ಮಾದರಿ ಹಜ್ಜ್ ಯಾತ್ರಿಕ  ಅಮೀರ್ ಅಬ್ದುಲ್ ಖಾದಿರಿ ಅಲ್ ಜಝಾಇರಿ

0
abdel kader

ಮಾದರಿ ಹಜ್ಜ್ ಯಾತ್ರಿಕ ಅಮೀರ್ ಅಬ್ದುಲ್ ಖಾದಿರಿ ಅಲ್ ಜಝಾಇರಿ

ಲೇಖಕರು: ಅಬ್ದುಲ್ ಫಹೀದ್ ನದ್ವಿ

ಅಮೀರ್ ಅಬ್ದುಲ್ ಖಾದಿರ್ ಅಲ್ -ಜಝಾಇರಿ (ಹಿಜರಿ ಶಕೆ 1223-1300, ಕ್ರಿಸ್ತ ಶಕ 1808-1883) ರವರು ಅಲ್ಜೀರಿಯನ್ ಇತಿಹಾಸದಲ್ಲಿ ಮಹತ್ತರವಾದ ಸ್ಥಾನ ಪಡೆದ ಮಹಾನಾಯಕರಾಗಿದ್ದಾರೆ. ಅವರು ಹೋರಾಟಗಾರ ಮಾತ್ರವಾಗಿರಲಿಲ್ಲ. ವಿದ್ವಾಂಸ, ಸೂಫೀ ಚಿಂತಕ ಅಮೋಘ ಸೇನಾ ತಂತ್ರಜ್ಞ, ಶೂರ ನಾಯಕ ಹೀಗೆ ಹಲವು ಮಗ್ಗುಲುಗಳಲ್ಲಿ ಸುಪ್ರಸಿದ್ದ ವ್ಯಕ್ತಿತ್ವವಾಗಿದ್ದರು. ಹದಿನೆಂಟನೇಯ ಶತಮಾನದಲ್ಲಿ ಫ್ರೆಂಚ್ ವಸಾಹತು ಶಾಹಿಗಳ ವಿರುದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಅಲ್ಜೀರಿಯನ್ ಜನತೆಗೆ ನಾಯಕತ್ವ ನೀಡುವ ಮೂಲಕ ಅವರು ವಿಶ್ವದ ಗಮನ ಸೆಳೆಯುತ್ತಾರೆ. ಸಣ್ಣ ಪ್ರಾಯದಲ್ಲಿ‌, ಅಂದರೆ ಹದಿನೇಳರ ಹರೆಯದಲ್ಲಿಯೇ ಹಜ್ಜ್ ನಿರ್ವಹಿಸಿರುವುದು ಅವರ ಬದುಕಿನಲ್ಲಿ ಅತ್ಯಂತ ಮಹತ್ತರವಾದ ಬದಲಾವಣೆಗೆ ಕಾರಣವಾಗಿತ್ತು.

ನಮ್ಮ ಕಥಾ ನಾಯಕ ಅಬ್ದುಲ್ ಖಾದಿರ್ ರವರಿಗೆ ಹದಿನೇಳು ವರ್ಷ ಪ್ರಾಯವಾಗಿದ್ದಾಗ ಅವರ ತಂದೆ ಶೇಖ್ ಮುಹ್ಯದ್ದೀನ್ ಅಲ್ ಅಹ್ಸನಿಯವರ ಜೊತೆ ಹಜ್ಜ್ ಪ್ರಯಾಣಕ್ಕೆ ಹೊರಟರು. ಇದೊಂದು ಸಾಮಾನ್ಯ ಯಾತ್ರೆಯಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲದ ಸುದೀರ್ಘ ಪ್ರಯಾಣವು ಅವರ ಬುದ್ದಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಗಾಢ ಪ್ರಭಾವ ಬೀರಿತು. ಇಸ್ಲಾಮೀ ಜಗತ್ತಿನ ಬಹುದೊಡ್ಡ ಭಾಗವನ್ನು ಸಂಚರಿಸಿದ ಈ ಪ್ರಯಾಣವು ಅವರ ಚಿಂತನೆಯನ್ನು ಇನ್ನಷ್ಟು ವಿಶಾಲವಾಗಿಸಿತು.

ಅವರು ಸಾಗಿ ಹೋದ ಪ್ರದೇಶಗಳು:
ಉತ್ತರ ಆಫ್ರಿಕಾ: ನಾಡಿನ ಆಗುಹೋಗುಗಳ ಜ್ಞಾನದ ಪ್ರಥಮ ಹೆಜ್ಜೆಯ ಆರಂಭ ಉತ್ತರ ಆಫ್ರಿಕಾದ ದೇಶಗಳಾದ ಟ್ಯುನೀಶಿಯಾ, ಲಿಬಿಯಾ, (ಬರ್ಖಾ, ಟ್ರಪೋಲಿ), ಮುಂತಾದೆಡೆಯಾಗಿತ್ತು. ಈ ಪ್ರದೇಶಗಳಲ್ಲಿ ವಿವಿಧ ವಿದ್ವಾಂಸರನ್ನು ಭೇಟಿಯಾಗಿ ಅವರೊಂದಿಗೆ ಆಳವಾಗಿ ಚರ್ಚಿಸಿ ಅವರ ವ್ಯತ್ಯಸ್ಥವಾದ ನಿಲುವು ಮತ್ತು ಚಿಂತನೆಗಳ ಕುರಿತು ಅರ್ಥ ಮಾಡಿಕೊಂಡರು. ಅಂದಿನ ಸಾಮಾಜಿಕ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಅರಿಯಲು ಆ ಮೂಲಕ ಅವರಿಗೆ ಸಾಧ್ಯ ಆಯಿತು. ಈ ಯಾತ್ರೆಯಲ್ಲಿ ಇಸ್ಲಾಮೀ ಜ್ಞಾನದ ವೈವಿಧ್ಯತೆ, ವಿವಿಧ ಪ್ರದೇಶಗಳ ಮುಸ್ಲಿಮ್ ಸಮುದಾಯದ ಸ್ಥಿತಿಗತಿಗಳನ್ನು ನೇರವಾಗಿ ಕಂಡು ಅನುಭವಿಸಿದರು.

ಹಿಜಾಝ್ ಯಾತ್ರೆ: ಆಫ್ರೀಕಾ ನಾಡುಗಳಿಂದ ಈಜಿಫ್ಟ್‌ ಮೂಲಕವಾಗಿ ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾದ ಕಡೆಗೆ, ನಂತರ ಮಸ್ಜಿದುನ್ನಬವಿಯ ಸಂದರ್ಶನಕ್ಕಾಗಿ ಮದೀನಾದತ್ತ ಪ್ರಯಾಣಿಸಿದರು. ಹದಿ ಹರೆಯದ ಅಬ್ದುಲ್ ಖಾದಿರಿಯವರಿಗೆ ಇದು ವಿಶೇಷವಾದ ಆಧ್ಯಾತ್ಮಿಕವಾದ ಅನುಭವ ನೀಡಿತ್ತು.  ಇಸ್ಲಾಮಿನ ತಳಹದಿಯ ತತ್ವಾದರ್ಶಗಳ ಕುರಿತ ಅಧ್ಯಯನದಿಂದ ಅವರ ಜ್ಞಾನ ವರ್ಧಿಸಿ ಇನ್ನಷ್ಟು ಆಳಕ್ಕಿಳಿಯಿತು. ಕಅಬಾ ಭವನ, ಪ್ರವಾದಿಮುಹಮ್ಮದ್(ಸ)ರವರ ಮಸೀದಿಯು ಖಾದಿರಿಯವರ ವಿಶ್ವಾಸವನ್ನೂ, ದೈವಭಕ್ತಿಯನ್ನೂ ಬಲಪಡಿಸಿತು.

ಈ ಹಜ್ಜ್ ಯಾತ್ರೆಯು ಓರ್ವ ಸತ್ಯವಿಶ್ವಾಸಿಗೆ ಸಂಬಂಧಿಸಿ, ಲೌಕಿಕ ಸಂಬಂಧಗಳಿಂದ ಮುಕ್ತಿ ಹೊಂದಿ ಅಲ್ಲಾಹನ ಕಡೆಗೆ ಸಂಪೂರ್ಣವಾಗಿ ಅರ್ಪಿಸುವ ಒಂದು ಆಧ್ಯಾತ್ಮಿಕ ಶುದ್ದೀಕರಣ ಪ್ರಕ್ರಿಯೆ. ಹದಿ ಹರೆಯದ ಚಿಗುರು ಮೀಸೆಯ ಯುವಕನಾಗಿದ್ದ ಅಬ್ದುಲ್ ಖಾದಿರ್ ರವರ ವ್ಯಕ್ತಿತ್ವದಲ್ಲಿ ಆಧ್ಯಾತ್ಮಿಕತೆಯು ತುಂಬಿ ತುಳುಕಿತು.

ಮಧ್ಯ ಪ್ರಾಚ್ಯ ದೇಶಗಳ ನಾಗರಿಕತೆಯು ಕಲಿಸಿದ ಪಾಠಗಳು:
ಹಜ್ಜ್ ಕರ್ಮಗಳ ನಂತರ ಅವರ ಪ್ರಯಾಣವು ಸಿರಿಯಾದತ್ತ(ಲೆವಂಟ್) ಮುಂದುವರಿಸಿ ಇಸ್ಲಾಮೀ ಅಧ್ಯಯನ ಮತ್ತು ಸಂಸ್ಕೃತಿಯ ಐತಿಹಾಸಿಕ ಕೇಂದ್ರವಾದ ಬಾಗ್ದಾದ್ ನತ್ತ ಸಂಚರಿಸಿದರು.  ಈ ಪ್ರಯಾಣವು ವಿದ್ಯಾರ್ಥಿಯಾಗಿದ್ದ ಅಬ್ದುಲ್ ಕಾದಿರ್ ಜ್ಞಾನವನ್ನು ಸಂಪನ್ನಗೊಳಿಸಿತು. ಇಸ್ಲಾಮೀ ನಾಗರಿಕತೆಯ ವಿವಿಧ ಮಗ್ಗುಲುಗಳು, ಅದರ ಇತಿಹಾಸ, ಕಲೆ, ಸಾಮಾಜಿಕ ವ್ಯವಸ್ಥೆ ಮುಂತಾದವುಗಳ ಪರಿಚಯವಾಯಿತು. ಇದು ಅವರ ನಾಯಕತ್ವಕ್ಕೆ ಅಗತ್ಯವಾದ ಹೃದಯ ವೈಶಾಲ್ಯತೆಯನ್ನು ನೀಡಿತು.

ನಾಯಕತ್ವ ರೂಪಿಸುವಲ್ಲಿ ಹಜ್ಜ್ ಯಾತ್ರೆಯ ಪ್ರಭಾವ:
ಈ ಯಾತ್ರೆಯು ಅವರಲ್ಲಿ ಬಹು ಮುಖ್ಯವಾದ ಬದಲಾವಣೆಯನ್ನೇ ಮಾಡಿತು.
1. ಧಾರ್ಮಿಕ ಜ್ಞಾನ: 14ನೇ ವರ್ಷದಲ್ಲಿಯೇ ಕುರ್‌ಆನ್ ಕಂಠಪಾಟ ಮಾಡಿದ್ದ ಅಬ್ದುಲ್ ಖಾದಿರ್‌ರವರು ಯಾತ್ರೆಯಾದ್ಯಂತ ಸುಪ್ರಸಿದ್ದ ವಿದ್ವಾಂಸರಿಂದ ಜ್ಞಾನ ಆರ್ಜಿಸಲು, ಆಳವಾದ ಧಾರ್ಮಿಕ ಚರ್ಚೆಗಳಲ್ಲಿ ಭಾಗಿಯಾಗಲು, ಇಸ್ಲಾಮಿನ ಕಾನೂನು ಸಂಹಿತೆ(ಫಿಕ್ಹ್), ಇಲ್ಮುಲ್ ಕಲಾಂ(ವೈದ್ಯಕೀಯ ಶಾಸ್ತ್ರ) ಸೂಫೀಝಂ ಮುಂತಾದವುಗಳ ಬಗ್ಗೆ ಕಲಿಯಲು ಅವಕಾಶ ದೊರೆಯಿತು. ಇದು ಅವರಲ್ಲಿನ ಧಾರ್ಮಿಕ ಶಿಕ್ಷಣದ ಅಡಿಪಾಯವನ್ನು ಭದ್ರಗೊಳಿಸಿತು. ಇಸ್ಲಾಮೀ ತತ್ವಾದರ್ಶಗಳಲ್ಲಿ ಗಟ್ಟಿಯಾಗಿ ನೆಲೆ ನಿಂತ ಓರ್ವ ನಾಯಕನಿಗೆ ಮಾತ್ರವೇ ತನ್ನ ಜನತೆಯನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂಬುದನ್ನು ಅವರು ಅರಿತಿದ್ದರು.
2. ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ: ವಿವಿಧ ಪ್ರದೇಶಗಳಲ್ಲಿನ ಅವರ ಪ್ರಯಾಣವು ಅಲ್ಲಿನ ರಾಜಕೀಯ ಸ್ಥಿತಿಗತಿ‌, ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸವಾಲುಗಳು, ಅಟೋಮನ್ ಆಡಳಿತದ ಯುರೋಪ್ ಪ್ರಭಾವ ಮತ್ತು ಅದರ ಫಲಿತಾಂಶದ ಬಗ್ಗೆ ನೇರವಾಗಿ ಕಂಡು ಅರಿಯಲು ಅವಕಾಶ ನೀಡಿತು. ತಾನು ಬೆಳೆದಿರುವ ಅಲ್ಜೀರಿಯಾ ಗಡಿಯಿಂದ ಹೊರಗಡೆಗೆ ಅವರ ನಿಲುವು ವಿಸ್ತರಿಸಿ ವಿಶಾಲವಾದ ಮುಸ್ಲಿಮ್ ಸಮುದಾಯದ ಜವಾಬ್ದಾರಿಕೆಯ ಪ್ರಜ್ಞೆಯನ್ನು ಅವರಲ್ಲಿ ಬೆಳೆಸಿತು. ಜಗತ್ತಿನ ವಸಾಹತುಶಾಹಿ ಶಕ್ತಿಗಳು ಸೃಷ್ಟಿಸುವ ಸಮಸ್ಯೆಗಳ ಕುರಿತು ಬಹಳ ಆಳವಾಗಿ ಅಧ್ಯಯನ ನಡೆಸಲು ಇದು ಸಹಾಯಕವಾಯಿತು.
3. ಪ್ರಮುಖ ನಾಯಕರ ಜೊತೆ ಭೇಟಿ: ಹಜ್ಜ್ ಪ್ರಯಾಣದ ನಡುವೆ ರಶ್ಯನ್ ವಸಾಹತುಶಾಹಿತ್ವದ ವಿರುದ್ದ ಹೋರಾಡಿದ ಮಹಾ ನಾಯಕ ಇಮಾಮ್ ಶಾಮಿಲಿರವರನ್ನು ಅವರು ಭೇಟಿಯಾದರು.   ಸಮಾನ ಸಿದ್ದಾಂತದಡಿಯಲ್ಲಿರುವ ಓರ್ವ ನಾಯಕನನ್ನು ಬೇಟಿಯಾದದ್ದು ಸಾರ್ವಜನಿಕ ಅಭ್ಯುದಯದ ಪ್ರಜ್ಞೆಯನ್ನು ಅವರಲ್ಲಿ ಬೆಳೆಸಿ, ಸುದೃಡತೆಯ ಭಾವ ವರ್ಧಿಸುವಂತೆ ಮಾಡಿತು. ಇಸ್ಲಾಮೀ ಜಗತ್ತಿನಲ್ಲಿ ಹೇಗೆ ಸಂಘಟಿಸಬಹುದು ಎಂಬ ಪ್ರಾಯೋಗಿಕವಾದ ಶಿಕ್ಷಣ ದೊರೆಯಿತು.
4. ವೈಯುಕ್ತಿಕವಾದ ಬೆಳವಣಿಗೆ: ಪ್ರಯಾಣದ ಮಧ್ಯೆ ಕಠಿಣ ಪರಿಶ್ರಮದ ಗುಣ, ಆಳವಾದ ಧಾರ್ಮಿಕ ಪ್ರಜ್ಞೆ, ಭೌದ್ದಿಕವಾದ ಅನುಭವಗಳ ಜೊತೆಗೆ; ಯಾತ್ರೆಯು ಅವರನ್ನು ವೈಯುಕ್ತಿಕವಾದ ಸುಧಾರಣೆ, ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿತು. ಸಹನೆ, ಸ್ಥೈರ್ಯ, ಸ್ಥಿರತೆ ಅಲ್ಲಾಹನ ಮೇಲಿನ ಭರವಸೆ ಮುಂತಾದ ಅನೇಕ ಇಸ್ಲಾಮೀ ಗುಣಗಳು ಅವರಲ್ಲಿ ಬಲವಾಗಿ ಬೇರೂರಿತು.

ಈ ಮಹತ್ತರವಾದ ಪರಿವರ್ತನೆಯ ಹಜ್ಜ್ ಯಾತ್ರೆಯಿಂದ ಹಿಂದಿರುಗುವ ಕೆಲವೇ ವರ್ಷಗಳ ಬಳಿಕ ಸ್ಪಷ್ಟವಾಗಿ ಹೇಳುವುದಾದರೆ ಕ್ರಿಸ್ತ ಶಕ 1830ರಲ್ಲಿ ಫ್ರಾನ್ಸ್, ಅಲ್ಜೀರಿಯಾದ ಮೇಲೆ ದಾಳಿ ಮಾಡಿತು. ಹಜ್ಜ್ ಯಾತ್ರೆಯಲ್ಲಿ ಗಳಿಸಿದ ಅನುಭವ ಸಂಪತ್ತು ಬೆಲೆ ಕಲ್ಪಿಸಲಾರದಷ್ಟು ಮಹತ್ವದ್ದು ಎಂಬುದು ನಂತರ ಬಹಿರಂಗವಾಯಿತು.  ಕ್ರಿಸ್ತ ಶಕ 1832 ರಲ್ಲಿ ತಂದೆಯ ಬೆಂಬಲದೊಂದಿಗೆ ಫ್ರೆಂಚ್ ವಸಾಹತು ಶಾಹಿಗಳ ವಿರುದ್ದ ಅಲ್ಜೀರಿಯನ್ನರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣೀ ಹೋರಾಟಗಾರರಾಗಿ ಅಬ್ದುಲ್ ಕಾದಿರ್ ರವರು ಬೆಳೆದು ಬಂದರು.  ಅವರಲ್ಲಿರುವ ಅಗಾಧವಾದ ಜ್ಞಾನ, ವಿವಿಧ ಸಂಸ್ಕೃತಿಗಳ ಬಗೆಗಿನ ಅರಿವು, ನಿಷ್ಕಳಂಕ ವಿಶ್ವಾಸವು ಅಲ್ಜೀರಿಯನ್ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಡೆದ  ತೀವ್ರ ಹೋರಾಟದಲ್ಲಿ ಅವರನ್ನು ಸಮರ್ಥ ನಾಯಕತ್ವ ವಹಿಸುವವರನ್ನಾಗಿ ರೂಪಿಸಿತು.

ಸುದೀರ್ಘ ಹೋರಾಟದ ಕೊನೆಯಲ್ಲಿ‌, 1847ರಲ್ಲಿ ಅವರ ಮುಂದೆ ಶತ್ರುಗಳು ಮಂಡಿಯೂರಬೇಕಾಯಿತು. ನಿರಂತರ ಹೋರಾಟದಿಂದ ಬಂಧನಕ್ಕೊಳಗಾಗಿ ಬಿಡುಗಡೆಯ ಬಳಿಕ ಸಿರಿಯಾದ ಡಮಾಸ್ಕಸ್ ನಲ್ಲಿ ಜೀವಿಸಿ, ತನ್ನ 76 ನೇಯ ವರ್ಷದಲ್ಲಿ ಇಹಲೋಕ ತ್ಯಜಿಸಿದರು. ಅಬ್ದುಲ್ ಕಾದಿರಿ ಜಝಾಇರಿ ರವರ ಬದುಕು – ಒಂದು ಹಜ್ಜ್ ಪ್ರಯಾಣವು ಓರ್ವನ ವ್ಯಕ್ತಿತ್ವವನ್ನು ಆಧ್ಯಾತ್ಮಿಕವಾಗಿಯೂ, ಬೌದ್ದಿಕವಾಗಿಯೂ, ರಾಜಕೀಯವಾಗಿಯೂ ಹೇಗೆ ಪಕ್ವ ಮಾಡುತ್ತದೆ ಮತ್ತು ಒಂದು ಜನತೆಯ ನಾಯಕನಾಗಿ ಹೇಗೆ ಮಾರ್ಪಡಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಕನ್ನಡಾನುವಾದ: ಅಬೂಸಫ್ವಾನ್
ಕೃಪೆ ಇಸ್ಲಾಮ್ ಆನ್ ಲೈವ್

Leave a Reply