ಇಖ್ಲಾಸ್: ಸರ್ವ ಒಳಿತುಗಳ ಅಡಿಪಾಯ

0
Ikhlas (1)

ಲೇಖಕರು: ಇಬ್ರಾಹಿಂ ಶಂನಾಡ್

ಇಖ್ಲಾಸ್ ಎಂದರೆ ದೇವನೊಂದಿಗಿರುವ ಪ್ರೀತಿ, ಅನುಸರಣೆ ಮತ್ತು ನಿಷ್ಠೆಯಿಂದ ಮನಸ್ಸಿನಲ್ಲಿ ಉಂಟಾಗುವ ಆಂತರಿಕ ಪ್ರೇರಣೆಯಾಗಿದೆ. ಪರಲೋಕದ ವಿಚಾರಣೆಯ ಬಗ್ಗೆ ದೃಢ ವಿಶ್ವಾಸದೊಂದಿಗೆ, ಸ್ವರ್ಗ ಲಭಿಸುತ್ತದೆ ಎಂಬ ನಂಬಿಕೆಯೊಂದಿಗೆ ಮತ್ತು ಕಳಂಕರಹಿತ ಉದ್ದೇಶದಿಂದ ಸತ್ಕರ್ಮಗಳನ್ನು ಮಾಡುವುದೇ ಇಖ್ಲಾಸ್.

ಎಲ್ಲಾ ಸತ್ಕರ್ಮಗಳನ್ನು ಮಾಡುವಾಗ ಕಳಂಕರಹಿತ ಮನಸ್ಥಿತಿ ಅಥವಾ ಇಖ್ಲಾಸ್ ಇರಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಒಬ್ಬನು ಅನೇಕ ಸತ್ಕರ್ಮಗಳನ್ನು ಮಾಡುವುದಕ್ಕಿಂತ, ಅವುಗಳನ್ನು ಸದುದ್ದೇಶದೊಂದಿಗೆ ಮಾಡುವುದು ಮುಖ್ಯವಾಗಿದೆ. ಇಸ್ಲಾಮನ್ನು ಕಲಿಯಲು, ಅರ್ಥಮಾಡಿಕೊಳ್ಳಲು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವವರು ಮೊದಲು ತಿಳಿದಿರಬೇಕಾದ ವಿಷಯ ಇದಾಗಿದೆ. ಕಾರಣವೇನೆಂದರೆ, ಇಖ್ಲಾಸನ್ನು ಮಾನದಂಡವಾಗಿಸಿ ಮನುಷ್ಯನ ಕರ್ಮಗಳನ್ನು ಪರಲೋಕದಲ್ಲಿ ವಿಚಾರಣೆ ನಡೆಸಲಾಗುವುದು.

ಇಖ್ಲಾಸ್ ಎಂಬ ಪದಕ್ಕೆ ಪ್ರಾಮಾಣಿಕತೆ, ನಿಷ್ಕಳಂಕತೆ, ಮುಗ್ಧತೆ ಹಾಗೂ ಕಳಂಕರಹಿತ ಮಾನಸಿಕ ಸ್ಥಿತಿ ಮುಂತಾದ ಅರ್ಥಗಳನ್ನು ನೀಡಬಹುದು. ಅಲ್ಲಾಹನ ಪ್ರೀತಿಯನ್ನು ಮಾತ್ರ ಬಯಸಿ ಮುಸ್ಲಿಮರು ಸತ್ಕರ್ಮಗಳನ್ನು ಮಾಡಬೇಕು. ಭೌತಿಕ ಲಾಭ, ಹೊಗಳಿಕೆ ಮತ್ತು ಇತರರಿಗೆ ತೋರಿಸಲು ಮಾಡುವ ಕರ್ಮಗಳು ವ್ಯರ್ಥವಾಗುತ್ತವೆ. ಒಂದು ಕಪ್ ಶುದ್ಧವಾದ ಹಾಲನ್ನು ಕಲುಷಿತಗೊಳಿಸಲು ಒಂದು ಹನಿ ಕೊಳೆ ಸಾಕಾಗುತ್ತದೆ.

ಪವಿತ್ರ ಕುರ್‌ಆನ್ ಮತ್ತು ಹದೀಸ್‌ನಲ್ಲಿ ಇಖ್ಲಾಸ್:

ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಸಂಗ್ರಹದಲ್ಲಿ ಇಖ್ಲಾಸ್ ಬಗ್ಗೆ ಅನೇಕ ಉಲ್ಲೇಖಗಳಿವೆ.

  • “ಅವರಿಗೆ ನೀಡಲಾಗಿದ್ದ ಆದೇಶವು; ಅವರು ತಮ್ಮ ಧರ್ಮವನ್ನು ನಿಷ್ಕಳಂಕವಾಗಿ ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು, ಏಕನಿಷ್ಠೆಯಿಂದ ಅಲ್ಲಾಹನ ದಾಸ್ಯ ಮಾಡಬೇಕು, ನಮಾಝನ್ನು ಸಂಸ್ಥಾಪಿಸಬೇಕು ಮತ್ತು ಝಕಾತನ್ನು ನೀಡಬೇಕು ಎಂಬುದರ ಹೊರತು ಬೇರೇನೂ ಆಗಿರಲಿಲ್ಲ. ಇದುವೇ ಅತ್ಯಂತ ಸರಿಯಾದ ಧರ್ಮ.” (ಪವಿತ್ರ ಕುರ್‌ಆನ್ 98:5).
  • “ಈ ಗ್ರಂಥದಲ್ಲಿ ಮೂಸಾರ ಕುರಿತು ಪ್ರಸ್ತಾಪಿಸಿರಿ. ಅವರೊಬ್ಬ ನಿಷ್ಕಳಂಕರಾದ ರಸೂಲ್ (ಸಂದೇಶವಾಹಕ) ಹಾಗೂ ನಬೀ (ಪ್ರವಾದಿ) ಆಗಿದ್ದರು.” (ಪವಿತ್ರ ಕುರ್‌ಆನ್ 19:51).
  • ಪ್ರವಾದಿ(ಸ) ಹೇಳಿದರು: “ಖಂಡಿತ ಅಲ್ಲಾಹನು ನಿಮ್ಮ ರೂಪದ ಸೌಂದರ್ಯವನ್ನಾಗಲಿ, ಸಂಪತ್ತನ್ನಾಗಲಿ ನೋಡುವುದಿಲ್ಲ; ಬದಲಾಗಿ ನಿಮ್ಮ ಹೃದಯ ಮತ್ತು ನಿಮ್ಮ ಕರ್ಮಗಳನ್ನು ನೋಡುತ್ತಾನೆ.”
  • “ಆಗ ಅವನು (ಶೈತಾನ್) ಹೇಳಿದನು: ನಿನ್ನ ಪ್ರತಿಷ್ಠೆಯಾಣೆ, ಅವರೆಲ್ಲರನ್ನು ನಾನು ಖಂಡಿತವಾಗಿಯೂ ದಾರಿಗೆಡಿಸುವೆನು; ನಿನ್ನ ಆರಿಸಲ್ಪಟ್ಟ (ನಿಷ್ಕಳಂಕರಾದ) ದಾಸರ ಹೊರತು.” (ಪವಿತ್ರ ಕುರ್‌ಆನ್ 38:82,83).

ಇಖ್ಲಾಸ್‌ಲಕ್ಷಣಗಳು:

ಮನುಷ್ಯ ಕಂಡುಹಿಡಿದ ಯಾವುದಾದರೂ ಮಾಪಕವನ್ನು ಉಪಯೋಗಿಸಿ ಇಖ್ಲಾಸನ್ನು ಅಳೆದು ನಿರ್ಧರಿಸಲು ಸಾಧ್ಯವಿದೆಯೇ? ಎಂದಿಗೂ ಇಲ್ಲ. ಹೆಚ್ಚಿನ ಜನರು ಸ್ವತಃ ತನ್ನಲ್ಲಿ ಇಖ್ಲಾಸ್ ಇದೆಯೇ ಎಂದು ಚಿಂತಿಸದೆ ಇತರರ ಇಖ್ಲಾಸ್‌ನ ಬಗ್ಗೆ ಸಂಶಯ ಪಡುತ್ತಾರೆ. ಆ ಮೂಲಕ ಗಂಭೀರ ಪಾಪವನ್ನು ಮಾಡುತ್ತಿದ್ದೇವೆ ಎಂಬುವುದು ತಿಳಿದಿರಬೇಕು.

ಇಖ್ಲಾಸ್ ಇದೆಯೇ ಎಂಬುದು ನಿರಂತರವಾಗಿ ಆತ್ಮವಿಮರ್ಶೆ ಮಾಡಬೇಕಾದ ವಿಷಯವಾಗಿದೆ. ಇದನ್ನು ಅಳೆಯಲು ಇರುವ ಮಾರ್ಗವೆಂದರೆ, ನಮ್ಮ ಮಾತು ಮತ್ತು ಕರ್ಮ ಪರಸ್ಪರ ಪೂರಕವಾಗಿದೆಯೇ ಎಂದು ಪರಿಶೀಲಿಸುವುದು. ಸತ್ಕರ್ಮಗಳನ್ನು ಮಾಡಲು ಉಂಟಾಗುವ ಆಂತರಿಕ ಪ್ರೇರಣೆ ಹಾಗೂ ಬಾಹ್ಯ ಪ್ರೇರಣೆ ಒಂದೇ ಆಗಿದೆಯೇ? ಅದರ ಹಿಂದಿನ ಭಾವನೆ ಅಲ್ಲಾಹನ ಪ್ರೀತಿ ಮಾತ್ರವಾಗಿದೆಯೇ? ಅಥವಾ ಬೇರೆ ಯಾವುದಾದರೂ ಸ್ವಾರ್ಥ ಹಿತಾಸಕ್ತಿ ಅಡಗಿದೆಯೇ? ಕರ್ಮ ಅಲ್ಲಾಹನಿಗೆ ಮಾತ್ರವಾಗುವಾಗ ಕಳಂಕರಹಿತವಾದ ಮಾನಸಿಕ ಸ್ಥಿತಿ ಅಥವಾ ಇಖ್ಲಾಸ್ ಸಾಧಿಸಲು ಸಾಧ್ಯವಾಗುತ್ತದೆ.

ನಮಾಝ್, ಝಕಾತ್, ಉಪವಾಸ ಮುಂತಾದ ಆಚರಣೆಗಳಲ್ಲಿ ಮತ್ತು ಐಚ್ಚಿಕ ಕರ್ಮಗಳಲ್ಲಿ ನಮ್ಮ ಬದ್ಧತೆ ಎಷ್ಟು ಆಳವಾಗಿದೆ? ಅದು ಜೀವನದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ? ಈಮಾನಿನ (ವಿಶ್ವಾಸದ) ಆಸಕ್ತಿ ಹಾಗೂ ಭೌತಿಕ ಆಸಕ್ತಿಗಳ ನಡುವೆ ಸಂಘರ್ಷ ಉಂಟಾಗುವಾಗ ನಾವು ಯಾವ ಆಸಕ್ತಿಗೆ ಪ್ರಾಮುಖ್ಯತೆ ನೀಡುತ್ತೇವೆ ಎಂಬುದೆಲ್ಲವೂ ಇಖ್ಲಾಸ್‌ನ ಲಕ್ಷಣಗಳಾಗಿವೆ.

ಇಖ್ಲಾಸ್ ಬೆಳೆಸಲು ಇರುವ ಮಾರ್ಗಗಳು:

  1. ಸದುದ್ದೇಶ: ಸತ್ಕರ್ಮ ಮಾಡಲು ಮನುಷ್ಯರಿಗೆ ಹಲವು ಪ್ರೇರಣೆಗಳಿರಬಹುದು. ಆದರೆ ಸತ್ಯವಿಶ್ವಾಸಿಗೆ ಕೇವಲ ಏಕೈಕ ಪ್ರೇರಣೆ ಇರಬೇಕು; ಅದು ಅಲ್ಲಾಹನ ಮತ್ತು ನಮ್ಮ ನಡುವೆ ಇರುವ ಸಂಬಂಧದ ಪ್ರೇರಣೆ. ಇಖ್ಲಾಸ್ ಇರುವವರು ಸತ್ಕರ್ಮಗಳನ್ನು ಮಾಡುವಾಗ ಮನಸ್ಸಿನಲ್ಲಿ ಅಲ್ಲಾಹನ ಮೇಲಿನ ಪ್ರೀತಿಯ ಹೊರತಾಗಿ ಬೇರೇನೂ ಇರುವುದಿಲ್ಲ.
  2. ದುವಾ: ಪ್ರಾರ್ಥನೆಯು ಇಖ್ಲಾಸ್ ಬೆಳೆಸಲು ಇರುವ ಎರಡನೇ ಅಮೂಲ್ಯ ಮಾರ್ಗ. ನಮ್ಮ ಅವಶ್ಯಕತೆಗಳನ್ನು ಪೂರ್ತಿಗೊಳಿಸಲು ನಾವು ಅವಲಂಬಿಸಬೇಕಾದ ಪ್ರಾಥಮಿಕ ಅಸ್ತ್ರವಿದು. “ಅಲ್ಲಾಹನೇ, ನೀನು ನಮಗೆ ಇಖ್ಲಾಸನ್ನು ದಯಪಾಲಿಸು” ಎಂದು ಪ್ರಾರ್ಥಿಸುವ ಮೂಲಕ ಪೈಶಾಚಿಕ ಪ್ರೇರಣೆಗಳು ಒಳನುಗ್ಗುವುದನ್ನು ತಡೆಯಬಹುದು.
  3. ಆದರ್ಶ: ಯಾವಾಗಲೂ ಸ್ವತಃ ಒಳ್ಳೆಯ ಮಾದರಿಯಾಗಿರುವುದು ಹಾಗೂ ಜನರನ್ನು ಒಳಿತಿನೆಡೆಗೆ ಆಹ್ವಾನಿಸುವುದರ ಮೂಲಕ ಇಖ್ಲಾಸನ್ನು ವರ್ಧಿಸಬಹುದು ಮತ್ತು ದುರಾಲೋಚನೆಗಳನ್ನು ತಡೆಗಟ್ಟಬಹುದು.
  4. ದೇವಪ್ರಜ್ಞೆ: ಅಲ್ಲಾಹನ ಹೆಸರುಗಳು ಮತ್ತು ವಿಶೇಷಣಗಳ ಬಗ್ಗೆ ಜ್ಞಾನ ಹೊಂದಿರುವುದು ಇಖ್ಲಾಸ್ ಹೆಚ್ಚಿಸಲು ಸಹಕಾರಿ. ಅಲ್ಲಾಹನು ಸರ್ವಜ್ಞನು, ಎಲ್ಲವನ್ನೂ ಕಾಣುವವನು ಮತ್ತು ಆಲಿಸುವವನು ಎಂಬ ಪ್ರಜ್ಞೆ ಇಖ್ಲಾಸ್ ಉಂಟುಮಾಡುತ್ತದೆ.
  5. ಮರಣ ಜಾಗೃತಿ: ನಿರಂತರವಾಗಿ ಮರಣವನ್ನು ಸ್ಮರಿಸುತ್ತಿರುವುದು ಇಖ್ಲಾಸ್ ವರ್ಧಿಸಲು ಇರುವ ಇನ್ನೊಂದು ಮಾರ್ಗ. ಈ ಸ್ಮರಣೆಯಿಂದ ಕರ್ಮಗಳಲ್ಲಿ ಕಾಪಟ್ಯದ ಅಂಶವು ದೂರವಾಗುವುದು.
  6. ಅಧ್ಯಯನ: ಕುರ್‌ಆನ್ ಮತ್ತು ಹದೀಸ್‌ಗಳಲ್ಲಿರುವ ಇಖ್ಲಾಸ್ ಸಂಬಂಧಿತ ವಚನಗಳನ್ನು ಓದುವುದು, ಕಲಿಯುವುದು ಹಾಗೂ ನಿರಂತರ ಚಿಂತನೆ ನಡೆಸುವುದರಿಂದ ಇದನ್ನು ಸಾಧಿಸಲು ಸಾಧ್ಯ.
  7. ಸ್ಪೂರ್ತಿ: ಪ್ರವಾದಿ ಮುಹಮ್ಮದ್(ಸ) ಹಾಗೂ ಪೂರ್ವ ಪ್ರವಾದಿಗಳ ಚರಿತ್ರೆಯನ್ನು ಅಧ್ಯಯನ ನಡೆಸಿ, ಸಹಾಬಿಗಳ ಜೀವನದ ಮಾದರಿಯನ್ನು ಅರ್ಥಮಾಡಿಕೊಳ್ಳುವುದು. ಕರ್ಮಗಳನ್ನು ಸಾಧ್ಯವಾದಷ್ಟು ರಹಸ್ಯವಾಗಿ ಮಾಡುವುದರಿಂದ ಇಖ್ಲಾಸ್ ಹೆಚ್ಚುತ್ತದೆ.

ಉತ್ತಮ ಮಾದರಿ:

ಪ್ರವಾದಿ(ಸ)ವರ್ಯರ ಮೊಮ್ಮಗ ಹಸನ್(ರ)ರವರ ಪುತ್ರ ಝೈನುಲ್ ಆಬಿದೀನ್ ಅವರು ಇಖ್ಲಾಸ್‌ನ ಉನ್ನತ ವ್ಯಕ್ತಿತ್ವ ಹೊಂದಿದ್ದರು. ಮದೀನದಲ್ಲಿ ಬಡವರಿಗೆ ಅವರ ಮನೆ ಬಾಗಿಲಿಗೆ ನಿರಂತರ ಹತ್ತು ವರ್ಷಗಳ ಕಾಲ ಆಹಾರ ಲಭಿಸುತ್ತಿತ್ತು. ಇದನ್ನು ಯಾರು ನೀಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಝೈನುಲ್ ಆಬಿದೀನ್ ಅವರು ನಿಧನರಾದ ಬಳಿಕ ಆಹಾರ ಬರುವುದು ನಿಂತು ಹೋಯಿತು. ಜನರಿಗೆ ಆಗ ಅದರ ಅರಿವಾಯಿತು. ಅವರ ಮೃತದೇಹವನ್ನು ಸ್ನಾನ ಮಾಡಿಸುವಾಗ ಬೆನ್ನಿನ ಭಾಗದಲ್ಲಿ ಕಪ್ಪು ಗುರುತುಗಳು ಕಾಣಿಸಿದವು. ಅದು ಗೋಧಿ ಹಿಟ್ಟಿನ ಚೀಲಗಳನ್ನು ಹೊತ್ತು ಮನೆಮನೆಗಳಿಗೆ ಹೋದ ಕಾರಣ ಉಂಟಾದ ಗುರುತಾಗಿತ್ತು. ಇದು ಇಖ್ಲಾಸ್‌ನ ಒಂದು ಉಜ್ವಲ ಮಾದರಿಯಾಗಿದೆ.

ಇಖ್ಲಾಸ್‌ಪ್ರಯೋಜನಗಳು:

ಇಖ್ಲಾಸಿನಿಂದ ಒಬ್ಬನು “ಲಾ ಇಲಾಹ ಇಲ್ಲಲ್ಲಾಹ್” (ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲ) ಎಂದು ಹೇಳಿದರೆ ಅವನು ಸ್ವರ್ಗ ಪ್ರವೇಶಿಸುವನು ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಎಷ್ಟೇ ಒಳ್ಳೆಯ ಕರ್ಮವಾದರೂ ಅದರಲ್ಲಿ ಇಖ್ಲಾಸ್ ಇರದಿದ್ದರೆ ಅದು ಫಲಕೊಡದ ಮರದಂತಾಗುತ್ತದೆ.

“ಯಾರು ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ ಬೆಳೆಯನ್ನು ನಾವು ವೃದ್ಧಿಸುತ್ತೇವೆ ಮತ್ತು ಯಾರು ಈ ಲೋಕದ ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಈ ಲೋಕದಿಂದಲೇ ಕೊಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ.” (ಪವಿತ್ರ ಕುರ್‌ಆನ್ 42:20).

ಪ್ರಾರ್ಥನೆಗಳಿಗೆ ಉತ್ತರ ಲಭಿಸಲು ಮತ್ತು ಕರ್ಮಗಳು ಸ್ವೀಕಾರವಾಗಲು ಇಖ್ಲಾಸ್ ಅತ್ಯಗತ್ಯ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕರಾಗಿರಲು ಶ್ರಮಿಸಬೇಕು. ಅದು ಇಹ-ಪರ ಲೋಕಗಳಲ್ಲಿ ನಮಗೆ ಪ್ರಯೋಜನವಾಗುತ್ತದೆ. ಕಳಂಕರಹಿತ ಮಾನಸಿಕ ಸ್ಥಿತಿಯೊಂದಿಗೆ ವರ್ತಿಸುವ ಕುಟುಂಬ ಸದಸ್ಯರು ಮತ್ತು ನಾಯಕರು ಉತ್ತಮ ಸಮುದಾಯಕ್ಕೆ ಅಗತ್ಯವಾಗಿದ್ದಾರೆ.

ನಾವು ಪ್ರದರ್ಶನ ಪ್ರಿಯತೆಯ ಕಾಲದಲ್ಲಿ ಜೀವಿಸುತ್ತಿದ್ದೇವೆ. ಈ ಕಾಲದಲ್ಲಿ ಪ್ರತಿಷ್ಠೆ ಮತ್ತು ಆಡಂಬರಗಳು ಹೆಚ್ಚಾಗುತ್ತಿವೆ. ಪರ್ವತದಷ್ಟು ಕರ್ಮಗಳೊಂದಿಗೆ ಅಂತ್ಯದಿನದಂದು ಕೆಲವು ಜನರು ಬರುವರು, ಆದರೆ ಅವರ ಕರ್ಮಗಳಿಗೆ ಒಂದು ಪೈಸೆಯ ಬೆಲೆಯೂ ಇರುವುದಿಲ್ಲ ಎಂದು ಪ್ರವಾದಿವರ್ಯರು(ಸ) ಮುನ್ನೆಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ ಇಖ್ಲಾಸ್ ಇಲ್ಲದಿರುವುದು. ಇಖ್ಲಾಸಿರುವ ಜನರ ಪ್ರಾರ್ಥನೆಗಳನ್ನು ಅಲ್ಲಾಹನು ಸ್ವೀಕರಿಸುತ್ತಾನೆ.

ಕನ್ನಡಾನುವಾದ: ಸಫ್ವಾನ್ ಬೋಳಂಗಡಿ

Leave a Reply