ಅಲ್ಲಾಹನ ಮಾರ್ಗದಲ್ಲಿ ಸ್ಥಿರತೆ: ರಜ್ಜಾಲ್ ಮತ್ತು ವಹ್ಶಿ(ರ) ಚರಿತ್ರೆಯಿಂದ
ಲೇಖಕರು: ಅಬ್ದುಸ್ಸಲಾಮ್. ಪಿ
ಇಸ್ಲಾಮೀ ಇತಿಹಾಸದಲ್ಲಿ ಅತಿ ಗಮನರ್ಹಾವಾದ ಮತ್ತು ಭಯ ಹುಟ್ಟಿಸುವಂತಹ ಒಂದು ಘಟನೆಯನ್ನು ಇಮಾಮ್ ಇಬ್ನು ಕಸೀರ್ ತನ್ನ “ಅಲ್ ಬಿದಾಯ ವನ್ನಿಹಾಯ” ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ. ಅಬೂ ಹುರೈರಾ(ರ) ರವರು ಉದ್ದರಿಸಿದ ಈ ಘಟನೆಯು ಕರ್ಮಗಳ ಸ್ವೀಕಾರರಾರ್ಹತೆಯು ಕೊನೆಯ ಆಶ್ರಯವಾಗಿದೆ ಎಂಬ ಮಹತ್ತರವಾದ ಪಾಠವನ್ನು ಕಲಿಸುತ್ತದೆ. ಒಮ್ಮೆ ಅಬೂ ಹುರೈರಾ(ರ) ಮತ್ತು ಒಂದು ತಂಡವು ಕುಳಿತುಕೊಂಡಿರುವಾಗ ಪ್ರವಾದಿವರ್ಯರು(ಸ) ಅವರ ಬಳಿ ಹೋಗಿ ಹೀಗೆಂದರು: “ಖಂಡಿತವಾಗಿಯೂ ನಿಮ್ಮ ಮಧ್ಯೆ ಓರ್ವ ವ್ಯಕ್ತಿ ಇದ್ದಾರೆ. ಅವರ ಹಲ್ಲು ನರಕದಲ್ಲಿ ಉಹುದ್ ಬೆಟ್ಟಕ್ಕಿಂತ ದೊಡ್ಡದಾಗಿರುವುದು.” ಇದೊಂದು ಭಯಾನಕ ಎಚ್ಚರಿಕೆಯಾಗಿತ್ತು! ಅಂದರೆ, ಅವರಲ್ಲಿ ಓರ್ವರು ನರಕದ ಹಕ್ಕುದಾರರಿದ್ದಾರೆ ಎಂದು ಸತ್ಯಸಂಧರಾದ ಪ್ರವಾದಿ ಮುಹಮ್ಮದ್(ಸ)ರವರು ಪ್ರವಚನ ಮಾಡಿದ್ದರು.
ಈ ಮುನ್ನೆಚ್ಚರಿಕೆ ನಿಜಗೊಳ್ಳಲೇ ಬೇಕಾಗಿದೆ. ಕಾಲಕ್ರಮೇಣದಲ್ಲಿ ಆ ತಂಡದ ಎಲ್ಲರೂ ಇಸ್ಲಾಮ್ ಮತ್ತು ಈಮಾನ್‌ನಲ್ಲಿ ದೃಢಚಿತ್ತರಾಗಿ ನಿಂತು ಮರಣ ಹೊಂದಿದರು. ಅಬೂ ಹುರೈರಾ(ರ) ಮತ್ತು ಬನೂ ಹನೀಫ ಗೋತ್ರಜರಾದ ರಜ್ಜಾಲ್ ಇಬ್ನು ಉನ್ಫಾ ಮಾತ್ರ ಉಳಿದಿದ್ದರು. ರಜ್ಜಾಲ್ ಇಬ್ನು ಉನ್ಫಾರವರು ಪ್ರವಾದಿವರ್ಯರನ್ನು ಅನುಸರಿಸಿ ಕುರ್‌ಆನ್ ಮತ್ತು ಧಾರ್ಮಿಕ ನಿಯಮ ನಿರ್ದೇಶನಗಳನ್ನು ಕಲಿತು ಆರಾಧನೆಯಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದರು. ಇಬ್ನು ಉಮರ್, ಅವರನ್ನು ನಮ್ಮ ತಂಡದ ಅತ್ಯುತ್ತಮ ಪ್ರತಿನಿಧಿ ಎಂದೇ ಪ್ರಸ್ತಾಪಿಸಿದ್ದರು. ಜನರು ಅವರನ್ನು ಓರ್ವ ಅತ್ಯುತ್ತಮ ಸತ್ಯವಿಶ್ವಾಸಿ ಎಂದೇ ಬಗೆದಿದ್ದರು.
ಅಬೂಬಕರ್ ಸಿದ್ಧೀಕ್(ರ) ರ ಆಡಳಿತ ಕಾಲದಲ್ಲಿ, ಯಮಾಮದಲ್ಲಿ ಮುಸೈಲಿಮತ್ ಬಿನ್ ಕಝ್ಝಾಬ್ (ಸುಳ್ಳು ಪ್ರವಾದಿ) ಪ್ರವಾದಿ ಎಂದು ಸ್ವಯಂ ವಾದಿಸಿ ರಂಗಕ್ಕಿಳಿದನು. ಖಲೀಫ ಅಬೂಬಕ್ಕರ್ ಸಿದ್ದೀಕ್(ರ)ರವರು ರಜ್ಜಾಲ್ ಇಬ್ನು ಉನ್ಫಾ ರವರನ್ನು ದೂತನಾಗಿ ಯಮಾಮಕ್ಕೆ ಕಳುಹಿಸಿದರು. ಯಮಾಮ ತಲುಪಿದ ರಜ್ಜಾಲ್‌ರನ್ನು ಮುಸೈಲಿಮ ಗೌರವಾದರದಿಂದ ಬರಮಾಡಿಕೊಂಡನು. ಮುಸೈಸಲಿಮನು ಸಾಕಷ್ಟು ಸಂಪತ್ತು ಮತ್ತು ಸ್ವರ್ಣ ನೀಡಿ ತನ್ನ ಪ್ರದೇಶದ ಅರ್ಧ ಭಾಗವನ್ನು ನೀಡುವುದಾಗಿ ಆಸೆ ತೋರಿಸಿ, ʻತಾನು ಪ್ರವಾದಿ ಮುಹಮ್ಮದ್(ಸ)ರ ಪ್ರವಾದಿತ್ವದ ಭಾಗವಾಗಿದ್ದೇನೆ ಎಂದು ಪ್ರವಾದಿವರ್ಯರು(ಸ) ಹೇಳಿರುವುದಾಗಿ ಕೇಳಿದ್ದೇನೆʼ ಎಂದು ಜನರ ಮುಂದೆ ಹೇಳುವಂತೆ ರಜ್ಜಾಲ್ ರ ಮೇಲೆ ಒತ್ತಡ ಹೇರಿದನು.
ಮುಸೈಲಿಮನ ಬಳಿಯಿರುವ ಸಕಲ ಸೌಲಭ್ಯ ಮತ್ತು ಐಶ್ವರ್ಯವನ್ನು ನೋಡಿದಾಗ ಬಡತನದಲ್ಲಿ ಬದುಕುತ್ತಿದ್ದ ರಜ್ಜಾಲ್ ಲೌಕಿಕ ಮೋಹಕ್ಕೆ ಒಳಗಾದರು. ತನ್ನ ಈಮಾನ್ ಮತ್ತು ಇಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಆರಾಧನಾ ಕರ್ಮಗಳೆಲ್ಲವನ್ನು ಮರೆತರು. ಜನರ ಮುಂದೆ ತೆರಳಿ, “ಮುಸೈಲಿಮ ಪ್ರವಾದಿವರ್ಯರ ಪ್ರವಾದಿತ್ವದ ಭಾಗವಾಗಿದ್ದಾರೆ. ನಾನು ಪ್ರವಾದಿವರ್ಯರು(ಸ) ಹೇಳಿರುವುದಾಗಿ ಕೇಳಿದ್ದೇನೆ” ಎಂದು ಸುಳ್ಳು ಪುರಾವೆ ನೀಡಿದರು. ಓರ್ವ ಪ್ರಮುಖ ಸಹಾಬಿಯಂತಿದ್ದ ರಜ್ಜಾಲ್‌ರ ಈ ಸುಳ್ಳು ಪುರಾವೆ ಮುಸೈಲಿಮನ ಫಿತ್ನಕ್ಕೆ ದೊಡ್ಡ ಪ್ರಚಾರ ಲಭಿಸಿತು. ರಜ್ಜಾಲ್‌ರ ಸಾಕ್ಷಿಯಿಂದಾಗಿ ಹಲವಾರು ಜನರು ಮುಸೈಲಿಮನ ಅನುಯಾಯಿಗಳಾದರು. ಆತನ ಸೇನೆಯು ನಲುವತ್ತು ಸಾವಿರವನ್ನೂ ಮೀರಿತು.
ಮುಸೈಲಿಮನ ಸೇನೆಯನ್ನು ಎದುರಿಸಲು ಅಬೂಬಕ್ಕರ್ ಸಿದ್ದೀಕ್(ರ)ರವರು ಖಾಲಿದ್ ಬಿನ್ ವಲೀದ್ (ರ) ರ ನೇತೃತ್ವದ ಸೈನ್ಯವನ್ನು ಕಳುಹಿಸಿದರು. ಈ ಸೈನ್ಯದಲ್ಲಿ ಹಿಂದೆ ಉಹುದ್ ಯುದ್ದದಲ್ಲಿ ಹಂಝಾ(ರ)ರವರನ್ನು ಕೊಂದ ಬಳಿಕ ಇಸ್ಲಾಮ್ ಸ್ವೀಕರಿಸಿದಂತಹ ವಹ್ಶಿ ಬಿನ್ ಹರಬ್ ಅಲ್ ಹಬಶಿ ಮೊದಲ ಸಾಲಿನಲ್ಲಿದ್ದರು. ಆ ಯಮಾಮ ಯುದ್ದದಲ್ಲಿ ರಜ್ಜಾಲ್ ಇಬ್ನ್ ಉನ್ಫಾ ಮುಸೈಲಿಮನ ಅನುಯಾಯಿಯಾಗೂ, ಸತ್ಯ ನಿಷೇಧಿಯಾಗೂ ಹತರಾದರು. ರಜ್ಜಾಲ್ ಹತರಾದ ಸುದ್ದಿ ಕೇಳಿದ ಕೂಡಲೇ ಅಬೂ ಹುರೈರಾ(ರ) ಸಂತೃಪ್ತಿಯಿಂದ ಅಲ್ಲಾಹನಿಗೆ ಸಾಷ್ಟಾಂಗವೆರಗಿದರು. ಪ್ರವಾದಿವರ್ಯರು(ಸ) ಮುನ್ಸೂಚನೆ ನೀಡಿದ ವ್ಯಕ್ತಿ ನಾನಲ್ಲ ಎಂಬ ಸಂತೋಷದಿಂದ ಅವರು ಸಾಷ್ಟಾಂಗವೆರಗಿದ್ದರು. ವಹ್ಶಿ ಬಿನ್ ಹರಬ್ ತನ್ನ ಬದುಕಿನಲ್ಲಿ ಮಾಡಿದ ಅತಿ ಘೋರ ಪಾಪ ಅಲ್ಲಾಹನ ಸಿಂಹ ಎಂದೇ ಖ್ಯಾತರಾದ ಹಂಝಾ(ರ)ರವರನ್ನು ಉಹುದ್ ಯುದ್ದದಲ್ಲಿ ವಧಿಸಿದ್ದಾಗಿತ್ತು.
ಹಂಝಾ(ರ) ರವರನ್ನು ವಧಿಸಲು ಅವರಿಗೆ ಎರಡು ಕಾರಣಗಳಿತ್ತು. ಮೊದಲನೇಯದು ಹಂಝಾರನ್ನು ಕೊಂದರೆ ವಹ್ಶಿಯನ್ನು ಗುಲಾಮತ್ವದಿಂದ ಬಿಡುಗಡೆ ಮಾಡುತ್ತೇನೆ ಎಂದು ಜುಬೈರ್ ಬಿನ್ ಮುತ್‌ಇಮ್ ವಾಗ್ದಾನ ನೀಡಿದ್ದರು. ಎರಡನೇಯದಾಗಿ ಹಂಝಾ(ರ)ರವರು ಬದ್ರ್ ಯುದ್ದದಲ್ಲಿ ಜುಬೈರ್‌ನ ತಂದೆ ತುಐಮ ಬಿನ್ ಅದಿಯ್ಯ್ ರನ್ನು ವಧಿಸಿದ್ದರು. ವಹ್ಶಿ ತನ್ನ ದೌತ್ಯವನ್ನು ಯಶಸ್ವಿಯಾಗಿ ಮುಗಿಸಿ ಗುಲಾಮತ್ವದಿಂದ ವಿಮೋಚನೆಗೊಂಡರು. ಮಕ್ಕಾ ವಿಜಯದ ವರೆಗೆ ಇಸ್ಲಾಮ್ ಸ್ವೀಕರಿಸಿರಲಿಲ್ಲ. ಮಕ್ಕಾ ವಿಜಯದ ಬಳಿಕ ಮತ್ತಿತರ ಶತ್ರುಗಳು ಇಸ್ಲಾಮ್ ಸ್ವೀಕರಿಸಿದರೂ ತನ್ನ ಮಹಾಪಾಪದ ಕಾರಣದಿಂದ ಅಲ್ಲಾಹನು ನನ್ನನ್ನು ಕ್ಷಮಿಸಲಾರ ಎಂಬ ಆತಂಕದಿಂದ ಇಸ್ಲಾಮ್ ಸ್ವೀಕರಿಸದೆ ಊರು ತೊರೆದು ಪಲಾಯಣ ಮಾಡಿದರು.
ತನಗಿರುವ ಭಯ ಮತ್ತು ಆತಂಕದ ಕುರಿತು ಅವರು ಪ್ರವಾದಿವರ್ಯರಿಗೆ ಸಂದೇಶ ಕಳುಹಿಸಿದರು. “ತಮ್ಮ ಮೇಲೆಯೇ ಅತಿರೇಕವೇಸಗಿಕೊಂಡಿರುವ ನನ್ನ ದಾಸರೇ, ಅಲ್ಲಾಹನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹನು ಸಕಲ ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ. ಅವನಂತೂ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.” (ಪವಿತ್ರ ಕುರ್‌ಆನ್ 39:53) ಈ ಕರುಣೆಯ ಸಂದೇಶವನ್ನು ಅರಿತ ವಹ್ಶಿ(ರ) ಮದೀನಾ ಪಟ್ಟಣಕ್ಕೆ ಬಂದು ಇಸ್ಲಾಮ್ ಸ್ವೀಕರಿಸುತ್ತಾರೆ. ಪ್ರವಾದಿವರ್ಯರು (ಸ) ಅವರ ಪಾಪವು ಕ್ಷಮಿಸಲ್ಪಟ್ಟ ಸುವಾರ್ತೆಯನ್ನು ಅವರಿಗೆ ತಿಳಿಸಿದರು.
ತಾನು ಮಾಡಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಅಲ್ಲಾಹನ ಅತಿ ದೊಡ್ಡ ಶತ್ರುವನ್ನು ಕೊಂದು ಮುಗಿಸುತ್ತೇನೆ ಎಂಬ ದೃಡ ನಿರ್ಧಾರ ತಾಳಿದ್ದರು. ಅವರ ಇಚ್ಚೆಯಂತೆ ಯಮಾಮ ಯುದ್ದದಲ್ಲಿ ಭಾಗವಹಿಸಿ ಕಪಟ ಪ್ರವಾದಿ ಮುಸೈಲಿಮನನ್ನು ವಧಿಸುವ ಅವಕಾಶ ಪ್ರಾಪ್ತಿಯಾಯಿತು. ಆಗ ವಹ್ಶಿಯಿಂದ; “ಮಾನವರಲ್ಲಿ ಅತ್ಯಂತ ಕೆಟ್ಟವನಾದ ಓರ್ವನನ್ನು ನನ್ನ ಈ ಬಾಣದಿಂದ ಕೊಂದು ಮುಗಿಸಿದೆ. ಅಲ್ ಹಮ್ದುಲಿಲ್ಲಾಹ್…” ಎಂಬ ಉದ್ಘಾರ ಕೇಳಿ ಬಂತು. ಹೀಗೆ ಮಹಾ ಪಾಪದಿಂದ ಮುಕ್ತರಾದ ಅವರು ಮನಸು ಬದಲಾವಣೆಗೊಂಡು ಉತ್ತಮ ಮರಣವನ್ನು ಅಸ್ವಾದಿಸಿ ಅಲ್ಲಾಹನ ಕರುಣೆಯ ಉದಾತ್ತ ಉದಾಹರಣೆಯಾದರು.
ಈ ಘಟನೆಯಲ್ಲಿ ಇಸ್ಲಾಮಿನ ತಳಹದಿಯ ತತ್ವಾದರ್ಶವನ್ನು ಸ್ಪಷ್ಟಪಡಿಸಲಾಗಿದೆ. ರಜ್ಜಾಲ್ ಎಂಬ ವ್ಯಕ್ತಿಯು ಪ್ರವಾದಿವರ್ಯರನ್ನು ಅನುಸರಿಸಿ ಆರಾಧನಾ ಕರ್ಮದಲ್ಲಿ ನಿರತರಾಗಿ ದೃಢಚಿತ್ತರಾಗಿದ್ದರೂ ಲೌಕಿಕ ಮೋಹದ ಕಾರಣದಿಂದ ಆವರು ಮಾರ್ಗಭ್ರಷ್ಟರಾಗೂ, ಅವಿಶ್ವಾಸಿಯಾಗೂ ಮರಣ ಹೊಂದಬೇಕಾಯಿತು. ಉತ್ತಮ ಆರಂಭವಾಗಿ ಕೆಟ್ಟ ಅಂತ್ಯ ಕಾಣಬೇಕಾಯಿತು. ವಹ್ಶಿ ಬಿನ್ ಹರಬ್(ರ) ಅಲ್ಲಾಹನ ಸಿಂಹ ಹಂಝ(ರ)ರವರನ್ನು ವಧಿಸಿದ ಮಹಾಪಾಪ ಮಾಡಿದ್ದರೂ ಆತ್ಮಾರ್ಥವಾದ ಪಶ್ಚಾತ್ತಾಪದ ಕಾರಣದಿಂದ ಅಲ್ಲಾಹನು ಅವರನ್ನು ಸನ್ಮಾರ್ಗದರ್ಶಿಯಾಗಿ ಮಾಡಿ ಉತ್ತಮ ಅಂತ್ಯ ನೀಡಿದನು.
ಪವಿತ್ರ ಕುರ್‌ಆನಿನ ಅಧ್ಯಾಯ ಅಲ್ ಅʻಅರಾಫ್‌ನ 175 ನೇ ಸೂಕ್ತದಲ್ಲಿ ಸೂಚಿಸುವ ಬಲ್‌ಅಮ್ ಇಬ್ನು ಬಾವುರಾ(Bal’am ibn Ba’ura) ಇತಿಹಾಸವು ಇದಕ್ಕೆ ಸಮಾನವಾಗಿದೆ. ದೈವಿಕ ಜ್ಞಾನದ ಸಂದೇಶ ದೊರೆತರೂ ಅದನ್ನು ಲೌಕಿಕ ಲಾಭಕ್ಕಾಗಿ ದುರುಪಯೋಗ ಪಡಿಸಿದ ಮೂಲಕ ಅವರು ಅತ್ಯಂತ ಹೀನ ಸ್ಥಿತಿಗೆ ತಲುಪಿದರು. ಆದ್ದರಿಂದ ನಮ್ಮ ಆರಾಧನೆಗಳನ್ನು ಮರೆತು ಅಹಂಕಾರ ಪಡದೆ ಅಲ್ಲಾಹನೊಂದಿಗೆ ನಿರಂತರ ಹೀಗೆ ಪ್ರಾರ್ಥಿಸಬೇಕಿದೆ: “ಹೃದಯಗಳನ್ನು ಪರಿವರ್ತಿಸುವವನೇ (ಅಲ್ಲಾಹನೇ), ನನ್ನ ಹೃದಯವನ್ನು ನಿನ್ನ ಧರ್ಮದ (ಇಸ್ಲಾಮ್) ಮೇಲೆ ದೃಢವಾಗಿರಿಸು.” (يَا مُقَلِّبَ الْقُلُوبِ ثَبِّتْ قَلْبِي عَلَى دِينِكَ) ಕಾರಣ ಲೌಹುಲ್ ಮಹ್ಫೂದ್ (ಸಂರಕ್ಷಿಸಲ್ಪಟ್ಟ ಫಲಕ)ದಲ್ಲಿ ಏನು ಬರೆಯಲಾಗಿದೆ ಎಂದು ಯಾರಿಗೂ ತಿಳಿದಿಲ್ಲ.
ಕನ್ನಡಾನುವಾದ: ಸಲೀಮ್ ಬೋಳಂಗಡಿ
ಕೃಪೆ: ಇಸ್ಲಾಮ್ ಆನ್‌ಲೈವ್