ಕುರ್‌ಆನಿನಲ್ಲಿ ಒಂದು ಕಡೆ ಅಲ್ಲಾಹನು ನ್ಯಾಯ, ಪರೋಪಕಾರ ಮತ್ತು ಸಂಬಂಧಿಕರ ಹಕ್ಕುಗಳನ್ನು ಪಾಲಿಸುವುದನ್ನು ಒಟ್ಟೊಟ್ಟಿಗೆ ಉಲ್ಲೇಖಿಸಿದ್ದಾನೆ ಎನ್ನುವುದು ಗಮನಾರ್ಹ ವಿಷಯವಾಗಿದೆ.

“ಅಲ್ಲಾಹನು ನ್ಯಾಯ, ಪರೋಪಕಾರ ಮತ್ತು ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ.” (ಸೂರಃ ಅನ್ನಹ್ಲ್: 90)

ಅರ್ಥಾತ್ ಸಂಬಂಧಿಕರ ವಿಷಯದಲ್ಲಿ ಹಕ್ಕು ಪಾಲನೆಯೊಂದಿಗೆ ನ್ಯಾಯ ಮತ್ತು ಪರೋಪಕಾರ ಎರಡಕ್ಕೂ ವಿಶೇಷ ಮಹತ್ವವಿದೆ ಎಂದು ಇದರಿಂದ ತಿಳಿದು ಬರುತ್ತದೆ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟೀಕರಿಸಬೇಕಾದ ಅಗತ್ಯವಿದೆ. ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿ ಕೌಟುಂಬಿಕ ಅನ್ಯಾಯಕ್ಕೆ ಪರೋಪಕಾರದೊಂದಿಗೆ ಉತ್ತರ ನೀಡಬೇಕು. ಆ ಮೂಲಕ ಅವನು ಜನರಲ್ಲಿ ನ್ಯಾಯಕ್ಕೆ ಸಂಬಂಧಿಸಿ ಜಾಗೃತಿಯನ್ನು ಮೂಡಿಸಲು ಮತ್ತು ಮನೆಯ ಪರಿಸರವನ್ನು ಉತ್ತಮಪಡಿಸಲು, ಅಂತೆಯೇ ನ್ಯಾಯಪೂರ್ಣ ವಾತಾವರಣವನ್ನು ಉಂಟು ಮಾಡಲು ಪ್ರಯತ್ನಿಸಬೇಕು. ಇತರರೊಡನೆ ಅನ್ಯಾಯವಾಗುತ್ತಿರುವುದು ಕಂಡಾಗಲೂ ಆ ಅನ್ಯಾಯವನ್ನು ದೂರೀಕರಿಸಲು ಪ್ರಯತ್ನಿಸಬೇಕು. ಒಟ್ಟಿನಲ್ಲಿ ಅನ್ಯಾಯಕ್ಕೆ ಸಹನೆ ವಹಿಸಲೂ ಬೇಕು, ಅದರ ಜೊತೆಗೆ ಅನ್ಯಾಯಪರವಾದ ವ್ಯವಹಾರವನ್ನು ಕೊನೆಗಾಣಿಸಲು ಪ್ರಯತ್ನವನ್ನೂ ಜಾರಿಯಲ್ಲಿರಿಸಬೇಕು.

ನಷ್ಟದ ವ್ಯವಹಾರ ಯಾಕೆ ಮಾಡಬೇಕು?

ಈ ಜಗತ್ತಿನಲ್ಲಿ ಯಾವುದೇ ಕಾರಣಕ್ಕೆ ಯಾರ ಜೊತೆಗಾದರೂ ಅನ್ಯಾಯ ಮತ್ತು ಹಕ್ಕುಚ್ಯುತಿ ನಡೆಸುವುದು ನಷ್ಟದ ವ್ಯವಹಾರವಾಗಿದೆ. ಅದರಲ್ಲೂ ತನ್ನ ಸಂಬಂಧಿಕರೊಂದಿಗೆ ಅನ್ಯಾಯ-ಹಕ್ಕುಚ್ಯತಿ ನಡೆಸುವುದಂತೂ ಇನ್ನೂ ದೊಡ್ಡ ನಷ್ಟದ ವ್ಯವಹಾರ. ಇಹಲೋಕದ ತುಚ್ಛ ಸಂಪತ್ತಿಗಾಗಿ ಒಂದೆಡೆ ಇಹಲೋಕದಲ್ಲೇ ಹೆಚ್ಚಿನವರಿಗೆ ಕಹಿಫಲವನ್ನು ಸವಿಯಬೇಕಾಗಿ ಬರುತ್ತದೆ. ಜತೆಗೆ ಮನೆಯಲ್ಲಿ ತೀವ್ರವಾದ ದ್ವೇಷ ಹರಡುತ್ತದೆ ಮತ್ತು ಕುಟುಂಬದ ಬುನಾದಿಯೇ ಒಡೆದು ಚೂರಾಗುತ್ತದೆ. ತತ್ಪರಿಣಾಮವಾಗಿ ಹೆತ್ತವರು ಮತ್ತು ಮಕ್ಕಳ ನಡುವೆ, ಸಹೋದರ-ಸಹೋದರಿಯರ ನಡುವೆ ದ್ವೇಷ ಮನೆಮಾಡತೊಡಗುತ್ತದೆ. ಇಹಲೋಕದಲ್ಲಾಗುವ ನಷ್ಟವಂತೂ ಹಿರಿದಾದುದು; ಜತೆಗೆ ಪರಲೋಕದಲ್ಲಿ ನ್ಯಾಯ ಪಾಲಿಸುವವರಿಗೆ ದೊರೆಯುವ ಉನ್ನತ ಸ್ಥಾನಮಾನದಿಂದ ವಂಚಿತವಾಗುವುದಿದೆಯಲ್ಲ, ಅದಕ್ಕಿಂತ ದೊಡ್ಡ ನಷ್ಟ ಬೇರೆ ಇರಲಾರದು.

ಮನೆ ಮತ್ತು ಕುಟುಂಬದಲ್ಲಿ ನ್ಯಾಯ-ಸಮಾನತೆಯನ್ನು ಪಾಲಿಸುವವರಿಗೆ ಅಲ್ಲಾಹನ ಸಂದೇಶವಾಹಕರು(ಸ) ನೀಡಿದ ಈ ಸುವಾರ್ತೆಯು ಪ್ರತಿಯೊಂದು ಮನೆಯ ಗೋಡೆಗಳಲ್ಲಿ ರಾರಾಜಿಸಬೇಕಾಗಿದೆ,

“ನ್ಯಾಯ ಪಾಲಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳಲ್ಲಿ ರಹ್ಮಾನನ ಬಲಬದಿಯಲ್ಲಿ ವಿರಾಜಮಾನರಾಗಿರುವರು. ಅವರ ಎರಡೂ ಕೈಗಳು ಸಮೃದ್ಧವಾಗಿರುವುದು. ಇವರು ತಮ್ಮ ತೀರ್ಮಾನಗಳಲ್ಲಿ ತಮ್ಮ ಮನೆಯವರು ಮತ್ತು ತಮ್ಮ ಅಧೀನ ಜನರ ನಡುವೆ ನ್ಯಾಯ-ಸಮಾನತೆಯನ್ನು ಪಾಲಿಸುವವರಾಗಿದ್ದರು.”

ನ್ಯಾಯ-ಸಮಾನತೆಯನ್ನು ಸಂದೇಶವಾಹಕರುಗಳ ನೇಮಕದ ಉದ್ದೇಶವೆಂದು ಸಾರಲಾಗಿದೆ. ಅಂತೆಯೇ ನ್ಯಾಯ-ಸಮಾನತೆಗೆ ಸಾಕ್ಷ್ಯ ವಹಿಸಲು ಮತ್ತು ನ್ಯಾಯ-ಸಮಾನತೆಯಲ್ಲಿ ಸ್ಥಿರವಾಗಿರಲು ಮುಸ್ಲಿಮರಿಗೆ ಆದೇಶಿಸಲಾಗಿದೆ.

ಆಡಳಿತ ಮಟ್ಟದಲ್ಲಿ ನ್ಯಾಯ-ಸಮಾನತೆಯ ಸ್ಥಾಪನೆಯು ದೀರ್ಘ ಪರಿಶ್ರಮವನ್ನು ಬಯಸುತ್ತದೆ. ಅದೇ ವೇಳೆ ಮನೆ ಮತ್ತು ಕುಟುಂಬ ಮಟ್ಟದಲ್ಲಿ ನ್ಯಾಯ-ಸಮಾನತೆಯ ಸ್ಥಾಪನೆಯು ಸುದೃಢ ತೀರ್ಮಾನ ಮತ್ತು ದೃಢ ಸಂಕಲ್ಪದ ಅಗತ್ಯವಿರುತ್ತದೆ. ಇನ್ನೊಂದೆಡೆ ಪ್ರಯತ್ನದ ಹೊರತಾಗಿಯೂ ನಾಡಿನಲ್ಲಿ ನ್ಯಾಯ ಸ್ಥಾಪನೆಯಾಗದಿದ್ದರೆ, ಮಾನವನು ಅಸಹಾಯಕನಾಗಿದ್ದಾನೆಂದು ಸಾರಬಹುದಾಗಿದೆ ಮತ್ತು ಅವನು ತನ್ನ ಪ್ರಯತ್ನಕ್ಕೆ ಪ್ರತಿಫಲವನ್ನು ಪಡೆಯುವನು. ಆದರೆ ಮನೆಯ ಮತ್ತು ಕುಟುಂಬದ ಮಟ್ಟದಲ್ಲಿ ನ್ಯಾಯ-ಸಮಾನತೆಯನ್ನು ಪಾಲಿಸದವರ ಬಳಿ ಯಾವುದೇ ನೆವನ ಇರಲಾರದು. ಮನೆ ಮತ್ತು ಕುಟುಂಬವಂತೂ ಮಾನವನ ಸ್ವಂತ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲಿ ಅವನು ನ್ಯಾಯದ ಬೇಡಿಕೆಗಳನ್ನು ಈಡೇರಿಸಬೇಕಾದುದು ಅನಿವಾರ್ಯವಾಗಿದೆ.

ನ್ಯಾಯಕ್ಕೆ ಸಂಬಂಧಿಸಿ ಸೂಕ್ಷ್ಮತೆ ಅಗತ್ಯ:

ಈ ಲೇಖನದಲ್ಲಿ ಕೌಟುಂಬಿಕ ಅನ್ಯಾಯದ ಕೆಲವು ಉದಾಹರಣೆಗಳನ್ನಷ್ಟೇ ನೀಡಲಾಗಿದೆ. ಅನ್ಯಾಯಗಳನ್ನು ನಿವಾರಿಸುವ ಕುರಿತು ಹೇಳಲಾಗಿಲ್ಲ. ವಾಸ್ತವದಲ್ಲಿ ಮಾನವನಲ್ಲಿ ನ್ಯಾಯ-ಸಮಾನತೆಗೆ ಸಂಬಂಧಿಸಿ ತೀವ್ರ ತೆರನಾದ ಸೂಕ್ಷ್ಮತೆಯು ಹುಟ್ಟಿ ಬರಬೇಕಾಗಿದೆ. ಯಾರು ಸ್ವಚ್ಛತೆಗೆ ಸಂಧಿಸಿ ಸೂಕ್ಷ್ಮರಾಗಿರುತ್ತಾರೋ ಅವರ ವೀಕ್ಷಿಸುವ ಮತ್ತು ಆಘ್ರಾಣಿಸುವ ಶಕ್ತಿಯು ಎಲ್ಲ ರೀತಿಯ ಮಾಲಿನ್ಯಗಳಿಂದ ಅವರನ್ನು ಎಚ್ಚರಿಸುತ್ತಾ ಇರುತ್ತದೆ. ಅಂತಹವರು ಸಣ್ಣ ಮಟ್ಟಿನ ಮಾಲಿನ್ಯವಿದ್ದರೂ ಅದರಿಂದ ದೂರವಿರುತ್ತಾರೆ. ಅದೇ ರೀತಿ ನ್ಯಾಯ-ಸಮಾನತೆಗೆ ಸಂಬಂಧಿಸಿಯೂ ಅಂತಹುದೇ ಸೂಕ್ಷ್ಮತೆ ಹುಟ್ಟಿ ಬರಬೇಕಾಗಿದೆ ಮತ್ತು ಸಣ್ಣ ಮಟ್ಟಿನ ಅನ್ಯಾಯ-ಅಸಮಾನತೆಯೂ ಅರಿವಿಗೆ ಬಂದರೆ ಆತ್ಮಸಾಕ್ಷಿಯನ್ನು ಬಡಿದೆಚ್ಚರಿಸುವಂತಾಗಬೇಕು.

ಕೆಲವು ತರದ ಅನ್ಯಾಯಗಳು ತೀರಾ ಸೂಕ್ಷ್ಮಾತಿಸೂಕ್ಷ್ಮವಾಗಿರುತ್ತವೆ. ಅದರ ಕಡೆಗೆ ಯಾರದೇ ಗಮನ ಹರಿಯುವುದಿಲ್ಲ. ಕೆಲವು ಅನ್ಯಾಯಗಳು ಸಾಮಾಜಿಕ ದಿನಚರಿಯಂತೆ ಮಾಮೂಲಾಗಿ ಬಿಟ್ಟಿವೆ ಮತ್ತು ಅವುಗಳನ್ನು ಅನ್ಯಾಯವೆಂದೇ ಭಾವಿಸಲಾಗುವುದಿಲ್ಲ. ಇನ್ನು ಕೆಲವು ಅನ್ಯಾಯಗಳನ್ನು ಸುಂದರವಾದ ನೆಪಗಳಿಂದ ಮುಚ್ಚಿಬಿಡಲಾಗುತ್ತದೆ. ನ್ಯಾಯ-ಸಮಾನತೆಗೆ ಸಂಬಂಧಿಸಿದ ತೀವ್ರವಾದ ಸೂಕ್ಷ್ಮತೆಯು ಎಲ್ಲ ತರದ ಅನ್ಯಾಯಗಳನ್ನು ಗುರುತಿಸುವ ಕಾರ್ಯವೆಸಗುವಂತಾಗಲಿ.

ಕನ್ನಡಾನುವಾದ: ಅಬೂ ಆಫಿಯಾ

Leave a Reply