ಭಾಗ 1 – ಕುರ್‌ಆನ್‌ನ ಸಂದೇಶ: ಪ್ರಾದೇಶಿಕತೆಯಿಂದ ಸಾರ್ವಲೌಕಿಕತೆಯ ವರೆಗೆ
ಲೇಖಕರು: ಮುಹಿಯುದ್ದೀನ್ ಗಾಝಿ
(ಕುರ್‌ಆನಿನ ಸಂದೇಶವು ಪ್ರಾದೇಶಿಕತೆಯಿಂದ ಹೇಗೆ ಸಾರ್ವಲೌಕಿಕವಾಗಿದೆಯೆಂದು ಪ್ರಸ್ತುತ ಪಡಿಸುವ ಈ ಲೇಖನವು ಎರಡು ಭಾಗಗಳನ್ನು ಹೊಂದಿದೆ)
ಸರ್ವಶಕ್ತನ ನಾಮದಿಂದ
[ವಿಶೇಷ ಗಮನ ಹರಿಸಬೇಕಾದ ವಿಷಯ ಒಂದಿದೆ. ಮಕ್ಕಾ ಕಾಲಘಟ್ಟದಲ್ಲಿ ಅಂತಿಮ ಸಂದೇಶವಾಹಕರು(ಸ) ಜನರಲ್ಲಿ ತಮ್ಮ ಸಂದೇಶ ಪ್ರಚಾರವನ್ನು ಆರಂಭಿಸಿದ್ದರು. ಈ ಸಂದೇಶವು ಜಗತ್ತಿನ ಸಕಲ ಮಾನವರಿಗಾಗಿದೆ ಎಂದು ಮಕ್ಕೀ ಸೂರತ್‌ಗಳಲ್ಲಿ ಪುನರಾವರ್ತಿಸಿ ಹೇಳಲಾಗಿತ್ತು. ಅಂತೆಯೇ ಅಲ್ಲಾಹನ ಸಂದೇಶವಾಹಕರು(ಸ) ಸಕಲ ಮಾನವ ಕುಲಕ್ಕಾಗಿ ಬಂದವರೆಂದು ಮಕ್ಕೀ ಸೂರಗಳಲ್ಲಿ ಅನೇಕ ಬಾರಿ ಸಾರಲಾಗಿರುವುದು ಇನ್ನೊಂದು ವಿಶೇಷ. ಅದೇ ವೇಳೆ ಮದನೀ ಸೂರಗಳಲ್ಲಿ, ಪ್ರವಾದಿವರ್ಯರು(ಸ) ತಯಾರುಗೊಳಿಸಿದ ಸಮುದಾಯವು ಸಕಲ ಮಾನವರಿಗಾಗಿ ಇರುವುದೆಂದು ಪುನರಾವರ್ತಿಸಿ ಸಾರಲಾಗಿದೆ.]
ಇತರೆಲ್ಲ ಪ್ರವಾದಿಗಳಂತೆ ಅಲ್ಲಾಹನ ಅಂತಿಮ ಸಂದೇಶವಾಹಕರಾದ ಮುಹಮ್ಮದ್(ಸ)ರವರೂ ತಮ್ಮ ಪ್ರದೇಶ ಮತ್ತು ಸಮುದಾಯದಲ್ಲಿ ನೇಮಿಸಲ್ಪಟ್ಟಿದ್ದರು. ಅಲ್ಲಾಹನ ಚರ್ಯೆಯಂತೆ ಅದೇ ಪ್ರದೇಶ ಮತ್ತು ಸಮುದಾಯದ ಭಾಷೆಯಲ್ಲಿಯೇ ಅವರಿಗೆ ದಿವ್ಯಗ್ರಂಥವನ್ನು ನೀಡಲಾಗಿತ್ತು. ಗತ ಸಂದೇಶವಾಹಕರಂತೆಯೇ ಇವರೂ ತಮ್ಮ ಸಮುದಾಯದಲ್ಲಿ ಸತ್ಯವಂತರು (ಸಾದಿಕ್) ಮತ್ತು ಪ್ರಾಮಾಣಿಕರು (ಅಮೀನ್) ಎಂಬ ನೆಲೆಯಲ್ಲಿ ಗುರುತಿಸಿಕೊಂಡಿದ್ದರು. ಎಲ್ಲ ಸಂದೇಶವಾಹಕರಂತೆ ಇವರೂ ತಮ್ಮ ಸಮುದಾಯವನ್ನು ಅಭಿಸಂಬೋಧಿಸಿದರು ಮತ್ತು ಅವರಿಗೆ ದೈವಿಕ ಸಂದೇಶ ನೀಡಿದರು. ಇತರ ಪ್ರವಾದಿಗಳಂತೆಯೇ ಪ್ರವಾದಿ ಮುಹಮ್ಮದ್(ಸ)ರವರೂ ತಮ್ಮ ಸಮುದಾಯದವರಿಗೆ ಪರಿಚಿತವಾಗಿರುವ ಐತಿಹಾಸಿಕ ಮತ್ತು ಭೌಗೋಳಿಕ ಉಪಮೆಗಳ ಮೂಲಕ ತಿಳಿಯ ಹೇಳಲು ಪ್ರಯತ್ನಿಸಿದರು. ಪ್ರವಾದಿವರ್ಯರು(ಸ) ಕೂಡ ತಮ್ಮ ಸಮುದಾಯದವರಿಂದ ಪ್ರಶ್ನೆಗಳನ್ನು, ವಿರೋಧ ಮತ್ತು ಅಪಪ್ರಚಾರವನ್ನು ಎದುರಿಸಿದರು. ಇದನ್ನು ನಾವು ಪ್ರಾದೇಶಿಕತೆ ಎನ್ನಬಲ್ಲೆವು. ಅಂದರೆ ಪ್ರವಾದಿತ್ವದ ಪ್ರಾದೇಶಿಕ ಮಗ್ಗುಲು. ಪ್ರಾದೇಶಿಕತೆಯ ಈ ಮಗ್ಗುಲು ಕೇವಲ ಸೀರತ್‌ನಲ್ಲಿ ಇರುವುದಲ್ಲ, ಬದಲಾಗಿ ಸ್ವತಃ ಪವಿತ್ರ ಕುರ್‌ಆನ್‌ನ ಅನೇಕ ವಚನಗಳೂ ಪ್ರಾದೇಶಿಕತೆಯ ಈ ಮಗ್ಗುಲನ್ನು ಪ್ರಚುರಪಡಿಸುತ್ತದೆ. ಅಂತ್ಯ ಪ್ರವಾದಿಯ(ಸ) ತಮ್ಮ ಸಮುದಾಯದೊಂದಿಗಿನ ಸಂಭಾಷಣೆಗಳು ಪವಿತ್ರ ಕುರ್‌ಆನ್‌ನಾದ್ಯಂತ ಅನೇಕ ಕಡೆ ಕಾಣಸಿಗುತ್ತದೆ.
ತನ್ನ ಸಮುದಾಯವನ್ನು ಎಚ್ಚರಿಸುವುದು ಅಂತಿಮ ಸಂದೇಶವಾಹಕರ(ಸ) ಹೊಣೆಗಾರಿಕೆಯ ಪ್ರಮುಖ ಉದ್ದೇಶ ಮತ್ತು ಸರ್ವಪ್ರಥಮ ಜವಾಬ್ದಾರಿಯಾಗಿದೆ ಎಂದು ಪವಿತ್ರ ಕುರ್‌ಆನ್‌ನಲ್ಲಿ ಅನೇಕ ಕಡೆ ವಿವರಿಸಲಾಗಿದೆ. ಉದಾಹರಣೆಗೆ,
“ಯಾವ ಜನಾಂಗದ ಪೂರ್ವಿಕರಿಗೆ ಎಚ್ಚರಿಸಲಾಗದ ಕಾರಣ ಪ್ರಜ್ಞಾಶೂನ್ಯರಾಗಿ ಬಿಟ್ಟಿದ್ದರೋ ಆ ಜನಾಂಗಕ್ಕೆ ನೀವು ಎಚ್ಚರಿಕೆ ಕೊಡುವಂತಾಗಲು (ನೀವು ಬಂದಿರುವಿರಿ).” (ಯಾಸೀನ್: 6)
ಇದೇ ರೀತಿಯ ಪದಗಳು ಅಲ್ ಕಸಸ್ ಅಧ್ಯಾಯದ 46ನೇ ವಚನ ಮತ್ತು ಅಸ್ಸಜ್ದ ಅಧ್ಯಾಯದ 3ನೇ ವಚನದಲ್ಲೂ ಉಲ್ಲೇಖಗೊಂಡಿವೆ.
“ಸಂದೇಶವಾಹಕರೇ, ಇದೇ ರೀತಿಯಲ್ಲಿ ಈ ಅರಬೀ ಕುರ್‌ಆನನ್ನು ನಾವು ನಿಮ್ಮ ಕಡೆಗೆ `ದಿವ್ಯವಾಣಿ’ ಮಾಡಿರುತ್ತೇವೆ. (ಇದು) ನಾಡುಗಳ ಕೇಂದ್ರ (ಮಕ್ಕಾ ಪಟ್ಟಣ) ಹಾಗೂ ಅದರ ಸುತ್ತಮುತ್ತ ಇರುವವರನ್ನು ನೀವು ಎಚ್ಚರಿಸುವಂತಾಗಲು.” (ಅಶ್ಶೂರಾ: 7)
ಈ ವಚನಗಳಲ್ಲಿ ಮಕ್ಕಾ ಮತ್ತು ಮಕ್ಕಾ ಪರಿಸರದಲ್ಲಿ ವಾಸಿಸುತ್ತಿರುವ ಸಮುದಾಯಗಳಿಗೆ ಎಚ್ಚರಿಕೆ ನೀಡುವ ಮಾತನ್ನಾಡಲಾಗಿದೆ. ಪ್ರವಾದಿವರ್ಯರು(ಸ) ತಮ್ಮ ಜೀವನದಾದ್ಯಂತ ಈ ಕಾರ್ಯವನ್ನು ಮಾಡಿದ್ದರು ಎಂಬುದು ಸ್ಪಷ್ಟವೇ ತಾನೇ. ಆದರೆ ಅವರ ಸಂದೇಶವು ಕೇವಲ ಅವರ ಸಮುದಾಯಕ್ಕಾಗಿತ್ತು ಎಂದು ಭಾವಿಸುವುದು ಎಳ್ಳಷ್ಟೂ ಸರಿಯಲ್ಲ. ಅವರು ತಮ್ಮ ದೌತ್ಯವನ್ನು ಒಂದು ಪ್ರದೇಶದಲ್ಲಿ ಆರಂಭಿಸಿರುವುದು ಸರಿಯೇ; ಆದರೆ ಅವರು ತಮ್ಮ ಸಂದೇಶವನ್ನು ಇಡೀ ಜಗತ್ತಿಗೆ ಮತ್ತು ಲೋಕಾಂತ್ಯದ ವರೆಗೂ ಜಾರಿಯಾಗುವಂತೆ ಮಂಡಿಸಿದ್ದಾರೆ.
ಕೆಲವು ವಚನಗಳಲ್ಲಿ ‘ಯಾ ಕೌಮ್’ (ಓ ನನ್ನ ಜನಾಂಗವೇ) ಮತ್ತು ‘ಕೌಮುಕ’ (ನಿಮ್ಮ ಜನಾಂಗ) ಎಂಬ ಪದಗಳೂ ಬಂದಿವೆ.
“ನಿಮ್ಮ ಜನಾಂಗವು ಅದನ್ನು ನಿರಾಕರಿಸುತ್ತಲಿದೆ. ವಸ್ತುತಃ ಅದು ಪರಮ ಸತ್ಯವಾಗಿರುತ್ತದೆ. ಅವರೊಡನೆ ಹೇಳಿರಿ: ನಾನು ನಿಮ್ಮ ಮೇಲೆ ಹೊಣೆಗಾರನಾಗಿ ನೇಮಿಸಲ್ಪಟ್ಟಿಲ್ಲ.” (ಅಲ್ ಅನ್‌ಆಮ್: 66)
“ಓ ಪೈಗಂಬರರೇ, ನಿಮಗೆ `ದಿವ್ಯವಾಣಿಯ’ ಮೂಲಕ ಕೊಡುತ್ತಿರುವ ಅದೃಶ್ಯದ ವಾರ್ತೆಗಳಿವು. ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ಅರಿತಿರಲಿಲ್ಲ.” (ಹೂದ್: 49)
“ಮರ್ಯಮರ ಪುತ್ರ ಈಸಾರ ಉದಾಹರಣೆಯನ್ನು ಮುಂದಿಟ್ಟ ತಕ್ಷಣ ನಿಮ್ಮ ಜನಾಂಗದವರು ಆ ಕುರಿತು ಕೋಲಾಹಲ ಎಬ್ಬಿಸಿಬಿಟ್ಟರು.” (ಅಝ್ಝುಖ್ರುಫ್: 57)
“ಇವರೊಡನೆ ಸ್ಪಷ್ಟವಾಗಿ ಹೇಳಿ ಬಿಡಿರಿ: ನನ್ನ ಜನಾಂಗದವರೇ, ನೀವು ನಿಮ್ಮಷ್ಟಕ್ಕೆ ನಿಮ್ಮ ಕೆಲಸ ಮಾಡುತ್ತಲಿರಿ. ನಾನು ನನ್ನ ಕೆಲಸವನ್ನು ಮಾಡುತ್ತಲಿರುವೆನು” (ಅಝ್ಝುಮರ್: 39)
“ಓ ಪೈಗಂಬರರೇ, ಹೇಳಿರಿ: ಜನರೇ, ನೀವು ನಿಮ್ಮ ಸ್ಥಾನದಲ್ಲಿ ಕಾರ್ಯನಿರತರಾಗಿರಿ; ನಾನೂ ನನ್ನ ಸ್ಥಾನದಲ್ಲಿ ಕಾರ್ಯ ನಿರತನಾಗಿರುತ್ತೇನೆ. ಅಂತಿಮ ಪರಿಣಾಮ ಯಾರ ಪಾಲಿಗೆ ಹಿತಕರವಾಗಿರುವುದೆಂಬುದು ಸದ್ಯವೇ ನಿಮಗೆ ತಿಳಿದು ಬರುವುದು.” (ಅಲ್ ಅನ್‌ಆಮ್: 135)
ಪ್ರವಾದಿವರ್ಯರು(ಸ) ಯಾವ ಸಮುದಾಯವನ್ನು ಎಚ್ಚರಿಸುತ್ತಿದ್ದರೋ ಆ ಸಮುದಾಯದ ಪ್ರತಿಕ್ರಿಯೆಗಳನ್ನು ಉಪರೋಕ್ತ ವಚನಗಳಲ್ಲಿ ಉಲ್ಲೇಖಿಸಲಾಗಿದೆ.
ಪ್ರಾದೇಶಿಕ ವಿಷಯದ ಆರಂಭ ಮತ್ತು ಸಾರ್ವಲೌಕಿಕ ಸಂದೇಶ:
ಪ್ರಾದೇಶಿಕತೆಯ ಮಗ್ಗುಲು ವಾಸ್ತವವಾಗಿದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಮತ್ತು ನಿರಾಕರಿಸುವ ಅಗತ್ಯವೂ ಇಲ್ಲ. ವಸ್ತುತಃ ಅಂತ್ಯ ಪ್ರವಾದಿಯ ಸಂದೇಶವು ಒಂದು ಪ್ರದೇಶ ಮತ್ತು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ; ಬದಲಾಗಿ ಲೋಕಾಂತ್ಯದ ವರೆಗಿನ ಸಕಲ ಮಾನವರಿಗಾಗಿದೆ. ಪವಿತ್ರ ಕುರ್‌ಆನ್ ಈ ಸಾರ್ವಲೌಕಿಕತೆಯನ್ನು ಸ್ಪಷ್ಟ ಪದಗಳಲ್ಲಿ ವಿವರಿಸಿ ಕೊಟ್ಟಿದೆ. ಕೆಲವು ವಚನಗಳು ಇಂತಿವೆ:
“(ಓ ಮುಹಮ್ಮದರೇ,) ನಾವು ನಿಮ್ಮನ್ನು ಮಾನವರ ಪಾಲಿಗೆ ಸಂದೇಶವಾಹಕರಾಗಿ ರವಾನಿಸಿರುತ್ತೇವೆ. ಇದರ ಬಗ್ಗೆ ಅಲ್ಲಾಹನ ಸಾಕ್ಷ್ಯವೇ ಸಾಕು.” (ಅನ್ನಿಸಾ: 79)
“(ಓ ಮುಹಮ್ಮದರೇ!) ಹೇಳಿರಿ: ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ.” (ಅಲ್ ಅಅರಾಫ್: 158)
“(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.” (ಸಬಾ: 28)
ಮೊದಲ ವಚನದಲ್ಲಿ ‘ಅನ್ನಾಸ್’ ಎನ್ನಲಾಯಿತು, ಎರಡನೆಯ ವಚನದಲ್ಲಿ ‘ಜಮೀಅನ್’ ಎನ್ನಲಾಯಿತು ಮತ್ತು ಮೂರನೆಯದರಲ್ಲಿ ‘ಕಾಫ್ಫತನ್’ ಎನ್ನಲಾಯಿತು.
ಪ್ರವಾದಿವರ್ಯರನ್ನು(ಸ) ಸಕಲ ಮಾನವರಿಗಾಗಿ ನೇಮಿಸಲಾಗಿದೆ. ಈ ಪದವು ಪವಿತ್ರ ಕುರ್‌ಆನ್‌ನಲ್ಲಿ ಬೇರಾವ ಸಂದೇಶವಾಹಕರಿಗೂ ಹೇಳಲಾಗಿಲ್ಲ. ಈ ವಿಶೇಷಣವು ಕೇವಲ ಪ್ರವಾದಿ ಮುಹಮ್ಮದ್(ಸ)ರಿಗೆ ಇರುವಂತಹುದಾಗಿದೆ.
ಪವಿತ್ರ ಕುರ್‌ಆನ್ ಕುರಿತೂ ಇಂತಹುದೇ ಪದವನ್ನು ಬಳಸಲಾಗಿದೆ. ಅದು ಕುರ್‌ಆನ್ ಸಾರ್ವಲೌಕಿಕವಾಗಿರುವುದಕ್ಕೆ ಸ್ಪಷ್ಟ ಪುರಾವೆಯಾಗಿದೆ. ಅದು ‘ಅಲ್ ಆಲಮೀನ್’ ಆಗಿರುವುದರ ಸ್ಪಷ್ಟೋಕ್ತಿಯಾಗಿದೆ. ಈ ಪದವನ್ನು ಬೇರಾವ ದೈವಿಕ ಗ್ರಂಥಕ್ಕೂ ಬಳಸಲಾಗಿಲ್ಲ.
“ಇದು ಸಕಲ ಲೋಕದವರಿಗಾಗಿ ಒಂದು ಉಪದೇಶವಾಗಿದೆ.” (ಸ್ವಾದ್: 87)
ಇಂತಹುದೇ ಮಾತು ಅಲ್ ಕಲಮ್: 52, ಅತ್ತಕ್‌ವೀರ್: 27, ಯೂಸುಫ್: 104 ಮತ್ತು ಅಲ್ ಅನ್‌ಆಮ್: 90 ಮುಂತಾದ ಕಡೆಗಳಲ್ಲಿ ಉಲ್ಲೇಖಗೊಂಡಿದೆ.
ಅಂತ್ಯ ಪ್ರವಾದಿಯ(ಸ) ಕುರಿತೂ ಅಲ್ ಆಲಮೀನ್ ಪದವನ್ನು ಬಳಸಾಗಿದೆ. ಇದೊಂದು ವಿಶೇಷವಾಗಿ ಬಳಸಲಾದ ಪದವಾಗಿದೆ.
“ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” (ಅಲ್ ಅಂಬಿಯಾ: 107)
ಅಲ್ ಆಲಮೀನ್ ಎಂಬ ಪದ ಬಳಕೆಯು ಸಾರ್ವಲೌಕಿಕತೆಯನ್ನು ಬಲವಾದ ರೀತಿಯಲ್ಲಿ ಎತ್ತಿ ಹಿಡಿಯುತ್ತದೆ. ಇದರ ಅರ್ಥ ವ್ಯಾಖ್ಯೆಯನ್ನು ಅಂದಾಜಿಸಲು ‘ರಬ್ಬುಲ್ ಆಲಮೀನ್’ (ಸರ್ವಲೋಕಗಳ ಒಡೆಯ) ಎಂಬ ಗುಣನಾಮವನ್ನು ದೃಷ್ಟಿಯಲ್ಲಿರಿಸಬೇಕಾಗಿದೆ. ಇದು ಪವಿತ್ರ ಕುರ್‌ಆನ್‌ನಲ್ಲಿ ಅನೇಕ ಬಾರಿ ಆವರ್ತಿಸಿ ಉಲ್ಲೇಖಿಸಿದ ಗುಣನಾಮವಾಗಿದೆ.
ಸಾರ್ವಲೌಕಿಕತೆಯ ಈ ಮಗ್ಗುಲು ಕೇವಲ ಪವಿತ್ರ ಕುರ್‌ಆನ್‌ನಲ್ಲಷ್ಟೇ ಬಂದಿರುವುದಲ್ಲ, ಬದಲಾಗಿ ಅಲ್ಲಾಹನ ಸಂದೇಶವಾಹಕರ(ಸ) ಸೀರತ್‌ನಲ್ಲೂ ಸುವ್ಯಕ್ತವಾಗಿ ಕಾಣಸಿಗುತ್ತದೆ.
ಅಂತಿಮ ಪ್ರವಾದಿ ಮತ್ತು ಗತ ಪ್ರವಾದಿಗಳ ನಡುವೆ ವ್ಯತ್ಯಾಸ:
ಇತರ ಪ್ರವಾದಿಗಳು ಮತ್ತು ಅಂತಿಮ ಪ್ರವಾದಿಯ ನಡುವಿನ ವ್ಯತ್ಯಾಸವು ಪವಿತ್ರ ಕುರ್‌ಆನ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇತರ ಪ್ರವಾದಿಗಳ ಚರಿತ್ರೆಯಲ್ಲಿ ಪ್ರಾದೇಶಿಕತೆಯು ಸ್ಪಷ್ಟ ರೂಪದಲ್ಲಿ ಕಾಣುತ್ತದೆ, ಅದೇ ವೇಳೆ ಅಂತ್ಯಪ್ರವಾದಿಯ ಸಾರ್ವಲೌಕಿಕತೆಯನ್ನು ಪವಿತ್ರ ಕುರ್‌ಆನ್ ಪ್ರತ್ಯೇಕವಾಗಿ ಎತ್ತಿ ತೋರಿಸಿದೆ.
ಇದರ ಸ್ಪಷ್ಟ ಉದಾಹರಣೆಯನ್ನು ನಮಗೆ ಅಲ್ ಅಅರಾಫ್ ಅಧ್ಯಾಯದಲ್ಲಿ ನೋಡಲು ಸಿಗುತ್ತದೆ.
ಈ ಅಧ್ಯಾಯದಲ್ಲಿ ಯಾವ ಸಮುದಾಯಕ್ಕೆ ಯಾವ ಪ್ರವಾದಿಯನ್ನು ಕಳುಹಿಸಲಾಗಿದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
ನಾವು ನೂಹರನ್ನು ಅವರ ಜನಾಂಗದ ಕಡೆಗೆ ಕಳುಹಿಸಿದೆವು. ಅವರು ಹೇಳಿದರು, “ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನಾನು ನಿಮ್ಮ ಬಗ್ಗೆ ಒಂದು ಭಯಾನಕ ದಿನದ ಯಾತನೆಯನ್ನು ಭಯಪಡುತ್ತೇನೆ.” (ಅಲ್ ಅಅರಾಫ್: 59)
ನಾವು `ಆದ್’ರ (ಜನಾಂಗದವರ) ಕಡೆಗೆ ಅವರ ಸಹೋದರ `ಹೂದ’ರನ್ನು ಕಳುಹಿಸಿದೆವು. ಅವರು ಹೇಳಿದರು, “ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನೀವು ದೇವಭಯವಿರಿಸಿಕೊಳ್ಳುವುದಿಲ್ಲವೇ?” (ಅಲ್ ಅಅರಾಫ್: 65)
`ಸಮೂದ್’ (ಜನಾಂಗದವರ) ಕಡೆಗೆ ನಾವು ಅವರ ಸಹೋದರ ಸಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು, “ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. (ಅಲ್ ಅಅರಾಫ್: 73)
ಅನಂತರ ನಾವು `ಲೂತ’ರನ್ನು ಸಂದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ. “ಜಗತ್ತಿನಲ್ಲಿ ನಿಮಗಿಂತ ಮುಂಚೆ ಇನ್ನಾರೂ ಮಾಡಿರದಂತಹ ಅಶ್ಲೀಲ ಕಾರ್ಯವನ್ನೆಸಗುವಷ್ಟು ನೀವು ಲಜ್ಜಾಹೀನರಾಗಿಬಿಟ್ಟಿರಾ?” (ಅಲ್ ಅಅರಾಫ್: 80)
ಮದ್‌ಯನರ ಕಡೆಗೆ ಅವರ ಸಹೋದರ `ಶುಐಬ್’ರನ್ನು ಕಳುಹಿಸಿದೆವು. ಅವರು ಹೇಳಿದರು, “ಓ ನನ್ನ ಜನಾಂಗ ಬಾಂಧವರೇ, ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನ ಹೊರತು ನಿಮ್ಮ ಆರಾಧ್ಯನಾರೂ ಇಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಸುವ್ಯಕ್ತ ಮಾರ್ಗದರ್ಶನ ಬಂದಿರುತ್ತದೆ. ಆದುದರಿಂದ ಅಳತೆ ಮತ್ತು ತೂಕವನ್ನು ಪೂರ್ತಿಗೊಳಿಸಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿರಿ.” (ಅಲ್ ಅಅïರಾಫ್: 85)
“ತರುವಾಯ (ಮೇಲೆ ಪ್ರಸ್ತಾಪಿಸಲಾದ) ಆ ಜನಾಂಗಗಳ ಬಳಿಕ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳ ಸಹಿತ ಫಿರ್‌ಔನ್ ಮತ್ತು ಅವರ ಜನಾಂಗದ ಸರದಾರರ ಬಳಿಗೆ ಕಳುಹಿಸಿದೆವು.” (ಅಲ್ ಅಅರಾಫ್: 103)
ಆ ಎಲ್ಲ ಸಮುದಾಯಗಳು ಮತ್ತು ಅವರ ಸಂದೇಶವಾಹಕರ ಪ್ರಸ್ತಾಪದ ಬಳಿಕ ಅಲ್ಲಾಹನ ಅಂತಿಮ ಸಂದೇಶವಾಹರನ್ನು(ಸ) ಉದ್ದೇಶಿಸಿ, ನೀವು ಸಾರ್ವಲೌಕಿಕ ಸಂದೇಶವಾಹಕರಾಗಿ ನೇಮಿಸಲ್ಪಟ್ಟಿರುವಿರಿ ಎಂದು ಹೇಳಲಾಯಿತು.
(ಓ ಮುಹಮ್ಮದರೇ!) ಹೇಳಿರಿ, “ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ.” (ಅಲ್ ಅಅರಾಫ್: 158)
ಒಟ್ಟಿನಲ್ಲಿ ಇತರೆಲ್ಲ ಪ್ರವಾದಿಗಳ ಸಂದೇಶಗಳು ಪ್ರಾದೇಶಿಕವಾಗಿದ್ದುವು ಆದರೆ ಅಂತ್ಯ ಪ್ರವಾದಿಯವರ(ಸ) ಸಂದೇಶಗಳಲ್ಲಿ ಪ್ರಾದೇಶಿಕತೆ ಮತ್ತು ಸಾರ್ವಲೌಕಿಕತೆ ಎರಡೂ ಮಗ್ಗುಲುಗಳು ಸೇರಿವೆ ಎಂದು ಈ ಮೂಲಕ ತಿಳಿದು ಬರುತ್ತದೆ. ಸಂದೇಶದ ಆರಂಭವು ಸ್ವಾಭಾವಿಕವಾಗಿಯೇ ಸ್ಥಾನೀಯ ಮತ್ತು ಜನಾಂಗೀಯ ಮಟ್ಟದಲ್ಲಾಗುತ್ತದೆ, ಬಳಿಕ ಅದರ ಪರಿಧಿಯು ವಿಸ್ತಾರಗೊಂಡು ಸಕಲ ಮಾನವ ಕುಲವನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತದೆ. ಅದರ ಪ್ರಥಮ ಅಭಿಸಂಬೋಧಿತರು ಉಮ್ಮುಲ್ ಕುರಾ (ಮಕ್ಕಾ) ಮತ್ತದರ ಸುತ್ತಮುತ್ತಲ ಪ್ರದೇಶವಾಗಿತ್ತು; ಆದರೆ ಅದರ ನೈಜ ಅಭಿಸಂಬೋಧಿತರು ಲೋಕಾಂತ್ಯದ ವರೆಗಿನ ಸಕಲ ಮಾನವರಾಗಿದ್ದಾರೆ.
ಒಂದು ಸಾರ್ವಲೌಕಿಕ ಸಂದೇಶದ ಮಟ್ಟಿಗೆ ಇದು ತೀರಾ ಸ್ವಾಭಾವಿಕವಾದ ರೂಪವಾಗಿತ್ತು. ವಹೀ(ದಿವ್ಯವಾಣಿ)ಯ ಅವತರಣವು ಏಕಕಾಲದಲ್ಲಿ ಇಡೀ ಮಾನವತೆಯ ಮೇಲೆ ಸೂರ್ಯೋದಯವಾದಂತೆ ಅಲ್ಲ. ದಿವ್ಯವಾಣಿಗೆ ಸಂಬಂಧಿಸಿ ಅಲ್ಲಾಹನ ಚರ್ಯೆ ಏನೆಂದರೆ, ಅದನ್ನು ತನ್ನ ಆಯ್ಕೆಯ ಮಾನವ(ಸಂದೇಶವಾಹಕ)ರ ಮೇಲೆ ಅವತೀರ್ಣಗೊಳಿಸಲಾಗುತ್ತದೆ. ಆ ಮಾನವರ ಮೂಲಕ ತಂದಂತಹ ಸಂದೇಶವು ಇತರ ಮಾನವರ ಮುಖಾಂತರ ಮುಂದುವರಿಯುತ್ತದೆ.
ಕನ್ನಡಾನುವಾ: ಮುಹಮ್ಮದ್ ಅಶ್ರಫ್