ದೇವ ಸಂಪ್ರೀತಿಯೇ ಗುರಿ: ಹಂದಲ(ರ) ರವರ ತ್ಯಾಗ

0
AZIZ

ಲೇಖಕರು: ಅದ್ಧಮ್ ಶರ್ಕಾವಿ

ಅದು ಉಹುದ್ ಯುದ್ಧದ ಹಿಂದಿನ ರಾತ್ರಿ. ಪ್ರವಾದಿ ಮುಹಮ್ಮದ್‌(ಸ) ರವರ ಸಂಗಾತಿಯಾದ ಹಂದಲ(ರ) ಮತ್ತು ಜಮೀಲ(ರ) ರವರ ವಿವಾಹ ನಡೆದಿತ್ತು. ಆ ರಾತ್ರಿ ಪತ್ನಿಯೊಂದಿಗೆ ಕಳೆಯಲು ಹಂದಲ(ರ)ರು ಪ್ರವಾದಿವರ್ಯ(ಸ)ರ ಬಳಿ ಅನುಮತಿ ಪಡೆದರು. ಆದರೆ, ಇದ್ದಕಿದ್ದಂತೆ ಯುದ್ಧದ ಕರೆಯನ್ನು ಕೇಳಿದ ತಕ್ಷಣ ತಡಮಾಡದೆ ಶಸ್ತ್ರಸಜ್ಜಿತ ಸೈನ್ಯದೊಂದಿಗೆ ಸೇರಲು ತವಕದಿಂದ ಓಡಿ ತಲುಪಿದರು. ಹಂದಲ(ರ) ರವರು ಯುದ್ಧಕ್ಕೆ ಹೊರಡುವಾಗ ದೈಹಿಕ ಶುದ್ದಿ ಮಾಡದೆ ಹೊರಟು ಬಿಟ್ಟಿದ್ದರು.

ಯುದ್ಧ ಆರಂಭವಾಗಿ ರಣಾಂಗಣ ಬಿರುಗಾಳಿಯಂತಾಯಿತು. ನಿಯೋಜಿತ ಬಿಲ್ಲುಗಾರರು ಪ್ರವಾದಿ(ಸ)ಯ ಆಜ್ಞೆಯನ್ನು ಉಲ್ಲಂಘಿಸಿದ ಕಾರಣ ಮುಸ್ಲಿಮ್‌ ಸೇನೆ ಬಹಳ ಸಂಕಷ್ಟವನ್ನು ಅನುಭವಿಸಬೇಕಾಗಿ ಬಂತು. ಆ ಸಂದರ್ಭದಲ್ಲಿ ಹಂದಲ(ರ) ಅತ್ಯಂತ ವೀರಾವೇಶದಿಂದ ಹೋರಾಡುತ್ತಿದ್ದರು. ಶತ್ರು ಪಾಳೆಯದ ನಾಯಕ ಅಬೂಸುಫ್ಯಾನ್ ರನ್ನು ಕುದುರೆಯಿಂದ ಬೀಳಿಸಿ ಅವರನ್ನು ವಧಿಸಲು ಮುಂದಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಶತ್ರುಸೇನೆಯ ಸೈನಿಕನೊಬ್ಬನು ಹಿಂದಿನಿಂದ ಬಂದು ಈಟಿಯೊಂದನ್ನು ಹಂದಲ(ರ) ರವರ ಎದೆಗೆ ಚುಚ್ಚಿದನು.  ಆ ಏಟಿಗೆ ಜರ್ಜರಿತಗೊಂಡು ಹಂದಲ (ರ) ರವರು ಆ ಪವಿತ್ರ ಧ್ವಜದ ಕೆಳಗೆ ಹುತಾತ್ಮರಾದರು.

ಯುದ್ಧ ಮುಗಿದ ಬಳಿಕ ಪ್ರವಾದಿ ಮುಹಮ್ಮದ್‌(ಸ) ಹಾಗೂ ಸಂಗಾತಿಗಳು ಹುತಾತ್ಮರ ತಪಾಸಣೆ ಮಾಡುತ್ತಿರುವಾಗ ಪ್ರವಾದಿ(ಸ)ವರ್ಯರು ಹಂದಲ ಎಲ್ಲಿದ್ದಾರೆಂದು ಎಂದು ಕೇಳಿದರು? ಆಗ ಸಂಗಾತಿಗಳು ಮೌನವಾದರು. ಪ್ರವಾದಿವರ್ಯ(ಸ)ರು ಹೇಳಿದರು: “ಆಕಾಶ ಮತ್ತು ಭೂಮಿಯ ಮಧ್ಯೆ ದೇವಚರರು ಬೆಳ್ಳಿಯ ಪಾತ್ರೆಯಲ್ಲಿ ಮಳೆನೀರಿನೊಂದಿಗೆ ಹಂದಲರನ್ನು ಸ್ನಾನ ಮಾಡಿಸುವುದು ನಾನು ಕಂಡೆ!”

ಸಂಗಾತಿಗಳು ಹೇಳಿದರು: “ಯುದ್ಧದ ಕರೆಯನ್ನು ಕೇಳಿದ ಕೂಡಲೇ ಹಂದಲ ದೈಹಿಕ ಶುದ್ಧಿಮಾಡದೆ ತನ್ನ ಮನೆಯಿಂದ ಓಡಿ ಬಂದವರಾಗಿದ್ದರು.”

ಅಲ್ಲಾಹನ ಮಾರ್ಗದಲ್ಲಿ ಏನಾದರೂ ತ್ಯಾಗಮಾಡಲು ಸಿದ್ಧರಾದರೆ ಅದಕ್ಕೆ ಬದಲಾಗಿ ಅದಕ್ಕಿಂತಲೂ ಉತ್ತಮವಾದುದನ್ನು ಅಲ್ಲಾಹನು ಕೊಡುತ್ತಾನೆ. ಹಂದಲ(ರ)ರಿಗೆ ತಾನು ಹೊಸದಾಗಿ ಮದುವೆಯಾದ ಮದುಮಗ ಎಂದಷ್ಟೇ ಕಾರಣ ಹೇಳಿ ಯುದ್ಧದಿಂದ ದೂರ ನಿಲ್ಲಬಹುದಾಗಿತ್ತು. ಅಂದು ಹಂದಲ(ರ) ಯುದ್ಧರಂಗಕ್ಕೆ ಹೋಗದಿದ್ದರೆ ಯಾರು ಕೂಡ ಅವರನ್ನು ಆಕ್ಷೇಪಿಸುತ್ತಿರಲಿಲ್ಲ. ಆದರೆ, ಯುದ್ಧದ ಕರೆಯನ್ನು ಕೇಳಿದ ತಕ್ಷಣ ಅವರು ತಡಮಾಡದೆ ಕಾರ್ಯಪ್ರವೃತರಾದರು. ಇದು ಪ್ರವಾದಿ(ಸ) ರವರ ಸಂಗಾತಿಗಳ ಮಾದರಿ ಜೀವನವಾಗಿತ್ತು. ಸ್ವಂತ ವಿಷಯಗಳಿಗಿಂತ ಅಲ್ಲಾಹನ ಬಗ್ಗೆ ಹೆಚ್ಚಿನ ಪ್ರಜ್ಞೆ ಅವರಿಗಿತ್ತು. ಅಲ್ಲಾಹನು ಅವರಿಗಾಗಿ ಆಯ್ಕೆ ಮಾಡಿದ ವಿಧಿ ಅವರಿಗೆ ಹೆಚ್ಚು ಪ್ರಿಯವಾಗಿತ್ತು. ಹಂದಲ(ರ) ಅದಕ್ಕಾಗಿಯೇ ಎಲ್ಲವನ್ನು ತ್ಯಾಗ ಮಾಡಿದರು. ಮಾಡಿದ ಕರ್ಮಕ್ಕೆ ತಕ್ಕುದಾದ ಪ್ರತಿಫಲ ನೀಡುವುದು ಅಲ್ಲಾಹನ ಕಾರ್ಯ ರೀತಿಯಾಗಿದೆ. ಆ ಕಾರಣದಿಂದ ಭೂಮಿ ಆಕಾಶಗಳ ಮಧ್ಯೆ ಬೆಳ್ಳಿ ತಟ್ಟೆಯಲ್ಲಿ ದೇವಚರರು ಸ್ನಾನ ಮಾಡಿಸಿದ್ದರು. ಪ್ರವಾದಿ(ಸ) ಹೇಳಿದ ಕೂಡಲೇ ಸಂಗಾತಿಗಳು ಅವರನ್ನು ಹುಡುಕ ತೊಡಗಿದರು. ಅವರಿಗೆ ಹುತಾತ್ಮರಾದ ಹಂದಲ(ರ) ರವರ ಶರೀರ ಸಿಗುವಾಗ ಆ ದೇಹದ ರೋಮಗಳಿಂದ ನೀರಿನ ಹನಿ ತೊಟ್ಟಿಕ್ಕುತಿತ್ತು.

ಅಲ್ಲಾಹನ ಆದೇಶದಂತೆ ಜೀವನ ನಡೆಸಿದರೆ, ವ್ಯಕ್ತಿಯು ಬಯಸಿದಂತೆ ಆತನೊಂದಿಗೆ ಅಲ್ಲಾಹನು ವ್ಯವಹರಿಸುತ್ತಾನೆ. ಅಲ್ಲಾಹನ ಮಾರ್ಗದಲ್ಲಿ ಜೀವನ ಸವೆಸಿ, ಆತನ ಆದೇಶದಂತೆ ಸತ್ಕರ್ಮಗಳನ್ನು ನಿರ್ವಹಿಸುತ್ತಾ, ಆತನು ಮಾತ್ರವೇ ಜೀವನದ ಮುಖ್ಯ ಧ್ಯೇಯವೆಂದು ಅಲ್ಲಾಹನ ಮುಂದೆ ಸಾಬೀತು ಪಡಿಸಬೇಕು. ವ್ಯಕ್ತಿಯು ತಾನು ಮಾಡುವ ದಾನ, ಧರ್ಮ ಮುಂತಾದ ಪುಣ್ಯ ಕರ್ಮಗಳು ಅಲ್ಲಾಹನನ್ನು ಮಾತ್ರ ಉದ್ದೇಶಿಸಿ ಆಗಿದೆಯೆಂದು ತೋರಿಸಬೇಕು. ಅಲ್ಲಾಹನ ಸಂಪ್ರೀತಿ ಗಳಿಕೆ ಮಾತ್ರವೇ ಉದ್ದೇಶವೆಂದು ಸಾಬೀತುಪಡಿಸಬೇಕು. ಅಲ್ಲಾಹನ ಆದೇಶದಂತೆ ಜೀವಿಸಿ, ಅಂತ್ಯ ಹೊಂದಿದರೆ ಆತನು ಖಂಡಿತವಾಗಿಯೂ ಅನ್ಯಾಯ ಮಾಡಲಾರ. ಸರ್ವಶಕ್ತನಾದ ಅಲ್ಲಾಹನೇ ಎಲ್ಲಾ ವಿಷಯಗಳಲ್ಲಿಯೂ ನಮಗೆ ಸತ್ಫಲವನ್ನೇ ಅನುಗ್ರಹಿಸು.

ಕನ್ನಡಾನುವಾದ: ಸಫ್ವಾನ್‌ ಬೋಳಂಗಡಿ

ಕೃಪೆ: islam onlive

Leave a Reply