ಆಸಿಯಾ: ಪ್ರವಾದಿ ಮತ್ತು ಕ್ರಾಂತಿಯ ತಾಯಿ

0
Screenshot 2026-04-22 134601

ಲೇಖಕಿ: ಝೈನಬ್ ಬಿಂತ್ ಯೂನುಸ್

ಒಬ್ಬ ನಿರಂಕುಶ ಆಡಳಿತಗಾರ ಅಧಿಕಾರಕ್ಕೆ ಏರಿ ತನ್ನ ರಾಷ್ಟ್ರವನ್ನು ಕ್ರೌರ್ಯ ಮತ್ತು ದ್ವೇಷದಿಂದ ಆಳುತ್ತಾನೆ. ಜನತೆಯನ್ನು ತನ್ನವರು ಮತ್ತು ಹೊರಗಿನವರು ಎಂಬಂತೆ ಎರಡಾಗಿ ವಿಭಜಿಸಿ ಜನರ ನಡುವೆ ಆಳ ಕಂದಕವನ್ನು ನಿರ್ಮಿಸುತ್ತಾನೆ. ವರ್ಷಗಳ ಕಾಲ, ತನ್ನ ಪೂರ್ವಾಗ್ರಹ ಮತ್ತು ತಾರತಮ್ಯ ನೀತಿಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದೇನೆಂದು ಭಾವಿಸುತ್ತಾನೆ. ಆದರೆ, ಕ್ರಾಂತಿ ನಿಧಾನವಾಗಿ ಅವನದೇ ಮನೆಯ ಹೃದಯದಲ್ಲಿ ಜನ್ಮ ತಾಳುತ್ತದೆ. ರಾಜನು ನಿರೀಕ್ಷಿಸಿಯೇ ಇರದ ವ್ಯಕ್ತಿಯೊಳಗೆ ಆ ಕಿಚ್ಚು ಉರಿಯಲು ಆರಂಭಿಸುತ್ತದೆ.

ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಈಜಿಪ್ಟ್‌ನ ಫರೋಹನು ದ್ವೇಷ ಮತ್ತು ಹತ್ಯೆಯನ್ನು ಸಾರ್ವಜನಿಕ ನೀತಿಯಾಗಿ ರೂಪಿಸಿದ ಅತ್ಯಂತ ಪ್ರಸಿದ್ಧ ಉದಾಹರಣೆಗಳಲ್ಲಿ ಒಬ್ಬನಾಗಿದ್ದನು.

ಪವಿತ್ರ ಕುರ್‌ಆನ್‌ ಹೇಳುತ್ತದೆ: ನಾವು ನಿಮಗೆ ಮೂಸಾ ಮತ್ತು ಫಿರ್ಔನರ ಕೆಲವು ವೃತ್ತಾಂತಗಳನ್ನು ನಿಖರವಾಗಿ ತಿಳಿಸುತ್ತೇವೆಸತ್ಯವಿಶ್ವಾಸ ಸ್ವೀಕರಿಸುವವರ ಪ್ರಯೋಜನಕ್ಕಾಗಿ. ವಿಷಯವೇನೆಂದರೆಫಿರ್ಔನನು ಭೂಮಿಯಲ್ಲಿ ಬಂಡಾಯವೆದ್ದನು ಮತ್ತು ಅದರ ನಿವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿಬಿಟ್ಟನು. ಪೈಕಿ ಒಂದು ಪಂಗಡವನ್ನು ಅವನು ಅವಮಾನಿಸುತ್ತಿದ್ದನು. ಅವರ ಗಂಡು ಮಕ್ಕಳನ್ನು ವಧಿಸುತ್ತಿದ್ದನು ಮತ್ತು ಹೆಣ್ಣು ಮಕ್ಕಳನ್ನು ಬದುಕಿರಲು ಬಿಡುತ್ತಿದ್ದನು. ನಿಜಕ್ಕೂ ಅವನು ದಂಗೆಕೋರರಲ್ಲಾಗಿದ್ದನು.” (28:3-4)

ಫರೋಹನು ತಾನು ಸದಾ ಸುರಕ್ಷಿತನಾಗಿರುತ್ತೇನೆ ಎಂಬ ಭ್ರಮೆಯಲ್ಲಿದ್ದನು. ತನ್ನ ವಿರುದ್ಧ ಶತ್ರುಗಳೇ ಹುಟ್ಟಬಾರದು ಎಂದು ತನ್ನ ಸೈನಿಕರನ್ನು ಈಜಿಪ್ಟ್‌ನಾದ್ಯಂತ ಕಳುಹಿಸಿ ಶಿಶುಹತ್ಯೆಯನ್ನು ನಡೆಸುತ್ತಿದ್ದನು. ಶಿಶುಗಳ ರಕ್ತ ನೈಲ್ ನದಿಯಂತೆ ನಿರಂತರವಾಗಿ ಹರಿಯುತ್ತಿತ್ತು. ಆ ಭಯಾನಕ ಪರಿಸ್ಥಿತಿಯಲ್ಲಿ, ಬನೀ ಇಸ್ರಾಯಿಲ್‌ ವಿಭಾಗದ ಓರ್ವ ಮಹಿಳೆಯು ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದಳು. ಆದರೆ, ಫರೋಹನ ಭಯಕ್ಕೆ ಮಗುವನ್ನು ಒಂದು ತೊಟ್ಟಿಲಿನಲ್ಲಿ ಇಟ್ಟು, ನದಿಯಲ್ಲಿ ಬಿಡಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದಳು.

ಪವಿತ್ರ ಕುರ್‌ಆನ್‌ ಹೇಳುತ್ತದೆ: ನಾವು ಮೂಸಾರ ತಾಯಿಗೆ, “ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗ್ಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿ ಬಿಡು. ನೀನು ಕೊಂಚವೂ ಭಯಪಡಬೇಡ. ವ್ಯಥೆ ಪಡಬೇಡ. ನಾವು ಇದನ್ನು ನಿನ್ನ ಬಳಿಗೇ ಮರಳಿ ತರುವೆವು ಮತ್ತು ಇದನ್ನು ಸಂದೇಶವಾಹಕರಲ್ಲಿ ಸೇರಿಸುವೆವುಎಂದು ಸೂಚನೆ ನೀಡಿದೆವು.” (28:7)

ಒಬ್ಬ ತಾಯಿಯ ಮಡಿಲಿನಿಂದ ಇನ್ನೊಬ್ಬ ತಾಯಿಯ ಅಪ್ಪುಗೆಯವರೆಗೆ: ಅಲ್ಲಾಹನು ನೈಲ್ ನದಿಯ ಮೂಲಕ ಪುಟಾಣಿ ಮೂಸಾರನ್ನು ನೇರವಾಗಿ ಫರೋಹನ ಪತ್ನಿ ‘ಆಸಿಯಾ’ಳ ತೋಳುಗಳಿಗೆ ತಲುಪುವಂತೆ ಮಾಡಿದನು. ಫರೋಹನ ಕುಟುಂಬವು ಆ ಮಗುವನ್ನು ನದಿಯಿಂದ ಎತ್ತಿಕೊಂಡಿತು. ಆದರೆ, ಕೊನೆಗೆ ಆ ಮಗುವೇ ಬೆಳೆದು ಅವರ ಸಾಮ್ರಾಜ್ಯಕ್ಕೆ ಶತ್ರುವಾಗಿಯೂ, ಅವರ ದುಃಖಕ್ಕೆ ಕಾರಣವಾಗಿಯೂ ಪರಿಣಮಿಸುತ್ತದೆ ಎಂಬ ಅರಿವು ಅವರಿಗಿರಲಿಲ್ಲ. ವಾಸ್ತವದಲ್ಲಿ, ಫರೋಹ, ಹಾಮಾನ್ ಮತ್ತು ಅವರ ಸೈನ್ಯವು ದಾರಿ ತಪ್ಪಿರುವ ಅಕ್ರಮಿಗಳಾಗಿದ್ದರು.

ಪವಿತ್ರ ಕುರ್‌ಆನ್‌ ಹೇಳುತ್ತದೆ: ಫಿರ್ಔನನ ಪತ್ನಿಯು (ಅವನೊಡನೆ) “ಇದು ನನಗೂ, ನಿನಗೂ ಕಣ್ಮನಗಳಿಗೆ ತಂಪಾಗಿದೆ. ಇದನ್ನು ವಧಿಸಬೇಡ. ಇದು ನಮಗೆ ಲಾಭದಾಯಕವಾಗಲೂಬಹುದು ಅಥವಾ ನಾವು ಇದನ್ನು ಮಗನಾಗಿ ಮಾಡಿಕೊಳ್ಳಲೂಬಹುದುಎಂದಳು. ಅವರು (ಪರಿಣಾಮದ ಬಗ್ಗೆ) ಅಜ್ಞರಾಗಿದ್ದರು.” (28:8-9)

ಆ ಕ್ಷಣ, ಮೂಸಾ(ಅ) ಈಜಿಪ್ಟಿನ ರಾಣಿಯನ್ನು ತನ್ನ ಎರಡನೇ ತಾಯಿಯನ್ನಾಗಿ ಪಡೆದರು. ಆಕೆ ಅವರಿಗೆ ಜನ್ಮ ನೀಡದಿದ್ದರೂ, ಬಾಲ್ಯದಿಂದಲೇ ಉದಾತ್ತ ಗುಣಗಳು, ಮೌಲ್ಯಗಳು ಮತ್ತು ನ್ಯಾಯದ ತೀಕ್ಷ್ಣ ಪ್ರಜ್ಞೆಯನ್ನು ಹೊಂದಿರುವ ಮಹಾನ್ ವ್ಯಕ್ತಿಯಾಗುವಂತೆ ಬೆಳೆಸಿದಳು.

ಈಜಿಪ್ಟ್‌ನ ರಾಣಿ ಆಸಿಯಾ ತನ್ನ ದತ್ತು ಪುತ್ರನನ್ನು ಫರೋಹನ ಅರಮನೆಯ ಹೃದಯದಲ್ಲೇ ಇಟ್ಟುಕೊಂಡು, ವಿಭಿನ್ನ ಕ್ರಾಂತಿಯನ್ನು ತರಲು ಅಗತ್ಯವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಶಿಕ್ಷಣವನ್ನು ನೀಡಿದಳು.

ಸಂಪತ್ತು ಮತ್ತು ಐಶ್ವರ್ಯದಿಂದ ಸುತ್ತುವರೆದಿದ್ದ ಮೂಸಾ(ಅ), ತನ್ನ ದತ್ತು ಪೋಷಕರ ಅಧಿಕಾರ ಮತ್ತು ಪ್ರಭಾವದಿಂದ ರಕ್ಷಿಸಲ್ಪಟ್ಟರು. ಇಂತಹ ಪರಿಸ್ಥಿತಿಯಲ್ಲಿ ದಾರಿತಪ್ಪಿ, ದುರಹಂಕಾರಿಯಾಗಿ, ತನ್ನದೇ ಜನರ ದುಃಖವನ್ನು ಅರ್ಥಮಾಡಿಕೊಳ್ಳದವನಾಗಿ ಬೆಳೆಯುವ ಅಪಾಯವಿತ್ತು. ಆದರೆ ನಿಸ್ಸಂದೇಹವಾಗಿ, ಆಸಿಯಾರ ಬುದ್ಧಿವಂತಿಕೆ ಮತ್ತು ಕರುಣೆ ಅವರನ್ನು ಕೇವಲ ಈಜಿಪ್ಟ್‌ನ ಮುದ್ದಿನ ರಾಜಕುಮಾರನಾಗಿಸದೇ ತನ್ನ ನೈಜತೆಯನ್ನು ಅರಿಯುವ ವ್ಯಕ್ತಿಯಾಗಲು ಮಾರ್ಗದರ್ಶನ ನೀಡಿತು.

ಬಹುಶಃ, ಮೂಸಾ ಬಾಲ್ಯದಲ್ಲಿದ್ದಾಗ, ಹಾಸಿಗೆಯ ಪಕ್ಕದಲ್ಲಿ ಕುಳಿತುಕೊಂಡು, ನೈಲ್ ನದಿ ಮಗುವನ್ನು ತನ್ನ ತೋಳುಗಳಿಗೆ ಹೇಗೆ ದಾಟಿಸಿತು ಎಂಬ ಕಥೆಯನ್ನು ಆಕೆ ಮೃದುವಾಗಿ ಹೇಳಿರಬಹುದು. ಇತರ ಮಕ್ಕಳಂತೆ ತಾನು ಏಕೆ ಕಾಣುತ್ತಿಲ್ಲ? ತನ್ನ ಮುಖದಲ್ಲಿ ಬನೀ ಇಸ್ರೇಲ್‌ನ ಗುರುತು ಏಕೆ ಇದೆ? ಎಂಬ ಮುಗ್ಧ ಪ್ರಶ್ನೆಗಳಿಗೆ ಮೂಸಾ(ಅ) ಉತ್ತರ ಹುಡುಕುತ್ತಿದ್ದಾಗ, ಆಕೆ ಸಹನೆಯಿಂದ ವಿವರಿಸಿರಬಹುದು. ಪ್ರತಿವರ್ಷ ನಿರಪರಾಧಿ ಶಿಶುಗಳ ಹತ್ಯೆಯು ನಡೆಯುತ್ತಿದ್ದಾಗ, ತಾಯಂದಿರ ಕಣ್ಣೀರು ನದಿಗಳಂತೆ ಹರಿಯುತ್ತಿದ್ದಾಗಲೂ, ಫರೋಹನ ಅರಮನೆಯಲ್ಲಿ ತಾನು ಹೇಗೆ ಸುರಕ್ಷಿತವಾಗಿದ್ದೇನೆ ಎಂಬ ಮೂಸಾರ ಆಶ್ಚರ್ಯಗಳಿಗೆ ಆಕೆ ಸ್ಪಷ್ಟನೆ ನೀಡಿರಲೂಬಹುದು.

ಬಹುಶಃ, ಆಕೆಯ ಕಣ್ಮನಗಳ ತಂಪಾಗಿರುವ ಆ ಪುಟಾಣಿ ಹುಡುಗನನ್ನು ನೋಡಿದಾಗಲೆಲ್ಲಾ, ಆಕೆಯ ಹೃದಯ ನೋವಿನಿಂದ ಕಸಿವಿಸಿಗೊಂಡಿರಬಹುದು. ತಾನು ಸಾಕಿದ ಪ್ರೀತಿಯ ಮಗುವು ಕೂಡ ಆ ಹತ್ಯೆಗೀಡಾದ ಮಕ್ಕಳಲ್ಲಿ ಒಬ್ಬನಾಗಬಹುದಾಗಿತ್ತು ಎಂಬ ಭಯ ಕಾಡಿರಬಹುದು. ತನ್ನ ಗಂಡನ ಕ್ರೌರ್ಯವನ್ನು ನಿಲ್ಲಿಸಲು ತನ್ನಿಂದ ಆಗಿದ್ದ ಏಕೈಕ ಕಾರ್ಯವೇ, ಮಗು ಮೂಸಾರನ್ನು ತನ್ನ ತೋಳುಗಳಲ್ಲಿ ಹಿಡಿದು, ಒಂದು ನಿರಪರಾಧಿ ಮುಗ್ಧ ಜೀವವನ್ನು ಉಳಿಸಲು ಫರೋಹನನ್ನು ಬೇಡಿಕೊಂಡ ಕ್ಷಣವೆಂದು ಆಕೆ ಹೇಳಿರಬಹುದು.

ಆ ಕಾರಣದಿಂದಲೇ, ಆಕೆ ಮೂಸಾರನ್ನು ಅತ್ಯಂತ ಅಮೂಲ್ಯವಾಗಿ ಪರಿಗಣಿಸಿದ್ದಾಳೆ ಎಂಬುದರಲ್ಲಿ ಸಂದೇಹವಿಲ್ಲ. ಆ ಭಯಾನಕ ಹತ್ಯಾಕಾಂಡದ ಮಧ್ಯೆ ತೋರಿಸಿದ ಆ ಅಪಾರ ಧೈರ್ಯದ ಕ್ಷಣದಲ್ಲಿ, ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು ಹೇಗೆಂದು ಆಸಿಯಾ ಮೂಸಾರಿಗೆ ಕಲಿಸಿದಳು ಎಂಬುದೂ ನಿಸ್ಸಂದೇಹ.

ಪ್ರಭಾವ ಮತ್ತು ಅಧಿಕಾರ ಹೊಂದಿರುವವರ ಮೌನ ಮತ್ತು ನಿಷ್ಕ್ರಿಯತೆಯೇ ಅನ್ಯಾಯವನ್ನು ಮತ್ತಷ್ಟು ಭೀಕರವಾಗಿಸುತ್ತದೆ ಎಂಬ ಸತ್ಯವನ್ನು ಆಸಿಯಾ ಇತರರಿಗಿಂತ ಹೆಚ್ಚು ಚೆನ್ನಾಗಿ ತಿಳಿದಿದ್ದಳು. ಮೂಸಾರನ್ನು ಬೆಳೆಸಿದ ಆಸಿಯಾ — ಪ್ರವಾದಿಯನ್ನು ರೂಪಿಸಿದ ರಾಣಿ; ಜಗತ್ತು ಕಂಡ ಶ್ರೇಷ್ಠ ಕ್ರಾಂತಿಕಾರಿಗಳಲ್ಲಿ ಒಬ್ಬನನ್ನು ಬೆಳೆಸಿದ ಮಹಾನ್ ಮಹಿಳೆ.

ಇಂದು, ನಾವುಆಸಿಯಾಆಗಬೇಕು:

ನಮ್ಮ ಭೂಮಿಯನ್ನು ಕೊಲೆಗಾರರು ಮತ್ತು ಹುಚ್ಚರು ಆಳ್ವಿಕೆ ನಡೆಸುತ್ತಿರುವ ಈ ಸಮಯದಲ್ಲಿ, ನಾವು ‘ಆಸಿಯಾ’ಳಂತಾಗಬೇಕು. ನಮ್ಮ ಮಕ್ಕಳನ್ನು ಅವರ ಸುತ್ತಲಿನ ಅನ್ಯಾಯದ ಬಗ್ಗೆ ಜಾಗೃತರನ್ನಾಗಿ ಬೆಳೆಸುವ ಪೋಷಕರಾಗಬೇಕು. ನಾವು ಅನುಭವಿಸುವ ಸಂಪನ್ಮೂಲಗಳು ಕೇವಲ ಅನುಭವಿಸಲು ಮಾತ್ರವಲ್ಲ, ಬೆಳೆಸುವ ಜವಾಬ್ದಾರಿಯೂ ಇವೆ ಎಂದು ಅವರಿಗೆ ತಿಳಿಸಬೇಕು. ನಮ್ಮನ್ನು ಸುತ್ತುವರೆದಿರುವ ಭಯಾನಕತೆಯ ವಿರುದ್ಧ ನಾವು ಎದ್ದು ನಿಲ್ಲಬೇಕು. ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ನಮ್ಮ ರಾಷ್ಟ್ರಗಳ ಫರೋಹರ ವಿರುದ್ಧ ಧೈರ್ಯವಾಗಿ ಮಾತಾಡಬೇಕು. ದೈವಿಕ ನ್ಯಾಯಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ — ಅಸಾಧ್ಯವೆನಿಸುವುದನ್ನೂ ಸಹ — ಮಾಡಲು ದೃಢಸಂಕಲ್ಪ ಹೊಂದಿರಬೇಕು.

‘ಆಸಿಯಾ’ರಂತಹವರು ಮೂಸಾ(ಅ) ಅವರಂತಹ ಮಹಾನ್ ವ್ಯಕ್ತಿಗಳನ್ನು ರೂಪಿಸುತ್ತಾರೆ. ಆದ್ದರಿಂದ, ನಾವು ‘ಆಸಿಯಾ’ರಂತೆ ಬದುಕಬೇಕು. ‘ಆಸಿಯಾ’ರಂತಹ ಉನ್ನತ ಮಟ್ಟದ ನಂಬಿಕೆಯನ್ನು ಹೊಂದಿರಬೇಕು. ನಮ್ಮ ವಿಶ್ವಾಸಗಳಲ್ಲಿ ಸಂಪೂರ್ಣ ದೃಢವಾಗಿರಬೇಕು; ನಮ್ಮ ಸೃಷ್ಟಿಕರ್ತನ ಮೇಲಿನ ಪ್ರೀತಿ ನಮ್ಮ ಹೃದಯಗಳಲ್ಲಿ ದೀಪದಂತೆ ಜ್ವಲಿಸುತ್ತಿರಬೇಕು. ಯಾವುದೇ ಮಾನವ ಅನ್ಯಾಯವು ನಮ್ಮನ್ನು ಮುರಿಯಲು ಸಾಧ್ಯವಾಗಬಾರದು. ನಾವು ಈ ಲೋಕವನ್ನು ತೊರೆದಾಗಲೂ, ನಮ್ಮ ವಿಶ್ವಾಸ, ನ್ಯಾಯ ಮತ್ತು ಕ್ರಾಂತಿಯ ಪರಂಪರೆ ನಮ್ಮ ಮಕ್ಕಳಲ್ಲೂ, ಅವರ ಮಕ್ಕಳಲ್ಲೂ ಜೀವಂತವಾಗಿರುತ್ತದೆ ಎಂಬ ವಿಶ್ವಾಸ ನಮ್ಮಲ್ಲಿರಬೇಕು.

ಮೂಸಾ(ಅ)ರಿಗೆ ಧೈರ್ಯ ಮತ್ತು ದೃಢಸಂಕಲ್ಪದ ಅರ್ಥವನ್ನು ತನ್ನ ಜೀವನದಲ್ಲಿಯೂ, ತನ್ನ ಮರಣದಲ್ಲಿಯೂ ಕಲಿಸಿದಂತೆ, ಆಸಿಯಾ ನಮಗೂ ಕಲಿಸುತ್ತಾರೆ. ಏಕೆಂದರೆ ಅಲ್ಲಾಹನಲ್ಲಿ ವಿಶ್ವಾಸ ಇಟ್ಟಿದ್ದಕ್ಕಾಗಿ ಫರೋಹನು ಆಕೆಯನ್ನು ಕೊಂದರೂ, ಅಲ್ಲಾಹನು ಅವರನ್ನು ಸಮಸ್ತ ಮಾನವಕುಲದ ನಡುವೆ ಉನ್ನತ ಸ್ಥಾನಕ್ಕೆ ಏರಿಸಿದನು. ಹಾಗೆಯೇ, ಕುರ್‌ಆನಿನಲ್ಲಿ ಆಕೆಯ ಪ್ರಾರ್ಥನೆಯನ್ನು ಅಮರಗೊಳಿಸಿದನು.

ಪವಿತ್ರ ಕುರ್‌ಆನ್‌ ಹೀಗೆ ಹೇಳುತ್ತದೆ: ಸತ್ಯವಿಶ್ವಾಸಿಗಳ ವಿಷಯದಲ್ಲಿ ಅಲ್ಲಾಹನು ಫಿರ್ಔನನ ಪತ್ನಿಯ ಉದಾಹರಣೆಯನ್ನು ಮುಂದಿಡುತ್ತಾನೆ. ಅವರು, “ನನ್ನ ಪ್ರಭೂ, ನನಗಾಗಿ ನಿನ್ನ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು ಮತ್ತು ನನ್ನನ್ನು ಫಿರ್ಔನನಿಂದಲೂ ಅವನ ಕರ್ಮಗಳಿಂದಲೂ ರಕ್ಷಿಸು ಮತ್ತು ಅಕ್ರಮಿ ಜನಾಂಗದಿಂದ ನನ್ನನ್ನು ಪಾರುಗೊಳಿಸು ಎಂದು ಪ್ರಾರ್ಥಿಸಿದ ಸಂದರ್ಭ (ಪವಿತ್ರ ಕುರ್‌ಆನ್‌ 66:11)

ಕನ್ನಡಾನುವಾದ: ಖೈಸ್‌ ಪಾಣೆಮಂಗಳೂರು

Leave a Reply