ತೌಬಾ ಮತ್ತು ಇಸ್ತಿಗ್ಫಾರ್: ಪಶ್ಚಾತ್ತಾಪ ಮತ್ತು ಪಾಪ ವಿಮೋಚನೆಯ ಮಹತ್ವ
ಲೇಖಕರು: ಎಂ.ಎ ದೀನ್ ಅಲವಿ ಮಂಗಳೂರು
ದೇವನ ಸೃಷ್ಟಿಗಳಲ್ಲಿ ಮನುಷ್ಯ ಒಂದು ವಿಭಿನ್ನ ಮತ್ತು ವಿವೇಚನೆಯುಳ್ಳ ಜೀವಿ. ಒಳಿತು ಅಥವಾ ಕೆಡುಕು ಮಾಡುವ ಸ್ವಾತಂತ್ರ್ಯವನ್ನು ಅಲ್ಲಾಹನು ಅವನಿಗೆ ನೀಡಿದ್ದಾನೆ. ಮನುಷ್ಯ ಮತ್ತು ಪಿಶಾಚಿಯ ಸೃಷ್ಟಿ ಒಂದೇ ಸಮಯದಲ್ಲಿ ನಡೆದಿರುವುದರಿಂದ ಅವನ ಪ್ರತಿ ಹೆಜ್ಜೆಗಳಲ್ಲಿ ಪೈಶಾಚಿಕತನ ಆವರಿಸಿರುತ್ತದೆ. ಆದ್ದರಿಂದ ಮನುಷ್ಯನು ತನ್ನ ಜೀವನದಲ್ಲಿ ಪಾಪಗಳಿಂದ ಸಂಪೂರ್ಣವಾಗಿ ಮುಕ್ತನಾಗಲು ಸಾಧ್ಯವಿಲ್ಲ. ಅವನ ನೈಜ ಮತ್ತು ನೈಸರ್ಗಿಕ ಸ್ವಭಾವದಲ್ಲಿ ತಪ್ಪುಗಳಿಂದ, ದೌರ್ಬಲ್ಯಗಳಿಂದ ನಿರಂತರವಾಗಿ ಪಾಪಗಳಿಗೆ ಖಂಡಿತ ಒಳಗಾಗುತ್ತಾನೆ. ಪ್ರವಾದಿ ಮುಹಮ್ಮದ್ (ಸ) ಹೇಳುತ್ತಾರೆ: “كل بني آدم خطاء وخير الخطائين التوابون” “ಆದಮನ ಎಲ್ಲಾ ಸಂತತಿಗಳು ತಪ್ಪುಗಳನ್ನು ಮಾಡುವವರೇ. ಆದರೆ ತಪ್ಪು ಮಾಡುವವರಲ್ಲಿ ಅತ್ಯುತ್ತಮರು ತೌಬಾ (ಪಶ್ಚಾತ್ತಾಪ) ಮಾಡುವವರು.” (ತಿರ್ಮಿದಿ)
ಮನುಷ್ಯನ ಸ್ವಭಾವದಲ್ಲೇ ತಪ್ಪು ಮಾಡುವ ಗುಣವಿದೆ. ಆದರೆ ಇಸ್ಲಾಮ್ ಕಲಿಸುವುದೇನೆಂದರೆ ತಪ್ಪು ಮಾಡಿದ ನಂತರ ಅಲ್ಲಾಹನ ಕಡೆಗೆ “ತೌಬಾ” ಮಾಡಿ ಮರಳುವುದು ಅತ್ಯುತ್ತಮ ಗುಣವಾಗಿದೆ. ಪಾಪ ಮಾಡಿದಾಗ ನಿರಾಶರಾಗದೆ ಪಶ್ಚಾತ್ತಾಪ ಪಡಬೇಕು ಮತ್ತು ಅಲ್ಲಾಹನಿಂದ ಕ್ಷಮೆ ಕೇಳಬೇಕು ಮತ್ತೆ ಆ ಪಾಪವನ್ನು ಮಾಡುವುದಿಲ್ಲವೆಂಬ ಸಂಕಲ್ಪ ಮಾಡಬೇಕು. ಅಲ್ಲಾಹನು ಯಾವುದೇ ಕಾರ್ಯದಲ್ಲೂ ತನ್ನ ದಾಸನನ್ನು ನಿರಾಶೆಗೊಳಿಸುವುದಿಲ್ಲ. ಅವನಿಗೆ ಅವಕಾಶಗಳನ್ನು ನೀಡುತ್ತಾನೆ. ಕುರ್‌ಆನ್‌ನಲ್ಲಿ ಹೀಗೆ ಹೇಳುತ್ತಾನೆ: قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْಫِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ (ಸಂದೇಶವಾಹಕರೇ, ನನ್ನ ಪರವಾಗಿ) ಹೇಳಿರಿ; ತಮ್ಮ ಮೇಲೆಯೇ ಅತಿರೇಕವೆಸಗಿಕೊಂಡಿರುವ ನನ್ನ ದಾಸರೇ, ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ. ಅವನಂತೂ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (ಅಧ್ಯಾಯ 39: ಅಝ್ಝುಮರ್ ಸೂಕ್ತ: 53)
ಪಾಪ ಮಾಡಿದ ನಂತರ ಅಲ್ಲಾಹನ ಕಡೆಗೆ ಮರಳುವ ಅವಕಾಶವನ್ನು ಮನುಷ್ಯನಿಗೆ ತನ್ನ ಮರಣದ ಕೊನೆಯ ಅಂಚಿನ ವರೆಗೂ ನೀಡುತ್ತಾನೆ. ಆದ್ದರಿಂದ ಮನುಷ್ಯನು ಪಶ್ಚಾತ್ತಾಪಪಟ್ಟು ಪಾಪ ವಿಮೋಚನೆಗಾಗಿ ಪ್ರಾರ್ಥಿಸುವುದು ಅಗತ್ಯವಾಗಿದೆ ಮತ್ತು ಅಲ್ಲಾಹನು ಇಷ್ಟಪಡುವ ಕಾರ್ಯವಾಗಿದೆ.
“ತೌಬಾ – ಇಸ್ತಿಗ್ಫಾರ್” ಅರ್ಥ:
ವಿಶ್ವಾಸಿಗಳನ್ನು ಆಂತರಿಕ ಕಲ್ಮಶಗಳಿಂದ ಶುದ್ಧೀಕರಿಸುವ ಮಾರ್ಗವಾಗಿದೆ التوبة والاستغفار. ತೌಬಾ (ಪಶ್ಚಾತ್ತಾಪ) ಮತ್ತು ಇಸ್ತಿಗ್ಫಾರ್ (ಅಲ್ಲಾಹನ ಕ್ಷಮೆ ಬೇಡುವುದು) ಆಗಿದೆ. ಇವು ಮನುಷ್ಯನ ಆತ್ಮಶುದ್ಧಿ ಮತ್ತು ಪಾಪಮೋಚನೆಗಾಗಿ ಅತ್ಯಂತ ಮುಖ್ಯ ಆಧ್ಯಾತ್ಮಿಕ ಕ್ರಮಗಳಾಗಿವೆ. التوبة (ತೌಬಾ) ಎಂದರೆ “ಹಿಂದಿರುಗುವುದು” ಅಥವಾ “ಮರಳುವುದು” “ಮುಖ ತಿರುಗಿಸುವುದು” ಎಂಬ ಅರ್ಥವನ್ನು ಹೊಂದಿದೆ. ಪಾಪದ ದಾರಿಯಿಂದ ದೂರ ಸರಿದು ಅಲ್ಲಾಹನ ಮಾರ್ಗದ ಕಡೆಗೆ ಮರಳುವುದೇ ತೌಬಾ. “ಇಸ್ತಿಗ್ಫಾರ್” ಎಂದರೆ ಅಲ್ಲಾಹನಿಂದ ಕ್ಷಮೆ ಬೇಡುವುದು. ಮನುಷ್ಯನು ತನ್ನ ತಪ್ಪುಗಳನ್ನು ಅರಿತು ಅಲ್ಲಾಹನ ಬಳಿ ಕ್ಷಮೆ ಕೇಳಿದಾಗ, ಅಲ್ಲಾಹನು ತನ್ನ ಕರುಣೆಯಿಂದ ಅವನನ್ನು ಕ್ಷಮಿಸುತ್ತಾನೆ. ಪ್ರವಾದಿ (ಸ) ಹೇಳಿದರು: “ಅನ್ನದಮು ತೌಬಾ” ಅರ್ಥಾತ್: “ಪಶ್ಚಾತ್ತಾಪವೇ ತೌಬಾ.” (ಇಬ್ನ್ ಹಿಬ್ಬಾನ್) ಅಂದರೆ, ಮನುಷ್ಯನು ತನ್ನ ಪಾಪದ ಬಗ್ಗೆ ಮನಸ್ಸಿನಲ್ಲಿ ನಿಜವಾದ ವಿಷಾದ ಮತ್ತು ಪಶ್ಚಾತ್ತಾಪ ಹೊಂದುವುದು ತೌಬಾದ ಮೂಲ ಕುರುಹಾಗಿದೆ. ಕುರ್‌ಆನ್‌ನಲ್ಲಿ ಹೇಳಲಾಗಿದೆ: وَاسْتَغْفِرُوا رَبَّكُمْ ثُمَّ تُوبُوا إِلَيْهِ ۚ إِنَّ رَبِّي رَحِيمٌ وَدُودٌ “ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಬೇಡಿರಿ ಮತ್ತು ಅವನ ಕಡೆಗೆ ಮರಳಿರಿ. ನಿಶ್ಚಯವಾಗಿಯೂ ನನ್ನ ಪ್ರಭು ಕರುಣಾನಿಧಿಯೂ ತನ್ನ ಸೃಷ್ಟಿಗಳನ್ನು ಪ್ರೀತಿಸುವವನೂ ಆಗಿರುತ್ತಾನೆ.” (ಅಧ್ಯಾಯ 11: ಹೂದ್ ಸೂಕ್ತ: 90)
ಪಶ್ಚಾತ್ತಾಪದಿಂದ ಅಲ್ಲಾಹನ ಪ್ರೀತಿ:
ತೌಬಾ (ಪಶ್ಚಾತ್ತಾಪ) ಕೇವಲ ಪಾಪಗಳಿಂದ ಕ್ಷಮೆ ಪಡೆಯುವ ಒಂದು ಮಾರ್ಗ ಮಾತ್ರವಲ್ಲ; ಅದು ಅಲ್ಲಾಹನ ಪ್ರೀತಿಯನ್ನು ಪಡೆಯುವ ಮಹತ್ವದ ದಾರಿಯಾಗಿದೆ. ಮನುಷ್ಯನು ತನ್ನ ತಪ್ಪನ್ನು ಅರಿತು ಶುದ್ಧ ಹೃದಯದಿಂದ ಅಲ್ಲಾಹನ ಕಡೆಗೆ ಮರಳಿದರೆ, ಅಲ್ಲಾಹನು ಅವನನ್ನು ಕ್ಷಮಿಸುವುದಷ್ಟೇ ಅಲ್ಲ, ಅವನನ್ನು ಪ್ರೀತಿಸುತ್ತಾನೆ. ಕ್ಷಮಾಶೀಲತೆಯು ಅಲ್ಲಾಹನ ಅಪಾರ ದಯೆಯಾಗಿದೆ. ಅಲ್ಲಾಹನ ಕರುಣೆ ಮತ್ತು ಕ್ಷಮೆ ಅತ್ಯಂತ ವಿಶಾಲವಾಗಿದೆ. ಮನುಷ್ಯನು ಎಷ್ಟು ದೊಡ್ಡ ಪಾಪ ಮಾಡಿದರೂ ನಿಷ್ಕಳಂಕ ತೌಬಾ ಮಾಡಿದರೆ ಅಲ್ಲಾಹನು ಅವನನ್ನು ಖಂಡಿತಾ ಕ್ಷಮಿಸುತ್ತಾನೆ. ಪ್ರವಾದಿ ಮುಹಮ್ಮದ್ (ಸ) ಅವರು ತೌಬಾದ ಮಹತ್ವವನ್ನು ವಿವರಿಸುತ್ತಾ, ಅಲ್ಲಾಹನಿಗೆ ಹೆಚ್ಚು ಸಂತೋಷ ನೀಡುವ ಕಾರ್ಯ ಎಂದಿದ್ದಾರೆ. ಪ್ರವಾದಿ (ಸ) ಹೇಳಿದರು: “ಒಬ್ಬನು ತನ್ನ ಒಂಟೆಯನ್ನು ಕಳೆದುಕೊಂಡು ನಂತರ ಅದನ್ನು ಮರಳಿ ಕಂಡಾಗ ಎಷ್ಟು ಸಂತೋಷಪಡುತ್ತಾನೋ, ಅದಕ್ಕಿಂತ ಹೆಚ್ಚು ಅಲ್ಲಾಹನು ತನ್ನ ದಾಸನು ತೌಬಾ ಮಾಡಿದಾಗ ಸಂತೋಷಪಡುತ್ತಾನೆ.” (ಸಹೀಹ್ ಬುಖಾರಿ, ಮುಸ್ಲಿಂ)
ಇಸ್ಲಾಮ್ ಬಾಹ್ಯ ಶುದ್ಧಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆಯೋ ಅಷ್ಟೇ ಪ್ರಾಮುಖ್ಯತೆ ಆಂತರಿಕ ಶುದ್ಧಿಗೂ ನೀಡುತ್ತದೆ. ಆ ಶುದ್ಧಿ ಅಲ್ಲಾಹನಿಗೆ ಇಷ್ಟವಾದದ್ದಾಗಿದೆ. ಆಂತರಿಕ ಶುದ್ಧಿ ತೌಬಾ-ಇಸ್ತಿಗ್ಫಾರ್‌ನ ಮೂಲಕ ನಡೆಸಲಾಗುತ್ತದೆ. إِنَّ اللَّهَ يُحِبُّ التَّوَّابِينَ وَيُحِبُّ الْمُتَطَهِّرِينَ “ನಿಶ್ಚಯವಾಗಿಯೂ ಪಾಪಗಳಿಂದ ಪಶ್ಚಾತ್ತಾಪಪಡುವವರನ್ನೂ, ಶುದ್ಧಾಚಾರವಿರಿಸುವವರನ್ನೂ ಅಲ್ಲಾಹ್ ಇಷ್ಟಪಡುತ್ತಾನೆ.” (ಅಧ್ಯಾಯ 2: ಅಲ್ ಬಕರಃ ಸೂಕ್ತ: 222) ಪಶ್ಚಾತ್ತಾಪದಿಂದ ಹೃದಯ ಶುದ್ಧತೆ ಮತ್ತು ಮನಸ್ಸಿಗೆ ಶಾಂತಿ ಲಭಿಸುತ್ತದೆ. ಕುರ್‌ಆನ್ ಹೇಳುತ್ತದೆ: وَاللَّهُ يُرِيدُ أَنْ يَتُوبَ عَلَيْكُمْ “ಅಲ್ಲಾಹನಂತೂ ತನ್ನ ಕೃಪೆಯೊಂದಿಗೆ ನಿಮ್ಮ ಕಡೆ ಲಕ್ಷ್ಯವಿಡಲು ಬಯಸುತ್ತಾನೆ.” (ಅಧ್ಯಾಯ 4: ಅನ್ನಿಸಾ ಸೂಕ್ತ: 27)
الله أَفْرَحُ بِتَوْبَةِ عَبْدِهِ مِنْ أَحَدِكُمْ وَجَدَ ضَالَّتَهُ فِي الْفَلَاةِ “ತನ್ನ ದಾಸನು ತೌಬಾ ಮಾಡಿದಾಗ ಅಲ್ಲಾಹನು ಬಹಳ ಸಂತೋಷಪಡುತ್ತಾನೆ. ಮರುಭೂಮಿಯಲ್ಲಿ ಕಳೆದುಕೊಂಡ ವಸ್ತುವನ್ನು ಕಂಡುಕೊಂಡಾಗ ಮನುಷ್ಯನಿಗೆ ಆಗುವ ಸಂತೋಷಕ್ಕಿಂತಲೂ ಹೆಚ್ಚು ಸಂತೋಷವನ್ನು ಅಲ್ಲಾಹನು ಹೊಂದುತ್ತಾನೆ.” (ಹದೀಸ್ – ಬುಖಾರಿ, ಮುಸ್ಲಿಂ)
ಪಶ್ಚಾತ್ತಾಪದಿಂದ ಒಳಿತು:
ತೌಬಾ ಇಸ್ತಿಗ್ಫಾರ್ ಮನುಷ್ಯನನ್ನು ಒಳ್ಳೆಯವರನ್ನಾಗಿ ಮಾಡುತ್ತದೆ. ಅಲ್ಲಾಹನ ಮುಂದೆ ಗೌರವಾನ್ವಿತನಾಗುತ್ತಾನೆ ಹಾಗೂ ಅವನ ಜೀವನವನ್ನು ಉತ್ತಮಗೊಳಿಸುತ್ತದೆ. ಕುರ್‌ಆನ್‌ನಲ್ಲಿ ಹೇಳಲಾಗಿದೆ: إِلَّا مَنْ تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَحِيمًا “(ಈ ಪಾಪಗಳನ್ನು ಮಾಡಿದ ಬಳಿಕ) ಪಶ್ಚಾತ್ತಾಪಪಟ್ಟು ಸತ್ಯ ವಿಶ್ವಾಸವನ್ನು ಸ್ವೀಕರಿಸಿ, ಸತ್ಕರ್ಮಗಳನ್ನು ಮಾಡಲಾರಂಭಿಸಿದವರ ಹೊರತು. ಇಂತಹವರ ಕೆಡುಕುಗಳನ್ನು ಅಲ್ಲಾಹನು ಒಳಿತುಗಳಾಗಿ ಪರಿವರ್ತಿಸುವನು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಧ್ಯಾಯ 25: ಅಲ್ ಫುರ್ಕಾನ್ ಸೂಕ್ತ: 70) ತೌಬಾ ಮನುಷ್ಯನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದಾಗ ಅಲ್ಲಾಹನು ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ಅವುಗಳನ್ನು ಪುಣ್ಯಗಳಾಗಿ ಪರಿವರ್ತಿಸುತ್ತಾನೆ. ಕುರ್‌ಆನ್ ಹೇಳುತ್ತದೆ: فَتُوبُوا إِلَىٰ بَارِئِكُمْ فَاقْتُلُوا أَنْفُسَكُمْ ذَٰلِكُمْ خَيْرٌ لَكُمْ عِنْدَ بَارِئِكُمْ فَتَابَ عَلَيْكُمْ ۚ إِنَّهُ هُوَ التَّوَّابُ الرَّحِيمُ “ನೀವು ನಿಮ್ಮ ಸೃಷ್ಟಿಕರ್ತನ ಮುಂದೆ ಪಶ್ಚಾತ್ತಾಪಪಡಿರಿ ಮತ್ತು ನಿಮ್ಮ ಜೀವಗಳನ್ನು ನೀವೇ ಸಂಹರಿಸಿರಿ. ಇದರಲ್ಲೇ ನಿಮ್ಮ ಸೃಷ್ಟಿಕರ್ತನ ಬಳಿ ನಿಮಗೆ ಒಳಿತಿದೆ” ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ನಿಮ್ಮ ಸೃಷ್ಟಿಕರ್ತನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಆತನು ಬಹಳವಾಗಿ ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಧ್ಯಾಯ 2: ಅಲ್ ಬಕರಃ ಸೂಕ್ತ: 54)
ಪಶ್ಚಾತ್ತಾಪ ಸ್ವೀಕಾರ ಮತ್ತು ಪ್ರತಿಫಲ:
ಮನುಷ್ಯನು ತನ್ನ ಪಾಪಗಳನ್ನು ಅರಿತು ಅಲ್ಲಾಹನ ಬಳಿ ಕ್ಷಮೆ ಕೇಳಿ ಮತ್ತೆ ಆ ಪಾಪವನ್ನೆಂದು ಮಾಡುವುದಿಲ್ಲವೆಂದು ನಿರ್ಧರಿಸುವುದು. ನಿಜವಾದ ಹೃದಯದಿಂದ ಮಾಡಿದ ತೌಬಾವನ್ನು ಅಲ್ಲಾಹನು ಖಂಡಿತವಾಗಿ ಸ್ವೀಕರಿಸುತ್ತಾನೆ. ಕುರ್‌ಆನ್‌ನ ಸಂದೇಶ ಹೀಗಿದೆ: وَهُوَ الَّذِي يَقْبَلُ التَّوْبَةَ عَنْ عِبَادِهِ “ಅವನೇ ತನ್ನ ದಾಸರ ತೌಬಾವನ್ನು ಸ್ವೀಕರಿಸುವವನು.” (ಅಧ್ಯಾಯ 42: ಸೂರತುಲ್ ಶೂರಾ ಸೂಕ್ತ: 25) ಅಲ್ಲಾಹನು ಅತ್ಯಂತ ಕರುಣಾಮಯನು ಮತ್ತು ಕ್ಷಮಾಶೀಲನು. ಆದ್ದರಿಂದ ಸತ್ಯವಾದ ತೌಬಾ ಮಾಡಿದವನನ್ನು ಅಲ್ಲಾಹನು ಖಂಡಿತವಾಗಿ ಸ್ವೀಕರಿಸುತ್ತಾನೆ ಮತ್ತು ಅವನಿಗೆ ಅನೇಕ ಪ್ರತಿಫಲಗಳನ್ನು ನೀಡುತ್ತಾನೆ. ಪ್ರವಾದಿ ಮುಹಮ್ಮದ್ (ಸ) ಹೇಳಿದರು: التَّائِبُ مِنَ الذَّنْبِ كَمَنْ لَا ذَنْبَ لَهُ “ಪಾಪದಿಂದ ತೌಬಾ ಮಾಡಿದವನು ಪಾಪವೇ ಮಾಡದವನಂತೆ ಆಗುತ್ತಾನೆ.” (ಇಬ್ನು ಮಾಜಾ) ಇನ್ನೊಂದು ಕಡೆ ಪ್ರವಾದಿ ಹೀಗೆ ಹೇಳಿದರು: “ಸೂರ್ಯ ಪಶ್ಚಿಮದಿಂದ ಉದಯಿಸುವ ಮೊದಲು ತೌಬಾ ಮಾಡಿದವನ ತೌಬಾವನ್ನು ಅಲ್ಲಾಹನು ಸ್ವೀಕರಿಸುತ್ತಾನೆ.” (ಸಹೀಹ್ ಮುಸ್ಲಿಂ) ಮನುಷ್ಯನಿಗೆ ತನ್ನ ಕೊನೆಯ ಸಮಯದವರೆಗೆ ತೌಬಾ ಮಾಡಲು ಅವಕಾಶವಿದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರತಿ ಕ್ಷಣ “ಅಸ್ತಗ್ಫಿರುಲ್ಲಾಹ್” ಎಂದು ಹೇಳುತ್ತಾ ತೌಬಾ ಮತ್ತು ಇಸ್ತಿಗ್ಫಾರ್ ಮಾಡುವ ಅಭ್ಯಾಸವನ್ನು ಬೆಳೆಸಬೇಕು. ಹೆಚ್ಚು ಇಸ್ತಿಗ್ಫಾರ್ ಮಾಡಿದವನಿಗೆ ಪರಿಹಾರವಿದೆಯೆಂದು ಪ್ರವಾದಿ (ಸ) ಹೇಳಿದರು: “ಯಾರು ನಿರಂತರವಾಗಿ ಅಲ್ಲಾಹನಿಂದ ಕ್ಷಮೆ ಕೇಳುತ್ತಾರೋ, ಅಲ್ಲಾಹನು ಅವರ ಪ್ರತಿಯೊಂದು ಸಂಕಟಕ್ಕೂ ಪರಿಹಾರ ನೀಡುತ್ತಾನೆ ಮತ್ತು ಅವನಿಗೆ ಊಹಿಸದ ಸ್ಥಳದಿಂದ ಜೀವನೋಪಾಯ ನೀಡುತ್ತಾನೆ.”
ಎಷ್ಟು ದೊಡ್ಡ ಪಾಪ ಮಾಡಿದರೂ ತೌಬಾ ಸ್ವೀಕಾರ:
ಪ್ರವಾದಿ (ಸ) ಹೇಳಿದರು: “ನಿಮ್ಮ ಪಾಪಗಳು ಆಕಾಶದಷ್ಟು ದೊಡ್ಡದಾದರೂ, ನೀವು ತೌಬಾ ಮಾಡಿದರೆ ಅಲ್ಲಾಹನು ಅದನ್ನು ಕ್ಷಮಿಸುತ್ತಾನೆ.” (ಇಬ್ನ್ ಮಾಜಾ) ಅಲ್ಲಾಹನು ಹೇಳುತ್ತಾನೆ: يَا أَيُّهَا الَّذِينَ آمَنُوا تُوبُوا إِلَى اللَّهِ تَوْبَةً نَصُوحًا عَسَىٰ رَبُّكُمْ أَنْ يُكَفِّرَ عَنْكُمْ سَيِّئَاتِكُمْ وَيُدْخِلَكُمْ جَنَّاتٍ تَجْرِي مِنْ تَحْتِهَا الْأَنْهَارُ “ಸತ್ಯವಿಶ್ವಾಸಿಗಳೇ, ಅಲ್ಲಾಹನೊಡನೆ ಪಶ್ಚಾತ್ತಾಪಪಡಿರಿ. ನಿಷ್ಕಳಂಕವಾದ ಪಶ್ಚಾತ್ತಾಪ, ನಿಮ್ಮ ಪ್ರಭು ನಿಮ್ಮ ದೋಷಗಳನ್ನು ಅಳಿಸಬಹುದು ಮತ್ತು ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸಲೂ ಬಹುದು.” (ಅಧ್ಯಾಯ 66: ಅತ್ತಹ್‌ರೀಮ್ ಸೂಕ್ತ: 8)
ತೌಬಾ ಸ್ವೀಕಾರಕ್ಕೆ ಕೆಲವು ಮುಖ್ಯ ಶರತ್ತುಗಳನ್ನು ಇಸ್ಲಾಮಿನ ಪಂಡಿತರು ತಿಳಿಸಿದ್ದಾರೆ:
- ಪಾಪವನ್ನು ತಕ್ಷಣ ಬಿಡಬೇಕು.
- ಮನಸ್ಸಿನಲ್ಲಿ ನಿಜವಾದ ಪಶ್ಚಾತ್ತಾಪ ಇರಬೇಕು.
- ಪಾಪವನ್ನು ಮಾಡುವುದಿಲ್ಲವೆಂದು ದೃಢ ನಿರ್ಧಾರ ಮಾಡಬೇಕು.
- ಹಕ್ಕುಗಳನ್ನು ಮರಳಿಸಬೇಕು. ಈ ಅಂಶಗಳನ್ನು ಪಾಲಿಸಿದಾಗ ತೌಬಾ ಸಂಪೂರ್ಣವಾಗುತ್ತದೆ.
ತೌಬಾದ ಪ್ರತಿಫಲಗಳು ಹೀಗೆ ಪಟ್ಟಿ ಮಾಡಲಾಗಿದೆ:
- ಪಾಪಗಳ ಕ್ಷಮೆ
- ಪಾಪಗಳು ಪುಣ್ಯಗಳಾಗಿ ಬದಲಾಗುತ್ತವೆ
- ಸಂಕಷ್ಟಗಳಿಂದ ಬಿಡುಗಡೆ
- ಅಲ್ಲಾಹನ ಪ್ರೀತಿ
- ಜೀವನದಲ್ಲಿ ಅನುಗ್ರಹ ಲಭಿಸುತ್ತದೆ.
ಪ್ರವಾದಿ (ಸ) ಹೇಳಿದರು: “ಯಾರು ಹೆಚ್ಚು ಇಸ್ತಿಗ್ಫಾರ್ ಮಾಡುತ್ತಾರೋ, ಅಲ್ಲಾಹನು ಅವರ ಪ್ರತಿಯೊಂದು ಸಂಕಷ್ಟಕ್ಕೂ ಪರಿಹಾರ ನೀಡುತ್ತಾನೆ.” ತೌಬಾ ಮತ್ತು ಇಸ್ತಿಗ್ಫಾರ್ ಮನುಷ್ಯನ ಜೀವನವನ್ನು ಶುದ್ಧಗೊಳಿಸುವ ಆಧ್ಯಾತ್ಮಿಕ ಮಾರ್ಗವಾಗಿದೆ. ಆ ಮೂಲಕ ಪ್ರತಿಯೊಬ್ಬ ಮುಸ್ಲಿಮನು ಅಲ್ಲಾಹನ ಪ್ರೀತಿಯನ್ನು ಪಡೆಯಲು ಪ್ರಯತ್ನಿಸಬೇಕು. “ಓ ವಿಶ್ವಾಸಿಗಳೇ! ನೀವು ಎಲ್ಲರೂ ಅಲ್ಲಾಹನ ಕಡೆಗೆ ಸತ್ಯವಾದ ತೌಬಾ ಮಾಡಿ; ನೀವು ಯಶಸ್ವಿಯಾಗಬಹುದು.” (ಅಧ್ಯಾಯ 24: ಅಲ್ ನೂರ್ ಸೂಕ್ತ: 31) ತೌಬಾ ಮತ್ತು ಇಸ್ತಿಗ್ಫಾರ್ ಮನುಷ್ಯನ ಆತ್ಮಶುದ್ಧಿಗೆ ಅತ್ಯಂತ ಮಹತ್ವದ ಮಾರ್ಗವಾಗಿದೆ. ಯಾವುದೇ ಅಹಂಕಾರ ಕೀಳರಿಮೆ ಇಲ್ಲದೆ ನಿಷ್ಕಳಂಕವಾಗಿ ಪಶ್ಚಾತ್ತಾಪದಿಂದ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿದರೆ ಅಲ್ಲಾಹನ ಪ್ರೀತಿ ಮತ್ತು ಪರಲೋಕದಲ್ಲಿ ಮಹತ್ತರ ಪ್ರತಿಫಲ ದೊರೆಯುತ್ತದೆ.