ಮಾದರಿ ಬದುಕಿನ ಪ್ರವಾದಿ ಮುಹಮ್ಮದ್(ಸ)
ಲೇಖಕರು: ಅಬ್ದರ್ರಹ್ಮಾನ್.ಪಿ.
ಹಿಜರಿ ಕ್ಯಾಲೆಂಡರ್ ನ ಮೂರನೇ ತಿಂಗಳಾದ ರಬೀವುಲ್ ಅವ್ವಲ್ ತಿಂಗಳಿಗೆ ಪವಿತ್ರ ರಮಝಾನ್ ದುಲ್ ಹಜ್ಜ್ ತಿಂಗಳಿಗಿರುವಷ್ಟು ಧಾರ್ಮಿಕವಾದ ಮಹತ್ವವಿಲ್ಲ. ಆದರೆ ಐತಿಹಾಸಿಕವಾಗಿ ಈ ಮಾಸಕ್ಕೆ ಬಹಳಷ್ಟು ಪ್ರಾಧಾನ್ಯತೆಯಿದೆ. ಸತ್ಯಸಂಧವಾದ ಇತಿಹಾಸದ ಗುಣಪಾಠಗಳು ಕುರ್ಆನಿನ ಆಯತ್ಗಳಾಗಿವೆ. ಪವಿತ್ರ ಕುರ್ಆನಿನ ಸೂರಾ ಅಶ್ಶುಅರಾದಲ್ಲಿ ಮಾತ್ರ ಪೃಕೃತಿಯಲ್ಲಿ ಚಿಂತನಾರ್ಹವಾದ ದೃಷ್ಟಾಂತಗಳಿವೆ ಎಂದು ಎಂಟು ಭಾರಿ ಪುನರಾವರ್ತಿಸಿ ಹೇಳಲಾಗಿದೆ. “ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ. ಹೆಚ್ಚಿನವರು ವಿಶ್ವಾಸವಿರಿಸುವವರಲ್ಲ” (ಅಶ್ಶುಅರಾ: 28)
ಅಂತ್ಯಪ್ರವಾದಿ ಮುಹಮ್ಮದ್ (ಸ) ರವರ ಜನನ ಮತ್ತು ವಿದಾಯ ಹಾಗೂ ಪ್ರವಾದಿವರ್ಯರ ಬದುಕಿನ ಪ್ರಾಮುಖ್ಯ ಘಟನೆ ಹಿಜಿರಾಯಾತ್ರೆ ನಡೆದಿರುವುದು ರಬೀವುಲ್ ಅವ್ವಲ್ನಲ್ಲಾಗಿದೆ. ರಬೀವುಲ್ ಅವ್ವಲ್ 12 ದಿನಾಂಕದಂದು ಪ್ರವಾದಿವರ್ಯರ(ಸ) ಜನನವಾಯಿತು ಎಂದು ಜನಜನಿತವಾಗಿದೆ. ಇದಕ್ಕೆ ಭಿನ್ನವಾದ ಅಭಿಪ್ರಾಯಗಳೂ ಇವೆ. ಆದರೆ ಸೋಮವಾರದಂದು ಪ್ರವಾದಿಯವರ ಜನನ ಆಯಿತು ಎಂಬುದರ ಬಗ್ಗೆ ಭಿನ್ನಭಿಪ್ರಾಯವಿಲ್ಲ.
ಅನಾಥರಾಗಿ ಜನಿಸಿ ಅನಾಥನೆಂಬ ನೆಲೆಯಲ್ಲಿ ಎಲ್ಲ ರೀತಿಯ ನೋವು ಯಾತನೆ ಅನುಭವಿಸಿದ ಪ್ರವಾದಿ ಮುಹಮ್ಮದ್(ಸ)ರು ನಂತರದ, ಅಂದರೆ ಲೋಕಾಂತ್ಯದ ವರೆಗಿನ ಎಲ್ಲಾ ಅನಾಥರ, ನಿರ್ಗತಿಕರ ನೆರಳಾದರು. ಅನಾಥರ ವಿಚಾರದಲ್ಲಿ ಅತ್ಯಂತ ಕಳವಳ ಹೊಂದಿದ ಪ್ರವಾದಿವರ್ಯರು(ಸ) ದೀನರ, ನೊಂದವರ ದಯಾಳುವಾಗಿ ಐತಿಹಾಸಿಕವಾಗಿ ದಾಖಲುಗೊಂಡಿದ್ದಾರೆ. ತಾತನ ಅಗಲಿಕೆಯ ಬಳಿಕ ಚಿಕ್ಕಪ್ಪ ಅಬೂತಾಲಿಬ್ರ ಆಸರೆಯಲ್ಲಿ ಬೆಳೆದ ಪ್ರವಾದಿವರ್ಯರು(ಸ) ಸರ್ವರ ಸ್ನೇಹ ಗೌರವಾದರಗಳನ್ನು ಸಂಪಾದಿಸಿದರು. ಮುಹಮ್ಮದ್ ಹೆಸರಿಗೆ ಅನ್ವರ್ಥವಾಗುವಂತೆ “ಸ್ತುತಿಸಲ್ಪಟ್ಟವನು” ಎಂಬಂತೆ ಗುರುತಿಸಿದರು.
ಮಕ್ಕಾ ಪರಿಸರದ ಜನರು ಅವರನ್ನು ಅತ್ತಾಹಿರ್(ಪವಿತ್ರನು), ಅಲ್ ಅಮೀನ್(ಪ್ರಾಮಾಣಿಕ), ಸಾದಿಕ್(ಸತ್ಯಸಂಧ) ಹೀಗೆ ಗೌರವಾದರಗಳಿಂದ ಗುರುತಿಸಿದ್ದರು. ಚಿಕ್ಕಪ್ಪ ಅಬೂತಾಲಿಬ್ ಆರ್ಥಿಕವಾಗಿ ಸಬಲರಾದ ವ್ಯಕ್ತಿಯಾಗಿರಲಿಲ್ಲ. ಅವರಿಗೆ ಹೆಚ್ಚು ಮಕ್ಕಳಿದ್ದರು. ಆರ್ಥಿಕವಾಗಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ, ಈ ದಾರಿದ್ರ್ಯತೆಯ ಸಮಸ್ಯೆಗಳ ಪ್ರತಿಫಲನಗಳು ಪ್ರವಾದಿವರ್ಯರ ವ್ಯಕ್ತಿತ್ವದಲ್ಲಿ ಗೋಚರಿಸಲಿಲ್ಲ. ಪ್ರವಾದಿ(ಸ)ರು ಮಕ್ಕಾದ ಪ್ರತಿಷ್ಟಿತ ಮನೆತನದಲ್ಲಿ ಹುಟ್ಟಿದ್ದರು. ಅವರ ವಂಶ ಪರಂಪರೆಯು ಮಹಾನ್ ಪ್ರವಾದಿ ಇಬ್ರಾಹೀಮ್(ಅ)ರ ವಂಶಕ್ಕೆ ಸೇರುತ್ತದೆ. “ನಾನು ನನ್ನ ಪಿತ ಪ್ರವಾದಿ ಇಬ್ರಾಹೀಮರ(ಅ) ಪ್ರಾರ್ಥನೆಯ ಉತ್ತರವಾಗಿ ಪ್ರವಾದಿ ಈಸಾ(ಅ)ರ ವಿಶೇಷವಾದ ಪ್ರವಚನದ(ಬಿಶಾರತ್) ಉದಯವಾಗಿರುವೆ” ಎಂದು ಸ್ವತಃ ಪ್ರವಾದಿವರ್ಯರು(ಸ) ಹೇಳಿರುವುದು ಸ್ಮರಣೀಯವಾಗಿದೆ.
ಮಹಾಪ್ರವಾದಿ ಇಸ್ಮಾಈಲ್ (ಅ)ರ ಬಳಿಕ ಸುದೀರ್ಘಕಾಲ ಪ್ರವಾದಿಯ ಆಗಮನ ಆಗದ ಕಾರಣಕ್ಕೆ ಮಕ್ಕಾ ಮತ್ತು ಸುತ್ತಮುತ್ತಲ ಪರಿಸರದ ಸಾಮಾಜಿಕ ವ್ಯವಸ್ಥೆಯು, ನೈತಿಕತೆಯು ಕುಸಿದು ತೀರಾ ಕಳವಳಕಾರಿಯಾಗಿತ್ತು. ಅತ್ಯಂತ ಹಳಸಿದ ಸಮಾಜದಲ್ಲಿ ಬಹುದೇವಾರಾಧನೆ, ಅನೇಕ ರೀತಿಯ ಕೆಡುಕುಗಳು ವ್ಯಾಪಿಸಿತ್ತು. ಅಸಂಖ್ಯ ಅಬೂಜಹಲ್ಗಳ ಉದಯಕ್ಕೆ ಕಾರಣವಾಗುವಂತಹ ವಾತಾವರಣ ಅಲ್ಲಿತ್ತು. ಇದಕ್ಕೆ ತದ್ವಿರುದ್ದವಾದ ಸದ್ಗುಣವಂತನಾಗಿ ಪ್ರವಾದಿ ಮುಹಮ್ಮದ್(ಸ) ಬೆಳೆದು ಬಂದರು.
ಅನಾಥತೆ, ದಾರಿದ್ರ್ಯದಿಂದಲೂ ತುಂಬಿದ ಬದುಕಿನಲ್ಲಿ ಪ್ರವಾದಿವರ್ಯರು ಬಾಲ್ಯದಿಂದಲೇ ಕೆಲಸ ಮಾಡುತ್ತಾ ಆಡು ಮೇಯಿಸುತ್ತಾ ಜೀವಿಸಿದರು. ಯುವಕನಾದಾಗ ಮಕ್ಕಾದ ಪ್ರಸಿದ್ದ ವ್ಯಾಪಾರಿ ಖದೀಜಾರ ವ್ಯಾಪಾರ ತಂಡದಲ್ಲಿ ಸೇರಿ ವ್ಯಾಪಾರ ಮಾಡಿದರು. ಅತ್ಯಂತ ಸದ್ಗುಣ ಶಾಲಿಯಾದ ಪ್ರವಾದಿವರ್ಯರು(ಸ) ಅತ್ಯಂತ ಪ್ರಾಮಾಣಿಕತೆಯಿಂದ ಯಶಸ್ವಿಯಾಗಿ ವ್ಯಾಪಾರ ಮಾಡಿ ಉತ್ತಮ ಲಾಭವನ್ನು ಗಳಿಸಿದರು. ಪ್ರವಾದಿವರ್ಯರ ವ್ಯಾಪಾರವು ವಿಶ್ವಕ್ಕೆ ಮಾದರಿಯೆನಿಸುವಂತಿತ್ತು. ಇಂದು ಕೆಲವರು ಸುಳ್ಳು ಹೇಳಿ ಕಾಪಟ್ಯದಿಂದ ಮಾಡುತ್ತಿರುವ ವ್ಯಾಪಾರವಲ್ಲ.
ಅಂದು ಸಾಮಾನ್ಯವಾಗಿ ಪುರುಷರು ವಧುವನ್ನು ಅರಸುತ್ತಿದ್ದದ್ದು ಅರಬರ ಸಂಪ್ರದಾಯವಾಗಿತ್ತು. ಆದರೆ ವಿಧವೆಯು, ಕುಲೀನಳೂ, ಶ್ರೀಮಂತೆಯೂ ಆದ ಖದೀಜಾ ಇದಕ್ಕಿಂತ ತುಸು ಭಿನ್ನವಾಗಿ
ಹೊಣೆಗಾರರ ಮುಖಾಂತರ ವಿವಾಹ ಸಂಬಂಧದ ಮಾತುಕತೆ ನಡೆಸಲು… ಪ್ರವಾದಿವರ್ಯರ ಗೌರವಪೂರ್ಣವಾದ ನಡವಳಿಕೆ, ಅತ್ಯುತ್ಕೃಷ್ಟವಾದ ಸದ್ಗುಣ ಸಂಪನ್ನತೆಯು ಪ್ರೇರಕವಾಗಿತ್ತು. ತನಗಿಂತ ಹದಿನೈದು ವರ್ಷ ಹಿರಿಯವರಾದ ಖದೀಜಾರ ಮುಖಾಂತರ ಇಬ್ರಾಹೀಮರ ಹೊರತಾದ ಎಲ್ಲಾ ಮಕ್ಕಳು ಜನಿಸಿದ್ದರು. ಖದೀಜಾರ ನಿಧನದ ಬಳಿಕ, ಅಂದರೆ ಪ್ರವಾದಿವರ್ಯರ(ಸ) ವಯಸ್ಸು 50 ದಾಟಿದ ಬಳಿಕ ಇತರ ವಿವಾಹಗಳನ್ನು ಮಾಡಿದರು. ಪ್ರವಾದಿ ಪತ್ನಿಯರಲ್ಲಿ ಆಯಿಶಾ(ರ)ಹೊರತು ಪಡಿಸಿ ಉಳಿದವರಲ್ಲಿ ವಿಧವೆಯರೂ ವೃದ್ದೆಯರೂ ಸೇರಿದ್ದರು.
ಖದೀಜಾರ ಜೊತೆಗಿನ ವಿವಾಹದ ಬಳಿಕ ಸಂತುಷ್ಟವೂ ಸಂತೃಪ್ತಿದಾಯಕ ವೈವಾಹಿಕ ಬದುಕು ಸಾಗುತ್ತಿರುವಾಗಲೇ… ಅಲ್ಲಿ ಸಂಪ್ರದಾಯದಂತಿದ್ದ ಹಲವು ರೀತಿಯ ಕೆಡುಕು, ಅನಾಚಾರಗಳಿಂದ ದೂರವಿದ್ದ ಪ್ರವಾದಿವರ್ಯರು(ಸ) ಏಕಾಂತ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು. ಇಂತಹದ್ದೊಂದು ವಾಡಿಕೆ ಪ್ರವಾದಿವರ್ಯರಿಗೆ ವಯಸ್ಸು ನಲುವತ್ತಾದಾಗ ಕೂಡಿ ಬಂತು. ಸುತ್ತಮುತ್ತಲು ತಾಂಡವವಾಡುತ್ತಿರುವ ಕೆಡುಕು ಅನಾಚಾರಗಳಿಂದ ಜಿಗುಪ್ಸೆಗೊಂಡು ಸಂತೃಪ್ತತೆ ಅನುಭವಿಸಲು ಹಿರಾ ಗುಹೆಗೆ ಏಕಾಂತ ಧ್ಯಾನಕ್ಕೆ ತೆರಳುತ್ತಿದ್ದರು. ಹೀಗೆ ಏಕಾಂತ ದ್ಯಾನಕ್ಕೆ ತೆರಳುತ್ತಿರುವಾಗ ಅವರಿಗೆ ಬೇಕಾದ ಆಹಾರಗಳನ್ನು ತಯಾರಿಸಿ ಕೊಟ್ಟು ಖದೀಜಾ(ರ)ರು ಸಹಕರಿಸುತ್ತಿದ್ದರು. ಮುಹಮ್ಮದ್ರ ತ್ಯಾಗ, ಒಳಿತು, ಶ್ರೇಷ್ಟತೆಯ ಬಗ್ಗೆ ಚೆನ್ನಾಗಿ ಅರಿವಿದ್ದ ಖದೀಜಾ(ರ)ರು ಮುಹಮ್ಮದ್(ಸ)ರಿಗೆ ನೆರಳಾಗಿ ಆಸರೆಯಾಗಿ ಬದುಕಿದರು. ಆ ಕಾರಣದಿಂದಲೇ ನಂತರದ ದಿನಗಳಲ್ಲಿ ಖದೀಜಾರನ್ನು ಸ್ಮರಿಸುವಾಗ ಪ್ರವಾದಿವರ್ಯರು ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು.
ಪ್ರವಾದಿವರ್ಯರಿಗೆ ನಲುವತ್ತು ವರ್ಷವಾದಾಗ ರಮಝಾನಿನಲ್ಲಿ ಹಿರಾಗುಹೆಯಲ್ಲಿ ಧ್ಯಾನಾಸಕ್ತರಾಗಿದ್ದಾಗ ಜಿಬ್ರೀಲ್ ಎಂಬ ದೇವದೂತ ಪ್ರತ್ಯಕ್ಷಗೊಂಡು “ಓದಿರಿ” ಎಂದು ಆದೇಶಿಸಿದರು. ನಾನು ಓದು ಬಲ್ಲವನಲ್ಲ ಎಂದು ಪ್ರವಾದಿ ತಿಳಿಸಿದರು. ಆ ಆದೇಶ ಹಾಗೂ ಈ ಉತ್ತರದ ಪುನರಾವರ್ತನೆಯಾಯಿತು. ನಂತರ ಪವಿತ್ರ ಕುರ್ಆನಿನ 96ನೇಯ ಅಧ್ಯಾಯ ಪ್ರವಾದಿವರ್ಯರಿಗೆ ಅವತೀರ್ಣವಾಯಿತು.
ಈ ಆಕಸ್ಮಿಕ ಘಟನೆಯಿಂದ ಅಘಾತಗೊಂಡ ಪ್ರವಾದಿವರ್ಯರು ಜ್ವರದಿಂದ ನಡುಗುತ್ತಾ ಪತ್ನಿಯ ಬಳಿಗೆ ಬಂದಾಗ, ಅವರನ್ನು ಸಂತೈಸಿ ಸಾಂತ್ವನ ಪಡಿಸುತ್ತಿದ್ದ ಖದೀಜಾರ ಮಾತುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. “ಅಲ್ಲಾಹನಾಣೆ… ಖಂಡಿತವಾಗಿಯೂ ಅಲ್ಲಾಹನು ನಿಮ್ಮನ್ನು ಅವಮಾನಿಸಲಾರನು. ತಾವು ಅನಾಥರ, ನಿರ್ಗತಿಕರ ನೆರಳಾಗಿದ್ದೀರಿ. ಸಂಬಂಧಗಳನ್ನು ಜೋಡಿಸುವವರಾಗಿದ್ದೀರಿ. ಅತಿಥಿಗಳನ್ನು ಗೌರವಿಸುವವರಾಗಿದ್ದೀರಿ. ನಿರ್ಗತಿಕರಿಗೆ ಸಂಪಾದಿಸಿ ನೀಡುವವರಾಗಿದ್ದೀರಿ.” ತನ್ನ ಪತ್ನಿಯಿಂದಲೇ ಇಂತಹ ಪ್ರಶಂಸೆ ಗಿಟ್ಟಿಸಿಕೊಂಡ ಪ್ರವಾದಿವರ್ಯರು(ಸ) ನಂತರ ಬಹುಪತ್ನಿತ್ವದ ಸಂದರ್ಭದಲ್ಲೂ ಆ ಪತ್ನಿಯರು ಈ ಸದ್ಗುಣ ಸಂಪನ್ನತೆಯ ಬಗ್ಗೆ ಹೇಳಿದ್ದಾರೆ.
ಪ್ರವಾದಿವರ್ಯರಲ್ಲಿ ಮೊತ್ತ ಮೊದಲಾಗಿ ವಿಶ್ವಾಸವಿಟ್ಟವರು ಪ್ರವಾದಿವರ್ಯರ(ಸ) ಬಗ್ಗೆ ಸಂದೇಹಾತೀತವಾಗಿ ಚೆನ್ನಾಗಿ ಅರಿತವರಾಗಿದ್ದರು. ಪ್ರಿಯ ಪತ್ನಿ ಖದೀಜಾ, ಬಾಲ್ಯದಿಂದಲೇ ಒಡನಾಡಿಯಂತಿದ್ದ ಆಪ್ತಮಿತ್ರ ಅಬೂಬಕ್ಕರ್ (ರ), ಪ್ರವಾದಿವರ್ಯರ ಜೊತೆ ಕಾಲ ಕಳೆಯಲು ಉತ್ಸಾಹ ತೋರಿಸಿದ್ದ ಹ. ಅಲಿ(ರ), ಪ್ರವಾದಿವರ್ಯರ(ಸ) ಸಾಕು ಪುತ್ರ ಝೈದ್(ರ) ಮುಂತಾದವರು ಈ ಗಣದಲ್ಲಿ ಸೇರಿದ್ದರು. ಇದಕ್ಕೆಲ್ಲಾ ಕಾರಣ ಪ್ರವಾದಿವರ್ಯರ(ಸ) ಸದ್ಗುಣ ಸಂಪನ್ನತೆಯಾಗಿತ್ತು. ಪರಮ ದಯಾಳುವೂ ಕರುಣಾಳುವೂ ಆದ ಅಲ್ಲಾಹನು ಪ್ರವಾದಿವರ್ಯರನ್ನು(ಸ) ಕುರ್ಆನಿನಲ್ಲಿ ರಹ್ಮತುಲ್ ಲಿಲ್ ಆಲಮೀನ್ – “ಸರ್ವಲೋಕಗಳಿಗೂ ಅನುಗ್ರಹಿ” ಎಂದು ಹೇಳಿದ್ದಾನೆ. ಪ್ರವಾದಿವರ್ಯರ(ಸ) ಮುಖಾಂತರ ಅವತೀರ್ಣಗೊಂಡ ಕುರ್ಆನನ್ನು ಕರುಣೆ(ರಹ್ಮತ್) ಎಂದು ಸೂರ ಲುಕ್ಮಾನ್ ನಲ್ಲಿ (ಸೂಕ್ತ 3) ವರ್ಣಿಸಿದೆ ಎಂಬುವುದನ್ನು ಕೂಡಾ ಗಮನಿಸಬೇಕು.
ಪ್ರವಾದಿವರ್ಯರಿಗೆ ಸರ್ವ ಮನುಷ್ಯರೊಂದಿಗಿರುವ ಕರುಣೆಯ ಬಗ್ಗೆ ವರ್ಣಿಸಲು ಪದಗಳು ಸಾಲದು. ಅದರ ಆಳವನ್ನು ಅರಿಯಲು ಮನುಷ್ಯ ಭಾಷೆಯಲ್ಲಿಯೇ ಪದಗಳಿಲ್ಲ. ಅದಕ್ಕೆ ಅಲ್ಲಾಹನನ್ನು ಪರಿಚಯಿಸಲು ಬಳಸುವ ಎರಡು ಮಹತ್ತರ ಪದಗಳಾದ ರವೂಫ್ ರಹೀಮ್ ಅನ್ನು (ಸೂರಾ ತೌಬಾ-128) ಬಳಸಿರುವುದನ್ನು ಕೂಡಾ ಗಮನಿಸಬೇಕು.
ಮೈಕೆಲ್ ಹೆಚ್ ಹಾರ್ಟ್ ಇತಿಹಾಸದ ಮೇಲೆ ಪ್ರಭಾವ ಬೀರಿದ ನೂರು ಮಹನೀಯರ ಪಟ್ಟಿಯನ್ನು ಸಿದ್ದ ಪಡಿಸಿದಾಗ ಅದರಲ್ಲಿ ಮಹತ್ ಪೂರ್ಣವಾದ ಮೊದಲನೇಯ ಸ್ಥಾನದಲ್ಲಿ ಪ್ರವಾದಿಮುಹಮ್ಮದ್(ಸ)ರ ಹೆಸರನ್ನು ದಾಖಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ಹದಿನಾಲ್ಕು ಶತಮಾನಗಳಿಂದ ಪ್ರವಾದಿವರ್ಯರು ಸಾಧಿಸಿದ ಮಹತ್ತರ ಬದಲಾವಣೆ, ಕ್ರಾಂತಿ, ವೈಶಾಲ್ಯತೆಯಿಂದ ಉಂಟಾದ ಸತ್ಫಲಗಳು ಯಾವುದೇ ಅಂಧನಿಗೂ ಮನದಟ್ಟಾಗುವ ರೀತಿಯಲ್ಲಿ ಅನುಭವವೇಧ್ಯವಾಗಿ ಬದುಕಿನ ಸರ್ವ ವಲಯಗಳಲ್ಲಿಯೂ ಪಸರಿಸಿದೆ. ಅದು ಇಂದಿಗೂ ಯಾರದೇ ಒತ್ತಡಗಳಿಲ್ಲದೆ ಕೋಟ್ಯಾಂತರ ಮುಸ್ಲಿಮರು ಶಿಸ್ತು, ನಿಷ್ಠೆಗಳನ್ನು ಅಳವಡಿಸಿಕೊಂಡು ಬದುಕುತ್ತಿರುವ ಬಗ್ಗೆ ಇತರರನ್ನು ಚಿಂತನೆಗೆ ಒಳಪಡಿಸದಿರಲಾರದು. ಹಲವಾರು ಗುಣಗಳು, ಹವ್ಯಾಸಗಳು ಶೈಲಿಗಳನ್ನು ನಿತ್ಯ ನಿರಂತರ ಪಾಲಿಸುತ್ತಾ ಅದನ್ನು ಪ್ರಚಾರ ಪಡಿಸುತ್ತಿರುವುದು ಪ್ರವಾದಿವರ್ಯರ(ಸ) ಜೊತೆಗಿರುವ ಅಮೋಘವಾದ ಪ್ರೀತಿ, ಪ್ರೇಮದಿಂದಾಗಿದೆ.
ಹದಿನಾಲ್ಕು ಶತಮಾನಗಳಿಂದ ನಿರಂತರವಾಗಿ ಹಲವಾರು ತಲೆಮಾರುಗಳ ವರೆಗೆ ವಿಶ್ವದಾಧ್ಯಂತ ಈ ರೀತಿಯಲ್ಲಿ ಪ್ರಭಾವ ಬೀರಿದ ಮತ್ತೊಬ್ಬ ಮಾದರಿ ನಾಯಕ ಇತಿಹಾಸದಲ್ಲಿ ಕಂಡು ಬರದು. ಪ್ರವಾದಿವರ್ಯರ(ಸ) ಬಗ್ಗೆ ಪ್ರೀತಿ, ಸ್ನೇಹಾದರ ತುಂಬಿದ ಕೋಟ್ಯಾಂತರ ಅನುಯಾಯಿಗಳು ಇಂದಿಗೂ ಇದ್ದಾರೆ. ಹಾಗೆಯೇ ಪ್ರವಾದಿವರ್ಯರ(ಸ) ಮೇಲಿನ ಪ್ರೀತಿ, ಗೌರವಾದರವನ್ನು ದುರುಪಯೋಗಪಡಿಸಿ ಅನಗತ್ಯ ಅನಾಚಾರಗಳನ್ನು ಸೇರಿಸಿ ಮಾರ್ಕೆಟ್ ಮಾಡಿ ಶೋಷಿಸುವ ಪುರೋಹಿತರು ಬೆಳೆಯಬೇಕಾದರೆ ಆ ಪ್ರೀತಿಗೆ ಅಷ್ಟೊಂದು ಪ್ರಭಾವವಿದೆ ಎಂದು ಅರ್ಥೈಸಬೇಕಾಗಿದೆ. ಪ್ರವಾದಿವರ್ಯರ(ಸ) ವಚನ ಸಂದೇಶಗಳು ಬಹಳ ಸರಳ ರೀತಿಯಲ್ಲಿ ಅರ್ಥೈಸುವಂತಿದೆ. ಆದ್ದರಿಂದಲೇ ಕೆಲ ವಿರೋಧಿಗಳಿಗೆ ಅದನ್ನು ಸುಲಭವಾಗಿ ಸುಳ್ಳು ಪ್ರಚಾರಪಡಿಸಲು ಸಾಧ್ಯವಾಗುತ್ತದೆ. ಪ್ರವಾದಿವರ್ಯರ(ಸ) ಪ್ರಭಾವದ ಬಗ್ಗೆ ಅರ್ಥೈಸಲು ಒಂದು ಘಟನೆ ಹೀಗಿದೆ.
ಪ್ರಮುಖ ವಿದ್ವಾಂಸರಾದ ಓರ್ವರಿಗೆ ಓರ್ವ ಸೇವಕನಿದ್ದನು. ತನ್ನ ಯಜಮಾನನ ಜ್ಞಾನ, ಭಯ, ಭಕ್ತಿ, ಗುಣ, ಮಹಿಮೆ ಮತ್ತಿತರ ಕಾರಣಗಳಿಂದ ಆತ ಪ್ರವಾದಿವರ್ಯರಿಗಿಂತಲೂ ಮಹಾನ್ ವ್ಯಕ್ತಿ ಎಂಬ ಮೂರ್ಖತನದ ನಿಲುವು ಆ ಭಕ್ತನಲ್ಲಿತ್ತು. ತನ್ನ ಸೇವಕನ ಈ ಮೂರ್ಖ ನಿಲುವನ್ನು ಹೋಗಲಾಡಿಸಲು ಆ ವಿದ್ವಾಂಸರು ತುಂಬಾ ಪ್ರಯತ್ನಪಟ್ಟರು. ಆದರೆ ಅದು ಯಾವುದೂ ಫಲ ನೀಡಲಿಲ್ಲ. ತೀವ್ರ ಮೈಕೊರೆಯುವಂತಹ ಚಳಿಯಿರುವಾಗ ಮಧ್ಯ ರಾತ್ರಿಯ ಅಂತಿಮಯಾನದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಲು ವುಝೂವಿಗಾಗಿ ನೀರು ತರಲು ಸೇವಕನೊಂದಿಗೆ ಹೇಳಿದರು. ಆದರೆ ಸೇವಕನು ನಿದ್ದೆಯಿಂದ ಎದ್ದು ಬರಲಿಲ್ಲ. ನಂತರ ಹಲವು ಬಾರಿ ಆತನನ್ನು ಕರೆದು ಎಬ್ಬಿಸಿದರೂ ಚಳಿಯ ತೀವ್ರತೆಯಿಂದ ಆತ ಎದ್ದು ಬರಲೇ ಇಲ್ಲ. ಆತ ಚದ್ದರದೊಳಗೆ ಮುದುಡಿ ಮಲಗಿದನು. ಇನ್ನು ಯಾವುದೇ ಫಲವಿಲ್ಲ ಎಂದು ಮನಗಂಡ ವಿದ್ವಾಂಸರು ನೇರವಾಗಿ ವುಝೂ ನಿರ್ವಹಿಸಿ ಪ್ರಾರ್ಥನೆ, ಕೀರ್ತನೆಯನ್ನೆಲ್ಲಾ ಮಾಡಿದರು. ಸ್ವಲ್ಪ ಸಮಯದ ನಂತರ ಯಾವುದೋ ಮಸೀದಿಯ ಮಿನಾರದಿಂದ ಫಜ್ರ್ ಅದಾನ್ನ ನಾದ ಕೇಳಿ ಬಂತು. ಆಗ ಈ ಸೇವಕ ಪುಟಿದೆದ್ದು ಬೇಗನೇ ವುಝೂ ನಿರ್ವಹಿಸಿ ನಮಾಝ್ಗೆ ಸಿದ್ದನಾದನು. ಈ ಸಂದರ್ಭದಲ್ಲಿ ವಿದ್ವಾಂಸರು ಸೇವಕನನ್ನು ಪ್ರೀತಿಯಿಂದ ಬಳಿಗೆ ಕರೆದು ಪಕ್ಕದಲ್ಲಿ ಕುಳ್ಳಿರಿಸಿ “ನಿನ್ನ ಕೆಲಸದ ಯಜಮಾನನಾದ ನಾನು, ನಿನ್ನನ್ನು ಹಲವು ಬಾರಿ ಕರೆದು ಎಬ್ಬಿಸಲು ಪ್ರಯತ್ನಿಸಿದೆ. ಆ ಚಳಿಯಿಂದಾಗಿರಬಹುದು ನೀನು ಮಾತ್ರ ಬರಲೇ ಇಲ್ಲ. ಆದರೆ ಶತಮಾನಗಳಿಗಿಂತ ಹಿಂದೆ ಅಂತ್ಯಪ್ರವಾದಿ ಮುಹಮ್ಮದ್(ಸ)ರ ಕಲ್ಪನೆಯನ್ನು ಅನುಸರಿಸಿ… ಯಾವುದೋ ಓರ್ವ ವೃದ್ದ ಎಲ್ಲಿಯೋ ಒಂದು ಕಗ್ಗತ್ತಲೆಯಲ್ಲಿ ಯಾವುದೋ ಒಂದು ಮಸೀದಿಯಲ್ಲಿ ಮೊಳಗಿಸಿದ ಅದಾನ್ ಕೇಳಿಸಿದ ತಕ್ಷಣ ನೀನು ಲಗುಬಗನೆ ಎದ್ದು ನಿಂತೆ. ಇದು ಪ್ರವಾದಿವರ್ಯರಿಗೆ(ಸ) ಮತ್ತು ನನಗಿರುವ ಅಂತರ. ಪ್ರವಾದಿವರ್ಯರ(ಸ) ಮಹತ್ವ, ಪ್ರಭಾವದ ಬಗ್ಗೆ ಈಗಲಾದರೂ ನೀನು ಅರ್ಥೈಸಬೇಕು. ನಿನ್ನಲ್ಲಿರುವ ಮೂರ್ಖ ನಿಲುವನ್ನು ತೊರೆಯಬೇಕು” ಎಂದರು.
ಪ್ರವಾದಿಮುಹಮ್ಮದ್(ಸ)ರನ್ನು ಚಾಚೂ ತಪ್ಪದೆ ಅನುಸರಿಸುವಂತೆ ಜಗತ್ತಿನಲ್ಲಿ ಯಾವುದೇ ಇತಿಹಾಸ ಪುರುಷನೂ ಅನುಸರಿಸಲ್ಪಟ್ಟಿಲ್ಲ. ಪ್ರವಾದಿವರ್ಯರನ್ನು ಪ್ರೀತಿಸುವಷ್ಟು ಅಗಾಧವಾದ ಪ್ರೀತಿಯನ್ನು ಜಗತ್ತಿನ ಬೇರೆ ಯಾವುದೇ ನಾಯಕನೂ ಗಳಿಸಿಲ್ಲ. ಹದೀಸ್ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಸಾಹಿತ್ಯಗಳೆಲ್ಲವೂ ಪ್ರವಾದಿಚರ್ಯೆಗೆ ವಿಶ್ವವು ನೀಡಿದ ಮಹತ್ವವನ್ನು ಸಾರುತ್ತದೆ. ಸಾವಿರಾರು ಹದೀಸ್ಗಳ ಮೂಲಕ ಪ್ರವಾದಿವರ್ಯರ ಬದುಕಿನ ಇತಿಹಾಸದ ಪೂರ್ಣ ಬೆಳಕಿನಲ್ಲಿ ಎಂದೆಂದಿಗೂ ಮಾನವರಿಗೆ ಪ್ರಯೋಜನಕಾರಿ ಆಗುವ ರೀತಿಯಲ್ಲಿ ಅದು ಶೋಭಿಸಿ ನಿಂತಿದೆ. ಇತಿಹಾಸದ ಪೂರ್ಣ ಬೆಳಕಿನಲ್ಲಿ ಶೋಭಿಸಿ ನಿಂತ ಪ್ರವಾದಿ ಚರ್ಯೆಯನ್ನು ನಿರ್ಲಕ್ಷಿಸಿ ಯಾವನಿಗೂ ಸತ್ಯವಿಶ್ವಾಸಿಯಾಗಲು ಸಾಧ್ಯವಿಲ್ಲ. ಪ್ರವಾದಿ ಚರಿತ್ರೆಯ ಬಲದಿಂದ ಪವಿತ್ರ ಕುರ್ಆನನ್ನು ವಿವರವಾಗಿ ಗ್ರಹಿಸಿಕೊಳ್ಳಬಹುದಾಗಿದೆ. ಕುರ್ಆನಿನ ಅಧಿಕೃತೆಯೇ ಪ್ರವಾದಿವರ್ಯರ ಸತ್ಯಸಂಧತೆಯಾಗಿದೆ.
ಪ್ರವಾದಿವರ್ಯರನ್ನು(ಸ) ನಿರ್ಲಕ್ಷಿಸಿ ಸ್ವರ್ಗಪ್ರಾಪ್ತಿ ಸಾಧ್ಯವಿಲ್ಲ. ಪ್ರವಾದಿಚರ್ಯೆಯು ಸತ್ಯವಿಶ್ವಾಸದ(ಈಮಾನ್), ಅನುಷ್ಟಾನದ(ಇಸ್ಲಾಮ್) ಅವಿಭಾಜ್ಯ ಘಟಕವಾಗಿದೆ. ಪ್ರವಾದಿವರ್ಯರ(ಸ) ಪ್ರವಾದಿತ್ವ ಮನಸಾ ವಾಚಾ ಕರ್ಮಣಾ ಅಂಗೀಕರಿಸಿ ಘೋಷಿಸಿದರೆ ಮಾತ್ರ ಸರ್ವ ಪ್ರಧಾನವಾದ ಶಹಾದತ್(ಸತ್ಗಯಸಾಕ್ಷ್ಯ) ಪೂರ್ಣಗೊಳ್ಳುತ್ತದೆ. ಪಂಚೇಂದ್ರಿಯಗಳಿಗೆ ಗೋಚರವಾಗದ; ಭಾವನೆ, ಬುದ್ದಿಗೂ ಮೀರಿದ ಪವಿತ್ರವಾದ ಅದೃಶ್ಯಲೋಕದ ವಿವರಗಳು ಸ್ಪಷ್ಟವಾಗಿ ನಮಗೆ ಪ್ರವಾದಿವರ್ಯರಿಂದ ದೊರೆಯುತ್ತದೆ. ಈ ರೀತಿ ದೊರೆತ ವಿವರಗಳು ಪರಮ ಸತ್ಯವಾದುದು. ಪ್ರವಾದಿಚರ್ಯೆ, ಪ್ರವಾದಿಯ ಇತಿಹಾಸವು ಹಿದಾಯತ್(ಸನ್ಮಾರ್ಗ)ನ ತೇಜಸ್ಸನ್ನು ಅವಲಂಭಿಸಿದೆ. ಅದಕ್ಕಾಗಿ ಪವಿತ್ರ ಕುರ್ ಆನಿನಲ್ಲಿ “ನಿಸ್ಸಂದೇಹವಾಗಿಯೂ ನೀವು ನೇರಮಾರ್ಗದ ಕಡೆಗೆ ಮಾರ್ಗದರ್ಶನ ಮಾಡಿಸುತ್ತಿರುವಿರಿ.” (ಅಶ್ಶೂರಾ: 52) ಎಂದು ಪ್ರಸ್ತಾಪಿಸಲಾಗಿದೆ.
ಪವಿತ್ರ ಕುರ್ಆನನ್ನು ಅಲ್ಲಹನು ಸಂರಕ್ಷಿಸಿ ನೆಲೆ ನಿಲ್ಲಿಸಿರುತ್ತಾನೆ. ಅದರಂತೆ ಪ್ರವಾದಿ ಚರ್ಯೆ ಮತ್ತು ಇತಿಹಾಸವನ್ನು ಲೋಕಾಂತ್ಯದ ವರೆಗಿನ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ದಾಖಲಿಸಿಡಲು ಅಲ್ಲಾಹನು ನೆರವಾಗಿದ್ದಾನೆ. ತಲೆಮಾರುಗಳಿಂದ ತಲೆ ತಲಾಂತರದವರೆಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ಅದನ್ನು ಮುಂದುವರಿಸಲಾಗಿದೆ.
ಪ್ರವಾದಿವರ್ಯರ(ಸ) ಮಾದರಿ ಬದುಕಿನ ಪ್ರತಿಯೊಂದು ಮಗ್ಗುಲನ್ನೂ ಉಪದೇಶಗಳನ್ನು ಸತ್ಯವಿಶ್ವಾಸಿಗಳು ಗೌರವಾದರದಿಂದ ಸ್ವೀಕರಿಸಿ ಅಳವಡಿಸಿ ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸಲು ಶಕ್ತಿ ಮೀರಿ ಪ್ರಯತ್ನಿಸಿದ ಮೊದಲ ತಲೆಮಾರುಗಳಿಗೆ ಸೇರಿದ ಐದು ಲಕ್ಷದ ವರೆಗಿನ ಜನರ ವಿವರಗಳು ಬಹಳ ಸೂಕ್ಷ್ಮವಾಗಿ ಪ್ರವಾದಿ ಚರ್ಯೆಯ ಸಂರಕ್ಷಣೆಯ ಸಲುವಾಗಿ ದಾಖಲುಗೊಳಿಸಲಾಗಿದೆ. ಸುನ್ನತ್ನ ಸತ್ಯಸಂಧತೆ, ಪ್ರಮಾಣಿಕತೆಯನ್ನು ಇದು ಸ್ಪಷ್ಟಪಡಿಸುತ್ತದೆ. ಪ್ರವಾದಿ ಚರ್ಯೆ ಮತ್ತು ಇತಿಹಾಸವನ್ನು ನಮ್ಮ ಪೂರ್ವಜರು ಇಸ್ಲಾಮಿನ ದ್ವಿತೀಯ ಪ್ರಮಾಣವಾಗಿ ಅಂಗೀಕರಿಸಿದ್ದರು.
ಸರ್ವ ವಿಗ್ರಹಗಳನ್ನು ನಿರ್ಮೂಲನೆಗೈದು ಎಲ್ಲವನ್ನು ನಖಶಿಖಾಂತ ಎದುರಿಸಿದ ಪ್ರವಾದಿವರ್ಯರು ತನ್ನನ್ನು ಮಿತಿಮೀರಿ ಹೊಗಳಿ ವಿಗ್ರಹೀಕರಣದವರೇಗೆ ತಲುಪಿಸುವುದರ ವಿರುದ್ದ ಎಚ್ಚರಿಕೆ ನೀಡಿದ್ದಾರೆ. “ನೀವು ನನ್ನನ್ನು ಮಿತಿ ಮೀರಿ ಹೊಗಳಬೇಡಿರಿ. ನಾನು ಅಲ್ಲಾಹನ ದಾಸ(ಅಬ್ದುಲ್ಲಾ), ಅಲ್ಲಾಹನ ಸಂದೇಶವಾಹಕ ಎಂದು ಹೇಳಿರಿ.” (ಪ್ರವಾದಿ ವಚನ). ಇಂದಿಗೂ ಜಗತ್ತಿನ ಮುಸ್ಲಿಮರು ಒಂದಾಗಿ ತಮ್ಮ ಸತ್ಯ ಸಾಕ್ಷ್ಯದ ವಚನದಲ್ಲಿ (ಕಲಿಮಶ್ಶಹಾದತ್) ಎರಡನೇಯ ಭಾಗದಲ್ಲಿ ಮುಹಮ್ಮದನ್ ಅಬ್ದುಹೂ ವರಸೂಲುಹೂ(ಮುಹಮ್ಮದರು ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೂ ಆಗಿದ್ದಾರೆ) ಎನ್ನುತ್ತಾರೆ.
ಕನ್ನಡಾನುವಾದ: ಅಬೂ ಸಫ್ವಾನ್