ತಸವ್ವುಫ್: ಅಂತರಂಗ ಮತ್ತು ಬಹಿರಂಗ
ಲೇಖಕರು: ಯೂಸುಫುಲ್ ಕರ್ಝಾವಿ
ಈಮಾನ್ ಎಂದರೆ ವಿಶ್ವಾಸವಾಗಿದೆ ಮತ್ತು ತೌಹೀದ್ ಅದರ ತಳಹದಿಯಾಗಿದೆ. ಅಲ್ಲಾಹನನ್ನು ಮಾತ್ರ ತನ್ನ ಪ್ರಭುವಾಗಿ ಅಂಗೀಕರಿಸಿ ಆತನ ಹೊರತು ಅನ್ಯರನ್ನು ಆರಾಧ್ಯರಾಗಿ ಸ್ವೀಕರಿಸಬಾರದು. ಆತನ ಹೊರತು ಇನ್ಯಾರನ್ನೂ ಅಂತಿಮ ನಿರ್ಣಾಯಕನಾಗಿ ಸ್ವೀಕರಿಸಬಾರದು. ಇದು ಲಾ ಇಲಾಹ ಇಲ್ಲಲ್ಲಾಹ್ ಎಂಬ ಮಹತ್ತರವಾದ ಸಾಕ್ಷ್ಯ ವಚನದ ಸಾರಾಂಶವಾಗಿದೆ.
ತೌಹೀದ್ನ ಬಳಿಕ ವಿಶ್ವಾಸದ ಎರಡನೆಯ ಪ್ರಧಾನ ಘಟಕ ರಿಸಾಲಾತ್ (ಪ್ರವಾದಿತ್ವ) ಆಗಿದೆ. ಅಂದರೆ ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂಬ ವಚನವನ್ನು ಅಂಗೀಕರಿಸುವುದು. ಪ್ರವಾದಿ ಮುಹಮ್ಮದ್(ಸ) ದೇವನಲ್ಲ. ದೇವಪುತ್ರನೂ ಅಲ್ಲ, ದೇವತ್ವದ ಯಾವುದೇ ಭಾಗ/ಅಂಶವೂ ಅಲ್ಲ. ದೇವನ ಮಾನವ ರೂಪವೂ ಅಲ್ಲ. ಬದಲಾಗಿ ಅಲ್ಲಾಹನು ನಿಯೋಗಿಸಿದ ಸಂದೇಶವಾಹಕರು. ಅಲ್ಲಾಹನು ತನ್ನ ಗ್ರಂಥವನ್ನು ಅವರ ಮೂಲಕ ಅವತರಣಗೊಳಿಸಿದನು. ಪ್ರವಾದಿವರ್ಯ(ಸ)ರು ತನ್ನ ದೇವನಿಂದ ದೊರೆತ ಸಂದೇಶವನ್ನು ಯಥಾವತ್ತಾಗಿ ಮನುಷ್ಯರಿಗೆ ತಲುಪಿಸಿದರು. ಅದರಲ್ಲಿ ಯಾವುದನ್ನೂ ಅವರು ಅಡಗಿಸಿಡಲಿಲ್ಲ. ಸ್ವಂತ ಇಷ್ಟ ಪ್ರಕಾರ ಯಾವುದನ್ನೂ ಸೇರಿಸಲಿಲ್ಲ. ಕುರ್ಆನ್ ಹೇಳುತ್ತದೆ. “ಇದು ಅವರಿಗೆ ಅವತೀರ್ಣಗೊಳ್ಳುವಂತಹ ದಿವ್ಯವಾಣಿಯಾಗಿದೆ” (ಸೂರಃ ಅನ್ನಜ್ಮ್: 4)
ತಾನು ಈ ಭೂಮಿಯಲ್ಲಿ ನಡೆಸಿದ ಕ್ರಿಯೆ ವಿಕ್ರಿಯೆಗಳಿಗೆ ಪರಲೋಕದಲ್ಲಿ ಪ್ರತಿಫಲ ಸಿಗಲಿದೆ ಎಂಬ ವಿಶ್ವಾಸವಿಡುವುದು ಪ್ರವಾದಿ ಮುಹಮ್ಮದ್(ಸ)ರು ಅಲ್ಲಾಹನ ಮೂಲಕ ಜನರಿಗೆ ತಲುಪಿಸಿದ ವಿಶ್ವಾಸದ ಮತ್ತೊಂದು ಘಟಕವಾಗಿದೆ. ಮರಣವು ಬದುಕಿನ ಕೊನೆಯಲ್ಲ. ಈ ನಶ್ವರವಾದ ಬದುಕಿನ ನಂತರ ಪರಲೋಕದಲ್ಲಿ ಶಾಶ್ವತವಾದ ಜೀವನವಿದೆ. ಅಲ್ಲಿ ಪ್ರತಿಯೋರ್ವನೂ ಈ ಜೀವನದಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ಪ್ರತಿಫಲ ಪಡೆಯುವನು. “ಯಾರಾದರೂ ಅಣು ಗಾತ್ರದಷ್ಟಾದರೂ ಒಳಿತು ಮಾಡಿದರೂ ಅದರ ಫಲ ಕಾಣುವನು. ಯಾರಾದರೂ ಒಂದು ಅಣು ಗಾತ್ರದಷ್ಟು ಕೆಡುಕು ಮಾಡಿದರೂ ಅದರ ಫಲ ಕಾಣುವನು.” (ಸೂರಃ ಅಝ್ಝಿಲ್ಝಾಲ್: 7-8) ಅಬ್ದುಲ್ಲಾ ಬಿನ್ ಅಮ್ರ್(ರ) ವರದಿ ಮಾಡಿದ ಪ್ರವಾದಿ ವಚನವೊಂದು ಹೀಗಿದೆ. “ನಿಮ್ಮಲ್ಲಿ ಓರ್ವನ ಹೃದಯದಲ್ಲಿರುವ ಈಮಾನ್ ಹಳೆಯ ವಸ್ತ್ರದಂತೆ ಕರಗುವುದು. ಅದಕ್ಕಾಗಿ ನಿಮ್ಮ ಹೃದಯದಲ್ಲಿ ಈಮಾನ್ ಬೆಳಗುತ್ತಿರಲು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿರಿ”
ಬದುಕಿನಲ್ಲಿ ಈಮಾನಿನ ಮಹತ್ವ
ನಮ್ಮ ಬದುಕಿನಲ್ಲಿ ಈಮಾನ್ ಸ್ಥಿರವಾಗಿರದು. ಅದು ನಮ್ಮ ಅಸ್ತಿತ್ವ, ನಮ್ಮ ನೆಲೆ ನಿಲ್ಲುವಿಕೆಯ ರಹಸ್ಯ, ನಮ್ಮ ದೌತ್ಯದ ಕಾವಲಾಳುವಾಗಿದೆ. ಈಮಾನ್ ಇಲ್ಲದಿದ್ದರೆ ನಮ್ಮ ಬದುಕಿಗೆ ಅದರ ವಾಸ್ತವಿಕತೆಯೂ ನಷ್ಟ ಹೊಂದುವುದು. ನಮ್ಮ ನೆಲೆಗೆ ಸಮರ್ಥನೆಯೂ ಇರುವುದಿಲ್ಲ. ಪ್ರತಿ ವ್ಯಕ್ತಿತ್ವಕ್ಕೂ ಅದರ ಅಂತರಾಳ ತೆರೆಯುವ ಅದರದ್ದೇ ಆದ ಚಾವಿ ಇದೆ. ಆ ಚಾವಿಯನ್ನು ಕಂಡು ಹಿಡಿದು ಅಂತರಾಳದಲ್ಲಿ ಅಡಗಿರುವ ಸಾಮರ್ಥ್ಯವನ್ನು ಅರಿತು ಬೆಳಗಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಿಶ್ವಾಸೀ ಸಮುದಾಯದ ಚಾವಿ ಈಮಾನ್ ಆಗಿದೆ.
ಮರುಭೂಮಿಯಲ್ಲಿ ಒಂದು ಸಣ್ಣ ಚಾವಿ ಅಥವಾ ಸ್ವಿಚ್ ಇದ್ದರೆ ಕಾರನ್ನು ಓಡಿಸಬಹುದು. ಸಮುದ್ರದಲ್ಲಿ ಹಾಗೆಯೇ ಹಡಗು ಸಂಚರಿಸುವಂತೆ ಮಾಡಬಹುದು. ಹಾಗೆಯೇ ವಿಮಾನವನ್ನೂ ಹಾರಾಡಿಸಬಹುದು, ಹಾಗೆಯೇ ಈಮಾನ್ನ ಶಕ್ತಿಯಿಂದ ಈ ಸಮುದಾಯದ ಒಳಗೆ ಮಲಗಿ ಕೊಂಡಿರುವ ಸಾಮರ್ಥ್ಯವನ್ನು ಎಚ್ಚರಿಸಲು ನಮಗೆ ಸಾಧ್ಯ. ಹಾಗೆಯೇ ಈ ಸಮುದಾಯದ ಅದ್ಭುತವಾದ ಸಾಮರ್ಥ್ಯಗಳನ್ನು ಬಳಸಿ ದಿಟ್ಟ ಇತಿಹಾಸವನ್ನು ನಿರ್ಮಿಸಬಹುದು.
ಈ ಸಮುದಾಯವನ್ನು ಜಾಗೃತಗೊಳಿಸಲು ಎಚ್ಚರಿಸಲು ಹಲವರು ಹಲವು ಘೋಷಣೆಗಳನ್ನು ಬಳಸಿದ್ದಾರೆ. ಕೆಲವರು ರಾಷ್ಟ್ರೀಯತೆಯ ಹೆಸರಲ್ಲಾದರೆ ಇನ್ನು ಕೆಲವರು ಸೋಶಿಯಲಿಝಂ ಮತ್ತು ಕೆಲವರು ಪ್ರಜಾಪ್ರಭುತ್ವದ ಹೆಸರಲ್ಲಿ ಶ್ರಮಿಸಿದ್ದಾರೆ. ಆದರೆ ಅದು ಯಾವುದೂ ನಿರೀಕ್ಷಿತ ಬದಲಾವಣೆ ತಂದಿಲ್ಲ. ಅದು ಹೆಚ್ಚಾಗಿ ವೈಫಲ್ಯವನ್ನೇ ಕಂಡಿದೆ. ಆದರೆ ಈ ಸಮುದಾಯದ ಮುಂದೆ ಕುರ್ಆನ್ ಎತ್ತಿ ಹಿಡಿಯುವ ಅಲ್ಲಾಹು ಅಕ್ಬರ್ ಎಂಬ ಮಹಾ ವಚನಕ್ಕೆ ಲಕ್ಷಾಂತರ ಜನರನ್ನು ಅದರ ತಳಹದಿಯಲ್ಲಿ ನಿಲ್ಲಿಸಲು ಸಾಧ್ಯವಿದೆ. ಅಲ್ಲಾಹನ ಮಾರ್ಗದಲ್ಲಿ ಪ್ರಾಣವನ್ನೇ ಅರ್ಪಿಸಲು ಅವರು ಸನ್ನದ್ಧರು.
ಈಮಾನ್ ನಮ್ಮ ಸಮುದಾಯದ ಪ್ರಕೃತಿದತ್ತವಾದ(ಫಿತ್ರ) ನಿಕ್ಷೇಪವಾಗಿದೆ. ಅದರ ಆಧ್ಯಾತ್ಮಿಕವಾದ ಅಸ್ತಿತ್ವದಲ್ಲಿ ಅದು ಒಂದು ಅಮೂಲ್ಯ ಬೀಜದಂತೆ ಇರಿಸಲಾಗಿದೆ. ಫಲವತ್ತಾದ ಮಣ್ಣಿನಲ್ಲಿ ನೆಟ್ಟ ಉತ್ತಮ ಬೀಜವಾಗಿ ಅದನ್ನು ಉಪಮೆ ಮಾಡಬಹುದು. ಆ ಬೀಜವನ್ನು ನಾವು ಪರಿಪಾಲನೆ ಮಾಡಿ ಬೆಳೆಸಿ ಪೋಷಣೆ ಮಾಡಬೇಕು. ವಿಷ ವಸ್ತುಗಳಿಂದ, ಕ್ರಿಮಿಕೀಟಗಳ ಹಾನಿಗಳಿಂದ ಅದನ್ನು ಕಾಪಾಡಬೇಕು. ಹಾಗೆ ಅದು ಬೆಳೆದು ಬಲಿತು ಹಣ್ಣಾಗಬೇಕು. ಅಲ್ಲಾಹನ ಅನುಮತಿಯೊಂದಿಗೆ ಅದು ಉತ್ತಮ ಫಲಗಳನ್ನು ನೀಡುವುದು.
ಈಮಾನಿನ ಪರಿಶೀಲನೆ ಅಗತ್ಯ ನಮಗೆ ನಮ್ಮ ಯಥಾರ್ಥವಾದ ಈಮಾನಿನ ತರಬೇತಿಯ ಅಗತ್ಯವಿದೆ. ಹೃದಯವನ್ನು ಬೆಳಗಿಸುವ ಈಮಾನಿನ ತರಬೇತಿಯ ಅಗತ್ಯವಿದೆ. ಅಲ್ಲಾಹನ ಬಗೆಗಿನ ಭಯ, ಆತನ ಬಗ್ಗೆ ಇರುವ ಭರವಸೆ, ಪ್ರೀತಿ ಮತ್ತು ಆತ್ಮಬಂಧ ಆತನಲ್ಲಿ ಭರವಸೆಯಿಟ್ಟು ಆತನ ನಿರ್ಣಯದಲ್ಲಿ ಸಂತೃಪ್ತನಾಗಿ, ಆತನೆಡೆಗೆ ಧಾವಿಸಿ, ಆತನ ಆದೇಶಗಳನ್ನು ಪಾಲಿಸಿ ಆತನ ಮತ್ತು ಆತನ ಸಂದೇಶವಾಹಕರ ತೀರ್ಮಾನಕ್ಕೆ ಸಂಪೂರ್ಣವಾಗಿ ಬದ್ಧನಾಗಿ ಶರಣಾಗುವುದು ಈ ತರಬೇತಿಯ ಭಾಗವಾಗಿದೆ.
ಅಲ್ಲಾಹನು ಹೇಳುತ್ತಾನೆ. “ಓ ಮುಹಮ್ಮದರೇ! ನಿಮ್ಮ ಪ್ರಭುವಿನಾಣೆ, ಇವರು ನಿಮ್ಮೊಳಗಿನ ಭಿನ್ನಾಭಿಪ್ರಾಯಗಳಲ್ಲಿ ನಿಮ್ಮನ್ನು ತೀರ್ಪು ನೀಡುವವರೆಂದು ಒಪ್ಪಿಕೊಂಡು ಆ ಬಳಿಕ ನೀವು ಕೊಟ್ಟ ತೀರ್ಪಿನ ಬಗ್ಗೆ ತಮ್ಮ ಮನಸ್ಸಿನಲ್ಲೂ ಯಾವುದೇ ಸಂಕೋಚಪಡದೆ ಅದನ್ನು ಸರ್ವ ಸಂಪೂರ್ಣವಾಗಿ ಒಪ್ಪಿಕೊಳ್ಳುವವರೆಗೂ ಅವರು ಸತ್ಯವಿಶ್ವಾಸಿಗಳಾಗಲಾರರು.” (ಸೂರಃ ಅನ್ನಿಸಾ: 65)
“ಅವರ ಮೊಕದ್ದಮೆಯ ಬಗ್ಗೆ ತೀರ್ಪು ನೀಡುವಂತಾಗಲು ಅವರನ್ನು ಅಲ್ಲಾಹ್ ಮತ್ತು ರಸೂಲರ ಕಡೆಗೆ ಕರೆಯಲಾದಾಗ ನಾವು ಆಲಿಸಿದೆವು ಮತ್ತು ಅನುಸರಿಸಿದೆವು ಎಂದು ಹೇಳುವುದೇ ಸತ್ಯವಿಶ್ವಾಸಿಗಳ ಕರ್ತವ್ಯವಾಗಿರುತ್ತದೆ ಇಂತಹವರೇ ಯಶಸ್ವಿಗಳಾಗುವವರು.” (ಸೂರಃ ಅನ್ನೂರ್: 51)
ಅಲ್ಲಾಹನ ಕರುಣೆಯನ್ನು ಬಯಸಿ, ಆತನ ಶಿಕ್ಷೆಯನ್ನು ಭಯಪಡುವಂತಹಾ ಈಮಾನ್ ನಮಗೆ ಬೇಕಾಗಿದೆ. “ತಿಳಿಯಿರಿ. ಖಂಡಿತವಾಗಿಯೂ ಅಲ್ಲಾಹನು ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ. ಆತನು ಹೆಚ್ಚು ಕ್ಷಮಿಸುವವನೂ ಕರುಣಾ ನಿಧಿಯೂ ಆಗಿರುವನು.” (ಸೂರಃ ಅಲ್ ಮಾಇದ: 98)
ಈ ಆಧ್ಯಾತ್ಮಿಕ ತರಬೇತಿಯ ಮತ್ತೊಂದು ಪ್ರಮುಖ ಭಾಗ ಪರಲೋಕದ ಬಗ್ಗೆ ನಿರಂತರ ಸ್ಮರಿಸುವುದು. ಮರಣ ಮತ್ತು ಅದರ ನೋವು, ಗೋರಿಯೊಳಗಿನ ಕುರಿತು ಭಯ, ವಿಚಾರಣೆಯ ಮೈದಾನ, ಅದರ ಕಾಠಿಣ್ಯ, ಕರ್ಮಗಳ ಲೆಕ್ಕಾಚಾರ ಅದರ ತೀವ್ರತೆ, ಕರ್ಮಗಳ ಪ್ರದರ್ಶನ, ನ್ಯಾಯದ ತಕ್ಕಡಿ, ಅದರ ಸ್ಪಷ್ಟತೆ, ಸಿರಾತ್ ಮತ್ತು ಅದರ ಸಂಕೀರ್ಣತೆ, ಸ್ವರ್ಗ ಮತ್ತು ಅದರ ಶಾಶ್ವತವಾದ ಅನುಗ್ರಹಗಳು, ನರಕ ಮತ್ತು ಅದರ ಅಗ್ನಿಯ ಜ್ವಾಲೆ ಇವೆಲ್ಲವೂ ಹೃದಯದಲ್ಲಿ ಸಜೀವವಾಗಿರಬೇಕು.
ತಸವ್ವುಫ್
ತಸವ್ವುಫ್ ಬಗ್ಗೆ ಕೆಲವರು ಈ ರೀತಿ ಹೇಳಿದ್ದಾರೆ. “ಸೃಷ್ಟಿಕರ್ತನೊಡನೆ ಪ್ರಾಮಾಣಿಕತೆಯಿಂದಿದ್ದು, ಸೃಷ್ಟಿಗಳೊಂದಿಗೆ ಸದ್ವರ್ತನೆ ತೋರುವುದು” ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಅಲ್ಲಾಹನು ತಕ್ವಾ ಪಾಲಿಸುವವರೊಡನೆ, ಒಳಿತು ಮಾಡುವವರೊಂದಿಗಿರುತ್ತಾನೆ.” (ಅನ್ನಹ್ಲ್: 128) ಇದು ಯಥಾರ್ಥವಾದ ಧರ್ಮದ ಆತ್ಮವಾಗಿದೆ. ಅಲ್ಲಾಹನೊಂದಿಗೆ ತಕ್ವಾ ಮತ್ತು ಜನರೊಂದಿಗೆ ಇಹ್ಸಾನ್, ಇದು ತಸವ್ವುಫ್ ನ ತಳಹದಿಯಾಗಿದೆ. ಎಲ್ಲಕ್ಕಿಂತಲೂ ಮೊದಲು ತಕ್ವಾ ಕೂಡಾ ಉತ್ತಮ ಗುಣವಾಗಿದೆ. ಇಬ್ನುಲ್ ಖಯ್ಯಿಮ್ ತನ್ನ ಮದಾರಿಜುಹೀನ್ ಎಂಬ ಗ್ರಂಥದಲ್ಲಿ ಆರಂಭ ಕಾಲದ ಸೂಫಿಗಳಲ್ಲಿ ಓರ್ವರ ಮಾತುಗಳನ್ನು ಹೀಗೆ ಉದ್ದರಿಸಿದ್ದಾರೆ. “ತಸವ್ವುಫ್ ಎಂದರೆ ಉತ್ತಮ ಗುಣಸ್ವಭಾವವಾಗಿದೆ. ಸ್ವಭಾವದಲ್ಲಿ ನಿನಗಿಂತ ಮುಂದಿರುವವನು ತಸವ್ವುಫ್ನಲ್ಲಿ ಕೂಡಾ ನಿನಗಿಂತ ಮುಂದಿರುವನು.” ಅವರು ಮುಂದುವರಿಯುತ್ತಾ “ಧರ್ಮವು ಸಂಪೂರ್ಣವಾಗಿ ಗುಣಸ್ವಭಾವವಾಗಿದೆ. ಆದ್ದರಿಂದ ಸ್ವಭಾವದಲ್ಲಿ ನಿನಗಿಂತ ಮುಂದಿರುವವನು ಧರ್ಮದಲ್ಲಿಯೂ ಮುಂದಿರುತ್ತಾನೆ. ತಕ್ವಾ ಕೂಡಾ ಹಾಗೆಯೇ ಆಗಿದೆ”
ನಮಗೆ ಬೇಕಾದ ತಸವ್ವುಫ್ ಇದಾಗಿದೆ. ಕುರ್ಆನ್ ಮತ್ತು ಸುನ್ನತ್ ಕಲಿಸುವ ಗುಣಸ್ವಭಾವಗಳು ಸಂಸ್ಕರಣೆಯ ತಸವ್ವುಫ್ ಆಗಿದೆ. ಅದು ಈಮಾನನ್ನು ಬೆಳೆಸುವ ತಸವ್ವುಫ್. ಒಳಿತಿನೆಡೆಗೆ ಆಂತರಿಕವಾಗಿ ಎಚ್ಚರಿಸುವ ತಸವ್ವುಫ್. ದೃಢತೆಯನ್ನು ಬಲಪಡಿಸುವ ತಸವ್ವುಫ್. ನಫ್ಸ್ ಶುದ್ಧೀಕರಿಸುವ ತಸವ್ವುಫ್. ಮನುಷ್ಯನ ಸತ್ಕರ್ಮಗಳನ್ನು ಬಲಪಡಿಸುವ ತಸವ್ವುಫ್. ಇವೆಲ್ಲವೂ ಕುರ್ಆನ್, ಸುನ್ನತ್ ಮತ್ತು ಸಲಫುಸ್ಸಾಲಿಹೀನ್ಗಳ ಮಾರ್ಗದರ್ಶನದ ತಳಹದಿಯಲ್ಲಿರಬೇಕು. ಇಂತಹ ತಸವ್ವುಫ್ ನಾವು ಬಯಸುತ್ತೇವೆ, ಅದನ್ನು ಪ್ರೋತ್ಸಾಹಿಸುತ್ತೇವೆ.
ಇದು ಕುರ್ಆನ್ ಮತ್ತು ಪ್ರವಾದಿ ದೌತ್ಯದ ಉದ್ದೇಶಗಳಲ್ಲಿ ಸೇರಿದ ತಝ್ಕಿಯತ್ ಆಗಿದೆ. ಅಲ್ಲಾಹನು ಹೇಳುತ್ತಾನೆ “ಉಮ್ಮೀಗಳ (ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಎಬ್ಬಿಸಿದವನು ಅವನೇ. ಅವರು ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ. ಅವರ ಜೀವನವನ್ನು ಸಂಸ್ಕರಿಸುತ್ತಾರೆ.” (ಸೂರಃ ಅಲ್ ಜುಮ್ಅ: 2)
ಜಿಬ್ರೀಲ್ ಮತ್ತು ಪ್ರವಾದಿವರ್ಯರ ನಡುವಿನ ಸಂಭಾಷಣೆಯ ಇಹ್ಸಾನ್ ಇದಾಗಿದೆ. ಅದನ್ನು ಪ್ರವಾದಿವರ್ಯರು(ಸ) ಹೀಗೆ ವಿವರಿಸಿದ್ದಾರೆ: ‘ನೀನು ಅಲ್ಲಾಹನನ್ನು ನೋಡುತ್ತಿರುವವನಂತೆ ಆತನನ್ನು ಆರಾಧಿಸು. ನೀನು ಅವನನ್ನು ನೋಡದಿದ್ದರೂ ನಿನ್ನನ್ನು ಅವನು ನೋಡುತ್ತಾನೆ.’
ನಿರಾಕರಿಸಲ್ಪಡಬೇಕಾದ ತಸವ್ವುಫ್
ತಸವ್ವುಫ್ನ ಹೆಸರಲ್ಲಿ ನಿಷ್ಕ್ರಿಯರಾಗಿ ಸಮಾಜದಿಂದ ದೂರವಿರುವುದನ್ನು ಪ್ರೋತ್ಸಾಹಿಸುವ ರೀತಿಯು ಒಪ್ಪುವಂತಹದ್ದಲ್ಲ. ಸೃಷ್ಟಿಗಳ ವಿಚಾರವನ್ನು ಅವರ ಸೃಷ್ಟಿಕರ್ತನಿಗೆ ಬಿಟ್ಟು ಬಿಡಿರಿ, ದೇಶದ ವಿಚಾರವನನ್ನು ಅದರ ಆಡಳಿತಗಾರನಿಗೆ ಬಿಟ್ಟು ಕೊಡಿರಿ ಎನ್ನುತ್ತಾ ಕೆಲವರು ಒಳಿತಿನ ಆದೇಶ ಮತ್ತು ಕೆಡುಕಿನ ತಡೆಯುವಿಕೆಯನ್ನು ತಳ್ಳಿಹಾಕುತ್ತಾರೆ ಎಂದಾದರೆ ಆ ತಸವ್ವುಫ್ ಒಪ್ಪುವಂತಹದ್ದಲ್ಲ. ಸೃಷ್ಟಿಗಳನ್ನು ಅಲ್ಲಾಹನು ಆತನಿಗೆ ಇಷ್ಟ ಬಂದಂತೆ ನಿಯಂತ್ರಿಸುವನು ಎಂದು ಪ್ರಚಾರ ಮಾಡುತ್ತಾ ಮನುಷ್ಯನನ್ನು ಜವಾಬ್ದಾರಿಕೆಯಿಂದ ಮುಕ್ತಗೊಳಿಸುವುದು ಸರಿಯಲ್ಲ. ಕೇಳುವಾಗ ಇದು ಸರಿ ಅಂತ ಅನಿಸಬಹುದು. ಆದರೆ ಅದನ್ನು ದುರುದ್ದೇಶದಿಂದ ಬಳಸಲಾಗುತ್ತದೆ.
ಹಾಗೆಯೇ ಶರೀಅತ್ ಮತ್ತು ಹಕೀಕತ್ ಈ ಎರಡನ್ನೂ ಬೇರೆಬೇರೆಯಾಗಿ ಚಿತ್ರಿಸುವ ತಸವ್ವುಫ್ ಸ್ವೀಕಾರ್ಹವಲ್ಲ. ಸೃಷ್ಟಿಗಳನ್ನು ಶರೀಅತ್ನ ದೃಷ್ಟಿಯಲ್ಲಿ ನೋಡಿದರೆ ದ್ವೇಷಿಸುವರು, ಹಕೀಕತ್ನ ದೃಷ್ಟಿಯಲ್ಲಿ ನೋಡಿದರೆ ಸಮರ್ಥಿಸುವರು ಎಂಬ ರೀತಿಯ ಚಿಂತನೆಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ.
ಧರ್ಮವನ್ನು ವ್ಯಾಪಾರೀಕರಣ ಮಾಡುವ ಧಾರ್ಮಿಕತೆ ನಮಗೆ ಬೇಡ. ಅವರು ಕಟ್ಟು ಕಥೆ ಮತ್ತು ಅತಿಶಯೋಕ್ತಿಗಳಿಂದ ಜನರನ್ನು ಮರುಳು ಮಾಡುವರು. ಅದಕ್ಕೆ ಬೇಕಾದ ಮಂತ್ರ ಉರ್ಕುಗಳು ಅವರಲ್ಲಿರುವುದು. ಭಯಾನಕ ಕಥೆಗಳ ಮೂಲಕ ಜನರನ್ನು ಭೀತಿಗೊಳಪಡಿಸಿ ಜನಮನಸ್ಸುಗಳನ್ನು ವಶೀಕರಿಸಿ ಅವರ ಚಿಂತನಾ ಶಕ್ತಿಯನ್ನೇ ದಮನಿಸುತ್ತಾರೆ. ಇದು ಕೂಡಾ ಒಪ್ಪುವಂತಹದ್ದಲ್ಲ. ಜ್ಞಾನವನ್ನು ಮತ್ತು ಅದು ಗಳಿಸುವ ಸರಿಯಾದ ಹಾದಿಯನ್ನು ನಿರಾಕರಿಸಿ ಆಧಾರರಹಿತವಾದುದರ ಬಗ್ಗೆ ಒಲವು ಇರುವ ತಸವ್ವುಫ್ ಅಂಗೀಕಾರಾರ್ಹವಲ್ಲ. ಶರೀಆತ್ನ ಆಧಾರವಿಲ್ಲದೆ ಸ್ಪಷ್ಟವಾದ ಕುರ್ಆನ್ ವಚನ ಮತ್ತು ಪ್ರವಾದಿ ವಚನವನ್ನೂ ಪರಿಗಣಿಸದೆ ಕೇವಲ ಅನುಭವ ಅಥವಾ ಆಂತರಿಕ ಪ್ರಜ್ಞೆಯನ್ನು ಮಾತ್ರ ಆಧಾರವಾಗಿಸುವ ತಸವ್ವುಫ್ ದೈವಿಕವಾದುದಲ್ಲ. ಅದು ಪೈಶಾಚಿಕವಾದುದು. ತನ್ನ ಧರ್ಮದ ಬಗ್ಗೆ ಎಚ್ಚರಿಕೆ ವಹಿಸುವ ಯಾವುದೇ ಮುಸ್ಲಿಮನಿಗೆ ಅಂತಹ ತಸವ್ವುಫ್ ಒಪ್ಪುವಂತಹದ್ದಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ ಅಂಧವಿಶ್ವಾಸ ಚಿಂತನೆಯೊಂದಿಗೆ ಕಟ್ಟು ಕಥೆಗಳನ್ನು ಬೆಳೆಸಿ, ವಿಶ್ವಾಸದಲ್ಲಿ ಶಿರ್ಕನ್ನು ತುರುಕಿಸಿ ಆರಾಧನಾ ಕರ್ಮಗಳಿಗೆ ನವೀನೆತೆಯನ್ನು ಸೇರಿಸಿ ಬದುಕಲ್ಲಿ ನಿಷ್ಕ್ರಿಯತೆಯನ್ನು ಸೃಷ್ಟಿಸುವ ತಸವ್ವುಫ್ ಒಪ್ಪುವಂತಹದ್ದಲ್ಲ; ಅದನ್ನು ಎದುರಿಸಬೇಕು. ಕುರ್ಆನ್ ಮತ್ತು ಸುನ್ನತ್ ಭದ್ರವಾಗಿ ಹಿಡಿಯುವುದೇ ತಸವ್ವುಫ್ ಆಗಿದೆ. ಪ್ರಸಿದ್ಧ ವಿದ್ವಾಂಸ ಅಬುಲ್ ಹಸನ್ ಅಲಿ ನದ್ವಿಯವರು “ಅದು ರಬ್ಬಾನಿಯತ್ ಆಗಿದೆ ಅದು ರಹಬಾನಿಯತ್ ಅಲ್ಲ” ಅಂದರೆ ದೈವಿಕತೆಯಾಗಿದೆ ಸನ್ಯಾಸವಲ್ಲ ಎಂದಿದ್ದಾರೆ.
ಈಮಾನ್ ಬೆಳಗಿಸುವಂತಹಾ ತಸವ್ವುಫ್, ಹೃದಯಗಳನ್ನು ಶುದ್ಧೀಕರಿಸುವ ತಸವ್ವುಫ್, ಗುಣ ಸ್ವಭಾವವನ್ನು ಶುದ್ಧೀಕರಿಸುವ ತಸವ್ವುಫ್, ಜೀವನವನ್ನು ಸಜೀವಗೊಳಿಸುವ ತಸವ್ವುಫ್ ಎಲ್ಲವೂ ಕುರ್ಆನ್ ಮತ್ತು ಸುನ್ನತ್ ನ ಬೆಳಕಿನಲ್ಲಿದ್ದರೆ ಅದು ನಮಗೆ ಅಗತ್ಯವಾದ ತಸವ್ವುಫ್ ಆಗಿದೆ.
ಕನ್ನಡಾನುವಾದ: ಸಲೀಮ್ ಬೋಳಂಗಡಿ