ಭಾಗ 1 – ಪ್ರವಾದಿಯವರ ಜನ್ಮ ದಿನಾಂಕ ಮತ್ತು ಮೌಲಿದ್ ಇತಿಹಾಸ

0
Prophet Muhammad birthday, Prophet Muhammad birth date, Mawlid history, Mawlid celebration origins, Prophet Muhammad biography, Islamic history, Prophet Muhammad Seerah, Mawlid debate, Islamic scholars on Mawlid, Prophet Muhammad birth opinions

ಈ ಲೇಖನವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗದಲ್ಲಿ, ಪ್ರಿಯ ಪ್ರವಾದಿ (ಸಲ್ಲಲ್ಲಾಹು ಅಲೈಹಿ ವ ಸಲ್ಲಂ) ರವರ ಜನ್ಮ ದಿನಾಂಕದ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಉಲ್ಲೇಖಿಸಲಾಗಿದೆ. ಎರಡನೇ ಭಾಗದಲ್ಲಿ, ಈ ದಿನವನ್ನು ಆಚರಿಸುವ ಇತಿಹಾಸವನ್ನು ದಾಖಲಿಸಲಾಗಿದೆ.

ಪೈಗಂಬರ್‌ ಮುಹಮ್ಮದ್‌(ಸ) ರವರ ಜನ್ಮ ದಿನಾಂಕವು ಹಿಜರಿ ಕ್ಯಾಲೆಂಡರ್‌ನ ರಬೀಉಲ್-ಅವ್ವಲ್ ತಿಂಗಳ 12ನೇ ತಾರೀಖು, ‘ಆನೆಯ ವರ್ಷ’ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಇದು ಅಬಿಸೀನಿಯಾದ ಚಕ್ರವರ್ತಿ ಅಬ್ರಹ ಆನೆಗಳ ಸೈನ್ಯದೊಂದಿಗೆ ಕಅಬ ಭವನದ ಮೇಲೆ ದಾಳಿ ಮಾಡಲು ಬಂದ ವರ್ಷವಾಗಿದೆ. ಆದಾಗ್ಯೂ, ಪ್ರವಾದಿ(ಸ)ರವರ ನಿಖರ ಜನ್ಮ ದಿನಾಂಕದ ಬಗ್ಗೆ ಹಿಂದಿನಿಂದಲೂ ದೊಡ್ಡ ಚರ್ಚೆಗಳಿವೆ ಎಂಬುವುದು ಹೆಚ್ಚಿನ ಮುಸ್ಲಿಮರಿಗೆ ತಿಳಿದಿಲ್ಲ. ವಾಸ್ತವದಲ್ಲಿ, ರಬೀಉಲ್-ಅವ್ವಲ್ ತಿಂಗಳ 12ನೇ ತಾರೀಖು ಈ ವಿಷಯದಲ್ಲಿ ಬಲವಾದ ಅಭಿಪ್ರಾಯ ಆಗಿಲ್ಲದೇ ಇರುವ ಸಾಧ್ಯತೆಯೂ ಇದೆ.

ಪ್ರವಾದಿ(ಸ) ರವರು ಯಾವಾಗ ಜನಿಸಿದರು ಎಂಬುದನ್ನು ನಿರ್ದಿಷ್ಟಪಡಿಸುವ ಯಾವುದೇ ವರದಿ ಹದೀಸ್‌ (ಪ್ರವಾದಿ ಸಂಪ್ರದಾಯ) ನ ಪ್ರಸಿದ್ಧ ‘ಆರು ಪುಸ್ತಕ’ ಗಳಲ್ಲಿ ಇಲ್ಲ. ಬದಲಿಗೆ, ಲಭ್ಯವಿರುವ ಏಕೈಕ ವರದಿಯು ಪ್ರವಾದಿಯವರು ಜನಿಸಿದ ದಿನವನ್ನು ತಿಳಿಸುತ್ತದೆ. ಆದರೆ, ದಿನಾಂಕವನ್ನಲ್ಲ. ಅಬು ಖತಾದಾ ವರದಿ ಮಾಡಿದ್ದಾರೆ: “ಒಬ್ಬ ಗ್ರಾಮೀಣನು ಪ್ರವಾದಿಯವರ ಬಳಿಗೆ ಬಂದು ಸೋಮವಾರದ ಉಪವಾಸದ ಬಗ್ಗೆ ಕೇಳಿದಾಗ, ಪ್ರವಾದಿ(ಸ) ರವರು, “ಅದು ನಾನು ಜನಿಸಿದ ದಿನ ಮತ್ತು ದಿವ್ಯಜ್ಞಾನ ಪ್ರಾರಂಭವಾದ ದಿನ” [ಮುಸ್ಲಿಂ] ಎಂದು ತಿಳಿಸಿದ್ದಾರೆ. ಆದ್ದರಿಂದ, ಪ್ರವಾದಿ (ಸ) ರವರು ಸೋಮವಾರ ಜನಿಸಿದರು ಎಂಬುದು ಖಾತ್ರಿಯಾಗುತ್ತದೆ. ಆದರೆ ಯಾವ ತಿಂಗಳ ಸೋಮವಾರ ಮತ್ತು ಯಾವ ವರ್ಷ? ಅದಕ್ಕಾಗಿ, ನಾವು ಬೇರೆ ಮೂಲಗಳನ್ನೂ ಪರಿಶೀಲಿಸಬೇಕಾಗಿದೆ. ಆದರೆ, ಹದೀಸ್‌ನ ಪ್ರಮಾಣಿತ ಯಾವುದೇ ಮೂಲ ಗ್ರಂಥವು ಯಾವ ನಿಖರ ದಿನಾಂಕವನ್ನು ಉಲ್ಲೇಖಿಸುವುದೇ ಇಲ್ಲ ಎಂಬುವುದನ್ನು ಗಮನಿಸಬೇಕಿದೆ.

ಅಲ್-ಬೈಹಕಿಯ ಸುನನ್‌ನಲ್ಲಿರುವ [ಸಂಪುಟ 1, ಪುಟ 79] ಒಂದು ದುರ್ಬಲ ವರದಿಯಲ್ಲಿ, ಸುವೈದ್ ಬಿನ್ ಘಫ್ಲಾ, “ಪ್ರವಾದಿ (ಸ)‌ ಮತ್ತು ನಾನು, ‘ಆನೆಯ ವರ್ಷ’ದಲ್ಲಿ ಜನಿಸಿದ್ದೇವೆ” ಎಂದು ಹೇಳಿರುವ ಉಲ್ಲೇಖವಿದೆ. ಇತರ ಕೆಲವು ಪುರಾವೆಗಳು ಕೂಡ ಅವರು ಆ ವರ್ಷದಲ್ಲಿ ಜನಿಸಿದರು ಎಂಬುವುದನ್ನು ಸೂಚಿಸುತ್ತವೆ. ಆದ್ದರಿಂದ, ಹದೀಸ್‌ನ ವಿಸ್ತೃತ ಗ್ರಂಥಗಳಿಂದ, ಎರಡು ಮಾಹಿತಿ ದೊರೆಯುತ್ತದೆ: ಅವರು ಸೋಮವಾರದಂದು ಜನಿಸಿದರು (ಇದು ದೃಢೀಕರಿಸಲ್ಪಟ್ಟಿದೆ), ಮತ್ತು ಅವರು ‘ಆನೆಯ ವರ್ಷ’ದಲ್ಲಿ ಜನಿಸಿದರು. (ಬಹುಶಃ ಇದು ಸರಿಯಾಗಿರುವ ಸಾಧ್ಯತೆ ಇದೆ).

ನಾವು ಇತಿಹಾಸ ಪುಸ್ತಕಗಳನ್ನು ತಿರುವಿದಾಗ, ಪ್ರವಾದಿ (ಸ) ರವರ ಜನನದ ಬಗ್ಗೆ ಹಲವಾರು ದಿನಾಂಕಗಳು ಕಂಡುಬರುತ್ತವೆ. ಪ್ರವಾದಿಯವರ ಜೀವನಚರಿತ್ರೆಕಾರರಲ್ಲಿ ಆರಂಭಿಕನು ಮತ್ತು ಅತ್ಯಂತ ಅಧಿಕೃತವೂ ಆಗಿರುವ ಇಬ್ನ್ ಇಸ್ಹಾಕ್ (ಮರಣ: 150 AH) ರ ಬರೆವಣಿಗೆಯಲ್ಲಿ, ಯಾವುದೇ ಇಸ್ನಾದ್ ಅಥವಾ ಇತರ ಉಲ್ಲೇಖ ಇಲ್ಲದೆ, ಪ್ರವಾದಿಯವರು ‘ಆನೆಯ ವರ್ಷ’ದ ರಬೀಅಲ್-ಅವ್ವಲ್‌ನ 12 ನೇ ಸೋಮವಾರದಂದು ಜನಿಸಿದರು ಎಂದು ಹೇಳುತ್ತಾರೆ. ಇಬ್ನ್ ಇಸ್ಹಾಕ್ ಮತ್ತು ಪ್ರವಾದಿ(ಸ)ರವರ ಜನನದ ನಡುವೆ ಸರಿಸುಮಾರು ಎರಡು ಶತಮಾನಗಳ ಅಂತರ ಇದೆ. ಆದ್ದರಿಂದ, ಈ ದಿನಾಂಕವನ್ನು ಇತ್ಯರ್ಥಪಡಿಸುವ ಮೊದಲು ಇನ್ನೂ ಕೆಲವು ಪುರಾವೆಗಳನ್ನು ಪರಿಶೀಲಿಸಬೇಕಾಗಿದೆ.

ಮತ್ತೊಂದು ಅತ್ಯಂತ ಪ್ರಮುಖ ಆರಂಭಿಕ ಮೂಲವಾದ ಇಬ್ನ್ ಸಾದ್ (ಮರಣ. 230 AH) ತನ್ನ ತಬಕಾತ್‌ನಲ್ಲಿ ಜನ್ಮ ದಿನಾಂಕದ ಬಗ್ಗೆ ಕೆಲವು ಆರಂಭಿಕ ಮೂಲಗಳ ಅಭಿಪ್ರಾಯವನ್ನು ಉಲ್ಲೇಖಿಸುತ್ತಾರೆ. ಅವು ಕ್ರಮವಾಗಿ ಹೀಗಿವೆ:

1) ರಬೀ’ಅಲ್-ಅವ್ವಲ್‌ನ 10ನೇ ಸೋಮವಾರ, ‘ಆನೆಯ ವರ್ಷ’.

2) ರಬೀ’ಅಲ್-ಅವ್ವಲ್‌ನ 2ನೇ ಸೋಮವಾರ.

3) ಸೋಮವಾರ, ನಿಖರವಾದ ದಿನಾಂಕವಿಲ್ಲ.

4) ‘ಆನೆಯ ವರ್ಷ’, ನಿಖರವಾದ ದಿನಾಂಕವಿಲ್ಲ.

ಇಸ್ಲಾಮ್‌ ಧರ್ಮದ ಆರಂಭಿಕ ಕಾಲದ ಅತ್ಯಂತ ಗೌರವಾನ್ವಿತ ಇತಿಹಾಸಕಾರರಲ್ಲಿ ಒಬ್ಬರಾದ ಇಬ್ನ್ ಸಾದ್, ರಬೀ’ಅಲ್-ಅವ್ವಲ್‌ನ 12ನೇ ದಿನಾಂಕವನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಲೇ ಇಲ್ಲ ಎಂಬುದು ಕುತೂಹಲಕಾರಿಯಾಗಿದೆ. ಮೇಲೆ ಉಲ್ಲೇಖ ಮಾಡಿರುವುದರಲ್ಲಿ ಕೊನೆಯ ಎರಡು ಅಭಿಪ್ರಾಯಗಳು ಸರಿಯಾಗಿವೆ ಮತ್ತು ಯಾವುದೇ ನಿರ್ದಿಷ್ಟ ದಿನಾಂಕದೊಂದಿಗೆ ಘರ್ಷಣೆ ಮಾಡುವುದಿಲ್ಲ. ಆದರೆ, ಈ ಮಾಹಿತಿಯನ್ನು ಮಾತ್ರ ನೀಡಿದ ಹಿಂದಿನ ವರದಿಗಾರರನ್ನು ಉಲ್ಲೇಖಿಸುವ ಮೂಲಕ, ಪ್ರವಾದಿ (ಸ) ರವರ ನಿಖರವಾದ ಜನ್ಮ ದಿನಾಂಕ ಅವರಿಗೆ ತಿಳಿದಿರಲಿಲ್ಲ, ಆದ್ದರಿಂದ ಅವರು ತಮಗೆ ತಿಳಿದ ಮಾಹಿತಿಯನ್ನು ಮಾತ್ರ ನೀಡಿದ್ದಾರೆ ಎಂಬುದನ್ನು ಗಮನಿಸಬಹುದು.

ಪ್ರವಾದಿ (ಸ) ರವರ ಜನ್ಮ ದಿನಾಂಕದ ಕುರಿತು ಮಧ್ಯಕಾಲೀನದ ಪ್ರಸಿದ್ಧ ಇತಿಹಾಸಕಾರ ಇಬ್ನ್ ಕಸೀರ್ (ಮರಣ. 774), ತಮ್ಮ ಪ್ರಖ್ಯಾತ ಗ್ರಂಥ ಅಲ್-ಬಿದಾಯ ವ-ಲ್-ನಿಹಾಯದಲ್ಲಿ ಅನೇಕ ಅಭಿಪ್ರಾಯಗಳನ್ನು ಪಟ್ಟಿ ಮಾಡಿದ್ದಾರೆ. ಇಬ್ನ್‌ ಕಸೀರ್‌ ಹೇಳುತ್ತಾರೆ, ಹೆಚ್ಚಿನ ವಿದ್ವಾಂಸರು ಪ್ರವಾದಿ (ಸ) ರಬೀ’ಅಲ್-ಅವ್ವಲ್ ತಿಂಗಳಲ್ಲಿ ಜನಿಸಿದರು ಎಂದು ನಂಬಿದ್ದರು, ಆದರೆ ತಿಂಗಳ ನಿಖರವಾದ ದಿನದ ಬಗ್ಗೆ ಅವರು ಭಿನ್ನಾಭಿಪ್ರಾಯ ಹೊಂದಿದ್ದರು.

ಈ ಅಭಿಪ್ರಾಯಗಳಲ್ಲಿ ಕೆಲವು ಹೀಗಿವೆ:

1. ರಬೀ’ಅಲ್-ಅವ್ವಲ್ – 2: ಇದು ಸೀರತ್‌ನ ಆರಂಭಿಕ ವಿದ್ವಾಂಸರಲ್ಲಿ ಒಬ್ಬರಾದ ಅಬು ಮಶಾರ್ ಅಲ್-ಸಿಂದಿ (ಮರಣ. 171 AH) ಹಾಗೂ ಪ್ರಸಿದ್ಧ ಮಾಲಿಕಿ ನ್ಯಾಯಶಾಸ್ತ್ರಜ್ಞ ಮತ್ತು ವಿದ್ವಾಂಸ ಇಬ್ನ್ ಅಬ್ದುಲ್-ಬಾರ್ (ಮರಣ. 463) ಅವರ ಆದ್ಯತೆಯ ಅಭಿಪ್ರಾಯವಾಗಿತ್ತು. ಇದನ್ನು ಅಲ್-ವಾಕಿದಿ (ಮರಣ. 207 AH) ರವರು ಸಹ ಸಂಭಾವ್ಯ ಅಭಿಪ್ರಾಯವೆಂದು ಪಟ್ಟಿ ಮಾಡಿದ್ದಾರೆ. [ಹದೀಸ್‌ನ ವರದಿಗಾರನಾಗಿ ಅವರಿಗಿದ್ದ ದೌರ್ಬಲ್ಯದ ಹೊರತಾಗಿಯೂ, ಅಲ್-ವಾಕಿದಿ ಇಸ್ಲಾಮ್‌ನ ಅತ್ಯಂತ ಪ್ರತಿಷ್ಠಿತ ಆರಂಭಿಕ ಇತಿಹಾಸಕಾರರಲ್ಲಿ ಒಬ್ಬರಾಗಿದ್ದರು].

2. ರಬೀ ಅಲ್-ಅವ್ವಲ್‌ – 8: ಇದು ಅಂದಲೂಸಿಯನ್ ವಿದ್ವಾಂಸರಾದ ಇಬ್ನ್ ಹಝಮ್‌ (ಮರಣ. 456 AH), ಮತ್ತು ಅನೇಕ ಆರಂಭಿಕ ಕಾಲದ ವಿದ್ವಾಂಸರ ಅಭಿಪ್ರಾಯವಾಗಿತ್ತು. ಇಮಾಮ್ ಮಾಲಿಕ್ (ಮರಣ. 179 AH) ಈ ಅಭಿಪ್ರಾಯವನ್ನು ಅಲ್-ಜುಹ್ರಿ (ಮರಣ. 128 AH), ಮುಹಮ್ಮದ್ ಬಿನ್ ಜುಬೈರ್ ಬಿನ್‌ ಮುತ್‌ಇಮ್‌ ಮತ್ತು ಬೇರೆ ಕೆಲವರಿಂದ ವರದಿ ಮಾಡಿದ್ದಾರೆ. ಇಬ್ನ್ ಅಬ್ದುಲ್-ಬರ್ ಮೊದಲ ಅಭಿಪ್ರಾಯವನ್ನು ಸಮ್ಮತಿಸುತ್ತಾ, ಈ ಅಭಿಪ್ರಾಯವು ಹೆಚ್ಚಿನ ಇತಿಹಾಸಕಾರರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ. ಪ್ರವಾದಿ (ಸ) ರವರ ಜನನದ ಬಗ್ಗೆ ಒಂದು ಗ್ರಂಥವನ್ನು ಬರೆದ ಮೊದಲಿಗರಲ್ಲಿ ಒಬ್ಬರಾದ ಇಬ್ನ್ ದಿಹ್ಯ (ಮರಣ. 610 AH), ಈ ದಿನಾಂಕವನ್ನು ಅತ್ಯಂತ ಪ್ರಬಲವಾದ ಅಭಿಪ್ರಾಯವೆಂದು ಪರಿಗಣಿಸಿದ್ದಾರೆ.

3. ರಬೀ ಅಲ್-ಅವ್ವಲ್‌ – 10: ಇದನ್ನು ಪ್ರವಾದಿ (ಸ) ರವರ ವಂಶಸ್ಥ ಮತ್ತು ಶಿಯಾಗಳ ಇಮಾಮ್ ಎಂದು ಗುರುತಿಸಲ್ಪಡುವ ಅಬು ಜಾಫರ್ ಅಲ್-ಬಾಕಿರ್ (ಮರಣ. 114 AH) ರವರಿಂದ ಇಬ್ನ್ ಅಸಾಕಿರ್ (ಮರಣ. 571 AH) ವರದಿ ಮಾಡಿದ್ದಾರೆ. ಇದು ಪ್ರಸಿದ್ಧ ವಿದ್ವಾಂಸರಾದ ಅಲ್-ಶಾಬಿ (ಮರಣ. 100 AH) ರವರ ಅಭಿಪ್ರಾಯವಾಗಿದೆ.  ಅಲ್-ಶಾಬಿ ರವರು ಪ್ರವಾದಿ ಸಂಗಾತಿಗಳು ಮತ್ತು ಅಲ್-ವಾಕಿದಿ (ಮರಣ. 207 AH) ರವರ ವಿದ್ಯಾರ್ಥಿಯೂ ಆಗಿದ್ದರು.

4. ರಬೀ ಅಲ್-ಅವ್ವಲ್‌ – 12: ಇದು ಇಬ್ನ್ ಇಸ್ಹಾಕ್ (ಮರಣ. 150) ರವರ ಅಭಿಪ್ರಾಯವಾಗಿದೆ, ಅವರು ಯಾವುದೇ ಉಲ್ಲೇಖವನ್ನು ತಿಳಿಸದೇ ಇದನ್ನು ವರದಿ ಮಾಡಿದ್ದಾರೆ. ಇತರ ಮೂಲಗಳಲ್ಲಿ, ಇದನ್ನು ಜಾಬೀರ್ ಮತ್ತು ಇಬ್ನ್ ಅಬ್ಬಾಸ್ ರವರ ಅಭಿಪ್ರಾಯವೆಂದು ವರದಿ ಮಾಡಲಾಗಿದೆ. ಆದರೆ ಯಾವುದೇ ಪ್ರಾಥಮಿಕ ಪುಸ್ತಕದಲ್ಲಿ ಅವರಿಗೆ ಸಂಬಂಧಿಸಿದ ಯಾವುದೇ ಇಸ್ನಾದ್ ಕಂಡುಬಂದಿಲ್ಲ. ಇಬ್ನ್ ಕಸೀರ್ ಬರೆಯುತ್ತಾರೆ, “…ಮತ್ತು ಇದು ಈ ವಿಷಯದ ಬಗ್ಗೆ ಇರುವ ಅತ್ಯಂತ ಜನಜನಿತ ಅಭಿಪ್ರಾಯವಾಗಿದೆ. ಅಲ್ಲಾಹನೇ ಎಲ್ಲವನ್ನೂ ಬಲ್ಲ.” ಈ ಅಭಿಪ್ರಾಯವನ್ನು ಇಸ್ಲಾಮ್‌ ಧರ್ಮದ ಆರಂಭಿಕ ಕಾಲದ ತಲೆಮಾರುಗಳ ಯಾವುದೇ ಅಧಿಕೃತರ ಹೆಸರಿನಲ್ಲಿ ಉಲ್ಲೇಖ ಮಾಡಿರುವುದು ನನಗೆ ಕಂಡುಬಂದಿಲ್ಲ.

5. ರಬೀ ಅಲ್-ಅವ್ವಲ್‌ – 17: ಇದು ಕೆಲವು ಶಿಯಾ ವಿದ್ವಾಂಸರ ಅಭಿಪ್ರಾಯವಾಗಿದೆ ಮತ್ತು ಹೆಚ್ಚಿನ ಸುನ್ನಿ ಅಧಿಕೃತರು ಇದನ್ನು ತಿರಸ್ಕರಿಸಿದ್ದಾರೆ.

6. ರಬೀ ಅಲ್-ಅವ್ವಲ್‌ – 22: ಈ ಅಭಿಪ್ರಾಯವನ್ನೂ ಕೂಡ ಇಬ್ನ್ ಹಝಮ್‌ ರವರ ಹೆಸರಿಗೆ ಆರೋಪಿಸಲಾಗಿದೆ.

7. ರಮಝಾನ್ ತಿಂಗಳು: ನಿರ್ದಿಷ್ಟ ದಿನಾಂಕದ ಉಲ್ಲೇಖ ಇಲ್ಲ, ‘ಆನೆಯ ವರ್ಷ’. ಇದು ಪ್ರಸಿದ್ಧ ಆರಂಭಿಕ ಕಾಲದ ಇತಿಹಾಸಕಾರ ಅಲ್-ಜುಬೈರ್ ಬಿನ್ ಅಲ್-ಬಕ್ಕರ್ (ಮರಣ. 256) ರವರ ಅಭಿಪ್ರಾಯವಾಗಿತ್ತು. ಮಕ್ಕಾದ ಮೊದಲ ಮತ್ತು ಅತ್ಯಂತ ಅಧಿಕೃತ ಇತಿಹಾಸವನ್ನು ಅವರು ಬರೆದಿದ್ದಾರೆ. ಕೆಲವು ಆರಂಭಿಕ ಕಾಲದ ವಿದ್ವಾಂಸರು ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

8. ರಮಝಾನ್‌ – 12: ‘ಆನೆಯ ವರ್ಷ’. ಈ ಅಭಿಪ್ರಾಯವನ್ನು ಕೆಲವು ಆರಂಭಿಕ ವಿದ್ವಾಂಸರು ಹೊಂದಿದ್ದರೆಂದು ಇಬ್ನ್ ಅಸಾಕಿರ್ ವರದಿ ಮಾಡಿದ್ದಾರೆ.

ಪ್ರವಾದಿ (ಸ) ರವರ ಜನನ ದಿನಾಂಕದ ಬಗ್ಗೆ ಇವು ಅತ್ಯಂತ ಪ್ರಮುಖವಾದ ಕೆಲವು ಅಭಿಪ್ರಾಯಗಳಾಗಿವೆ. ಆದಾಗ್ಯೂ, ಇದು ಯಾವುದೇ ರೀತಿಯಲ್ಲಿ ಸಮಗ್ರವಾಗಿಲ್ಲ – ಉದಾಹರಣೆಗೆ, ಆಧುನಿಕ ಸಂಶೋಧಕರೊಬ್ಬರು ರಬೀ ಅಲ್-ಅವ್ವಲ್ 9 ನೇ ತಾರೀಖು ನಿಖರವಾದ ದಿನಾಂಕಕ್ಕೆ ಪ್ರಬಲ ಅಭ್ಯರ್ಥಿ ಎಂದು ತೀರ್ಮಾನಿಸಿದ್ದಾರೆ. ಆದರೆ, ಕೆಲವು ಪೂರ್ವ ವಿದ್ವಾಂಸರಲ್ಲಿ ವರ್ಷದ ಕುರಿತಾಗಿಯೂ ಭಿನ್ನಾಭಿಪ್ರಾಯಗಳಿದ್ದವು. ಅದು ‘ಆನೆಯ ವರ್ಷ’ದ ಹತ್ತು, ಇಪ್ಪತ್ಮೂರು ಅಥವಾ ನಲವತ್ತು ವರ್ಷಗಳ ನಂತರ ಎಂದು ಹೇಳಿರುವ ಉದಾಹರಣೆಗಳೂ ಇವೆ.

ರಬೀ ಅಲ್-ಅವ್ವಲ್ 12 ನೇ ತಾರೀಖಿನ ಅಭಿಪ್ರಾಯ ಏಕೆ ಇಷ್ಟೊಂದು ಜನಪ್ರಿಯವಾಗಿದೆ?

ಈಗಾಗಲೇ ತಿಳಿಸಿರುವಂತೆ, ಪ್ರವಾದಿ(ಸ)ರವರ ನಿಖರವಾದ ಜನನದ ದಿನಾಂಕದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಅವುಗಳಲ್ಲಿ ಕೆಲವು ತಿಂಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಮತ್ತು ಕೆಲವು ವರ್ಷಗಳಲ್ಲೂ ಅಭಿಪ್ರಾಯ ವ್ಯತ್ಯಾಸ ಇದೆ. ಆದಾಗ್ಯೂ, ಬಹುಪಾಲು ಇತಿಹಾಸಕಾರರು ಮತ್ತು ವಿದ್ವಾಂಸರು ಅವರು ಸೋಮವಾರದಂದು, ರಬೀಅಲ್-ಅವ್ವಲ್‌ನಲ್ಲಿ, ‘ಆನೆಯ ವರ್ಷ’ದಲ್ಲಿ, ಅಂದರೆ ಕ್ರಿ.ಶ. 570 (ಅಥವಾ 571) ಕ್ಕೆ ಜನಿಸಿದರು ಎಂದು ಒಪ್ಪಿಕೊಂಡಿದ್ದಾರೆ.

ಅರ್ಧ ಡಜನ್‌ಗಿಂತಲೂ ಹೆಚ್ಚು ಅಭಿಪ್ರಾಯಗಳು ರಬೀಅಲ್-ಅವ್ವಲ್ ತಿಂಗಳೊಳಗೆ ಅಸ್ತಿತ್ವದಲ್ಲಿವೆ. ವಾಸ್ತವವಾಗಿ, ಈ ಎಲ್ಲಾ ದಿನಾಂಕಗಳಲ್ಲಿ, 8 ಮತ್ತು 10 ಎರಡು ದಿನಾಂಕಗಳು ಇಸ್ಲಾಮ್‌ ಧರ್ಮದ ಆರಂಭಿಕ ಐದು ಶತಮಾನಗಳಲ್ಲಿ ಹೆಚ್ಚು ಜನಪ್ರಿಯ ಅಭಿಪ್ರಾಯಗಳಾಗಿದ್ದವು ಮತ್ತು ಈ ಅಭಿಪ್ರಾಯಕ್ಕೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ನೀಡಲಾಗಿತ್ತು. ಹಾಗಾದರೆ, ರಬೀಅಲ್-ಅವ್ವಲ್‌ನ 12 ನೇ ದಿನಾಂಕವನ್ನು ನಮ್ಮ ಕಾಲದಲ್ಲಿ ಅತ್ಯಂತ ಜನಪ್ರಿಯವೆಂದು ಏಕೆ ಪರಿಗಣಿಸಲಾಗಿದೆ? ಹೆಚ್ಚಿನ ಜನರಿಗೆ ಪರ್ಯಾಯ ಅಭಿಪ್ರಾಯಗಳ ಬಗ್ಗೆ ತಿಳಿದಿಲ್ಲವೇ? ಇಬ್ನ್ ಇಸ್ಹಾಕ್ ಈ ಅಭಿಪ್ರಾಯವನ್ನು ಯಾವುದೇ ಉಲ್ಲೇಖವಿಲ್ಲದೆ ನಿರೂಪಿಸುತ್ತಾರೆ ಎಂಬ ಅಂಶದ ಹಿನ್ನೆಲೆಯಲ್ಲಿ ಈ ಪ್ರಶ್ನೆಯು ಹೆಚ್ಚು ಗಂಭೀರವಾಗಿದೆ. ಇದನ್ನು ಎರಡು ಅಂಶಗಳಿಂದ ವಿವರಿಸಬಹುದು. ಆದರೆ, ಅಲ್ಲಾಹನೇ ಎಲ್ಲವನ್ನೂ ಅರಿತವನಾಗಿದ್ದಾನೆ.

ಮೊದಲನೆಯದಾಗಿ, ಸ್ವತಃ ಇಬ್ನ್ ಇಸ್ಹಾಕ್ ರವರ ಜನಪ್ರಿಯತೆ. ಪ್ರವಾದಿ(ಸ)ರವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿಗೆ ಅವರು ರಚಿಸಿದ ಸೀರತ್‌ ಗ್ರಂಥವೇ ಪ್ರಾಥಮಿಕ ಮೂಲವಾಗಿದೆ. ನಂತರದ ಎಲ್ಲಾ ಬರಹಗಳಿಗೆ ಅವರ ಪುಸ್ತಕವು ಪ್ರಮಾಣಿತ ಉಲ್ಲೇಖವಾಗಿರುವುದರಿಂದ, ಅನೇಕ ವಿದ್ವಾಂಸರು ಇತರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಅವರ ಅಭಿಪ್ರಾಯವನ್ನು ನಕಲಿಸಿ ದಾಖಲು ಮಾಡಿದ್ದಾರೆ. (ಬೇರೆ ಕೆಲವು ಅಭಿಪ್ರಾಯಗಳಿಗೆ ಆರಂಭಿಕ ವಿದ್ವಾಂಸರು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು).

ಎರಡನೆಯದಾಗಿ – ಮತ್ತು ಇದು ಬಹುಶಃ ಬಲವಾದ ಅಂಶವಾಗಿದೆ – ಮೊದಲ ಬಾರಿಗೆ ಜನರ ಗುಂಪು ಪ್ರವಾದಿ (ಸ) ರವರ ಜನ್ಮದಿನವನ್ನು ಸಾರ್ವಜನಿಕ ಆಚರಣೆಯ ದಿನವಾಗಿ ತೆಗೆದುಕೊಳ್ಳಲು ನಿರ್ಧರಿಸಿದಾಗ (ಅಂದರೆ, ಮೌಲಿದ್ ಆಚರಣೆಯ ಆರಂಭ), ಅವರು ಈ ಅಭಿಪ್ರಾಯವನ್ನು ಆರಿಸಿಕೊಂಡರು (ಅಂದರೆ, ರಬೀ ಅಲ್-ಅವ್ವಲ್ 12 ನೇ ತಾರೀಖು). ಆದ್ದರಿಂದ, ಮೌಲಿದ್ ಆಚರಣೆ ಹರಡಿದಾಗ, ಈ ದಿನಾಂಕವೂ ಸಹ ಜನಪ್ರಿಯವಾಯಿತು. ಆದ್ದರಿಂದ ಹಿಜ್ರಾ ಐದನೇ ಶತಮಾನದಲ್ಲಿ, ಅಂದರೆ ಮೌಲಿದ್‌ನ ಪರಿಕಲ್ಪನೆಗಿಂತ ಮೊದಲು ಬರೆಯುತ್ತಿದ್ದ ಇಬ್ನ್ ಅಬ್ದುಲ್-ಬರ್, ರಬೀಅಲ್-ಅವ್ವಲ್‌ನ 8 ನೇ ತಾರೀಖು ಇತಿಹಾಸಕಾರರಲ್ಲಿ ಅತ್ಯಂತ ಸಾಮಾನ್ಯ ಅಭಿಪ್ರಾಯವೆಂದು ಹೇಳುತ್ತಾರೆ. ಮೌಲಿದ್ ಅನ್ನು ಸಾರ್ವಜನಿಕ ಹಬ್ಬವಾಗಿ ಪರಿಚಯಿಸಿದ ಮೂರು ಶತಮಾನಗಳ ನಂತರ ಬರೆಯುತ್ತಿದ್ದ ಇಬ್ನ್ ಕಸೀರ್, ರಬೀಅಲ್-ಅವ್ವಲ್‌ನ 12 ನೇ ತಾರೀಖು ಅತ್ಯಂತ ಸಾಮಾನ್ಯ ಅಭಿಪ್ರಾಯ ಎಂದು ಹೇಳಲು ಇದು ಒಂದು ಕಾರಣವಾಗಿದೆ.

ಉಪಸಂಹಾರ

ಪ್ರವಾದಿ (ಸ) ರವರ ನಿಖರವಾದ ಜನ್ಮ ದಿನಾಂಕವು ಶಾಸ್ತ್ರೀಯ ವಿದ್ವಾಂಸರಲ್ಲಿ ಯಾವಾಗಲೂ ವಿವಾದದ ವಿಷಯವಾಗಿದೆ. ಪ್ರಮಾಣಿತ ಮೂಲ ಪುಸ್ತಕಗಳಲ್ಲಿ ಯಾವುದೇ ಅಧಿಕೃತ ವರದಿ ಇಲ್ಲ. ಆದ್ದರಿಂದ ಇದಕ್ಕೆ ನಂತರದ ಕೆಲವರು ಕೊಟ್ಟಷ್ಟು ಮಹತ್ವ ಆರಂಭದಲ್ಲಿ ಇರಲಿಲ್ಲ ಎಂದು ತೋರಿಸುತ್ತದೆ. ರಬೀಉಲ್-ಅವ್ವಲ್ ತಿಂಗಳ 12ನೇ ತಾರೀಖು ಪ್ರವಾದಿ (ಸ) ರವರ ನಿಖರವಾದ ಜನ್ಮ ದಿನಾಂಕವಾಗಲು ಪ್ರಬಲ ಅಭ್ಯರ್ಥಿಯಾಗಿದೆ, ಆದರೆ 2ನೇ, 8ನೇ ಮತ್ತು 10ನೇ ತಾರೀಖುಗಳು ಸಹ ಸಾಧ್ಯ ಮತ್ತು ಗೌರವಾನ್ವಿತ ಅಭಿಪ್ರಾಯವಾಗಿದೆ. ಆದರೆ, 8ನೇ ತಾರೀಖಿಗೆ ಹೆಚ್ಚು ತೂಕವಿದೆ.

ಮೌಲಿದ್ ಅನ್ನು ಮೊದಲು ಆಚರಿಸಿದವರು ಯಾರು ಮತ್ತು ಅದು ಮುಸ್ಲಿಂ ದೇಶಗಳಲ್ಲಿ ಹೇಗೆ ಹರಡಿತು ಎಂಬುದು ಈ ಲೇಖನದ ಮುಂದಿನ ಭಾಗದಲ್ಲಿ ನೋಡೋಣ. ಇನ್ಶಾ ಅಲ್ಲಾಹ್.

ಡಾ. ಯಾಸಿರ್ ಖಾದಿ

ಶೇಖ್‌ ಯಾಸಿರ್ ರವರು ಮದೀನಾ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಹದೀಸ್‌ನಲ್ಲಿ ಪದವಿ ಮತ್ತು ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಯೇಲ್ ವಿಶ್ವವಿದ್ಯಾಲಯದಿಂದ ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅಲ್ ಮಗ್ರಿಬ್‌ನಲ್ಲಿ ಬೋಧಕ ಮತ್ತು ಶೈಕ್ಷಣಿಕ ವ್ಯವಹಾರಗಳ ಡೀನ್ ಮತ್ತು ಮೆಂಫಿಸ್ ಇಸ್ಲಾಮಿಕ್ ಕೇಂದ್ರದಲ್ಲಿ ವಿದ್ವಾಂಸರಾಗಿದ್ದಾರೆ.

ಕನ್ನಡಾನುವಾಡ: ಎಂ. ಡಿ ಪಾಣೆಮಂಗಳೂರು

ಕೃಪೆ: muslimmatters.org

Leave a Reply