ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿರಿ: ಸಾಂತ್ವನದ ಕಿರಣ
ಲೇಖಕರು: ಡಾ. ಹಫೀದ್ ನದ್ವಿ
ಜೀವನ ಕೆಲವೊಮ್ಮೆ ಪ್ರಕ್ಷುಬ್ಧ ಸಮುದ್ರದಂತೆ ಆಗಿ ಬಿಡುತ್ತದೆ. ಶಾಂತವಾಗಿ ಸಾಗುತ್ತಿದ್ದ ಜೀವನದ ದೋಣಿಯ ಮೇಲೆ ಒಂದರ ಹಿಂದೆ ಒಂದಾಗಿ ಅಲೆಗಳು ಬಡಿದು ಒಡೆಯಲು ಯತ್ನಿಸಿದಾಗ, ಆಳ ಸಮುದ್ರದ ನಿಶ್ಶಬ್ದ ಕತ್ತಲಿನಲ್ಲಿ ನಾವು ಸಂಪೂರ್ಣವಾಗಿ ಒಂಟಿಯಾಗಿರುವಂತೆ ಅನಿಸುತ್ತದೆ. ಪ್ರಿಯರ ಅಗಲಿಕೆಯಿಂದ ಉಂಟಾಗುವ ಖಾಲಿತನ, ಕಟ್ಟಿದ ಕನಸುಗಳು ಕಣ್ಣೆದುರೇ ಕುಸಿಯುವ ದೃಶ್ಯ, ಖಾಲಿ ಜೇಬು ಮತ್ತು ಹೆಚ್ಚಾಗುತ್ತಿರುವ ಸಾಲದ ಭಾರ, ಬಿಡದೆ ಕಾಡುವ ರೋಗಗಳು ನೀಡುವ ದೈಹಿಕ ಹಾಗೂ ಮಾನಸಿಕ ದೌರ್ಬಲ್ಯ—ಇವುಗಳೆಲ್ಲವೂ ಯಾವುದೇ ಮನುಷ್ಯನನ್ನು ನಿರಾಶೆಯ ಆಳಕ್ಕೆ ತಳ್ಳಲು ಸಾಕಾಗುತ್ತವೆ.
ಆದರೆ, ಆ ಕತ್ತಲೆಯಲ್ಲೂ ಸಹ ಆರದೆ ಇರುವ ಒಂದು ಬೆಳಕಿದೆ; ಪ್ರಪಂಚದ ಸೃಷ್ಟಿಕರ್ತನಾದ ಅಲ್ಲಾಹನ ಕರುಣೆಯ ಮೇಲಿನ ಅಚಲವಾದ ನಿರೀಕ್ಷೆ. ಪರಿಶುದ್ಧ ಕುರ್‌ಆನ್ ಆ ನಿರೀಕ್ಷೆಯನ್ನು ಹೀಗೆ ಸೂಚಿಸುತ್ತದೆ:
وَلَا تَيْأَسُوا مِنْ رَوْحِ اللَّهِ ۖ إِنَّهُ لَا يَيْأَسُ مِنْ رَوْحِ اللَّهِ إِلَّا الْقَوْمُ الْكَافِرُونَ
“ಅಲ್ಲಾಹನ ಅನುಗ್ರಹದಿಂದ ನಿರಾಶರಾಗಬೇಡಿರಿ. ಅವನ ಅನುಗ್ರಹದಿಂದ ಸತ್ಯನಿಷೇಧಿಗಳು ಮಾತ್ರ ನಿರಾಶರಾಗುತ್ತಾರೆ.” (ಯೂಸುಫ್: 87)
ಈ ವಚನವು ಕೇವಲ ಒಂದು ಸಲಹೆಯಲ್ಲ, ಗಾಯಗೊಂಡ ಹೃದಯಗಳಿಗೆ ದಿವ್ಯವಾದ ಸಾಂತ್ವನವಾಗಿದೆ. ನಾವು ಅನುಭವಿಸುವ ಪ್ರತಿಯೊಂದು ಮೌನವಾದ ನೋವನ್ನು ಅಲ್ಲಾಹನು ಗಮನಿಸುತ್ತಾನೆ. ಈ ದುಃಖದ ಸಮುದ್ರದ ದೂರದಲ್ಲಿ ಆತನು ಸಾಂತ್ವನದ ಸುಂದರ ಬೆಳಿಗ್ಗೆಯನ್ನು ಸಿದ್ಧಪಡಿಸಿದ್ದಾನೆ ಎಂಬುದು ಇದರ ಭರವಸೆ. ದುಃಖದಿಂದ ಉಸಿರಾಟ ಕಷ್ಟವಾದಾಗ, ಅಲ್ಲಾಹನಿಂದ ಬರಲಿರುವ ಆ ಸಾಂತ್ವನಕ್ಕಾಗಿ ಕಣ್ಣೀರಿನಿಂದ ಕಾಯುವುದೇ ಅತ್ಯುನ್ನತ ಇಬಾದತ್ ಆಗುತ್ತದೆ. ಭೌತಿಕ ಮಾರ್ಗಗಳೆಲ್ಲ ಮುಚ್ಚಿಕೊಂಡಿವೆ ಎಂದು ಜಗತ್ತು ತೀರ್ಮಾನಿಸಿದರೂ, ವಿಧಿಯನ್ನು ಬದಲಾಯಿಸಲು ಶಕ್ತನಾದ ಅಲ್ಲಾಹನು ನಮಗಾಗಿ ಮತ್ತೊಂದು ದ್ವಾರವನ್ನು ರಹಸ್ಯವಾಗಿ ತೆರೆಯುತ್ತಾನೆ.
ಮನುಷ್ಯನು ಸದಾ ತನ್ನ ಸೀಮಿತ ಪರಿಸ್ಥಿತಿಗಳನ್ನು ನೋಡಿ ವಿಷಯಗಳನ್ನು ಅಳೆಯುತ್ತಾನೆ. ಕೈಯಲ್ಲಿ ಹಣ ಇಲ್ಲದಿದ್ದರೆ ದಾರಿ ಮುಗಿದಿದೆ ಎಂದು, ಔಷಧಿ ಫಲ ನೀಡದಿದ್ದರೆ ಜೀವನ ಮುಗಿದಿದೆ ಎಂದು ನಾವು ತಕ್ಷಣ ಯೋಚಿಸುತ್ತೇವೆ. ಆದರೆ ಪರಿಸ್ಥಿತಿಗಳನ್ನೂ ಕಾರಣಗಳನ್ನೂ ಸೃಷ್ಟಿಸಿದವನು ಅವುಗಳಿಗಿಂತ ಮೇಲಿರುವವನು. ಅಸಾಧ್ಯವನ್ನು ಸಾಧ್ಯವಾಗಿಸುವವನು ಆತನು. ಅದಕ್ಕಾಗಿಯೇ ನಿರಾಶೆಯನ್ನು ಅವಿಶ್ವಾಸದ ಜೊತೆ ಕುರ್‌ಆನ್ ಕಠಿಣವಾಗಿ ಜೋಡಿಸಿದೆ. ತನ್ನ ದೇವನ ಅಪಾರ ಶಕ್ತಿಯ ಮೇಲೆ ಅನುಮಾನಿಸುವವನೇ ಸಂಪೂರ್ಣ ನಿರಾಶನಾಗುತ್ತಾನೆ. ಒಬ್ಬ ವಿಶ್ವಾಸಿಗೆ ಅವನ ಪ್ರತಿಯೊಂದು ನೋವಿಗೂ ಅಲ್ಲಾಹನ ಬಳಿಯಲ್ಲಿ ಮಹತ್ತರ ಮೌಲ್ಯವಿದೆ.
ಪ್ರವಾದಿ ಯಾಕೂಬ್(ಅ) ರವರ ಹೃದಯದ ನೋವಿಗಿಂತ ದೊಡ್ಡ ದುಃಖ ಈ ಲೋಕದಲ್ಲಿ ಮತ್ತೇನಿದೆ? ತನ್ನ ಕಣ್ಮಣಿಯಾದ ಯೂಸುಫ್(ಅ) ರವರನ್ನು ಕಳೆದುಕೊಂಡು ವರ್ಷಗಳ ಕಾಲ ಅಳುತ್ತಿದ್ದರಿಂದ ಅವರ ದೃಷ್ಟಿಯೇ ಮಂದವಾಗಿತ್ತು. ಸುತ್ತಮುತ್ತಲಿನವರು ಅವರನ್ನು ಹಾಸ್ಯ ಮಾಡಿದರು; ಆ ಮಗನು ಮರಳಿ ಬರುವುದಿಲ್ಲ ಎಂದು ಯುಕ್ತಿ ಆಧಾರವಾಗಿ ತೀರ್ಮಾನಿಸಿದ್ದರು. ಆದರೆ, ತನ್ನ ಎರಡನೇ ಮಗನನ್ನೂ ಕಳೆದುಕೊಂಡ ಆ ಕಠಿಣ ಕ್ಷಣದಲ್ಲಿ ಅವರು ತಮ್ಮ ಮಕ್ಕಳಿಗೆ ಹೇಳಿದ ಮಾತು: “ಅಲ್ಲಾಹನ ಕರುಣೆಯಲ್ಲಿ ನಿರಾಶರಾಗಬೇಡಿ.” ಯುಕ್ತಿ ಸೋತ ಸ್ಥಳದಲ್ಲಿ ಅವರ ಅಚಲ ವಿಶ್ವಾಸವೇ ಗೆದ್ದಿತು. ಆ ವಿಶ್ವಾಸದ ಫಲವಾಗಿ ನಂತರ ಈಜಿಪ್ಟ್‌ನಿಂದ ಮಗನ ಅಂಗಿಯ ಮೂಲಕ ಅವರಿಗೆ ಸಂತೋಷ ತಲುಪಿತು.
ನಮ್ಮ ಜೀವನದಲ್ಲಿಯೂ ಇಂತಹ ಅನೇಕ ಘಟನೆಗಳು ನಡೆಯಬಹುದು. ನಾವು ಕೇಳಿದ್ದನ್ನು ಅಲ್ಲಾಹನು ವಿಳಂಬಿಸುವುದು ನಮ್ಮನ್ನು ಮೋಸಗೊಳಿಸಲಲ್ಲ, ಅದಕ್ಕಿಂತ ಉತ್ತಮವಾದುದನ್ನು ನೀಡಲು. ಬಹುಶಃ ನಾವು ಇಂದು ಅನುಭವಿಸುವ ಕಷ್ಟವೇ ನಾಳೆ ನಮ್ಮನ್ನು ಯಶಸ್ಸಿನ ಎತ್ತರದ ಶಿಖರಕ್ಕೆ ತಲುಪಿಸಬಹುದು. ಅಲ್ಲಾಹನ ಯೋಜನೆಗಳು ಯಾವಾಗಲೂ ಸುಂದರವಾಗಿಯೂ ದೂರಗಾಮಿಯೂ ಆಗಿರುತ್ತವೆ. ಆತನು ಒಂದು ಬಾಗಿಲನ್ನು ಮುಚ್ಚುವುದು, ಅದಕ್ಕಿಂತ ವಿಶಾಲ ಮತ್ತೊಂದು ಬಾಗಿಲನ್ನು ತೆರೆಯಲು ಎಂಬುದನ್ನು ನಾವು ಅರಿತುಕೊಳ್ಳಬೇಕು.
ಹೆಚ್ಚಾಗಿ ನಮ್ಮನ್ನು ಕುಗ್ಗಿಸುವುದು ಭವಿಷ್ಯದ ಬಗ್ಗೆ ಇರುವ ಚಿಂತೆಯಾಗಿದೆ. “ನಾಳೆ ಏನಾಗುತ್ತದೆ?” ಎಂಬ ಭಯ ನಮ್ಮ ಇಂದಿನ ದಿನಗಳನ್ನು ಕತ್ತಲುಗೊಳಿಸುತ್ತದೆ. ಆದರೆ, ನಿನ್ನೆ ನಮಗೆ ಸಹಾಯ ಮಾಡಿದ ಅಲ್ಲಾಹನು ನಾಳೆಯೂ ನಮ್ಮ ಜೊತೆ ಇರುತ್ತಾನೆ ಎಂಬ ಅರಿವು ನಮಗೆ ಶಕ್ತಿ ನೀಡಬೇಕು. ಪರೀಕ್ಷೆಗಳು ವಿಶ್ವಾಸಿಯನ್ನು ಮುರಿಯಲು ಅಲ್ಲ, ಬಲಪಡಿಸಲು ಬರುತ್ತವೆ. ಪ್ರತಿಯೊಂದು ಬೀಳುವಿಕೆಯೂ ಒಂದು ಏಳಿಗೆಯ ಸಿದ್ಧತೆ. ನಮ್ಮನ್ನು ಸೃಷ್ಟಿಸಿದವನು ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯೇ ಜೀವನದ ದೊಡ್ಡ ಸಂಪತ್ತು.
ಆದುದರಿಂದ ಪ್ರಿಯರೇ, ಜೀವನ ತನ್ನ ಎಲ್ಲಾ ಕಠಿಣತೆಯೊಂದಿಗೆ ನಿಮ್ಮನ್ನು ಕುಗ್ಗಿಸಲು ಯತ್ನಿಸಿದಾಗ ಈ ಕುರ್‌ಆನಿನ ವಚನವನ್ನು ಸಾಂತ್ವನವಾಗಿ ಹೃದಯಕ್ಕೆ ಹಚ್ಚಿಕೊಳ್ಳಿ. ನೀವು ಎಲ್ಲಿಯೂ ಒಂಟಿಯಾಗಿಲ್ಲ. ನಿಮ್ಮ ಗೋಚರ ಮತ್ತು ಅಗೋಚರ ಪ್ರಾರ್ಥನೆಗಳಳ ಬಗ್ಗೆ ದೇವನು ನಿರ್ಲಕ್ಷನಲ್ಲ. ಪರಿಸ್ಥಿತಿಗಳು ಎಷ್ಟು ಕಠಿಣವಾಗಿದ್ದರೂ ಅವನ ಕರುಣೆಯ ಮೇಲೆ ವಿಶ್ವಾಸವಿರಲಿ. ಭೂಮಿಯ ಮಾರ್ಗಗಳು ಮುಗಿದಾಗ ಆಕಾಶದಿಂದ ಅದ್ಭುತಗಳು ಆರಂಭವಾಗುತ್ತವೆ. ಅಲ್ಲಾಹನ ಮೇಲೆ ಸಂಪೂರ್ಣ ಭರವಸೆ ಇಡಿ; ಅವನ ಮೇಲೆ ಭರವಸೆ ಇಡುವವರಿಗೆ ಆತನೇ ಸಾಕು.
ಕ್ಷಮೆ ಮತ್ತು ಪ್ರಾರ್ಥನೆಯನ್ನು ನಿಮ್ಮ ಆಯುಧಗಳಾಗಿಸಿಕೊಳ್ಳಿ. ಕಣ್ಣೀರು ಒರೆಸಲು ಮತ್ತು ನೋವನ್ನು ನಿವಾರಿಸಲು ಅಲ್ಲಾಹನ ಒಂದು ದೃಷ್ಟಿಯೇ ಸಾಕು. ನಮ್ಮ ಮಿತಿಗಳು ಅಲ್ಲಾಹನ ಶಕ್ತಿಗೆ ಅವಕಾಶಗಳಾಗಿವೆ. ಇಂದು ನೀವು ಅನುಭವಿಸುವ ನೋವು ನಾಳೆ ನೀವು ಹೇಳಲಿರುವ ಸುಂದರ ಕಥೆಯ ಆರಂಭ ಮಾತ್ರ. ಅಲ್ಲಾಹನ ಕರುಣೆ ಸದಾ ನಮ್ಮೊಂದಿಗಿದೆ; ನಾವು ಅದನ್ನು ಗಮನಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.
ಕನ್ನಡಾನುವಾದ: ಮುಹಮ್ಮದ್ ಖೈಸ್, ಪಾಣೆಮಂಗಳೂರು