ರಮಝಾನ್: ಬದಲಾವಣೆಯ ಪರ್ವಕಾಲ
ಲೇಖಕರು: ಸದ್ರುದ್ದೀನ್ ವಾಯಕ್ಕಾಡ್
ಒಮ್ಮೆ ಒಬ್ಬ ರಾಜನಿದ್ದನು. ಆತ ಅರಮನೆಯಿಂದ ಹೊರಗಡೆ ಹೋಗಿದ್ದಾಗ ತನ್ನ ಕಾಲಿಗೆ ಮಣ್ಣು ತಗುಲಿರುವುದು ಕಂಡು ಅಸಹನೆಯುಂಟಾಯಿತು. ಕೋಪದಿಂದ ದೇಶದ ಎಲ್ಲಾ ರಸ್ತೆಗಳಿಗೆ ಹಾಸನ್ನು ಹಾಕಿ ಮುಚ್ಚಬೇಕು ಎಂದು ಆದೇಶ ಹೊರಡಿಸಿದನು. ಮಂತ್ರಿ ಮಹೋದಯರು ತಲೆ ಚಿಟ್ಟಾಗುವಷ್ಟು ಚಿಂತಿಸಿದರು. ಯಾಕೆಂದರೆ ಇದು ಸಾಧ್ಯವಾಗುವಂತಹ ಕಾರ್ಯ ಆಗಿರಲಿಲ್ಲ. ಆಗ ವಿವೇಕಶಾಲಿಯಾದ ಓರ್ವ ಮಂತ್ರಿ ಮುಂದೆ ಬಂದು, “ಪ್ರಭುಗಳೇ, ದೇಶದ ಎಲ್ಲ ರಸ್ತೆಗಳಿಗೆ ಚದ್ದರ ಹಾಸಲು ನಮ್ಮಿಂದ ಸಾಧ್ಯವಾಗದು. ಆದರೆ ತಮ್ಮ ಪಾದಗಳಿಗೆ ಮಣ್ಣು ತಗುಲದಂತೆ ಸುಂದರ ಕವಚವಿರುವ ಪಾದರಕ್ಷೆ ಮಾಡಬಹುದು. ಆಗ ನೀವು ಎಲ್ಲಿ ಬೇಕಾದರೂ ಸಂಚರಿಸಬಹುದು,” ಎಂದು ಹೇಳಿದಾಗ ರಾಜನು ಒಪ್ಪಿದನು.
ಜಗತ್ತನ್ನು ಬದಲಿಸುವುದಕ್ಕಿಂತ ಉತ್ತಮ ಮಾರ್ಗ ನಮ್ಮನ್ನು ನಾವು ಬದಲಿಸುವುದಾಗಿದೆ. ಅದು ಸುಲಭವೂ ಪ್ರಯೋಜನಕಾರಿಯೂ ಆಗಿದೆ ಎಂಬುದಕ್ಕೆ ಇದು ಸರಳ ಉದಾಹರಣೆ. ಇಲ್ಲದಿದ್ದರೆ ನಮಗೆ ಯಾರನ್ನು ಬದಲಿಸಲು ಸಾಧ್ಯ ಹೇಳಿ? ನಮ್ಮ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಇತರರಿಂದ ಬಯಸುತ್ತೇವೆ. ಸಂಗಾತಿ ಬದಲಾಗಬೇಕು, ನೆರೆಕರೆಯವನು ಬದಲಾಗಬೇಕು, ಸಹ ಕಾರ್ಯಕರ್ತರು, ಆಪ್ತ ಮಿತ್ರರನ್ನು ತಿದ್ದಬೇಕು – ಹೀಗೆ ನಮ್ಮ ಚಿಂತನೆಗಳು ಸಾಗುತ್ತವೆ.
ವಾಸ್ತವದಲ್ಲಿ ನಮಗೆ ನಮ್ಮನ್ನು ಬದಲಿಸಲು ಸುಲಭ ಸಾಧ್ಯವಾಗುತ್ತದೆ. ಇತರರ ಗುಣ ಸ್ವಭಾವವನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ನಮ್ಮ ನಿಯಂತ್ರಣದಲ್ಲಿರುವ ವಿಚಾರಗಳ ಬಗ್ಗೆ ಗಮನ ಕೇಂದ್ರೀಕರಿಸಿದಾಗ ಮಾತ್ರ ನಮಗೆ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಅಭಿವೃದ್ಧಿ ಉಂಟಾಗುತ್ತದೆ. ಇತರರನ್ನು ಬದಲಿಸಲು ಪ್ರಯತ್ನಿಸುವಾಗ ನಮಗೆ ನಿರಾಶೆ ಮತ್ತು ಕಲಹಕ್ಕೆ ಕಾರಣವಾಗುವ ಅನುಭವವಾಗುತ್ತದೆ. ಸ್ವತಃ ಬದಲಾವಣೆಯಾಗುವುದರ ಕುರಿತು ಮನೋವಿಜ್ಞಾನವು ಬಹಳ ಗಂಭೀರವಾಗಿ ಪರಿಗಣಿಸಿದೆ.
ಬದಲಾವಣೆ ಬಯಸುವವರಲ್ಲಿ ಎರಡು ವಿಧದ ಚಿಂತನೆಯುಳ್ಳವರಾಗಿದ್ದಾರೆ:
- ತನ್ನ ವೈಫಲ್ಯತೆಗೆ ವಿಧಿ, ಪರಿಸರ ಅಥವಾ ಜನರೇ ಕಾರಣವೆಂದು ಭಾವಿಸುವವರು. ಇಂತಹವರ ಬದಲಾವಣೆ ಅಸಾಧ್ಯ.
- ನನ್ನ ಬದುಕಿನ ಬದಲಾವಣೆ ನನ್ನ ಜವಾಬ್ದಾರಿ ಎಂಬ ವಿಶ್ವಾಸವಿರುವವರು. ಮನೋತಜ್ಞರ ಪ್ರಕಾರ ಇಂತಹವರಿಂದ ಬದಲಾವಣೆ ಸಾಧ್ಯ.
ಬದಲಾವಣೆಯ ಹಂತಗಳು:
- ಮೊದಲನೆಯದಾಗಿ: ಮಾನಸಿಕ ನಿಯಂತ್ರಣ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂಬ ದೃಢ ನಿರ್ಧಾರ.
- ಎರಡನೆಯದಾಗಿ: ಚಿಂತನೆಗನುಗುಣವಾದ ಪರಿವರ್ತನೆ. ನಮ್ಮ ಗುಣ ಸ್ವಭಾವಗಳು ಬದಲಾಗಬೇಕಾದರೆ ಮೊದಲು ನಮ್ಮ ಚಿಂತನೆ ಬದಲಾಗಬೇಕು. ನಾವು ನಮ್ಮೊಂದಿಗೆ ಹೇಳುವ ವಿಚಾರಗಳನ್ನು (Self-talk) ಬದಲಿಸಬೇಕು.
- ಮೂರನೆಯದಾಗಿ: ಬದಲಾವಣೆಯ ಪ್ರಕ್ರಿಯೆ. ಬದಲಾವಣೆ ಎಂಬುದು ಒಂದು ನಿಮಿಷದಲ್ಲಿ ಆಗುವಂತಹದ್ದಲ್ಲ. ಅದಕ್ಕೆ ಕನಿಷ್ಠ ಐದು ಹಂತಗಳಿವೆ ಎಂದು ಮನೋವಿಜ್ಞಾನ ಹೇಳುತ್ತದೆ. ನನಗೆ ನನ್ನನ್ನು ಬದಲಿಸಲು ಸಾಧ್ಯ ಎಂಬ ಆತ್ಮವಿಶ್ವಾಸವು ವ್ಯಕ್ತಿಯಲ್ಲಿ ಹೊಸ ಗುಣಗಳನ್ನು ಅಳವಡಿಸುವುದಕ್ಕೆ ಪ್ರಚೋದನೆ ನೀಡುತ್ತದೆ.
ಈ ಬದಲಾವಣೆ ನಿರಂತರ ಮುಂದುವರಿದಾಗ ಅದು ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಈ ವ್ಯಕ್ತಿತ್ವ ರೂಪಿಸಲು ಪವಿತ್ರ ರಮಝಾನ್ ಮಾಸವು ಅತ್ಯಂತ ಸುಸಂದರ್ಭವಾಗಿದೆ.
ವೃದ್ಧರಾದ ಗುರುವೊಬ್ಬರು ತಮ್ಮ ಬದುಕಿನ ಕುರಿತು ಒಮ್ಮೆ ಹೀಗೆ ಹೇಳಿದರು: “ಯೌವನದಲ್ಲಿ ನಾನು ಬಹಳ ಆವೇಶಭರಿತನಾಗಿದ್ದೆ. ಈ ಲೋಕವನ್ನು ಸಂಪೂರ್ಣ ಬದಲಿಸಬೇಕೆಂಬುದು ನನ್ನ ಕನಸಾಗಿತ್ತು. ಮಧ್ಯವಯಸ್ಕನಾದಾಗ ನಾನು ವಿವೇಕವಂತನಾದೆ. ಜಗತ್ತನ್ನು ಬದಲಾಯಿಸುವುದು ಅಸಾಧ್ಯವೆಂದುಕೊಂಡು ನನ್ನ ದೇಶವನ್ನು ಬದಲಾಯಿಸಬೇಕೆಂದು ನಿರ್ಧರಿಸಿದೆ. ಅಲ್ಲಿಯೂ ನಾನು ವಿಫಲನಾದೆ. ಕೊನೆಗೆ ವೃದ್ಧಾಪ್ಯ ಆವರಿಸಿದಾಗ ನನ್ನನ್ನು ನಾನು ಬದಲಿಸಬೇಕೆಂಬ ಅರಿವು ಮೂಡಿ ಬಂತು. ನಾನು ನನ್ನನ್ನು ಬದಲಿಸಿದ್ದಿದ್ದರೆ ನನ್ನ ಕುಟುಂಬ, ನನ್ನ ದೇಶ ಬದಲಾವಣೆ ಕಾಣುತ್ತಿತ್ತು. ಹಾಗೆಯೇ ಜಗತ್ತಿನಲ್ಲಿಯೂ ಬದಲಾವಣೆ ಕಂಡು ಬರುತ್ತಿತ್ತು.”
ಬದಲಾವಣೆಯ ದೈವಿಕವಾದ ನಿಯಮ ಹೀಗೆಯೇ ಆಗಿದೆ. ಪವಿತ್ರ ಕುರ್‌ಆನಿನಲ್ಲಿ ಹೀಗೆ ಹೇಳಲಾಗಿದೆ: “ಒಂದು ಜನತೆಯು ಸ್ವಯಂ ತನ್ನನ್ನು ಬದಲಾಯಿಸುವ ವರೆಗೆ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸಲಾರ”. ಅಂದರೆ ನಾವು ಒಂದು ಹೆಜ್ಜೆಯನ್ನು ಕೂಡ ಮುಂದೆ ಇಡದೆ ಜಗದೊಡೆಯನು ನಮ್ಮ ಬದುಕಿನಲ್ಲಿ ವಿಸ್ಮಯವನ್ನು ಸೃಷ್ಟಿಸಲಾರ. ಒಂದು ಬದಲಾವಣೆಗಾಗಿ ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಬೇಕಾಗಿದೆ ಎಂಬುದು ಮುಖ್ಯವಾಗಿದೆ.
ಈ ಬಾರಿಯ ರಮಝಾನ್ ಅದರ ಪ್ರಾರಂಭವಾಗಲಿ. ಹೊಸ ಮನುಷ್ಯನಾಗಿ ಉದಯಿಸಲು ಇದಕ್ಕಿಂತ ಉತ್ತಮವಾದ ಸುಸಂದರ್ಭ ಬೇರೆಯಿಲ್ಲ. ಈ ರಮಝಾನಿನ ಸಮಯವನ್ನು ಕೇವಲ ಹಸಿವಿನಿಂದ ಕಳೆಯುವುದಲ್ಲ, ಬದಲಾಗಿ ಸ್ವತಃ ಬದಲಾವಣೆ ತರಬೇಕಾಗಿದೆ. ನಮ್ಮ ಗುಣ ಸ್ವಭಾವ, ಮಾತನಾಡುವ ರೀತಿಯನ್ನು ಆಲೋಚಿಸಿ ಆತ್ಮಾವಲೋಕನ ನಡೆಸಬೇಕು.
ನಾವು ಮಾಡಬೇಕಾದದ್ದು: ಇಂದು ಒಂದು ಡೈರಿಯನ್ನು ತೆಗೆದುಕೊಂಡು ನಾವು ಬದಲಾವಣೆ ಬಯಸುವ ಮೂರು ವಿಚಾರಗಳ ಕುರಿತು ಬರೆಯಿರಿ. ಉದಾಹರಣೆಗೆ: ಅನಗತ್ಯ ಕೋಪ, ಅನಿಯಂತ್ರಿತ ಮೊಬೈಲ್ ಬಳಕೆ, ಆಲಸ್ಯ ಇತ್ಯಾದಿ. ನಂತರ ಈ ಬದಲಾವಣೆಗಾಗಿ ಪ್ರಜ್ಞಾಪೂರ್ವಕವಾಗಿ, ಕರ್ತವ್ಯ ನಿಷ್ಠೆಯಿಂದ ಪರಿಶ್ರಮಿಸಿರಿ. ಹೊರ ಜಗತ್ತನ್ನು ಸರಿಪಡಿಸುವುದಕ್ಕಿಂತ ಮೊದಲು ನಮ್ಮ ಅಂತರಂಗವನ್ನು ಮನೋಹರಗೊಳಿಸಬೇಕು. ಇದು ರಮಝಾನಿನ ಸೌಂದರ್ಯವಾಗಿದೆ.
ಕನ್ನಡಾನುವಾದ: ಸಲೀಮ್ ಬೋಳಂಗಡಿ