ಅಬ್ದುಲ್ ಮಲಿಕ್ ಅಲ್ ಅಸ್ಮಾಈ ರವರ ಆತ್ಮ ಕಥನದ ಪುಟಗಳಿಂದ…
ಮಲಯಾಳಂ: ಡಾಕ್ಟರ್ ಅಬ್ದುಲ್ ಹಮೀದ್ ನದ್ವಿ
ಕನ್ನಡಾನುವಾದ: ಸಲೀಮ್ ಬೋಳಂಗಡಿ
ಮಹಾನ್ ವಿದ್ವಾಂಸರಾದ ಅಬ್ದುಲ್ ಮಲಿಕ್ ಅಲ್ ಅಸ್ಮಾಈ (AH123-216/ CE-741-831) ತನ್ನ ಆತ್ಮ ಕಥನದಲ್ಲಿ ಬರೆಯುತ್ತಾರೆ: “ನಾನು ಬಸ್ರಾದಲ್ಲಿ ವಿಧ್ಯಾರ್ಥಿಯಾಗಿದ್ದಾಗ ಮನೆಯಲ್ಲಿ ಹಸಿವು ತಾಂಡವ ಆಡುತ್ತಿತ್ತು. ತಿನ್ನಲು, ಕುಡಿಯಲು, ಧರಿಸಲು ತ್ರಾಸ ಪಟ್ಟು ಲೆಕ್ಕ ಮಾಡಿ ವ್ಯಯ ಮಾಡುವ ಕಾಲವದು. ಯಾವ ವಿಧದಲ್ಲಾದರೂ ಸರಿ; ಜ್ಞಾನ ಗಳಿಸಬೇಕೆಂಬ ಬಯಕೆ ತುಂಬಿತ್ತು. ನಮ್ಮ ಮನೆಯ ಬೀದಿಯಲ್ಲಿ ಒಂದು ಕಿರಾಣಿ ಅಂಗಡಿಯಿತ್ತು. ನಾನು ನನ್ನ ಗುಡಿಸಲಿನಿಂದ ಬೆಳಗ್ಗೆ ಹೊರಡುವಾಗ, ಆ ಕಿರಾಣಿ ಅಂಗಡಿಯ ವ್ಯಾಪಾರಿ ʻಎತ್ತ ಕಡೆ ಹೊರಟಿರುವಿ?ʼ ಎಂದು ಕೇಳುವರು. ಆಗ ನಾನು ಇಂತಿಂತಹ ಮುಹದ್ದಿಸ್(ಹದೀಸ್ ವಿದ್ವಾಂಸ) ಬಳಿಗೆ ಹೋಗುತ್ತಿರುವೆ ಎನ್ನುತ್ತಿದ್ದೆ. ಸಾಯಂಕಾಲ ದಣಿದು ನಾನು ಹಿಂದಿರುಗುವಾಗ ಎಲ್ಲಿಂದ ಬರುತ್ತಿರುವೆ ಎಂದು ಮತ್ತೆ ಕೇಳುತ್ತಿದ್ದರು. ಆಗ ನಾನು ʻಇಂತಿಂತಹ ಇತಿಹಾಸಕಾರರ ಅಥವಾ ಭಾಷಾ ವಿದ್ವಾಂಸರ ಬಳಿಯಿಂದ ಬರುತ್ತಿರುವೆʼ ಎಂದುತ್ತರಿಸುತ್ತಿದ್ದೆನು.
“ಆಗ ಆ ವ್ಯಾಪಾರಿ ಹೀಗೆ ಹೇಳುತ್ತಿದ್ದ. ʻನೋಡು ನನ್ನ ಮಾತುಗಳನ್ನು ಸ್ವಲ್ಪ ಕೇಳು. ನೀನು ಯುವಕನಾಗಿರುವಿ. ಇಂತಹ ಅಸಂಬದ್ದ ಚಟುವಟಿಕೆಯಲ್ಲಿ ತೊಡಗಿ ನಿನ್ನ ಬಾಳನ್ನು ವ್ಯಯ ಮಾಡಬೇಡ. ನಿನಗೆ ಪ್ರಯೋಜನ ನೀಡುವಂತಹ ಸಂಪಾದನೆಯ ಯಾವುದಾದರೂ ಉದ್ಯೋಗ ಮಾಡು. ನಿನ್ನಲ್ಲಿರುವ ಎಲ್ಲಾ ಪುಸ್ತಕಗಳನ್ನು ನನಗೆ ಕೊಡು. ಅದನ್ನೆಲ್ಲಾ ನಾನು ಸುಟ್ಟು ಹಾಕುತ್ತೇನೆ. ಅಲ್ಲಾಹನಾಣೆ ನಿನ್ನಲ್ಲಿರುವ ಎಲ್ಲಾ ಪುಸ್ತಕಗಳಿಗೆ ಬದಲಾಗಿ ಒಂದು ತರಕಾರಿಯ ತುಂಡನ್ನು ಕೂಡಾ ನಾನು ಕೊಡಲಾರೆ…!ʼ ಅವರ ನಿರಂತರವಾದ ಈ ಮಾತುಗಳಿಂದ ನಾನು ತುಂಬಾ ಕಳವಳಗೊಂಡಿದ್ದೆ. ನನಗೆ ಇದು ಕಿರುಕುಳದಂತಾಗಿ ನಾನು ರಾತ್ರಿ ವೇಳೆ ಮಾತ್ರ ಸಂಚರಿಸುತ್ತಿದ್ದೆ ಮತ್ತು ಮಧ್ಯ ರಾತ್ರಿ ಮನೆಗೆ ಬರುತ್ತಿದ್ದೆ. ಈ ಮಧ್ಯೆ ನನ್ನ ಮನೆಯ ಪರಿಸ್ಥಿತಿ ತೀರಾ ದಯನೀಯಾವಸ್ಥೆಗೆ ತಲುಪಿತು. ಮನೆಯಲ್ಲಿ ಬಟ್ಟೆಗಳ ಸಹಿತ ಹಲವು ವಸ್ತುಗಳನ್ನು ಮಾರಬೇಕಾಗಿ ಬಂತು. ಒಂದು ದಿನದ ಖರ್ಚಿಗೂ ಹಣವಿಲ್ಲದಂತಹ ಸ್ಥಿತಿ ಬಂತು. ಕೂದಲು ದಟ್ಟವಾಗಿ ಬೆಳೆಯತೊಡಗಿತು, ಬಟ್ಟೆಗಳು ಹರುಕುಮುರುಕಾಗತೊಡಗಿದವು. ಶರೀರವು ಸೊರಗತೊಡಗಿತು.”
“ನಾನು ಹೀಗೆ ನನ್ನ ವಿಚಾರದಲ್ಲಿ ತೀವ್ರವಾಗಿ ಕಳವಳಗೊಂಡಿರುವಾಗ ಅಂದಿನ ಗವರ್ನರ್ ಮುಹಮ್ಮದ್ ಬಿನ್ ಹಾಶಿಮಿಯ ಸೇವಕ ನನ್ನ ಬಳಿ ಬಂದು, ʻನೀವು ಅಮೀರ್(ಗವರ್ನರ್)ರನ್ನು ಬಂದು ಭೇಟಿಯಾಗಿರಿ” ಎಂದು ಹೇಳಿದ. ದಾರಿದ್ರ್ಯತೆಯಿಂದ ಮುಳುಗಿದ ಓರ್ವನಲ್ಲಿ ಅಮೀರ್ ಗೆ ಯಾವ ಪ್ರಯೋಜನ ಇರಬಹುದು? ಎಂದು ಮನದಲ್ಲಿಯೇ ಕೇಳಿದೆ. ಅವನು ನನ್ನ ಹರುಕು ಮುರುಕು ಬಟ್ಟೆ ಮತ್ತು ನನ್ನ ಸ್ಥಿತಿ ಕಂಡು ಅಮೀರ್ ಮುಹಮ್ಮದ್ ಬಿನ್ ಸುಲೈಮಾನ್ರ ಬಳಿ ಹೋಗಿ ವಿವರಿಸಿದನು.
ಆ ವ್ಯಕ್ತಿ ಮತ್ತೆ ನನ್ನ ಬಳಿ ಮರಳಿ ಬಂದು ಒಂದು ಚೀಲ ಕೊಟ್ಟರು. ಅದರಲ್ಲಿ ತುಂಬಾ ವಸ್ತುಗಳು… ಸುಗಂಧ ದ್ರವ್ಯ ತುಂಬಿದ ಒಂದು ಪೆಟ್ಟಿಗೆ, ಜೊತೆಗೆ ಸಾವಿರ ದಿನಾರ್ ತುಂಬಿದ್ದ ಒಂದು ಪೊಟ್ಟಣವೂ ಇತ್ತು. ಅದನ್ನು ನನಗೆ ನೀಡಿ, ಚೆನ್ನಾಗಿ ಸ್ನಾನ ಮಾಡಿ ನಿಮಗೆ ಇಷ್ಟವಾದ ಬಟ್ಟೆ ಧರಿಸಿ ಉಳಿದ ಹಣವನ್ನು ಜೊಪಾನವಾಗಿ ನಿಮ್ಮ ಬಳಿ ಇಟ್ಟುಕೊಳ್ಳಿರಿ. ಈ ಆಹಾರವನ್ನು ತಿಂದುಂಡು ಆಸ್ವಾದಿಸಿ, ಸುಗಂಧ ದ್ರವ್ಯಗಳನ್ನು ಪೂಸುವಂತೆ ಅಮೀರ್ ಆದೇಶಿಸಿದ್ದಾರೆ. ಹಾಗೆ ನಿಮಗೆ ಬರಬಹುದು ಎಂಬ ಚೇತರಿಕೆ ಕಂಡಾಗ ಅಮೀರ್ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗಲಾಗುವುದು.”
ಇದನ್ನೆಲ್ಲಾ ಕೇಳಿದಾಗ ನಾನು ತುಂಬಾ ಸಂತೋಷಗೊಂಡು ಅವರಿಗಾಗಿ ಪ್ರಾರ್ಥಿಸಿದೆ. ಅವರು ಹೇಳಿದ ಪ್ರಕಾರವೇ ನಾನು ಮಾಡಿದೆ. ಅದರಂತೆ ನಾನು ಅಮೀರ್ ಮುಹಮ್ಮದ್ ಬಿನ್ ಸುಲೈಮಾನ್ ರನ್ನು ಬೇಟಿಯಾದೆ. ಅವರಿಗೆ ಸಲಾಮ್ ಹೇಳಿದಾಗ ಅವರು ನನ್ನನ್ನು ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿದರು. ಬಹಳ ಗೌರವಾದರದಿಂದ ವರ್ತಿಸಿದರು. ಬಳಿಕ ಹೇಳಿದರು. ‘ಅಬ್ದುಲ್ ಮಲಿಕ್ ರವರೆ, ತಮ್ಮ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಅಮೀರುಲ್ ಮೂಮಿನೀನ್ರ ಮಗನಿಗೆ ಕಲಿಸಲು ನಾನು ನಿಮ್ಮನ್ನು ಆಯ್ಕೆ ಮಾಡಿದ್ದೇನೆ. ನಾಳೆಯಿಂದಲೇ ಬಾಗ್ದಾದ್ ಹೋಗಲು ಸಿದ್ದವಾಗಿರಿ” ಎಂದು ಹೇಳಿದರು. ನಾನು ಅಮೀರ್ ರವರಿಗಾಗಿ ಪ್ರಾರ್ಥಿಸಿದ ಬಳಿಕ ಹೇಳಿದೆ. “ತಮ್ಮ ಆದೇಶದನುಸಾರ ನನ್ನ ಕೆಲವು ಪುಸ್ತಕಗಳನ್ನು ತೆಗೆದು ನಾಳೆಯೇ ಅವರ ಬಳಿಗೆ ಹೊರಡುವೆನು.”
“ನಾನು ನನ್ನ ಮನೆಯತ್ತ ಮರಳಿದೆ. ಅಗತ್ಯವಾದ ಪುಸ್ತಕಗಳನ್ನು ತೆಗೆದುಕೊಂಡು ಉಳಿದವುಗಳನ್ನು ಒಂದು ಕೋಣೆಯಲ್ಲಿ ಭದ್ರವಾಗಿರಿಸಿದೆನು. ನನ್ನ ಕುಟುಮಬದ ಓರ್ವ ವಯೋವೃದ್ದೆಯನ್ನು ಪುಸ್ತಕವನ್ನು ನೋಡಿಕೊಳ್ಳುವಂತೆ ನೇಮಿಸಿದೆ. ಬಾಗ್ದಾದ್ ತಲುಪಿದಾಗ ಅಮೀರುಲ್ ಮೂಮಿನೀನ್ ಹಾರೂನ್ ರಶೀದ್ ರನ್ನು ಬೇಟಿಯಾದೆ. ಅವರು ನನ್ನನ್ನು ಕಂಡು, ‘ತಾವು ಅಬ್ದುಲ್ ಮಲಿಕ್ ಅಲ್ ಅಸ್ಮಾಈ ಅಲ್ಲವೇ?” ಎಂದು ಕೇಳಿದಾಗ ನಾನು “ಹೌದು ಅಮೀರುಲ್ ಮೂಮಿನೀನ್” ಎಂದುತ್ತರಿಸಿದೆ.
ಆಗ ಅವರು ಹೇಳಿದರು, “ತಾವು ತಿಳಿದಿರಬೇಕು. ಓರ್ವ ವ್ಯಕ್ತಿಯ ಮಗನು ಆತನ ಹೃದಯದ ಪ್ರಕಾಶವಾಗಿದೆ. ನನ್ನ ಮಗನನ್ನು ಅಲ್ಲಾಹನ ನಾಮದಿಂದ ನಾನು ನಿಮ್ಮೊಂದಿಗೆ ವಹಿಸಿಕೊಟ್ಟಿರುತ್ತೇನೆ. ಅವನಲ್ಲಿರುವ ಧಾರ್ಮಿಕ ಪ್ರಜ್ಞೆಯು ಶಿಥಿಲವಾಗುವಂತಹದ್ದೇನನ್ನೂ ಆತನಿಗೆ ಕಲಿಸಬಾರದು. ಒಂದು ವೇಳೆ ಆತ ಈ ದೇಶದ ಮುಸ್ಲಿಮರ ಇಮಾಮ್ ಆಗಿ ಬದಲಾಗಬಹುದು.’
ಅದಕ್ಕೆ “ಸರಿ, ತಮ್ಮ ಆದೇಶದಂತೆ ಆಗಲಿ” ಎಂದೆನು.
ಅವರು ಮಗನನ್ನು ನನ್ನ ಬಳಿಗೆ ಕರೆತಂದರು. ಅವನಿಗಾಗಿ ಕಲಿಸಲೆಂದೇ ಸಿದ್ದಪಡಿಸಿದ ಒಂದು ರಾಜ ಭವನದಲ್ಲಿ ಸೇರಿದೆ. ಪ್ರತೀ ತಿಂಗಳು ನನಗೆ ಹತ್ತುಸಾವಿರ ದಿರ್ಹಮ್ ವೇತನ ಸಿಗುತ್ತಿತ್ತು. ಆತ ಕುರ್ಆನ್ ಕಲಿತು, ಧಾರ್ಮಿಕ ಜ್ಞಾನವನ್ನೂ ಗಳಿಸಿಕೊಂಡನು. ಕವಿತೆಗಳನ್ನು ಭಾಷಾ ಪಾಂಡಿತ್ಯವನ್ನು ಗಳಿಸಿಕೊಂಡನು. ಚರಿತ್ರೆ, ವರ್ತಮಾನಗಳ ಬಗ್ಗೆಯೂ ಜ್ಞಾನವನ್ನು ಅರಗಿಸಿಕೊಂಡನು. ಅಲ್ಲಿಯ ತನಕ ನಾನು ಆತನ ಜೊತೆಯಲ್ಲಿದ್ದೆ. ತಿಂಗಳುಗಳು ಕಳೆದ ಬಳಿಕ ಖಲೀಫ ಮಗನನ್ನು ಪರೀಕ್ಷಿಸಿದರು, ಮಗನ ಸಾಮರ್ಥ್ಯ ಕಂಡು ಬೆರಗಾದರು. ಬಳಿಕ ಹೇಳಿದರು. “ಈತನು ಶುಕ್ರವಾರ ಇಮಾಮ್ ಮತ್ತು ಖುತ್ಬಾ ಪ್ರವಚನಕ್ಕೆ ಅಣಿಗೊಳ್ಳುವುದನ್ನು ನಾನು ಬಯಸುತ್ತಿದ್ದೇನೆ. ಅವನಿಗೆ ಖುತ್ಬಾ ನಿರ್ವಹಿಸಲು ಕಲಿಸಿರಿ…. ನಾನು ಆ ಶಿಷ್ಯನಿಗೆ ಹತ್ತು ಖುತ್ಬಾ ಪ್ರವಚನಗಳ ಬಗ್ಗೆ ಕಲಿಸಿಕೊಟ್ಟೆ. ಕಲಿತ ನನ್ನ ಶಿಷ್ಯ ಖುತ್ಬಾ ಪ್ರವಚನ ನಡೆಸಿ ನಮಾಝ್ ಗೆ ನೇತೃತ್ವವನ್ನೂ ವಹಿಸಿದನು. ನಾನು ಮತ್ತು ಖಲೀಫ ಅಂದು ಜನರ ಜೊತೆ ಸೇರಿದ್ದೆವು. ಖಲೀಫರಿಗೆ ಆತನ ಬಗ್ಗೆ ವಿಶೇಷ ಪ್ರೀತಿ ತುಂಬಿ ಬಂತು. ನನಗೆ ಖಲೀಫರ ಸಂಬಂಧಿಕರಿಂದ, ಆಪ್ತರಿಂದ ಬಹುಮಾನಗಳು, ಉಡುಗೊರೆಗಳು ಲಭ್ಯವಾದವು. ತುಂಬಾ ಹಣವನ್ನು ಸಂಪಾದಿಸಿದೆ. ಅದನ್ನು ಬಳಸಿಕೊಂಡು ಜಮೀನು, ಸೊತ್ತುಗಳನ್ನು ಖರೀದಿಸಿದೆ. ಬಸ್ರಾದಲ್ಲಿ ನನಗಾಗಿ ಒಂದು ಮನೆಯನ್ನೂ ನಿರ್ಮಿಸಿದೆ, ತೋಟಗಳು ಬೆಳೆದು ಫಲವತ್ತಾಯಿತು. ನಂತರ ಊರಿಗೆ ಮರಳಲು ಖಲೀಫರೊಂದಿಗೆ ಅನುಮತಿ ಕೇಳಿದೆ. ಅವರು ಅನುಮತಿಸಿದರು.
“ನಾನು ಊರಿಗೆ ಮರಳಿದಾಗ ಜನರು ನನ್ನನ್ನು ಅಲ್ಲಿ ಸ್ವಾಗತಿಸಲು ಬಂದು ಸೇರಿದರು. ನನ್ನ ಸಂಪಾದನೆಯ ಕುರಿತು ವಾರ್ತೆಗಳು ಅವರಲ್ಲಿ ಹರಡಿದ್ದುವು. ನನ್ನನ್ನು ಬೇಟಿ ಮಾಡಲು ಬಂದವರನ್ನು ನಾನು ಸೂಕ್ಷ್ಮವಾಗಿ ನೋಡಿದೆ. ನನ್ನ ಬಳಿ ಬಂದಿದ್ದವರಲ್ಲಿ ಆ ಕಿರಾಣಿ ಅಂಗಡಿಯವನೂ ಸೇರಿದ್ದ. ಆತ ಕೊಳಕಾದ ತಲೆ ವಸ್ತ್ರ, ಹರುಕು ಮುರುಕು ಬಟ್ಟೆಯನ್ನು ಧರಿಸಿದ್ದ. ನನ್ನನ್ನು ನೋಡಿ ಅವರು… ನನ್ನನ್ನು ಅಬ್ದುಲ್ ಮಲಿಕ್! ಎಂದು ಕರೆದರು. ಖಲೀಫ ಅಭಿಸಂಬೋಧನೆ ಮಾಡಿದ ಶೈಲಿಯಲ್ಲಿ ಅವರು ಕರೆದದ್ದಕ್ಕಾಗಿ ನಾನು ನಕ್ಕು ಬಿಟ್ಟೆ. ನಂತರ ಅವರ ಬಳಿ “ಸಹೋದರಾ! ನನ್ನ ಪುಸ್ತಕಗಳು ತರಕಾರಿಯ ತುಂಡುಗಳಿಗಿಂತ ಎಷ್ಟೋ ಪಟ್ಟು ಮಹತ್ವವಾದ ಒಳಿತನ್ನು ನನಗೆ ನೀಡಿದೆ!” ಎಂದೆ.
ಅರಬಿ ಭಾಷಾ ಕುಲಪತಿಯಾದ ಅಸ್ಮಾಈ ಬಸ್ರಾದ ವ್ಯಾಕರಣ ಸಂಸ್ಥೆಯ ಗುರುವರ್ಯರಾಗಿದ್ದು ಪ್ರಮುಖ ಅರಬ್ ಬಾಷಾ ವಿದ್ವಾಂಸರಾಗಿದ್ದರು. ಕುರ್ಆನ್ ಹದೀಸ್, ಭಾಷಾ ಪಾಂಡಿತ್ಯ, ಕವಿತೆ ಜೀವ ಶಾಸ್ತ್ರ ಮುಂತಾದುವುಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದರು. ಖಲೀಫ ಹಾರೂನ್ ರಶೀದ್ ರವರ ಮಕ್ಕಳ ಗುರುಗಳಾಗಿದ್ದರು. ಕಡು ಬಡತನದಿಂದ ಮೇಲೆ ಬಂದ ಅವರು, ಜ್ಞಾನದಿಂದ ಕೀರ್ತಿ ಪಡೆದರು. ಅಸ್ಮಾಈ ಯಂತಹಾ ಕವನ ಸಂಗ್ರಹ, ಅಲ್ಲದೆ ಅನೇಕ ಧಾರ್ಮಿಕ, ಗದ್ಯ ಕೃತಿಗಳನ್ನೂ ರಚಿಸಿದ್ದರು. ಅರಬ್ ಭಾಷೆಯ ಸೌಂದರ್ಯವನ್ನು ಕಾಪಾಡಲು ಮರುಭೂಮಿಯ ಗೋತ್ರಗಳಿಗೆ ಸಂಚರಿಸಿದ ಈ ಭಾಷಾ ತಜ್ಞ ಅಬೂ ಉಬೈದರಂತ ವಿದ್ವಾಂಸರೊಂದಿಗೆ ಸೌಹಾರ್ಧದ ಸ್ಪರ್ಧೆಯಲ್ಲಿಯೂ ಗಮನಾರ್ಹರು. ಅರಬ್ ಸಾಹಿತ್ಯ, ಭಾಷೆಗೆ ಅಸ್ಮಾಈ ಯವರು ನೀಡಿದ ಕೊಡುಗೆ ಅನನ್ಯವಾದುದು.
ಅಸ್ಮಾಈ ಯವರ ಈ ಆತ್ಮ ಕತೆಯಲ್ಲಿ ಹಾರೂನ್ ರಶೀದ್ ರವರು “ನನ್ನ ಮಗನನ್ನು” ಎನ್ನುತ್ತಾ ಅಸ್ಮಾಈ ಯವರಿಗೆ ವಹಿಸಿಕೊಟ್ಟರು. ಬಳಿಕ ಶುಕ್ರವಾರದ ಖುತ್ಬಾ ಪ್ರವಚನ, ನಮಾಝ್ ಗೆ ಇಮಾಮತ್ ನೀಡಲು ಸಾಧ್ಯವಿರುವ ರೀತಿಯಲ್ಲಿ ತರಬೇತಿ ನೀಡಿ ಬೆಳೆಸಬೇಕೆಂದು ಈ ಮಗನ ಕುರಿತು ಹೇಳಿದ್ದರು. ಇತಿಹಾಸವನ್ನು ಗಮನಿಸಿದಾಗ ಅಸ್ಮಾಈ ಯವರು ಪ್ರಮುಖವಾಗಿ ಕಲಿಸಿ ತರಬೇತಿ ನೀಡಿ ಖತೀಬ್, ಇಮಾಮರಾಗಿ ಬೆಳೆಸಿದ ಖಲೀಫರ ಪುತ್ರನ ಹೆಸರು ಅಲ್ ಅಮೀನ್ ಎಂದಾಗಿತ್ತು.
ಕೃಪೆ: ಇಸ್ಲಾಮಿಕ್ ಆನ್ನೈನ್