ಜಲ ಸಂಪತ್ತು: ಪ್ರಕೃತಿಯ ವಿಸ್ಮಯ ಮತ್ತು ಧರ್ಮಗಳ ದೃಷ್ಟಿಕೋನ
ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ (ಶಿಕ್ಷಕ)
ನೀರು ಪ್ರಪಂಚದ ಎಲ್ಲಾ ಜೀವಿಗಳಿಗೂ ಅತೀ ಅಗತ್ಯವಾದ ಪ್ರಾಕೃತಿಕ ಸಂಪತ್ತಾಗಿದೆ. ಮಾನವ, ಪ್ರಾಣಿ, ಜಂತು ಮತ್ತು ಸಸ್ಯಗಳಾದಿ ಜೀವಿಗಳ ಬದುಕು ನೀರಿನ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ನೀರನ್ನು “ಜೀವದ ಮೂಲ” ಎಂದು ಕರೆಯುತ್ತಾರೆ. ಅಲ್ಲಾಹನು ಹೇಳುತ್ತಾನೆ: “ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನು ಕಾಣಲಿಲ್ಲವೇ?” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 30)
ಮುಖ್ಯವಾಗಿ ಮಾನವನ ದೈನಂದಿನ ಜೀವನದಲ್ಲಿ ಅತೀ ಹೆಚ್ಚು ನೀರಿನ ಬಳಕೆಯಾಗುತ್ತದೆ. ಕುಡಿಯಲು, ಅಡುಗೆ ಮಾಡಲು, ಸ್ನಾನಕ್ಕೆ, ಕೃಷಿಗೆ, ಕೈಗಾರಿಕೆಗಳಿಗೆ ಹಾಗೂ ಸ್ವಚ್ಛತೆಗೆ ನೀರು ಬೇಕಾಗುತ್ತದೆ. ನೀರಿಲ್ಲದೆ ಆಹಾರ ಉತ್ಪಾದನೆ ಸಾಧ್ಯವಿಲ್ಲ. ಅಗತ್ಯ ವಸ್ತುಗಳ ಆಮದು-ರಫ್ತುಗಳು, ವ್ಯವಹಾರ ಮತ್ತು ಸಂಚಾರಗಳು ಜಲಮಾರ್ಗದ ಮೂಲಕ ನಡೆಯುವುದರಿಂದ ಅಲ್ಲಿಯೂ ನೀರಿನ ಅಗತ್ಯತೆ ಇದೆ. ಕುರ್ಆನ್ ಹೇಳುತ್ತದೆ: “ಅಲ್ಲಾಹನೇ ನಿಮಗಾಗಿ ಸಮುದ್ರವನ್ನು ನಿಯಂತ್ರಿಸಿ, ಅವನ ಅಪ್ಪಣೆಯಿಂದ ಅದರಲ್ಲಿ ನಾವೆಗಳು ಚಲಿಸುವಂತೆಯೂ ನೀವು ಅವನ ಅನುಗ್ರಹವನ್ನರಸುವಂತೆಯೂ ಕೃತಜ್ಞರಾಗುವಂತೆಯೂ ಮಾಡಿರುವನು.” (ಅಧ್ಯಾಯ 45: ಅಲ್ ಜಾಸಿಯಃ ಸೂಕ್ತ: 12)
ಅನಾದಿಕಾಲದಿಂದಲೂ ವ್ಯವಹಾರ, ಸಂಚಾರಗಳು ನೀರನ್ನು ಅವಲಂಬಿಸಿವೆ. ನದಿ, ಸಮುದ್ರ, ಕನಾಲುಗಳ ಮೂಲಕ ಮನುಷ್ಯ ಸಂಬಂಧಗಳು ಬಲಗೊಂಡಿವೆ ಮತ್ತು ಸಾಂಸ್ಕೃತಿಕ, ಧಾರ್ಮಿಕ ವಿನಿಮಯವೂ ನಡೆದಿದೆ. ಆಹಾರದ ಉತ್ಪಾದನೆ ಆ ಮೂಲಕ ನಡೆಯುತ್ತದೆ. ಕುರ್ಆನ್ ಹೇಳುತ್ತದೆ: ನಿಮಗಾಗಿ ಸಮುದ್ರಗಳನ್ನು ನಿಯಂತ್ರಿಸಿ ನೀವು ಅದರಿಂದ ತಾಜಾ ಮಾಂಸ ಪಡೆದು ತಿನ್ನಲಾಗುವಂತೆಯೂ, ಅದರಿಂದ ನೀವು ಧರಿಸುವ ಅಲಂಕಾರ ಸಾಧನಗಳನ್ನು ಹೊರತೆಗೆಯುವಂತೆಯೂ ಮಾಡಿದವನು ಅವನೇ. ನಾವೆಯು ಸಮುದ್ರದ ಹೃದಯವನ್ನು ಸೀಳುತ್ತ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇವೆಲ್ಲ ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ ಆಗಿರುತ್ತದೆ. (ಅಧ್ಯಾಯ 16: ಅನ್ನಹ್ಲ್ ಸೂಕ್ತ: 14)
ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆದ ಅನೇಕ ಯುದ್ಧಗಳು, ಹೋರಾಟಗಳು ನೀರಿನ ಮೇಲೆ ಪ್ರಾಬಲ್ಯ ಸ್ಥಾಪಿಸಲು ನಡೆದಿವೆ. ಇತ್ತೀಚೆಗೆ ನಡೆಯುವ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಂತರಿಕ ಸಮಸ್ಯೆಗಳ ಪೈಕಿ ನೀರು ಪ್ರಮುಖ ಕಾರಣವಾಗಿ ಗೋಚರಿಸುತ್ತದೆ. ಡ್ಯಾಮುಗಳನ್ನು ನಿರ್ಮಿಸಿ ನೀರನ್ನು ತಡೆಯುವ ಮೂಲಕ, ಜಲ ಸಂಚಾರಕ್ಕೆ ನಿರ್ಬಂಧ ಹೇರುವ ಮೂಲಕ ಒಂದು ಪ್ರದೇಶ ಇನ್ನೊಂದು ಪ್ರದೇಶದ ಮೇಲೆ ತನ್ನ ಶಕ್ತಿಯನ್ನು ಪ್ರದರ್ಶಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಭೂಮಿಯ ಮೇಲ್ಮೈಯ ಸುಮಾರು 70% ಭಾಗ ನೀರಿದೆ, ಆದರೆ ಕುಡಿಯಲು ಯೋಗ್ಯವಾದ ಶುದ್ಧ ನೀರು ಕೇವಲ ಶೇ. 3% ರಷ್ಟು ಮಾತ್ರ. ಮಾನವ ದೇಹದ ಸುಮಾರು 60–70% ಭಾಗ ನೀರಿನಿಂದ ಕೂಡಿದೆ. ಜೀರ್ಣಕ್ರಿಯೆ, ರಕ್ತ ಸಂಚಾರ, ದೇಹದ ತಾಪಮಾನ ನಿಯಂತ್ರಣ ಮತ್ತು ಇತರ ಪ್ರಕ್ರಿಯೆಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ.
ವೈಜ್ಞಾನಿಕವಾಗಿ ನೀರು ಒಂದು ಮೂಲಭೂತ ರಾಸಾಯನಿಕ ಸಂಯೋಗವಾಗಿದ್ದು ಅದರ ಸೂತ್ರ H_2O ಆಗಿದೆ. ಅಂದರೆ ಒಂದು ನೀರಿನ ಅಣುವಿನಲ್ಲಿ ಎರಡು ಹೈಡ್ರೋಜನ್ ಅಣುಗಳು ಮತ್ತು ಒಂದು ಆಮ್ಲಜನಕ ಅಣು ಇರುತ್ತವೆ. ನೀರು ಅತ್ಯುತ್ತಮ ದ್ರಾವಕ (universal solvent) ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಏಕೆಂದರೆ, ಅದು ಅನೇಕ ಪದಾರ್ಥಗಳನ್ನು ಕರಗಿಸಬಲ್ಲದು.
ಭೌತಿಕವಾಗಿ ನೀರಿಗೆ ಮೂರು ಸ್ಥಿತಿಗಳಿವೆ – ಘನ, ದ್ರವ ಮತ್ತು ಅನಿಲ. ನೀರು ನಿರಂತರವಾಗಿ ಬಾಷ್ಪೀಕರಣ (Evaporation), ಸಾಂದ್ರೀಕರಣ (Condensation), ಮಳೆ (Precipitation) ಪ್ರಕ್ರಿಯೆಗಳ ಮೂಲಕ ಚಲಿಸುತ್ತಿರುತ್ತದೆ. ಇದನ್ನು ಜಲಚಕ್ರ (Water Cycle) ಎಂದು ಕರೆಯುತ್ತಾರೆ. ಪ್ರಮುಖ ನೀರಿನ ಮೂಲಗಳೆಂದರೆ: ಮಳೆ ನೀರು, ನದಿಗಳು, ಸರೋವರಗಳು, ಕೆರೆಗಳು, ಕೊಳಗಳು, ತೊರೆಗಳು, ಅಂತರ್ಜಲ, ಹಿಮನದಿಗಳು ಮತ್ತು ಸಾಗರಗಳು. ಸಮುದ್ರಗಳು ಭೂಮಿಯ ಮೇಲಿನ ಅತಿದೊಡ್ಡ ನೀರಿನ ಮೂಲಗಳಾಗಿವೆ.
ನೀರು ದೇವನ ಮಹಾ ಕೊಡುಗೆ:
ಅಲ್ಲಾಹನು ಕುರ್ಆನಿನಲ್ಲಿ ಹೀಗೆ ಹೇಳುತ್ತಾನೆ: “ನೀವು ನೋಡುತ್ತಿಲ್ಲವೇ? ಅಲ್ಲಾಹನು ಆಕಾಶದಿಂದ ನೀರು ಸುರಿಸಿದನು. ಅನಂತರ ಅದನ್ನು ಚಿಲುಮೆ ಮತ್ತು ನದಿಗಳ ರೂಪದಲ್ಲಿ ಭೂಮಿಯೊಳಗೆ ಹರಿಸಿದನು. ತರುವಾಯ ಆ ನೀರಿನ ಮೂಲಕ ಅವನು ವಿವಿಧ ಜಾತಿಯ ವಿಭಿನ್ನ ಬೆಳೆಗಳನ್ನು ಹೊರತೆಗೆಯುತ್ತಾನೆ. ಅನಂತರ ಆ ಬೆಳೆಗಳು ಹಣ್ಣಾಗಿ ಒಣಗುತ್ತವೆ. ಆಗ ಅವು ಹಳದಿಯಾಗಿಬಿಡುವುದನ್ನು ನೀವು ನೋಡುತ್ತೀರಿ. ಕೊನೆಗೆ ಅಲ್ಲಾಹನು ಅವುಗಳನ್ನು ಹೊಟ್ಟಾಗಿ ಮಾಡಿಬಿಡುತ್ತಾನೆ. ವಾಸ್ತವದಲ್ಲಿ ಇದರಲ್ಲಿ ಬುದ್ಧಿಜೀವಿಗಳಿಗೆ ಒಂದು ಪಾಠವಿದೆ”. (ಅಧ್ಯಾಯ 39: ಅಝ್ಝುಮರ್ ಸೂಕ್ತ: 21)
ನಿಜವಾಗಿಯೂ ನೀರು ಮನುಷ್ಯನಿಗೆ ದೊರೆತ ದೊಡ್ಡ ಅನುಗ್ರಹವಾಗಿದೆ. ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ ಎಂಬುವುದು ದೇವನ ಆದೇಶವಾಗಿದೆ. ಆದ್ದರಿಂದ ಭೂವಾಸಿಗಳಾದ ಎಲ್ಲಾ ಜೀವಿಗಳು ನೀರಿನ ಸರಿಸಮಾನ ಹಕ್ಕುದಾರರಾಗಿರುತ್ತಾರೆ. ಇನ್ನೊಂದು ಜೀವಿಯ ನೀರಿನ ಅಗತ್ಯತೆಯನ್ನು ಪೂರೈಸುವುದು ಪ್ರತಿಯೊಬ್ಬನ ಕಡ್ಡಾಯ ಕಾರ್ಯವಾಗಿದೆ. ಪ್ರವಾದಿ ಮುಹಮ್ಮದ್ (ಸ) ಹೇಳುತ್ತಾರೆ: “ಅತ್ಯುತ್ತಮ ದಾನ ಅದು ನೀರುಣಿಸುವುದಾಗಿದೆ” (ಸುನನ್ ಅಲ್-ನಸಾಯಿ).
ನೀರು ಎಲ್ಲಾ ಧರ್ಮಗಳಲ್ಲಿಯೂ ಪವಿತ್ರತೆ, ಶುದ್ಧತೆ ಮತ್ತು ಜೀವದ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ. ಎಲ್ಲಾ ಧರ್ಮಗಳು ನೀರನ್ನು ದೈವಿಕ ವರವಾಗಿ ಕಾಣುತ್ತವೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಅದರ ಮಹತ್ವವನ್ನು ಒತ್ತಿಹೇಳುತ್ತವೆ. ಹಿಂದೂ ಧರ್ಮದಲ್ಲಿ ನದಿಗಳನ್ನು ಪವಿತ್ರವಾಗಿ ಕಾಣಲಾಗುತ್ತದೆ. ಶುದ್ಧೀಕರಣ ವಿಧಿಗಳಲ್ಲಿ ನೀರನ್ನು ಬಳಸುತ್ತಾರೆ. ಗಂಗಾಜಲವನ್ನು ಮನೆಗಳಲ್ಲಿ ಪವಿತ್ರ ನೀರಾಗಿ ಸಂಗ್ರಹಿಸುವ ಪದ್ಧತಿ ಇದೆ.
ಕ್ರೈಸ್ತ ಧರ್ಮದಲ್ಲಿಯೂ ನೀರು ಶುದ್ಧೀಕರಣ ಮತ್ತು ಹೊಸ ಜೀವನದ ಸಂಕೇತವಾಗಿದೆ. ಬಾಪ್ಟಿಸಂ (ದೀಕ್ಷಾಸ್ನಾನ) ವಿಧಿಯಲ್ಲಿ ನೀರನ್ನು ಬಳಸಲಾಗುತ್ತದೆ. ಇದು ಪಾಪಗಳಿಂದ ಶುದ್ಧೀಕರಣ ಮತ್ತು ಆಧ್ಯಾತ್ಮಿಕ ಪುನರ್ಜನ್ಮವನ್ನು ಸೂಚಿಸುತ್ತದೆ. ಬೌದ್ಧ ಧರ್ಮದಲ್ಲಿ ನೀರು ಶಾಂತಿ, ಸ್ವಚ್ಛತೆ ಮತ್ತು ದಾನಶೀಲತೆಯ ಸಂಕೇತವಾಗಿದೆ. ದೇವಾಲಯಗಳಲ್ಲಿ ನೀರನ್ನು ಅರ್ಪಿಸುವುದು ವಿನಯ ಮತ್ತು ಶುದ್ಧ ಮನಸ್ಸಿನ ಸೂಚಕವಾಗಿ ಕಾಣಲಾಗುತ್ತದೆ. ಧಾರ್ಮಿಕ ದೃಷ್ಟಿಯಿಂದ ನೀರು ಕೇವಲ ಪ್ರಕೃತಿ ಸಂಪತ್ತಷ್ಟೇ ಅಲ್ಲ, ಅದು ಪವಿತ್ರತೆ, ಜೀವ ಮತ್ತು ದೈವಿಕ ಕೃಪೆಯ ಪ್ರತೀಕವಾಗಿದೆ. ಆದ್ದರಿಂದ ಎಲ್ಲಾ ಧರ್ಮಗಳೂ ನೀರನ್ನು ಗೌರವದಿಂದ ಬಳಸಿ, ಅದನ್ನು ಸಂರಕ್ಷಿಸಲು ಪ್ರೇರೇಪಿಸುತ್ತವೆ. ಇಸ್ಲಾಮ್ನಲ್ಲಿ ನೀರು ಶುದ್ಧತೆಯ ಮುಖ್ಯ ಸಾಧನವಾಗಿದೆ. ಝಂ ಝಂ ನೀರು ಪವಿತ್ರ ನೀರಾಗಿ ಪ್ರಸಿದ್ಧಿ ಪಡೆದಿದೆ. ಮುಸ್ಲಿಮರ ಕಡ್ಡಾಯ ಪ್ರಾರ್ಥನೆ ನಮಾಝ್ಗಾಗಿ ‘ವುದೂ'(ಅಂಗಸ್ನಾನ) ಮಾಡಲು ನೀರು ಅತೀ ಅಗತ್ಯವಾಗಿದೆ. ಪ್ರವಾದಿ ಮುಹಮ್ಮದ್ (ಸ) ರವರು ನೀರಿನ ಸರಿಯಾದ ಬಳಕೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನೀರಿನ ಪ್ರಾಮುಖ್ಯತೆ ಮತ್ತು ಅದರ ವಿಸ್ಮಯದ ಬಗ್ಗೆ ಅಲ್ಲಾಹನು ಕುರ್ಆನಿನಲ್ಲಿ ಅನೇಕ ಕಡೆಗಳಲ್ಲಿ ವಿವರಿಸಿದ್ದಾನೆ. ಮುಖ್ಯವಾಗಿ ಅಲ್ಲಾಹನು ಹೀಗೆ ಹೇಳುತ್ತಾನೆ: “ಆಕಾಶದಿಂದ ನೀರನ್ನು ಇಳಿಸಿ, ಸತ್ತ ಭೂಮಿಗೆ ಜೀವ ನೀಡುತ್ತಾನೆ…” (ಅಧ್ಯಾಯ 2: ಅಲ್ ಬಕರ : 164)
ಭೂಮಿಯಲ್ಲಿ ನೀರು ಮನುಷ್ಯನಿಗೆ ಮತ್ತು ಇತರ ಜೀವಿಗಳಿಗೆ ಹೇಗೆ ಒದಗುತ್ತದೆ? ಅದರ ಮೂಲಗಳು ಯಾವುವು? ಎಂಬುದನ್ನು ಕುರ್ಆನ್ ವೈಜ್ಞಾನಿಕವಾಗಿ ವಿವರಿಸಿಕೊಡುತ್ತದೆ. ಪ್ರವಾದಿ ಮುಹಮ್ಮದ್ (ಸ) ರವರು ತನ್ನ ಬದುಕಿನುದ್ದಕ್ಕೂ ನೀರಿನ ಮಹತ್ವ ಮತ್ತು ಅದರ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಇಸ್ಲಾಮಿಕ್ ಕರ್ಮಶಾಸ್ತ್ರ (ಫಿಖ್ಹ್) ದಲ್ಲಿ ನೀರಿನ ವಿಧಗಳ ಬಗ್ಗೆ, ಶುದ್ಧ ಮತ್ತು ಅಶುದ್ಧದ ಬಗ್ಗೆ ನಿಯಮಗಳನ್ನು ವಿವರಿಸುತ್ತದೆ. ಹೀಗೆ ಇಸ್ಲಾಮಿನ ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ ನೀರಿಗೆ ಮತ್ತು ಅದರ ಬಳಕೆಗೆ ವಿಶೇಷ ಮಾರ್ಗದರ್ಶನ ಹಾಗೂ ಮಹತ್ವವನ್ನು ಕಲ್ಪಿಸಲಾಗಿದೆ.
ಮನುಷ್ಯನು ತನಗೆ ದೊರೆತ ದೇವನ ಅನೇಕ ಆಶೀರ್ವಾದಗಳಿಗೆ ಒಗ್ಗಿಕೊಂಡಾಗ ಅವುಗಳ ಬಳಕೆಯ ಮಿತಿಯನ್ನು ಮರೆತುಬಿಡುತ್ತಾನೆ, ಹಗುರವಾಗಿ ಪರಿಗಣಿಸುತ್ತಾನೆ. ಮನುಷ್ಯನ ಅತಿಕ್ರಮಣದಿಂದಾಗಿ ನೀರು ಪ್ರವಾಹ, ನೆರೆ, ಸುನಾಮಿಯಾಗಿ ರೂಪ ತಾಳುತ್ತದೆ. ನಾವು ಬಾಯಾರಿದಾಗ ಅದರ ಮಾಧುರ್ಯವನ್ನು ರುಚಿಸುವಂತೆ ದೇವನಿಗೆ ಸ್ತುತಿಸುವವರಾಗಬೇಕು. ಜಗತ್ತಿನ ಸರ್ವ ನಿಯಂತ್ರಣ ಅವನಲ್ಲಿದೆ ಎಂಬ ವಾಸ್ತವವನ್ನು ಮರೆಯಬಾರದು.
ಪವಿತ್ರ ಕುರ್ಆನ್ ನೀರಿನ ಬಗ್ಗೆ ಅಜಾಗರೂಕರಾಗಿರುವವರಿಗೆ ಮತ್ತು ದೇವನ ದೃಷ್ಟಾಂತ ನಿರಾಕರಿಸುವವರಲ್ಲಿ ಹೀಗೆ ಪ್ರಶ್ನಿಸುತ್ತದೆ: “ನಿಮ್ಮ ಬಾವಿಗಳ ನೀರು ನೆಲದೊಳಕ್ಕೆ ಇಂಗಿ ಹೋದರೆ, ಆ ನೀರಿನ ಹರಿಯುವ ಚಿಲುಮೆಗಳನ್ನು ನಿಮಗೆ ಪುನಃ ಹೊರತಂದು ಕೊಡುವವರು ಯಾರೆಂದು ನೀವು ಯೋಚಿಸಿದ್ದೀರಾ?” ಎಂದು ಇವರೊಡನೆ ಕೇಳಿರಿ. (ಅಧ್ಯಾಯ 67: ಅಲ್ ಮುಲ್ಕ್ ಸೂಕ್ತ: 30)
ಅಲ್ಲಾಹನ ಸೃಷ್ಟಿಯಲ್ಲಿ ನೀರಿನ ಬಗ್ಗೆ ನಾವು ಚಿಂತಿಸಿದಾಗ ಅದರ ವಿಸ್ಮಯ ನಮಗೆ ತಿಳಿಯುತ್ತದೆ. ಬಣ್ಣ, ರುಚಿ ಅಥವಾ ವಾಸನೆ ಇಲ್ಲದ ಈ ಪಾರದರ್ಶಕ ದ್ರವವು ಮಾನವ ಜೀವನದ ಅತ್ಯಂತ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವುದು ಮತ್ತು ಅದು ಬತ್ತಿ ಬರಡಾದರೆ ಜೀವ ಸಂಕುಲ ಕೊನೆಗೊಳ್ಳುತ್ತದೆ ಎಂಬುದು ಕಟು ಸತ್ಯ. ಬಣ್ಣ, ರುಚಿ ಅಥವಾ ವಾಸನೆ ಇಲ್ಲದಿದ್ದರೂ ಆತ್ಮಗಳು ಅದನ್ನು ಹಂಬಲಿಸುತ್ತವೆ, ಅದಕ್ಕಾಗಿ ಹಾತೊರೆಯುತ್ತವೆ. ಕುರ್ಆನ್ ನೀರಿನ ಮೂಲಗಳ ಬಗ್ಗೆ ಅನೇಕ ಕಡೆ ಪ್ರಸ್ತಾಪಿಸಿದೆ. ಸುಮಾರು 23 ಬಗೆಯ ನೀರಿನ ಬಗ್ಗೆ 63 ಕಡೆಗಳಲ್ಲಿ ವಿವರಿಸಿದೆ. ಪ್ರವಾದಿಯವರು ನೀರಿನ ಬಳಕೆಯ ಬಗ್ಗೆ ಹಲವು ಮಾರ್ಗದರ್ಶನ ನೀಡಿರುವರು, ನೀರಿನ ಉಪಯೋಗದ ಕುರಿತು ಕರ್ಮಶಾಸ್ತ್ರದಲ್ಲಿ ಅನೇಕ ವಿಧಿಗಳಿವೆ ಎಂಬುವುದೇ ಅದರ ಮಹತ್ವವನ್ನು ತಿಳಿಸುತ್ತದೆ.