ಇಸ್ಲಾಮೀ ದೃಷ್ಟಿಕೋನದಲ್ಲಿ ಮನುಷ್ಯ ಮತ್ತು ನ್ಯಾಯ

0
justice

ಲೇಖಕರು: ಶೇಖ್ ಮುಹಮ್ಮದ್ ಕಾರಕ್ಕುನ್ನು

ಇಸ್ಲಾಮೀ ದೃಷ್ಟಿಕೋನದಲ್ಲಿ ಮನುಷ್ಯ ಮೂರು ಅಂಶಗಳಿಂದ ಕೂಡಿದ್ದಾನೆ. ಅವನಿಗೆ ದೇಹ, ಮನಸ್ಸು ಮತ್ತು ಆತ್ಮ ಇದೆ. ದೇಹ ಮತ್ತು ದೈಹಿಕ ಅವಶ್ಯಕತೆ ಬಗ್ಗೆ ನೋಡಿದರೆ ಮಾನವ ಹಾಗೂ ಇತರ ಜೀವಿಗಳ ನಡುವೆ ದೊಡ್ಡ ವ್ಯತ್ಯಾಸವೇನೂ ಇಲ್ಲ. ತಿನ್ನುವುದು, ಕುಡಿಯುವುದು, ಭೋಗ ವಿಲಾಸದಲ್ಲಿ ಆನಂದಿಸುವುದು ಇದಲ್ಲವೇ ನಮ್ಮ ದೇಹದ ಬಯಕೆ. ಈ ಸಾಮರ್ಥ್ಯ ಮನುಷ್ಯನನ್ನು ಬಿಟ್ಟು ಇತರ ಜೀವಿಗಳಿಗೆ ಹುಟ್ಟುವಾಗಲೇ ಸಿಕ್ಕಿದೆ. ನವಜಾತ ಕರು ತನ್ನ ತಾಯಿಯ ಕೆಚ್ಚಲಿನಿಂದ ಸ್ವತಃ ಹಾಲು ಹೀರುತ್ತದೆ. ಮೀನಿನ ಮರಿ ಈಜಲು ಆರಂಭಿಸುತ್ತದೆ.

ಮೊಟ್ಟೆಯಿಂದ ಹೊರಬರುವ ಕೋಳಿಮರಿ ಬೆಣಚುಕಲ್ಲು ಮತ್ತು ಅಕ್ಕಿಯನ್ನು ಗುರುತಿಸಿ ಅಕ್ಕಿಯನ್ನು ತಿನ್ನುತ್ತದೆ. ಆದರೆ ಮನುಷ್ಯರಿಗೆ ಇತರರ ಸಹಕಾರ ಇಲ್ಲದೆ ಸ್ವಲ್ಪ ಸಮಯ ಕೂಡ ಬದುಕಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಮನುಷ್ಯನಿಗಿಂತ ಬಲಶಾಲಿಯಾದ ಎಷ್ಟೋ ಜೀವಿಗಳಿವೆ. ಆದರೆ ಮನುಷ್ಯನು ಬೆಳೆದಂತೆ ಉಳಿದೆಲ್ಲವನ್ನೂ ಅಧೀನಗೊಳಿಸುವ ಪ್ರತ್ಯೇಕ ಸಾಮರ್ಥ್ಯವನ್ನು ಹೊಂದುತ್ತಾನೆ. ತನಗಿಂತ ಎಷ್ಟೋ ಶಕ್ತಿಶಾಲಿಯಾದ ಆನೆಯನ್ನು ತನ್ನನ್ನು ಅನುಸರಿಸುವಂತೆ ಮಾಡುತ್ತಾನೆ. ಮನುಷ್ಯನಿಗೆ ಈ ಸಾಮರ್ಥ್ಯ ಲಭಿಸುವುದು ಆತನ ಬುದ್ಧಿಶಕ್ತಿಯ ಕಾರಣದಿಂದಾಗಿದೆ. ಅದು ಅವನ ಮಿತಿಯಿಲ್ಲದ ಬೆಳವಣಿಗೆ, ಪ್ರಗತಿ ಮತ್ತು ಅಭಿವೃದ್ಧಿಗೆ ದಾರಿಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಮನುಷ್ಯನು ಸಾಧಿಸಿರುವ ಎಲ್ಲಾ ಅಭಿವೃದ್ದಿ ಮತ್ತು ಸಾಧನೆಗಳು ಅವನ ಬುದ್ಧಿಶಕ್ತಿಯ ಸಾಮರ್ಥ್ಯದಿಂದಾಗಿದೆ.

ಅದೇ ರೀತಿ ಮನುಷ್ಯ ಇತರ ಜೀವಿಗಳಿಗಿಂತ ಭಿನ್ನವಾಗಿ ತನ್ನ ದೇಹೆಚ್ಛೆಗಳನ್ನು ಹಾಗೂ ಮೋಹಗಳನ್ನು ನಿಯಂತ್ರಿಸಬಹುದು. ಮನುಷ್ಯನ ಆಧ್ಯಾತ್ಮಿಕ ಅಂಶಗಳು ಇದಕ್ಕೆಲ್ಲಾ ಮನುಷ್ಯನಿಗೆ ಸಹಾಯ ಮಾಡುತ್ತದೆ. ಮನುಷ್ಯನಿಗೆ ಚಿಂತಿಸಲು, ಕಲಿಯಲು, ಅರ್ಥಮಾಡಿಕೊಳ್ಳಲು ಮತ್ತು ಗ್ರಹಿಸಲು ಸಾಧ್ಯವಾಗುವಂತೆಯೇ ಹಾಡಲು, ಭಾಷಣ ಮಾಡಲು, ಕಥೆ–ಕವನಗಳನ್ನು ಬರೆಯಲು, ಚಿತ್ರ ಬಿಡಿಸಲು ಹಾಗೂ ಕೆತ್ತನೆ ಮಾಡಿ ಶಿಲ್ಪ ನಿರ್ಮಿಸಲು ಕೂಡ ಸಾಧ್ಯವಾಗುತ್ತದೆ. ಇಂತಹ ಕಲೆ ಮತ್ತು ಸಾಹಿತ್ಯಕ್ಕೆ ದಾರಿಮಾಡಿಕೊಡುವುದು ಮಾನವನಿಗೆ ಅವನ ಸೃಜನಶೀಲತೆಯಾಗಿದೆ. ಇದು ಅವನಲ್ಲಿರುವ ಆಧ್ಯಾತ್ಮಿಕತೆಯ ಪರಿಪೂರ್ಣತೆಯಾಗಿದೆ.

ಮನುಷ್ಯನನ್ನು ಇತರ ಜೀವಿಗಳಿಂದ ಪ್ರತೇಕಗೊಳಿಸುವುದು ಆತನ ಬುದ್ಧಿಯ ಮೂಲಕೇಂದ್ರವಾದ ಮನಸ್ಸು ಮತ್ತು ಆತ್ಮವಾಗಿದೆ. ಆದ್ದರಿಂದ ನಾಸ್ತಿಕತೆಯಲ್ಲಿ ಮನುಷ್ಯನು ರೋಮ ಉದುರುವ, ಬೆನ್ನು ಮೂಳೆಯು ನೇರವಾಗುವ, ದವಡೆ ಬೆಳೆಯುವ ಹಾಗೂ ಎರಡು ಕಾಲಿನಲ್ಲಿ ಚಲಿಸುವ ಪ್ರಾಣಿಯಾಗಿದ್ದಾನೆ. ಆದರೆ ಇಸ್ಲಾಮಿನಲ್ಲಿ ಮನುಷ್ಯನು ಇತರ ಜೀವಿಗಳಿಗಿಂತ ಭಿನ್ನವಾದ ವಿಶೇಷ ವೈಶಿಷ್ಟ್ಯ ಹೊಂದಿದ ಸೃಷ್ಟಿಯಾಗಿದ್ದಾನೆ. ಭೂಮಿಯ ಜೀವಿಗಳಲ್ಲಿ ಮನುಷ್ಯನು ಅತ್ಯಂತ ಶ್ರೇಷ್ಠನು ಮತ್ತು ಗೌರವಾನ್ವಿತನಾಗಿದ್ದಾನೆ. ಅಲ್ಲಾಹನು ಕುರ್‌ಆನಿನಲ್ಲಿ ಹೀಗೆ ಹೇಳುತ್ತಾನೆ:

“ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ, ಜಲಗಳಲ್ಲಿ ಯಾನಗಳನ್ನು ದಯ ಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.” (17-70)

ಆಸೆಗಳನ್ನು ಈಡೇರಿಸುವುದನ್ನು ಖಾತರಿಪಡಿಸುವ ವಿಶ್ವಾಸ ದರ್ಶನ:

ನಾಸ್ತಿಕತೆಯು ಮನುಷ್ಯನಿಗೆ ಮಿತಿಗಳನ್ನು ನಿರ್ಮಿಸುತ್ತದೆ. ಮನುಷ್ಯನು ಯಾವಾಗಲೂ ಸಂತೋಷ, ಸೌಂದರ್ಯ ಮತ್ತು ಸುಖ-ಸೌಲಭ್ಯಗಳಲ್ಲಿ ಪರಿಪೂರ್ಣತೆ ಹೊಂದಲು ಬಯಸುತ್ತಾನೆ. ಚಿರಂಜೀವಿಯಾಗಿ ಜೀವಿಸಲು ಅವನು ಹಂಬಲಿಸುತ್ತಾನೆ. ನಾಸ್ತಿಕತೆಯು ಇದೆಲ್ಲವೂ ಅಸಾಧ್ಯವೆಂದು ಸಾರುತ್ತದೆ. ಮರಣವು ಜೀವನದ ಅಂತ್ಯವೆಂದು ಹೇಳುತ್ತದೆ. ಈ ಲೋಕದಲ್ಲಿ ನಮಗೆ ಲಭಿಸಿದ್ದಕ್ಕಿಂತ ಹೆಚ್ಚಾಗಿ ಏನೂ ಸಿಗಲಿಕ್ಕಿಲ್ಲ ಎಂದು ಭರವಸೆ ನೀಡುತ್ತದೆ. ಅನಾರೋಗ್ಯ, ನೋವು, ವೃದ್ಧಾಪ್ಯ ದೌರ್ಬಲ್ಯಗಳು ಹಾಗೂ ಇತರ ಸಂಕಷ್ಟಗಳನ್ನು ಅನುಭವಿಸಿ ಸತ್ತು ಮಣ್ಣಾಗುವುದು ಎನ್ನುವುದನ್ನು ಮನುಷ್ಯನೊಂದಿಗೆ ನಾಸ್ತಿಕತೆ ಒತ್ತಿ ಹೇಳುತ್ತದೆ.

ಆದರೆ, ಇಸ್ಲಾಮ್‌ ಮನುಷ್ಯನೊಂದಿಗೆ ಹೇಳುವುದು: ಜೀವನವೆಂಬುದು ಮರಣದೊಂದಿಗೆ ಕೊನೆಗೊಳ್ಳುವುದಲ್ಲ. ಅದು ವಿರಾಮ ಇಲ್ಲದೇ ಮುಂದುವರೆಯುತ್ತದೆ. ಭೂಮಿಯಲ್ಲಿ ಮನಸ್ಸು ತೀರ್ಮಾನ ತೆಗೆಯುತ್ತದೆ ಮತ್ತು ದೇಹ ಅದನ್ನು ಕಾರ್ಯಗತಗೊಳಿಸುತ್ತದೆ. ಅದರ ಒಳಿತು ಕೆಡುಕುಗಳು, ಲೋಪ ದೋಷಗಳು ಆತ್ಮದಲ್ಲಿ ಸಂಗ್ರಹವಾಗುತ್ತದೆ. ಮರಣದ ಬಳಿಕ ಆತ್ಮವು ಅದರಲ್ಲಿ ಸಂಗ್ರಹಿಸಲ್ಪಟ್ಟ ಸಂಪೂರ್ಣ ಕರ್ಮಗಳ ಅನುಸಾರವಾಗಿ ಪ್ರತಿಫಲ ಮತ್ತು ಶಿಕ್ಷೆಯನ್ನು ಪಡೆಯುತ್ತದೆ. ನಂತರ ಒಬ್ಬ ವ್ಯಕ್ತಿಯು ತನ್ನ ಸಂಗ್ರಹಿತ ಕರ್ಮಗಳಿಗೆ ಅನುಸಾರವಾಗಿ ದೇಹದ ಪ್ರಕೃತಿಯೊಂದಿಗೆ ಪುನರುತ್ಥಾನಗೊಳಿಸಲ್ಪಡುತ್ತಾನೆ.

ಇಲ್ಲಿ ದೇವನ ಆಜ್ಞೆಗಳನ್ನು ಪಾಲಿಸಿ ಪವಿತ್ರ ಜೀವನವನ್ನು ನಡೆಸುವವರಿಗೆ ಅವರು ಬಯಸಿದ್ದೆಲ್ಲವೂ ಲಭಿಸುವ ಸ್ವರ್ಗವನ್ನು ನೀಡುತ್ತೇನೆಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ. ದುಃಖ-ದುಮ್ಮಾನಗಳಿಲ್ಲದ, ಬೇಸರ- ಸಂಕಷ್ಟಗಳಿಲ್ಲದ, ಅನಾರೋಗ್ಯ, ವೃದ್ಧಾಪ್ಯ ಇಲ್ಲದ, ಮರಣವಿಲ್ಲದ ಶಾಶ್ವತ ಯೌವ್ವನದೊಂದಿಗೆ ತೃಪ್ತಿಕರವಾದ ಜೀವನದ ಭರವಸೆ ನೀಡುತ್ತಾನೆ. ಅಲ್ಲಿ ನೀವು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನೀವು ಆಗ್ರಹಿಸಿದ ಪ್ರತಿಯೊಂದು ವಸ್ತುವೂ ನಿಮ್ಮದಾಗುವುದು. ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವವನ ಕಡೆಯಿಂದ ನಿಮಗಿರುವ ಆತಿಥ್ಯವಿದು.” (ಪವಿತ್ರ ಕುರ್ ಆನ್41:31,32)

ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶಗೊಳಿಸುವನು. ಸದಾ ನೆಲೆಸುವಂತಹ ಸ್ವರ್ಗಗಳಲ್ಲಿ ಅತ್ಯುತ್ತಮ ಭವನಗಳನ್ನು ನಿಮಗೆ ದಯಪಾಲಿಸುವನು. ಇದೇ ಮಹಾ ಯಶಸ್ಸು” (ಪವಿತ್ರ ಕುರ್ ಆನ್:61-12) ಹೀಗೆ ಇಸ್ಲಾಮ್‌ ಮನುಷ್ಯನಿಗೆ ಪರಿಪೂರ್ಣತೆಯ ಭರವಸೆ ನೀಡುತ್ತದೆ. ಬಯಸಿದ್ದೆಲ್ಲವೂ ಸಿಗುವ ಒಂದು ಲೋಕದ ಬಗ್ಗೆ ವಾಗ್ದಾನ ನೀಡುತ್ತದೆ.

ನ್ಯಾಯದ ಪ್ರಜ್ಞೆಯನ್ನು ತೃಪ್ತಿಪಡಿಸುವ ದರ್ಶನ:

ಅಕ್ರಮಿಗಳು ಎಂದಿಗೂ ಎಲ್ಲರಿಗೂ ನ್ಯಾಯ ಸಿಗಬೇಕೆಂದು ಬಯಸುವುದಿಲ್ಲ. ಆದರೆ ಅಕ್ರಮಿಗಳನ್ನು ಹೊರತುಪಡಿಸಿ ಉಳಿದೆಲ್ಲ ಮನುಷ್ಯರು ಕೂಡ ನ್ಯಾಯ ಸಿಗಬೇಕೆಂದು ಬಯಸುತ್ತಾರೆ. ಈ ಕಾರಣದಿಂದಾಗಿದೆಯಲ್ಲವೇ ಎಲ್ಲಾ ದೇಶಗಳಲ್ಲಿ ಕಾನೂನುಗಳು, ಕಾನೂನು ಜಾರಿ ಮಾಡಿಸುವ ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಅಸ್ತಿತ್ವದಲ್ಲಿರುವುದು. ನಾಸ್ತಿಕರು ಈ ಎರಡು ಗುಂಪಿನಲ್ಲಿ ಯಾವ ಗುಂಪಿನಲ್ಲಿ ಸೇರಬೇಕೆಂಬುದರ ಬಗ್ಗೆ ಅವರೇ ಸ್ವತಃ ತೀರ್ಮಾನ ತೆಗೆದುಕೊಳ್ಳಬೇಕು.

ಆದರೆ, ನಿಖರವಾದ ನ್ಯಾಯ ಜಾರಿಗೆ ತರಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಕೊಂದರೆ ನ್ಯಾಯಾಲಯಕ್ಕೆ ಹೆಚ್ಚೆಂದರೆ ನನ್ನನ್ನು ಕೊಂದ ಕೊಲೆಗಾರನನ್ನು ಕೊಲ್ಲಬಹುದು. ಆ ರೀತಿ ಕಿಸಾಸ್(ಪ್ರತಿಕಾರ) ಜಾರಿಗೊಳಿಸಿದರೆ ನನ್ನ ಜೀವನ ಸಂಗಾತಿಗೆ ಸಂಗಾತಿ, ಮಕ್ಕಳಿಗೆ ತಂದೆ, ಬಂಧು ಬಳಗದವರಿಗೆ ಮತ್ತು ಸ್ನೇಹಿತರಿಗೆ ತಮ್ಮ ಪ್ರೀತಿಯ ಕುಟುಂಬ ಸದಸ್ಯ ಅಥವಾ ಸ್ನೇಹಿತನನ್ನು ಮರಳಿ ಪಡೆಯಲು ಎಂದಿಗೂ ಸಾಧ್ಯವಿಲ್ಲ.

ಸಾವಿರಾರು ಜನರನ್ನು ಕೊಲ್ಲುವ ಅಕ್ರಮಿಗೆ ಅರ್ಹವಾದ ಶಿಕ್ಷೆ ಜಾರಿಗೆ ತರಲು ಯಾರಿಂದಲೂ ಸಾಧ್ಯವಿಲ್ಲ, ಆಹಾರಗಳಲ್ಲಿ ಕಲಬೆರಕೆ ಮಾಡಿ ಭ್ರಷ್ಟಾಚಾರ ನಡೆಸಿ ತಮ್ಮ ಪರಿಶ್ರಮದ ಫಲವನ್ನು ಕದಿಯುವ ದರೋಡೆಕೋರರು ಮತ್ತು ಶೋಷಕರು ಯಾರೆಂದು ಅನೇಕ ಜನರಿಗೆ ತಿಳಿದಿಲ್ಲ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದ ಮನುಷ್ಯರಿಗೆ ನ್ಯಾಯ ನೀಡಿ ತೃಪ್ತಿಪಡಿಸಲು ಭೂಮಿಯಲ್ಲಿರುವ ಯಾರಿಂದಲೂ ಸಾಧ್ಯವಿಲ್ಲ. ನಾಸ್ತಿಕರ ಈ ಮೂಲಭೂತ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಮಾರ್ಗವಿಲ್ಲ.

ಆದರೆ ಇದಕ್ಕೆ ವಿರುದ್ಧವಾಗಿ ಸಂಪೂರ್ಣವಾಗಿ ನ್ಯಾಯ ಲಭಿಸುವ ಒಂದು ಲೋಕಕ್ಕೆ ಇಸ್ಲಾಮ್‌ ಕರೆ ನೀಡುತ್ತದೆ. ಎಲ್ಲಾ ಮನುಷ್ಯರೂ ಭೂಮಿಯಲ್ಲಿ ಮರಣ ಹೊಂದುತ್ತಾರೆ. ಮುಂದೆ ಬರಲಿರುವ ಆ ಪರಲೋಕದಲ್ಲಿ ಎಲ್ಲಾ ಮನುಷ್ಯರಿಗೂ ತಮ್ಮ ಕರ್ಮದ ಸಂಪೂರ್ಣ ಪ್ರತಿಫಲ ಲಭಿಸುವುದು. ಅಂದು ಯಾರೊಂದಿಗೂ ಕಿಂಚಿತ್ತು ಅಕ್ರಮ ಅನ್ಯಾಯ ನಡೆಸಲಾರದು ಎಂದು ಇ‌ಸ್ಲಾಮ್ ದೃಢವಾಗಿ ಒತ್ತಿ ಹೇಳುತ್ತದೆ. 

ತರುವಾಯ ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು, ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು” (ಪವಿತ್ರ ಕುರ್ ಆನ್: 99-7, 8)

ಆದರೆ ಪಶ್ಚಾತ್ತಾಪ ಪಟ್ಟವರೂ ಸತ್ಯವಿಶ್ವಾಸ ಸ್ವೀಕರಿಸಿಕೊಂಡವರೂ ಸತ್ಕರ್ಮ ಕೈಗೊಂಡವರೂ ಸ್ವರ್ಗದಲ್ಲಿ ಪ್ರವೇಶ ಪಡೆಯುವರು ಮತ್ತು ಅವರ ಹಕ್ಕುಚ್ಯುತಿ ಕಿಂಚಿತ್ತೂ ಆಗದು” (ಪವಿತ್ರ ಕುರ್‌ಆನ್ :16-60)

ಕನ್ನಡಾನುವಾದ: ಮುಹಮ್ಮದ್ ಸಫ್ವಾನ್ ಬೋಳಂಗಡಿ

Leave a Reply