ಬಾಹ್ಯ ಮತ್ತು ಆಂತರಿಕ ಉಪವಾಸ – ಕುರ್ಆನಿನ ಪದಪ್ರಯೋಗದ ಅಧ್ಯಯನ
ಲೇಖಕರು: ಹಫೀದ್ ನದ್ವಿ
ಪವಿತ್ರ ಕುರ್ಆನ್ ಅತ್ಯಂತ ನಿಖರ ದೈವಿಕ ವಾಕ್ಯಗಳ ಸಂಗ್ರಹವಾಗಿದೆ. ಅದರಲ್ಲಿರುವ ಪ್ರತಿಯೊಂದು ಪದವೂ ಕೇವಲ ಅಕ್ಷರಗಳ ಗುಂಪಲ್ಲ; ಅದು ಆಳ ಅರ್ಥಗಳನ್ನು ಹೊಂದಿರುವ ಕೋಶವಾಗಿದೆ. ಕುರ್ಆನ್ನ ಪದಗಳನ್ನು ಆಳವಾಗಿ ಪರಿಶೀಲಿಸಿದಾಗ, ಸಂಪೂರ್ಣ ಅರ್ಥ ಕೊಡುವ ಸಮಾನಾರ್ಥಕ ಪದಗಳು (Synonyms) ಇಲ್ಲವೆಂದು ಅನೇಕ ಭಾಷಾ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಒಂದೇ ಅರ್ಥದಂತೆ ಕಾಣುವ ಪದಗಳೂ ತಮ್ಮ ಬಳಕೆಯ ಸಂದರ್ಭಗಳಲ್ಲಿ ಮಹತ್ತರ ವ್ಯತ್ಯಾಸಗಳನ್ನು ತೋರಿಸುತ್ತವೆ. ಈ ಹಿನ್ನೆಲೆಯಲ್ಲೇ, ಸಾಮಾನ್ಯವಾಗಿ ‘ಉಪವಾಸ’ ಎಂದು ನಾವು ಬಳಸುವ ‘ಸೌಮ್’ ಮತ್ತು ‘ಸಿಯಾಮ್’ ಎಂಬ ಎರಡು ಪದಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವು ಇಸ್ಲಾಮೀ ಜ್ಞಾನದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.
ಭಾಷಾ ಅರ್ಥದ ಪ್ರಕಾರ ʼಸೌಮ್’ ಎಂದರೆ ಯಾವುದಾದರೂ ವಿಷಯದಿಂದ ದೂರವಿರುವುದು ಅಥವಾ ನಿಯಂತ್ರಿಸುವುದು. ಅತಿಯಾದ ಚಲನೆಯಿಂದ ಕುದುರೆಯನ್ನು ನಿಯಂತ್ರಿಸುವ ಕ್ರಿಯೆಯನ್ನು ಅರಬಿ ಭಾಷೆಯಲ್ಲಿ ‘ಸೌಮ್’ ಎಂದು ಹೇಳುತ್ತಾರೆ. ಇದು ಕೇವಲ ಆಹಾರ ಮತ್ತು ಪಾನೀಯಗಳಿಂದ ದೂರವಿರುವುದಷ್ಟೇ ಅಲ್ಲ; ಮಾತನಾಡುವುದು, ನಡೆಯುವುದು, ಭಾವನೆಗಳು ಹಾಗೂ ಚಿಂತನೆಗಳನ್ನು ನಿಯಂತ್ರಿಸುವುದೂ ಇದರ ವ್ಯಾಪ್ತಿಯಲ್ಲಿ ಸೇರಿದೆ. ಪವಿತ್ರ ಕುರ್ಆನ್ನಲ್ಲಿ ಮರ್ಯಮ್ (ಅ) ಅವರ ಕುರಿತು ಉಲ್ಲೇಖಿಸುವ ಭಾಗದಲ್ಲಿ, ಅವರು ಆಹಾರ ಮತ್ತು ಪಾನೀಯ ಸೇವಿಸುತ್ತಿದ್ದರೂ ತಮ್ಮ ವ್ರತದ ಬಗ್ಗೆ ಹೇಳಿರುವುದು ಕಂಡುಬರುತ್ತದೆ.
“إِنِّي نَذَرْتُ لِلرَّحْمَٰنِ صَوْمًا فَلَنْ أُكَلِّمَ الْيَوَْ إِنْسِيًّا”
ಇನ್ನೀ ನಧರ್ತು ಲಿರ್ರಹ್ಮಾನಿ ಸೌಮನ್ ಫಲನ್ ಉಕಲ್ಲಿಮಲ್ ಯೌಮ ಇನ್ಸಿಯ್ಯಾ
“ನಾನು ಪರಮ ದಯಾಮಯನಿಗಾಗಿ ಒಂದು ವ್ರತವನ್ನು ಕೈಗೊಂಡಿದ್ದೇನೆ; ಇಂದು ನಾನು ಯಾರೊಂದಿಗೂ ಮಾತನಾಡುವುದಿಲ್ಲ” (19:26) ಎಂದು ಪ್ರತಿಜ್ಞೆ ಮಾಡುವುದನ್ನು ಅಲ್ಲಾಹ್ ‘ಸೌಮ್’ ಎಂದು ವರ್ಣಿಸಿದ್ದಾನೆ. ಇದರಿಂದ ‘ಸೌಮ್’ ಎಂದರೆ ನಮ್ಮ ಅಂಗಾಂಗಗಳ ಹಾಗೂ ನಾಲಿಗೆಯ ಆಧ್ಯಾತ್ಮಿಕ ನಿಯಂತ್ರಣವೆಂದು ಭಾಷಾ ಪಂಡಿತರು ವಿವರಿಸುತ್ತಾರೆ. ಇಲ್ಲಿ ಬಾಹ್ಯ ನಿಯಮಗಳಿಗಿಂತ ಒಳಗಿನ ಶುದ್ಧೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಇದಕ್ಕೆ ವಿರುದ್ಧವಾಗಿ ‘ಸಿಯಾಮ್’ ಎಂಬುದು ಹೆಚ್ಚು ಕರ್ಮಶಾಸ್ತ್ರಪರ ಪದವಾಗಿದೆ. ಫಜ್ರ್ನಿಂದ ಮಗ್ರಿಬ್ವರೆಗೆ ಆಹಾರ, ಪಾನೀಯ ಹಾಗೂ ದಾಂಪತ್ಯದ ಲೈಂಗಿಕ ಸಂಬಂಧಗಳಿಂದ ನಿರ್ದಿಷ್ಟ ನಿಯಮಗಳೊಂದಿಗೆ ದೂರವಿರುವುದನ್ನು ತಾಂತ್ರಿಕವಾಗಿ ‘ಸಿಯಾಮ್’ ಎಂದು ಕರೆಯಲಾಗುತ್ತದೆ. ಪವಿತ್ರ ಕುರ್ಆನ್ ವಿಶ್ವಾಸಿಗಳಿಗೆ ಉಪವಾಸವನ್ನು ಕಡ್ಡಾಯ ಮಾಡಿದ ಸಂದರ್ಭದಲ್ಲಿ ಬಳಸಿದ ಪದ ‘ಸಿಯಾಮ್’ ಆಗಿದೆ. ಕುರ್ಆನ್ನಲ್ಲಿ ‘ಸಿಯಾಮ್’ ಬಳಸಿದ ಎಲ್ಲ ಸ್ಥಳಗಳಲ್ಲೂ ಅದು ಆರಾಧನೆಯ ರೂಪದಲ್ಲೇ ಉಲ್ಲೇಖಿಸಲಾಗಿದೆ. ಉದಾಹರಣೆಗೆ, “ನಿಮಗಿಂತ ಮುಂಚಿನವರಿಗೆ ಕಡ್ಡಾಯ ಮಾಡಲಾದಂತೆ ನಿಮಗೂ ಉಪವಾಸ ಕಡ್ಡಾಯ ಮಾಡಲಾಗಿದೆ” ಎಂದು ಅಲ್-ಬಕರಾ ಅಧ್ಯಾಯದಲ್ಲಿ ಹೇಳಲಾಗಿದೆ. ಇಲ್ಲಿ ಕಾನೂನುಬದ್ಧ ಕಡ್ಡಾಯತೆಯ ಮೇಲೆ ಸ್ಪಷ್ಟ ಒತ್ತಡವಿದೆ. ಏಕೆಂದರೆ, ಅದು ನಿರ್ದಿಷ್ಟ ನಿಯಮಗಳು ಮತ್ತು ಸಮಯಕ್ರಮ ಹೊಂದಿರುವ ಕಡ್ಡಾಯ ಆರಾಧನೆಯಾಗಿದೆ. ಆದ್ದರಿಂದ ‘ಸಿಯಾಮ್’ ಅನ್ನು ಉಪವಾಸದ ಬಾಹ್ಯ ಕಾನೂನು ಚೌಕಟ್ಟಿನ ಹಾಗೂ ಕಡ್ಡಾಯ ಕರ್ತವ್ಯದ ರೂಪವಾಗಿ ಅರ್ಥಮಾಡಿಕೊಳ್ಳಬಹುದು.
ವಾಸ್ತವವಾಗಿ ಇಸ್ಲಾಮ್ ಬೋಧಿಸುವುದು ‘ಸಿಯಾಮ್’ ಮತ್ತು ‘ಸೌಮ್’ ಎರಡೂ ಒಂದಾಗಿ ಸೇರುವ ಸ್ಥಿತಿಯಾಗಿದೆ. ಹೊಟ್ಟೆಯ ಉಪವಾಸವಾದ ‘ಸಿಯಾಮ್’ ಮಾತ್ರ ಪಾಲಿಸಿ, ನಾಲಿಗೆ ಮತ್ತು ಮನಸ್ಸನ್ನು ನಿಯಂತ್ರಿಸುವ ‘ಸೌಮ್’ ಅನ್ನು ಕೈಬಿಡುವುದನ್ನು ಪ್ರವಾದಿ (ಸ) ತೀವ್ರವಾಗಿ ಎಚ್ಚರಿಸಿದ್ದಾರೆ. ಸುಳ್ಳು ಮಾತುಗಳು ಮತ್ತು ಕೆಟ್ಟ ಕೃತ್ಯಗಳನ್ನು ಬಿಟ್ಟಿರದವನ ಉಪವಾಸದ ಹಸಿವು ಮತ್ತು ದಾಹದಲ್ಲಿ ಅಲ್ಲಾಹನಿಗೆ ಯಾವುದೇ ಆಸಕ್ತಿ ಇಲ್ಲವೆಂಬ ಪ್ರವಾದಿ ವಚನ ಈ ಅರ್ಥವನ್ನು ಸ್ಪಷ್ಟಪಡಿಸುತ್ತದೆ. ವಿದ್ವಾಂಸರ ವಿವರಣೆ ಪ್ರಕಾರ ‘ಸಿಯಾಮ್’ ಮಹತ್ತರ ದೇವನಿಷ್ಠೆ (ತಕ್ವಾ) ಪಡೆಯುವ ತರಬೇತಿಯಾಗಿದೆ; ‘ಸೌಮ್’ ಅದರ ಅಂತಿಮ ಗುರಿಯಾಗಿದೆ.
‘ಸಿಯಾಮ್’ ದೇಹದ ಮೂಲಕ ನೆರವೇರಿಸಿದರೆ, ‘ಸೌಮ್’ ಆತ್ಮದ ಮೂಲಕ ಪೂರ್ಣಗೊಳ್ಳಬೇಕು. ಒಂದು ಹದೀಸ್-ಎ-ಕುದ್ಸಿ ನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: “ಮಾನವನ ಎಲ್ಲಾ ಕರ್ಮಗಳು ಅವನಿಗಾಗಿವೆ; ಆದರೆ ‘ಸೌಮ್’ ನನಗಾಗಿಯೇ ಇದೆ.” ಇಲ್ಲಿ ‘ಸಿಯಾಮ್’ ಬದಲು ‘ಸೌಮ್’ ಎಂಬ ಪದದ ಬಳಕೆ ಗಮನಾರ್ಹವಾಗಿದೆ. ಏಕೆಂದರೆ ‘ಸಿಯಾಮ್’ ಅನ್ನು ಬಾಹ್ಯವಾಗಿ ಇತರರು ಗುರುತಿಸಬಹುದು; ಆದರೆ ‘ಸೌಮ್’ ಎನ್ನುವುದು ಅಲ್ಲಾಹ್ ಮತ್ತು ಅವನ ದಾಸನ ನಡುವಿನ ಆಂತರಿಕ ರಹಸ್ಯವಾಗಿದೆ. ಲೋಕ ಪ್ರಶಂಸೆಯ ಆಸೆ ಪ್ರವೇಶಿಸದ ಈ ಮನಸ್ಸಿನ ಶುದ್ಧೀಕರಣವನ್ನು ಅಲ್ಲಾಹ್ ತನ್ನತ್ತ ಸೇರಿಸಿದ್ದಾನೆ. ಕಣ್ಣು, ಕಿವಿ, ನಾಲಿಗೆ ಮತ್ತು ಹೃದಯ — ಇವೆಲ್ಲವೂ ಒಂದೇ ಸಮಯದಲ್ಲಿ ಉಪವಾಸ ಪಾಲಿಸಿದಾಗ ಮಾತ್ರ ಅದು ಅಲ್ಲಾಹನು ಬಯಸುವ ರೀತಿಯ ಉಪವಾಸವಾಗುತ್ತದೆ.
ಆದಾಗ್ಯೂ, ಈ ಎರಡು ಪದಗಳನ್ನು ಭಾಷಾ ಮತ್ತು ಶಾಸ್ತ್ರೀಯ ದೃಷ್ಟಿಕೋನದಿಂದ ಭಿನ್ನವಾಗಿ ನೋಡುವ ವಿದ್ವಾಂಸರು ಇರುವುದರಿಂದ, ಇವು ಎರಡೂ ಒಂದೇ ಅರ್ಥದಲ್ಲಿ ಕುರ್ಆನ್ ಮತ್ತು ಹದೀಸ್ನಲ್ಲಿ ಬಳಸಲ್ಪಟ್ಟಿವೆ ಎಂದು ನಂಬುವ ವಿದ್ವಾಂಸರು ಕೂಡ ಇದ್ದಾರೆ. ಅವರ ಅಭಿಪ್ರಾಯದ ಪ್ರಕಾರ ‘ಸೌಮ್’ ಮತ್ತು ‘ಸಿಯಾಮ್’ ಎರಡೂ ಒಂದೇ ಮೂಲಧಾತುವಿನಿಂದ ಹುಟ್ಟಿಕೊಂಡ ಪದಗಳಾಗಿದ್ದು, ಸಮಾನಾರ್ಥಕವಾಗಿ ಬಳಸಬಹುದು. ಕುರ್ಆನ್ನ ವಿವಿಧ ಸ್ಥಳಗಳಲ್ಲಿ ಸಂದರ್ಭಾನುಸಾರ ಪದರಚನೆಯಲ್ಲಿ ಬದಲಾವಣೆ ಮಾಡಿರುವುದು ಕೇವಲ ಭಾಷಾ ಶೈಲಿಯ ಭಾಗವಾಗಿದ್ದು, ಎರಡೂ ಪದಗಳು ಉಪವಾಸವೆಂಬ ಒಂದೇ ಆರಾಧನೆಯನ್ನು ಸೂಚಿಸುತ್ತವೆ. ಕರ್ಮಶಾಸ್ತ್ರದ ಗ್ರಂಥಗಳಲ್ಲೂ ಹಾಗೂ ಹದೀಸ್ ಸಂಕಲನಗಳಲ್ಲೂ ಈ ಎರಡು ಪದಗಳನ್ನು ಒಂದೇ ಅರ್ಥಕ್ಕಾಗಿ ಪರಸ್ಪರ ಬಳಸಿರುವುದಾಗಿ ಅವರು ಉಲ್ಲೇಖಿಸುತ್ತಾರೆ.
ಆದರೂ ಪದಗಳ ಸೂಕ್ಷ್ಮ ಅರ್ಥ ವ್ಯತ್ಯಾಸಗಳನ್ನು ಪರಿಶೀಲಿಸುವವರಿಗೆ ಈ ವಿಭಜನೆ ಆಳವಾದ ಆಧ್ಯಾತ್ಮಿಕ ಒಳನೋಟವನ್ನು ನೀಡುತ್ತದೆ. ಕಾನೂನುಬದ್ಧ ಕರ್ತವ್ಯವಾಗಿ ನಾವು ಆಚರಿಸುವ ‘ಸಿಯಾಮ್’ ನಮ್ಮನ್ನು ಆಂತರಿಕ ನಿಯಂತ್ರಣವಾದ ‘ಸೌಮ್’ ಕಡೆಗೆ ಕೊಂಡೊಯ್ಯಬೇಕು. ಅನೇಕ ಉಪವಾಸಿಗರಿಗೆ ಹಸಿವು ಮತ್ತು ದಾಹ ಹೊರತುಪಡಿಸಿ ಮತ್ತೇನೂ ಲಭಿಸದಿರಬಹುದು ಎಂಬ ಪ್ರವಾದಿಯ ಮಾತು, ‘ಸೌಮ್’ ಇಲ್ಲದ ‘ಸಿಯಾಮ್’ ಕುರಿತು ಎಚ್ಚರಿಕೆಯಾಗಿದೆ. ಉಪವಾಸದ ಮೂಲಕ ವಿಶ್ವಾಸಿ ಪಡೆಯಬೇಕಾದ ತಕ್ವಾ — ಅಂದರೆ ದೇವನಿಷ್ಠೆ ಮತ್ತು ಪ್ರಜ್ಞೆ — ‘ಸಿಯಾಮ್’ ಮತ್ತು ‘ಸೌಮ್’ ಎರಡೂ ಒಂದಾಗುವಾಗ ಮಾತ್ರ ಸಂಪೂರ್ಣತೆಯನ್ನು ಸಾಧಿಸುತ್ತದೆ. ದೇಹದಿಂದ ನಿಯಮಗಳನ್ನು ಪಾಲಿಸಿ, ಮನಸ್ಸಿನಿಂದ ಅಲ್ಲಾಹನ ಕಡೆಗೆ ಹತ್ತಿರವಾಗುವಾಗ ಮಾತ್ರ ರಮಝಾನ್ ತನ್ನ ಸಂಪೂರ್ಣ ಅರ್ಥವನ್ನು ಪಡೆಯುತ್ತದೆ. ಈ ವಿಭಿನ್ನ ಅರ್ಥಗಳನ್ನು ತಿಳಿದುಕೊಳ್ಳುವುದರಿಂದ ವಿಶ್ವಾಸಿಗಳಿಗೆ ತಮ್ಮ ಆರಾಧನೆಗಳಲ್ಲಿ ಹೆಚ್ಚಿನ ಏಕಾಗ್ರತೆ ಮತ್ತು ಆಧ್ಯಾತ್ಮಿಕತೆಯನ್ನು ಪಡೆಯಲು ಸಹಾಯವಾಗುತ್ತದೆ.
ಕನ್ನಡಾನುವಾದ: ಮುಹಮ್ಮದ್ ಖೈಸ್, ಪಾಣೆಮಂಗಳೂರು
ಕೃಪೆ: Islamonlive