ರಮಝಾನ್ ಮತ್ತು ಲೈಂಗಿಕತೆ: ಸಂಯಮ ಹಾಗೂ ಸಾಮೀಪ್ಯದ ನಡುವಿನ ಸಮತೋಲನ
ಲೇಖಕರು: ಎಂ.ಎ ದೀನ್ ಅಲವಿ, ಮಂಗಳೂರು
ಇಸ್ಲಾಮ್‌ನಲ್ಲಿ ದಾಂಪತ್ಯ ಜೀವನಕ್ಕೆ ಮಹತ್ವದ ಸ್ಥಾನವಿದೆ. ಮನುಷ್ಯನ ನಿತ್ಯ ಬೇಡಿಕೆಯಲ್ಲಿ ಲೈಂಗಿಕ ಸಂಬಂಧವೂ ಪ್ರಮುಖವಾದದ್ದು. ಲೈಂಗಿಕ ಸಂಬಂಧವು ಮಾನವ ಜೀವನದ ಸಹಜ ಹಾಗೂ ಗೌರವಯುತ ಭಾಗವಾಗಿದೆ. ರಮಝಾನ್ ತಿಂಗಳಲ್ಲಿ ಉಪವಾಸಿಗನು ಅನ್ನಪಾನೀಯಗಳನ್ನು ನಿಯಂತ್ರಿಸುವಂತೆ ತನ್ನ ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸುವುದು ಕಡ್ಡಾಯವಾಗಿದೆ. ವ್ರತಾನುಷ್ಠಾನದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧವಾದಂತೆ ಲೈಂಗಿಕ ಸಂಪರ್ಕವೂ ನಿಷಿದ್ಧವಾಗಿದೆ. ಆದ್ದರಿಂದ ಉಪವಾಸಿಗ ಈ ಅವಧಿಯಲ್ಲಿ ಕಟ್ಟುನಿಟ್ಟಾಗಿ ಈ ಆಜ್ಞೆಯನ್ನು ಪಾಲಿಸುತ್ತಾನೆ.
ಆದರೆ, ಅರಿವಿನ ಕೊರತೆಯಿಂದಾಗಿ ರಮಝಾನಿನ ರಾತ್ರಿ ಹೊತ್ತಿನಲ್ಲಿಯೂ ಲೈಂಗಿಕ ಸಂಪರ್ಕದಿಂದ ಹೆಚ್ಚಿನ ದಂಪತಿಗಳು ದೂರ ನಿಲ್ಲುತ್ತಾರೆ. ಹೆಚ್ಚಾಗಿ ಮಹಿಳೆಯರಲ್ಲಿ ಈ ಬಗ್ಗೆ ತಿಳುವಳಿಕೆಯ ಕೊರತೆಯಿರುವುದರಿಂದ ಅವರು ಈ ಸಮಯದಲ್ಲಿ ಪುರುಷ ಸಾಮೀಪ್ಯವನ್ನು ನಿರಾಕರಿಸುತ್ತಾರೆ. ರಾತ್ರಿ ವೇಳೆ ಸಾಮಿಪ್ಯದಿಂದ ರಮಝಾನಿನ ಉಪವಾಸದ ಪಾವಿತ್ರ್ಯತೆಗೆ ಧಕ್ಕೆ ಬರಬಹುದೆಂದು ಭಯಪಡುತ್ತಾರೆ. ಇದು ಪತಿ-ಪತ್ನಿಯರ ನಡುವೆ ಇರಿಸುಮುರಿಸಿಗೂ ಕಾರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿಶ್ವಾಸಿ ತಿಳಿದಿರಬೇಕಾದ ಪ್ರಾಥಮಿಕ ವಿಷಯವನ್ನು ಈ ಲೇಖನದಲ್ಲಿ ಹಂಚಲು ಪ್ರಯತ್ನಿಸಿದ್ದೇನೆ.
ರಮಝಾನ್ ತಿಂಗಳಲ್ಲಿ ಉಪವಾಸ ತೊರೆದು ಮುಂಜಾನೆ (ಸಹರಿ)ಯ ತನಕ ರಾತ್ರಿಯ ವೇಳೆಯಲ್ಲಿ ಗಂಡ-ಹೆಂಡತಿಯ ಲೈಂಗಿಕ ಸಂಬಂಧವನ್ನು ಅನುಮತಿಸಲಾಗಿದೆಯೆಂದು ಕುರ್‌ಆನ್ ಸ್ಪಷ್ಟವಾಗಿ ತಿಳಿಸಿದೆ. ಅಲ್ಲಾಹನು ಹೇಳುತ್ತಾನೆ:
أُحِلَّ لَكُمْ لَيْلَةَ الصِّيَامِ الرَّفَثُ إِلَىٰ نِسَائِكُمْ
“ಉಪವಾಸ ವ್ರತದಂದು ರಾತ್ರಿಕಾಲದಲ್ಲಿ ನೀವು ನಿಮ್ಮ ಪತ್ನಿಯರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದನ್ನು ‘ಧರ್ಮಸಮ್ಮತ’ಗೊಳಿಸಲಾಗಿರುತ್ತದೆ. ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ. ನೀವು ರಹಸ್ಯವಾಗಿ ಆತ್ಮವಂಚನೆ ಮಾಡುತ್ತಿದ್ದುದು ಅಲ್ಲಾಹನಿಗೆ ತಿಳಿಯಿತು. ಆದರೆ, ಅಲ್ಲಾಹ್ ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿ ನಿಮ್ಮನ್ನು ಕ್ಷಮಿಸಿರುತ್ತಾನೆ. ಇನ್ನು ನೀವು ಅವರೊಂದಿಗೆ ರಮಿಸಿರಿ ಮತ್ತು ಅಲ್ಲಾಹನು ನಿಮಗೆ ನಿಯತಗೊಳಿಸಿದ ಸವಿಯನ್ನನುಭವಿಸಿಕೊಳ್ಳಿರಿ. ಮತ್ತು ಇರುಳಿನ ಕರಿರೇಖೆಯಿಂದ ಉಷಃಕಾಲದ ಬಿಳಿರೇಖೆಯು ನಿಮಗೆ ಬೇರ್ಪಟ್ಟು ತೋರುವವರೆಗಿನ ನಿಶಾವಧಿಯಲ್ಲಿ ತಿನ್ನಿರಿ ಮತ್ತು ಕುಡಿಯಿರಿ. ಅನಂತರ ಈ ಕಾರ್ಯಗಳನ್ನೆಲ್ಲಾ ಬಿಟ್ಟು, ರಾತ್ರಿಯವರೆಗೆ ನಿಮ್ಮ ಉಪವಾಸ ವ್ರತವನ್ನು ಪೂರ್ತಿಗೊಳಿಸಿರಿ”. (ಅಧ್ಯಾಯ 2: ಅಲ್ ಬಕರಃ ಸೂಕ್ತ: 187)
ಉಪವಾಸದ ಸಮಯದಲ್ಲಿ ಮಾನವನ ದೈಹಿಕ ಬೇಡಿಕೆಗಳನ್ನು ದಮನಿಸದೆ ಅದನ್ನು ಗೌರವಿಸುವ ಇಸ್ಲಾಮಿನ ವೈಶಾಲ್ಯತೆಯೇ ಈ ಆದೇಶದ ಮರ್ಮವಾಗಿದೆ. ಇಸ್ಲಾಮ್ ಧರ್ಮದಲ್ಲಿ ದಾಂಪತ್ಯ ಜೀವನವು ಕೇವಲ ದೈಹಿಕ ಅಗತ್ಯ ಮಾತ್ರವಲ್ಲ, ಅದೊಂದು ಆರಾಧನೆಯ ಭಾಗವಾಗಿದೆ.
هُنَّ لِبَاسٌ لَكُمْ وَأَنْتُمْ لِبَاسٌ لَهُنَّ
ದಂಪತಿಗಳನ್ನು ಪರಸ್ಪರ ‘ಉಡುಪು’ (ಲಿಬಾಸ್) ಎಂದು ಕರೆಯುವ ಮೂಲಕ ಅವರ ಸಂಬಂಧದ ಆತ್ಮೀಯತೆ ಮತ್ತು ಗೌಪ್ಯತೆಯನ್ನು ಕುರ್‌ಆನ್ ಎತ್ತಿ ಹಿಡಿದಿದೆ. ರಮಝಾನ್ ಮಾಸವು ಆತ್ಮಶುದ್ಧೀಕರಣದ ಸಮಯವಾಗಿದ್ದರೂ, ವೈವಾಹಿಕ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದಿಲ್ಲ; ಬದಲಾಗಿ ಶಿಸ್ತುಬದ್ಧವಾದ ನಿಯಮಗಳ ಮೂಲಕ ಸಂಯಮವನ್ನು ಕಲಿಸುತ್ತದೆ.
ಲೈಂಗಿಕ ಸಂಪರ್ಕ ನಿಷಿದ್ಧವಾದ ಸಮಯ:
ಉಪವಾಸ ಇರುವ ಹಗಲು ಸಮಯದಲ್ಲಿ (ಮುಂಜಾನೆಯಿಂದ ಸಂಜೆಯವರೆಗೆ) ಪತಿ-ಪತ್ನಿಯರು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ನಿಷಿದ್ಧವಾಗಿದೆ. ಈ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಸಂಭೋಗ ಮಾಡಿದರೆ ಉಪವಾಸ ಮುರಿಯುತ್ತದೆ ಮತ್ತು ‘ಕಫ್ಫಾರಾ’ (ಪ್ರಾಯಶ್ಚಿತ್ತ) ನೀಡುವುದು ಕಡ್ಡಾಯವಾಗುತ್ತದೆ.
ಅಬೂ ಹುರೈರಾ (ರ) ಹೇಳುತ್ತಾರೆ: “ಒಬ್ಬ ವ್ಯಕ್ತಿ ಪ್ರವಾದಿಯವರ (ಸ) ಬಳಿ ಬಂದು- ‘ಯಾ ರಸೂಲಲ್ಲಾಹ್! ನಾನು ಹಾಳಾಗಿ ಹೋದೆ’ ಎಂದನು. ಪ್ರವಾದಿ (ಸ) ಏನಾಯಿತೆಂದು ಕೇಳಿದರು. ಆತ, ‘ನಾನು ರಮಝಾನಿನ ಉಪವಾಸದಲ್ಲಿದ್ದು ಹಗಲಲ್ಲಿ ಪತ್ನಿಯನ್ನು ಸೇರಿದೆ’ ಎಂದು ಹೇಳಿದ. ಪ್ರವಾದಿ (ಸ) ಕೇಳಿದರು- ‘ನಿನ್ನ ಬಳಿ ಯಾರಾದರೂ ಗುಲಾಮರಿದ್ದಾರೆಯೇ?’ ಆತ ಇಲ್ಲವೆಂದು ಹೇಳಿದ. ‘ನಿನಗೆ ನಿರಂತರ ಎರಡು ತಿಂಗಳು ಉಪವಾಸ ಆಚರಿಸಬಹುದೇ?’ ಎಂದು ಕೇಳಿದಾಗ ಆತ ಇಲ್ಲವೆಂದ. ‘ಹಾಗಾದರೆ ನೀನು 60 ಮಂದಿಗೆ ಊಟ ನೀಡಬಲ್ಲೆಯಾ?’ ಎಂದು ಕೇಳಿದಾಗಲೂ ಆತ ಇಲ್ಲವೆಂದ. ಅಷ್ಟರಲ್ಲಿ ಪ್ರವಾದಿಯವರ (ಸ) ಬಳಿಗೆ ಒಂದು ಬುಟ್ಟಿ ತರಲಾಯಿತು. ಅದರಲ್ಲಿ ಖರ್ಜೂರಗಳಿದ್ದವು. ಪ್ರವಾದಿ (ಸ) ಪ್ರಶ್ನಿಸಿದ ವ್ಯಕ್ತಿ ಎಲ್ಲಿ ಹೋದ ಎಂದು ವಿಚಾರಿಸಿದರು. ಆತ ‘ಇದೋ ನಾನಿಲ್ಲಿದ್ದೇನೆ’ ಎಂದನು. ಪ್ರವಾದಿಯವರು (ಸ) ಅವನೊಡನೆ ‘ಇದನ್ನು ಕೊಂಡು ಹೋಗಿ ದಾನ ಮಾಡು’ ಎಂದು ಹೇಳಿದರು. ಆತ ಹೇಳಿದ- ‘ಯಾ ರಸೂಲಲ್ಲಾಹ್! ನನಗಿಂತ ಬಡವನಿಗೆ ನೀಡಬೇಕೆ? ಅಲ್ಲಾಹನಾಣೆ! ಮದೀನದ ಯಾವ ಮನೆಯೂ ನನ್ನ ಮನೆಗಿಂತ ದಾರಿದ್ರ್ಯದಲ್ಲಿಲ್ಲ.’ ಪ್ರವಾದಿ (ಸ) ಇದನ್ನು ಕೇಳಿ ನಕ್ಕು ಬಿಟ್ಟರು, ಅವರ ಹಲ್ಲುಗಳು ಗೋಚರಿಸಿದವು. ತರುವಾಯ, ‘ಇದನ್ನು ಕೊಂಡು ಹೋಗಿ ನಿನ್ನ ಮನೆಯವರಿಗೆ ನೀಡು’ ಎಂದು ಹೇಳಿದರು.” (ಬುಖಾರಿ)
ಮೂರು ವಿಧದ ಪ್ರಾಯಶ್ಚಿತ್ತವನ್ನು ಇಸ್ಲಾಮೀ ಕರ್ಮಶಾಸ್ತ್ರದಲ್ಲಿ (ಫಿಕ್ಹ್) ವಿಧಿಸಲಾಗಿದೆ:
- ಗುಲಾಮನನ್ನು ಬಿಡುಗಡೆ ಮಾಡುವುದು.
- ನಿರಂತರವಾಗಿ ಅರವತ್ತು ದಿನ ಉಪವಾಸ ಮಾಡುವುದು.
- ಅರವತ್ತು ಬಡವರಿಗೆ ಊಟ ನೀಡುವುದು.
ಮನುಷ್ಯನ ಲೈಂಗಿಕ ಅಗತ್ಯಗಳನ್ನು ಪರಿಗಣಿಸಿದಂತೆ ಉಪವಾಸದ ಪವಿತ್ರತೆಯನ್ನು ಇಸ್ಲಾಮ್ ಎಷ್ಟು ಗಂಭೀರವಾಗಿ ಕಾಣುತ್ತದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಇಸ್ಲಾಮಿನ ಆರಂಭಿಕ ಕಾಲದಲ್ಲಿ ಉಪವಾಸದ ರಾತ್ರಿಗಳಲ್ಲೂ ನಿರ್ಬಂಧವಿತ್ತು. ಆದರೆ, ನಂತರ ಅಲ್ಲಾಹನು ಇದನ್ನು ಸರಳಗೊಳಿಸಿದನು ಎಂದು ಪ್ರವಾದಿ ವಚನಗಳಿಂದ ತಿಳಿದು ಬರುತ್ತದೆ.
ಪತಿ-ಪತ್ನಿಯರ ನಡುವಿನ ಪ್ರೀತಿಯಿಂದ ಹಗಲು ಸಮಯದಲ್ಲಿ ಆಸೆ ಹೆಚ್ಚುವ ಭಯವಿದ್ದರೆ ಅತಿಯಾದ ಸಾಮೀಪ್ಯವನ್ನು ತಪ್ಪಿಸುವುದು ಉತ್ತಮವೆಂದು ಕರ್ಮಶಾಸ್ತ್ರೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆಯಿಶಾ (ರ) ಹೇಳುತ್ತಾರೆ: “ಪ್ರವಾದಿ (ಸ) ಉಪವಾಸದಲ್ಲಿದ್ದಾಗ ಚುಂಬಿಸುತ್ತಿದ್ದರು. ನಿಮಗಿಂತ ಹೆಚ್ಚು ಆತ್ಮನಿಯಂತ್ರಣ ಪ್ರವಾದಿಯವರಿಗಿತ್ತು.” (ಬುಖಾರಿ)
ಪ್ರವಾದಿಯವರು (ಸ) ಸ್ವನಿಯಂತ್ರಣಕ್ಕೆ ಮಹತ್ವ ನೀಡಿದರು. ಉಪವಾಸವಿರುವಾಗ ಪತ್ನಿಯನ್ನು ಮುದ್ದಿಸುವುದು ಅಥವಾ ಮುತ್ತಿಕ್ಕುವುದು ನಿಷೇಧವಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಆದರೆ, ಅದು ಲೈಂಗಿಕ ಸಂಬಂಧಕ್ಕೆ (Intercourse) ಕಾರಣವಾಗಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ಪ್ರವಾದಿಯವರು ಹೇಳಿದ್ದಾರೆ: “ನಿಮ್ಮಲ್ಲಿ ಯಾರು ತನ್ನ ಕಾಮದ ಮೇಲೆ ಅತಿ ಹೆಚ್ಚು ನಿಯಂತ್ರಣ ಹೊಂದಿದ್ದಾರೋ ಅವರು ಮಾತ್ರ ಇಂತಹ ಪ್ರೀತಿಯ ವರ್ತನೆ ತೋರಲಿ” (ಮುಸ್ಲಿಮ್). ಅಂದರೆ, ನಿಯಂತ್ರಣ ಕಳೆದುಕೊಳ್ಳುವ ಭೀತಿಯಿದ್ದರೆ ಹಗಲಿನಲ್ಲಿ ಸಂಗಾತಿಯಿಂದ ದೂರವಿರುವುದೇ ಶ್ರೇಷ್ಠ.
ಜನಾಬತ್ (ಕಡ್ಡಾಯ ಸ್ನಾನ):
ಗಂಡ-ಹೆಂಡತಿಯ ಲೈಂಗಿಕ ಸಂಪರ್ಕ ನಡೆದಾಗ ಅಥವಾ ಸ್ವಪ್ನದಲ್ಲಿ ವೀರ್ಯ ಸ್ರಾವವಾದಾಗ ಪ್ರತಿಯೊಬ್ಬರಿಗೂ ‘ಜನಾಬತ್’ ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ನಮಾಝ್, ಕುರ್‌ಆನ್ ಪಠಣ ಮಾಡುವ ಮುಂಚೆ “ಜನಾಬತ್ ಸ್ನಾನ” (ಗುಸ್ಲ್ ಅಲ್-ಜನಾಬಃ) ಮಾಡುವುದು ಕಡ್ಡಾಯವಾಗಿದೆ.
وَإِنْ كُنْتُمْ جُنُبًا فَاطَّهَّرُوا “ಜನಾಬತ್ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧರಾಗಿಕೊಳ್ಳಿರಿ.” (ಅಧ್ಯಾಯ 5: ಅಲ್ ಮಾಇದಃ ಸೂಕ್ತ 6)
ರಮಝಾನಿನ ರಾತ್ರಿ ಲೈಂಗಿಕ ಸಂಪರ್ಕ ನಡೆದರೆ ಫಜ್ರ್ ನಮಾಝ್‌ಗೆ ಮೊದಲು ಗುಸ್ಲ್ ಮಾಡುವುದು ಉತ್ತಮ. ಫಜ್ರ್ ನಂತರ ಮಾಡಿದರೂ ಉಪವಾಸ ಮಾನ್ಯವಾಗುತ್ತದೆ. ಆದರೆ ನಮಾಝ್‌ಗೆ ಮೊದಲು ಸ್ನಾನ ಮಾಡುವುದು ಅನಿವಾರ್ಯವಾಗಿದೆ. ಆಯಿಶಾ ಮತ್ತು ಉಮ್ಮು ಸಲಮ (ರ) ಹೇಳುತ್ತಾರೆ: “ಪ್ರವಾದಿ (ಸ) ಕೆಲವೊಮ್ಮೆ ಜನಾಬತ್‌ನ ಸ್ಥಿತಿಯಲ್ಲಿ ರಾತ್ರಿ ಕಳೆದರೆ ಬೆಳಿಗ್ಗೆದ್ದು ಸ್ನಾನ ಮಾಡಿ ಉಪವಾಸ ಆರಂಭಿಸುತ್ತಿದ್ದರು.” (ಬುಖಾರಿ)
ಇಅತಿಕಾಫ್ ಮತ್ತು ಲೈಂಗಿಕ ಸಂಬಂಧ:
ರಮಝಾನಿನ ಇಅತಿಕಾಫ್ ಅತ್ಯಂತ ಮಹತ್ವದ ಇಬಾದತ್ ಆಗಿದೆ. ರಮಝಾನಿನ ಕೊನೆಯ ಹತ್ತು ದಿನಗಳಲ್ಲಿ ಮಸೀದಿಯಲ್ಲಿ ವಾಸವಿದ್ದು ಆರಾಧನೆಗೆ ತೊಡಗುವುದಕ್ಕೆ ಇಅತಿಕಾಫ್ ಎನ್ನಲಾಗುತ್ತದೆ. ಇಅತಿಕಾಫ್‌ಗೆ ಕುಳಿತವರು ರಾತ್ರಿ ವೇಳೆಯಲ್ಲಿಯೂ ಪತ್ನಿಯರನ್ನು ಸಂಪರ್ಕಿಸಬಾರದು ಎಂದು ಅಲ್ಲಾಹನು ಆದೇಶಿಸಿದ್ದಾನೆ:
“ನೀವು ಮಸೀದಿಗಳಲ್ಲಿ ‘ಇಅತಿಕಾಫ್’ಗೆ (ಧ್ಯಾನಾಸಕ್ತರಾಗಿ) ಕುಳಿತಿರುವಾಗ ಸ್ತ್ರೀ ಸಂಭೋಗ ಮಾಡಬೇಡಿರಿ. ಇವು ಅಲ್ಲಾಹ್ ನಿರ್ಣಯಿಸಿದ ಮೇರೆಗಳು.” (ಅಲ್ ಬಕರಃ – 187)
ಆಯಿಶಾ (ರ) ಹೇಳುತ್ತಾರೆ: “ಪ್ರವಾದಿ (ಸ) ಇಅತಿಕಾಫ್‌ನಲ್ಲಿದ್ದಾಗ ಮಸೀದಿಯಿಂದಲೇ ನನ್ನತ್ತ ತಲೆ ಚಾಚುತ್ತಿದ್ದರು, ನಾನು ಅವರ ತಲೆ ಬಾಚುತ್ತಿದ್ದೆ. ಅವರು ಅನಿವಾರ್ಯ ಅಗತ್ಯವಿಲ್ಲದೆ ಮನೆಗೆ ಬರುತ್ತಿರಲಿಲ್ಲ.”
ಸಾರಾಂಶ: ರಮಝಾನ್ ಮಾಸವು ಶಿಸ್ತನ್ನು ಕಲಿಸುತ್ತದೆ. ಲೈಂಗಿಕ ಸಂಬಂಧವು ಮನುಷ್ಯನ ಸಹಜ ಪ್ರವೃತ್ತಿಯಾಗಿದ್ದು, ಇಸ್ಲಾಮ್ ಅದನ್ನು ನಿಷೇಧಿಸದೆ ವ್ಯವಸ್ಥಿತಗೊಳಿಸಿದೆ. ಹಗಲಿನಲ್ಲಿ ಅಲ್ಲಾಹನಿಗಾಗಿ ದೈಹಿಕ ಇಚ್ಛೆಯನ್ನು ತ್ಯಜಿಸುವುದು ದೊಡ್ಡ ಆರಾಧನೆಯಾದರೆ, ರಾತ್ರಿಯಲ್ಲಿ ಪತಿ-ಪತ್ನಿಯರು ಪರಸ್ಪರ ಪ್ರೀತಿಯಿಂದಿರುವುದು ಸುನ್ನತ್ ಆಗಿದೆ. ಇದು ದಾಂಪತ್ಯದಲ್ಲಿ ಸಂಯಮ ಮತ್ತು ಪ್ರೀತಿಯ ನಡುವಿನ ಸಮತೋಲನವನ್ನು ಕಾಪಾಡುತ್ತದೆ.