ಪ್ರವಾದಿಗಳ ತೌಬಾ – ಇಸ್ತಿಗ್ಫಾರ್ ಮತ್ತು ಪಾಪಮೋಚನೆಯ ಪ್ರಾರ್ಥನೆಗಳು
ಲೇಖಕರು: ಎಂ.ಎ ದೀನ್ ಅಲವಿ ಮಂಗಳೂರು
ಇಸ್ಲಾಮಿನ ದೃಷ್ಟಿಯಲ್ಲಿ ಪ್ರವಾದಿಗಳು ಅಲ್ಲಾಹನಿಂದ ಆಯ್ಕೆಯಾದ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ. ಅವರು ಮಾನವರಿಗೆ ಸರಿಯಾದ ದಾರಿಯನ್ನು ತೋರಿಸಲು ಕಳುಹಿಸಲ್ಪಟ್ಟಿದ್ದಾರೆ. ಪ್ರವಾದಿಗಳು ದೊಡ್ಡ ಪಾಪಗಳಿಂದ ರಕ್ಷಿಸಲ್ಪಟ್ಟ (ಮಅ್ಸೂಮ್)ವರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ನೈಸರ್ಗಿಕವಾಗಿ ಅವರು ಸಾಮಾನ್ಯ ಮನುಷ್ಯರಾಗಿರುವರು. ಅವರ ಜೀವನದಲ್ಲಿಯೂ ನೂನ್ಯತೆಗಳು ಸಂಭವಿಸಿದ ಉದಾಹರಣೆಗಳನ್ನು ಕುರ್‌ಆನ್ ನೀಡುತ್ತದೆ. ಆ ಬಳಿಕ ಯಾವುದೇ ಅಹಂ ಇಲ್ಲದೆ ಅಲ್ಲಾಹನ ಮುಂದೆ ವಿನಮ್ರರಾಗಿದ್ದು, ತೌಬಾ ಮತ್ತು ಇಸ್ತಿಗ್ಫಾರ್ ಮೂಲಕ ಕ್ಷಮೆಯನ್ನು ಬೇಡಿ ಪಾಪಮೋಚಿತರಾದ ಬಗ್ಗೆಯೂ ಕುರ್‌ಆನ್ ವಿವರಿಸುತ್ತದೆ.
ಪ್ರವಾದಿ ಆದಮ್ (ಅ):
ಮಾನವ ಇತಿಹಾಸದಲ್ಲಿ ಮೊದಲ ತೌಬಾದ ಉದಾಹರಣೆ ಪ್ರವಾದಿ ಆದಮ್ (ಅ) ಅವರ ಜೀವನದಲ್ಲಿ ಕಂಡುಬರುತ್ತದೆ. ಪ್ರವಾದಿ ಆದಮ್ (ಅ)ರನ್ನು ಅಲ್ಲಾಹನು ಸೃಷ್ಟಿಸಿದ ಮತ್ತು ಎಲ್ಲಾ ಜೀವಿಗಳನ್ನು ಅವನ ಅಧೀನಕ್ಕೆ ತಂದು ಅವನಿಗೆ ವಿಜ್ಞಾನ ಕಲಿಸಿದ. ಆ ಬಳಿಕ ಜೊತೆಗಾರ್ತಿಯೊಂದಿಗೆ ಸ್ವರ್ಗದಲ್ಲಿ ಇರಿಸಿ ಆಜ್ಞಾಪಿಸಿದ: “ಇಲ್ಲಿರುವ ಎಲ್ಲಾ ಸುಖಗಳನ್ನು ಅನುಭವಿಸು; ಆದರೆ, ಆ ಮರದ ಬಳಿ ಸುಳಿಯಬೇಡ.” ಆದರೆ, ಶೈತಾನನ ಪ್ರಲೋಭನೆಗೆ ಒಳಗಾಗಿ ಅವರು ಆ ಮರದ ಫಲವನ್ನು ತಿಂದರು. ತಮ್ಮ ತಪ್ಪನ್ನು ಅರಿತ ತಕ್ಷಣ ಅವರು ಅಲ್ಲಾಹನ ಮುಂದೆ ಪಶ್ಚಾತ್ತಾಪಪಟ್ಟರು. فَتَلَقَّىٰ آدَمُ مِنْ رَبِّهِ كَلِمَاتٍ فَتَابَ عَلَيْهِ ۚ إِنَّهُ هُوَ التَّوَّابُ الرَّحِيمُ ಆಗ ಆದಮ್ ತನ್ನ ಪ್ರಭುವಿನಿಂದ ಕೆಲವು ಮಾತುಗಳನ್ನು ಕಲಿತುಕೊಂಡು ಪಶ್ಚಾತ್ತಾಪ ಪ್ರಕಟಿಸಿದರು. ಅದನ್ನು ಅವರ ಪ್ರಭುವು ಸ್ವೀಕರಿಸಿದನು. ಏಕೆಂದರೆ, ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (ಅಧ್ಯಾಯ 2: ಅಲ್ ಬಕರಃ ಸೂಕ್ತ: 37) ಆದಮ್ ದಂಪತಿಗಳು ಅಲ್ಲಾಹನು ಕಲಿಸಿದ ಪದಗಳಿಂದ ಪಶ್ಚಾತ್ತಾಪಪಟ್ಟು ಪ್ರಾರ್ಥಿಸಿದರು. ಆ ಪ್ರಾರ್ಥನೆ ಹೀಗಿದೆ: قَالَا رَبَّنَا ظَلَمْنَا أَنْفُسَنَا وَإِنْ لَمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ ಅವರಿಬ್ಬರೂ, “ಓ ನಮ್ಮ ಪ್ರಭೂ, ನಾವು ನಮ್ಮ ಮೇಲೆ ಅನ್ಯಾಯವೆಸಗಿಕೊಂಡೆವು. ಈಗ ನೀನು ನಮ್ಮನ್ನು ಕ್ಷಮಿಸದಿದ್ದರೆ ಹಾಗೂ ನಮ್ಮ ಮೇಲೆ ಕೃಪೆ ತೋರದಿದ್ದರೆ ನಿಶ್ಚಯವಾಗಿಯೂ ನಾವು ನಷ್ಟ ಹೊಂದುವವರಲ್ಲಾಗುವೆವು” ಎಂದು ಹೇಳಿದರು. (ಅಧ್ಯಾಯ 7: ಅಲ್ ಅ’ಅರಾಫ್ ಸೂಕ್ತ: 23) ಅಲ್ಲಾಹನು ಅವರ ತೌಬಾವನ್ನು ಸ್ವೀಕರಿಸಿ ಅವರನ್ನು ಕ್ಷಮಿಸಿದನು. ಮನುಷ್ಯರಿಗೆ ಪಾಪ ಮಾಡಿದ ನಂತರ ಅಲ್ಲಾಹನ ಕಡೆಗೆ ಮರಳುವ ಪಾಠವನ್ನು ಈ ಮೂಲಕ ನೀಡಿದನು.
ಪ್ರವಾದಿ ಯೂನುಸ್ (ಅ):
ಇಸ್ಲಾಮಿನ ಇತಿಹಾಸದಲ್ಲಿ ಪ್ರವಾದಿ ಯೂನುಸ್ (ಅ) ಅವರ ಪಶ್ಚಾತ್ತಾಪದ ಕಥೆ ಮತ್ತು ಅಲ್ಲಾಹನ ಕರುಣೆಯ ಮಹತ್ವವನ್ನು ಸ್ಪಷ್ಟವಾಗಿ ಒಂದು ಘಟನೆಯ ಮೂಲಕ ಕುರ್‌ಆನ್ ವಿವರಿಸುತ್ತದೆ. ಪ್ರವಾದಿ ಯೂನುಸ್ (ಅ) ರ ಜನಾಂಗದ ಬಹುಮಂದಿ ಅವರ ಸಂದೇಶವನ್ನು ನಿರಾಕರಿಸಿದ ಕಾರಣ ಕೋಪಗೊಂಡು ಅಲ್ಲಾಹನ ಅನುಮತಿ ಇಲ್ಲದೆ ಊರು ಬಿಟ್ಟು ಹೊರಟರು. ಅವರು ಒಂದು ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಹಡಗು ಸಮುದ್ರದ ಮಧ್ಯದಲ್ಲಿ ಭಾರವಾದಾಗ ಜನರು ಚೀಟಿ ಹಾಕಿ ಯಾರನ್ನಾದರೂ ಸಮುದ್ರಕ್ಕೆ ಎಸೆದು ಬಿಡಬೇಕೆಂದು ನಿರ್ಧರಿಸಿದರು. ಮೂರು ಬಾರಿ ಚೀಟಿ ಹಾಕಿದಾಗಲೂ ಯೂನುಸ್ (ಅ) ಅವರ ಹೆಸರು ಬಂತು. ನಿಯಮದ ಪ್ರಕಾರ ಅವರು ಸಮುದ್ರಕ್ಕೆ ಹಾರಿದರು; ಆಗ ಒಂದು ದೊಡ್ಡ ಮೀನು ಅವರನ್ನು ನುಂಗಿತು. ಕುರ್‌ಆನ್ ಆ ಘಟನೆಯ ಬಗ್ಗೆ ಹೀಗೆ ಹೇಳುತ್ತದೆ: “ಮತ್ಸ್ಯದವರನ್ನು ನಾವು ಗೌರವಿಸಿದೆವು. ಅವರು ಕೋಪಗೊಂಡು ಹೊರಟು ಹೋಗಿದ್ದ ಸಂದರ್ಭವನ್ನು ಸ್ಮರಿಸಿರಿ. ಅವರನ್ನು ನಾವು ಹಿಡಿಯಲಾರೆವೆಂದು ಅವರು ಭಾವಿಸಿದ್ದರು.” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 87) ಅವರು ಮೀನಿನ ಹೊಟ್ಟೆಯೊಳಗೆ ತಲುಪಿದಾಗ ತಮ್ಮ ತಪ್ಪನ್ನು ಅರಿತು ಅಲ್ಲಾಹನ ಕಡೆ ತೌಬಾ ಮಾಡಿದರು. لَا إِلٰهَ إِلَّا أَنتَ سُبْحَانَكَ إِنِّي كُنتُ مِنَ الظَّالِمِينَ ಕೊನೆಗೆ ಅವರು ಅಂಧಕಾರದೊಳಗಿಂದ ಕೂಗಿ ಪ್ರಾರ್ಥಿಸಿದರು; “ನಿನ್ನ ಹೊರತು ಅನ್ಯ ದೇವನಿಲ್ಲ. ನೀನು ಪರಮ ಪಾವನನು. ನಿಶ್ಚಯವಾಗಿಯೂ ನಾನು ಅಪರಾಧವೆಸಗಿದೆನು.” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 87) ಪ್ರವಾದಿ ಯೂನುಸ್ (ಅ) ಸತ್ಯಸಂಧವಾಗಿ ತೌಬಾ ಮಾಡಿದ ಕಾರಣ ಅಲ್ಲಾಹ್ ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು. ಅಲ್ಲಾಹ್ ಹೇಳುತ್ತಾನೆ: فَاسْتَجَبْنَا لَهُ وَنَجَّಯْنَاهُ مِنَ الْغَمِّ ۚ وَكَذَٰلِكَ نُنْجِي الْمُؤْمِنِينَ “ಆಗ ನಾವು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದೆವು ಮತ್ತು ಅವರನ್ನು ದುಃಖದಿಂದ ಪಾರುಗಾಣಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ.” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 88) ಈ ಪ್ರಾರ್ಥನೆ ತೌಬಾ ಮಾಡಿದವರಿಗೆ ಅಲ್ಲಾಹನ ಕರುಣೆ ಸದಾ ತೆರೆದಿಡುತ್ತದೆ ಎಂದು ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳಿದರು: “ಯೂನುಸ್ ಪ್ರವಾದಿಯ ಪ್ರಾರ್ಥನೆಯನ್ನು ಯಾವ ಸಂಕಟದಲ್ಲಿರುವ ಮುಸ್ಲಿಮನು ಓದಿದರೂ ಅಲ್ಲಾಹನು ಅವನ ಸಂಕಟವನ್ನು ನಿವಾರಿಸುತ್ತಾನೆ.” (ತಿರ್ಮಿದಿ) ಸಂಕಟದಲ್ಲಿ ಅಲ್ಲಾಹನನ್ನು ನೆನಪಿಸಬೇಕು. ಆದ್ದರಿಂದ ನಾವು ಯಾವಾಗ ತಪ್ಪು ಮಾಡಿದರೂ ತಕ್ಷಣ ಅಲ್ಲಾಹನ ಕಡೆ ತಿರುಗಿ ತೌಬಾ ಮಾಡಬೇಕು.
ಪ್ರವಾದಿ ಮೂಸಾ (ಅ):
ಪ್ರವಾದಿ ಮೂಸಾ (ಅ) ಮಿಸ್ರ್ (ಈಜಿಪ್ಟ್)ಗೆ ಕಳುಹಿಸಲ್ಪಟ್ಟ ಪ್ರವಾದಿಯಾಗಿದ್ದರು. ಒಂದು ದಿನ ಅವರು ನಗರದಲ್ಲಿ ನಡೆಯುತ್ತಿರುವಾಗ ಇಬ್ಬರು ಜಗಳ ಮಾಡುತ್ತಿರುವುದನ್ನು ಕಂಡರು. ಅವರಲ್ಲಿ ಒಬ್ಬನು ಇಸ್ರಾಯೀಲಿ (ಮೂಸ(ಅ) ರ ಸಮುದಾಯದವನು) ಮತ್ತು ಮತ್ತೊಬ್ಬನು ಫಿರೌನ್ ಜನಾಂಗದವನಾಗಿದ್ದನು. ಇಸ್ರಾಯೀಲಿ ವ್ಯಕ್ತಿ ಸಹಾಯ ಕೇಳಿದಾಗ ಮೂಸಾ (ಅ) ಮತ್ತೊಬ್ಬನಿಗೆ ಒಂದು ಹೊಡೆತ ನೀಡಿದರು. ಆದರೆ, ಆ ಹೊಡೆತದಿಂದ ಅವನು ಸತ್ತು ಹೋದನು. ಇದು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಾಗಿರಲಿಲ್ಲ; ಕೈ ತಪ್ಪಿನಿಂದ ಸಂಭವಿಸಿದ ಘಟನೆಯಾಗಿತ್ತು. ಈ ಘಟನೆಯ ನಂತರ ಮೂಸಾ (ಅ) ತಮ್ಮ ತಪ್ಪನ್ನು ಅರಿತು ಅಲ್ಲಾಹನ ಬಳಿ ತೌಬಾ ಮಾಡಿದರು. قَالَ رَبِّ إِنِّي ظَلَمْتُ نَفْسِي فَاغْفِرْ لِي ತರುವಾಯ ಅವರು, “ನನ್ನ ಪ್ರಭೂ, ನನ್ನ ಮೇಲೆ ನಾನೇ ಅಕ್ರಮವೆಸಗಿಬಿಟ್ಟೆ. ನನ್ನನ್ನು ಕ್ಷಮಿಸು” ಎಂದರು. (ಅಧ್ಯಾಯ 28: ಅಲ್ ಕಸಸ್ ಸೂಕ್ತ: 16) ಈ ಪ್ರಾರ್ಥನೆಯ ಮೂಲಕ ಮೂಸಾ (ಅ) ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಾಹನಿಂದ ಕ್ಷಮೆ ಕೇಳಿದರು. فَغَفَرَ لَهُ ۚ إِنَّهُ هُوَ الْغَفُورُ الرَّحِيمُ “ಆ ಪ್ರಕಾರ ಅಲ್ಲಾಹನು ಅವರನ್ನು ಕ್ಷಮಿಸಿದನು. ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಧ್ಯಾಯ 28: ಅಲ್ ಕಸಸ್ ಸೂಕ್ತ: 16) ಮೂಸಾ (ಅ) ಮತ್ತೊಂದು ಪ್ರಾರ್ಥನೆ ಮಾಡಿದರು: قَالَ رَبِّ بِمَا ಅَنْعَمْتَ عَلَيَّ فَلَنْ أَكُونَ ظَهِيرًا لِلْمُجْرِمِينَ ಮೂಸಾ ಹೀಗೆ ಪ್ರತಿಜ್ಞೆ ಮಾಡಿದರು: “ನನ್ನ ಪ್ರಭೂ, ನೀನು ನನ್ನ ಮೇಲೆ ಈ ಉಪಕಾರವೆಸಗಿರುವೆ. ಇನ್ನು ಮುಂದೆ ನಾನೆಂದೂ ಅಪರಾಧಿಗಳ ಸಹಾಯಕನಾಗಲಾರೆ.” (ಅಧ್ಯಾಯ 28: ಅಲ್ ಕಸಸ್ ಸೂಕ್ತ: 17) ಈ ಪ್ರಾರ್ಥನೆಯ ಮೂಲಕ ಮೂಸಾ (ಅ) ತಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಪಶ್ಚಾತ್ತಾಪದ ನಂತರ ಪ್ರತಿಯೊಬ್ಬರೂ ಮಾಡಬೇಕಾದ ಸಂಕಲ್ಪವಾಗಿದೆ.
ತನ್ನ ಸಹೋದರ ಪ್ರವಾದಿ ಮೂಸಾ (ಅ) ತಮ್ಮ ಜನರನ್ನು ಬಿಟ್ಟು ಹೋದಾಗ ಕೆಲವು ಜನರು ಕರುವನ್ನು ಪೂಜಿಸಲು ಪ್ರಾರಂಭಿಸಿದರು. ಆಗ ಪ್ರವಾದಿ ಹಾರೂನ್ (ಅ) ಅಲ್ಲಾಹನ ಬಳಿ ಕ್ಷಮೆ ಬೇಡಿದರು. قَالَ رَبِّ اغْفِرْ لِي وَلِأَخِي وَأَدْخِلْنَا فِي رَحْمَتِكَ ۖ وَأَنْتَ أَرْحَمُ الرَّاحِمِينَ ಆಗ ಮೂಸಾ, “ಓ ನನ್ನ ಪ್ರಭೂ, ನನ್ನನ್ನೂ ನನ್ನ ಸಹೋದರನನ್ನೂ ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕರುಣೆಯಲ್ಲಿ ಸೇರಿಸಿಕೋ, ನೀನು ಅತ್ಯಂತ ಕೃಪಾಳುವಾಗಿರುವೆ” ಎಂದರು. (ಅಧ್ಯಾಯ 7: ಅಲ್ ಅ’ಅರಾಫ್ ಸೂಕ್ತ: 151)
ಪ್ರವಾದಿ ದಾವೂದ್ (ಅ):
ಪ್ರವಾದಿ ದಾವೂದ್ (ಅ) ಇಸ್ರಾಯೀಲಿನ ಜನರಿಗೆ ಪ್ರವಾದಿಯಾಗಿಯೂ, ರಾಜನಾಗಿಯೂ ಇದ್ದರು. ಅವರು ನ್ಯಾಯ ಮತ್ತು ಧರ್ಮನಿಷ್ಠೆಯಿಂದ ಆಡಳಿತ ನಡೆಸುತ್ತಿದ್ದರು. ಒಂದು ದಿನ ಅವರು ತಮ್ಮ ಅರಮನೆಯಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಅವರ ಬಳಿಗೆ ನ್ಯಾಯಕ್ಕಾಗಿ ಬಂದರು. ಅವರು ಅಕಸ್ಮಾತ್ ಗೋಡೆಯನ್ನು ಹಾರಿ ಒಳಗೆ ಬಂದಿದ್ದರು. ಅವರನ್ನು ಕಂಡಾಗ ದಾವೂದ್ (ಅ) ಸ್ವಲ್ಪ ಭಯಪಟ್ಟರು. ಆ ಇಬ್ಬರಲ್ಲಿ ಒಬ್ಬನು ಹೇಳಿದನು: “ಇವನು ನನ್ನ ಸಹೋದರನು. ಅವನ ಬಳಿ ತೊಂಬತ್ತೊಂಬತ್ತು ಕುರಿಗಳಿವೆ. ನನ್ನ ಬಳಿ ಒಂದೇ ಒಂದು ಕುರಿಯಿದೆ. ಅವನು ಅದನ್ನೂ ನನಗೆ ಕೊಡಬೇಕು ಎಂದು ಹೇಳುತ್ತಾನೆ.” ಈ ಮಾತು ಕೇಳಿದ ದಾವೂದ್ (ಅ) ತಕ್ಷಣ ಆ ವ್ಯಕ್ತಿಯ ವಿರುದ್ಧ ತೀರ್ಪು ನೀಡಿದರು. ನಂತರ ಅವರಿಗೆ ತಿಳಿಯಿತು ಇದು ಅಲ್ಲಾಹನ ಪರೀಕ್ಷೆಯಾಗಿದೆಯೆಂದು. ಈ ಘಟನೆ ನಂತರ ದಾವೂದ್ (ಅ) ತಮ್ಮ ತಪ್ಪನ್ನು ಅರಿತು ಅಲ್ಲಾಹನ ಮುಂದೆ ತೌಬಾ ಮಾಡಿದರು. ಕುರ್‌ಆನ್‌ನಲ್ಲಿ ಹೀಗೆ ಹೇಳಲಾಗಿದೆ: قَالَ لَقَدْ ظَلَمَكَ بِسُؤَالِ نَعْجَتِكَ إِلَىٰ نِعَاجِهِ ۖ وَإِنَّ كَثِيرًا مِنَ الْخُلَطَاءِ لَيَبْغِي بَعْضُهُمْ عَلَىٰ بَعْضٍ إِلَّا الَّذِينَ آمَنُوا وَعَمِلُوا الصَّالِحَاتِ وَقَلِيلٌ مَا هُمْ ۗ وَظَنَّ دَاوُودُ أَنَّمَا فَتَنَّاهُ فَاسْتَغْفَرَ رَبَّهُ وَخَرَّ رَاكِعًا وَأَنَابَ ۩ ಆಗ ದಾವೂದರು- “ಇವನು ತನ್ನ ಕುರಿಗಳೊಂದಿಗೆ ನಿನ್ನ ಕುರಿಯನ್ನು ಸೇರಿಸಿಕೊಳ್ಳಲು ಆಗ್ರಹಿಸುವ ಮೂಲಕ ನಿಜಕ್ಕೂ ನಿನ್ನ ಮೇಲೆ ಅಕ್ರಮವೆಸಗಿರುವನು. ನಿಶ್ಚಯವಾಗಿಯೂ ಸಹಬಾಳುವೆ ನಡೆಸುವವರು ಹೆಚ್ಚಾಗಿ ಪರಸ್ಪರ ಅತಿರೇಕವೆಸಗುತ್ತಲೇ ಇರುತ್ತಾರೆ. ಸತ್ಯವಿಶ್ವಾಸಿಗಳಾದವರು ಮತ್ತು ಸತ್ಕರ್ಮವೆಸಗುವವರು ಮಾತ್ರ ಇದರಿಂದ ದೂರವಿರುತ್ತಾರೆ. ಇಂತಹವರು ಬಹಳ ಕಡಿಮೆ” ಎಂದು ಉತ್ತರಕೊಟ್ಟರು. (ಹೀಗೆ ಹೇಳುತ್ತಾ) ದಾವೂದರು, ವಾಸ್ತವದಲ್ಲಿ ಈ ಮೂಲಕ ನಾವು ಅವರನ್ನು ಪರೀಕ್ಷಿಸಿದೆವೆಂಬುದನ್ನು ಅರಿತುಕೊಂಡರು. ಆ ಪ್ರಕಾರ ಅವರು ತಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡಿದರು ಮತ್ತು ಸಾಷ್ಟಾಂಗವೆರಗಿ ಪಶ್ಚಾತ್ತಾಪಪಟ್ಟು ಮರಳಿದರು. (ಅಧ್ಯಾಯ 38: ಸ್ವಾದ್ ಸೂಕ್ತ: 24) ಕುರ್‌ಆನ್‌ನಲ್ಲಿ ಮುಂದುವರಿದು ಹೇಳಲಾಗಿದೆ: فَغَفَرْنَا لَهُ ذَٰلِكَ ۖ وَإِنَّ لَهُ عِنْدَنَا لَزُلْفَىٰ وَحُسْنَ مَآ “ಆಗ ನಾವು ಅವರ ಆ ತಪ್ಪನ್ನು ಕ್ಷಮಿಸಿದೆವು. ನಿಶ್ಚಯವಾಗಿಯೂ ನಮ್ಮ ಬಳಿ ಅವರಿಗಾಗಿ ನಿಕಟಸ್ಥಾನ ಹಾಗೂ ಉತ್ತಮವಾದ ಅಂತಿಮ ನೆಲೆ ಇದೆ.” (ಅಧ್ಯಾಯ 38: ಸ್ವಾದ್ ಸೂಕ್ತ: 25)
ಪ್ರವಾದಿ ಇಬ್ರಾಹೀಮ್ (ಅ):
ಪ್ರವಾದಿ ಇಬ್ರಾಹೀಮ್ (ಅ) ಅಲ್ಲಾಹನ ಏಕತ್ವವನ್ನು ಸಾರಿದ ಮಹಾನ್ ಪ್ರವಾದಿಗಳಲ್ಲಿ ಒಬ್ಬರು. ಅವರ ಜೀವನದ ಹಲವಾರು ಸಂದರ್ಭಗಳಲ್ಲಿ ಅಲ್ಲಾಹನ ಬಳಿ ದುಆ ಮತ್ತು ಇಸ್ತಿಗ್ಫಾರ್ ಮಾಡಿರುವುದನ್ನು ಕುರ್‌ಆನ್‌ನಲ್ಲಿ ಕಾಣಬಹುದು. اغْفِرْ لِي وَلِوَالِدَيَّ وَلِلْمُؤْمِنِينَ يَوْمَ يَقُومُ الْحِسَابُ “ಓ ನನ್ನ ಪ್ರಭೂ, ನನ್ನನ್ನೂ ನನ್ನ ಮಾತಾಪಿತರನ್ನೂ ಸಕಲ ಸತ್ಯವಿಶ್ವಾಸಿಗಳನ್ನೂ ವಿಚಾರಣೆ ನಡೆಸಲ್ಪಡುವ ಆ ದಿನ ಕ್ಷಮಿಸಿ ಬಿಡು.” (ಅಧ್ಯಾಯ 14: ಇಬ್ರಾಹೀಮ್ ಸೂಕ್ತ: 41) ಈ ಪ್ರಾರ್ಥನೆ ಇಬ್ರಾಹೀಮ್ (ಅ) ಅವರ ವಿನಮ್ರತೆ ಮತ್ತು ಅಲ್ಲಾಹನ ಮುಂದೆ ಅವರ ಭಕ್ತಿಯನ್ನು ತೋರಿಸುತ್ತದೆ. ಅವರು ತಮ್ಮ ಕುಟುಂಬ ಮತ್ತು ವಿಶ್ವಾಸಿಗಳಿಗಾಗಿ ಕ್ಷಮೆ ಬೇಡಿದರು; رَبَّنَا تَقَبَّلْ مِنَّا ۖ إِنَّكَ أَنْتَ السَّمِيعُ الْعَلِيمُ “ಓ ನಮ್ಮ ಪ್ರಭೂ! ನಮ್ಮಿಂದ ಈ ಸೇವೆಯನ್ನು ಸ್ವೀಕರಿಸು; ನಿಶ್ಚಯವಾಗಿಯೂ ನೀನು ಎಲ್ಲವನ್ನೂ ಆಲಿಸುವವನೂ, ಎಲ್ಲವನ್ನೂ ತಿಳಿದವನೂ ಆಗಿರುತ್ತೀ.” (ಅಧ್ಯಾಯ 2: ಅಲ್ ಬಕರಃ ಸೂಕ್ತ: 127) ಮಹಾನ್ ಪ್ರವಾದಿಯಾಗಿದ್ದರೂ ಅವರು ಯಾವುದೇ ಅಹಂ ಇಲ್ಲದೆ ಸದಾ ಅಲ್ಲಾಹನ ಬಳಿ ಕ್ಷಮೆ ಕೇಳುತ್ತಿದ್ದರು.
ಪ್ರವಾದಿ ಇಸ್ಮಾಯೀಲ್ (ಅ):
ಪ್ರವಾದಿ ಇಸ್ಮಾಯೀಲ್ (ಅ) ಪ್ರವಾದಿ ಇಬ್ರಾಹೀಮ್ (ಅ) ಅವರ ಮಗನಾಗಿದ್ದಾರೆ. ಅವರ ಜೀವನವು ಸಹನೆ, ತ್ಯಾಗ, ಸಮರ್ಪಣೆ ಮತ್ತು ಧರ್ಮನಿಷ್ಠೆ ಎಂಬ ಗುಣಗಳಿಂದ ತುಂಬಿತ್ತು. ಅವರ ಪ್ರಾರ್ಥನೆಗಳು, ವಿನಮ್ರತೆ ಮತ್ತು ಅಲ್ಲಾಹನ ಮುಂದೆ ತಲೆಬಾಗುವ ಗುಣಗಳು ತೌಬಾ ಮತ್ತು ಭಕ್ತಿಯ ಮಹತ್ವವನ್ನು ನಮಗೆ ತಿಳಿಸುತ್ತವೆ. رَبَّنَا وَاجْعَلْنَا مُسْلِمَيْنِ لَكَ وَمِنْ ذُرِّيَّتِنَا أُمَّةً مُسْلِمَةً لَكَ وَأَرِنَا مَنَاسِكَنَا وَتُبْ عَلَيْنَا ۖ إِنَّكَ أَنْتَ التَّوَّابُ الرَّحِيمُ “ಓ ಪ್ರಭೂ, ನಮ್ಮೀರ್ವರನ್ನು ನಿನ್ನ ಆಜ್ಞಾನುಸಾರಿಗಳಾಗಿ ಮಾಡು. ನಮ್ಮ ಸಂತತಿಯಲ್ಲಿ ನಿನ್ನ ಆಜ್ಞಾನುಸಾರಿಯಾದ ಒಂದು ಸಮುದಾಯವನ್ನು ಎಬ್ಬಿಸು. ನಮಗೆ ನಿನ್ನ ದಾಸ್ಯ-ಆರಾಧನೆಯ ಕ್ರಮಗಳನ್ನು ತೋರಿಸಿಕೊಡು ಮತ್ತು ನಮ್ಮ ಅಪರಾಧಗಳನ್ನು ಕ್ಷಮಿಸು. ನೀನು ಮಹಾ ಕ್ಷಮಾದಾನಿಯೂ, ಕರುಣಾನಿಧಿಯೂ ಆಗಿರುತ್ತೀಯೆ.” (ಅಧ್ಯಾಯ 2: ಅಲ್ ಬಕರಃ ಸೂಕ್ತ: 128)
ಪ್ರವಾದಿ ಈಸಾ (ಅ):
ಪ್ರವಾದಿ ಈಸಾ (ಅ) ಮರ್ಯಮ್ (ಅ) ರವರ ಮಗನಾಗಿದ್ದು ಅಲ್ಲಾಹನ ಮಹಾನ್ ದೂತರಲ್ಲಿ ಒಬ್ಬರಾಗಿದ್ದಾರೆ. ಕುರ್‌ಆನ್‌ನಲ್ಲಿ ಈಸಾ (ಅ) ಅವರ ಜೀವನ ಮತ್ತು ಅವರ ಉಪದೇಶಗಳ ಬಗ್ಗೆ ಹಲವು ಸೂಕ್ತಗಳಲ್ಲಿ ಹೇಳಲಾಗಿದೆ. ಅವರು ತಮ್ಮ ಜನರಿಗೆ ಅಲ್ಲಾಹನ ಏಕತ್ವವನ್ನು ಪಾಲಿಸಲು, ಪಾಪಗಳಿಂದ ದೂರವಿರಲು ಮತ್ತು ಅಲ್ಲಾಹನ ಬಳಿ ತೌಬಾ ಮಾಡಲು ಕರೆ ನೀಡಿದರು.
ಪ್ರವಾದಿ ನೂಹ್ (ಅ) ತಮ್ಮ ಜನರನ್ನು ಅನೇಕ ವರ್ಷಗಳ ಕಾಲ ಅಲ್ಲಾಹನ ಮಾರ್ಗಕ್ಕೆ ಕರೆದರು. ಅವರ ಮಗನು ಅವಿಶ್ವಾಸಿಗಳೊಂದಿಗೆ ಇದ್ದ ಕಾರಣ ಪ್ರವಾಹದಲ್ಲಿ ಮುಳುಗಿದಾಗ ನೂಹ್ (ಅ) ಅಲ್ಲಾಹನ ಬಳಿ ಪ್ರಾರ್ಥಿಸಿದರು. قَالَ رَبِّ إِنِّي أَعُوذُ بِكَ أَنْ أَسْأَلَكَ مَا لَيْسَ لِي بِهِ عِلْمٌ ۖ وَإِلَّا تَغْفِرْ لِي وَتَرْحَمْنِي أَكُنْ مِنَ الْخَاسِرِينَ ಆ ಕೂಡಲೇ ನೂಹ್ ಹೀಗೆಂದರು: “ಓ ನನ್ನ ಪ್ರಭೂ, ನನಗೆ ತಿಳಿದಿಲ್ಲದಿರುವುದನ್ನು ನಿನ್ನಿಂದ ಬೇಡುವುದರ ಬಗ್ಗೆ ನಾನು ನಿನ್ನ ಅಭಯ ಯಾಚಿಸುತ್ತೇನೆ. ನೀನು ನನ್ನನ್ನು ಕ್ಷಮಿಸದಿದ್ದರೆ ಹಾಗೂ ನನ್ನ ಮೇಲೆ ದಯೆ ತೋರದಿದ್ದರೆ ನಾನು ನಷ್ಟ ಹೊಂದುವವರಲ್ಲಾಗುವೆನು.” (ಅಧ್ಯಾಯ 11: ಹೂದ್ ಸೂಕ್ತ: 47) ಕುರ್‌ಆನ್‌ನಲ್ಲಿ ಪ್ರವಾದಿ ನೂಹ್ (ಅ)ರ ಮೂಲಕ ಹೇಳಲಾಗಿದೆ: فَقُلْتُ اسْتَغْفِرُوا رَبَّكُمْ إِنَّهُ كَانَ غَفَّارًا ನಾನು (ಹೀಗೆ) ಹೇಳಿದೆನು: “ನಿಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ಮಾಡಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ.” (ಅಧ್ಯಾಯ 71: ನೂಹ್ ಸೂಕ್ತ: 10)
ಪ್ರವಾದಿ ಝಕರೀಯಾ (ಅ) ಸದಾ ಅಲ್ಲಾಹನ ಬಳಿ ಪ್ರಾರ್ಥನೆ ಮಾಡುತ್ತಿದ್ದರು. ಅವರು ಅಲ್ಲಾಹನ ಕರುಣೆ ಮತ್ತು ಕ್ಷಮೆಯನ್ನು ಬೇಡುತ್ತಿದ್ದರು; وَزَكَرِيَّا إِذْ نَادَىٰ رَبَّهُ رَبِّ لَا تَذَرْنِي فَرْدًا وَأَنْتَ خَيْرُ الْوَارِثِينَ “’ಝಕರಿಯ್ಯಾ’ (ರಿಗೂ ನಾವು ಅನುಗ್ರಹ ನೀಡಿದೆವು) ಅವರು, “ನನ್ನ ಪ್ರಭೂ ನನ್ನನ್ನು ಏಕಾಂಗಿಯಾಗಿ ಬಿಟ್ಟುಬಿಡಬೇಡ. ಅತ್ಯುತ್ತಮ ವಾರೀಸುದಾರ ನೀನೇ ಆಗಿರುತ್ತೀ” ಎಂದು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ.” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 89)
ಪ್ರವಾದಿ ಸ್ವಾಲಿಹ್ (ಅ):
ಪ್ರವಾದಿ ಸ್ವಾಲಿಹ್ (ಅ) ತಮ್ಮ ಜನರನ್ನು ಅಲ್ಲಾಹನ ಬಳಿ ತೌಬಾ ಮಾಡಲು ಕರೆ ನೀಡಿದರು. وَإِلَىٰ ثَمُودَ أَخَاهُمْ صَالِحًا ۚ قَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ هُوَ أَنْشَأَكُمْ مِنَ الْأَرْضِ وَاسْتَعْمَرَكُمْ فِيهَا فَاسْتَغْفِرُوهُ ثُمَّ تُوبُوا إِلَيْهِ ۚ إِنَّ رَبِّಿ قَرِيبٌ مُجِيبٌ “ನಾವು ಸಮೂದರ ಕಡೆಗೆ ಅವರ ಬಂಧು ಸಾಲಿಹರನ್ನು ಕಳುಹಿಸಿದೆವು. ಅವರು (ಹೀಗೆ) ಹೇಳಿದರು: “ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನ ಹೊರತು ಇನ್ನಾರೂ ನಿಮ್ಮ ಆರಾಧ್ಯನಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಇಲ್ಲಿ ನೆಲೆಗೊಳಿಸಿದನು. ಆದುದರಿಂದ ನೀವು ಅವನೊಡನೆ ಕ್ಷಮೆಯಾಚಿಸಿರಿ ಮತ್ತು ಪಶ್ಚಾತ್ತಾಪಪಟ್ಟು ಆತನೆಡೆಗೆ ಮರಳಿರಿ. ನಿಶ್ಚಯವಾಗಿಯೂ ನನ್ನ ಪ್ರಭು ನಿಕಟನೂ ಪ್ರಾರ್ಥನೆಗಳಿಗೆ ಉತ್ತರ ಕೊಡುವವನೂ ಆಗಿರುತ್ತಾನೆ.” (ಅಧ್ಯಾಯ 11: ಹೂದ್ ಸೂಕ್ತ: 61)
ಪ್ರವಾದಿ ಯೂಸುಫ್ (ಅ):
ಪ್ರವಾದಿ ಯೂಸುಫ್ (ಅ) ತಮ್ಮ ಸಹೋದರರು ಮಾಡಿದ ತಪ್ಪುಗಳನ್ನು ಕ್ಷಮಿಸಿದರು ಮತ್ತು ಅಲ್ಲಾಹನ ಕರುಣೆಯನ್ನು ನೆನಪಿಸಿದರು. قَالَ لَا تَثْرೀبَ عَلَيْكُمُ الْيَوْمَ ۖ يَغْفِرُ اللَّهُ لَكُمْ ۖ وَهُوَ أَرْحَمُ الرَّاحِمِينَ ಆಗ ಅವರು, “ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆಯೂ ಇಲ್ಲ. ಅಲ್ಲಾಹ್ ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತಲೂ ಮಿಗಿಲಾದ ದಯಾಮಯನಾಗಿರುತ್ತಾನೆ.” (ಅಧ್ಯಾಯ 12: ಯೂಸುಫ್ ಸೂಕ್ತ: 92)
ಪ್ರವಾದಿ ಯಾಕೂಬ್ (ಅ):
ಪ್ರವಾದಿ ಯಾಕೂಬ್ (ಅ) ತಮ್ಮ ಮಕ್ಕಳಿಗೆ ಅಲ್ಲಾಹನ ಬಳಿ ಕ್ಷಮೆ ಬೇಡುವುದಾಗಿ ಹೇಳಿದರು. قَالَ سَوْفَ أَسْتَغْفِرُ لَكُمْ رَبِّي ۖ إِنَّهُ هُوَ الْغَفُورُ الرَّحِيمُ ಆಗ ಅವರು, “ನಾನು ನನ್ನ ಪ್ರಭುವಿನೊಡನೆ ನಿಮ್ಮನ್ನು ಕ್ಷಮಿಸಲಿಕ್ಕಾಗಿ ಪ್ರಾರ್ಥಿಸುವೆನು. ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ” ಎಂದರು. (ಅಧ್ಯಾಯ 12: ಯೂಸುಫ್ ಸೂಕ್ತ: 98)
ಪ್ರವಾದಿ ಮುಹಮ್ಮದ್ (ಸ):
ಪ್ರವಾದಿ ಮುಹಮ್ಮದ್ (ಸ) ಸದಾ ಅಲ್ಲಾಹನ ಬಳಿ ಕ್ಷಮೆ ಕೇಳುತ್ತಿದ್ದರು. ಕುರ್‌ಆನ್‌ನಲ್ಲಿ ಪ್ರವಾದಿ ಮುಹಮ್ಮದ್ (ಸ) ರವರಿಗೆ ತೌಬಾ ಮತ್ತು ಇಸ್ತಿಗ್ಫಾರ್ ಮಾಡುವಂತೆ ಹೇಳಲಾಗಿದೆ. فَاعْلَمْ أَنَّهُ لَا إِلَٰهَ إِلَّا اللَّهُ وَاسْتَغْفِرْ لِذَنْبِكَ وَلِلْمُؤْمِنِينَ وَالْمُؤْمِنَاتِ ۗ وَاللَّهُ يَعْلَمُ مُتَقَلَّبَكُمْ وَمَثْوَاكُمْ “ಆದುದರಿಂದ ಸಂದೇಶವಾಹಕರೇ, ಅಲ್ಲಾಹನ ಹೊರತು ಇತರ ಆರಾಧ್ಯರಾರೂ ಇಲ್ಲವೆಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿರಿ ಮತ್ತು ಕ್ಷಮೆಯಾಚಿಸಿರಿ; ನಿಮ್ಮ ತಪ್ಪಿಗಾಗಿಯೂ ಸತ್ಯವಿಶ್ವಾಸಿ ಸ್ತ್ರೀ-ಪುರುಷರಿಗಾಗಿಯೂ. ಅಲ್ಲಾಹನು ನಿಮ್ಮ ಚಟುವಟಿಕೆಗಳನ್ನು ಬಲ್ಲನು ಮತ್ತು ನಿಮ್ಮ ಅಂತಿಮ ನೆಲೆಯನ್ನೂ ಬಲ್ಲನು.” (ಅಧ್ಯಾಯ 47: ಮುಹಮ್ಮದ್ ಸೂಕ್ತ: 19) ಪ್ರವಾದಿ ಮುಹಮ್ಮದ್ (ಸ) ಸ್ವತಃ ದಿನದಲ್ಲಿ ಅನೇಕ ಬಾರಿ ತೌಬಾ ಮಾಡುತ್ತಿದ್ದರು. وَاللّٰهِ إِنِّي لَأَسْتَغْفِرُ اللّٰهَ وَأَت إِلَيْهِ فِي الْيَوْمِ أَكْثَرَ مِنْ سَبْعِينَ مَرَّةً “ಅಲ್ಲಾಹ್‌ಗಾಗಿ ಹೇಳುತ್ತೇನೆ, ನಾನು ದಿನದಲ್ಲಿ ಎಪ್ಪತ್ತು ಬಾರಿಗಿಂತ ಹೆಚ್ಚು ಅಲ್ಲಾಹನ ಬಳಿ ಕ್ಷಮೆ ಕೇಳುತ್ತೇನೆ ಮತ್ತು ಅವನ ಕಡೆ ತೌಬಾ ಮಾಡುತ್ತೇನೆ.” (ಸಹೀಹ್ ಬುಖಾರಿ) ಮತ್ತೊಂದು ಹದೀಸ್‌ನಲ್ಲಿ: ಯಾ ಅಯ್ಯುಹನ್-ನಾಸು ತೂಬೂ ಇಲಲ್ಲಾಹಿ ಫಇನ್ನೀ ಅತೂಬು ಇಲೈಹಿ ಫಿಲ್ ಯೌಮಿ ಮಿಅತ ಮರ್ರತಿ “ಓ ಜನರೇ! ಅಲ್ಲಾಹನ ಕಡೆ ತೌಬಾ ಮಾಡಿರಿ. ನಾನು ದಿನದಲ್ಲಿ ನೂರು ಬಾರಿ ಅಲ್ಲಾಹನ ಕಡೆ ತೌಬಾ ಮಾಡುತ್ತೇನೆ.” (ಸಹೀಹ್ ಮುಸ್ಲಿಂ)
ತೌಬಾ (ಪಶ್ಚಾತ್ತಾಪ) ಮಾಡುವಾಗ ಅಲ್ಲಾಹನ ಬಳಿ ಕ್ಷಮೆ ಬೇಡುವ ಹಲವು ಮಹತ್ವದ ದುವಾ (ಪ್ರಾರ್ಥನೆ)ಗಳನ್ನು ಕುರ್‌ಆನ್ ಮತ್ತು ಹದೀಸ್ ನಮಗೆ ಕಲಿಸಿವೆ. ಅದನ್ನು “ಸಯ್ಯಿದುಲ್ ಇಸ್ತಿಗ್ಫಾರ್” ಎಂದು ಕರೆಯಲಾಗುತ್ತದೆ. ಈ ದುವಾಗಳನ್ನು ಪಠಿಸುವುದು ಮುಸ್ಲಿಮನ ಜೀವನದಲ್ಲಿ ಆಧ್ಯಾತ್ಮಿಕ ಶಾಂತಿ ಮತ್ತು ಅಲ್ಲಾಹನ ಕರುಣೆಯನ್ನು ತರಲು ಸಹಾಯಕವಾಗುತ್ತದೆ ಹಾಗೂ ಮನುಷ್ಯನ ಪಾಪಗಳ ಕ್ಷಮೆಗಾಗಿ ಬಹಳ ಉಪಯುಕ್ತವಾಗಿದೆ.
ಇಸ್ತಿಗ್ಫಾರ್‌ಗಾಗಿ ಪ್ರವಾದಿ ಕಲಿಸಿದ ದೈನಂದಿನ ದುಆಗಳು: اللَّهُمَّ أَنْتَ رَبِّي لَا إِلٰهَ إِلَّا أَنْتَ خَلَقْتَنِي وَأَنَا عَبْدُكَ… ಅಸ್ತಗ್ಫಿರುಲ್ಲಾಹ ವ ಅತೂಬು ಇಲೈಹಿ ಅರ್ಥ: “ನಾನು ಅಲ್ಲಾಹನಿಂದ ಕ್ಷಮೆ ಕೇಳುತ್ತೇನೆ ಮತ್ತು ಅವನ ಕಡೆಗೆ ತೌಬಾ ಮಾಡುತ್ತೇನೆ.” ರಬ್ಬಿಘ್‌ಫಿರ್ ಲೀ ವ ತೌಬ್ ಅಲೈಯ್ಯ ಇನ್ನಕ ಅಂತತ್-ತವ್ವಾಬುರ್-ರಹೀಮ್ ಅರ್ಥ: “ಓ ನನ್ನ ರಬ್ಬೇ! ನನಗೆ ಕ್ಷಮಿಸು ಮತ್ತು ನನ್ನ ತೌಬಾವನ್ನು ಸ್ವೀಕರಿಸು.” ಅಲ್ಲಾಹುಮ್ಮಘ್‌ಫಿರ್ ಲೀ ಝಂಬೀ ಕುಲ್ಲಹು ದಿಕ್ಕಹು ವ ಜಿಲ್ಲಹು ಅರ್ಥ: “ಓ ಅಲ್ಲಾಹ್! ನನ್ನ ಸಣ್ಣ ದೊಡ್ಡ ಎಲ್ಲಾ ಪಾಪಗಳನ್ನು ಕ್ಷಮಿಸು.” ಅಲ್ಲಾಹುಮ್ಮಘ್‌ಫಿರ್ ಲೀ ವರ್-ಹಮ್ನೀ ವಹ್-ದಿನೀ ಅರ್ಥ: “ಓ ಅಲ್ಲಾಹ್! ನನಗೆ ಕ್ಷಮಿಸು, ಕರುಣೆ ತೋರಿಸು ಮತ್ತು ಸರಿಯಾದ ಮಾರ್ಗ ತೋರಿಸು.” ರಬ್ಬಿಘ್‌ಫಿರ್ ಲೀ ವ ಲಿವಾಲಿದಯ್ಯ ಅರ್ಥ: “ಓ ನನ್ನ ರಬ್ಬೇ! ನನಗೆ ಮತ್ತು ನನ್ನ ಪೋಷಕರಿಗೆ ಕ್ಷಮೆ ನೀಡು.” ರಬ್ಬನಾಘ್‌ಫಿರ್ ಲನಾ ಝುನೂಬನಾ ವ ಕಫಿರ್ ಅನ್ನಾ ಸಯ್ಯಿಆತಿನಾ ಅರ್ಥ: “ಓ ನಮ್ಮ ರಬ್ಬೇ! ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ತಪ್ಪುಗಳನ್ನು ದೂರಮಾಡು.” ಅಲ್ಲಾಹುಮ್ಮಘ್‌ಫಿರ್ ಲೀ ಖತೀಅತೀ ವ ಜಹ್-ಲೀ ಅರ್ಥ: “ಓ ಅಲ್ಲಾಹ್! ನನ್ನ ತಪ್ಪು ಮತ್ತು ಅಜ್ಞಾನವನ್ನು ಕ್ಷಮಿಸು.” ಅಲ್ಲಾಹುಮ್ಮ ಇನ್ನೀ ಝಲಮ್ತು ನಫ್ಸೀ ಝುಲ್ಮನ್ ಕಸೀರನ್ ಅರ್ಥ: “ಓ ಅಲ್ಲಾಹ್! ನಾನು ನನ್ನ ಮೇಲೆ ಬಹಳ ಅನ್ಯಾಯ ಮಾಡಿಕೊಂಡಿದ್ದೇನೆ.” ರಬ್ಬನಾ ಲಾ ತುಝಿಘ್ ಕುಲೂಬನಾ ಬಅ್ದ ಇಜ್ ಹದೈತನಾ ಅರ್ಥ: “ಓ ನಮ್ಮ ರಬ್ಬೇ! ನಮಗೆ ಮಾರ್ಗದರ್ಶನ ನೀಡಿದ ನಂತರ ನಮ್ಮ ಹೃದಯಗಳನ್ನು ತಪ್ಪಿಸಬೇಡ.” ಅಲ್ಲಾಹುಮ್ಮ ತಹೀರ್ ಖಲ್ಬೀ ಮಿನಜ್-ಝುನೂಬ್ ಅರ್ಥ: “ಓ ಅಲ್ಲಾಹ್! ನನ್ನ ಹೃದಯವನ್ನು ಪಾಪಗಳಿಂದ ಶುದ್ಧಗೊಳಿಸು.” ಈ ದುವಾಗಳನ್ನು ದಿನನಿತ್ಯ ಓದುವುದರಿಂದ ಅಲ್ಲಾಹನ ಕ್ಷಮೆ ದೊರೆಯುತ್ತದೆ, ಹೃದಯ ಶುದ್ಧವಾಗುತ್ತದೆ ಮತ್ತು ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಶ್ಚಾತ್ತಾಪ, ಅಲ್ಲಾಹನ ಭಯ ಮತ್ತು ವಿನಮ್ರತೆ ಇವು ಭಕ್ತಿಯ ಪ್ರತೀಕವಾಗಿದೆ.